ಸಂಜೆ ಮತ್ತು ಸೊಳ್ಳೆ – ಡಾ.ಪ್ರಕಾಶ ಬಾರ್ಕಿ

“O”ಬ್ಲಡ್ ಗ್ರೂಪ್ ಜನ, ಗರ್ಭವತಿ, ಹೆಚ್ಚು ಬೆವರುವ ಆಸಾಮಿಗಳೆಂದರೆ ಸೊಳ್ಳೆಗಳಿಗೆ ಪ್ರೀತಿ ಹೆಚ್ಚು, ಕಚ್ಚದೆ ಬಿಡಲಾರವು. ಸೊಳ್ಳೆ ಕುರಿತು ಇನ್ನಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ಆರೋಗ್ಯ ತಜ್ಞ ಡಾ.ಪ್ರಕಾಶ ಬಾರ್ಕಿ ಅವರು, ಓದಿ ಸೊಳ್ಳೆಯಿಂದ ಮುಕ್ತವಾಗಿರಿ…

ಸೂರ್ಯ ಕೆಂಪಗೆ ಮುಖ ಸಿಂಡರಿಸ್ಕೊಂಡು ಮುಳುಗುತ್ತಿದ್ದ. ತಲೆ ಮೇಲೆ ಒಂದಿಷ್ಟು ಹಾರುವ ಪಕ್ಷಿಗಳ ಸಾಲು. ಕಣ್ಣೆತ್ತಿ ಆಕಾಶ ನೋಡ್ತಿದ್ರೆ, ಬಿಡುವರಿಯದ ಕರಿ ಮೋಡಗಳ ಓಟ. ಸಂಜೆಯ ಸ್ವರ್ಣಬೆಳಕು ವರ್ಣಿಸಲಸದಳ.

ಸಂಜೆಯ ಸ್ವರ್ಗ ದೃಶ್ಯ ಸವಿ ಸವಿಯುತ್ತಿದ್ದೆ. ಮಂದ ಕತ್ತಲು ತನ್ನ ಕಬಂಧ ಬಾಹು ಚಾಚಿ ಬೆಳಕನ್ನು ತಬ್ಬುತಿತ್ತು. ಒಂದರಲ್ಲೊಂದು ಲೀನವಾಗುವ ಹೊತ್ತು. ಬೆಳಕು- ಮಂದ ಕತ್ತಲನ್ನು ತಬ್ಬಿ ಒಂದಾದ ಫಲವೆ ಸಂಪೂರ್ಣ ಕತ್ತಲು.

ಅರಿವೇ ಇಲ್ಲದಂತೆ ನಿಸರ್ಗದಾಟ ಆನಂದಿಸುತ್ತಿದ್ದೆ.

ಗುಂಯ್ಞ್……!!

ಒಂದಿಷ್ಟು ಸೊಳ್ಳೆಗಳ ಹಿಂಡು ಕಿವಿ ಸುತ್ತ, ಇನ್ನೊಂದಿಷ್ಟು ತಲೆ ಮೇಲೆ ಗಿರಕಿ ಹಾಕುತ್ತಿದ್ದವು. ಗುಂಯ್ಞ್… ಅನ್ನೋ ಅವುಗಳ ರಾಗಕ್ಕೆ, ಕೈಯಾಡಿಸಿ ಓಡಿಸಿ ಬೇಸತ್ತು, ಟೆರೇಸ್ ಇಳಿದು ಬಂದೇ.
ಈ ಸೊಳ್ಳೆಗಳ ಆಸ್ತಿ ನಾವೇನ ತಿಂದಿದೇವೋ!!! ರಾತ್ರಿ- ಹಗಲು ಅನ್ನದೆ ಮೈ ತುಂಬ ಕೆರೆತದ ಬೊಬ್ಬೆ ಬರೋ ಹಾಗೆ ಕಚ್ಚಿ, ರಕ್ತಹೀರಿ ಸುಖಪಡುತ್ತವೆ.

ಫೋಟೋ ಕೃಪೆ : mozquit

ಹಲವರ ಜೀವ- ಜೀವನ ಹಿಂಡೆ ಹಿಪ್ಪೆ ಮಾಡೋರಿಗೆ ಹೋಲಿಸಿದರೆ ಇವೇ “ದಿ ಬೆಸ್ಟ್” ಬಿಡಿ ಸೊಳ್ಳೆ ಸೆಕೆಂಡ್ಗೆ 300 ರಿಂದ 600 ಸಾರೆ ತನ್ನ ರೆಕ್ಕೆ ಬಡಿಯುವುದರಿಂರ “ಗುಂಯ್ಞ್” ಶಬ್ಧ ಬರೋದು. ಸೊಳ್ಳೆಗಳಲ್ಲೆ 3500 ಕ್ಕಿಂತ ಹೆಚ್ಚು ಜಾತಿ ಇವೆ, ಆದರೆ ಇವು ಒಂದಕ್ಕೊಂದು ನಮ್ಮ ತರ ಜಾತಿ -ಜಾತಿ ಅಂತ ಕಚ್ಚಾಡಲ್ಲ.

ಕೆಲವೇ ಕೆಲವು ಜಾತಿ ಸೊಳ್ಳೆಗಳು ಮಾತ್ರ ರಕ್ತ ಹೀರಿ ಬದುಕೋದು. ಒಂದು ನೆನಪಿರಲಿ ಹೆಣ್ಣು ಸೊಳ್ಳೆ ಮಾತ್ರ ರಕ್ತ ಹೀರಿ ಹೊರಳಾಡುತ್ತೆ, ಗಂಡು ಸೊಳ್ಳೆ ಮರದ ಕಾಂಡ, ಎಲೆ ರಸ ಹೀರಿ ಬದುಕತ್ತೆ, ಪಾಪಚ್ಚಿ.

“ಹೆಣ್ಮಕ್ಕಳೆ ಅಲ್ವಾ ನಮ್ಮ ರಕ್ತ ಹೀರೋದು”! ಅಂತ ಹೃದಯ ಹೋಳಾದ ಹುಡುಗ್ರು ಬಾರ್ ಲ್ಲಿ ಎಣ್ಣೆ ಹಾಕ್ತಾ ವಾದಿಸ್ಬೇಡಿ. ಪಿಲಿಜ್ ,ಸೊಳ್ಳೆಗಳಿಗೆ ಅತೀ ಆಸೆ ಇಲ್ಲ 2 ರಿಂದ 4 ವಾರ ಮಾತ್ರ ಬದುಕೋದು, ಕೆಲವು ಜಾತಿಯವು ಹೆಚ್ಚು ಬದುಕುತ್ತವೆ.

ನಾವು ಉಸುರಿ ಬಿಟ್ಟ “ಕಾರ್ಬನ್ ಡೈ ಆಕ್ಸೈಡ್” ವಾಸನೆಗೆ ಹೆಚ್ಚು ಮೋಹಗೊಂಡ ಸೊಳ್ಳೆಗಳು ನಮ್ಮ ತಲೆ, ಕಿವಿ, ಮುಖದ ಮೇಲೆ ಸುತ್ತುತವೆ.ರಾತ್ರಿ ನಮ್ಮ ನಿದ್ದೆ ಹಾಳು ಮಾಡೋದರಲ್ಲಿ ಎತ್ತಿದ ಕೈ ಸೊಳ್ಳೆಗಳದು. ನಮ್ಮ ಬೆವರಿನ ವಾಸನೆ, ಮೈ ಬಿಸಿಯನ್ನು 3 ಮೀಟರ್ ದೂರದಿಂದಲೇ, ತಮ್ಮ ತಲೆ ಮೇಲೆ “ಆಂಟೇನಾ” ತರ ಇರೋ ಕೊಂಡಿಯಿಂದಾ ಗ್ರಹಿಸಿ, ನಮ್ಮ ಮೇಲೆ ಗೇರಿಲ್ಲಾ ದಾಳಿ ಮಾಡಿಬಿಡುತ್ತವೆ.

“O”ಬ್ಲಡ್ ಗ್ರೂಪ್ ಜನ, ಗರ್ಭವತಿ, ಹೆಚ್ಚು ಬೆವರುವ ಆಸಾಮಿಗಳೆಂದರೆ ಸೊಳ್ಳೆಗಳಿಗೆ ಪ್ರೀತಿ ಹೆಚ್ಚು, ಕಚ್ಚದೆ ಬಿಡಲಾರವು.

ನಿಮ್ಮ ಕಿವಿಯೊಳಗಿನ “ಗುಗ್ಗೆ” ವಾಸನೆ, ಸೊಳ್ಳೆಗಳಿಗೆ ಥೇಟ್ ತಮ್ಮ ಪ್ರೇಯಸಿ ಮೈ ವಾಸನೆ ಅನಿಸೋದರಿಂದ ಅವು ಕೆಲವು ಸಾರೆ ಕಿವಿ ಒಳ ಹೊಕ್ಕುವುದಿದೆ.

ಕೊಳಚೆ ನೀರು (ಚರಂಡಿ, ನಿಂತ ನೀರು), ಹೊಲಸು ತುಂಬಿದ ಪ್ರದೇಶಗಳು, ಪೊರಕೆ ಆಡಿಸದ ಮನೆಯ ಕೆಲವು ಸ್ಥಳಗಳಲ್ಲಿ ಸುಖವಾಗಿ ಬದುಕುತ್ತವೆ. ಒಂದು ತಾಸಿಗೆ 1 ರಿಂದ 3 ಮೈಲು ದೂರ ಹಾರಬಲ್ಲವು.

ಫೋಟೋ ಕೃಪೆ : deccanchronicle

ಸೊಳ್ಳೆಗಳು ತಮ್ಮ ಮುಖದ ಮೇಲಿನ “ಸೂಜಿ”ಯಂತ ಮೊನಚು ಅಂಗದಿಂದ ಮೈಗೆ ಚುಚ್ಚಿ, ಅದರ ಮೂಲಕ ಲಾಲಾರಸ ನಮ್ಮ ದೇಹಕ್ಕೆ ಸೇರಿಸಿ ರಕ್ತ ಎಳೆಯುತ್ತವೆ. ಅವುಗಳ ಲಾಲಾರಸದ ಪ್ರಭಾವದಿಂದ ಕಚ್ಚಿದ್ದು ಗೊತ್ತೆ ಆಗೋಲ್ಲ ಮತ್ತು ಕೆರೆತದ ಬೊಬ್ಬೆಗಳು ಏಳೋದು, ಆವಾಗಲೇ ನಾವು ಪರಿಚಿಕೊಂಡು, ಬೈಗುಳ ಗೊಣಗೋದು. ಪ್ರಾಣಿಗಳು, ಮನುಷ್ಯರು ಅಂತ ಭೇದವೆಣಿಸದೆ ಸೊಳ್ಳೆಗಳು ಕಚ್ಚಿ “ರಕ್ತ ಹೀರಿ” ಸುಖವಾಗಿ ಬದುಕುತ್ತವೆ.

ಕಾಯಿಲೆ ಬಂದಿರೋ ಪ್ರಾಣಿಗಳ ರಕ್ತ ಹೀರೊದರ ಜೊತೆಗೆ ಅವುಗಳ ರಕ್ತದೊಳಗಿನ ವೈರಸ್ಸು, ಬ್ಯಾಕ್ಟೀರಿಯಾ, ಪ್ಯಾರಾಸೈಟ್ ಗಳನ್ನ ತಮ್ಮ ಹೊಟ್ಟೆಗೆ ತುಂಬಿಕೊಳ್ಳುತ್ತವೆ.

ನಮ್ಮನ್ನ ಕಚ್ಚಿದಾಗ ಲಾಲಾರಸ ಜೊತೆ ಅವುಗಳ ಹೊಟ್ಟೆಯೊಳಗಿನ ವೈರಸ್ಸು, ಬ್ಯಾಕ್ಟೀರಿಯಾ, ಪ್ಯಾರಾಸೈಟ್ ಗಳನ್ನ ನಮ್ಮ ರಕ್ತಕ್ಕೆ ಹರಿ ಬಿಡುವವು. ಅದಕ್ಕಾಗಿಯೇ ಸೊಳ್ಳಗಳನ್ನ ರೋಗ “ವಾಹಕ(Vector) ಕೀಟ ಅನ್ನೋದು.

ಮಲೇರಿಯಾ, ಚಿಕುನ್ ಗೂನ್ಯಾ, ಜಿಕಾ, ಹಳದಿ ಜ್ವರ, ಡೆಂಗ್ಯು, ಆನೆಕಾಲು ರೋಗ ಮುಂತಾದ ಹಲವು ಕಾಯಿಲೆಗಳ ಸಂಕೋಲೆಗೆ ನಮ್ಮನ್ನು ನೂಕಿ ಹಾರುತ್ತಿವೆ. ಪ್ರತಿ ವರ್ಷ ಪ್ರಪಂಚದ ಸುಮಾರು 7 ಲಕ್ಷ ಜನರನ್ನ “ಯಮ ಪಾಶ”ಕ್ಕೆ ಸಿಲುಕಿಸಿ ನುಂಗಿಹಾಕುತ್ತಿವೆ.

ಫೋಟೋ ಕೃಪೆ : scroll

ಸೊಳ್ಳೆಗಳು ತಮ್ಮ ದೇಹ ಭಾರಕ್ಕಿಂತ 3 ಪಟ್ಟು ಹೆಚ್ಚು ರಕ್ತ ಹೀರಿ ಹೊಟ್ಟೆ ತುಂಬಿಸಕೊಳ್ಳಬಲ್ಲವು. ಅವು ರಕ್ತ ಕುಡಿಯುವ ಮುಖ್ಯ ಉದ್ದೇಶ ತನ್ನ ಗರ್ಭದೊಳಗಿನ ಮೊಟ್ಟೆಗಳ ಬೆಳವಣಿಗೆಗೆ ಪೂರಕವಾದ ಪ್ರೋಟಿನ್, ಅಮೈನೋ ಆಸಿಡ್ ಪೋಷಕಾಂಶಗಳನ್ನ ಪಡೆಯಲು. ಮೊಟ್ಟೆಯಿಡುವ ಮೊದಲು ಹೆಚ್ಚೆಚ್ಚು ಕಚ್ಚಿ ಹೈರಾಣಾಗಿಸುತ್ತವೆ.

ಇವುಗಳ ಕಾಟದಿಂದ ತಪ್ಪಿಸಿಕೊಳ್ಳೋಕೆ ರೂಮಿಗೊಂದರಂತೆ ರಾಸಾಯನಿಕ ಎಣ್ಣೆ ತುಂಬಿದ ಪೆಟ್ಟಿಗೆಗಳನ್ನ(Coil) ಸ್ವೀಚ್ಚ್ ಬೋರ್ಡಿಗೆ ‌ಹಾಕುತ್ತೇವೆ, ಸೊಳ್ಳೆ ಬತ್ತಿ ಹಚ್ಚಿ, ಜೋರಾಗಿ ಗಾಳಿ ಬಿಸೋ ತರ ಫ್ಯಾನ್ ಹಾಕ್ತೀವಿ ಅಷ್ಟೇ ಏಕೆ ಮೈ ತುಂಬಾ ಮುಲಾಮುಗಳನ್ನು ಲೇಪಿಸಿಕೊಳ್ಳೋದಿದೆ. ಆದರೂ ಎಲ್ಲವನ್ನೂ ಮೀರಿ ರಕ್ತ ಕುಡಿದು ಬದುಕುವ ಶಕ್ತಿ ಸೊಳ್ಳೆಗಳಿಗಿದೆ. ನಾವು ಬಳಸುವ ಸೊಳ್ಳೆ ನಿವಾರಕಗಳಿಂದ (mosquito repellent) ಆಗುವಂತೆ ಅನಾಹುತಗಳು, ಕಾಯಿಲೆಗಳು ಒಂದೇರಡಲ್ಲ.

ಅದರ ಬದಲು “ಬೇವಿನ ಎಣ್ಣೆ ದೀಪ ಹಚ್ಚೋದರಿಂದ, ಒಣಗಿದ ಬೇವಿನ ಎಲೆಗಳ ಹೊಗೆ ಹಾಕೋದರಿಂದ ಸಹ ದಾಂಗುಡಿಯಿಡುವ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಬಹುದು. ನಿಂತ ನೀರಿನ ಹೊಂಡಕ್ಕೆ ಒಂದಷ್ಟು ಸೊಳ್ಳೆ ಲಾರ್ವಾ ತಿನ್ನುವ “ಗ್ಯಾಂಬೋಸ್”(Gambusia affinis) ತರದ ಮೀನು ಬಿಡುವುದು. ಮನೆ ಒಳ ಹೊರಗೆ ಸ್ವಚ್ಚತೆ ಕಾಪಾಡಿಕೊಂಡು, ಮಲಗುವಾಗ “ಸೊಳ್ಳೆ ಪರದೆ” ಬಳಸಿದರಾಯಿತು, ಸೊಳ್ಳೆಯಿಂದ ಒಂದಷ್ಟು ರಕ್ಷಣೆ ಪಡೆಯಬಹುದು.

ನಮ್ಮ ಮನೆಯೆದುರಿನ ಚರಂಡಿಯಿಂದ ಹಿಡಿದು ಅಮೇಜಾನ್ ಕಾಡಿನ ತನಕ ಅಂದರೇ ಪ್ರಪಂಚದ ತುಂಬಾ ಸೊಳ್ಳೆಗಳು ಜೀವಿಸುತ್ತೀವೆ.ಯುರೋಪಿನ ಐಸ್ಲ್ಯಾಂಡ್ (Iceland) ರಾಷ್ಟ್ರ ಒಂದೇ ಸೊಳ್ಳೆಗಳೇ ಇಲ್ಲದ ದೇಶ. ವೈಜ್ಞಾನಿಕ ಯುಗದ ನಾಗರೀಕರ ಅನಾಗರೀಕ ಕೃತ್ಯಗಳೇ ಸೊಳ್ಳೇಗಳಿಗೆ ಆಶ್ರಯ.


  • ಡಾ.ಪ್ರಕಾಶ ಬಾರ್ಕಿ  (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ.

2 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW