‘ಸೆಲೆಕ್ಟ್ ಬುಕ್ ಶಾಪ್’ ಮಾಲೀಕ ಇನ್ನಿಲ್ಲ

 ಪುಸ್ತಕ ಓದುವ ಹವ್ಯಾಸವನ್ನು ಹುಟ್ಟುಹಾಕಿದ, ಅಲ್ಲದೇ ಅದನ್ನು ಸತತವಾಗಿ ಪೋಷಿಸಿದವರಲ್ಲಿ ಶ್ರೀ ಕೆ ಕೆ ಎಸ್ ಮೂರ್ತಿ ಪ್ರಮುಖರು. ಅವರಿಗೆ ರಾಘವನ್ ಚಕ್ರವರ್ತಿ ಅವರಿಂದ ಅಕ್ಷರ ನಮನಗಳು… 

೯೩ರಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬಂದಾಗ, ಅವರ ಅಂಗಡಿ ಬ್ರಿಗೇಡ್ ರೋಡಿಗೆ ಸ್ಥಳಾಂತರವಾಗಿಯಾಗಿತ್ತು. ಮೊದಲ ಹಲವು ಬಾರಿ ಅವರ ಅಂಗಡಿಗೆ ಎಡತಾಕಿದಾಗ ಯಾವು ಪುಸ್ತಕ ಕೊಳ್ಳುವುದು ಎಂಬ ಗೊಂದಲದಿಂದ ವಾಪಸ್ ಬಂದದ್ದುಂಟು. ’ತಾತ ರೇಗಲಿಲ್ವಾ? ಹಾಗೆ ಕಳಿಸಿದರಾ??’ ಎಂಬ ಪ್ರಶ್ನೆ ಹಲವರು ಕೇಳಿದ್ದುಂಟು.

ಶ್ರೀ ಮೂರ್ತಿ

ಓದನ್ನು ಸೀರಿಯಸ್ ಆಗಿ ತೆಗೆದುಕೊಂಡ ಮೇಲೆ ಸುಮಾರು ಒಂದು ವರ್ಷದ ಬಳಿಕ ಮತ್ತೆ ಹೋದೆ. ನನ್ನನ್ನು ಮರೆತಿರಬಹುದು ಎಂದು ಎಣೆಸಿದ್ದೆ. ಅವರ ನೆನಪು ಅಗಾಧ. ಅಲ್ಲದೇ ಮೂರ್ತಿ ಮಹಾ ಇಂಗ್ಲಿಶ್ ಪ್ರಿಯರು. ವ್ಯಾಕರಣಾತ್ಮಕವಾಗಿ, ಅಲಂಕಾರಾತ್ಮಕವಾಗಿಯೂ ಒಳ್ಳೆಯ ಇಂಗ್ಲಿಶ್ ಮಾತನಾಡುತ್ತಿದ್ದರು. ಒಂಥರಾ ಸಿ.ಡಿ.ನರಸಿಂಹಯ್ಯ ಕಾಲದವರಿರಬಹುದೆಂದು ಗುಮಾನಿ ಬರುತ್ತಿತ್ತು. ” so…in all these days were you contemplating on which books to buy” ಎಂದು ನಕ್ಕರು. “Not really sir” ಎಂದೆ. ಪ್ರಶ್ನಾರ್ಥಕವಾಗಿ ನೋಡಿದರು. ಮತ್ತೆ ಅದೇ ಗೊಂದಲ. ಪತ್ತೇದಾರಿ ಓದುವ ಅಭ್ಯಾಸವಿತ್ತು. ಮೈಸೂರಿನ ಸ್ಟರ್ಲಿಂಗ್ ನಲ್ಲಿ “The Day of the Jackal” ಸಿನಿಮಾ ನೋಡಿ ಥ್ರಿಲ್ ಆಗಿತ್ತು. ಫೋರ್ಸಿಥ್ ರ ಆ ಕಾದಂಬರಿ ಮತ್ತು “The Odessa File”, ಎರಡೂ ಕೃತಿಗಳನ್ನು ಕೊಂಡೆ. ಬಹುಶಃ ನಾನು ಕಾಸು ಕೊಟ್ಟು ಕೊಂಡ ಮೊದಲ ಎರಡು ಇಂಗ್ಲಿಶ್ ಕೃತಿಗಳು :-). .. ಫೋರ್ಸಿಥ್ ಬಗ್ಗೆ ಮೂರ್ತಿ ಒಂದು ಲಘು ವಿಮರ್ಶೆಯನ್ನೂ ಮಾಡಿದ್ದರು:

“He (Forsyth)derives his sense of logic through the real incidents he had witnessed and hence his narratives are very close to reality, unlike Ian Fleming” ಎನ್ನುತ್ತಲೇ “ಇಬ್ಬರ ಪುಸ್ತಕಗಳನ್ನೂ ನಾನು ಮಾರುತ್ತೇನೆ..I can’t be partial towards logic, you see”
ಎಂದು ತಮ್ಮ ಮೆಲು ದನಿಯಲ್ಲೇ ಗಹಗಹಿಸುತ್ತಿದ್ದರು.

ಒಂದೆರೆಡು ವರ್ಷದ ಹಿಂದೆ, ಇರಾ ಸೆಳಿಯನ್ ರ ಕೃತಿಗಾಗಿ ತಡಕಾಡುತ್ತಿದ್ದೆ. ತುರ್ತು-ಪರಿಸ್ಥಿತಿಯ ಕಾಲಘಟ್ಟದಲ್ಲಿ ನಡೆದ ದೌರ್ಜನ್ಯ ಕುರಿತಾದ ’ಶಾ ಆಯೋಗ’ ದ ವರದಿ ೧೯೮೦ ರಲ್ಲಿ ಬಂದಿತ್ತು. ಆದರೆ ಕಾಂಗ್ರೆಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಾಗಿತ್ತು. ಶಾ ಆಯೋಗದ ಎಲ್ಲಾ ವರದಿಗಳನ್ನೂ ನಾಶಪಡಿಸಲಾಯಿತು. ಇರಾ ಸೆಳಿಯನ್ ಅಂದರೆ ರಾಜಗೋಪಾಲ ಸೆಳಿಯನ್ (ಡಿಎಂಕೆ ಸ್ಥಾಪಾಕ ನೆಡುಂಚೆಳಿಯನ್ ರ ಸೋದರ) ತಮಿಳುನಾಡಿನಿಂದ ೧೯೭೮ರಲ್ಲಿ ರಾಜ್ಯಸಭೆಗೆ ಪ್ರವೇಶಿಸಿದ್ದರು. ಜೆಪಿಯವರ ತೀವ್ರ ಪ್ರಭಾವಕ್ಕೆ ಒಳಗಾಗಿದ್ದವರು. ೧೯೮೦ ರ ಶಾ ಆಯೋಗದ ವರದಿಯ ಪ್ರತಿಯೊಂದನ್ನು ಹೇಗೋ ಜತನವಾಗಿರಿಸಿಕೊಂಡಿದ್ದರು. ೨೦೧೦ ರ ವರೆಗೂ ಸಂಯಮದಿಂದ ಕಾದು, ತಮ್ಮದೇ ಮುನ್ನುಡಿ ಮತ್ತು ಹಲವು ಒಳನೋಟಗಳ ಲೇಖನದೊಂದಿಗೆ ಪ್ರಕಟಿಸಿದರು.

ಮಗ ಸಂಜಯ್ ರೊಂದಿಗೆ ತಮ್ಮ ಪುಸ್ತಕಾರಣ್ಯದಲ್ಲಿ

ಮೂರ್ತಿಯವರಲ್ಲಿ ಈ ವರದಿ ಅಥವಾ ಕೃತಿಯ ಬಗ್ಗೆ ವಿಚಾರಿಸಿದೆ. ’ಸದ್ಯಕ್ಕಿಲ್ಲ..’ ಎನ್ನುತ್ತಾ ಹಲವು ತುರ್ತು-ಪರಿಸ್ಥಿಗೆ ಸಂಧಿಸಿದ ಕೃತಿಗಳ ಬಗ್ಗೆ ಹೇಳುತ್ತಾ ಹೋದರು. ಕುಲದೀಪ್ ನಯ್ಯರ್, ಜಫ್ರೆಲೋಟ್-ಅನಿಲ್, ಕೂಮಿ ಕಪೂರ್ ಇತ್ಯಾದಿ. ಯಾವುದೇ genreನ ಕೃತಿ, ಲೇಖಕರ ಬಗ್ಗೆ ಮೂರ್ತಿ ನಿಖರವಾಗಿ ಮಾತನಾಡುತ್ತಿದ್ದರು.

ಸಾಮಾನ್ಯವಾಗಿ ತಮ್ಮ ಸೆಲೆಕ್ಟ್ ಬುಕ್ ಶಾಪ್ ನ ಮೇಲು ಮಹಡಿಯಲ್ಲಿಯೇ ಕುಳಿತಿಕೊಳ್ಳುತ್ತಿದ್ದ ಮೂರ್ತಿ, ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾದರು. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಭೇಟಿನೀಡಿದ್ದಾಗ ತಮ್ಮ ಪುಸ್ತಕಾರಣ್ಯದ ಒಳಗೆ ಅತ್ಯಂತ ಹಳೆಯ ಇಂಗ್ಲಿಶ್ ಪುಸ್ತಕವೊಂದರ ಮೇಲೆ ಕಣ್ಣಾಡಿಸುತ್ತಿದ್ದರು.

ಒಂದಷ್ಟು ಮಂದಿಯೂ ಪುಸ್ತಕ ತಪಾಸಣೆಗೆಂದು ಬಂದಿದ್ದರು. ನಂತರ ಮಾತನಾಡಿಸೋಣವೆಂದು ಕೆಳಗಿಳಿದು ಅವರ ಮಗ ಸಂದೀಪ್‍ರೊಡನೆ ಸ್ವಲ್ಪ ಹರಟಿ ವಾಪಸಾದೆ. ಮತ್ತೆ ಮೂರ್ತಿಯವರ ಭೇಟಿಯಾಗಲೇ ಇಲ್ಲ. ಅದಕ್ಕಾಗಿ ವಿಷಾದವಿದೆ.

ಇಂದು ಬ್ರಿಗೇಡ್ ರಸ್ತೆ, ಎಂಜಿ ರಸ್ತೆಯ ಆಸುಪಾಸಿನಲ್ಲಿ ಹಳೆಯ ಕೃತಿಗಳನ್ನು, ಕ್ಲಾಸಿಕ್‍ಗಳನ್ನು ಮಾರಾಟಮಾಡುವ ಹಲವು ಅಂಗಡಿಗಳು ಬಂದಿವೆ. ಬಹುತೇಕ ಎಲ್ಲಾ ಪ್ರಕಾಶಕರೂ ಸ್ನೇಹಮಯಿಗಳೇ…ಆದರೆ ಮೂರ್ತಿ ಮತ್ತವರ ಸೆಲೆಕ್ಟ್ ಬುಕ್ ಶಾಪ್‍ನದ್ದೇ ಒಂದು ತೂಕ.

ತಂದೆಯಷ್ಟೇ ವೈವಿಧ್ಯ ಓದುಗರಾದ, ಅಪಾರ ಸಹನೆಯ ಸಂಜಯ್ , ಪುಸ್ತಕದರ್ಶನ-ಮನನದ ಕಾಯಕ ಯಶಸ್ವಿಯಾಗಿ ಮುಂದುವರೆಸಲಿ.


  • ರಾಘವನ್ ಚಕ್ರವರ್ತಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading