‘ಕಾಲ’ದ ಹ್ಯಾಪಿ ಬರ್ತ್ ಡೆತ್ !! – ಡಾ.ಶರದ್ ಕುಮಾರ್ ಎಂ

‘ಕ್ಷಣ ಕ್ಷಣಕ್ಕೂ ಹುಟ್ಟುವ ನನಗೆ ಹುಟ್ಟುಹಬ್ಬ ಬೇಕಿಲ್ಲ. ಅವರವರು ಕಂಡಂತೆ ನನಗೇ ತಿಳಿಯದ ನನ್ನ ಜನ್ಮದಿನ ಆಚರಿಸುತ್ತಾರೆ’. – ತಪ್ಪದೆ ಮುಂದೆ ಓದಿ ಡಾ.ಶರದ್ ಕುಮಾರ್ ಎಂ ಅವರ ಸುಂದರ ಚಿಂತನ ಲೇಖನ…

ಕಾಲ ಹುಟ್ಟಿದ್ದು ಜನವರಿ 1 ಎಂದುಕೊಂಡು ಒಬ್ಬ ಕಾಲದ ಹುಟ್ಟು ಹಬ್ಬದ ಶುಭಾಶಯ ಕೋರಲು ಕಾಲದ ಬಳಿ ಬಂದ. ಕಾಲ ನಿನಗೆ ಹ್ಯಾಪಿ ಬರ್ತಡೇ. ಕಾಲ ನಗುತ್ತ ಹೇಳಿತು ನಾನು ಹುಟ್ಟಿದ ದಿನಾಂಕ ನನಗೆ ತಿಳಿದಿಲ್ಲ. ನಾನು ಅನಾದಿ ಎಂದಿತು. ಆಗ ಆತ ನಿನಗೆ ಈಗ 2023 ವರ್ಷ ಆಗುತ್ತೆ. ನಿನ್ನಲ್ಲಿ ಬದಲಾವಣೆಗಳು ಆಗತ್ತೆ ಎಂದ.

ಕಾಲ ನಕ್ಕು ಹೇಳಿತು ‘ಬದಲಾಗುವುದು ನನ್ನ ಸ್ವಭಾವ. ಕ್ಷಣ ಕ್ಷಣಕ್ಕೂ ನಾನು ಹುಟ್ಟಿ ಬದುಕಿ ಸಶಿಸುತ್ತೇನೆ. ನನಗೆಂತ ಹುಟ್ಟುಹಬ್ಬ?’. ಆಗ ಆತ ಹೇಳಿದ ಮತ್ತೇ ಪ್ರಪಂಚದಾದ್ಯಂತ ನಿನ್ನ ಆಯಸ್ಸು ಬದಲಾಗುವುದನ್ನೇ ಹೊಸ ವರ್ಷ ಎಂದು ಆಚರಿಸುತ್ತಾರಲ್ಲ?.

‘ಕ್ಷಣ ಕ್ಷಣಕ್ಕೂ ಹುಟ್ಟುವ ನನಗೆ ಹುಟ್ಟು ಹಬ್ಬ ಬೇಕಿಲ್ಲ. ಅವರವರು ಕಂಡಂತೆ ನನಗೇ ತಿಳಿಯದ ನನ್ನ ಜನ್ಮದಿನ ಆಚರಿಸುತ್ತಾರೆ’. ಆಗ ಆತ ನಿನ್ನ ಬಗ್ಗೆ ತಿಳಿಯಬೇಕು. ನಿನ್ನನ್ನು ಅಳೆದಿದ್ದು ಯಾರು? ನೀನು ಒಳ್ಳೆಯವನೋ ಅಥವಾ ಕೆಟ್ಪವನೋ?.

ಫೋಟೋ ಕೃಪೆ: google

‘ನನ್ನನ್ನು ಅವರವರ ಅನುಕೂಲಕ್ಕೆ ತಕ್ಕಂತೆ ಅಳೆದು ನಾಮಕರಣ ಮಾಡಿದ್ದಾರೆ. ಆ ಭಗವಂತ ಮನುಷ್ಯರಿಗೆ ಸ್ಮೃತಿ ಕೊಟ್ಟಿರುವುದರಿಂದ ನನ್ನಲ್ಲಿ ಆದ ಬದಲಾವಣೆಗಳನ್ನು ನೆನಪಿನಲ್ಲಿಟ್ಟುಕೊಂಡು,ನನ್ನನ್ನು ಅವಲೋಕಿಸಿದ್ದಾರೆ. ನನ್ನಲ್ಲಿ ಒಳ್ಳೆಯ ಕಾಲ, ಕೆಟ್ಟ ಕಾಲ ಎಂಬ ಭೇದವಿಲ್ಲ. ಜನ ಅವರ ಜೀವನದಲ್ಲಿ ಆಗುವ ಒಳ್ಳೆಯ ಹಾಗೂ ಕೆಟ್ಟ ಅನುಭವಗಳನ್ನು ನನ್ನೊಡನೆ ಜೋಡಿಸಿ, ನನ್ನಲ್ಲಿ ಭೇದ ತರಿಸಿದ್ದಾರೆ. ಆದರೆ ನಾನು ನಿರಂತರ ಬದಲಾಗುವ ಸ್ವಭಾವದ ಕಾಲ. ನಾನು ಯಾರಿಗೂ ಯೋಚಿಸಿ ಒಳ್ಳೆಯದು ಕೆಟ್ಟದ್ದು ಮಾಡಲು ಸಾಧ್ಯವಿಲ್ಲ.ಅದು ಅವರವರ ಕರ್ಮದ ಮೇಲೆ ಅವಲಂಬಿಸಿದೆ’.

‘ಪಾಶ್ಚಾತ್ಯರು ನನ್ನ ಆಯಸ್ಸು ಸರಿಯಾಗಿ ತಿಳಿದಿಲ್ಲ. ಅವರಿಗೆ ಬುದ್ಧಿ ಬರುವ ಮೊದಲಿಗೂ ನಾನಿದ್ದೆ. ಅವರಿಗೆ ಅರಿವು ಬಂದಾಗಿನಿಂದ ಅವರು ನನ್ನ ಎಣಿಸಿದ್ದಾರೆ. ಆದರೆ ನಾನು ಅನಾದಿ. ಅನಂತ. ನಿರಂತರ’.

ಆಗ ಆತ ನಿನ್ನ ಹುಟ್ಟು ಹಬ್ಬ ಯಾವಾಗ ಆಚರಿಸಬೇಕು? ನಾವು ಜನವರಿ 1ರಂದು ಆಚರಿಸುವುದು ತಪ್ಪೇ? ಎಂದು ಕೇಳುತ್ತಾನೆ.

ಆಗ ಕಾಲ ‘ಮೊದಲೇ ಹೇಳಿದಂತೆ ನಾನು ಅನಾದಿ, ಆದರೆ ತಮ್ಮ ದಿನನಿತ್ಯ ಚಟುವಟಿಕೆಗಳಿಗೆ ಅನುಕೂಲವಾಗಲು ನನ್ನನ್ನು ಜನರು ಭೇದಿಸಿದ್ದಾರೆ’. ‘ಅದರಲ್ಲೂ ಭಾರತೀಯರು ನನ್ನ ಉತ್ತಮವಾಗಿ ಅರಿತಿದ್ದಾರೆ. ಅವರು ಯುಗಾದಿ ಎಂದು ಪ್ರಕೃತಿಯಲ್ಲಾಗುವ ಒಳ್ಳೆಯ ಬದಲಾವಣೆಗಳನ್ನು ಅರಿತು ನನ್ನ ಆಚರಿಸುತ್ತಾರೆ’.

ಫೋಟೋ ಕೃಪೆ: google

‘ಪಾಶ್ಚಾತ್ಯರು ಜನವರಿ 1 ರ ಬದಲಾವಣೆಗಳನ್ನು ಆಚರಿಸುತ್ತಾರೆ. ಆದರೆ ಪಾಶ್ಚಾತ್ಯರು ನನ್ನ ಅಳೆದ ಮಾಪನವನ್ನೆ ಪ್ರಪಂಚದಾದ್ಯಂತ ಅನುಸರಿಸುವುದರಿಂದ ಹೆಚ್ಚಿನ ಜನರು ಅಂದೇ ನನ್ನನ್ನು ಆಚರಿಸುತ್ತಾರೆ. ಇಲ್ಲಿ ಇದು ಸರಿ ತಪ್ಪು ಎನ್ನುವ ಪ್ರಶ್ನೆ ಇಲ್ಲ’. ‘ಏಕೆಂದರೆ ಹಲವಾರು ಭಾರತೀಯರು ನನ್ನನ್ನು ಎರಡು ಬಾರಿಯು ಆಚರಿಸುತ್ತಾರೆ’.

‘ಜನರಿಗೆ ಕೇವಲ ಆಚರಿಸಲು ಅವಕಾಶ ಬೇಕು’. ‘ಮೊದಲು ಮದುವೆಯಾದವರು ವರ್ಷಕ್ಕೊಮ್ಮೆ ಆಚರಣೆ ಮಾಡುತ್ತಿದ್ದರು. ಈಗ ವರ್ಷ ಹೋಗಿ ಅರ್ಧ ವರ್ಷ , ಒಂದು ತಿಂಗಳು ಪ್ರತಿಯೊಂದಕ್ಕು ಆಚರಣೆ ಮಾಡುತ್ತಾರೆ. ಅದಕ್ಕೆ ಇದರಲ್ಲಿ ಸರಿ ತಪ್ಪು ಹೇಳುವುದು ಕಷ್ಟ. ಇಲ್ಲಿ ಬದಲಾಗಿದ್ದು ಅಥವಾ ಈ ರೀತಿಯ ಬದಲಾವಣೆ ತಂದಿದ್ದು ನಾನಲ್ಲ. ಆದರೆ ಜನ ಹೇಳುವುದು ಕಾಲವೇ ಬದಲಾಯ್ತು, ಕಾಲವೇ ಸರಿಯಿಲ್ಲ ಅಂತ. ಆದರೆ ಬದಲಾಗುವುದು ನನ್ನ ಸ್ವಭಾವ’.

ಆತ ನೀನು ಹೇಳುವುದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೂ ಹ್ಯಾಪಿ ಬರ್ತ್ ಡೆತ್ ಎಂದ. ಹೀಗೆ ವರ್ಷಾಚರಣೆ ನೆಪದಲ್ಲಿ ಕುಡಿದಿದ್ದ ಆತ 2023ರ ದೊಡ್ಡ ಕಟೌಟ್ ಜೊತೆ ಹ್ಯಾಪಿ ಬರ್ತ್ ಡೆತ್ ಅಂತ ರಾತ್ರಿಯಿಡಿ ಅಲ್ಲೆ ಇದ್ದ. ಕಾಲದ ಅಶರೀರವಾಣಿಯನ್ನು ಮನದಲ್ಲಿ ತಾನೇ ಸೃಷ್ಟಿಸಿ ಕಾಲದಂತೆ ಮಾತನಾಡುತ್ತ ಮತ್ತೆ ಮತ್ತೆ ಕಾಲದ ಬರ್ತ್ ಡೆತ್ ಹೇಳುತ್ತ ಕಾಲವೇ ಸರಿಯಿಲ್ಲ ಎಂದು ಬಡಾಯಿಸುತ್ತ ಕಾಲದ ಹ್ಯಾಪಿ ಬರ್ತಡೇ ಆಚರಿಸಿದ.


  • ಡಾ.ಶರದ್ ಕುಮಾರ್ ಎಂ – ವೈದ್ಯಕೀಯ ಬರಹಗಾರರು, ವೈದ್ಯರು,  ಹಾವೇರಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading