ಮೃದು ಮಾತಿನ ರಂಗ ಗೆಳೆಯ ಕಿರಣ ಭಟ್‌

ಕಿರಣ ಭಟ್‌ ಅವರ ರಂಗ ಉಪ್ಪಿನಕಾಯಿ ‘ರಂಗ ಕೈರಳಿ’ ಹೊರ ರಾಜ್ಯದ ರಂಗಾನುಭವಗಳ ಅಪೂರ್ವ ಸಂಗ್ರಹ.

ಕಳೆದ ಮೂವತೈದು ವರ್ಷಗಳಿಗಿಂತಲೂ ಹೆಚ್ಚುಕಾಲ ನನ್ನ ಒಡನಾಡಿಯಾಗಿರುವ ಕಿರಣ ಭಟ್‌ ಕೇರಳ ರಂಗಭೂಮಿ ಕುರಿತು ಪುಸ್ತಕ ಬರೆದಿದ್ದಾರೆ. ಕಿರಣ್‌ ಶಿರಸಿಯಲ್ಲಿದ್ದ ಕಾಲದಿಂದಲೂ ನನ್ನ ಅವರ ನಡುವೆ ಕೂಡಿಕೆ ಇತ್ತು. ಆಗ ಶಿರಸಿಯಲ್ಲಿ ಅವರು ‘ರಂಗ ಸಂಗ’ ಎಂಬ ತಂಡ ಕಟ್ಟಿಕೊಂಡು ಮಕ್ಕಳ ರಂಗಭೂಮಿಯಲ್ಲಿ ವಿಶಿಷ್ಠವಾಗಿ ಕೆಲಸ ಮಾಡುತ್ತಿದ್ದರು.

97071578_1061252307608487_3798392995531718656_o

– ಗೆಳೆಯ ಹೂಲಿಶೇಖರ್ ಅವರ ಜೊತೆಗೆ ಕಿರಣ ಭಟ್‌

ನಾನು ಆಗ ಅಂಬಿಕಾನಗರದಲ್ಲಿ ಗೆಳೆಯರೊಂದಿಗೆ ‘ಜೋಕುಮಾರಸ್ವಾಮಿ ಕಲಾ ಬಳಗ’ ಕಟ್ಟಿಕೊಂಡು ಓಡಾಡುತ್ತಿದ್ದೆ. ನಮ್ಮಿಬ್ಬರದೂ ವೃತ್ತಿ ಬೇರೆ ಬೇರೆ. ಅವರು ‘ಭಾರತ್‌ ದೂರ ಸಂಚಾರ ನಿಗಮ’ ದಲ್ಲಿ ಕೆಲಸ ಮಾಡುತ್ತಿದ್ದರೆ ನಾನು ‘ಕರ್ನಾಟಕ ವಿದ್ಯುತ್ ನಿಗಮ’ ದಲ್ಲಿ ಕೆಲಸ ಮಾಡುತ್ತಿದ್ದಿದ್ದೆ.

ನನಗೆ ಬೊಮ್ಮನಬಳ್ಳಿ ಆಣೆಕಟ್ಟು ನಿರ್ಮಾಣ ಕಾರ್ಯದಲ್ಲಿ, ನಾಗಝರಿ ಸುರಂಗ ತೋಡುವ ಕೆಲಸದಲ್ಲಿ,
‘ಶೇಕ್ಸಪಾಯಿಂಟ್‌’ ನಲ್ಲಿ ಸರ್ಜ್‌ ಟ್ಯಾಂಕ-ಪೆನ್‌ ಸ್ಟಾಕ್‌ ನಿರ್ಮಾಣದಲ್ಲಿ ಕೆಲಸವಿದ್ದರೆ ಅವರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ತಂತಿ ಎಳೆಯುವ, ಬೆಟ್ಟ-ಗುಡ್ಡದಲ್ಲಿ ಟವರು ಹಾಕುವ ಕೆಲಸ ಅಂತೆಲ್ಲಾ ದಿನವಿಡೀ ದುಡಿಮೆ. ದಿನನಿತ್ಯ ನಾನು ಹಿಂದೀ, ಮಲಯಾಳೀ, ತಮಿಳು, ತೆಲುಗರ ಜೊತೆ ಕೆಲಸ ಮಾಡುತ್ತಿದ್ದರೆ ಕಿರಣರದೂ ನಿತ್ಯದ ಉದ್ಯೋಗವೂ ಅಂಥದ್ದೇ. ನಾವಿಬ್ಬರೂ ಶಿಕ್ಷಕರಲ್ಲ. ನಮ್ಮ ಜೊತೆ ನಾಟಕಾಸಕ್ತರು ಇದ್ದರೇ ವಿನಃ ವಿದ್ಯಾರ್ಥಿಗಳ ದಂಡು ಇರಲಿಲ್ಲ. ಜೊತೆಗಿದ್ದವರಿಗೆ ನಾಟಕ ನೋಡುವ ಆಸಕ್ತಿ ಇತ್ತೇ ವಿನಃ ನಾಟಕ ಮಾಡುವ ಆಸಕ್ತಿ ಇರಲಿಲ್ಲ. ಆದರೆ ಕಿರಣರು ಶಿರಸಿಯಲ್ಲಿ ಇದ್ದುದರಿಂತ ಇದಕ್ಕೆ ಕೊಂಚ ಅಪವಾದವಾಗಿದ್ದರು. ಅಲ್ಲಿ ನಾಟಕ ಸಂಸ್ಕೃತಿಯ ಬೇರುಗಳು ಮೊದಲಿನಿಂದ ಇದ್ದವು. ಶಿರಸಿ ಯಕ್ಷಗಾನದ ಫಲವತ್ತಾದ ಸೀಮೆ. ಗೆಳೆಯ ಕಿರಣ ಭಟ್ಟರು ಇದನ್ನು ತಮ್ಮ ಸೇವಾವಧಿಯಲ್ಲಿ ಎಲ್ಲರೊಗೂಡಿ ಅಲ್ಲಿ ತಮ್ಮ ರಂಗಕೈಂಕರ್ಯವನ್ನು ಸರಿಯಾಗಿ ಬಳಸಿಕೊಂಡರು. ನಮ್ಮಿಬ್ಬರದು ವೃತ್ತಿ
ಬೇರೆ ಬೇರೆ ಯಾಗಿದ್ದರೂ ಪ್ರವೃತ್ತಿ ಒಂದೇ ಆಗಿತ್ತು. ಇಬ್ಬರ ಸ್ವಭಾವದಲ್ಲೂ ನಾವಿಬ್ಬರೂ ಒಂದೇ. ಹೆಚ್ಚು ಮಾತಿಲ್ಲ. ಸ್ವಭಾವದಲ್ಲಿ ಸೌಮ್ಯ. ನಾಟಕ ಮತ್ತು ಸಂಸಾರಗಳನ್ನು ಇಬ್ಬರೂ ಅಷ್ಟೇ ಪ್ರೀತಿಸುವವರು.

arunima

– ಧರ್ಮಪತ್ನಿಯೊಂದಿಗೆ ಕಿರಣ ಭಟ್

ನಾನು ಶಿರಸಿಗೆ ಹೋದಾಗಲೆಲ್ಲ ಅವರ ಮನೆಯಲ್ಲಿ ಮಿಡಿ ಉಪ್ಪಿನಕಾಯಿ ಊಟ ಮಾಡದೆ ಬರುವವನಲ್ಲ. ಅವರ ಶ್ರೀಮತಿಯವರದು ಅಮೃತ ಹಸ್ತ. ಮಗ ಇನ್ನೂ ತೀರ ಚಿಕ್ಕವನಿದ್ದ. ನಾವು ಪರಸ್ಪರ ಸಾಹಿತ್ಯ, ರಂಗಭೂಮಿ ಕಾರ್ಯಕ್ರಮ ಏರ್ಪಡಿಸಿಕೊಂಡಾಗ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಮಾಡುತ್ತಿರಲಿಲ್ಲ. ಹೀಗಾಗಿ ಶಿರಸಿ, ಹೆಗಡೆಕಟ್ಟಾ, ಯಲ್ಲಾಪುರ ಎಲ್ಲಿಯೇ ಕಿರಣರ ರಂಗ ಕಾರ್ಯವಿದ್ದರೆ ನಾನು ಹೋಗಿದ್ದೇನೆ. ಹಾಗೆಯೇ ಅಂಬಿಕಾನಗರ, ದಾಂಡೇಲಿ, ಜೋಯಡಾ ಎಲ್ಲಿಯೇ ನಾನು ರಂಗೋತ್ಸವ ಮಾಡಿದರೂ ಕಿರಣ ಭಟ್‌ ಬಂದು ಹೋಗಿದ್ದಾರೆ. ಇದು ನಮ್ಮಿಬ್ಬರ ಸಸ್ನೇಹ ರಂಗ ಪ್ರೀತಿ ಅನ್ನಿ. ನಾನು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯನಾಗಿದ್ದ ಸಂದರ್ಭದಲ್ಲಿಯೇ ಕಿರಣರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಬಂತು ಎಂಬುದು ನನಗೆ ದುಪ್ಪಟ್ಟು ಸಂತೋಷ ತಂದ ವಿಷಯ.

ರಂಗ ಕೈರಳಿ

ಇಂಥ ಗೆಳೆಯ ರಂಗಭೂಮಿ ಕುರಿತು ಪುಸ್ತಕ ಬರೆದಿದ್ದಾನೆ ಅನ್ನುವುದೇ ನನಗೆ ಸಂತೋಷದ ಸಂಗತಿ. ಅದೂ ನಮಗೆ ಅಷ್ಟಾಗಿ ಗೊತ್ತಿರದ ಮಲಯಾಳಿ ರಂಗಭೂಮಿಯನ್ನು ಕಣ್ಣಾರೆ ನೋಡಿ ಕನ್ನಡಿಗರೊಂದಿಗೆ ಹಂಚಿಕೊಂಡಿದ್ದಾರೆ. ನಮಗೆ ಕನ್ನಡ ರಂಗಭೂಮಿಯ ಬಗ್ಗೆಯೇ ಸರಿಯಾಗಿ ಗೊತ್ತಿಲ್ಲ. ಎಷ್ಟೋ ಮಂದಿ ಬೆಂಗಳೂರಿನಲ್ಲಿ ಇರುವುದೇ ಕರ್ನಾಟಕದ ರಂಗಭೂಮಿ ಅಂದುಕೊಂಡಿದ್ದಾರೆ. ನಮ್ಮ ಬಾಯಲ್ಲಿ ಹತ್ತು ಜನ ನಟರು, ನಿರ್ದೇಶಕರು, ನಾಟಕಕಾರರ ಹೆಸರು ಹೇಳಲು ಬರುವದಿಲ್ಲ. ಹೇಳಿದರೂ ಅವರು ಬೆಂಗಳೂರು ಮೂಲದವರೇ ಆಗಿರುತ್ತಾರೆ. ಬೆಂಗಳೂರು ಮತ್ತು ಬೆಂಗಳೂರೇತರ ರಂಗಭೂಮಿಯೇ ಸಮಗ್ರ ಕರ್ನಾಟಕ ರಂಗಭೂಮಿಯಾಗಬೇಕು ಅನ್ನುವವರಲ್ಲಿ ನಾನೂ ಒಬ್ಬ. ಇಲ್ಲಿ ಒಂದು ಪುಸ್ತಕ ಬರೆದವರೇ ದಿಗ್ಗಜರು. ದಿಗ್ಗಜರಿಗೆ ಇನ್ನೊಬ್ಬರು ಅರ್ಥವಾಗುವುದಿಲ್ಲ. ಅವರಿಗೆ ಬೇರೆಯವರ ಬಗ್ಗೆ
ತಿಳಿಯುವದಿಲ್ಲ. ತಿಳಿದುಕೊಳ್ಳುವ ಆಸಕ್ತಿಯೂ ಇರುವುದಿಲ್ಲ.

arunima

– ಕಿರಣ್ ಭಟ್ ಅವರ ಪುಸ್ತಕ ರಂಗ ಕೈರಳಿ

ಇಂಥ ಸಂದರ್ಭದಲ್ಲಿ ನಮ್ಮ ಪಕ್ಕದ ಕೇರಳ ರಂಗಭೂಮಿಯ ಬಗ್ಗೆ ಕಿರಣ ಭಟ್ಟರು ಎಚ್ಚರಿಸುತ್ತಾರೆ. ನಮ್ಮ ನೆರೆ ಹೊರೆಯ ರಂಗಭೂಮಿಯ ಬಗ್ಗೆ ನಮ್ಮ ಆಸಕ್ತಿ ಕೆರಳುವಂತೆ ಮಾಡಿದ್ದಾರೆ. ಕನ್ನಡ ರಂಗಭೂಯಿಲ್ಲಿ ಕೆಲಸ ಮಾಡಿ ಇನ್ನೊಂದು ರಂಗಭೂಮಿಯ ಬಗ್ಗೆ ತಿಳಿಯವ ಅವರ ಆಸಕ್ತಿ ನಮಗಿರಬೇಕಾದ ಬಹುಮುಖ್ಯ ಕಾಳಜಿಗಳಲ್ಲೊಂದು.

ಪ್ರಾದೇಶಿಕ ಆಹಾರ ಮತ್ತು ರಂಗಾಸಕ್ತಿ
ನಾವು ಸೇವಿಸುವ ಆಹಾರಕ್ಕೂ ನಮ್ಮಲ್ಲಿ ಅಡಗಿರುವ ರಂಗಾಸಕ್ತಿಗೂ ಕಾಣದ ಸಂಭಂದವಿದೆ ಅನಿಸುತ್ತದೆ. ಆಕಾರಣಕ್ಕೇ ಕೆಳಸ್ತರದ ಸಮುದಾಯದವರಿಗೆ ಕ್ಷುದ್ರ ದೇವತೆಗಳು ಮತ್ತು ಆ ಕುರಿತ ಆರಾಧನೆ ಕಲೆಯಾಗಿ ಬಂದಿರಬಹುದೇನೋ.

97071578_1061252307608487_3798392995531718656_o

– ನಾಟಕದ ತಾಲೀಮಿನಲ್ಲಿ ಕಿರಣ್ ಭಟ್

ಅದರಂತೆ ಸಾತ್ವಿಕ ಆಹಾರ ಸೇವಿಸುವವರಲ್ಲಿ ಭಾವನಾತ್ಮಕ ಕಲೆಯ ತೂಕ ಹೆಚ್ಚಾಗಿರಬೇಕು ಎಂಬುದು ನನ್ನ ಅನ್ನಿಸಿಕೆ. ಕೇರಳದಲ್ಲಿ ತೆಂಗಿನ ಗರಿಯ ಅಂಗಡಿಗಳಲ್ಲಿ ಸಿಗುವ ಮೀಟರ್‌ ‘ಕಟ್ಟಾ ಚಾಯ್‌’ ಕುಡಿಯದಿದ್ದರೆ, ಕಾಕಾ ಹೊಟೆಲ್ಲುಗಳಲ್ಲಿ ಪರೋಟಾ ಸೇರ್ವಾ ತಿನ್ನದಿದ್ದರೆ, ಕುಸುಬಲಕ್ಕಿ ಅನ್ನ-ಗಂಜಿ ಸವಿಯದಿದ್ದರೆ, ನೇಂದ್ರ ಬಾಳೇಹಣ್ಣು, ತೆಂಗಿನಕಾಯಿ ಚಟ್ನಿ ತಿನ್ನದಿದ್ದರೆ ಅಲ್ಲಿಯ ಯಾವ ಕಲೆಯೂ ನಮಗೆ ಅರ್ಥವಾಗುವುದಿಲ್ಲ.

ಎರ್ನಾಕುಲಂ, ಕಾಸರಗೋಡು, ಜಿಲ್ಲೆಗಳಲ್ಲಿ ನಾನೂ ಸುತ್ತಾಡಿ ಬಂದಿದ್ದೇನೆ. ಅಲ್ಲಿಯ ಜನಸಂಪರ್ಕ ನನಗೂ ಕೊಂಚ ಮಟ್ಟಿಗೆ ಇರುವುದರಿಂದ ಕಿರಣರ ಈ ಪುಸ್ತಕ ನನಗೆ ಹೆಚ್ಚು ಅಪ್ಯಾಯಮಾನವಾಯಿತು. ಆದರೆ ಕಿರಣರು ಅಭ್ಯಸಿಸಿದ ರೀತಿಯಲ್ಲಿ ನಾನು ಅಲ್ಲಿಯ ರಂಗಭೂಮಿಯ ಆಳಕ್ಕೆ ಇಳಿದಿರಲಿಲ್ಲ.
ಒಮ್ಮೆ ಮಾತ್ರ ಅಲ್ಲಿಯ ಪ್ರಸಿದ್ಧ ನಾಟಕಕಾರ ಶ್ರೀ ಶಂಕರ ಪಿಳ್ಳೆಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಆದರೆ ಗೆಳೆಯ ಕಿರಣ ಭಟ್ಟರು ನೋಡಿದ ಹಾಗೆ ಅಲ್ಲಿಯ ನಾಟಕಗಳನ್ನು ನೋಡುವ ಅವಕಾಶ ನನಗೆ ಸಿಗಲಿಲ್ಲ. ರಂಗ ಕೈರಳಿ ಓದುತ್ತಿದ್ದಂತೆ ನನಗೆ ಕಳೆದುಹೋದ ಅನುಭವವೊಂದು ಮತ್ತೆ ಸಿಕ್ಕಂತೆ ಖುಶಿಪಟ್ಟೆ. ಅಲ್ಲಿಯ ಅಕಾಡೆಮಿಯ ಕಾರ್ಯಪದ್ಧತಿ, ವೃತ್ತಿ ಮತ್ತು ಹವ್ಯಾಸಿ ನಾಟಕಗಳು ನೀಡುವ ಅನುಭವಗಳನ್ನು ಕಿರಣ ಇಲ್ಲಿ ಚನ್ನಾಗಿ ನಿರೂಪಿಸಿದ್ದಾರೆ.

COOK3

– ಕಿರಣ ಭಟ್ ಅವರ ನಿರ್ದೇಶನದ ನಾಟಕ

ಕಿರಣ ಭಟ್‌ರು ಕೇರಳಕ್ಕೆ ವೃತ್ತಿ ಕಾರಣದಿಂದ ಹೋದರೂ ಬಹುಬೇಗ ಅಲ್ಲಿಯ ಸಾಮಾಜಿಕ ಜೀವನಕ್ಕೆ
ಹೊಂದುಕೊಂಡುಬಿಟ್ಟರು. ಎಲ್ಲರೊಂದಿಗೆ ಒಂದಾಗುವ ಗುಣ ರಂಗಕರ್ಮಿಗಳಿಗೆ ಸಹಜ ಸಿದ್ಧವಾಗಿರುತ್ತದೆ. ಅಲ್ಲಿಯ ಊಟ ರಕ್ತವಾದಾಗ ನಾವೂ ಅಲ್ಲಿಯವರೇ ಆಗಿಬಿಡುತ್ತೇವೆ. ಅದರಿಂದ ಅವರ ಒಳ ಮನಸ್ಸು ಬಲು ಬೇಗ ಬೆಸೆದುಹೋಗುತ್ತದೆ. ಇದು ಕಿರಣ ಭಟ್ಟರನ್ನು ಅಲ್ಲಿಯ ಸಾಂಸ್ಕೃತಿಕ ಬದುಕು ತನ್ನ ತೆಕ್ಕೆಗೆ ಎಳೆದುಕೊಂಡಿದೆ.

ಕೇರಳದ ರಂಗ ಬದುಕಿಗೂ ನಮ್ಮ ರಂಗ ಬದುಕಿಗೂ ಸಾಕಷ್ಟು ವ್ಯತ್ಯಾಸವಿದೆ. ಅದನ್ನು ಕಿರಣ ಭಟ್ಟರು ಇಲ್ಲಿ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅಲ್ಲಿಯ ‘ಚವಿಟ್ಟು ನಾಡಕಂ’, ‘ವೈಶಾಲಿ’ ನಾಟಕಗಳನ್ನು ಕುತೂಹಲದಿಂದ ನಮಗೆ ನೆನಪಿಸಿದ್ದಾರೆ. ಅಲ್ಲದೆ ಕನ್ನಡದ ಸಂಪ್ರದಾಯ ಬದ್ಧ ಕುಟುಂಬದಲ್ಲಿ ನಡೆದ ಅಂದಿನ ಕಾಲದ ಪ್ರಗತಿಪರ ಧೋರಣೆಗಳುಳ್ಳ ಮತ್ತು ಕನ್ನಡದ ಮೊದಲ ಸಾಮಾಜಿಕ ನಾಟಕವೆಂದು ಪ್ರಸಿದ್ಧವಾದ ಸೂರಿ ವೆಂಕಟರಮಣ ಶಾಸ್ತ್ರಿಗಳ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಸಂಗ’ ಕ್ಕೂ, ಕೇರಳದ ಪ್ರಗತಿಪರ ನಾಟಕಕಾರ ಭಟ್ಟಾದ್ರಿಪಾಡ್‌ ಎಂಬ ನಾಟಕಕಾರ ಬರೆದ ‘ಅಡುಕ್ಕಳಯಿಲ್‌ ನಿನ್ನುಂ
ಅರಂಗೇಟತ್ತೇಕ್‌’ ನಾಟಕಕ್ಕೂ ಹೆಚ್ಚು ಸಾಮ್ಯವಿದೆ ಎಂದು ಹೇಳುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೇರಳದಲ್ಲಿ ಅತ್ಯಂತ ಹೀನಾಯ ಸಂಪ್ರದಾಯಗಳು ಆಚಣೆಯಲ್ಲಿದ್ದುವು. ಅಲ್ಲಿಯ ನಂಬೂದರಿಗಳ ಹೆಣ್ಣಿನ ಶೋಷಣೆ ಮಿತಿಮೀರಿತ್ತು. ಅಲ್ಲಿ ಕುಟುಂಬದ ಹಿರಿಯ ಮಗನಿಗೆ ಮಾತ್ರ ಮದುವೆ ಮಾಡುವ ಪದ್ಧತಿ. ಇದನ್ನು ವಿರೋಧಿಸಿ ಬರೆದ ನಾಟಕಕಾರ ಭಟ್ಟಾದ್ರಿಪಾಡ್‌ ವಂದನೀಯನೇ. ಹಾಗೇ ಸೂರಿ ಶಾಸ್ತ್ರಿಗಳು ಕೂಡ. ಇದರ ಬಗ್ಗೆ ಕಿರಣ್‌ ವಿವರವಾಗಿ ಬರೆದಿದ್ದಾರೆ.

97071578_1061252307608487_3798392995531718656_o

ಕೇರಳದಲ್ಲಿ ಇವರಿಗೆ ಉಣ್ಣಿಕೃಷ್ಣನ್‌ ಎಂಬ ರಂಗ ಸ್ನೇಹಿತ ಸಿಗುತ್ತಾನೆ. ಉಣ್ಣಿ ಇಲ್ಲಿ ಕಿರಣ್‌ ಭಟ್ಟರ ಈ ಕೃತಿಯನ್ನು ಓದಲು, ಮತ್ತು ಕೇರಳದ ರಂಗ ಸಂಸ್ಕೃತಿಯನ್ನು ಅರಿಯಲು ನಮಗೆ ಸಂಗ್ಯಾಬಾಳ್ಯಾದ ದೂತಿಯಂತೆ ನೆರವಾಗುತ್ತಾನೆ. ಕೇರಳದಲ್ಲಿ ಇಂಗ್ಲೀಷ ನಾಟಕಗಳ ಅನುವಾದಗಳೂ ನಡೆಯುತ್ತಿವೆ ಎಂಬ ಮಾಹಿತಿ ಕೊಡುತ್ತಾರೆ. ‘ಓಲ್ಡ ಮ್ಯಾನ್‌ ಎಂಡ್‌ ಸೀ’ ಎಂಬ ನಾಟಕ ಅಭೂತಪೂರ್ವವಾಗಿ ಪ್ರಯೋಗವಾಗಿದ್ದನ್ನೂ ಹೇಳುತ್ತಾರೆ. ಅಲ್ಲಿ ಸಿದ್ಧವಾದ ನಾಟಕ ‘ಮ್ಯಾಕ್‌ಬೆತ್‌ ‘ ಪ್ರಯೋಗಕ್ಕೆ ಐವತ್ತು ಲಕ್ಷದಷ್ಟು ಖರ್ಚಾಯಿತೆಂದರೆ ನಮಗೆ ಅಚ್ಚರಿಯೇ.

ಅಲ್ಲಿ ಸಂಗೀತ ಪ್ರಧಾನವಾದ ಪೌರಾಣಿಕ ನಾಟಕಗಳೂ ನಡೆಯುತ್ತವೆ. ಹವ್ಯಾಸಿ ನಾಟಕಗಳೂ ನಡೆಯುತ್ತವೆ. ‘ಪ್ರತಿದಿನ ನಾಟಕ’ ಎಂಬ ಕಲ್ಪನೆಯೇ ನಮಗೆ ಥ್ರಿಲ್‌ ಕೊಡುವಂಥದ್ದು. ಅಂಥ ಥ್ರಿಲ್‌ ಕೇರಳದಲ್ಲಿ ಆಗುತ್ತಿದೆ ಎಂದು ಕಿರಣ್‌ರ ಲೇಖನದಿಂದ ತಿಳಿಯುತ್ತದೆ. ಅಲ್ಲಿಯ ಚೆಂದದ ಸೆಟ್‌ಗಳು, ಶ್ರೇಷ್ಠ ದರ್ಜೆಯ ನಟ ನಟಿಯರು ನಾಟಕವನ್ನು ಉತ್ತುಂಗಕ್ಕೆ ತಂದಿದ್ದಾರೆ ಎಂದು ಅವರು ಹೇಳಿದ್ದು ಸುಳ್ಳಲ್ಲ.
ಕಿರಣ್‌ ಇಲ್ಲಿಯ ತಮ್ಮ ಅನಿಸಿಕೆಗಳನ್ನು ದಾಖಲಿಸಲು ವಿಷಯ ವಿಂಗಡನೆ ಮಾಡುತ್ತ ಅಲ್ಲಿಯ ರಂಗ ವಿವರಗಳನ್ನು ದಾಖಲಿಸುತ್ತ ಹೋಗುತ್ತಾರೆ. ಅವರ ಸರಳ ನಿರೂಪಣೆ ಆಕರ್ಷಿಸುವ ವಿಷಯ ಮಂಡನೆಗಳು ನನಗೆ ಹೆಚ್ಚು ಖುಶಿಕೊಟ್ಟವು.

97071578_1061252307608487_3798392995531718656_o

– ಕಿರಣ ಭಟ್ ಅವರ ನಿರ್ದೇಶನದ ನಾಟಕ

ಕೇರಳದ ದೇವಸ್ಥಾನಗಳು ಮತ್ತು ಅಲ್ಲಿ ಕಟ್ಟಿರುವ ‘ನಾಟಕ ಮನೆ’ಗಳ ವಿವರ ಓದುವುದೇ ಮನಸ್ಸಿಗೆ ಮುದ ನೀಡುವ ಸಂಗತಿ. ಕೇರಳಾದ್ಯಂತ ಸುತ್ತಾಡಿ ನಾಟಕ ನೋಡಿ ಬಂದ ಕಿರಣ ನಮಗೆ ಅಲ್ಲಿಯ ಹೊಸದೊಂದು ರಂಗ ದರ್ಶನ ಮಾಡಿಸುತ್ತಾರೆ. ನಿಜಕ್ಕೂ ಕನ್ನಡಕ್ಕೆ ಈಗಾಗಲೇ ಇಂಥ ಅನೇಕ ಕೃತಿಗಳು ಬರಬೇಕಿತ್ತು. ಈಗ ಕಿರಣ ಈ ಪುಸ್ತಕ ಬರೆದು ನಾಂದಿ ಹಾಡಿದ್ದಾರೆ. ಇಡೀ ಪುಸ್ತಕ ಓದಿದ ಮೇಲೆ ನನಗಂತೂ ತುಂಬ ಖುಶಿಯಾಯಿತು. ಮರಾಠಿ, ಬೆಂಗಾಲಿ, ಹಿಂದೀ ಸುತ್ತ ಗಿರಕಿ ಹೊಡೆಯುತ್ತಿದ್ದ ನಮ್ಮ ಪ್ರಬುದ್ಧರು ಈಗ ಕೇರಳದತ್ತ ವಾಲುವುದು ಅನಿವಾರ್ಯ. ಅದನ್ನು ಸಾಧಿಸಿ ಕೊಟ್ಟ ಕಿರಣ್‌ ಗೆ ಅಭಿನಂದಿಸಲೇ ಬೇಕು. ಅವರಿಂದ ಇಂಥ ರಂಗ ಪರಿಚಯಾತ್ಮಕ ಕೃತಿಗಳು ಇನ್ನಷ್ಟು ಬರಲಿ.

ಇಲ್ಲಿ ಹೇಳುವ ಇನ್ನೊಂದು ಮಾತಿದೆ. ಕೈಯಲ್ಲಿ ರಂಗ ಕೈರಳಿಯನ್ನು ಇಟ್ಟುಕೊಂಡಾಗ ಪುಸ್ತಕದ ಮುದ್ರಣ, ವಿನ್ಯಾಸ ಮನಸ್ಸನ್ನು ಅರಳಿಸದೆ ಇರದು. ಈ ಪುಸ್ತಕವನ್ನು ಬೆಂಗಳೂರಿನ ಬಹುರೂಪಿ ಚಂದವಾಗಿ ಪ್ರಕಟಿಸಿದೆ. ಅವರಿಗೂ ಅಭಿನಂದನೆ.

  • ಹೂಲಿಶೇಖರ್ (ರಾಜ್ಯಪ್ರಶಸ್ತಿ ಪುರಸ್ಕೃತರು- ನಾಟಕಕಾರ- ಚಿತ್ರ ಸಂಭಾಷಣಾಕಾರ)

cropped-30411-bf2fb3_598d7b8de0f44f1280cea3ca2b5e61demv2.jpg

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW