ನಿಮಗೆ ಹಿಂದಿನ ಕಾಂತಾರದಲ್ಲಿನ ” ವರಾಹ ರೂಪಂ ” ಹಾಡನ್ನು ನೋಡಿದಾಗ- ಕೇಳಿದಾಗ ಆಗಿದ್ದ ವಿಶೇಷ ಅನುಭೂತಿಗೂ , ಇಂದಿನ ಕಾಂತಾರ ಅಧ್ಯಾಯ- 1 ರ ಚಿತ್ರದ ಕೊನೆಯಲ್ಲಿ ” ವರಾಹ ರೂಪಂ” ಕೇಳಿದಾಗ ಆಗುವ ಅನುಭೂತಿಗೂ ನಿಮ್ಮೊಳಗೆ ಏನಾದರೂ ಸೂಕ್ಷ್ಮ ವ್ಯತ್ಯಾಸ ಕಂಡುಬಂದಲ್ಲಿ, ಬಹುಶಃ ಅದೇ ಎರಡೂ ಕಾಂತಾರಗಳ ನಡುವಿನ ನಿಮ್ಮ ಬೆಸ್ಟ್ ವಿಮರ್ಶೆ. ಹಿರಿಯೂರು ಪ್ರಕಾಶ್ ಅವರು ಕಾಂತಾರ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಕರಾವಳಿ ಮಲೆನಾಡಿನ ಕಡೆಯ ದೈವ, ಭೂತ ನರ್ತನ, ದೇವರ ಆವಾಹನೆ ಮುಂತಾದ ವಸ್ತು- ವಿಷಯಗಳನ್ನಿಟ್ಟುಕೊಂಡು ಅದಕ್ಕೆ ಸಿನಿಮೀಯ ಸಿದ್ದಸೂತ್ರಳಿಂದಾಚೆಗೂ ಸಹ್ಯವೆನಿಸುವ ಸಹಜ ಸುಂದರ ಅಂಶಗಳನ್ನು ಸೇರಿಸಿ ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ನೋಡುವಂತೆ ಮಾಡಿದ್ದು ಬರೋಬ್ಬರಿ ಮೂರು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ರಿಷಬ್ ಶೆಟ್ಟಿ ಎಂಬ ಪ್ರತಿಭಾವಂತ ನಿರ್ದೇಶಕನ “ಕಾಂತಾರ” ಎಂಬ ವಿನೂತನವಾಗಿ ಕುಸುರಿ ಮಾಡಿದ ಸಿನಿಮಾ. ಅದು ಸೂಪರ್ ಡ್ಯೂಪರ್ ಹಿಟ್ ಆಗಿದ್ದು ಇತಿಹಾಸ.
ಯಾವುದೇ ಹಿಟ್ ಸಿನಿಮಾಗಳ ಜಾಡು ಹಿಡಿದು, ಪ್ರೇಕ್ಷಕನ ಸಿನಿಮೀಯ ನಾಡಿಮಿಡಿತಗಳ ದೌರ್ಬಲ್ಯಗಳ ಎಳೆಗಳನ್ನು ಚೆನ್ನಾಗಿ ಅರ್ಥೈಸಿಕೊಂಡು, ಮುಂದಿನ ಭಾಗದ ಕತೆಗೆ ಅಗತ್ಯವಿರಲೀ ಬಿಡಲೀ ಅದಕ್ಕೆ ಯಾವುದೋ ಒಂದು ಸಂಕಥನಗಳ ಲಿಂಕ್ ಪೋಣಿಸಿ ಅಂದವಾದ ದೃಶ್ಯ ವೈಭವಗಳ ಮೂಲಕ ಚಂದದಿ ಕಟ್ಟಿಕೊಡುವ ಜಾಣತನದ ಕಮರ್ಷಿಯಲ್ ಕಸುಬುದಾರಿಕೆಯ ತಂತ್ರಗಳ ಫಲಿತಾಂಶವೇ ಇಂದಿನ ಕಾಂತಾರ -ಚಾಪ್ಟರ್ 1 !
ಅಂದು ಕಾಂತಾರ ಸೃಷ್ಟಿಸಿದ್ದ ದೊಡ್ಡಮಟ್ಟದ ಯಶಸ್ಸಿನ ಹವಾ ಅಥವಾ ಕ್ರೇಜ಼್ ಅನ್ನು ಮೂರು ವರ್ಷಗಳ ನಂತರವೂ ಬಿಗಿಯಾಗಿ ಹಿಡಿದಿಟ್ಟುಕೊಂಡು ಎನ್‌ಕ್ಯಾಶ್ ಮಾಡಿಕೊಳ್ಳುವುದಿದೆಯಲ್ಲಾ…ಅದು ಸಿನಿಮಾ ಪ್ರೇಕ್ಷಕರ ಬೇಕು -ಬೇಡಗಳನ್ನು ಸಮರ್ಥವಾಗಿ ಅರಿತಿರುವ ಜಾಣರಿಂದ ಮಾತ್ರ ಸಾಧ್ಯ. ಅಂಥಾದ್ದೊಂದು ಪ್ರಯತ್ನಕ್ಕೆ ಕೈಹಾಕಿ, ರಾಶಿ ರಾಶಿ ಹಣದ ಹೊಳೆಯನ್ನೇ ಹರಿಸುತ್ತಾ ದಾಖಲೆಯ ಯಶಸ್ಸಿನತ್ತ ಸಾಗಿರುವ ಚಿತ್ರ ಕಾಂತಾರ. ಚಾಪ್ಟರ್ -1 .

ಕನ್ನಡ ಸಿನಿಮಾವೊಂದು ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದಲ್ಲಿ ಈ ರೇಂಜಿಗೆ ಸದ್ದು ಮಾಡಿ ಗಮನ ಸೆಳೆಯುತ್ತಿರುವುದು ಹಾಗೂ ಸಿನಿಮಾ ಮೇಕಿಂಗ್ ನಲ್ಲಿ ಇತರೆ ಯಾವುದೇ ಭಾಷೆಯ ಅದ್ದೂರಿ ಸಿನಿಮಾಗಳಿಗೂ ಯಃಕಿಂಚಿತ್ತೂ ಕಡಿಮೆಯಿಲ್ಲವೆಂಬಂತೆ ಈ ಚಿತ್ರ ಮೂಡಿಬಂದಿರುವುದು, ಕನ್ನಡಿಗರಿಗೆ ಕನ್ನಡ ಚಿತ್ರರಂಗಕ್ಕೆ ಕೋಡು ಮೂಡಿಸಿರುವುದಂತೂ ಸುಳ್ಳಲ್ಲ. ಮೊದಲನೆಯದಾಗಿ ಇಂತಹಾ ಅದ್ಭುತ ಪ್ರಯತ್ನಕ್ಕಾಗಿ, ಸಾಹಸಕ್ಕಾಗಿ ನಟ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಬಂಡವಾಳ ಹೂಡಿದ ನಿರ್ಮಾಪಕ ವಿಜಯ್ ಕಿರಗಂದೂರು ಇವರನ್ನು ಅಭಿನಂದಿಸಲೇ ಬೇಕು.
ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಎಲ್ಲಿ ನೋಡಿದರೂ ಕಾಂತಾರದ ಬಗೆಗಿನ ಮಿಶ್ರ ವಿಮರ್ಶೆಗಳೇ ಕಣ್ಣಿಗೆ ರಾಚುತ್ತಿವೆ. ಆದರೆ ಇವುಗಳಲ್ಲಿ ಯಥಾಪ್ರಕಾರ ಎರಡು ವಿಧ. ಒಂದು ಸನಾತನ ಧರ್ಮ, ದೈವ, ಭೂತನರ್ತನ , ಆಚರಣೆ ಮುಂತಾದವುಗಳ ಬಗ್ಗೆ ಅಪಾರ ನಂಬಿಕೆಯಿದ್ದು ಆ ದೃಷ್ಟಿಯಿಂದ ಸಿನಿಮಾ ನೋಡಿ ಅದ್ಭುತವಾಗಿದೆ ಎಂದು ಮೆಚ್ಚಿಕೊಳ್ಳುವವರು ಅಥವಾ ಸ್ವಲ್ಪ ಬಲಕ್ಕೆ ವಾಲಿಕೊಂಡಿರುವ ಪಂಥೀಯರು. ಇನ್ನೊಂದು – ಇಂತಹ ಆಚರಣೆಗಳಲ್ಲಿ ನಂಬಿಕೆಯಿಡದೇ ಅವುಗಳನ್ನು ವಿರೋಧಿಸಿ, ಚಿತ್ರದ ಯಾವುದಾದರೂ ಒಂದು ಕೊಂಕನ್ನು ಹುಡುಕಿ ತೆಗೆದು, ಕೂದಲು ಸೀಳುವ ವಿಮರ್ಶೆ ಮೂಲಕ ಸಿನಿಮಾ ಚೆನ್ನಾಗಿಲ್ಲವೆಂದು ಹೇಳುವ ಎಡಕ್ಕೆ ವಾಲಿಕೊಂಡಿರುವ ಪಂಥೀಯರು. !!
ಇವೆರಡರ ಮಧ್ಯೆ ಕೇವಲ ಮನರಂಜನೆಗಾಗಿ ಕಾಸುಕೊಟ್ಟು ಸಿನಿಮಾ ನೋಡಿಬಂದ ಎಡ- ಬಲದ ಸಹವಾಸ ಇಲ್ಲದ ಕನ್ನಡದ ಒಬ್ಬ ಸಾಮಾನ್ಯ ಪ್ರೇಕ್ಷಕ ಹೇಳುವುದರಲ್ಲಿ ಅಷ್ಟು ರೋಚಕತೆ ಇರದೇನೋ…. ! ಇದರ ಬಗ್ಗೆ ಚೆನ್ನಾಗಿ ಗೊತ್ತಿದ್ದರೂ, ಒಬ್ಬ ಕ್ರಿಯಾಶೀಲ ಕನ್ನಡಿಗನ ಶ್ರದ್ಧಾಪೂರ್ವಕ ಪ್ರಯತ್ನದ ಬಗ್ಗೆ ಎರಡು ಮಾತುಗಳನ್ನು ಹೇಳಲೇಬೇಕಿದೆ.
ಒಂದೆಡೆ, ಕದಂಬರ ಕಾಲಘಟ್ಟದಲ್ಲಿ ದಟ್ಟಕಾಡನ್ನು ಬಿಟ್ಟು ನಾಡನ್ನು ನೋಡದೇ ಇರುವ ಬುಡಕಟ್ಟು ಜನಸಮೂಹದವರ ಜೀವನ ಶೈಲಿ, ಅವರು ನಂಬಿಕೊಂಡಿರುವ ದೈವಗಳೇ ಶಿವಗಣಗಳ ರೂಪದಲ್ಲಿ ತಮ್ಮನ್ನು ಕಾಯುತ್ತವೆ ಎಂಬ ಧೃಢ ನಂಬಿಕೆ ಮತ್ತು ಆಚರಣೆಗಳು. ಅಲ್ಲೊಂದು ಸುಂದರ ಈಶ್ವರನ ಹೂ ದೋಟ ಹಾಗೂ ಅಲ್ಲಿ ಸಿಗುವ ಅತ್ಯಂತ ಬೆಲೆಬಾಳುವ ಸಾಂಬಾರ ಪದಾರ್ಥಗಳು.
ಮತ್ತೊಂದೆಡೆ, ಅಲ್ಲೊಂದು ಬಾಂಗ್ರಾ ಎಂಬ ಸಂಸ್ಥಾನ. ಅದಕ್ಕೊಬ್ಬ ಸಾಮಂತ ರಾಜಶೇಖರ ಮತ್ತವನ ಮಗ ಕುಲಶೇಖರ. ಇವರಿಗೆ ತಮ್ಮ ತಾತನ ಕಾಲದಿಂದಲೂ ಕಾಂತಾರ ಕಾಡಿನ ಮೇಲೆ ದುರಾಸೆಯಿದೆ, ದ್ವೇಷವಿದೆ ಹಾಗೆಯೇ ಹೂದೋಟದ ಬಗ್ಗೆ ಭಯವೂ ಇದೆ. ಕಾಂತಾರದಲ್ಲಿನ ಬುಡಕಟ್ಟು ಜನರಿಗೊಬ್ಬ ನಾಯಕ ಬೆರ್ಮೆ ( ರಿಷಬ್ ಶೆಟ್ಟಿ ). ಇವನು ದೈವದ ಮಗನಂತೆ , ಕೇಡಿಗಳಿಂದ ದೈವವನ್ನು ಕಾಯುವ ಆಪ್ತರಕ್ಷಕನಂತೆ, ಜನನಾಯಕನಂತೆ ಮಹಾಸಾಹಸಿ . ತನ್ನವರನ್ನು ಕಟ್ಟಿಕೊಂಡು ಬಾಂಗ್ರಾ ರಾಜ್ಯಕ್ಕೆ ಕಾಲಿಟ್ಟು ಅಲ್ಲಿನವರ ದುಷ್ಟ ಆಡಳಿತದ ವಿರುದ್ಧ ಸೆಟೆದು ಅವರಿಂದ ವ್ಯಾಪಾರದ ಹಕ್ಕನ್ನು ಕಸಿದು, ತಿರುಗಿಬೀಳುವ ನಡುವೆ ಅನೇಕ ಸಿನಿಮೀಯ ಘಟನೆಗಳು ಜರುಗುತ್ತವೆ. ಯುವರಾಣಿ ಕನಕವತಿ- ಬೆರ್ಮೆಯ ಕಣ್ಣೋಟದ ಪ್ರೀತಿ, ಕುಲಶೇಖರನ ದುಷ್ಟತನ, ಬಲವಂತಕ್ಕೆ ತುರುಕಿದಂತೆ ಅನಿಸುವ ಹಾಸ್ಯ ಈ ಎಲ್ಲಾ ಕಲಸುಮೇಲೋಗರಗಳ ನಡುವೆಯೇ ಚಿತ್ರದ ಮೊದಲಾರ್ಧ ಮುಗಿಯುತ್ತದೆ.
ವಿರಾಮದ ನಂತರದಲ್ಲಿ ಚಿತ್ರಕಥೆ ವೇಗ ಮತ್ತು ಅದ್ದೂರಿತನವೆರಡನ್ನೂ ಪಡೆದುಕೊಂಡು ಸೊಗಸಾಗಿ ಸಾಗುತ್ತದೆ. ಕುಲಶೇಖರನ ವಧೆಯ ಸಂದರ್ಭದ ದೃಶ್ಯಗಳಲ್ಲಿ ಬೆರ್ಮೆಯ ಮೇಲಿನ ನಾನಾ ಗುಳಿಗ ದೈವಗಳ ಆವಾಹನೆ ಮೊದಲಿನ ಕಾಂತಾರದಲ್ಲಿದ್ದಿದ್ದಕ್ಕಿಂತಲೂ ಅದ್ಭುತವಾಗಿ ಮೂಡಿಬಂದಿದೆ. ಇಲ್ಲಿ ಸಾಕ್ಷಾತ್ ದೈವವೇ ಮೈಮೇಲೆ ಬಂದಂತೆ ಅಬ್ಬರಿಸುವ ರಿಷಬ್ ಅಭಿನಯದ ಆವೇಶಕ್ಕೆ ಇಡೀ ಥಿಯೇಟರ್ರೇ ಕಂಪಿಸುವಂತಹ ಫ಼ೋರ್ಸ್ ಇದ್ದು , ಇದೇ ಚಿತ್ರದ ಕ್ಲೈಮ್ಯಾಕ್ಸ್ ಎನ್ನುವಂತಿದೆ. ಆನಂತರ ಯುವರಾಣಿ ಕನಕವತಿಯ ಪಾತ್ರದಲ್ಲೊಂದು ಅನಿರೀಕ್ಷಿತ ಟ್ವಿಸ್ಟ್, ಶಿವಗಣಗಳ ದಿಗ್ಬಂಧನ, ಬ್ರಹ್ಮ ರಾಕ್ಷಸನೊಡನೆ ಹೋರಾಟ, ರಾಜಮೌಳಿಯ ಬಾಹುಬಲಿಯನ್ನು ನೆನಪಿಸುವ ಯುದ್ಧ ತಂತ್ರಗಳು, ಬೆರ್ಮೆಯ ದೈವಾಹನೆಯ ದೈವನರ್ತನ, ಕೊನೆಗೆ ಶತ್ರುಗಳ ಸಂಹಾರದ ಅಬ್ಬರದೊಂದಿಗೆ ಅಧ್ಯಾಯ ಒಂದಕ್ಕೆ ತೆರೆ ಬೀಳುತ್ತದೆ. ಕೊನೆಯಲ್ಲಿ ಇದರಲ್ಲಿ ಉತ್ತರ ಸಿಗದ ಕೆಲವು ಪ್ರಶ್ನೆಗಳಿಗೆ ಅಧ್ಯಾಯ ಎರಡರ ಸೂಚನೆಯನ್ನೂ ರಿಷಬ್ ಕೊಟ್ಟಿದ್ದಾರೆ.

ಇಡೀ ಸಿನಿಮಾದ ಹೈಲೈಟ್ ಎಂದರೆ ಅದರ ಅದ್ದೂರಿತನದ ಮೇಕಿಂಗ್, ದೃಶ್ಯ ಜೋಡಣೆ, ಸಿನಿಮಾಗಾಗಿ ಅರ್ಪಿಸಿಕೊಂಡಿರುವ ಬದ್ದತೆ ಮತ್ತು ತಾದ್ಯಾತ್ಮತೆ. ರಿಷಭ್ ಶೆಟ್ಟಿಯವರ ಸಿನಿಮಾಶ್ರದ್ಧೆ, ಸತತ ಶ್ರಮ ಹಾಗೂ ವಿಜಯ್ ಕಿರಗಂದೂರರ ರಾಜಿಯಾಗದ ಆರ್ಥಿಕ ಬದ್ದತೆ ಸಿನಿಮಾದ ಪ್ರತೀ ಫ಼್ರೇಮ್ ನಲ್ಲೂ ಕಾಣಿಸುತ್ತದೆ. ಸಾಹಸ ಮತ್ತು ಹೋರಾಟದ ದೃಶ್ಯಗಳಲ್ಲಂತೂ ರಿಷಬ್ ಯಾವ ಆಕ್ಷನ್ ಹೀರೋಗೂ ಕಡಿಮೆಯಿರದಂತೆ ನಿರೀಕ್ಷೆಗೂ ಮೀರಿ ಅದ್ಭುತವಾಗಿ ಮಿಂಚಿದ್ದಾರೆ. ಚಿತ್ರದ ಸಮಾನ ಹೈಲೈಟ್ ಎಂದರೆ ಕಾಂತಾರ ಕಾಡನ್ನು ಮನಮೋಹಕವಾಗಿ ಕಟ್ಟಿಕೊಟ್ಟ ಅರವಿಂದ ಕಶ್ಯಪ್ ರ ಸುಂದರ ಛಾಯಾಗ್ರಹಣ. ನಿರ್ದೇಶಕನ ಕಲ್ಪನೆಗೆ ತಕ್ಕಂತೆ ಫ಼್ರೇಮುಗಳನ್ನು ಕಟ್ಟಿಕೊಡುವಲ್ಲಿ ಕಶ್ಯಪ್ ರ ಕ್ಯಾಮೆರಾ ಕೈಚಳಕ ಸಾಥ್ ನೀಡಿದೆ. ಕನಕವತಿಯಾಗಿ ರುಕ್ಮಿಣಿ ವಸಂತ್ ಕಡೆದ ಹಾಲುಗಲ್ಲಿನಂತೆ ಸ್ಬಿಗ್ಧತೆಯಿಂದ ಕಂಗೊಳಿಸುತ್ತಾರೆ. ಕನ್ನಡಿಗರ ಸಧ್ಯದ ಕ್ರಷ್ ಆಗಿರುವ ರುಕ್ಮಿಣಿ ಈ ಚಿತ್ರದ ಮೂಲಕ ನ್ಯಾಷನಲ್ ಕ್ರಷ್ ಆದರೂ ಅಚ್ಚರಿಯೇನಿಲ್ಲ. ಇನ್ನುಳಿದಂತೆ ಇತರೆ ಪಾತ್ರಗಳು ನೆನಪಲ್ಲುಳಿಯುವುದು ಕಡಿಮೆ. ಅಜನೀಶ್ ಲೋಕನಾಥ್ ರ ಹಿನ್ನೆಲೆ ಸಂಗೀತ ಸೊಗಸಾಗಿದ್ದರೂ ಹಾಡುಗಳು ಹಿಂದಿನ ಕಾಂತಾರದಂತೆ ಸಿಂಗಾರ ಸಿರಿಯೂ ಆಗಿಲ್ಲ , ಬಂಗಾರದಂತೆ ಕಂಗೊಳಿಸುವುದೂ ಇಲ್ಲ. ಕೇವಲ ದೈವ, ಭೂತನರ್ತನ, ಗುಳಿಗ, ಶಿವಗಣ, ಆವಾಹನೆ, ಸಾಹಸ, ಫ಼ೈಟಿಂಗ್… ಇತ್ಯಾದಿಗಳ ದೃಶ್ಯಗಳಲ್ಲಿಯೇ ಮುಳುಗಿದ್ದ ರಿಷಬ್ ಶೆಟ್ಟಿ ಒಂದೆರಡು ಗುನುಗುನುಗುವಂತಹ ಟ್ಯೂನ್ ಕೊಡುವಲ್ಲಿಯೂ ಶ್ರದ್ಧೆ ತೋರಬೇಕಿತ್ತು !!
ಚಿತ್ರದ ಪ್ರಮುಖ ನೆಗೆಟೀವ್ ಅಂಶಗಳಲ್ಲಿ ಹಿಂದಿನ ಕಾಂತಾರದಲ್ಲಿದ್ದಂತಹ ಸತ್ವಯುತ ಕಥೆ, ಸನ್ನಿವೇಶಗಳಿಗೆ ತಕ್ಕ ಸಹಜ ಸಂಭಾಷಣೆಯ ದೃಶ್ಯಗಳು, ನವಿರಾದ ಹಾಸ್ಯ, ಮುದನೀಡುವ ಪ್ರೀತಿ- ಪ್ರೇಮ, ಇಂಪಾದ ಹಾಡುಗಳು, ಕರಾವಳಿ- ಮಲೆನಾಡಿನವರ ದೈವಭಕ್ತಿಯ ಪರಾಕಾಷ್ಠೆಯ ಸಹಜ ದೃಶ್ಯಗಳು…..ಈ ಎಲ್ಲವೂ ಪರಿಣಾಮಕಾರಿಯಾಗುವಲ್ಲಿ ಮಿಸ್ ಆಗಿವೆ.
ಮುಖ್ಯವಾಗಿ ಊರಿನ ಜನಸಂಪರ್ಕವೇ ಇರದ, ದೈವ ನಂಬಿಕೆ ಆಚರಣೆಗಳಲ್ಲೇ ಬದುಕು ಕಂಡುಕೊಂಡಿರುವ ದಟ್ಟಡವಿಯ ಬುಡಕಟ್ಟು ಜನಾಂಗದವರ ಭಾಷೆ ಯಾವ ಸಂಸ್ಕೃತ ಪಂಡಿತರಿಗೂ ಕಡಿಮೆಯಿರದಷ್ಟು ಸ್ಫಟಿಕವಾಗಿರುವುದು ಅಚ್ಚರಿ ಮೂಡಿಸುತ್ತೆ. ಸಿನಿಮಾದಲ್ಲಿ ಲಾಜಿಕ್ ನೋಡ ಹೊರಟಾಗ ಸಿಗಬಹುದಾದ ಈ ರೀತಿಯ ಕೆಲವು ಅಪಭ್ರಂಶಗಳ ಬಗ್ಗೆ ಗಮನಹರಿಸಬಹುದಿತ್ತೇನೋ ! ಆದರೆ ಸಿನಿಮಾಗಳಲ್ಲಿ ಮತ್ತು ರಾಜಕೀಯದಲ್ಲಿ ಲಾಜಿಕ್ ಹುಡುಕುವುದೇ ಒಂಥರಾ ಇಲ್ಲಾಜಿಕಲ್ !!
ನಿಮಗೆ ಹಿಂದಿನ ಕಾಂತಾರದಲ್ಲಿನ ” ವರಾಹ ರೂಪಂ ” ಹಾಡನ್ನು ನೋಡಿದಾಗ- ಕೇಳಿದಾಗ ಆಗಿದ್ದ ವಿಶೇಷ ಅನುಭೂತಿಗೂ , ಇಂದಿನ ಕಾಂತಾರ ಅಧ್ಯಾಯ- 1 ರ ಚಿತ್ರದ ಕೊನೆಯಲ್ಲಿ ” ವರಾಹ ರೂಪಂ” ಕೇಳಿದಾಗ ಆಗುವ ಅನುಭೂತಿಗೂ ನಿಮ್ಮೊಳಗೆ ಏನಾದರೂ ಸೂಕ್ಷ್ಮ ವ್ಯತ್ಯಾಸ ಕಂಡುಬಂದಲ್ಲಿ, ಬಹುಶಃ ಅದೇ ಎರಡೂ ಕಾಂತಾರಗಳ ನಡುವಿನ ನಿಮ್ಮ ಬೆಸ್ಟ್ ವಿಮರ್ಶೆ.
* ಮರೆಯುವ ಮುನ್ನ *
ಹಿಂದಿನ “ಕಾಂತಾರ” ಲಾಲ್‌ಬಾಗ್ ನ ಗುಲಾಬಿ ಗಿಡದಲ್ಲಿ ಆಗ ತಾನೇ ಸಹಜವಾಗಿ ಅರಳಿದ ಸುಂದರ ಗುಲಾಬಿಯಂತಿದ್ದರೆ, ಇಂದಿನ ಕಾಂತಾರ, ಗುಲಾಬಿಯನ್ನು ಅದ್ದೂರಿಯಾಗಿ ಗಿಡದಲ್ಲಿ ಅರಳಿಸಿ ರಂಗಿನಿಂದ ಸಿಂಗರಿಸಿ ವೈಭವೀಕರಿಸಿದಂತಿದೆ. ಅದ್ದೂರಿತನದ ಹಪಾಹಪಿಯಲ್ಲಿ ಸಹಜತೆ ಮರೆಯಾದಾಗ ಆಗುವ ಸಣ್ಣಪುಟ್ಟ ಅವಲಕ್ಷಣಗಳು ಬೇಡವೆಂದರೂ ಇಲ್ಲಿಯೂ ಅಲ್ಲಲ್ಲಿ ಕಣ್ಣಿಗೆ ಹೊಡೆಯುತ್ತವೆ. ಅವು ಭೂತಾರಾಧನೆಯಿಂದ ಹಿಡಿದು ಕಥೆ ಕಟ್ಟುವ ರೀತಿಯವರೆಗೂ ಕಾಣದಂತೆ ಹರಡಿಕೊಂಡಿವೆ.
ಕೊನೆಗೆ ಇಷ್ಟೆಲ್ಲಾ ಬೇಕು- ಬೇಡಗಳ ನಡುವೆ ವರ್ಷಗಟ್ಟಲೆ ಅನೇಕ ಅಡ್ಡಿ ಆತಂಕಗಳನ್ನೆದುರಿಸಿ , ಸತತ ಶ್ರಮ ಹಾಕಿ ಇತರೆ ಭಾಷೆಯ ಚಿತ್ರಗಳಿಗೇ ಸೆಡ್ಡು ಹೊಡೆಯುವಂತಹ ಸಿನಿಮಾ ಕಟ್ಟಿಕೊಟ್ಟ ರಿಷಬ್ ಶೆಟ್ಟಿ ಮತ್ತು ತಂಡದವರಿಗೆ ಕನ್ನಡಿಗರೆಲ್ಲರೂ ಕಾಂತಾರ- 1 ನೋಡುವ ಮೂಲಕ ಒಂದು ಥ್ಯಾಂಕ್ಸ್ ಹೇಳಿಬಿಡಿ !
ಕಾಂತಾರ ಚಾಪ್ಟರ್- 1…ಯಾವುದೇ ಮುಜುಗರವಿಲ್ಲದೇ ಮನೆಮಂದಿಯೆಲ್ಲಾ ನೋಡಬಹುದಾದ ಸಿನಿಮಾ. ಆದರೆ ನೀವು ಈ ಸಿನಿಮಾ ನೋಡಲು ಹೋಗುವಾಗ ಅಂದಿನ ಕಾಂತಾರವನ್ನು ತಲೆಯೊಳಗಿಂದ ಹೊರಗಿರಿಸಿ ಫ಼್ರೆಶ್ ಆಗಿ ನೋಡಿ , ಕನ್ನಡಿಗರದ್ದೇ ಆದ ಈ ಪ್ರಯತ್ನಕ್ಕೆ ಬೆನ್ನು ತಟ್ಟಿ.
ಪ್ರೀತಿಯಿಂದ…
- ಹಿರಿಯೂರು ಪ್ರಕಾಶ್
