ಮೂವರೂ ಕಾಡಿನ ದಾರಿಯಲ್ಲಿ ತಪ್ಪಿಸಿಕೊಂಡೆವು, ದಾರಿ ಸಿಗುತ್ತಿಲ್ಲವಾದ್ದರಿಂದ ಕಾಡು ಚಕ್ರವ್ಯೂಹದಂತೆ ಭಾಸವಾಗತೊಡಗಿತು. ಗಿರಿವಾಲ್ಮೀಕಿ ಅವರ ಲೇಖನಿಯಲ್ಲಿ ಮೂಡಿ ಬರುತ್ತಿರುವ ಕಾಡಿನ ಸುತ್ತ ಸರಣಿಯನ್ನು ತಪ್ಪದೆ ಓದಿ….
ಅಲ್ಲಿಂದ ಮೂವರೂ ದಾರಿ ತಪ್ಪಿಸಿಕೊಂಡೆವು, ಗಂಟೆಗಳು ಉರುಳತೊಡಗಿದವು. ಕಣ್ಣು ಹರಿಸಿದಷ್ಟೂ ಕಡು ಗಾಢಾoಧಕಾರ….ಬಿಟ್ಟರೆ ದೈತ್ಯ ಮರಗಳ ಮೇಲ್ಛಾವಣಿಯಲ್ಲಿ ಮಿಣಕು ನಕ್ಷತ್ರಗಳ ಬೆಳ್ಳಿ ರಂಗೋಲಿ. ಕಣ್ಣು ಕಟ್ಟಿ ಗಿರ ಗಿರನೇ ತಿರುಗಿಸಿ ಕೈ ಬಿಟ್ಟಂಥ ಅನುಭವ. ಇವರೀರ್ವರ ಸುಳಿವಿಲ್ಲ. ನಾ ಆನಿಕೊಂಡ ನಿಂತ ನಂದಿ (Naked tree) ಮರದ ಬಲ ಭಾಗಕ್ಕೆ ತರಗಲೆಗಳ ಮೇಲೆ ಯಾವುದೋ ದೈತ್ಯ ಆಕೃತಿಯೊಂದು ಭಾರವಾದ ಹೆಜ್ಜೆಯನ್ನಿಡುತ್ತಿರುವ ಸದ್ದು. ತರಗಲೆಯೆಡಯಲ್ಲಿನ ಒಣ ಕಟ್ಟಿಗೆಯ ತುಂಡುಗಳು ಲಟ-ಲಟನೇ ಗೋಣು ಮುರಿದುಕೊಳ್ಳತೊಡಗಿದವು. ಕಾಡಿನ ನಿಸ್ತೇಜ ಗಾಳಿಯೊಡನೆ ತೂರಿಕೊಂಡ ಬಂದ ಸದ್ದಿಗೆ ನನಗೆ ಯಾರೋ ಮರಗಳ್ಳರ ಭಯ. ಕೈಯಲ್ಲಿರುವ ಟಾರ್ಚ್ ಆನ್ ಮಾಡಿ ಸದ್ದು ಬಂದ ದಿಕ್ಕಿನೆಡೆಗೆ ಸ್ಥಳ ಪರಿಶೀಲನೆ ಮಾಡಲು ಒಬ್ಬಂಟಿಯಾಗಿ ಧೈರ್ಯ ಸಾಲುತ್ತಿಲ್ಲ. (ಕಾಡಿನ ನಡುವೆ ರಾತ್ರಿ ಗಸ್ತಿನ ವೇಳೆ ಬೆಳಕು ಹಾಯಿಸುವುದು,ಮೊಬೈಲ್ ಆನ್ ಮಾಡಿ ನೋಡುವುದೆಲ್ಲಾ ಸಾವಿಗೆ ಆಹ್ವಾನ ನೀಡಿದಂತೆ.)
ಧೂಪದ ಮರದಿಂದ ಬೇರ್ಪಟ್ಟ ಮೂವರು ಅಕ್ಷರಶಃ ನಟ್ಟ ನಡುರಾತ್ರಿಯಲ್ಲಿ ಅರಣ್ಯದ ಪಾಲಾಗಿದ್ದೆವು. ಅನುಭವಿ ಪ್ರಕಾಶ ಎಸ್ ಎಚ್ ಸರ್ ಮತ್ತು ಸರ್ದಾರ್ ನನಗಾಗಿ ಹುಡುಕಾಟ ನಡೆಸಿದ್ದರು.ಅತ್ಯಂತ ಆರ್ದ್ರತೆಯಿಂದ ಕೂಡಿದ ಹಸಿ ಹಸಿ ವಾಸನೆಯ ವಿಲಕ್ಷಣವಾದ ಮರಗಿಡ, ಹ್ಯೂಮಸ್ಸಿನ ಪರಿಮಳ ಶ್ವಾಸ ತುಂಬುತ್ತಿದ್ದರೆ ನನಗೆ ಅರಣ್ಯ ರೋಧನದ ಪದದ ಅರ್ಥ, ಅರ್ಥವಾಗತೊಡಗಿತು..!
ರಾತ್ರಿಯ ಅಲೆಯುವಿಕೆಯಿಂದ ನಮ್ಮ ಬೆವೆತ ಮೈಯಿಂದ ಹೊರಟ ಬೆವರ ವಾಸನೆಗೆ, ಯಾವುದೋ ಮಾಂಸಹಾರಿ ಪ್ರಾಣಿಗೆ ಅಥವಾ ಆಕ್ರಮಣಕಾರಿ ಕರಡಿ, ಆನೆಗೆ ಬಲಿಯಾಗಬಹುದೆಂಬ ಸಂಗತಿಯೇ ಇನ್ನಿಲ್ಲದ ತಲ್ಲಣ ಉಂಟು ಮಾಡಿತ್ತು. ಅದ್ಯಾವ ಮೃಗ ಬಂದರೂ ಎದುರು ಬದರಾಗಿ ನಿಲ್ಲಲೀ ಪರವಾಗಿಲ್ಲಾ, ಆದರೆ ಕರಡಿ ಮಾತ್ರ ಬರದಿರಲಿ ಎಂಬ ಹಾರೈಕೆ ಅರಿವಿಲ್ಲದೇ ಕಾಣದ ಶಕ್ತಿಗೆ ಮನಸ್ಸು ಬೇಡಿಕೊಳ್ಳತೊಡಗಿತು.
ದಾರಿ ಸಿಗುತ್ತಿಲ್ಲವಾದ್ದರಿಂದ ಕಾಡು ಚಕ್ರವ್ಯೂಹದಂತೆ ಭಾಸವಾಗತೊಡಗಿತು. ಪ್ರಕಾಶ್ ಸರ್ ಮತ್ತು ಸರ್ದಾರ್ ಯಾವ ಭಾಗದಲ್ಲಿ, ಯಾವ ದಿಕ್ಕಿನಲ್ಲಿ ಇರುವರೋ ಎನ್ನುವ ಯಾವ ಸುಳಿವು ಇಲ್ಲದೇ ಕಾಡಿನ ಭೌಗೋಳಿಕ ಪರಿಸರದ ವಿಚಿತ್ರ ವಿಲಕ್ಷಣಕ್ಕೆ ಒಳಗಾಗಿ, ನನ್ನ ಹೆಜ್ಜೆ, ನನ್ನ ಉಸಿರು, ಬೂಟಿನ ಸಪ್ಪಳ ಬಿಟ್ಟರೆ ಈ ಕತ್ತಲ ಜಗತ್ತಿನಲ್ಲಿ ಬೇರಾವ ವಸ್ತು, ವ್ಯಕ್ತಿಯಾಗಲಿ ಇಲ್ಲಿ ಇರದೇ, ಬೆನ್ನ ಹಿಂದೆ ಯಾವುದೋ ಆಕೃತಿ ಹಿಂಬಾಲಿಸುವಂಥ ಗುಮಾನಿ. ಆ ವ್ಯಾಪ್ತಿಯ ಸ್ಥಳ ಸಮ್ಮೋಹನಕ್ಕೆ ಇಡೀ ದೇಹ, ಮೆದುಳು ಈಡಾಗಿದ್ದರೆ, ನನ್ನ ಒಳ ಮನಸ್ಸಿಗೆ ಮಾತ್ರ ಚಾರ್ಮಾಡಿ ಕಾಡಿನ ಹಿರಿಯರು ಹೇಳಿದ ಆ ಎಡಕ್ಕೆ ವಾಲಿಕೊಂಡ ಕಾಡು ಬಳ್ಳಿಯದ್ದೇ ಭಯ..!
ಇಲ್ಲಿ ಮೂವರ ಜೀವವೂ ಕತ್ತಲ ಕಾಡಿನೊಳಗೆ ಅಸಂಗತವಾಗಿತ್ತು. ನಿಸರ್ಗದ ಸಾವಿರಾರು ವರ್ಷಗಳ ರಚನೆಯನ್ನು ನಾವು ಅರ್ಥ ಮಾಡಿಕೊಂಡಿರಲಿಲ್ಲ. ಹಲವು ವರ್ಷಗಳಿಂದ ಪರಿಚಯವಿದ್ದ ಕಾಡು ಕೂಡಾ ಪ್ರತಿ ಮುಂಜಾನೆ, ಸಂಜೆ ಯಾವಾಗ ನೋಡಿದರು ಅಷ್ಟೇ ನಿಗೂಢ ನಡೆಯಿಂದ, ನಿರ್ಭಿಡೆಯಿಂದ ಇರುತ್ತಿತ್ತು. ಕಾಡು ಸೇರಿದಾಗಿನಿಂದ ಕಾಡನ್ನ ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದ ನನಗೆ, ಹಲವು ಶತಮಾನಗಳಿಂದ ಕಾಡು ಕಾಪಡಿಕೊಂಡಿದ್ದ ಕಾಡಿನ ಸಹಿಸಲಾಧ್ಯವಾದ ನೀರವತೆಯನ್ನ ಕಾರ್ಯದ ನಿಮಿತ್ತ ಮೂವರು ಕಲಕಿಬಿಟ್ಟೆದ್ದೆವು.
ಸುತ್ತಲಿನ ಕತ್ತಲಿನ ವಾತಾವರಣದ ಭಯಕ್ಕೆ ಎಷ್ಟೇ ಜೋರಾಗಿ ಉಸಿರಾಡಿದರೂ ಪ್ರಾಣವಾಯು ಪೂರ್ತಿ ಶ್ವಾಸ ತುಂಬುತ್ತಿಲ್ಲ.
ಮುಂದುವರೆಯುತ್ತದೆ…
- ಗಿರಿವಾಲ್ಮೀಕಿ
