ಶ್ರೀಕೃಷ್ಣನ ವಂಶಸ್ಥರೇ ಮೈಸೂರಿನ ಮಹಾರಾಜರು ಎಂದು ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರ ‘ಮರೆತು ಹೋದ ಮೈಸೂರಿನ ಪುಟಗಳು’ ಕೃತಿಯಲ್ಲಿ ತಿಳಿಸಿದ್ದಾರೆ, ರಮ್ಯಾ ರಾಜ್ ಅವರು ಈ ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕದ ಹೆಸರು – ಮರೆತು ಹೋದ ಮೈಸೂರಿನ ಪುಟಗಳು
ಲೇಖಕರು – ಧರ್ಮೇಂದ್ರ ಕುಮಾರ್ ಅರೇನಹಳ್ಳಿ
ಮೊದಲ ಮುದ್ರಣ – 2018
ನಾಲ್ಕನೇ ಮುದ್ರಣ – ಆಗಸ್ಟ್ 2023
ಪ್ರಕಾಶಕರು – ಗೋಮಿನಿ ಪ್ರಕಾಶನ, ತುಮಕೂರು
ಪುಟಗಳ ಸಂಖ್ಯೆ – 102
ಬೆಲೆ – 125 ರೂ
ಈ ಪುಸ್ತಕವು ಒಟ್ಟಾರೆ 50 ಲೇಖನಗಳನ್ನು ಒಳಗೊಂಡಿದೆ.
ಲೇಖಕರು ಮೊದಲಿಗೆ ಶ್ರೀ ಮನ್ಮಹಾರಾಜರವರ ವಂಶಾವಳಿಯ ಬಗ್ಗೆ ತಿಳಿಸುವುದರ ಮೂಲಕ ಪ್ರಾರಂಭಿಸಿದ್ದಾರೆ. ಶ್ರೀಕೃಷ್ಣನ ವಂಶಸ್ಥರೇ ಮೈಸೂರಿನ ಮಹಾರಾಜರು ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ.
“ಯದುರಾಯರು” ಈ ಮೈಸೂರು ಮಹಾರಾಜರ ವಂಶಕ್ಕೆ ಮೂಲ ಪುರುಷರು ಎಂಬ ಅಂಶವನ್ನು ಹಾಗೂ ದ್ವಾರಕಾ ನಗರದಿಂದ, ಮೈಸೂರಿಗೆ ಬಂದ ಹಿನ್ನೆಲೆಯನ್ನು ತಿಳಿಸಿದ್ದಾರೆ.
ಮೈಸೂರಿಗೆ ಬರಲಾಗಿ ಅಲ್ಲಿ ಚಾಮರಾಜ ಮತ್ತು ದೇವಾಜಮ್ಮಣ್ಣಿ ಎಂಬ ದಂಪತಿಗೆ ಹುಟ್ಟಿದ ಕನ್ಯಾ ರತ್ನವನ್ನು ಮದುವೆಯಾಗಿ ಅಲ್ಲಿಯೇ ನೆಲೆ ನಿಂತು ಮೈಸೂರು ಮಹಾರಾಜರ ವಂಶವನ್ನು ಬೆಳೆಸಿದ ಎಂಬ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಾರೆ.
ಜಯಚಾಮರಾಜೇಂದ್ರ ಒಡೆಯರ ಆಳ್ವಿಕೆಯಲ್ಲಿ ಸಾಬು ಎಂಬ ಮುಸಲ್ಮಾನ ವ್ಯಕ್ತಿ ಪಟ್ಟದ ಆನೆಯ ಉಸ್ತುವಾರಿ ಹೊತ್ತಿದ್ದ. ಅವನಿಗೂ ಪಟ್ಟದಾನೆಗೂ ಇದ್ದ ಅವಿನಾಭಾವ ಸಂಬಂಧದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಒಂದು ದಿನ ಯಾವುದೋ ವಿಷ ಘಳಿಗೆಯಲ್ಲಿ ಮದವೇರಿದ ಪಟ್ಟದಾನೆ ಸಾಬುವನ್ನು ಸೊಂಡಿಲಿನಿಂದ ಎತ್ತಿ ದೂರಕ್ಕೆ ಬಿಸಾಡಿ ಬಿಡುತ್ತದೆ . ಪ್ರಾಣಾಪಾಯದಿಂದ ಪಾರದ ನಂತರ ಸಾಬು ವಾರಗಟ್ಟಲೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಾನೆ.ಇತ್ತ ಮದವಿಳಿದ ಪಟ್ಟದಾನೆ ಊಟ ಮಾಡುವುದನ್ನೆ ತ್ಯಜಿಸಿ ಹಠ ಮಾಡುತ್ತದೆ. ನಂತರ ಸರಪಳಿಯನ್ನು ಬಿಚ್ಚಿಸಿಕೊಂಡ ಪಟ್ಟದಾನೆ ಸಾಬೂವಿನ ಮನೆ ಹತ್ತಿರ ಹೋಗಿ ಹೇಗೆ ಸಂತೈಸುತ್ತದೆ ಎಂಬುದನ್ನು ಓದೇ ಅನುಭವಿಸಿ.ಅದಂತೂ ಓದುಗರ ಕಣ್ಣಲ್ಲಿ ನೀರು ತರಿಸುತ್ತದೆ. ಅಂತಹ ಭಾವನಾತ್ಮಕ ಸಂಬಂಧವದು.

ಕನ್ನಂಬಾಡಿ ಕಟ್ಟೆ
ಈ ಅಣೆಕಟ್ಟು ಯೋಜನೆಗೆ ಎರಡು ಕೋಟಿ 75 ಲಕ್ಷ ರೂಪಾಯಿಗಳು ಬೇಕಾಗಿತ್ತು. ಅಚ್ಚರಿಯ ವಿಚಾರ ಏನೆಂದರೆ ಇಡೀ ಮೈಸೂರು ರಾಜ್ಯದ ವಾರ್ಷಿಕ ಆದಾಯ 32 ಲಕ್ಷ ರೂಪಾಯಿಗಳು ಮಾತ್ರವೇ ಆಗಿತ್ತು ಹಾಗೂ ಇಡಿಯ ಆದಾಯವನ್ನೆಲ್ಲ ಈ ಯೋಜನೆಗೆ ಸುರಿಯುವಂತೆಯೂ ಇರಲಿಲ್ಲ.
ಆಗ ಒಡೆಯರು ಹಾಗೂ ರಾಜಮಾತೆಯರು ತೆಗೆದುಕೊಂಡಂತ ತೀರ್ಮಾನ ಐತಿಹಾಸಿಕವಾದದ್ದು. ಅರಮನೆಯ ರಾಜರ ಖಾಸಗಿ ಭಂಡಾರದಲ್ಲಿದ್ದ ಚಿನ್ನ, ಬೆಳ್ಳಿ ವಜ್ರ ವೈಢೂರ್ಯ ಮತ್ತು ಆಭರಣಗಳನ್ನು ನಾಲ್ಕು ಮೂಟೆಗಳಲ್ಲಿ ತುಂಬಿಸಿಕೊಂಡು ಬೊಂಬಾಯಿಗೆ ತೆಗೆದುಕೊಂಡು ಹೋಗಿ ಅಲ್ಲಿ ಮಾರಾಟ ಮಾಡಿ ಬಂದ ಹಣವನ್ನೆಲ್ಲ ಕನ್ನಂಬಾಡಿ ಕಟ್ಟೆಯ ನಿರ್ಮಾಣಕ್ಕೆ ಬಳಸಿದರು. ಇದು ಅರಮನೆಯ ಕಡತಗಳಲ್ಲಿರುವ ಜ್ವಲಂತ ಸತ್ಯ.
ರಾಜರ್ಷಿ ಅನ್ನೋ ಬಿರುದು ಸುಖಾ ಸುಮ್ಮನೆ ಬರಲಿಲ್ಲ ಅಥವಾ ಯಾವ ಹೊಗಳುಭಟ್ಟರು ಕೊಟ್ಟಿದ್ದಲ್ಲ. ಅದರ ಹಿಂದೆ ಮಹಾರಾಜರ ಇಂಥ ನೂರಾರು ತ್ಯಾಗದ ಕಥೆಗಳಿವೆ.
ಇಂಗ್ಲೀಷು ವೈದ್ಯ ಪದ್ಧತಿ
1796 ನೇ ಇಸವಿಯಲ್ಲಿ ಇಡೀ ದಕ್ಷಿಣ ಭಾರತಕ್ಕೆ ಸಿಡುಬು ತನ್ನ ಕೆನ್ನಾಲಿಗೆಯನ್ನು ಚಾಚಿತ್ತು. ಲೆಕ್ಕವಿಲ್ಲದಷ್ಟು ಜನ ಅದರ ಉರಿಯಲ್ಲಿ ಬೆಂದು ಹೋಗಿದ್ದರು. ಆಗ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಚಿಕ್ಕಪ್ರಾಯ. ಆಡಳಿತವನ್ನು ಅವರ ಮಾತೃಶ್ರೀಯವರಾದ ಮಹಾರಾಣಿ ಲಕ್ಷ್ಮಮ್ಮಣ್ಣಿ ದೇವಿಯವರು ನೋಡಿಕೊಳ್ಳುತ್ತಿದ್ದರು. ಇನ್ನು ತಡ ಮಾಡಬಾರದೆಂದು ಅರಿತ ಅವರು ತಕ್ಷಣ ಆಗಿನ ಈಸ್ಟ್ ಇಂಡಿಯಾ ಕಂಪನಿಯ ಮದರಾಸು ಪ್ರಾಂತ್ಯದ ಇಂಗ್ಲಿಷ್ ಅಧಿಕಾರಿಗೆ ಪತ್ರವನ್ನು ಬರೆದು ಸಲಹೆ/ ಸಹಾಯಕ್ಕಾಗಿ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಗ್ಲಿಷ್ ಅಧಿಕಾರಿಯು ಇಂಗ್ಲೆಂಡಿನಿಂದ ಒಬ್ಬ ವೈದ್ಯ ಮತ್ತು ಸಾಕಷ್ಟು ಪ್ರಮಾಣದ ಔಷದ ಸಾಮಗ್ರಿಗಳನ್ನು ಮೈಸೂರಿಗೆ ಕಳುಹಿಸಿಕೊಟ್ಟರು.
ಅಂದಿನವರೆಗೂ ಇಡೀ ದಕ್ಷಿಣ ಭಾರತದಲ್ಲಿ ಎಲ್ಲಿಯೂ ಇಂಗ್ಲಿಷ್ ವೈದ್ಯ ಪದ್ಧತಿಯ ಬಳಕೆ ಇರಲಿಲ್ಲ ಮತ್ತು ಜನರಿಗೆ ಅದು ಗೊತ್ತು ಇರಲಿಲ್ಲ. ಇನ್ನೂ ಅಚ್ಚರಿಯ ವಿಷಯವೆಂದರೆ ಜನರು ಅದನ್ನು ಉಪಯೋಗಿಸಲು ಬಿಲ್ ಕುಲ್ ಒಪ್ಪಿರಲಿಲ್ಲ.
ಆಗ ಮಹಾರಾಣಿ ಅವರು ಮೊದಲ ಪ್ರಯೋಗ ನಮ್ಮ ಅರಮನೆಯ ಸಿಡಿಬು ಪೀಡಿತ ರೋಗಿಷ್ಟರ ಮೇಲೆ ನಡೆಸಿ. ಜನ ರೋಗದಿಂದ ಮುಕ್ತಾಯವಾದ ನಂತರವೇ ಆ ಔಷಧದ ಉಪಯೋಗ ಪಡೆದರು.
ಇದನ್ನೆಲ್ಲಾ ಸುಮ್ಮನೆ ಮೂಕ ಪ್ರೇಕ್ಷಕರಾಗಿ ನೋಡಿದ ಬಾಲಕ ಮುಮ್ಮಡಿಯವರು ತಮ್ಮ 34ನೇ ವಯಸ್ಸಿನಲ್ಲಿ ಆಗಿನ ಮೈಸೂರು ರೆಸಿಡೆಂಟ್ ಅವರ ಜೊತೆ ಚರ್ಚಿಸಿ ತಮ್ಮ ಆಳ್ವಿಕೆಯಲ್ಲಿ 1833ರಲ್ಲಿ ಒಂದು ಇಂಗ್ಲಿಷ್ ವೈದ್ಯ ಶಾಲೆಯನ್ನೂ, ಹಾಗೂ ಒಂದು ಇಂಗ್ಲಿಷ್ ವಿದ್ಯಾಲಯವನ್ನು ಸ್ಥಾಪಿಸಿದರು. ನಮ್ಮ ನಾಡಿಗೆ ಮೊತ್ತ ಮೊದಲ ವ್ಯಾಕ್ಸಿನೇಶನ್ ಬಂದದ್ದು ಹೀಗೆ.
- ಅರಿಕುಟಾರ ಎಂಬ ಊರನ್ನು ‘ಚಾಮರಾಜನಗರ’ ಎಂದು ಏಕೆ ? ಹೆಸರಿಸಲಾಯಿತು. ಹಾಗೂ ರಾಮಗಿರಿ ಎಂಬ ಊರಿಗೆ ಕ್ಲೋಸ್ಪೇಟೆ ಎಂಬ ಹೆಸರಿನ ಹಿನ್ನೆಲೆ ಏನು? ಹಾಗೂ ಕಾಲಾನಂತರದಲ್ಲಿ ಅದನ್ನು ‘ರಾಮನಗರ’ ಎಂದು ಕರೆದ ಬಗೆಯ ವಿವರಣೆಯನ್ನು ನೀಡಿದ್ದಾರೆ.

ವೀರ ಸನ್ಯಾಸಿ
ಈ ಲೇಖನದಲ್ಲಿ ಅರಮನೆಯನ್ನು ಪ್ರವೇಶಿಸಿದ ಸನ್ಯಾಸಿಯೊಬ್ಬರು . ಮೈಸೂರನ್ನು ಕುರಿತು ಬಾಯಿ ತುಂಬಾ ಹಾಡಿ ಹೊಗಳುತ್ತಾರೆ. ಎಲ್ಲವನ್ನೂ ಕಂಡೆ ನಾನಿಲ್ಲಿ, ಆದರೆ ಒಂದೇ ಒಂದು ಕೊರತೆ.. ನನ್ನ ಗಮನಕ್ಕೆ ಬಂತು… ನಿಮ್ಮದೇನು ಅಭ್ಯಂತರವಿಲ್ಲದಿದ್ದರೆ ಹೇಳುತ್ತೇನೆ..ಎಂದು ಅರಸರು ಹಾಗೂ ಮಹಾರಾಣಿ ಅವರನ್ನು ಕುರಿತು ಆ ವೀರ ಸನ್ಯಾಸಿ ಹೇಳುತ್ತಾರೆ.
ದಯಮಾಡಿ ಹೇಳಿ ಎಂದು ಆ ಸನ್ಯಾಸಿಯನ್ನೇ ನೋಡುತ್ತಾ ಕುಳಿತರು…
‘ಹೆಣ್ಣು ಮಕ್ಕಳ ವಿದ್ಯಾಭ್ಯಾಸ..?’
ವಾಣಿವಿಲಾಸ ಸನ್ನಿಧಾನ… ಅವತ್ತೇ.. ಆ ಕ್ಷಣವೇ.. ನಿರ್ಧರಿಸಿಬಿಟ್ಟರು. 1881 ರಲ್ಲಿ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಹೆಣ್ಣು ಮಕ್ಕಳಿಗಾಗಿಯೇ ‘ಮಹಾರಾಣಿ ಕಾಲೇಜು ‘ ಮೈಸೂರಿನಲ್ಲಿ ಪ್ರಾರಂಭಗೊಂಡಿತು. ಅಷ್ಟಕ್ಕೂ.. ಅಂಥಾ ಧ್ಯೇಯೋದಾತ್ತ ವಿಷಯವನ್ನು ಮಹಾರಾಣಿಯವರ ತಲೆಯಲ್ಲಿ ತುಂಬಿ ಹೋದ ಆ ವೀರ ಸನ್ಯಾಸಿಯವರೇ
ಸ್ವಾಮಿ ವಿವೇಕಾನಂದರು.
- ಸರ್ ಎಂ ವಿಶ್ವೇಶ್ವರಯ್ಯನವರಿಗೆ ಆಗ 90ರ ಇಳಿ ವಯಸ್ಸು. ವಿಶ್ರಾಂತ ಜೀವನ ನಡೆಸುತ್ತಾ ಬೆಂಗಳೂರಿನಲ್ಲಿ ವಾಸವಾಗಿದ್ದ ಅವರನ್ನು. ಮೈಸೂರಿನ ಸಯಾಜಿ ರಾವ್ ರಸ್ತೆಯ ಪ್ರಮುಖ ವೃತ್ತಕ್ಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರನ್ನಿಟ್ಟು ಅಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದರು. ಅದರ ಉದ್ಘಾಟನೆಗಾಗಿ ಸರ್ ಎಂ ವಿ ಅವರನ್ನು ಕರೆಸಲಾಗಿತ್ತು.ಮೈಸೂರಿಗೆ ಬಂದ ಅವರನ್ನು ಸರ್ಕಾರಿ ಗೆಸ್ಟ್ ಹೌಸಿನಲ್ಲಿ ಇಳಿಸ ಲಾಗಿತ್ತು. ಉದ್ಘಾಟನೆ ಸ್ಥಳಕ್ಕೆ ಕಾರಿನಲ್ಲಿ ಹೋಗದೆ, ನೋ ,ನೋ ಅದೆಲ್ಲ ಬೇಡ.. ನಾಲ್ವಡಿ ಯವರು ನಮ್ಮನ್ನೆಲ್ಲ ಸಾಕಿ ಸಲಹಿದ ಧಣಿ.. ನಾಡಿನ ಹಿತಕ್ಕಾಗಿ ಸದಾ ಸರ್ವದಾ ನಮ್ಮನ್ನು ತೊಡಗಿಸಿಕೊಂಡ ಮಹನೀಯ.. ಅಂಥವರ ಪ್ರತಿಮೆ ಉದ್ಘಾಟನೆಗೆ ಕಾರಿನಲ್ಲಿ ಹೋಗುವುದೇ.. ಅದಾಗದು.. ನಾನು ಇಲ್ಲಿಂದ ನಡೆದೆ ಅಲ್ಲಿಗೆ ಬರುತ್ತೇನೆ.
ಇದು ಸರ್ ಎಂ ವಿ ಯವರು ತಮ್ಮ ದೊರೆಯ ಮೇಲೆ ಇಟ್ಟಿದ್ದ ಅಭಿಮಾನಕ್ಕೆ, ಪ್ರೀತಿಗೆ ಒಂದು ಸಣ್ಣ ನಿದರ್ಶನ.
- ವೀಣೆಯ ಬೆಡಗಿದು ಮೈಸೂರು – ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಬಿಎಂಶ್ರೀ ಅವರು ಹೇಳಿದ ಮಾತಿದು.ನಾಲ್ವಡಿ ಅವರ ಆಳ್ವಿಕೆಯ ಕಾಲದಲ್ಲಿ ವರ ರಾಜ್ಯದವರಿಗೆ ಮೈಸೂರು ಅಂದ್ರೆ ಏಳು ಸಂಗತಿಗಳು…
ಮೈಸೂರು ಮಹಾರಾಜರು
ಮೈಸೂರು ಪೇಟ
ಮೈಸೂರು ಮಲ್ಲಿಗೆ
ಮೈಸೂರು ಚಿಗುರೆಲೆ
ಮೈಸೂರು ವೀಣೆ
ಮೈಸೂರು ತಾನ
ಮೈಸೂರು ತಿಲ್ಲಾನ
ಹಾಗೇನೇ ಪಂಡಿತೋತ್ತಮರೂ ಮತ್ತು ಸಂಗೀತ ಕಲಾ ರಸಿಕರಿಗೆ ಮೈಸೂರು ಅಂದ್ರೆ
ವೀಣೆ ಶಾಮಣ್ಣ
ವೀಣೆ ಶೇಷಣ್ಣ
ವೀಣೆ ಸುಬ್ಬಣ್ಣ
ವೀಣೆ ವೆಂಕಟ ಸುಬ್ಬಯ್ಯ
ವೀಣೆ ವೆಂಕಟ ಗಿರಿಯಪ್ಪ
ವೀಣೆ ದೊರೆ ಸ್ವಾಮಿ ಅಯ್ಯಂಗಾರ್.
ವೀಣಾ ಪಾಣಿಯಾದ ಸರಸ್ವತಿಯ ವೀಣೆಯನ್ನು ನುಡಿಸಲು ಆಗ ಎರಡೇ ಪ್ರಾಕಾರ ಇದ್ದುದು.
ಮೈಸೂರು ಶೈಲಿ
ತಂಜಾವೂರು ಶೈಲಿ
ಅದರಲ್ಲೂ ಮೈಸೂರು ಶೈಲಿಯ ವೀಣಾವಾದನ ಅತ್ಯಂತ ಪ್ರಸಿದ್ಧ ಹಾಗೂ ಮೋಹಕ. ಇವಷ್ಟೇ ಅಲ್ಲ, ಇನ್ನು ಇಂತಹ ರೋಚಕವಾದ ಸಂಗತಿಗಳನ್ನು ಈ ಪುಸ್ತಕ ಒಳಗೊಂಡಿದೆ.
ಈ ಪುಸ್ತಕವನ್ನು ಓದುತ್ತಾ ಹೋದಂತೆ, ನಮ್ಮ ನಾಡಿನ ಬಗ್ಗೆ ಹಾಗೂ ಒಡೆಯರ ಬಗ್ಗೆ ಬಹಳ ಹೆಮ್ಮೆ ಉಂಟಾಗುತ್ತದೆ.ಇಂತಹ ಸುಸಂದರ್ಭದಲ್ಲಿ ನಾವು ನೆನೆಯಲೇ ಬೇಕಾದವರು ನಮ್ಮ ಮೈಸೂರಿನ ಅರಸರು. ಜೈ ಭುವನೇಶ್ವರಿ.
- ರಮ್ಯಾ ರಾಜ್
