‘ಕಡಲ ದಂಡೆಯ ಕಲ್ಲು’ ಕವನ – ಆನಂದ್ ಋಗ್ವೇದಿ

ಕಡಲೆದೆಯ ಕನಸೇ ತೇಲಿ ಬಂದಂತೆ ಅಂಜನಾ ಹೆಗಡೆಯವರ ಕವಿತೆಯ ಒಳಗೊಂದು ಇಣುಕು ನೋಟವನ್ನು ಲೇಖಕರಾದ ಆನಂದ್ ಋಗ್ವೇದಿಯವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಆಧುನಿಕ ಯಾಂತ್ರಿಕ ಬದುಕು ಎಂಬುದು ಒಂದಾಗಿಯೂ ಎರಡಾಗಿ ಉಳಿವ ಪರಿಯನ್ನು ಸಹಜವಾಗಿಸಿದೆ.‌ ಸದ್ದುಗದ್ದಲಗಳ, ಬಣ್ಣ ಬಣ್ಣದ ಹೊರ ಜಗತ್ತು ಒಳ ಜಗತ್ತನ್ನು ಹೆಚ್ಚೆಚ್ಚು ನೀರವಗೊಳಿಸಿದೆ. ಅಂತಹ ಶಬ್ದಗಳೇ ಇಲ್ಲದ ರಾತ್ರಿಗಳೆಂಬ ಸಂಗಾತ ಹಗಲುಗನಸುಗಳನ್ನು ಮಾತ್ರ ಉಳಿಸಿದೆ.‌ ಆ ಹಗಲುಗನಸುಗಳಿಗೂ ಹೆಗಲು ಕೊಡುವ ಈ ಸಂಗಾತದಲ್ಲಿ ಕಡಲು ಸೇರಿ ಕಡಲೇ ಆದ ಆರ್ದ್ರ ನದಿಯಂತಹ ಮನಸು ಮತ್ತು ಕಡಲಲ್ಲಿದ್ದೂ ಕರಗದ ಕಲ್ಲು ಜೊತೆಯಾಗಿವೆ.

ಕಾಲೂರಿ ಕುಳಿತವರ ಅಂಗಾಲುಗಳು ತೇವಗೊಳ್ಳುವ ಹೊತ್ತಿನಲ್ಲಿ ಕನಸ ದೋಣಿ ತೇಲಿ ಬಂದಿದೆ. ಅದು ಕಡಲೆದೆಯ ಕನಸೇ ತೇಲಿ ಬಂದಂತೆ. ಮರಳ ಮೇಲೊಂದು ಕನಸ ಹೆಜ್ಜೆಯ ಗುರುತ ಕಾಣುವ ಆ ಕಣ್ನೋಟಕ್ಕೆ ಕಡೆಗಣಿಸುವ ಕಲ್ಲಿನೆದೆಯಲ್ಲೂ ಇರಬಹುದೊಂದು ಕನಸು ಎನ್ನಿಸುತ್ತದೆ.‌ ಅದು ಕಲ್ಲೂ ಕಡಲೆದೆಯ ಕನಸ ಕಾಯುವಂತಹ ಕನಸ ಕಣ್ಣಿನ ನೋಟ.
ತಣ್ಣನೆಯ ತೆರೆಯೊಂದು ಹತ್ತಿರ ಬಂದು ಮರಳುವುದು, ಮೈಗಂಟಿದ ಹನಿಯೊಂದು ಜಾರಿ ಕಡಲಿನೆಡೆಗೆ ನಡೆಯುವುದೇ ಬದುಕ ಅನುಷಂಗಿಕ ವಿದ್ಯಮಾನಗಳು. ಈ ವಿದ್ಯಮಾನಗಳ ಗಮನಿಸುವ ಆರ್ದ್ರ ಮನಸಿಗೆ ಮಾತ್ರ ಕಲ್ಲಿಗೂ ಇರಬಹುದು ಹನಿಯಂತೆ ಹಗುರಾಗಿ ಕಡಲ ಸೇರುವ ತವಕ ಎನ್ನಿಸುತ್ತದೆ.‌

ಬದುಕ ಬಂದಳಿಕೆಗಳ ಹಾಯ್ದು ಬಂದ ಆ ಮನಸ್ಸಿಗೆ ಕಲ್ಲೂ ಮಾರ್ದವವಾಗುವ ಆಸೆ ಕನಸುಗಳಿವೆ. ಹಾಗೆಂದೇ

‘ನಿಟ್ಟುಸಿರಿಗೂ ಕಿವಿಯಾಗಬೇಕಿದೆ ಕಲ್ಲು;
ಊರಿದ ಕೈಗಳ ಸಂತೈಸಬೇಕಿದೆ
ಕಡಲಿನಾಚೆಗೂ ನಾಟಿದ ದೃಷ್ಟಿಗಳ ಹಿಂಬಾಲಿಸಿ
ಆತು ಕುಳಿತ ನೆರಳುಗಳ
ತಲುಪಿಸಬೇಕಿದೆ ಆಚೆ ದಡಕ್ಕೆ…. ‘ ಎಂದು ಹಂಬಲಿಸುತ್ತದೆ.

ಬದುಕು ಎಂಬುದೇ ಇಂತಹ ಸಿದ್ಧ ಮಾಡಿಟ್ಟ ಪ್ರತಿಮೆಗಳೊಳಗೂ ಇರುವ ಅಂತಃಕರಣದ ಅಂತರ್ ಜಲ. ಅದು ಕನಸು, ಕಲ್ಪನೆ ಮತ್ತು ವಾಸ್ತವದ ನಡುವೆಯೂ ಆಶಾವಾದವನ್ನು ಮೊಳಕೆಯೊಡೆಸಿ ಬೆಳೆಸುತ್ತದೆ. ಚಿಗುರೂ ಹೆಮ್ಮರವಾಗುತ್ತದೆ. ಆಗ ಮಾತ್ರ ವಾಸ್ತವದ ಪ್ರಖರ ಚಿತ್ರಗಳು:

ಹೊಟ್ಟೆಯೊಳಗಿನ ಮಾತು,
ಹರಿದ ಚಪ್ಪಲಿ,
ಆವಿಯಾಗದ ಮೌನ,
ಯಾರೋ ಹಾಸಿದ ಕರವಸ್ತ್ರ….

ಎಲ್ಲಾ ಉಳಿದು ಹೋಗಿವೆ ಎಂಬುದು ವಿಷಣ್ಣವಾಗದೇ ವಾಸ್ತವದ ಸತ್ಯಗಳಷ್ಟೇ ಆಗುತ್ತವೆ. ಅಂತಹ ಆಶಾವಾದ ಮಾತ್ರ ಈ ಶುಷ್ಕ ಬದುಕಿನಲ್ಲೂ ಅಪ್ಪಳಿಸಬಹುದೊಂದು ಅಲೆ; ಹೊತ್ತೊಯ್ಯಬಹುದು ಎಲ್ಲ ಸರಕುಗಳ ಎಂದು ಆಶಿಸುತ್ತದೆ. ಕನಸುಗಳಿಗೆ ಯಾವುದೇ ಅಂಕೆ ಇಲ್ಲ ನಿಜ. ಆದರೆ ಕಡಲೆದೆ ಕಾಣುವ ಈ ಕಲ್ಲಿನ ಕನಸು ಮಾತ್ರ ಹಾಗೆ ಅಂಕೆಯಿಲ್ಲದ ಅನಿರ್ಬಂಧವಾದುದೇ? ಆದರೆ ಈ ಕವಿತೆಯು ಕೊನೆಯಲ್ಲಿ ‘ಆಶಯ ಈಡೇರಲಿ ಯಾರದೇ ಅಪ್ಪಣೆಯಿಲ್ಲದೆ’ ಎಂದು ಆಶಿಸುವುದು ಒಂದು ಸಕಾರಾತ್ಮಕ ಸಾಧ್ಯತೆ.
**
ಕಡಲ ದಂಡೆಯ ಕಲ್ಲು

ನೀರವರಾತ್ರಿಗಳ ನೇವರಿಸುತ್ತ
ಹಗಲುಗನಸುಗಳಿಗೆ ಹೆಗಲುಕೊಡುತ್ತ
ನಗುವ ಮುಚ್ಚಿಟ್ಟು ಹೆಣ್ಣಾಗುತ್ತದೆ ಒಮ್ಮೆ
ಒಮ್ಮೊಮ್ಮೆ ಕಲ್ಲಿನಂಥ ಗಂಡಸು!

ಕಾಲೂರಿ ಕುಳಿತವರ ಅಂಗಾಲುಗಳು
ತೇವಗೊಳ್ಳುವ ಹೊತ್ತು
ಜಾರಿಬಂದಿದೆಯೊಂದು ದೋಣಿ
ಕಡಲೆದೆಯ ಕನಸೇ ತೇಲಿಬಂದಂತೆ
ಮರಳಮೇಲೊಂದು ಕನಸಹೆಜ್ಜೆಯ ಗುರುತು!

ಕಡೆಗಣಿಸುವ ಕಲ್ಲಿನೆದೆಯಲ್ಲೂ
ಇರಬಹುದೊಂದು ಕನಸು;
ಕನಸಕಾಯುವ ಕಣ್ಣು!

ತಣ್ಣನೆಯ ತೆರೆಯೊಂದು ಹತ್ತಿರ ಬಂದು
ಹಗುರಾಗಿ ಮರಳುತ್ತದೆ
ಮೈಗಂಟಿದ ಹನಿಯೊಂದು ಮೆಲ್ಲಗೆ ಜಾರಿ
ಕಡಲಿನೆಡೆಗೆ ಸಾಗುತ್ತದೆ
ಕಲ್ಲಿಗೂ ಇರಬಹುದು ಹನಿಯಂತೆ ಹಗುರಾಗಿ
ಕಡಲ ಸೇರುವ ತವಕ!

ಮುಂಜಾವಿನಲಿ ದಡವ ಸೇರಿದ ಬೀಜವೊಂದು
ಮುಸ್ಸಂಜೆಯಲಿ ಮೊಳಕೆಯೊಡೆದಿದೆ
ಬೇರೂರೀತೇ ಚಿಗುರಿನ ಬಯಕೆ
ಕಲ್ಲಿನ ಮೈಯ ಕಸುವಿನಲ್ಲಿ;
ಹಬ್ಬಿಕೊಂಡೀತೇ ಹಂಬಲದ ಹಂದರ
ಕಣ್ಣೆವೆಗಳ ಮೇಲೆ!

ನಿಟ್ಟುಸಿರಿಗೂ ಕಿವಿಯಾಗಬೇಕಿದೆ ಕಲ್ಲು;
ಊರಿದ ಕೈಗಳ ಸಂತೈಸಬೇಕಿದೆ
ಕಡಲಿನಾಚೆಗೂ ನಾಟಿದ ದೃಷ್ಟಿಗಳ ಹಿಂಬಾಲಿಸಿ
ಆತುಕುಳಿತ ನೆರಳುಗಳ
ತಲುಪಿಸಬೇಕಿದೆ ಆಚೆದಡಕ್ಕೆ

ಹೊಟ್ಟೆಯೊಳಗಿನ ಮಾತು
ಹರಿದ ಚಪ್ಪಲಿ
ಆವಿಯಾಗದ ಮೌನ
ಯಾರೋ ಹಾಸಿದ ಕರವಸ್ತ್ರ
ಎಲ್ಲ ಉಳಿದುಹೋಗಿವೆ
ಅಪ್ಪಳಿಸಬಹುದೊಂದು ಅಲೆ;
ಹೊತ್ತೊಯ್ಯಬಹುದು ಎಲ್ಲ ಸರಕುಗಳ
ಅಪ್ಪಣೆಯಿಲ್ಲದೆ!

ಅಂಜನಾ ಹೆಗಡೆ


  • ಡಾ. ಆನಂದ್ ಋಗ್ವೇದಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading