ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆಯಿಂದಾಗಿ ಭೂಮಿಯ ಮಣ್ಣು, ನೆಲ, ಜಲ ತನ್ನ ಸತ್ವ ಕಳೆದುಕೊಳ್ಳುತ್ತಿದ್ದು, ಭೂಮಿಯಲ್ಲಿ ಒಟ್ಟಾರೆ ಕುಡಿಯಲು ಯೋಗ್ಯವಾದ ಶುದ್ಧ ಜಲದ ಸಂಗ್ರಹ ಶೇಕಡ ಒಂದಕ್ಕಿಂತಲೂ ಕಡಿಮೆ. ಜೀವ ಜಲದ ಕುರಿತು ಲೇಖಕಿ ಚೇತನ ಭಾರ್ಗವ ಅವರ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…
ಭೂಮಿಯ ಮೂರನೇ ಎರಡು ಭಾಗವು ನೀರಿನಿಂದ ಆವೃತವಾಗಿದೆ. ಎಲ್ಲಾ ಜೀವಿಗಳ ಪಾಲಿಗೆ ನೀರೇ ಜೀವ ಜಲ. ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಿಗೂ ಪ್ರಾಣಿ-ಪಕ್ಷಿ ಗಿಡ ಮರಗಳಾಗಲಿ ಎಲ್ಲರಿಗೂ ನೀರು ಅತ್ಯವಶ್ಯಕ. ಪ್ರಕೃತಿದತ್ತವಾಗಿ ಮಳೆಯ ರೂಪದಲ್ಲಿ ನೀರು ಭೂಮಿಗೆ ಸಿಗುತ್ತದೆ. ಆದರೆ ಇತ್ತೀಚೆಗೆ ಮಾನವನ ದುರಾಸೆಯಿಂದ ಪರಿಸರ ಮಾಲಿನ್ಯ ಹಾಗೂ ನೀರಿನ ದುರ್ಬಳಕೆಯಿಂದ ಶುದ್ಧ ನೀರಿನ ದೊರೆಯುವಿಕೆಯ ಪ್ರಮಾಣ ಕಡಿಮೆಯಾಗುತ್ತಿದೆ. ಕೆರೆ ಕುಂಟೆ ಸರೋವರಗಳನ್ನು ಮುಚ್ಚಿ ನಗರೀಕರಣದ ಪ್ರಭಾವದಿಂದ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ ಕಾಂಕ್ರೀಟ್ಮಯವಾದ ನಗರಗಳಿಂದ ಬಿದ್ದ ಮಳೆಯ ನೀರು ಭೂಮಿಗೆ ಇಂಗದೆ ಅಂತರ್ಜಲದ ಮಟ್ಟ ಕುಸಿದು ನಗರಗಳಲ್ಲಿ ನೀರಿಗಾಗಿ ಪರದಾಡುವಂತೆ ಆಗಿದೆ. ಇದು ಮಾನವ ತನಗೆ ತಾನೇ ತಂದುಕೊಂಡ ಆಪತ್ತು. ಬೇಸಿಗೆ ಬಂದಾಗ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ.
ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆಯಿಂದಾಗಿ ಭೂಮಿಯ ಮಣ್ಣು, ನೆಲ, ಜಲ ತನ್ನ ಸತ್ವ ಕಳೆದುಕೊಳ್ಳುತ್ತಿದೆ. ಅದರಲ್ಲೂ ನೀರಿಲ್ಲದಿದ್ದರೆ ಬದುಕಲು ಸಾಧ್ಯವೇ ಇಲ್ಲ. ಭೂಮಿಯಲ್ಲಿ ಒಟ್ಟಾರೆ ಕುಡಿಯಲು ಯೋಗ್ಯವಾದ ಶುದ್ಧ ಜಲದ ಸಂಗ್ರಹ ಶೇಕಡ ಒಂದಕ್ಕಿಂತಲೂ ಕಡಿಮೆ . ಅದು ನದಿ ಸರೋವರಗಳಲ್ಲಿ ಬೀಳುವ ಮಳೆಯಲ್ಲಿ ಒಟ್ಟುಗೂಡಿದೆ. ಉಳಿದಂತೆ ಹಿಮದಲ್ಲಿ ಅಡಗಿರುವ ನೀರು, ಬಳಸಲಸಾಧ್ಯ. ಇನ್ನು ಸಾಗರದ ನೀರು ಲವಣಯುಕ್ತವಾಗಿ ಕುಡಿಯಲು ಅನರ್ಹ. ಇಂತಹ ಸಂದರ್ಭ ದಲ್ಲಿ ದೊರಕುವ ಶುದ್ಧ ನೀರಿನ ಸಂರಕ್ಷಣೆ ಸಮರ್ಪಕ ನಿರ್ವಹಣೆ ಮಾನವರ ಆದ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಕೃಷಿಗೆ ಕೈಗಾರಿಕಾ ಚಟುವಟಿಕೆಗಳಿಗೆ ಮುಂತಾಗಿ ದೈನಂದಿನ ಹಲವಾರು ಕ್ರಿಯೆಗಳಿಗೂ ನೀರು ಬೇಕೆ ಬೇಕು. ಸೂರ್ಯನ ಶಾಖದಿಂದ ಆವಿಯಾಗುವ ನೀರು ಮೋಡವಾಗಿ ಮಳೆ ಸುರಿಸುತ್ತದೆ. ಕೆರೆ ಹಳ್ಳಕೊಳ್ಳವಾಗಿ ನದಿಯಾಗಿ ಹರಿಯುತ್ತದೆ . ಗಿಡಮರಗಳಿದ್ದರೆ ಅಂತರ್ಜಲವಾಗಿಯೂ ಇಂಗುತ್ತದೆ. ಇದೇ ಜಲಚಕ್ರದ ನಿಯಮ. ನಿಸರ್ಗ ತನ್ನ ಪಾಡಿಗೆ ನೀರನ್ನು ಮರುಪೂರಣ ಗೊಳಿಸುವ ವ್ಯವಸ್ಥೆ ಹೊಂದಿದೆ. ಆದರೆ ಮಾನವನ ಅತಿಯಾದ ಚಟುವಟಿಕೆಗಳಿಂದ ದುರಾಸೆಯಿಂದ ಈ ಜಲಚಕ್ರಕ್ಕೆ ಹೊಡೆತ ಬಿದ್ದು ನೀರು ಸಿಗದ ಪರಿಸ್ಥಿತಿ ಉಂಟಾಗಿದೆ.

ಫೋಟೋ ಕೃಪೆ : ಅಂತರ್ಜಾಲ
ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತವು ನೈರುತ್ಯ ಮಾನ್ಸೂನ್ ಮೇಲೆ ಅವಲಂಬಿತವಾಗಿದೆ. ಮುಂಗಾರು ಮಳೆ ಚೆನ್ನಾಗಿ ಬಿದ್ದರೇನೇ ಇಲ್ಲಿಯ ನದಿಗಳಿಗೆ ಜೀವ. ವರ್ಷಗಳಿಂದ ಕುಂಠಿತ ಮಳೆ ಪ್ರಮಾಣ ನಮ್ಮ ಆಣೆಕಟ್ಟುಗಳನ್ನು ಬರಿದು ಮಾಡಿವೆ. ಕೃಷಿಗೆ ಕೈಗಾರಿಕೆಗಳಿಗೆ ನೀರು ಸಾಕಾಗದೆ ಬರಿಯ ಕುಡಿಯುವ ನೀರಿಗೆ ನೀರನ್ನು ಹಿಡಿದುಕೊಳ್ಳುವ ಪರಿಸ್ಥಿತಿಯ ಎದುರಾಗಿದೆ. ಅವೈಜ್ಞಾನಿಕವಾಗಿ ಎಲ್ಲೆಡೆ ಅದರಲ್ಲೂ, ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಎಲ್ಲೆಂದರಲ್ಲಿ ಕೊಳವೆ ಬಾವಿ ಕೊರೆದದ್ದರಿಂದ ಅಂತರ್ಜಲದ ಮಟ್ಟ ಸಾವಿರಾರು ಅಡಿಗಳಿಗೆ ಇಳಿದು ಹೋಗಿದೆ. ನಮ್ಮ ನಮ್ಮ ಮನೆಗಳ ನಲ್ಲಿ ಹಾಗೂ ಸಂಪುಗಳಿಗೆ ಬೀಗ ಹಾಕಿ ನೀರು ಕಳುವಾಗದಂತೆ ಕಾಪಿಡುವ ಪರಿಸ್ಥಿತಿ ಬಂದಿದೆ. ಟ್ಯಾಂಕರ್ ನೀರಿಗೆ ದುಪ್ಪಟ್ಟು ಹಣಕೊಟ್ಟು ಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತೆ ನೀರಿನ ಮಹತ್ವ ಅದನ್ನು ಮಿತವಾಗಿ ಬಳಸುವ ಜಾಗೃತಿಯ ಬಗ್ಗೆ ಮಾತುಕತೆಯಾಗುತ್ತಿದೆ.
ಕಾಲ ಇನ್ನು ಮಿಂಚಿಲ್ಲ ನೀರು ಎಂಬುದು ಅತ್ಯಮೂಲ್ಯ ಸಂಪತ್ತು. ಇದನ್ನು ಉಳಿಸಲೇಬೇಕು. ನೀರು ಪ್ರತಿಯೊಬ್ಬರ ಹಕ್ಕು ಯಾರ ಸ್ವತ್ತು ಅಲ್ಲ. ಹಾಗಾಗಿ ಅದನ್ನು ದುರ್ಬಳಕೆ ಮಾಡದೆ ಮಿತವಾಗಿ ಬಳಸಬೇಕು. ನೀರಿನ ಮರುಪೂರದ ವ್ಯವಸ್ಥೆಯ ಬಗ್ಗೆ ಗಮನಹರಿಸಬೇಕು. ಮಳೆ ನೀರಿನ ಕೊಯ್ಲಿ ನಂತಹ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕೃಷಿ ಹೊಂಡ ಕೆರೆಗಳ ಮರುಪೂರಣೆ ಹಾಗೂ ಕಾಂಕ್ರೀಟ್ ಮಯವಾಗಿರುವ ನಗರಗಳಲ್ಲಿ ಹಸಿರಿನ ಹೊದಿಕೆಯನ್ನು ಹೆಚ್ಚಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕು ಮುಖ್ಯವಾಗಿ ಉಳಿದಿರುವ ನಮ್ಮ ಅರಣ್ಯ ಸಂಪತ್ತನ್ನು ರಕ್ಷಿಸಿಕೊಳ್ಳಬೇಕು.
ನೀರಿನ ಸರಬರಾಜು ವ್ಯವಸ್ಥೆಯಲ್ಲಿ ಲೋಪದೋಷಗಳನ್ನು ಸರಿಪಡಿಸಬೇಕು. ಮನೆಮನೆಗಳಲ್ಲಿ ಸಭೆ ಸಮಾರಂಭಗಳಲ್ಲಿ ಜಾತ್ರೆಗಳಲ್ಲಿ ನೀರಿನ ದುರ್ಬಳಕೆ ಸೋರಿಕೆಯ ಮೇಲೆ ಸಂಪೂರ್ಣ ನಿಯಂತ್ರಣವಿರಬೇಕು. ವಾಹನಗಳನ್ನು ಗಂಟೆಗಟ್ಟಲೆ ನೀರಿನಲ್ಲಿ ತೊಳೆಯುವಂತಹ ಈಜುಕೊಳದಂತಹ ಹೆಚ್ಚು ನೀರನ್ನು ಬೇಡುವ ವ್ಯವಸ್ಥೆಗೆ ತಕ್ಕಮಟ್ಟಿಗೆ ವಿರಾಮ ಕೊಡುವುದು ಬಹು ಮುಖ್ಯವಾಗಿದೆ. ಈ ಕ್ರಮಗಳನ್ನು ಕೈಗೊಳ್ಳದಿದ್ದರೆ ನೀರು ಸಮೃದ್ಧ ವಿದ್ದ ನಮ್ಮ ಪ್ರದೇಶಗಳು ರಾಜಸ್ಥಾನದ ಮರುಭೂಮಿಯಂತಾದರೆ ಆಶ್ಚರ್ಯವಿಲ್ಲ. ಜೀವ ಜಲವಾದ ನೀರಿಲ್ಲದಿದ್ದರೆ ಭೂಮಿ ಕೂಡ ಮಂಗಳನಂತೆ ಶುಷ್ಕವಾದ ಗ್ರಹವಾಗುತ್ತದೆ ಆದ್ದರಿಂದ ವಿವೇಕಯುತವಾಗಿ ಮಾನವರಾದ ನಾವು ನೆಲ ಜೀವ ಜಲವನ್ನು ಸಂರಕ್ಷಿಸಿ. ಎಲ್ಲಾ ಜೀವಕುಲವನ್ನು ರಕ್ಷಿಸುವ ಜವಾಬ್ದಾರಿ ತೆಗೆದುಕೊಳ್ಳೋಣ, ಜಲ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸೋಣ.
- ಚೇತನ ಭಾರ್ಗವ
