‘’ಕ್ಯಾಸ್ಟಲ್‌ರಾಕ ನಲ್ಲಿ ಅವತ್ತು ಬೆಳದಿಂಗಳ ರಾತ್ರಿ. ಕಾಡಿನಲ್ಲಿ ಅಂಥ ದಟ್ಟ ಬೆಳದಿಂಗಳನ್ನು ನಾನು ಯಾವತ್ತೂ ನೋಡಿರಲಿಲ್ಲ. ಫೆಡ್ರಿಕ್‌ನ ಮನೆಯ ಅಂಗಳದಲ್ಲಿ ಅವತ್ತು ಒಂದು ಚಿಕ್ಕ ಬೆಳದಿಂಗಳ ಪಾರ್ಟಿ. ಲೂಸಿ, ಮಾರಿಯಾ, ರಾಧಾರೂ ಅಲ್ಲಿದ್ದರು. ನಮ್ಮ ಇಂಜನಿಯರ ಶಿರೋಡ್ಕರರು ಉತ್ಸಾಹದ ಬುಗ್ಗೆಯಾಗಿದ್ದರು. ನಾನು ಅಚ್ಚರಿಯಿಂದ ತಲೆಯೆತ್ತಿ ದೂರದಲ್ಲಿ ದೃಷ್ಟಿ ನೆಟ್ಟೆ. ಮಂದಗತ್ತಲಿನಲ್ಲಿ ಕಾಣುತ್ತಿದ್ದ ಆ ಕಪ್ಪು ಬೆಟ್ಟಗಳು ನನ್ನನ್ನೇ ತಿವಿಯುವಂತೆ ಕಂಡವು. ಫೆಡ್ರಿಕ್ ಓಡಾಡುತ್ತಿದ್ದ. ಯಾಕೆಂದು ಅವನಿಗೇ ಸರಿಯಾಗಿ ಗೊತ್ತಿಲ್ಲ.
ಕಾಳೀ ಕಣಿವೆಯ ರಹಸ್ಯ ಗರ್ಭದಲ್ಲಿ ಎಷ್ಟೊಂದು ಬೆರಗುಗಳಿವೆ. ಒಮ್ಮೆ ಹುಲಿ, ಆನೆ, ಜಿಂಕೆ, ಕರಡಿ, ಸರ್ಪಗಳು ಕಂಡರೆ ಇನ್ನೊಮ್ಮೆ ಮದಿರೆ, ಮಾನಿನಿಯರ ವಯ್ಯಾರಗಳು. ಗಂಡಸರ ಮೋಜು ಮಸ್ತಿಗಳು. ಎಲ್ಲಿಗೋ ಹೊರಟ ಕಾಡು ರಸ್ತೆ ಇನ್ನೆಲ್ಲಿಗೋ ಹೋಗಿ ಮುಟ್ಟುತ್ತದೆ. ವಜ್ರದಂಥ ಕಲ್ಲು ಬೆಟ್ಟಗಳು, ಅದರ ಪಕ್ಕದಲ್ಲೇ ಮೃದುವಾದ ಅಂದೇ ಹುಟ್ಟಿ ಅಂದೇ ಸಾಯುವ ಕಾಡು ಕುಸುಮಗಳು. ನಿಸರ್ಗವನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ’’
ಇಲ್ಲಿಯವರೆಗೆ –
ಅಂತೂ ಚಾಂದೇವಾಡಿಗೆ ಹೋಗಿ ಅಲ್ಲಿಯ ನದೀ ತೀರದ ಸ್ಯಾಂಡ್ ಕ್ವಾರೀ [ಉಸುಕಿನ ದಿಬ್ಬ] ನೋಡಿದೆ. ಇದೇ ಉಸುಕನ್ನು ಮುಂದೆ ಸೂಪಾ ಆಣೆಕಟ್ಟಿನ ನಿರ್ಮಾಣ ಕಾಮಗಾರಿಗೆ ಬಳಸುತ್ತಾರೆಂದು ತಿಳಿದು ಭಾವುಕನಾದೆ. ಅಲ್ಲಿದ್ದ ಗೌಳೀವಾಡಾದ ಮನೆಗಳನ್ನು ಕಂಡು ನನಗರಿವಿಲ್ಲದ ಇನ್ನೊಂದು ಜಗತ್ತಿನ ದರ್ಶನವಾಯಿತು. ಅಲ್ಲಿಯೇ ಫಾರೆಸ್ಟು ಗಾರ್ಡುಗಳಾದ ಫೆಡ್ರಿಕ್ ಮತ್ತು ಮಂಗೇಶ ಚಂದಾವರ್ಕರರ ಪರಿಚಯವಾಯಿತು. ಅವರಿಬ್ಬರೂ ಸ್ನೇಹ ಜೀವಿಗಳು ಅನಿಸಿತು. ಕೂಡಲೇ ಅವರು ನಮಗೆ ಗೆಳೆಯರಾಗಿಬಿಟ್ಟರು. ಅಂದೇ ಅವರು ಕ್ಯಾಸ್ಟಲ್ ರಾಕ್ ನಲ್ಲಿ ಅವತ್ತು ನಡೆಯಲಿರುವ ಮನೆ-ಪಾರ್ಟಿಗೆ ನಮ್ಮನ್ನು ಆವ್ಹಾಣಿಸಿದರು. ನನಗೆ ಅಂದು ಪೋರ್ತುಗೀಜರ ಮಹತ್ವದ ಆಡಳಿತ ಸ್ಥಳವಾಗಿದ್ದ ಮತ್ತು ನಿಸರ್ಗ ಸೌಂದರ್ಯದ ಖನಿಯಾಗಿದ್ದ ಕ್ಯಾಸ್ಟಲ್ ರಾಕ್‌ನ್ನು ನೋಡುವ ಕುತೂಹಲವಿತ್ತು. ಪಾರ್ಟಿಯ ಆಸೆಯಿಂದ ನನ್ನೊಡನೆ ಇಂಜನಿಯರ ಶಿರೋಡ್ಕರ ಮತ್ತು ಹನುಮಂತ್ಯಾರೂ ಹೊರಟರು.
– ಮುಂದೆ ಓದಿರಿ.
ಪೋರ್ತುಗೀಜರು ಇದ್ದು ಹೋದ ಊರಿನಲ್ಲಿ
ಅರಣ್ಯ ಇಲಾಖೆಯ ಟ್ರಾಕ್ಟರಿನಲ್ಲಿ ಕ್ಯಾಸ್ಟಲ್‌ರಾಕ್ ತಲುಪಿದಾಗ ದಿನದ ಸೂರ್ಯ ಹಸಿರು ಗಿಡ-ಮರಗಳ ಸಂದಿನಲ್ಲಿ ಅವಿತುಕೊಳ್ಳಲು ಹೊರಟಿದ್ದ. ಸಾಲು ಬೆಟ್ಟಗಳ ಇಳಿಜಾರುಗಳಲ್ಲಿ ಹಬ್ಬಿಕೊಂಡಿದ್ದ ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ ಒಂಟಿ ಕುರುಡು ದೀಪಗಳು ಹೊತ್ತುಕೊಂಡಿದ್ದವು.
ಟ್ರಾಕ್ಟರಿನ ಟ್ರಾಲಿಯಲ್ಲಿ ಕೂತಿದ್ದ ನಾನು, ಇಂಜನಿಯರ ಶಿರೋಡ್ಕರ, ಮತ್ತು ಹನುಮಂತ್ಯಾ ಕಕ್ಕಾಬಿಕ್ಕಿಯಾದವರಂತೆ ಸುತ್ತ ನೋಡುತ್ತಿದ್ದೆವು. ಕಾಡಿನ ದಾರಿಯುದ್ದಕ್ಕೂ ಟ್ರಾಲಿಯಲ್ಲಿ ಕೂತು ಬಂದ ನಮಗೆ ಆಗಲೇ ಅದು ಅಭ್ಯಾಸವಾಗಿ ಹೋಗಿತ್ತು. ಬಯಲು ಸೀಮೆಯಲ್ಲಿ ಕುಸುಬಿ ಸುಗ್ಗಿ ನೋಡಿದವರಿಗೆ ನೆನಪಾಗಬಹುದು. ಬದನೇ ಬಡಿಗೆಯಿಂದ ಕುಸುಬಿ ಹೂವು ಬಡಿದ ನಂತರ ಸಿಗುವ ಮೈಯ ನೋವು ಏನೆಂಬುದು. ಕ್ಯಾಸ್ಟಲ್ ರಾಕ ಆ ಭಾಗದಲ್ಲಿ ಪ್ರಸಿದ್ಧ ಊರು. ಹಾಗೆದು ಅದೇನೂ ದೊಡ್ಡ ಜನ ಸಂಖ್ಯೆಯ ಊರಲ್ಲ. ಬೀದಿಗಳಲ್ಲಿ ಲೈಟುಗಳಿರಲಿಲ್ಲ. ಅವು ಅಪರೂಪಕ್ಕೆ ಹತ್ತುತ್ತವೆ ಎಂದು ಫೆಡ್ರಿಕ್ ಹೇಳುತ್ತ ಟ್ರಾಕ್ಟರ್ ಓಡಿಸುತ್ತಿದ್ದ. ಅವನಿಗೆ ಪರಿಚಿತ ರಸ್ತೆ. ತಲೆಯೆತ್ತಿ ನೋಡಿದರೆ ಕಪ್ಪು ಬೆಟ್ಟಗಳಡಿ ಇಡೀ ಪುಟ್ಟ ಹಳ್ಳಿ ಮಸುಕು ಮಸುಕಾಗಿ ಚಾಚಿಕೊಂಡಿದ್ದು ಕಾಣುತ್ತಿತ್ತು.
ಬೆಟ್ಟಗಳ ಇಳಿಜಾರಿನಲ್ಲಿ ಒಂಟಿ ಮನೆಗಳು
ಕಿರಿದಾದ ಕೆಂಪು ಮಣ್ಣಿನ ಧೂಳು ರಸ್ತೆಯಲ್ಲಿ ಹಾದು ಮುಂದೆ ಬಲಬದಿಯಿದ್ದ ದೊಡ್ಡ ಹಲಸಿನ ಮರದ ಬುಡದಲ್ಲಿ ಟ್ರಾಕ್ಟರ್ ನಿಂತಿತು. ಅದರ ಪಕ್ಕದಲ್ಲಿಯೇ ಬಿದಿರಿನ ಬೇಲಿ ಹಾಕಿದ ಕಪ್ಪು ಹಂಚಿನ ಮನೆಯೊಂದು ಕಂಡಿತು. ಆವರಣದಲ್ಲಿ ಒಂದಷ್ಟು ಸಾಕಲು ಬಿಟ್ಟ ಕರೀ ಹಂದಿಗಳು [ಡುಕ್ಕರ್] ಅವುಗಳ ಮರಿಗಳು ಎಗ್ಗಿಲ್ಲದೆ ತಿರುಗಾಡುತ್ತಿದ್ದವು. ಟ್ರಾಕ್ಟರು ಸದ್ದು ಕೇಳಿದ್ದೇ ತಡ. ಕೂಡಲೇ ಮನೆಯ ಒಳಗಿಂದ ಒಂದಷ್ಟು ಗಂಡಸರು, ಹೆಂಗಸರು ಓಡಿ ಬಂದರು. ಅವರ ದಿರಿಸುಗಳು ನನಗೆ ಯಾಕೋ ನನಗೆ ಮುಜುಗುರ ಮಾಡಿದವು. ಗಂಡಸರು ಗೋವಾ ಕಡೆಯವರು ಹಾಕುವ ಕ್ರಾಸ್ ಲುಂಗಿ, ಇಲ್ಲ ಬರ್ಮುಡಾ, ಮೇಲೆ ಕೆಂಪು, ಕಪ್ಪು, ಹಸಿರು ಫ್ಯಾನ್ಸಿ ಬನಿಯನ್‌ಗಳು. ತಲೆಗೆ ಬಿಗಿದ ಬಣ್ಣದ ವಸ್ತ್ರಗಳು. ಹೆಂಗಸರು ಯಾರೂ ಸೀರೆ ಉಟ್ಟಿರಲಿಲ್ಲ. ಎಲ್ಲರೂ ಮೊಣಕಾಲ ಕೆಳಗೆ ಇಲ್ಲ ಮೊಣಕಾಲ ಮೇಲೆ ಇರುವ ಫ್ರಾಕ್‌ಗಳನ್ನು ಧರಿಸಿದ್ದರು. ಯಾರ ಹಣೆಯ ಮೇಲೂ ಕುಂಕುಮವಿಲ್ಲ. ಎಲ್ಲರ ಮೈ ಬಣ್ಣವೂ ಕೆಂಪು ಕೆಂಪಗೆ. ಲಕ್ಷಣವಾಗಿ ಸೀರೆ ಉಟ್ಟರೆ ಎಲ್ಲರೂ ಗೋಕುಲದ ರಾಧೆಯರೇ.
ಕ್ರಿಸ್ತರ ಮನೆಯ ಅಂಗಳದಲ್ಲಿ
ಫೋಟೋ ಕೃಪೆ : TripAdvisor
ಆದರೆ ಅದು ಕ್ರಿಸ್ತರ ಕುಟುಂಬ. ಗೋವಾದಲ್ಲಿ ರೂಢಿಯಲ್ಲಿರುವ ವಸ್ತ್ರ ಪರಂಪರೆ ಅದು. ಕ್ಯಾಸ್ಟಲ್‌ರಾಕ್ ಕಾಳೀ ಕಣಿವೆಯ ಸೆರಗಿನಲ್ಲೇ ಇರುವ ಊರು. ಇಲ್ಲಿ ಇನ್ನೂರು ವರ್ಷಕ್ಕಿಂತ ಹೆಚ್ಚು ಕಾಲ ಪೋರ್ತುಗೀಜರು ಇದ್ದು ಹೋಗಿದ್ದರಲ್ಲ. ಅವರು ಸ್ಥಳೀಯರ ಮೇಲೆ ಆಳಿಕೆ-ದಬ್ಬಾಳಿಕೆ ಎಲ್ಲವನ್ನೂ ಮಾಡಿ ಹೋಗಿದ್ದರು. ಮೂಲದಲ್ಲಿ ಗೋವಾ ಮತ್ತು ಆಸುಪಾಸು ಇರುವವರು ಯಾರೂ ಕ್ರಿಸ್ತರಲ್ಲ. ಹಿಂದು ಬ್ರಾಹ್ಮಣರು ಮತ್ತು ಬುಡಕಟ್ಟಿನ ಜನ. ಇಲ್ಲಿ ಆಳಿಕೆ ನಡೆಸಿದ ಪೋರ್ತುಗೀಜರು ಒತ್ತಾಯದಿಂದಲೋ ಆಮಿಷದಿಂದಲೋ ಅವರನ್ನು ಮತಾಂತರ ಮಾಡಿದರು. ಮತ್ತು ಗುಲಾಮರಂತೆ ನಡೆಸಿಕೊಂಡರು. ಅವರಿಗೆ ಇವರೇ ಆಳು ಕಾಳುಗಳು. ಪೋರ್ತುಗೀಜರು ಮರಳಿ ತಮ್ಮ ದೇಶಕ್ಕೆ ಹೋಗುವ ಮೊದಲು ತಮ್ಮ ನಡೆ-ನುಡಿಗಳನ್ನೇ ಇವರಿಗೆ ಕಲಿಸಿ ಇಲ್ಲಿಯ ಸಂಸ್ಕೃತಿ ನಾಶವಾಗುವಂತೆ ಮಾಡಿ ಹೋದರು. ಆ ಪರಂಪರೆಯ ಪಳಯುಳಿಕೆ ಈ ಊರಿನಲ್ಲಿ ಮತ್ತು ಗೋವಾದಲ್ಲಿ ಇನ್ನೂ ಹೆಚ್ಚು ಅನ್ನುವಷ್ಟಿದೆ. ಈಗ ಈ ಊರು ಕರ್ನಾಟಕದಲ್ಲಿದ್ದರೂ ಇಲ್ಲಿಯ ಬಹುತೇಕರ ಆಚಾರಗಳು ಪೋರ್ತುಗೀಜರು ಕಟ್ಟಿದ ಗೋವಾ ಪರಂಪರೆಯಂತೆಯೇ ಇವೆ.
ಬೆಳದಿಂಗಳು ಪಾರ್ಟಿಗೆ ಬಂದವರು
‘ಏ… ಹಮಚ್ಯಾ… ದೋಸ್ತುನ್ ಅಸಾ. ಅಜೂನ ಹಮಚ್ಯಾ ಗೆಸ್ಟ…ರೇ!’
ಎಂದು ಫೆಡ್ರಿಕ್ ಹೇಳುತ್ತ ಎಲ್ಲರಿಗೂ ನಮ್ಮ ಪರಿಚಯ ಮಾಡಿಸಿದ. ಅಲ್ಲಿ ಹತ್ತಿರಕ್ಕೆ ಬಂದು ನಿಂತವಳು ಫೆಡ್ರಿಕ್‌ನ ಹೆಂಡತಿ ಲೂಸಿ. ಹೆಚ್ಚೆಂದರೆ ಆಕೆಯದು ಇಪ್ಪತ್ತೆರಡು ವರ್ಷದ ಪ್ರಾಯ. ಆಗಲೇ ಸ್ವಲ್ಪ ದಪ್ಪ ಮೈಯಿ. ಮೀನು… ವೈನು… ಮೈ ಹಿಡಿದಿರಬೇಕು. ಬಿಳೀ ಮತ್ತು ಗುಲಾಬಿ ಹೂವು ಗಳಿರುವ ಗಿಡ್ಡ ಫ್ರಾಕ್ ಹಾಕಿದ್ದಳು. ಮೊಣಕಾಲಿನಿಂದ ಕೆಳಗೆ ಬೆತ್ತಲೆ ಕಾಲುಗಳು. ಅವಳ ಬಾಪಾ ವಾಸ್ಕೋದಲ್ಲಿ ಮೀನು ಹಿಡಿಯುವ ಎರಡು ದೋಣಿ ಇಟ್ಟುಕೊಂಡಿದ್ದಾನಂತೆ. ಮೀನು ಹಿಡಿಯುವ ಆಳುಗಳೂ ಇವೆ. ಸರಕಾರಿ ಕೆಲಸದವ ಎಂದು ಫೆಡ್ರಿಕ್‌ನನ್ನು ಅಳಿಯನನ್ನಾಗಿ ಮಾಡಿಕೊಂಡ. ಅವನಿಗೆ ಸೀಝನ್‌ನಲ್ಲಿ ಮೀನು ವ್ಯಾಪಾರ ಜೋರಂತೆ. ಪಣಜಿ, ರತ್ನಾಗಿರಿ, ಬೆಳಗಾಂವ, ಲೋಂಡ್ಯಾ ಕಡೆಗೆ ಮೀನು ಕಳಿಸುತ್ತಾನಂತೆ. ಲೂಸಿಯ ಕೊರಳಲ್ಲಿ ಕ್ರಾಸ್ ಮಾಡಿದ ಚಿನ್ನದ ಸರವಿದೆ. ಅದರ ಬಗ್ಗೆ ಲೂಸಿಗೆ ಭಾರೀ ಹೆಮ್ಮೆ. ಅದನ್ನು ತನ್ನ ಬಾಪಾ ವಾಸ್ಕೋದ ಪೇಟೆಯಲ್ಲಿ ಕೊಡಿಸಿದ್ದು ಎಂದು ಅವರಿವರ ಬಳಿ ಜಂಭದಿಂದ ಹೇಳಿಕೊಳ್ಳುತ್ತಾಳೆ ಲೂಸಿ.
ಅಲ್ಲಿ ನಿಂತ ಇನ್ನೊಬ್ಬಳು ಫೆಡ್ರಿಕ್ ನ ಅಕ್ಕ. ಮಾರಿಯಾ. ಮೂವತ್ತೆರಡು ವಯಸ್ಸಿನವಳು. ಆಕೆಯೂ ತೆಳು ಹಳದಿ ಬಣ್ಣದ ಮೊಣಕಾಲು ಕೆಳಗಷ್ಟೇ ಇರುವ ಫ್ರಾಕ್ ತೊಟ್ಟಿದ್ದಳು. ಕೊರಳಲ್ಲಿ ಕ್ರಾಸ್ ಇರುವ ಒಂದು ಸರ. ಆಕೆಗೆ ಒಂದು ಮಗೂ ಕೂಡ ಇದೆ. ಹಾಗೆ ನೋಡಿದರೆ ಇಬ್ಬರೂ ಸುಂದರಿಯರೇ.
ಪಕ್ಕದಲ್ಲೇ ಮರಿಯಾಳ ಗಂಡ ಜಾನ್. ಇಲ್ಲಿಂದ ಹನ್ನೆರಡು ಮೈಲಿ ದೂರ ಇರುವ ಪೋಂಡಾದಲ್ಲಿ ಮೆಸರ್ಸ್ ಚೌಗುಲೆ ಅಂಡ್ ಮೈನಿಂಗ್ ಕಂಪನಿಯಲ್ಲಿ ಏನೋ ಸಣ್ಣ ನೌಕರಿ ಮಾಡುತ್ತಿದ್ದಾನಂತೆ. ಮನೆಯಲ್ಲಿ ಇಂಥ ಪಾರ್ಟಿ-ಪೂಜೆ ಇದ್ದ ಸಂದರ್ಭದಲ್ಲಿ ಹೆಂಡತಿ, ಮಗುವಿನೊಂದಿಗೆ ಇಲ್ಲಿಗೆ ಬಂದು ಹೋಗುತ್ತಾನಂತೆ.
ಮೀನು ಅಂಗಡಿಯ ರಾಧಾ
ಫೋಟೋ ಕೃಪೆ : Firstpost
ನಮ್ಮ ಜತೆಗೇ ಬಂದಿದ್ದ ಇನ್ನೊಬ್ಬ ಫಾರೆಸ್ಟು ಗಾರ್ಡ ಮಂಗೇಶ ಚಂದಾವರ್ಕರ ಇರುವುದೂ ಇದೇ ಊರಲ್ಲಿ. ಆತ ಇದ್ದದ್ದು ಗುಡ್ಡದ ಇಳಿಜಾರಿನಲ್ಲಿರುವ ಬಾಡಿಗೆಯ ಪುಟ್ಟ ಮನೆಯಲ್ಲಿ. ಅವನ ಹೆಂಡತಿ ರಾಧಾ. ಆಕೆಗಿನ್ನೂ ಇಪ್ಪತೈದು ವರ್ಷದ ಹರೆಯ. ಮರಾಠಾ ಶೈಲಿಯಲ್ಲಿ ನೂಲಿನ ಕಚ್ಚೆ ಸೀರೆ ಉಡುತ್ತಾಳೆ. ಇಬ್ಬರಿಗೂ ಪುಟ್ಟ ಹೆಣ್ಣು ಮಗು ಇದೆ. ರಾಧಾಳು ತುಂಬ ಗಲಿಬಿಲಿ. ಓದಲು ಬರುವುದಿಲ್ಲ. ಬಾಯಿ ಮಾತಿನ ಲೆಕ್ಕದಲ್ಲಿ ನಿಪುಣೆ. ಕ್ಯಾಸ್ಟಲ್ ರಾಕ ರೇಲ್ವೆ ಸ್ಟೇಶನ್ ಬಳಿ ಒಂದು ಝೋಪಡಿಯಂಥ ಸಣ್ಣ ಮೀನು ಅಂಗಡಿ ಇಟ್ಟುಕೊಂಡಿದ್ದಾಳೆ. ಅವಳ ಅಂಗಡಿಯಲ್ಲಿ ಹಸಿ ಮೀನು ಮತ್ತು ಒಣ ಮೀನು ಎರಡೂ ಸಿಗುತ್ತವೆ. ರಾಧಾಳ ಅಂಗಡಿಯಲ್ಲಿ ಮೀನು ಬೆಲೆಯೂ ಕಮ್ಮಿಯಂತೆ. ಮುಖ ಬೇರೆ ಲಕ್ಷಣವಾಗಿದೆ. ಹೀಗಾಗಿ ವ್ಯಾಪಾರವೂ ಜಾಸ್ತಿ. ರಾಧಾ ಮೀನು ಶಾಪ್ ಎಂದು ಕೈಯಿಂದ ಬರೆದ ಬೋರ್ಡೂ ಅಲ್ಲಿದೆ. ಅವಳ ಸಹಾಯಕ್ಕೆ ಆಕೆಯ ತಮ್ಮ ವಿಠ್ಠೂ ರತ್ನಾಗಿರಿಯಿಂದ ಬಂದು ಇಲ್ಲೇ ತಳ ಊರಿದ್ದಾನಂತೆ. ಮಂಗೇಶ್ ಮತ್ತು ಫೆಡ್ರಿಕ್ ಇಬ್ಬರೂ ದಿನವೂ ಒಟ್ಟಿಗೇ ಕಾಡಿನ ಡ್ಯೂಟಿಗೆ ಹೋಗುತ್ತಾರೆ. ಮನೆಯ ಸಂಸ್ಕೃತಿ
ಮರಾಠ-ಕೊಂಕಣಿ. ನೌಕರಿ ಮಾತ್ರ ಕರ್ನಾಟಕ ಸರಕಾರದ್ದು. ಬೆಳಿಗ್ಗೆ ಊಟದ ಡಬ್ಬಿಯೊಂದಿಗೆ ಅವರಿಬ್ಬರೂ ಹೊರಟರೆ ವಾಪಸು ಬರುವುದು ಸಂಜೆಯ ಈ ಹೊತ್ತಿಗೇ.
ಸೂಪಾದಿಂದ ದೂರವೇನಿಲ್ಲ
ಕಾಡಿನಲ್ಲಿ ಸರ್ವೇ ಕೆಲಸಕ್ಕೆ ಅಂತ ಹೋದವರಿಗೆ ಒಂದೇ ದಿನದಲ್ಲಿ ಎಷ್ಟೊಂದು ಕತೆ ತಿಳಿಯಿತು ನಮಗೆ. ಸೂಪಾದಿಂದ ಇಲ್ಲಿಗೆ ಬರುವ ಜನವೂ ಕಡಿಮೆ. ಸರ್ವೇ ಕೆಲಸಕ್ಕೆ ಕಾಡು ಸುತ್ತೀ ಸುತ್ತೀ ಬೇಜಾರಾಗಿದ್ದ ನಮಗೆ ಈ ಊರಿನ ಸಂಸಾರಗಳ ಬಗ್ಗೆ ತಿಳಿದು ಜೀವನೋತ್ಸಾಹದ ಒಂದು ಸೆಳಕು ನಮ್ಮ ತಲೆಗೆ ಬಡಿದು ಎಚ್ಚರಿಸಿತು. ನಮ್ಮ ಇಂಜನಿಯರ ಶಿರೋಡ್ಕರರಿಗೆ ಮರಾಠಿ ಮತ್ತು ಕೊಂಕಣಿ ಎರಡೂ ಬರುತ್ತಿದ್ದುದರಿಂದ ಅವರು ಮನೆಯವರೊಂದಿಗೆ ಹೆಚ್ಚು ಬೆರೆತರು. ನನಗನಿಸಿತು. ಈ ಕಣಿವೆಯ ಕಾಡು, ಇಲ್ಲಿಯ ಊರು, ಕಾಡು ರಸ್ತೆಗಳು, ವಿಭಿನ್ನ ಜನ ಜೀವನದ ಬಗ್ಗೆ ಏನಾದರೂ ಬರೆಯಬೇಕು ಎಂದು.
ಕಾಡು ಬೆಳದಿಂಗಳ ರಾತ್ರಿ
ಫೋಟೋ ಕೃಪೆ : Honeycpmbers
ಹಲಸಿನ ಮರದ ಕೆಳಗೆ ಇಂಗ್ಲೀಷು ಡ್ಯಾನ್ಸು ರಾತ್ರಿ ಏಳೂವರೆ. ನಮಗೆ ಆ ಮನೆಯ ಕೋಣೆಯಲ್ಲಿ ಕೂತು ಬೇಜಾರಾಯಿತು. ಅಲ್ಲಿದ್ದದ್ದು ಹಳೆಯ ಕಾಲದ ಒಂದು ರೇಡಿಯೋ ಮಾತ್ರ. ಅದರಿಂದ ಪಣಜಿ ಕೇಂದ್ರದಿಂದ ಕೊಂಕಣಿ ಗೋಮಾಂತಕ ಹಾಡುಗಳು ಕೇಳಿ ಬರುತ್ತಿದ್ದವು. ತುಂಬ ದಿನಗಳಿಂದ ರೇಡಿಯೋ ಕೇಳಿರಲಿಲ್ಲ ನಾವು. ಅರ್ಥವಾಗದಿದ್ದರೂ ಕೇಳುತ್ತ ಕೂತಿದ್ದೆವು. ಹೊರಗೆ ಮಂಗೇಶ ಮತ್ತು ಅವನ ಹೆಂಡತಿ ರಾಧಾಬಾಯಿ ಬಂದರೆಂದು ಯಾರೋ ಹೇಳಿದರು. ಗಡಿಬಿಡಿ ಹೆಚ್ಚಾಯಿತು.
ಫೆಡ್ರಿಕ್ ನಮ್ಮ ಆತಿಥ್ಯಕ್ಕೆ ಏನೇನೋ ಏರ್ಪಾಡು ಮಾಡಿದ್ದ. ಅವತ್ತು ನಾನ್‌ವೆಜ್ಜು ಇದೆ ಎಂದು ಅಡುಗೆ ಮನೆಯಿಂದ ಬರುತ್ತಿದ್ದ ವಾಸನೆಯಿಂದಲೇ ಗೊತ್ತಾಯಿತು. ನನಗೆ ಬೇರೆ ವ್ಯವಸ್ಥೆ ಇದೆ ಎಂದು ಫೆಡ್ರಿಕ್ ಹೇಳಿದ್ದ. ಶಿರೋಡ್ಕರರು ಮತ್ತು ಹನುಮಂತ್ಯಾ ಖುಶಿಯಾಗಿದ್ದರು. ಫೆಡ್ರಿಕ್ ನ ಹೆಂಡತಿ ಲೂಸಿ ಎರೆಡೆರಡು ಬಾರಿ ನಮ್ಮನ್ನು ವಿಚಾರಿಸಿಕೊಂಡು ಹೋಗಿದ್ದಳು. ನನಗೆ ಅಂಜೂರು ಜ್ಯೂಸೂ, ಅವರಿಗೆ ಮಡಗಾಂವದಿಂದ ತರಿಸಿದ್ದ ಕಾಜೂ ಬ್ರಾಂದಿಯ ತುಂಬಿದ ಗ್ಲಾಸುಗಳನ್ನು ಲೂಸಿಯೇ ಅವರ ಕೈಗೆ ಕೊಟ್ಟು ಹೋಗಿದ್ದಳು. ಅವರು ಬಂದದ್ದೇ ಇಂಥದಕ್ಕೆ. ನನಗೆ ಬೆಳಿಗ್ಗೆ ಬೇಗ ಎದ್ದು ಕ್ಯಾಸ್ಟಲ್ ರಾಕ ಊರನ್ನು ಸುತ್ತಿ ಬರಬೇಕು. ಮತ್ತು ಮಧ್ಯಾನದೊಳಗೆ ವಾಪಸು ಟೆಂಟಿನ ಕಾಡಿನಲ್ಲಿಕುವ ಕಡೆಗೆ ಹೋಗಬೇಕು. ನಾಳೆ ರವಿವಾರ. ಸರ್ವೇ ಕೆಲಸ ಇರುವುದಿಲ್ಲ. ಆದರೂ ಅಲ್ಲಿದ್ದವರು ನಮ್ಮನ್ನು ಬಯ್ದುಕೊಳ್ಳಬಾರದಲ್ಲ. ಆ ಆತುರ ನನಗಿತ್ತು.
ಬರ್ರೀ… ಸಾಹೇಬ್… ಫೆಡ್ರಿಕ್ ಕೊಣೆಯೊಳಕ್ಕೆ ಬಂದು ನಮ್ಮನ್ನು ಹೊರಗೆ ಕರೆದ. ಅಂಗಳದಲ್ಲಿ ವಿಶೇಷ ಅಲಂಕಾರ ಮಾಡಿದ್ದರು. ಅಲ್ಲೊಂದು ಟೇಬಲ್ ಇಡಲಾಗಿತ್ತು. ಅದರ ಮೇಲೆ ನಾನಾ ವಿಧದ ಮದ್ಯದ ಬಾಟಲ್ ಗಳನ್ನು ಸಾಲಾಗಿ ಜೋಡಿಸಿದ್ದರು. ಗೋವಾದಲ್ಲೇ ತಯಾರಿಸಿದ ವಿಸ್ಕಿ, ಬ್ರಾಂದಿ, ಕಾಜೂ, ಫೆನ್ನೀ, ಬಿಯರ್, ಇನ್ನೂ ಏನೇನು ಅಂತ ನನಗೂ ಸರಿಯಾಗಿ ತಿಳಿಯಲಿಲ್ಲ.
ಹೊರಗೆ ಟೇಬಲ್ ಸುತ್ತ ಗಂಡಸರು, ಹೆಂಗಸರ ಗುಂಪೇ ಇತ್ತು. ಎಲ್ಲರೂ ಅಲಂಕಾರಗೊಡಿದ್ದರು. ಹೆಂಗಸರೆಲ್ಲ ಹೊಸ ನಮೂನೆಯ ಫ್ರಾಕ್‌ಗಳನ್ನು ತೊಟ್ಟಿದ್ದರು. ಹಿಂದೀ ಸಿನಿಮಾದ ನಟಿಯರಂತೆ ಅವರ ಡ್ರೆಸ್ಸುಗಳು. ಲೂಸಿ ತುಟಿಗೆ ಮತ್ತು ಹುಬ್ಬಿಗೆ ಬಣ್ಣ ಹಚ್ಚಿಕೊಂಡಿದ್ದಳು. ಮಾರಿಯಾ ಸಹ ಅಲಂಕಾರದಲ್ಲಿ ಹಿಂದೆ ಬಿದ್ದಿರಲಿಲ್ಲ.
ದಿಸಲಾಗ ಬಾಯಿ ದಿಸಲಾ…!
ಗಂಡಸರೂ ತಮ್ಮ ಡ್ರೆಸ್ಸು ಬದಲಿಸಿಕೊಂಡಿದ್ದರು. ನಮಗೆ ಅದೆಲ್ಲ ವಿಚಿತ್ರವೆನಿಸಿತು. ಅಷ್ಟರಲ್ಲಿ ಮಂಗೇಶ ಚಂದಾವರ್ಕರ ತನ್ನ ಹೆಂಡತಿಯನ್ನು ಕರೆ ತಂದು ಪರಿಚಯಿಸಿದ. ರಾಧಾ ಹಳದೀ ನೂಲಿನ ಸೀರೆಯನ್ನು ಕಚ್ಚೆ ಹಾಕಿ ಉಟ್ಟಿದ್ದಳು, ಮೂಗಿನಲ್ಲಿ ದೊಡ್ಡ ನತ್ತು. ಒಮ್ಮೆ ನೋಡಿದರೆ ಮತ್ತೆ ನೋಡಬೇಕು ಅನ್ನಿಸುವ ನಿಲುವು. ಹಣೆಯ ಮೇಲೆ ಅಡ್ಡ ಕುಂಕುಮ. ಕೈ ತುಂಬ ಬಳೆಗಳು. ತಮಾಶಾ ಮತ್ತು ಪುಗುಡಿ ನೃತ್ಯಕ್ಕೆ ಹೇಳಿ ಮಾಡಿಸಿದ ವೇಷ. ಅಪ್ಪಟ ಮರಾಠಿ ಮಹಿಳೆಯ ರೂಪ.
ಎಲ್ಲರೂ ಟೇಬಲ್ಲಿಗೆ ಮುಗಿಬಿದ್ದರು. ಗಂಡಸರು ಹೆಂಗಸರು ಎಂಬ ತಾರತಮ್ಯವಿರಲಿಲ್ಲ. ಹಳೆಯ ಟೇಪ ರಿಕಾರ್ಡೊಂದು ಗೋವೇ ನಾವಿಕರ ಹಾಡೊಂದನ್ನು ಹೇಳತೊಡಗಿತು. ನನಗೆ ಎಲ್ಲವೂ ಅಚ್ಚರಿ. ಎಲ್ಲರೂ ಕುಡಿದರು. ನನಗೆ ಇನ್ನೂ ಹೆಚ್ಚು ಅಚ್ಚರಿ ಅನಿಸಿದ್ದು ಅಂದರೆ ರಾಧಾಬಾಯಿಯ ಕೈಯಲ್ಲೂ ಗ್ಲಾಸು ಇದ್ದದ್ದು. ಫೆಡ್ರಿಕ್ ತುಂಬಿದ ಎರಡು ಗ್ಲಾಸುಗಳನ್ನು ಹಿಡಿದು ಶಿರೋಡ್ಕರರ ಮುಂದೆ ಹಿಡಿದ. ‘ಸಾಹೇಬ್… ನಾವು ಕಾಡಿನಲ್ಲಿ ಜೀವನಾ ಮಾಡೋರು. ಲೈಫ್‌ನ ಎಂಜಾಯ್ ಮಾಡೋದನ್ನ ಪೋರ್ತುಗೀಜರು ನಮಗೆ ಹೇಳಿಕೊಟ್ರು. ನಮ್ಗೆ ಇಂಗ್ಲೀಷು ಡ್ಯಾನ್ಸು ಅಂದ್ರೆ ಪ್ರಾಣ. ನೀವೂ ಬರ್ರಿ. ಎಂಜಾಯ್ ಮಾಡಿ’ ಎನ್ನುತ್ತ ‘ಫೆನ್ನಿ’ಯ ಇನ್ನೊಂದು ಬಾಟಲಿಯನ್ನು ಅವರ ಬಳಿ ಇಟ್ಟು ಹೋದ. ನಾನು ಪೆಕರನಂತೆ ಶಿರೋಡ್ಕರರ ಮುಖ ನೋಡಿದೆ. ಲೂಸಿ ನನಗೆ ಮತ್ತೊಂದು ಸುತ್ತು ಜ್ಯೂಸು ಸರಬರಾಜು ಮಾಡಿ ನಕ್ಕು ಹೋದಳು. ಮತ್ತೆ ನೋಡುವುದರೊಳಗೆ ಅವಳ ಕೈಯಲ್ಲಿ ‘ಬ್ರಾಂದಿ’ ಬಾಟಲಿತ್ತು. ರಾಧಾ ಅವಳಿಗೆ ಸಾಥ್ ಕೊಟ್ಟಳು. ನಾನು ಅಚ್ಚರಿಯಿಂದ ತಲೆಯೆತ್ತಿ ಮಂದಗತ್ತಲಲ್ಲಿ ಕಾಣುತ್ತಿದ್ದ ಎತ್ತರವಾದ ಕಪ್ಪು ಬೆಟ್ಟಗಳನ್ನು ನೋಡಿದೆ.
ಕಾಳೀ ಕಣಿವೆಯ ರಹಸ್ಯ ಗರ್ಭದಲ್ಲಿ ಎಷ್ಟೊಂದು ಬೆರಗುಗಳಿವೆ. ಒಮ್ಮೆ ಹುಲಿ, ಆನೆ, ಕರಡಿ, ಜಿಂಕೆ, ಸರ್ಪಗಳ ದರ್ಶನ. ಮತ್ತೊಮ್ಮೆ ಮದಿರೆ, ಮಾನಿನಯರ ವಯ್ಯಾರಗಳು. ಗಂಡಸರ ಮೋಜು ಮಸ್ತಿಗಳು. ಎಲ್ಲಿಗೋ ಹೊರಟ ಕಾಡು ರಸ್ತೆ ಕೊನೆಗೆ ಎಲ್ಲಿಗೋ ಹೋಗಿ ಮುಟ್ಟುತ್ತದೆ. ವಜ್ರದಂಥ ಕಲ್ಲು ಬೆಟ್ಟಗಳು. ಅದರ ಜತೆಗೇ ಮೃದುವಾದ ಅಂದೇ ಹುಟ್ಟಿ ಅಂದೇ ಸಾಯುವ ಕಾಡು ಕುಸುಮಗಳು. ನಿಸರ್ಗವನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ.
ಜೀನಾ ಯಹಾಂ…! ಮರಣಾ ಯಹಾಂ…!
ಫೋಟೋ ಕೃಪೆ : Boldsky.com
ಇದ್ದಕ್ಕಿದ್ದಂತೆ ತೇಲಿ ಬರುತ್ತಿದ್ದ ಸಂಗೀತಕ್ಕೆ ಎಲ್ಲರೂ ಹೆಜ್ಜೆ ಹಾಕತೊಡಗಿದರು. ಮಾರೀಯಾ ತನ್ನ ಗಂಡ ಜಾನ್‌ನ ಕೈ ಹಿಡಿದಿದ್ದಳು. ಮೀನು ಅಂಗಡಿಯ ರಾಧಾ ಕೈಯಲ್ಲಿ ಗ್ಲಾಸು ಹಿಡಿದು ತನ್ನಷ್ಟಕ್ಕೆ ತಾನು ಸೊಂಟ ತಿರುಗಿಸುತ್ತಿದ್ದಳು. ಆಕೆಯ ಗಂಡ ಮಂಗೇಶ ಚಂದಾವರ್ಕರ ತಲೆಯ ಮೇಲೆ ‘ಫೆನ್ನೀ’ ಬಾಟಲಿಯನ್ನಿಟ್ಟುಕೊಂಡು ‘ಜೀನಾ ಯಂಹಾ….! ಮರಣಾ ಯಹಾಂ…! ತೇರೆ ಶಿವಾ… ಜೀನಾ ನಂಹಾ…!’ ಎಂದು ರಾಜಕಪೂರನ ಸಿನಿಮಾದ ಹಾಡು ಹೇಳುತ್ತ ಕುಣಿಯುತ್ತಿದ್ದ. ಎಲ್ಲರಿಗೂ ಅರ್ಧ ಅಮಲೇರಿತ್ತು. ಫೆಡ್ರಿಕ್ ಶಿರೋಡ್ಕರರ ಬಳಿ ಬಂದು ಕೈ ಹಿಡಿದು ಎಬ್ಬಸಿದ. ಅವರೂ ಕಾರವಾರದಲ್ಲಿದ್ದು ಬಂದವರು. ‘ಫೆನ್ನಿ’ ಅವರಿಗೂ ಅಮಲೇರಿಸಿತ್ತು. ಫೆಡ್ರಿಕ್‌ನ ಜೊತೆ ಸೇರಿ ಅವರೂ ಕುಣಿಯತೊಡಗಿದರು.
ಹೆಂಗಸೊಬ್ಬಳು ಎಲ್ಲರಿಗೂ ಹುರಿದ ಬಾಂಗಡಿ ಮೀನು, ಹಂದೀ ಮಾಂಸದ ಮಸಾಲಾ ಸುಕ್ಕಾ, ಬೇಯಿಸಿದ ಮೊಟ್ಟೆಗಳನ್ನು ಸರಬರಾಜು ಮಾಡುತ್ತಿದ್ದಳು. ಲೂಸಿ ನನ್ನ ಹತ್ತಿರ ಬಂದು – ‘ಇದು ಮಾಡ್ ಅಂತ ಗೋವಾ ಡ್ರಿಂಕ್ಸು. ತೆಂಗಿನ ಮರದಿಂದ ಮನೆಯಲ್ಲೇ ಮಾಡಿದ್ದು. ನಮ್ಮ ಕಡೆ ಇದನ್ನ ಮಕ್ಕಳು ಕುಡೀತಾರೆ. ನನ್ನ ಸಲುವಾಗಿಯಾದ್ರೂ ನೀವು ಕುಡೀಬೇಕು’ ಎಂದು ಒತ್ತಾಯದಿಂದ ಕೈಗಿಟ್ಟು ಹೋದಳು. ನಾನು ಗಾಬರಿಯಾದೆ. ಏನೂ ಗೊತ್ತಿಲ್ಲದ ಹೆಂಗಸೊಬ್ಬಳು ಹೀಗೆ ಮದ್ಯವನ್ನು ತಂದು ಕುಡಿಯಲು ಹೇಳುವುದೇ? ಇದು ಪೋರ್ತುಗೀಜರ ಸಂಸ್ಕೃತಿಯೇ? ನನಗೆ ಇಲ್ಲಿಯ ಹೆಂಗಸರೇ ಒಗಟಾದರು.
ಇದ್ದಕ್ಕಿದ್ದಂತೆ ನನ್ನ ಊರಿನ ಹೆಣ್ಣುಮಕ್ಕಳು ನೆನಪಾದರು. ಇತರ ಗಂಡಸರೆದುರು ಅವರು ಮುಖಕೊಟ್ಟೂ ಮಾತಾಡುವುದಿಲ್ಲ. ಏನು ನಾಚಿಕೆ ! ಏನು ಭಯ !… ಅವರಿಗೆ. ಇಲ್ಲಿ ಮಾತ್ರ ಕಾಡಿನಲ್ಲಿ ಗೌಳಿ, ಸಿದ್ಧಿ, ಬುಡುಕಟ್ಟು ಜನರ ಸಂಸ್ಕೃತಿ ಒಂದು ರೀತಿಯದಾಗಿದ್ದರೆ ಅದೇ ಕಾಡಿನಲ್ಲಿರುವ ಒಂದಷ್ಟು ನಾಗರೀಕರು ಅನ್ನಿಸಿಕೊಂಡವರದು ಇನ್ನೊಂದು ರೀತಿ. ಇಬ್ಬರ ಸಂಸ್ಕೃತಿಯಲ್ಲಿ ಅಂಥ ವ್ಯತ್ಯಾಸವೇನಿಲ್ಲ. ಕುಡಿಯುವುದು. ಹಾಡುವುದು. ಕುಣಿಯುವುದು. ಕಾಡಿನ ಏಕತಾನತೆಯಿಂದ ಹೊರಬರಲು ಇಂಥವುಗಳು ಇವರಿಗೆ ಅನಿವಾರ್ಯ.
ನನ್ನ ಕೈಯಲ್ಲಿದ್ದ ‘ಮಾಡ್’ ಡ್ರಿಂಕ್ಸನ್ನು ನೋಡಿದ್ದ ಹನುಮಂತ್ಯಾ ಓಡಿ ಬಂದು ಅದನ್ನು ಕಿತ್ತುಕೊಂಡು ತಾನೇ ಗುಟುಕುರಿಸಿಬಿಟ್ಟ. ಮತ್ತು ಮೇಜಿನ ಬಳಿ ನಡೆದು ಒಂದು ಫುಲ್ ಬಾಟಲು ‘ಕಾಜೂ ವಿಸ್ಕಿ’ಯನ್ನು ಹಿಡಿದು ಹಲಸಿನ ಮರದ ಕಡೆಗೆ ಹೋಗಿ ಬೊಡ್ಡೆಗೆ ಅತು ಕುಳಿತು ಬಿಟ್ಟ.
ಇವರು ಯಾರೂ ನಮಗೆ ಪರಿಚಯಸ್ಥರಲ್ಲ. ಕೇವಲ ಒಂದು ದಿನದ ಪರಿಚಯ ಅಷ್ಟೇ. ಅಷ್ಟಕ್ಕೇ ನಮ್ಮನ್ನು ಇಲ್ಲಿಗೆ ಕರೆತಂದು ಪಾರ್ಟಿ ಕೊಡುತ್ತಿದ್ದಾರೆ. ನಾವು ಬೆಪ್ಪರೋ… ಇಲ್ಲಾ ಇವರು ಬೆಪ್ಪರೋ… ಒಂದತೂ ನಿಜ. ಕಾಡಿನಲ್ಲಿರುವವರಿಗೆ ಚಾಲಾಕಿತನ ಕಡಿಮೆ. ಮುಗ್ಧವಾಗಿ ಅವರು ಎಲ್ಲರನ್ನೂ ನಂಬಿಬಿಡುತ್ತಾರೆ. ಇಂಥ ಬೋಳೇತನಗಳೇ ನಮ್ಮ ದೇಶಕ್ಕೆ, ಡಚ್ಚರು, ಪೋರ್ತುಗೀಜರು, ಇಂಗ್ಲೀಷರು, ಮಹಮ್ಮದೀಯರು ಬರಲು ಕಾರಣವಾಯಿತು. ಇದನ್ನು ಕುರಿತು ಬರೆಯಬೇಕು ಎಂದುಕೊಂಡೆ. ತಕ್ಷಣ ನನಗೆ ಕಾಡಿನಲ್ಲಿ ಟೆಂಟಿನಲ್ಲಿಯೇ ಉಳಿದ ಲಿಂಗರಾಜು, ಶ್ರೀನಿವಾಸ ಸೆಟ್ಟಿ, ಪರಸ್ಯಾ ಮತ್ತು ಅಡುಗೆಯ ಅಪ್ಪೂ ನೆನಪಾದರು. ನಾವು ಅವರನ್ನಷ್ಟೇ ಕಾಡಿನ ಮಧ್ಯೆ ಹೀಗೆ ಬಿಟ್ಟು ಬರಬಾರದಿತ್ತೇನೋ. ಆಫೀಸಿನ ಜನಕ್ಕೆ ಗೊತ್ತಾದರೆ ಅದರಲ್ಲೂ ಎಕ್ಸಿಕ್ಯೂಟಿವ್ ಇಂಜನಿಯರ್ ಶ್ರೀ ಹೆಚ್.ಆರ್.ಎನ್.ಮೂರ್ತಿಯವರಿಗೆ ಗೊತ್ತಾದರೆ ನಮ್ಮೆಲ್ಲರ ಕತೆ ಮುಗಿದಂತೆಯೇ. ‘ಸರ್ವೇ ಕೆಲಸ ಮಾಡೋದು ಬಿಟ್ಟು ಪಾರ್ಟೀ ಮಾಡೋದಕ್ಕೆ ಹೋಗೀದಾರೆ. ಎತ್ತಾಕ್ರಿ ಅವರನ್ನ’ ಅನ್ನದೇ ಬಿಡುತ್ತಿರಲಿಲ್ಲ. ನಾನು ಎಚ್ಚರದಲ್ಲಿಯೇ ಇದ್ದೆ.
ರಾತ್ರಿ ಹತ್ತು ಗಂಟೆಯವರೆಗೂ ಕುಡಿತ, ಕುಣಿತ ಇತ್ತು. ಈಗಾಗಲೇ ಅಕ್ಕ ಪಕ್ಕದವರೂ ಬಂದು ಅಲ್ಲಿ ಸೇರಿಕೊಂಡು ಅಲ್ಲಿ ಸಣ್ಣ ಗುಂಪೇ ನಿರ್ಮಾಣ ಆಗಿತ್ತು. ಎಲ್ಲರೂ ಅವರೇ ಅನ್ನಿ. ಕುಡಿಯೋದು… ಕುಣಿಯೋದು. ನನಗೆ ಕೊನೆಗೆ ಅನಿಸಿದ್ದು ‘ಇಲ್ಲಿಗೆ ನಾವು ಬರಬಾರದಿತ್ತು’ ಎಂದು.
ಶಿರೋಡ್ಕರರ ಕೈ ಹಿಡಿದು ಎಬ್ಬಿಸಿದೆ
ಅಮಲಿನಲ್ಲಿ ಏಳಲಾಗದ ಸ್ಥಿತಿ ತಲುಪಿದ್ದ ಶಿರೋಡ್ಕರ ಮತ್ತು ಹನುಮಂತ್ಯಾರ ಕೈ ಹಿಡಿದು ನಾನೇ ಎಬ್ಬಿಸಿಕೊಂಡು ಕೋಣೆಗೆ ಬಂದೆ. ಒಳಗೆ ಯಾರಾದರೂ ಬಂದಾರು ಎಂಬ ಭಯದಿಂದ ಕೋಣೆಯ ಚಿಲಕವನ್ನು ಗಟ್ಟಿಯಾಗಿ ಹಾಕಿದೆ. ನನಗೆ ಊಟವೂ ಬೇಕಾಗಿರಲಿಲ್ಲ. ಫೆಡ್ರಿಕ್ ಪಾರ್ಟಿಯ ಅಮಲಿನಲ್ಲಿ ನಮ್ಮನ್ನು ಮರತೇ ಬಿಟ್ಟಿದ್ದ. ಹೊರಗೆ ಹಾಡು, ನಗು, ತಟ್ಟೆಗಳ ಸದ್ದು, ಗಂಡಸರು-ಹೆಂಗಸರು ವಿಚಿತ್ರವಾಗಿ ನಗುತ್ತಿರುವ ದನಿ ಇನ್ನೂ ಕೇಳುತ್ತಿತ್ತು.
ಶಿರೋಡ್ಕರ ಮತ್ತು ಹನುಮಂತ್ಯಾರು ಬಿಟ್ಟೀ ಡ್ರಿಂಕ್ಸು ಸಿಕ್ತು ಅಂತ ಕುಡಿದಿದ್ದೇ ಕುಡಿದದ್ದು. ಅವರನ್ನು ನೋಡಿ ನನಗೆ ಒಂದು ಕ್ಷಣ ಗಾಬರಿಯೂ ಆಯಿತು. ಕುಡಿದದ್ದು ಹೆಚ್ಚಾಗಿ ಇವರಿಗೇನಾದರೂ ಆದರೆ ನಾನೇ ಹೊಣೆಗಾರನಾಗಬೇಕಾಗುತ್ತದೆ. ಕಾಡಿಗೆ ಬರುವ ಮುಂಚೆ ಹೆಡ್ ಕ್ಲರ್ಕು ಭೈರಾಚಾರಿ ಹೇಳಿದ್ದರು.
‘ಕಾಡಿನಲ್ಲಿ ನೀವಷ್ಟೇ ಇರೋದು. ಯಾರಿಗಾದರೂ ಏನಾದರೂ ಆದ್ರೆ ಅಲ್ಲಿ ಅವರ ಜೊತೆ ಇದ್ದವರೇ ಹೊಣೆಗಾರರು. ಹುಷಾರು…!’ ಅಂದಿದ್ದರು. ಯೋಚಿಸುತ್ತ ಮಲಗಿದ ನನಗೆ ನಿದ್ದೆ ಆವರಿಸಿದ್ದೇ ಗೊತ್ತಾಗಲಿಲ್ಲ.
ಬೆಳಿಗ್ಗೆ ಬೇಗ ಎದ್ದೆ
ನಾನು ಬೆಳಿಗ್ಗೆ ಆರು ಗಂಟೆಗೇ ಎದ್ದೆ. ಶಿರೋಡ್ಕರ ಮತ್ತು ಹನುಮ್ಯಾ ಇನ್ನೂ ನಿದ್ದೆ ಹೊಡೆಯುತ್ತಿದ್ದರು. ರಾತ್ರಿಯ ಅಮಲು ಇನ್ನೂ ತಣ್ಣಗಾಗಿರಲಿಲ್ಲ. ಇವರು ಬೇಗ ಏಳದಿದ್ದರೆ ಏನು ಮಾಡುವುದು? ನಾನು ಬಂದ ಉದ್ದೇಶ ‘ಕ್ಯಾಸ್ಟಲ್ ರಾಕ’ ಊರನ್ನು ನೋಡುವುದಾಗಿತ್ತು. ಇವರು ಬರದಿದ್ದರೂ ಪರವಾಗಿಲ್ಲ ನಾನೇ ಒಂದಷ್ಟು ತಿರುಗಾಡಿಕೊಂಡು ಬಂದರಾಯಿತೆಂದು ಬಾಗಿಲು ದೂಡಿ ಈಚೆ ಬಂದೆ. ಮಲಗುವ ಕೋಣೆಯ ಬಾಗಿಲು ಅರ್ಧ ತೆರೆದುಕೊಂಡೇ ಇತ್ತು.
ಒಳಗೆ ಮಲಗಿದ್ದವರು ಮಾರಿಯಾ, ಲೂಸಿ ಇರಬೇಕು. ಫೆಡ್ರಿಕ್ ಹೊರಗೆ ನೆಲದ ಮೇಲೆ ಚಾಪೆಯ ಮೇಲೆ
ಬಿದ್ದುಕೊಂಡಿದ್ದ. ಹಾಗೇ ಮೆಲ್ಲಗೆ ಅವರನ್ನು ದಾಟಿಕೊಂಡು ಹೊರಗೆ ಬಂದೆ. ಅಂಗಳದಲ್ಲಿ ಚೌಕೀ ಲುಂಗಿಯನ್ನು ಸುತ್ತಿಕೊಂಡು ಜಾನ್ ನಿಂತಿದ್ದ. ನನ್ನನ್ನು ನೋಡಿದವನೇ – ‘ ಟೀ ಕುಡೀತೀರಿ? ಬನ್ನಿ… ಉಸ್ತಾದನ ಅಂಗಡೀಲಿ ಕುಡಿಯೂನು. ಹತ್ತು ಪೈಸೆಗೆಲ್ಲ ಕೇಟೀನೇ ಕೊಡ್ತಾನು’ ಅನ್ನುತ್ತ ನಡದೇ ಬಿಟ್ಟ. ನನಗೂ ಚಹ ಬೇಕಾಗಿತ್ತು. ಅವನ ಹಿಂದೆಯೇ ಹೋದೆ.
ಮುಂದಿನ ಸಂಚಿಕೆಯಲ್ಲಿ –
ಇಡೀ ‘ಕ್ಯಾಸ್ಟಲ್ ರಾಕ’ನ್ನು ಒಮ್ಮೆ ಸುತ್ತಿ ಬಂದೆ. ಕಣಿವೆಯಲ್ಲಿ ಇದ್ದ
ಪೋರ್ತುಗೀಜರ ವಸತಿ ಕಟ್ಟಡಗಳನ್ನು ನೋಡಿ ಆವಾಕ್ಕಾದೆ. ನಮ್ಮ ಚಾಂದೇವಾಡಿ ಉಸುಕು ಸರ್ವೇ ಕೆಲಸಕ್ಕೆ ಅಲ್ಲಿಯ ಬದಲು ಇಲ್ಲಿಯೇ ಕ್ಯಾಂಪು ಹಾಕಿದರೆ ಹೇಗೆ ಎಂದು ಯೋಚಿಸಿದೆ. ಚಾಂದೇವಾಡಿಯು ಕಾಡಿನ ಮಧ್ಯೆ ಇದೆ. ಅದರ ಬದಲು ‘ಕ್ಯಾಸ್ಟಲ್ ರಾಕ’ ನಲ್ಲಿ ಕ್ಯಾಂಪು ಹಾಕುವಾ ಎಂದು ಧಾರವಾಡ ಆಫೀಸಿಗೆ ಹೇಳಬೇಕು ಅಂದುಕೊಂಡೆ. ಆದರೆ ನನ್ನ ಯೋಚನೆ ನನಗೇ ತಿರುಗುಬಾಣವಾಯಿತು. ನಾನು ಆ ಕಾಡಿನಿಂದಲೇ ಹೊರಗೆ ಹೋಗುವ ಹಾಗಾಯಿತು
- ಹೂಲಿಶೇಖರ್
(ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)