ನಮ್ಮ ದೇಶ ಸುಂದರವಷ್ಟೇ ಅಲ್ಲ. ಹಲವಾರು ಅದ್ಬುತಕಾರಿ ವಿಷಯಗಳನ್ನು ಒಳಗೊಂಡಿದೆ. ಕೆಲವಷ್ಟು ವಿಚಾರಗಳು ನಮಗೆ ತಿಳಿಯದೆ ಇರುವುದು ಇನ್ನೊಂದು ವಿಸ್ಮಯ.
ಭಾರತವು ವಿಶ್ವದಲ್ಲಿಯೇ ಅತಿ ಹೆಚ್ಚು ಅಂಚೆ ಸೇವೆಯನ್ನು ಹೊಂದಿದ ರಾಷ್ಟ್ರವಾಗಿದೆ. ಅಂದರೆ ೧,೫೫,೦೧೫ ದಷ್ಟು ಅಂಚೆ ಕಚೇರಿಗಳಿವೆ. ಅವುಗಳನ್ನು ೨೩ ಅಂಚೆ ಕಚೇರಿಯ ವಲಯಗಳನ್ನಾಗಿ ವಿಂಗಡಿಸಲಾಗಿದ್ದು, ಆ ವಲಯಗಳ ಉಸ್ತುವಾರಿಗಾಗಿ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ನ್ನು ನೇಮಿಸಲಾಗಿದೆ. ಹೀಗೆ ಹಲವಾರು ವಿಭಾಗಗಳು ಮತ್ತು ಉಪವಿಭಾಗಗಳನ್ನಾಗಿ ಮಾಡಲಾಗಿದೆ. ಅವುಗಳ ಉಸ್ತುವಾರಿಯನ್ನು ಒಬ್ಬೊಬ್ಬ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ದೆಹಲಿಯ ಡಾಕ್ ಭವಾನ್ ದಲ್ಲಿ ಕೇಂದ್ರ ಕಚೇರಿಯಿದೆ. ಇದು ದೇಶದ ಕಚೇರಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ.
ಇನ್ನು ನಮ್ಮ ದೇಶದಲ್ಲಿರುವ ಅತಿ ಎತ್ತರದಲ್ಲಿರುವ ಅಂಚೆಕಚೇರಿ ಮತ್ತು ತೇಲುವ ಅಂಚೆ ಕಚೇರಿಯ ಬಗ್ಗೆ ತಿಳಿಯೋಣ.
ವಿಶ್ವದ ಅತಿ ಎತ್ತರದಲ್ಲಿರುವ ಅಂಚೆ ಕಚೇರಿ :
ವಿಶ್ವದ ಅತಿ ಎತ್ತರದಲ್ಲಿರುವ ಅಂಚೆ ಕಚೇರಿ ನಮ್ಮ ದೇಶದಲ್ಲಿದ್ದು, ಅದು ಸಮುದ್ರ ಮಟ್ಟದಿಂದ ಸುಮಾರು ೪,೪೪೦ ಮೀಟರ ( ಅಂದರೆ ೧೪,೪೦೦ ಅಡಿಯಷ್ಟು ) ಎತ್ತರದಲ್ಲಿದೆ. ಹಿಮಾಚಲ ಪ್ರದೇಶದ ಹಿಕ್ಕಿಮ್ ಎನ್ನುವ ಹಳ್ಳಿಯೊಂದರಲ್ಲಿಈ ಅಂಚೆ ಕಚೇರಿಯನ್ನು ನೋಡಬಹುದು. ಅದು ನೋಡಲು ಚಿಕ್ಕದಾದರೂ ಅದರ ಕೀರ್ತಿ ದೊಡ್ಡದಿದೆ. ಹಿಮಾಚಲ ಪ್ರದೇಶವು ಅರ್ಧ ವರ್ಷ ಪೂರ್ತಿ ಪರ್ವತದಿಂದ ಹಿಮಪಾತವಾಗುವುದರಿಂದ ತನ್ನ ರಾಜ್ಯದಿಂದ ಸಣ್ಣ ಪುಟ್ಟ ಹಳ್ಳಿಗಳು ಮತ್ತು ಬುಡಕಟ್ಟು ಜನಾಂಗದಿಂದ ಸಂಪರ್ಕವನ್ನು ಕಡಿತಗೊಳಿಸುತ್ತದೆ. ಅಲ್ಲಿ ಯಾವುದೇ ದೂರವಾಣಿಯ ಸಂಪರ್ಕವಿರದ ಕಾರಣ ಜಗತ್ತಿನ ಜೊತೆ ಈ ಅಂಚೆ ಕಚೇರಿಯು ಸಂಪರ್ಕವನ್ನು ಕಲ್ಪಿಸಿಕೊಡುತ್ತದೆ. ಹಿಕ್ಕಿಮ್ ಸುತ್ತಲೂ ಇರುವ ಹಳ್ಳಿ ಜನ ಈ ಅಂಚೆ ಕಚೇರಿಯ ಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿ ಹಳ್ಳಿಗರು ತಮ್ಮ ಹಣವನ್ನು ನಿರ್ಭಯವಾಗಿ ಉಳಿತಾಯ ಖಾತೆಯಲ್ಲಿ ಜಮಾ ಮಾಡುತ್ತಾರೆ ಮತ್ತು ತಮ್ಮ ಹಣವನ್ನು ವಾಪಸ್ಸು ಪಡೆಯುತ್ತಾರೆ. ಇಲ್ಲಿ ಬರುವ ಅಂಚೆ ಪತ್ರಗಳು ಕಾಝಾ ಪಟ್ಟಣಕ್ಕೆ ತಲುಪಿಸಲಾಗುತ್ತದೆ.
ರಿಂಚೆನ್ ಛೆರಿಂಗ್ ಎನ್ನುವವರು ಸುಮಾರು ೧೯೮೩ ಇಸ್ವೀಯಿಂದ ಈ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪ್ರಕಾರ ಅಲ್ಲಿ ಕೆಲಸ ಮಾಡುವುದು ಕಷ್ಟಕರ. ಏಕೆಂದರೆ ವಾಹನಗಳು ಅಲ್ಲಿಯವರೆಗೂ ಬರಲು ಸರಿಯಾದ ರಸ್ತೆಗಳಿಲ್ಲ. ಇಬ್ಬರು ಪೋಸ್ಟಮಾಸ್ಟರ್ ಗಳಿದ್ದು, ಹಿಮಪಾತವಾಗುವ ಸಂದರ್ಭದಲ್ಲಿ ಸ್ವತಃ ತಾವೇ ಕಾಗದ ಪತ್ರಗಳನ್ನು ಹೊತ್ತುಕೊಂಡು ೪೬ಕಿಮಿ ದೂರದಲ್ಲಿರುವ ಕಾಝಾಗೆ ಪ್ರತಿ ನಿತ್ಯ ತಲುಪಿಸಬೇಕು. ಮತ್ತು ಅಲ್ಲಿಂದ ತಾವೇ ಕಾಗದಪತ್ರಗಳನ್ನು ಹೊತ್ತುಕೊಂಡು ಬರಬೇಕು. ಬಂದ ಕಾಗದಗಳನ್ನು ಸುತ್ತಲಿರುವ ಬುಡಕಟ್ಟು ಜನಾಂಗಕ್ಕೆ ಮತ್ತು ಹಳ್ಳಿಗರಿಗೆ ತಲುಪಿಸಬೇಕು ಎಂದು ಅಲ್ಲಿಯ ಪರಿಸ್ಥಿತಿಯ ಬಗ್ಗೆ ವಿವರಣೆ ಕೊಡುತ್ತಾರೆ.
ಆದರೆ ವಿಶ್ವದ ಅತಿ ಎತ್ತರದ ಅಂಚೆ ಕಚೇರಿ ಖ್ಯಾತಿಗೆ ನಮ್ಮ ದೇಶವಿರುವುದು ಹೆಮ್ಮೆ.
ವಿಶ್ವದಲ್ಲಿನ ತೇಲುವ ಅಂಚೆ ಕಚೇರಿ :
ಕಾಶ್ಮೀರ ಎಂದರೆ ಸೌಂದರ್ಯನಗರಿ. ಎತ್ತ ನೋಡಿದರತ್ತ ಮೈ-ಮನ ಸೆಳೆಯುವ ನೋಟಗಳು. ಹಿಮವನ್ನು ಹೊದ್ದು ನಿಂತ ಪರ್ವತಗಳು, ಸುಂದರವಾದ ಸರೋವರಗಳು ನೋಡುಗರ ಹುಬ್ಬೇರಿಸುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಈ ಸೌಂದರ್ಯ ನಗರಿಯನ್ನು ಕಣ್ತುಂಬಿಕೊಳ್ಳಬೇಕು ಎನ್ನುವ ಆಸೆ ಬಹುತೇಕ ಜನರಲ್ಲಿರುತ್ತದೆ. ಅಲ್ಲಿಗೆ ಹೋಗುವ ಮುಂಚೆ ಸ್ಥಳದ ಪರಿಚಯವನ್ನು ಮೊದಲೇ ಮಾಡಿಕೊಂಡಿದ್ದರೇ ಉತ್ತಮ. ಕಾಶ್ಮೀರದ ಶ್ರೀನಗರದಲ್ಲಿ ಇನ್ನೊಂದು ವಿಶೇಷತೆಯೆಂದರೆ ತೇಲುವ ಅಂಚೆ ಕಚೇರಿ (floating post office). ದೇಶದಲ್ಲೇ ಅಲ್ಲ, ವಿಶ್ವದಲ್ಲಿಯೇ ತೇಲುವ ಅಂಚೆ ಕಛೇರಿ ಇದಾಗಿದೆ. ದಾಲ್ ಸರೋವರದಲ್ಲಿದ್ದು, ಹಿಮದ ಪರ್ವತಗಳ ಮಧ್ಯೆ ದೊಡ್ಡದಾದ ಬೋಟ್ ಹೌಸ್ ಮಾದರಿಯಲ್ಲಿದೆ.
ಎರಡನೇಯ ದಶಕಗಳ ಹಿಂದೆ ಅಂದರೆ ವಸಾಹತುಶಾಹಿ ಕಾಲದಲ್ಲಿ ಇದನ್ನು ಸ್ಥಾಪಿಸಲಾಯಿತು ಎನ್ನಲಾಗುತ್ತದೆ. ಸುಮಾರು ೨೦೦ ವರ್ಷಗಳಷ್ಟು ಹಳೆಯದಾಗಿದೆ. ಬೋಟ್ ಹೌಸ್ ದುಸ್ಥಿತಿಯಲ್ಲಿ ಕಂಡಾಗ ಆಗಾಗ ಬದಲಾಯಿಸಲಾಗಿದೆ. ಅದು ಇದ್ದ ಜಾಗದಲ್ಲಿಯೇ ಇದ್ದು, ಸ್ಥಳದಲ್ಲಿ ಮಾತ್ರ ಬದಲಾವಣೆಯಾಗಿಲ್ಲ. ಈ ಬೋಟ್ ಹೌಸ್ ನ್ನು ಮೊದಲು ನೆಹರು ಪಾರ್ಕ್ ಪೋಸ್ಟ್ ಎಂದು ಕರೆಯಲಾಗುತ್ತಿತ್ತು. ಆದರೆ ೨೦೧೧ ರಲ್ಲಿ ‘ಫ್ಲೋಟಿಂಗ್ ಪೋಸ್ಟ್ ಆಫೀಸ್’ ಎಂದು ಹೆಸರಿಡಲಾಯಿತು. ಆಗಿನ ಮುಖ್ಯಮಂತ್ರಿಗಳಾಗಿದ್ದ ಒಮರ್ ಅಬ್ದುಲ್ಲಾಹ ಉದ್ಘಾಟಿಸಿದರು. ಅಂಚೆ ಕಚೇರಿಯು ದಾಲ್ ಲೇಕ್ ನ ವಾಸಿಗಳ ಸೇವಿಂಗ್ ಅಕೌಂಟ್ RD,TD KVP NIC ವ್ಯವಸ್ಯೆಗಳನ್ನೂ ಹೊಂದಿದೆ. ಪೋಸ್ಟ್ ಆಫೀಸ್ ನ ಜೊತೆಗೆ ಬ್ಯಾಂಕ್ ಕೂಡ ಆಗಿದೆ.
ಇದರೊಳಗೆ ಎರಡು ಕೋಣೆಗಳಿದ್ದು, ಒಂದು ಕೋಣೆಯನ್ನು ಆಫೀಸ್ ಗಾಗಿ ಬಳಸಲಾಗಿದೆ. ಇನ್ನೊಂದು ಕೋಣೆಯನ್ನು ಮ್ಯೂಸಿಯಂ ವನ್ನಾಗಿ ಮಾಡಲಾಗಿದೆ. ಅಲ್ಲಿ ಹಳೆಯ ಸಾಕಷ್ಟು ಸ್ಟ್ಯಾಂಪ್ ಗಳನ್ನೂ ಸಂಗ್ರಹಿಸಿಡಲಾಗಿದೆ. ಇನ್ನೊಂದೆಡೆ ಲೇಖನ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತದೆ. ಗ್ರೀಟಿಂಗ್ ಕಾರ್ಡ್, ಸ್ಟ್ಯಾಂಪ್ ಗಳು, ಅಂಚೆ ಕಾಗದಗಳು ಇಲ್ಲಿ ಲಭ್ಯವಿದೆ. ಕಾಗದ ಪಾತ್ರಗಳು ಅಲ್ಲಿಯ ದಾಲ ಸರೋವರದ ಭೂದೃಶ್ಯಗಳ ರಮಣೀಯ ದೃಶ್ಯಗಳನ್ನೊಳಗೊಂಡಿದೆ. ಇಲ್ಲಿಯ ಪತ್ರಗಳು ಬೇರೆಡೆ ಹೋದಾಗ ಈ ಕಾಗದ ಪತ್ರದ ಮೇಲಿನ ಚಿತ್ರಣ ಮೊದಲು ಗಮನ ಸೆಳೆಯುತ್ತದೆ.
ಈ ಅಂಚೆ ಕಚೇರಿ ಮೇಲೆ ಸಾಕಷ್ಟು ಸಾಕ್ಷ್ಯ ಚಿತ್ರಗಳಾಗಿವೆ. ಇದನ್ನು ನೋಡಲು ದೂರ ದೂರದಿಂದ ಪ್ರವಾಸಿಗರು ಬರುತ್ತಾರೆ ಎಂದು ಅಲ್ಲಿಯ ಜನ ಹೆಮ್ಮೆಯಿಂದ ಹೇಳುತ್ತಾರೆ.
- ಶಾಲಿನಿ ಹೂಲಿ ಪ್ರದೀಪ್