‘ಮನಮಿಡಿಯಿತು ಗುಣದೊಡತಿಯೆ, ತನುಮನದಲು ಜೊತೆನಡೆಯುವೆ’… ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಅರಳಿದ ಜೊತೆಗಾತಿ ಕವನ, ತಪ್ಪದೆ ಓದಿ….
ಉಟ್ಟಿರುವಳು ಹಸಿರು ಸೀರೆ
ತೊಟ್ಟಿರುವಳು ಬಳೆಯ ನೀರೆ
ಕಟ್ಟುತಿಹಳು ಮುಡಿಗೆ ನಲ್ಲೆ ಮಲ್ಲೆ ಮಾಲೆಯ
ಇಟ್ಟಿರುವಳು ಹಣೆಗೆ ಬಿಂದಿ
ಹುಟ್ಟಿರುವಳು ನನಗೆ ಬಂಧಿ
ಕಟ್ಟಿರುವಳು ಮನದಲೊಂದು ಪೂಜ್ಯ ಮಂದಿರ
ನಡೆಯುವಾಗ ಹೆರಳರಾಶಿ
ನಡುವಿನುದ್ದ ತೂಗಿ ತಾಗಿ
ಬೆಡಗನಿಳಿಸಿ ಮನದೊಳಗಡೆ ರಮ್ಯವಾಯಿತು
ನಡುವು ಬಳುಕಿ ನಡೆಯುವಾಗ
ಗುಡಿಯನವಳು ಬಳಸುವಾಗ
ಮಿಡಿದು ಹೃದಯವರಳಿತಾಗ ಚೆನ್ನನೊಲವಲಿ
ಮನಮಿಡಿಯಿತು ಗುಣದೊಡತಿಯೆ
ತನುಮನದಲು ಜೊತೆನಡೆಯುವೆ
ದಿನಬೆಳಗಲು ನಿನ್ನೊದನವ ಬಯಸಿರುವೆನು ನಾ
ಅಣುವಣುವಲು ನನ್ನೊಡತಿಯು
ಕಣಕಣದಲು ಕೂಡಿರುವಳು
ಗುಣದೊಡತಿಯೆ ಬಾಳೊಳಗಡೆ ಸುಖವಿಳಿದಿಹುದು.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು)