ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ ಅಂತಾರೆ, ಆದರೆ ನೀರಜ ಹಾಗೂ ಧಾತ್ರಿಯ ಜಗಳ ಎಲ್ಲಿಯವರೆಗೆ?!…ತಪ್ಪದೆ ಓದಿ ನಾಗಮಣಿ ಹೆಚ್ ಆರ್ ಅವರ ‘ಕತ್ತಲ ಬದುಕು’ ಸಣ್ಣಕತೆಯನ್ನು ತಪ್ಪದೆ ಓದಿ…
‘ಪಾತ್ರೆ ತೊಳೆಯೋದು ಬೇಡಾಂದ್ರೇ ಕೇಳಲ್ಲ. ಎಲ್ಲಾ ಪಾತ್ರೆ ಹೋಗ್ಲಿ ಕುಕ್ಕರ್ ಮಿಕ್ಸಿ ಜಾರ್ ಎಲ್ಲಾ ಬೀಳಿಸಿದರೆ ಹಾಳಾಗಲ್ವಾ ? ಸೋಪಿನ ವಾಸನೆ ಕೂಡಾ ಹೋಗಿರಲ್ಲ . ಪುನಃ ತೊಳೆಯುವ ಕರ್ಮವೂ ನನಗೆ ತಪ್ಪಲ್ಲ’. ಪತ್ನಿಯ ಗೊಣಗಾಟಕ್ಕೆ ನೀರಜ್ ಗಂಟಲು ಹರಿದು ಹೋಗುವಷ್ಟು ಜೋರಾಗಿ,
‘ನಾನೆ ತಂದಿರೋದು, ಮುರಿದರೇನು ಮಾಡಲಾಗುತ್ತೆ ? ನಿಮ್ಮಪ್ಪ ತಂದು ಕೊಟ್ಟಿಲ್ಲ. ಸೂರು ಹಾರಿ ಹೋಗುವಂತೆ ಕೂಗಾಡಿದ ಪತಿಗೆ, ಏನು ಮಾತನಾಡೋದಾದ್ರು ನಿಧಾನಕ್ಕೆ ಬೊಗಳು, ಎಂದ ಮಾತಿಗೆ,
” ಬೊಗಳಕ್ಕೆ ನಾನು ನಾಯಿ ಅಲ್ಲ ನಿನ್ ತರಹ , ಯಾವಾಗ ನೋಡಿದರೂ ಮೊಬೈಲ್ ಲ್ಲಿ ಬಿದ್ದಿರ್ರ್ತೀಯ.
” ನೀನ್ಯಾವೋನೋ ಹೇಳಲು ಒಂದು ದಿನವಾದರೂ ಮೊಬೈಲ್ ಗೆ ಕರೆನ್ಸಿ ಹಾಕಿಸಿದ್ದೀಯಾ ಮೊಬೈಲ್ ನೀ ತೆಕ್ಕೊಟ್ಟಿದ್ದೀಯಾ ? ಯಾವಾಗ ನೋಡಿದ್ರೂ ಟಿವಿ ಅನ್ ಮಾಡ್ಕೊಂಡು ಕೂತಿರ್ತಿಯಾ’.
‘ನಾನೂ ಹಾಗೇ ಹೇಳ್ತೀನಾ? ಮುಚ್ಚೇ ಬಾಯಿ… ಗಂಡ ಅನ್ನೋ ಮರ್ಯಾದೆ ಸ್ವಲ್ಪವಾದರೂ ಇದ್ಯಾ ನಿಂಗೆ?’.
‘ಓಹೋ… ನಿಮ್ಮ ಯೋಗ್ಯತೆಗೆ ಮರ್ಯಾದೆ ಬೇರೆ ಕೇಡು. ಒಂದು ಪೈಸೆ ನನಗಾಗಿ ಖರ್ಚು ಮಾಡದ ನಿನಗೆ ಸೇವೆ ಮಾಡಿಸಿಕೊಳ್ಳೋದೊಂದು ಬಿಟ್ಟು ಬೇರೆ ಏನಾದ್ರೂ ಗೊತ್ತಾ ? ನಿನ್ನಂತಹ ಗಂಡನ ಜೊತೆಯಲ್ಲಿ ನಾನೇ ಅಗುವ ಹೊತ್ತಿಗೆ ಬದುಕಿದ್ದೀನಿ, ಇನ್ಯಾರೇ ಅಗಿದ್ರೂ ನಿನ್ನಂತಹವನ ಜೊತೆಗೆ ಒಂದು ದಿನವೂ ಬಾಳ್ತಿರಲಿಲ್ಲ . ಕಸಕ್ಕಿಂತಲೂ ಕಡೆಯ ಬಾಳು ನಿನ್ನದು. ವರ್ಷದಲ್ಲಿ ಆರು ಸಲಾ ಕಾಯಿಲೆ ಬೀಳೋ ನಿನಗೆ, ನಾನು ನಿನ್ನ ರಿಪೇರಿ ಮಾಡ್ಸೋದೇ ಅಗುತ್ತೆ. ಇದಕ್ಕೆಲ್ಲಾ ನೀನೇನು ಹಣ ಕೊಡ್ತೀಯಾ ? ನಮ್ಮಪ್ಪನ ಮನೇಲಿ ನನಗೆ ಕೊಡುವ ಹಣದಲ್ಲೇ ನಿನ್ ರಿಪೇರಿ ಮಾಡಿಸ್ಬೇಕು . ಮತ್ತೆ ನಮ್ಮಪ್ಪ ಅಮ್ಮನ್ನ ಅಂತೀಯಾ . ದಿನಾ ಬೆಳಗಾದರೆ ನಿನ್ನಂತಹ ಹೀನನಿಗೆ ಬೇಯಿಸಿ ಹಾಕಬೇಕು . ನಮ್ಮಪ್ಪ ನಿನ್ನಂತ ಅಯೋಗ್ಯನಿಗೆ ಮದುವೆ ಮಾಡಿಸುವ ಬದಲು , ಕಾಲಿಗೆ ಕಲ್ಲುಕಟ್ಟಿ ಬಾವಿಗೆ ನೂಕಿದ್ದರೆ ಪುಣ್ಯ ಬರ್ತಿತ್ತು . ಎಷ್ಟೂಂತಾ ನಿನ್ನ ಮನೆ ಜೀತ ಮಾಡಿದರೂ ಒಂದು ಲೋಟ ನೀರು ಕುಡಿಯಲು ನೆಮ್ಮದಿ ಇಲ್ಲ’.
ನೀರಜನ ಪತ್ನಿ ಧಾತ್ರಿ ಅತ್ಯಂತ ದುಃಖ ನೋವಿನಿಂದ ಎದುರಿನಲ್ಲಿದ್ದವನಿಗೂ ಕೇಳಿಸದಷ್ಟು ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿದ್ದರೆ , ಮೇಲಿನ ಮನೆಯವರು ಬಂದು
‘ಏನಾಯ್ತು ನೀರಜ್ ? ಧಾತ್ರಿ ಎಲ್ಲಿ ? ಅಷ್ಟೊಂದು ಜೋರಾಗಿ ಕಿರುಚುತ್ತಿದ್ದೀರಿ ?’… ಧಾತ್ರಿ ಅಡುಗೆ ಮನೆಯೊಳಗಿನಿಂದಾಚೆ ಬಾರದೆ ನಿಂತಳು. ಥೂ… ಮರ್ಯಾದೆ ತೆಗೆಯುವಷ್ಟು ತನ್ನ ಜೋರಾದ ಸ್ವರದಲ್ಲಿ ಮಾತಾಡಿ , ನಾನು ಆಚೆಗೆ ಹೋಗಲಾಗದಷ್ಟು , ಅವಮಾನವಾಗುವಂತೆ ಮಾತಾಡ್ತಾನಲ್ಲ , ಎನಿಸಿ ರೋಧಿಸ ತೊಡಗಿದಳು.
ನೀರಜ ಒಳ ಬಂದವನೇ ಹಾಲಿನ ಡಬರಿ ತೆಗೆದು ಪತ್ನಿಯ ಮೇಲೆ ಎಸೆದು , ‘ಥೂ ನಿನ್ನಿಂದ ನನ್ನ ಮರ್ಯಾದೆ ಹೋಯ್ತು. ನನ್ನ ಬದುಕನ್ನೇ ಹಾಳು ಮಾಡಿದ್ಯಲ್ಲೇ’ ಎನ್ನುತ್ತಾ ಅವಳನ್ನು ಬಗ್ಗಿಸಿ ಬೆನ್ನಿಗೆ ಬಡಿಯುವಾಗ ಅವಳನ್ನು ಬಿಡಿಸಲು ಯಾರೂ ಇರಲಿಲ್ಲ . ಅವನ ಶಕ್ತಿಯ ಮುಂದೆ ಅಸಹಾಯಕಳಾಗಿ ಏಟು ತಿನ್ನುತ್ತಾ , ನೋವು ಸಹಿಸಲಾಗದೇ ಕೈಗೆ ಸಿಕ್ಕಿದ ಮುದ್ದೆ ಕೋಲಿನಿಂದ ಎರಡು ಭಾರಿಸದಳು.
‘ಅಯ್ಯೋ ಅಯ್ಯಪ್ಪಾ ಗಂಡನ್ನೇ ಹೊಡೆದು ಕೊಂದು ಹಾಕ್ತಾಳಲ್ಲಪ್ಪಾ, ನನ್ಯಾರೂ ಕಾಪಾಡೋರಿಲ್ವೇ’… ಎಂದು ಕಿರುಚಾಡಿದವನದನಿಗೆ ಪಕ್ಕದ ಮನೆಯವರು ಕಿಟಕಿಯಲ್ಲೇ ಹೇಳಿದರು.
‘ಧಾತ್ರಿ ನಿಜವಾಗಿಯೂ ನೀನು ರಾಕ್ಷಸಿ . ಹಾಗಾ ಪಾಪದ ಗಂಡನಿಗೆ ಹೊಡೆಯೋದು ? ಸಾಯಿಸಿಬಿಡ್ತೀಯಾ ಎನು ?’…
ನ್ಯಾಯ ಓಡಿ ಹೋಗಿತ್ತು, ಸತ್ತೇ ಹೋಗಿತ್ತು. ಅವನ ರಾಕ್ಷಸ ದನಿ ಕೇಳಿದ್ದರೂ ಅವಳಿಗಾಗಿ ಮಿಡಿಯುವ ಒಂದು ಜೀವ ಇಲ್ಲದ್ದು , ಅವಳದ್ದು ಅರಣ್ಯ ರೋಧನವಾಗಿತ್ತು . ತಾಯಿಯ ಮನೆಯಲ್ಲಿಯೂ ಇವನ ಈ ಬುದ್ದಿಯಿಂದ ಅವಮಾನವಾಗುತ್ತದೆಂದು ಹೋಗುವುದನ್ನೇ ಬಿಟ್ಟು ಬಿಟ್ಟಿದ್ದ ತನಗೆ ದೇವರು ಯಾಕಿಷ್ಟು ನಿಷ್ಕರುಣಿ ಎನಿಸಿತು . ಹೆಣ್ಣಿಗೆ
ಒಳ್ಳೆಯ ತವರುಮನೆಯಿರಬೇಕು , ಇಲ್ಲಾಂದ್ರೇ ಒಳ್ಳೆಯ ಗಂಡನಾದರೂ ಇರಬೇಕಲ್ವಾ ? ಇಂತಹ ಗಂಡನ ಜೊತೆಗೆ ಉಸಿರಾಡಲು ಕಷ್ಟವಾಗುವ ತನಗೆ ಈ ಮನೆಯಲ್ಲಿ
ಇವನ ಜೊತೆಯಾಗಿರಲು ಸಾಧ್ಯವೂ ಇಲ್ಲ . ನನಗಾಗೋದು ಇಲ್ಲ . ಎನು ಮಾಡ್ಲೀ ಎನು ಮಾಡಲಿ ?
ಕಣ್ಣೀರು ಬತ್ತುವಷ್ಟು ಅತ್ತವಳಿಗೆ ಸೂಟ್ಕೇಸಿಗೆ ಬಟ್ಟೆ ತುಂಬಿಸಿಕೊಂಡು , ಚಪ್ಪಲಿ ಮೆಟ್ಟಿ ಹೊರಬಂದವಳಿಗೆ , ತಾನು ಹೋಗುವುದಾದರೂ ಎಲ್ಲಿಗೆ , ಎನಿಸಿ ಗುರಿ ಇಲ್ಲದ ಬದುಕಿನ ಹಾದಿಯ ಕಾಣದೇ ಮನೆಯ ಗೇಟಿನ ಮುಂದೆ ಕುಸಿದವಳ ಧಾತ್ರಿಗೆ ಸಮಾಧಾನಿಸುವ , ಅವಳಿಗೊಂದು ನೆಲೆ ನೀಡುವ ಕೈ ಯಾವುದೂ ಅವಳಿಗೆ ಕಾಣಲಿಲ್ಲ . ಬದುಕೊ ಹಂಬಲವೇ ಮನದಲ್ಲಿ ಇಂಗಿ ಹೋಗಿ ಅವಳ ತಲೆಯ ತುಂಬಾ ಬರಿಯ ಕತ್ತಲೆಯೇ ತುಂಬಿ ಹೋಗಿತ್ತು . ಅವಳ ಕತ್ತಲ ಬದುಕಿಗೆ ಬೆಳಕು ನೀಡುವವರ್ಯಾರೂ ಇಲ್ಲವಾಗಿತ್ತು .
- ನಾಗಮಣಿ ಹೆಚ್ ಆರ್
