ಮಕ್ಕಳ ಕೋಪ – ಚೇತನ ಭಾರ್ಗವ

ಮಕ್ಕಳು ತಾವು ಬಯಸಿದ್ದನ್ನು ಪಡೆಯಲು ಬಳಸುವ ಮೊದಲ ಅಸ್ತ್ರವೇ ಅಳು ಮತ್ತು ಕೋಪ. ಆ ಸಂದರ್ಭದಲ್ಲಿ ಪೋಷಕರು ಮಕ್ಕಳ ಕೋಪಕ್ಕೆ ತಾವೂ ಕೋಪಿಸಿಕೊಳ್ಳದೆ ಶಾಂತವಾಗಿ ಅವರ ಅಲಳನ್ನು ಆಲಿಸುವ ವ್ಯವಧಾನ ಬೆಳೆಸಿಕೊಳ್ಳಬೇಕು. – ಚೇತನ ಭಾರ್ಗವ, ತಪ್ಪದೆ ಮುಂದೆ ಓದಿ…

ಮುದ್ದು ಮಕ್ಕಳ ಆಟ ಪಾಠ, ಅವರ ತುಂಟಾಟ ಬಹಳ ಚಂದ. ಮಕ್ಕಳು ಹೂಗಳಿದ್ದಂತೆ, ಎಲ್ಲರನ್ನೂ ಸೆಳೆಯುತ್ತಾರೆ. ಮಕ್ಕಳು ಎಷ್ಟು ಮುಗ್ಧರೋ ಅಷ್ಟೇ ಅವರ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಅವರ ಇಚ್ಚೆಗೆ ವಿರುದ್ಧವಾಗಿ ನಡೆದರೆ ಅವರಿಗೆ ಕೋಪ ಬರುವುದು ಸಹಜ. ಪ್ರತಿಯೊಂದು ಮಗುವೂ ವಿಭಿನ್ನವಾಗಿರುತ್ತದೆ. ವಯಸ್ಸು ಸಣ್ಣದಾದರೂ ಅದು ತನ್ನ ತನವನ್ನು ರೂಪಿಸಿಕೊಳ್ಳುತ್ತಿರುತ್ತದೆ. ಕೆಲವು ಮಕ್ಕಳು ತುಂಬಾ ಶಾಂತ ಸ್ವಭಾವದವರಾಗಿರುತ್ತಾರೆ. ತಮ್ಮ ಇಚ್ಚೆಗೆ ವಿರುದ್ಧವಾಗಿ ಏನೇ ನಡೆದರೂ ಕೋಪಿಸಿಕೊಳ್ಳುತ್ತಾರೆ. ಕೆಲವರು ತುಂಬಾ ಅತ್ತರೆ, ಕೆಲ ಮಕ್ಕಳು ವಿಪರೀತ ಕೋಪ ವ್ಯಕ್ತಪಡಿಸುತ್ತಾರೆ. ಏಕೆಂದರೆ ಅವರು ತಮ್ಮ ಭಾವನೆಗಳನ್ನು ಮಾತಿನಲ್ಲಿ ವ್ಯಕ್ತಪಡಿಸಲು ಪೂರ್ಣ ಶಕ್ತರಾಗಿರುವುದಿಲ್ಲ. ಇದರಿಂದ ಕೋಪವೇ ಅವರಿಗೆ ತಮ್ಮ ಭಾವನೆಗಳ ವೈಪರೀತ್ಯವನ್ನು ಹೊರಹಾಕುವ ಏಕಮಾತ್ರ ಮಾಧ್ಯಮವಾಗಿರುತ್ತದೆ.

ಫೋಟೋ ಕೃಪೆ : google

ಮಕ್ಕಳು ತಾವು ಬಯಸಿದ್ದನ್ನು ಪಡೆಯಲು ಬಳಸುವ ಮೊದಲ ಅಸ್ತ್ರವೇ ಅಳು ಮತ್ತು ಕೋಪ. ಆ ಸಂದರ್ಭದಲ್ಲಿ ಪೋಷಕರು ಮಕ್ಕಳ ಕೋಪಕ್ಕೆ ತಾವೂ ಕೋಪಿಸಿಕೊಳ್ಳದೆ ಶಾಂತವಾಗಿ ಅವರ ಅಲಳನ್ನು ಆಲಿಸುವ ವ್ಯವಧಾನ ಬೆಳೆಸಿಕೊಳ್ಳಬೇಕು. ಪೋಷಕರೂ ಕೂಡ ಕೋಪದ ಕೈ ಗೆ ಬುದ್ಧಿ ಕೊಟ್ಟರೆ ಅವರ ಈ ಕೋಪದ ಪ್ರತಿಕ್ರಿಯೆಯು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪೋಷಕರು ಮಕ್ಕಳ ಕೋಪದ , ಗಲಾಟೆಯ ವಾತಾವರಣದ ನಡುವೆಯೂ ಶಾಂತ ಚಿತ್ತರಾಗಿ ವ್ಯವಹರಿಸಿ ಸಂಭಾಳಿಸುವ ಕಲೆ ಬೆಳೆಸಿಕೊಳ್ಳಬೇಕು. ಕೆಲವು ತಾಯಂದಿರಿಗೆ ಈ ಕಲೆ ಸಹಜವಾಗಿಯೇ ಸಿದ್ದಿಸಿರುತ್ತದೆ. ತಂದೆಯಂದಿರು ಈ ಪರಿಸ್ಥಿತಿಗಳನ್ನು ಶಾಂತರಾಗಿ ನಿಭಾಯಿಸಬಲ್ಲರಾದರೂ ತಾಯಂದಿರ ಸಹನೆ ಇಲ್ಲಿ ಮುಖ್ಯವಾಗುತ್ತದೆ.
ಈಗಿನ ಅವಸರದ ಜಗತ್ತಿನಲ್ಲಿ ಪೋಷಕರಿಬ್ಬರೂ ದುಡಿಯುವರಾಗಿ ಮಕ್ಕಳೊಂದಿಗೆ ಕಳೆಯುವ ಸಮಯ ಕಡಿಮೆಯಾಗುತ್ತಿದೆ. ಇದರಿಂದಾಗಿ ಮಕ್ಕಳು ಕೇಳಿದೊಡನೆ ವಸ್ತುಗಳನ್ನು ತಂದುಕೊಡುವ ಪ್ರವೃತ್ತಿ ಹೆಚ್ಚಾಗಿ ಅದು ಸಿಗದಿದ್ದಾಗ ಮಕ್ಕಳು ಕೋಪಗೊಳ್ಳಲು ಸುಲಭವಾಗಿ ಅನುವು ಮಾಡಿಕೊಡುತ್ತಿದೆ. ಪೋಷಕರು ಮಕ್ಕಳ ಆಸಕ್ತಿಯನ್ನು ಗಮನಿಸಿ ರಚನಾತ್ಮಕ ಕಲೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಆಗ ಪೋಷಕರ ಹಾಗೂ ಮಕ್ಕಳ ನಡುವೆ ಒಳ್ಳೆಯ ಬಾಂದವ್ಯ ಬೆಳೆಯುತ್ತದೆ. ಪೋಷಕರು ಮಕ್ಕಳಿಗೆ ಬೆಂಬಲವಾಗಿ ಇರಬೇಕೇ ವಿನಹ ಅವರ ಮೇಲೆ ನಿಯಂತ್ರಣ ಸಾಧಿಸಲು ಹೋಗಬಾರದು. ಆಗ ಮಕ್ಕಳಲ್ಲಿ ಹತಾಶೆ ಮೈಗೂಡುತ್ತದೆ. ಚಿಕ್ಕ ಮಕ್ಕಳಲ್ಲಂತೂ ಇದು ವಿಕೋಪಕ್ಕೆ ತಿರುಗಿ ಮಕ್ಕಳು ಮೊಂಡು ಹಿಡಿಯುವುದು, ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆಯುವುದು , ಜನಗಳ ಮಧ್ಯೆ ಮುಜುಗರ ತರುವ ಹಾಗೆ ನಡೆದುಕೊಳ್ಳುವುದು ಮುಂತಾಗಿ ಹಲವು ತೊಂದರೆಗಳಿಗೆ ಕಾರಣವಾಗುತ್ತದೆ.
ಮಕ್ಕಳು ಹದಿಹರೆಯಕ್ಕೆ ಬಂದಾಗಲಂತೂ ಈ ಸ್ವಭಾವವು ಸಾಮಾನ್ಯ. ಇದು ವಯೋಸಹಜವೂ ಹೌದು. ದೇಹ ಮನಸ್ಸಿನಲ್ಲಾಗುವ ಬದಲಾವಣೆಗಳೂ, ರಸದೂತಗಳ ಪ್ರಭಾವವೂ ಇದಕ್ಕೆ ಕಾರಣವಾಗುತ್ತದೆ. ಆಗಂತೂ ಪೋಷಕರು ಪ್ರಭುದ್ಧತೆಯಿಂದ, ಸ್ನೇಹಿತರಂತೆ ಮಕ್ಕಳೊಂದಿಗೆ ವ್ಯವಹರಿಸಿ ಮನೆಯಲ್ಲಿ ವಿಶ್ವಾಸಯುತವಾದ ವಾತಾವರಣವನ್ನು ನಿರ್ಮಿಸಬೇಕು. ಸರಿ ತಪ್ಪುಗಳನ್ನು ತಿದ್ದಿ ಅವರಲ್ಲಿ ವಿಶ್ವಾಸ ತುಂಬಿದರೆ ಜೀವನವನ್ನು ಎದುರಿಸುವ ತಯಾರಿ ಆಗುತ್ತದೆ.

ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡ ಸಾಮಾನ್ಯವಾಗಿದೆ. ಈ ಒತ್ತಡವನ್ನು ಸಹಿಸಲಾಗದೆ ಸೋಲಾದಾಗ ಮಕ್ಕಳು ಕುಗ್ಗಿ ಹೋಗುತ್ತಾರೆ. ಜೀವಕ್ಕೂ ತೊಂದರೆ ಮಾಡಿಕೊಳ್ಳಬಹುದು . ಆದ್ದರಿಂದ ಚಿಕ್ಕ ವಯಸ್ಸಿನಿಂದಲೇ ಸೋಲು ಗೆಲುವುಗಳನ್ನು ಸಮಭಾವದಿಂದ ಸ್ವೀಕರಿಸುವ ಪ್ರವೃತ್ತಿ ಮಕ್ಕಳಲ್ಲಿ ಬೆಳೆಸಬೇಕು . ಆಗ ಮುಂದೆ ಅವರು ಆದರ್ಶ ಪ್ರಜೆಯಾಗಿ ರೂಪುಗೊಳ್ಳುತ್ತಾರೆ. ಆದ್ದರಿಂದಲೇ ಹಿರಿಯರು ಹೇಳಿದ “ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ” ಎಂಬ ನಾಣ್ಣುಡಿ ಅಕ್ಷರಶಃ ನಿಜ.


  • ಚೇತನ ಭಾರ್ಗವ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading