ದೇರಾಜೆ-ಸುತ್ತಮುತ್ತ: ಅಳಿದವರಲ್ಲಿ ಉಳಿದವ ಕಂಡಂತೆ.

ತಾಲೂಕು ಸುಳ್ಯದಿಂದ ಚೊಕ್ಕಾಡಿ ರಸ್ತೆಯಲ್ಲಿ ಬಂದಾಗ ಮುಂದೆ ಶೇಣಿ ಎಂಬಲ್ಲಿ ಮನೆ-ಅಂಗಡಿಗಳ ಮಧ್ಯೆ ಕೆಳಗಿನ ರಸ್ತೆಯಲ್ಲಿ ಬಂದಾಗ ಮುಂದಿನ ಎಡಬದಿಯ ಮಣ್ಣಿನ ಮಾರ್ಗದಲ್ಲಿ 1ಕಿ.ಮೀ ದೂರದಲ್ಲಿರುವುದು ಆದಿ ಮನೆ ದೇರಾಜೆ. ಈ ಮನೆಯಲ್ಲಿ ಅಪ್ಪ ಕೃಷ್ಣಯ್ಯ,ಅಮ್ಮ ತಿರುಮಲೇಶ್ವರಿ ,ಮಕ್ಕಳಾದ ನಾವು ಶಾಲಾದಿನಗಳನ್ನು ಕಳೆಯುತ್ತಿದ್ದ ಆಕಾಲ ಮುಂದೆ ಓದಿ ಲೇಖಕ ಬಾಲು ದೇರಾಜೆ ಅವರ ಲೇಖನಿಯಲ್ಲಿ ಮೂಡಿ ಬಂದ ದೇರಾಜೆ ಸುತ್ತಮುತ್ತ…

ಮನೆಯ ಕಾವಲಿಗಾಗಿ “ಅರ್ಕ” ಎಂಬ ಹೆಸರಿನ ದಪ್ಪವಾಗಿದ್ದ ನಾಯಿ.ಹಟ್ಟಿ ತುಂಬಾ ದನಕರುಗಳು,ಎಮ್ಮೆ,ಎರಡು ಕೋಣಗಳು ,ಅಲ್ಲದೆ ಕೊಟ್ಟಿಗೆಯಲ್ಲಿ 7-8ಆಡುಗಳು . ನಮ್ಮಜ್ಜನ ಕಾಲದಲ್ಲಿ 2ಎತ್ತಿನ ಗಾಡಿಗಳು ಇತ್ತಂತೆ. ಮನೆಯ ಸುತ್ತ ಹೊಲಗಳು ,ತೋಟಗಳು .ಮೇಲಿನ, ಕೆಳಗಿನ ಹೊಸಗದ್ದೆ ,ಇದರ ಆಕಡೆ ದರ್ಕಾಸು, ಪಕ್ಕದಲ್ಲಿ ಕೋಲಂಟಮೂಲೆ , ಇನ್ನೊಂದು ಬದಿಯಲ್ಲಿ ನೆಲ್ಲಿಗದ್ದೆ , ಬೈರಮೂಲೆ ನಂತರ ಅಜ್ಜಮೂಲೆ ಮತ್ತು ಕಾಲೊನಿ. ಮನೆಯ ಸುತ್ತ ಇದ್ದ ಜಾಗಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದುದು ರೂಢಿಯಾಗಿತ್ತು. ಈ ಜಾಗಗಳಲ್ಲಿ ಹೊಲಗಳ ಬೇಸಾಯಕ್ಕಾಗಿ ರುಕ್ಮಯ್ಯ ಗೌಡ, ಸಹೋದರರಾದ ಚೆನ್ನಪ್ಪ, ಐತಪ್ಪ ಹೌಡ, ಹೊನ್ನಪ್ಪ ಗೌಡ, ರಾಘವನ್ ನಾಯರ್, ಅಲ್ಲದೆ ಸುಬ್ರಾಯ ಭಟ್ಟ ನೇಣಾರು, ಇವರುಗಳ ಸಂಸಾರಗಳು ಬಂದು ನೆಲೆಸಿದ್ದರು. ಕೆ.ರಾಮಚಂದ್ರ ದೀಕ್ಷಿತರು ಅಜ್ಜಮೂಲೆಯಲ್ಲಿ ನೆಲೆಸಿದ್ದಲ್ಲದೆ, ನಂತರ ಕಾಲದಲ್ಲಿ ಎ.ಮಹಾಲಿಂಗ ಭಟ್ಟರ ಸಂಸಾರ ಬಂದು ಬೈರಮೂಲೆಯ ಜಾಗದಲ್ಲಿ ನೆಲೆಸಿದರು. ಈ ಸಂಸಾರಸ್ಥರು ದೇರಾಜೆ ಮನೆ ನಮ್ಮನ್ನೂ ಆಗಿನ ಕಾಲದಲ್ಲಿಯೇ ಧನಿಗಳೆಂದು ಮರ್ಯಾದೆ ಗೌರವದಿಂದ ಕಾಣುತ್ತಿದ್ದಲ್ಲದೆ, ಅವರ ಮಕ್ಕಳು ಮೊಮ್ಮಕ್ಕಳು ಈಗಿನ ಕಾಲದಲ್ಲಿಯೂ ಅದೇ ಭಾವನೆಯಿಂದ ಮುಂದುವರೆದಿದ್ದಾರೆ. ಒಂದು ರೀತಿಯಲ್ಲಿ ಇವರು ಧನಿಗೆ ಧ್ವನಿಯಾದವರು. ಹಿರಿಯರು ಹಾಕಿಕೊಟ್ಟ ಆದರ್ಶ ಮಾರ್ಗಗಳಲ್ಲಿ ನಡೆಯುವುದು ಎನ್ನುವ ಮಾತಿನಲ್ಲಿ ಇದೂ ಒಂದಾಗಿದೆ.

ಅಪ್ಪನಿಗೆ ಯಕ್ಷಗಾನದಲ್ಲಿ ಆಸಕ್ತಿ ಅಲ್ಲದೆ ನಾಟಕಗಳಲ್ಲೂ ಅಭಿನಯ, ಜೊತೆಗೆ ಛಾಯಾಚಿತ್ರಣದ ಕಲೆಯನ್ನು ಮೈಗೂಡಿಸಿಕೊಂಡಿದ್ದರು. ಭಜನಾ ಪದ್ಯಗಳನ್ನು ರಚಿಸಿದ್ದಾರೆ. ಮನೆಯಲ್ಲಿ ದೀಪಾವಳಿಗೆ ಬಲೀಂದ್ರ ಹಾಗೂ ಇತರ ಪೂಜಾ ಕಾರ್ಯಕ್ರಮ ನೆರವೇರಿಸಲ್ಪಟ್ಟು, ನಾಗತಂಬಿಲ, ರಕ್ತೇಶ್ವರಿ ಸಹಪರಿವಾರ ದೈವಗಳಿಗೆ ತಂಬಿಲಗಳು ನಡೆಯುತ್ತಿದ್ದವು. ಒಂದು ಬಾರಿ ಭೂತ ಕೋಲವೂ ನಡೆದಿದೆಯಂತೆ. ಇವುಗಳ ಕಾರ್ಯಕ್ಕಾಗಿ ರುಕ್ಮಯ್ಯ ಸಹಕರಿಸುತ್ತಿದ್ದರು. ಹೊಲಗಳ ಬೇಸಾಯಕ್ಕಾಗಿ ಕೋಲಂಟಮೂಲೆ ಹಾಗೂ ಅಜ್ಜಮೂಲೆ ಕಾಲನಿಯ ಜನರು ಬರುತ್ತಿದ್ದರು. ಹೆಂಗಸರು ಒನಕೆ ಓಬವ್ವರಾಗುತ್ತಿದ್ದರು. ಆದರೆ ಇವರು ಯಾರ ತಲೆಗೂ ಬಡಿಯುತ್ತಿರಲಿಲ್ಲ, ಬದಲಾಗಿ ಬೆಳೆದ ಭತ್ತವನ್ನು ಕುಟ್ಟುತ್ತಿದ್ದರು.

ಕಾಲಕ್ರಮೇಣದಲ್ಲಿ ಅಪ್ಪನ ಅರೋಗ್ಯ ಸ್ಥಿತಿ ಏರು ಪೇರಾಗಿದ್ದ ಕಾರಣ ದೊಡ್ಡಣ್ಣ ಸತ್ಯಮೂರ್ತಿ ತನ್ನ ವಿದ್ಯಾಭ್ಯಾಸವನ್ನು ಕುಂಠಿತಗೊಳಿಸಿ, ಮನೆಯ ಜವಾಬ್ದಾರಿಗೆ ಮುಂದಾದರು. ಅಪ್ಪ ದೊಡ್ಡಕ್ಕ ಸತ್ಯವತಿಯ ಮದುವೆ ಮಾಡಿಸಿಕೊಟ್ಟು 11-8-1974ನೇ ಇಸವಿಯಲ್ಲಿ ಇಹಲೋಕ ತ್ಯಜಿಸಿದರು.

ದೊಡ್ಡಣ್ಣ ಸತ್ಯಮೂರ್ತಿ ದೇರಾಜೆಯವರು ಕೃಷಿಯ ಜೊತೆ, ಸಾಹಿತ್ಯ ,ಯಕ್ಷಗಾನ ದ ಅರ್ಥದಾರಿ, ವೇಷದಾರಿಯಾಗಿದ್ದರು. ಗ್ರಾಮದ ಪಂಚಾಯತ್, ಸೊಸೈಟಿಗಳಲ್ಲಿ ಭಾಗಿಯಾಗಿ ಚೊಕ್ಕಾಡಿ ಶ್ರೀರಾಮ ಸೆಡವಾ ಸಮಿತಿಯ ಸದಸ್ಯರಾಗಿ, ಅಮ್ಮನ ಬಗ್ಗೆ ಮುತುವರ್ಜಿ ವಹಿಸಿಕೊಂಡು ನಮ್ಮನ್ನು ಓದಿಸಿ ,ತನ್ನ ಮದುವೆಯನ್ನು ತಾನೇ ಮಾಡಿಸಿಕೊಂಡು ,ಪುಟ್ಟಕ್ಕ ,ರಾಧೆ( ಕೃಷ್ಣಕುಮಾರಿ) ಯ ,ಪುಟ್ಟಣ್ಣ ಸತ್ಯನ್ ನ ,ತಂಗಿ ಸತ್ಯಪ್ರೇಮ ಹಾಗೂ ನನ್ನ ಉಪನಯನ, ಮದುವೆ ಮಾಡಿಸಿ, 2001ನೇ ಇಸವಿಯಲ್ಲಿ ಆಸ್ತಿಯನ್ನು ಮೂರು ಭಾಗ ಮಾಡಿದಾಗ ,ನಾವು ಇಲ್ಲಿಯ ಬೈರಮೂಲೆ ಪಕ್ಕದ ಜಾಗದಲ್ಲಿ ವಾಸ್ತವ್ಯ ಮಾಡಿದೆವು. ಕೆಲವೇ ವರ್ಷಗಳು ಕಳೆದಂತೆ ದೊಡ್ಡಣ್ಣ 16-12-2004 ರಂದು ತೀರಿಕೊಂಡರು…

ಪುಟ್ಟಣ್ಣ ಸತ್ಯನ್ ದೇರಾಜೆಯವರು 2003 ನೇ ಇಸವಿಯಲ್ಲಿ ಆದಿಮನೆಯ ಪಕ್ಕದಲ್ಲೇ ಮನೆಮಾಡಿಕೊಂಡು ಸಂಸಾರ ಜೊತೆಯಲ್ಲಿ ವಾಸಿಸತೊಡಗಿದರು. ಅಲ್ಲದೆ ಸಾಹಿತ್ಯ ,ಯಕ್ಷಗಾನದ ಅರ್ಥದಾರಿ,ವೇಷದಾರಿಯಾಗಿದ್ದರು. ಕಾಲಕ್ರಮೇಣ ತನ್ನ ದೃಷ್ಟಿ ಹೀನತೆಯಿಂದಾಗಿ ಜೀವನಕ್ಕೆ ಬಲವಾದ ಹೊಡೆತ ಬಿದ್ದಂತಾಗಿ ಕಿವಿಯನ್ನೇ ಕಣ್ಣಾಗಿಸಿಕೊಂಡು ಜೀವಿಸಿ 21-11-2018ರಂದು ಇವರೂ ತೀರಿಕೊಂಡರು…

ನಮ್ಮಮ್ಮ ಹೆಚ್ಚಾಗಿ ಮೂಲಸ್ಥಾನವಾದ ಆದಿಮನೆಯಲ್ಲೇ ಕಳೆಯುತ್ತಿದ್ದು,ಕೆಲವು ದಿವಸ ಪುಟ್ಟಣ್ಣನಲ್ಲಿಯೂ, ಇನ್ನೂ ಕೆಲವು ದಿವಸ ನಮ್ಮಲ್ಲಿಗೆ ಬಂದು ಉಳಿದುಕೊಳ್ಳುತ್ತಿದ್ದರು. ಎಲ್ಲವೂ ಅವರ ಇಚ್ಛೆಯಂತೆ ನಡೆಯುತ್ತಿದ್ದವು ,ಕರೆದಾಗ ಯೋಚನೆಗೊಳಪಟ್ಟಾಗ ಮಗಳ ಮನೆಗಳಿಗೂ ಹೋಗಿ ಬರುತ್ತಿದ್ದು ವರ್ಷಗಳು ಕಳೆದಂತೆ ಮನಸ್ಸು ,ದೇಹ ದುರ್ಬಲಗೊಂಡು 12- 10-2012ರಲ್ಲಿ ಸ್ವರ್ಗಸ್ಥರಾದರು.

This slideshow requires JavaScript.

 

ನಾವು ಈ ಜಾಗದಲ್ಲಿ ವಾಸ್ತವ್ಯಗೊಂಡ ನಂತರ ತೋಟ ಹಾಗೂ ಇತರ ಕೆಲಸಗಳಲ್ಲಿ ತೊಡಗಿಕೊಂಡು, ಜೊತೆಗೆ ಪೂಜಾ ಕಾರ್ಯ ಮಾಡುತ್ತಾ ವರ್ಷಗಳು ಕಳೆಯುತ್ತಿದ್ದವು. ಇಲ್ಲಿ ಕೆಲಸಗಳಿಗೆ ನೆರವಾದವರು ಇಲ್ಲೇ ಪಕ್ಕದ ಕೊಯ್ಲ ಕಾಲೊನಿಯ ಜನರು. 2014 ನೇ ಇಸವಿಯಲ್ಲಿ ಅಪ್ಪನ ಕಾಲದಿಂದ ಸ್ಥಗಿತಗೊಂಡ, ಕಾರಣಾಂತರಗಳಿಂದ ಇಲ್ಲಿನ ನಾಗಬ್ರಹ್ಮನಿಗೆ ತಂಬಿಲವನ್ನು ಕೊಡುವ ಕಾರ್ಯ ಪ್ರಾರಂಭಿಸಲಾಗಿತ್ತು. ನಂತರ ದೇರಾಜೆ ಮನೆಯವರು ಒಳಗೊಂಡಂತೆ ,ಇಲ್ಲಿನ ಬೈಲಿನ ಜನರು ಸೇರಿಕೊಂಡು 20,21-6-2019ನೇ ಇಸವಿಯಲ್ಲಿ ನಾಗಬ್ರಹ್ಮ ,ನಾಗಗಳ ಹಾಗೂ ರಕ್ತೇಶ್ವರಿ ಮತ್ತು ಸಹಪರಿವಾರ ದೈವಗಳ ಪುನರ್ ಪ್ರತಿಷ್ಟಾಪನೆಗೊಂಡು ವರ್ಷಂಪ್ರತಿ ಪ್ರತಿಷ್ಟಾ ದಿವಸ, ನಾಗರಪಂಚಮಿಯ ದಿವಸ, ಅಲ್ಪ ಸ್ವಲ್ಪ ವ್ಯತ್ಯಾಸ ಮಾಡಿಕೊಂಡು ನಾಗಗಳಿಗೆ ಹಾಗೂ ದೈವಗಳಿಗೆ ತಂಬಿಲ, ದೀಪಾವಳಿ ಹಾಗೂ ಪ್ರತೀ ಸಂಕ್ರಮಣದಂದು ಕೂಡಾ ಸೇವಾ ಕಾರ್ಯಗಳು ನೆರವೇರುತ್ತಿವೆ. ನೆಲ್ಲಿಗದ್ದೆ ಮನೆಯ ಪಕ್ಕದಲ್ಲೇ 5-11-2008 ರಲ್ಲಿ ಪ್ರತಿಷ್ಟಾಪನೆಗೊಂಡ ಶ್ರೀ ರುದ್ರಚಾಮುಂಡಿ ಪರಿವಾರ ದೈವಗಳಿಗೂ ಸೇವಾಕಾರ್ಯ ನಡೆಯುತ್ತಿದ್ದು ಮೂರ ವರ್ಷಗಳಿಗೊಮ್ಮೆ ಭೂತಕೋಲ ಆಚರಣೆಯಲ್ಲಿದೆ.

ಇಲ್ಲಿನ ಪಕ್ಕದ ಕೋಲಂಟಮೂಲೆ ಜಾಗದಲ್ಲಿ ಈ ಹಿಂದೆ ಹುಲ್ಲಿನ ಛಾವಣಿಯಿಂದ ಕೂಡಿದ ಪುಟ್ಟ ಪುಟ್ಟ ಮನೆಗಳಿದ್ದವು. ಕಾಲಚಕ್ರ ಸರಿದಂತೆ ಹಳೆಯ ಜನರು ಇಲ್ಲಿಂದ ನಿರ್ಗಮಿಸಿ ಹೊಸಬರು ಬಂದು ಇಲ್ಲಿ ಎಲ್ಲವೂ ಸುಸಜ್ಜಿತ ವ್ಯವಸ್ಥೆಯಾಗಿ ಹೊಸಮನೆಗಳು ನಿರ್ಮಾಣಗೊಂಡು ,ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶ ನಿಸರ್ಗ ಕಾಲೊನಿ,ಕೋಡ್ತೀಲು ಎಂಬುದಾಗಿ ನಾಮಕರಣಗೊಂಡಿತು. ಇಲ್ಲಿಯೂ ಶ್ರೀ ಪಂಚಲಿಂಗೇಶ್ವರ ಭಜನಾಮಂದಿರವು ಕಟ್ಟಲ್ಪಟ್ಟು 22-4-2019ರಲ್ಲಿ ಶ್ರೀ ಮಹಮ್ಮಾಯಿ ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಟಾಪನೆ ಗೊಂಡು ,ವರ್ಷಂಪ್ರತಿ ಸೇವಾ ಕಾರ್ಯ ಗಳು ನಡೆಯುತ್ತವೆ. ಇತ್ತೀಚಿಗೆ ಭೂತಕೋಲವೂ ನಡೆದಿದೆ.

ಅಜ್ಜಮೂಲೆ ಕಾಲನಿಯೂ ಮೊದಲಿಗಿಂತ ಹೆಚ್ಚಿನ ಬದಲಾವಣೆ ಕಂಡಿದೆ. ಇಲ್ಲಿಯೂ ಶ್ರೀ ಪರಿವಾರ ದೈವ ವರ್ಣಾರ ಪಂಜುರ್ಲಿಯ ಭೂತ ಚಾವಡಿ ನಿರ್ಮಾಣದ ಕೆಲಸ ಭರದಿಂದ ಸಾಗುತ್ತಿದ್ದೆ.
ನಮ್ಮ ಅಪ್ಪ ತೀರಿಕೊಂಡು ಈಗ ನಾವು ಅರ್ಧ ಶತಮಾನದ ಕಡೆಗೆ ಸಾಗುತ್ತಿದ್ದೇವೆ. ಇದಕ್ಕೆ ಇನ್ನೆರಡು ವರ್ಷಗಳಷ್ಟೇ ಬಾಕಿ.  25-7-2022 ರಂದು ನಮ್ಮ ಮನೆಯಲ್ಲಿ ಅವರ 48ನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮ ನೆರವೇರಿತು. ಆದ್ದರಿಂದ ಈ ಎಲ್ಲಾ ಹಿರಿಯರ ನೆನಪಿಗೋಸ್ಕರ ಇಲ್ಲಿನ ಛಾಯಾಚಿತ್ರಗಳನ್ನು, ಬರಹವನ್ನು ಮುಖಪುಸ್ತಕಕ್ಕೆ ಕಳುಹಿಸುತ್ತಿದ್ದೇನೆ. ಹಾಗೂ ನನಗೆ ಮುಖಪುಸ್ತಕದ ಮೂಲಕ ತಮ್ಮ ಅನಿಸಿಕೆಗಳನ್ನು ನೀಡಿ ಪ್ರೋತ್ಸಾಹಿಸಿದ ಎಲ್ಲಾ ಸ್ನೇಹಿತ ವರ್ಗದವರಿಗೂ ಕೃತಜ್ಞತೆ ಗಳು.

ನನಗೆ ಮಾದರಿಯಾಗಿ ,ಮಾನಸಿಕ ಗುರುವಾದ ಉದಯವಾಣಿ ದಿನಪತ್ರಿಕೆಯ ಮಾಜಿ ಛಾಯಾಚಿತ್ರಕಾರರಾದ ಶ್ರೀ ಯಜ್ಞ ಆಚಾರ್ಯ ,ಮಂಗಳೂರು ಇವರಿಗೆ ವಂದನೆಗಳೊಂದಿಗೆ ,ಕೃತಜ್ಞತೆ ಯನ್ನು ವ್ಯಕ್ತಪಡಿಸುತ್ತಿದ್ದೇನೆ..


  • ಲೇಖನ ಮತ್ತು ಕ್ಯಾಮೆರಾ ಹಿಂದಿನ ಕಣ್ಣು : ಬಾಲು ದೇರಾಜೆ, ಸುಳ್ಯ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW