2024ರಲ್ಲಿ ನಾನು ಹೆಚ್ಚಾಗಿ ಓದಿದ್ದು ಯುವ ಕಥೆಗಾರರ ಸಂಕಲನಗಳನ್ನು. ಅವುಗಳ ಪೈಕಿ ಒಂದು ಕಿರಣ್ ಕುಮಾರ್ ಅವರ ‘ಕಾಜೂ ಬಿಸ್ಕೆಟ್’. ಸುಮಾರು ಹನ್ನೆರಡು ಕಥೆಗಳಿರುವ, ಎರಡು ಬಾರಿ ಪ್ರತಿಷ್ಠಿತ ಛಂದ ಬಹುಮಾನದಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಈ ಸಂಕಲನವನ್ನು ಲೇಖಕರೇ ಪ್ರಕಟಿಸಿದ್ದಾರೆ. ಕೃತಿಯ ಕುರಿತು ಕತೆಗಾರ ವಿನಾಯಕ ಅರಳಸುರಳಿ ಅವರ ಅಭಿಪ್ರಾಯವನ್ನು ತಪ್ಪದೆ ಓದಿ …
ಪುಸ್ತಕ : ಕಾಜೂ ಬಿಸ್ಕೆಟ್
ಲೇಖಕರು : ಕಿರಣ್ ಕುಮಾರ್
ಪ್ರಕಾರ : ಕತೆಗಳು
ಕಥೆ ಹೇಳುವಿಕೆಯಲ್ಲಿ ಹಲವಾರು ಬಗೆಗಳಿವೆ. ಅಥವಾ ಅವನ್ನು ತಂತ್ರ ಎಂದೂ ಕರೆಯಬಹುದೇನೋ? ಹೇಳಬೇಕಾದ ವಿಷಯಗಳನ್ನು ಪ್ರಸ್ತುತ ಪಡಿಸುವುದಕ್ಕೆ ಕಥೆಗಾರ ಆಯ್ಕೆ ಮಾಡಿಕೊಳ್ಳುವ ದಾರಿ ಅಥವಾ ರೀತಿಗಳವು. ಘಟನೆಗಳು, ಪ್ರತಿಮೆಗಳು, ಭಾವನೆಗಳು, ವರ್ಣನೆ, ನಿರೂಪಣಾ ಶೈಲಿ.. ಇವೆಲ್ಲ ಒಂದು ಕಥೆಯನ್ನು ಓದುಗರ ಎದೆಗೆ ದಾಟಿಸಲಿಕ್ಕೆ ಕಥೆಗಾರನಿಗೆ ಒದಗಿಬರುವ ತಂತ್ರಗಳು. ಪ್ರತಿಯೊಬ್ಬ ಕಥೆಗಾರನೂ ಇವುಗಳ ಪೈಕಿ ತನಗೆ ಬೇಕಾದ ಸಂಯೋಜನೆಯಲ್ಲಿ, ಬೇಕಾದಂಥ ಅನುಪಾತದಲ್ಲಿ ಬಳಸಿಕೊಳ್ಳುತ್ತಾನೆ. ಇದೊಂದು ಅಪ್ರಜ್ಞಾಪೂರ್ವಕ ಕ್ರಿಯೆಯಾದರೂ ಅಂತಿಮವಾಗಿ ಓದುಗರನ್ನು ತಾಕುವ ವಿಷಯದಲ್ಲಿ ಮುಖ್ಯ ಪಾತ್ರ ವಹಿಸುವುದು ಇದೇ.

‘ಕಾಜೂ ಬಿಸ್ಕೆಟ್’ ನಲ್ಲಿನ ಬಹುತೇಕ ಎಲ್ಲ ಕಥೆಗಳೂ ಮನುಷ್ಯನ ಆಳ ಮನಸ್ಸಿಗೆ ಹಿಡಿದ ಕನ್ನಡಿಗಳಂಥವು. ತಲೆಕೆಳಗಾದ ಬಿಂಬಗಳಂತೆ ಸೂಚ್ಯವಾಗಿ ಗೋಚರಿಸುವ ಇವನ್ನು ಸರಿಪಡಿಸಿ ಅರ್ಥಮಾಡಿಕೊಳ್ಳುವುದರಲ್ಲೊಂದು ಮಜವಿದೆ. ಘಟನೆಗಳಿಗಿಂತ ಮುಖ್ಯವಾಗಿ ಇವು ಆಧರಿಸಿರುವುದು ಮನುಷ್ಯನ ಮನಸ್ಸನ್ನು ಹಾಗೂ ಮನಸ್ಥಿತಿಯನ್ನು. ಸಂಘ ಜೀವಿಗಳಾದ ನಾವು ಪ್ರತಿದಿನ ಹತ್ತಾರು ಜನರ ಜೊತೆ ಒಡನಾಡುತ್ತೇವೆ. ಉದ್ದೇಶ ಎಷ್ಟೇ ಅಫೀಶಿಯಲ್ ಆಗಿದ್ದರೂ, ಸ್ವಾರ್ಥದ್ದೋ ಇಲ್ಲಾ ಸ್ವ-ಹಿತಾಸಕ್ತಿಯದ್ದೋ ಆಗಿದ್ದರೂ, ಎಲ್ಲದರ ಮೂಲದಲ್ಲಿ ಕೆಲಸ ಮಾಡುವ ನಮ್ಮಗಳ ಅಂತರಂಗ, ಅಫೀಷಿಯಲ್ ಕೊಂಡಿಗಳನ್ನೂ ಮೀರಿ ಮತ್ಯಾವುದಕ್ಕೋ ನಮ್ಮನ್ನು ಬೆಸೆದು ಬಿಡುತ್ತದೆ. ಹೀಗೆ ದಕ್ಕುವ ಒಡನಾಟಗಳ ನಡುವೆ ನಾವು ಕಲಿಯುತ್ತ, ಕಲಿಸುತ್ತ, ಅರಳುತ್ತ, ಮುದುಡುತ್ತ ಹೋಗುತ್ತೇವೆ. ಶಹರದ ಕಾರ್ಪೋರೇಟ್ ಹಾಗೂ ತತ್ಸಮಾನ ಜಗತ್ತುಗಳಲ್ಲಿ ಘಟಿಸುವ ದೈನಿಕವಿದು. ಅಂಥ ಸರ್ವೇ ಸಾಮಾನ್ಯ ಕಥೆಗಳನ್ನು ಲೇಖಕರು ಅಂತರಂಗದ ಭಾಷೆಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ‘ಶ್ರೀಧರ ನನಗೆ ಚೆನ್ನಾಗಿ ಗೊತ್ತು’ ಕಥೆಯಲ್ಲಿ ಮುಖ್ಯ ಪಾತ್ರಧಾರಿಯಾದ ಶ್ರೀಧರ ಕೇಳುವ ‘ಏನಾದರೂ ಜೀವ ಇರುವಂಥದ್ದು ಮಾತಾಡ್ತೀರ?’ ಎಂಬ ಪ್ರಶ್ನೆ ಇಡೀ ಕಾರ್ಪೋರೇಟ್ ಜಗತ್ತಿನದ್ದು ಮಾತ್ರವಲ್ಲದೇ ಬರಿದೆ ಲಾಭ, ನಷ್ಟ, ಏಳಿಗೆ, ಫಾಯಿದೆಗಳ ಸುತ್ತ ಸುತ್ತುವ ನಮ್ಮೀ ವ್ಯಾವಹಾರಿಕ ಜಗತ್ತಿಗೇ ಕೇಳುವ ಪ್ರಶ್ನೆಯಾಗಿದೆ. ಹೀಗೆ ನೂರೆಂಟು ಲೆಕ್ಕಾಚಾರಗಳ ನಡುವೆ ನಾವು ಮರೆತಿರುವ ಅನೇಕ ಸೂಕ್ಷ್ಮ ದನಿಗಳನ್ನು ಈ ಸಂಕಲನ ಮರು ನುಡಿದಿದೆ.
ಈ ಸಂಕಲನದಲ್ಲಿ ಗಮನ ಸೆಳೆಯುವ ಮತ್ತೊಂದು ಕಥೆ ಸಂಕಲನದ ಶೀರ್ಷಿಕೆಯೂ ಆಗಿರುವ ‘ಕಾಜೂ ಬಿಸ್ಕೆಟ್’. ನಾಗರೀಕ ಸಮಾಜದ ಅವಿಭಾಜ್ಯ ಅಂಗಗಳಾದ ನಾವೆಲ್ಲ ನೂರಾರು ನಿಯಮ, ಕಾಯಿದೆ, ಶಿಕ್ಷೆಗಳಿಂದ ಸುತ್ತುವರಿಯಲ್ಪಟ್ಟಿದ್ದೇವೆ. ‘ಸರಿ’ ಎನ್ನುವ ಆ ತೆಳು ಗೆರೆಯಾಚೆಗೆ ತುಸುವೇ ಜಾರುವ ಚಿಕ್ಕ ಕೃತ್ಯವೂ ಶಿಕ್ಷೆಯ ಮಡಿಲಿಗೆ ಜಾರಬೇಕು. ಅದು ನಿಯಮ. ಆದರೆ ಆ ನಿಯಮಗಳು ಅನ್ವಯವಾಗುವುದು ಯಾರಿಗೆ? ಸರಿ ಗೆರೆಯ ತುಸುವೇ ದಾಟಿದ ವ್ಯಕ್ತಿಯೊಬ್ಬನಿಗೆ ಬೀಳುವ ಛಡಿಯೇಟು ಅದರಾಚೆಗೆ ಮಹಾ ಜಿಗಿತವನ್ನೇ ಜಿಗಿದವನಿಗೂ ಬೀಳುತ್ತದೆಯೇ? ಪುಸ್ತಕದಲ್ಲಿನ ನಿಬಂಧನೆಗಳೆಲ್ಲ ಕೇವಲ ಅವನ್ನು ಜಯಿಸಲಾಗದವರನ್ನಷ್ಟೇ ಬಂಧಿಸುವ ದುರ್ಬಲ ಪಾಶಗಳೇ? ಈ ಎಲ್ಲ ಪ್ರಶ್ನೆಗಳನ್ನೂ ಮನೋಜ್ಞವಾಗಿ ಒಂದು ಚೌಕಟ್ಟಿನೊಳಗೆ ಕೂರಿಸಿ ಕಟ್ಟಿದ ಕಥೆ ‘ಕಾಜೂ ಬಿಸ್ಕೆಟ್’. ಅನ್ಯಾಯ, ಅವ್ಯವಸ್ಥೆಗಳ ವಿರುದ್ಧ ಹೂಡುವ ಬಾಣಗಳೆಲ್ಲ ನಮ್ಮ ಸಮಾಜದಲ್ಲಿ ಹೇಗೆ ಗುರಿತಪ್ಪುತ್ತಿವೆ ಎಂಬುದನ್ನು ಚಿಕ್ಕದಾಗಿ, ಅಷ್ಟೇ ಪ್ರಖರವಾಗಿ ಹೇಳಿ ಇದು ಮುಗಿದಿದೆ. ಅಷ್ಟಕ್ಕೂ ಇದು ಮುಗಿದ ಬಿಂದುವಿನಿಂದಲೇ ನಮ್ಮ ಅಂತಃಪ್ರಜ್ಞೆ ಶುರುವಾಗಬೇಕಿದೆ.

ಮೇಲೆ ಹೇಳಿದ ವಿಷಯಗಳನ್ನು ಹೊರತುಪಡಿಸಿ ನೋಡಿದರೂ ಕಾಜೂ ಬಿಸ್ಕೆಟ್ ಇಷ್ಟವಾಗುವುದು ಅದರೊಳಗಿನ ಮನುಷ್ಯ ಸಂಬಂಧಗಳ ಚಿತ್ರಣದಿಂದ. ಸಂಬಂಧವೇ ಕಳಚಿಕೊಂಡ ಮೇಲೂ ಅಗೋಚರ ಕೊಂಡಿಗಳ ಮೂಲಕ ಹರಿದು ಬರುವ ತಲೆತಲೆಮಾರುಗಳ ಶಾಪ, ವೈಮನಸ್ಯಗಳು, ಗೊತ್ತೇ ಆಗದಷ್ಟು ಸೂಕ್ಷ್ಮವಾಗಿ ಫ್ರಾಕ್ಚರ್ ಆಗಿರುವ ಬದುಕಿನ ಎಕ್ಸ್ ರೇ ಹಿಡಿದು ಅದರ ಚಿಕಿತ್ಸೆಗಾಗಿ ಓಡಾಡುವ ನಾವುಗಳು, ಜೀವನದ ಒಂದೇ ತೆರನಾದ ಕಷ್ಟಗಳಿಂದ ಕವಲೊಡೆಯುವ ಆಸ್ತಿಕತೆ-ನಾಸ್ತಿಕತೆಗಳು, ಈ ಎರಡೂ ಒಂದೇ ಕಾರಿನ ಆಚೀಚೆ ಸೀಟಿನಲ್ಲಿ ಕುಳಿತು ನೆಮ್ಮದಿಯನ್ನರಸಿ ಒಂದೇ ದಿಕ್ಕಿನಲ್ಲಿ ಅಲೆಯುವಂತೆ ಮಾಡುವ ಈ ಬದುಕಿನ ವಿಚಿತ್ರ ಶಕ್ತಿ.. ಇಂಥಾ ಸರಕುಗಳಿಂದಲೇ ಇಲ್ಲಿನ ‘ಇಪ್ಪತ್ತೊಂದನೇ ಕ್ರೋಮೋಸ಼ೋಮು’, ‘ಒಂದು ಮಧ್ಯಾಹ್ನ’ ಕಥೆಗಳು ಹುಟ್ಟಿವೆ. ಎಲ್ಲೂ ವಾಚ್ಯವಾಗದೇ ಏನೆಲ್ಲವನ್ನೋ ಹೇಳುವ ಇವುಗಳ ಸೂಚ್ಯ ಹರಿವು ಇಷ್ಟವಾಗುತ್ತದೆ. ಅಲ್ಲಲ್ಲಿ ಎದಿರಾಗುವ ‘ಹೀಗೆಲ್ಲ ಆಟ ಆಡಿಸಿ ಮಹತ್ವ ತೋರಿಸುವುದಾದರೆ ಸರ್ವಶಕ್ತ ಹೇಗಾಗಲು ಸಾಧ್ಯ?’ ಎನ್ನುವಂಥ ಸಾಲುಗಳು ಎಲ್ಲ ನಂಬಿಕೆಗಳನ್ನೂ ಸಂತೈಸುತ್ತಲೇ ಜಿಜ್ಞಾಸೆಗಳನ್ನು ಇಂಜೆಕ್ಟ್ ಮಾಡುತ್ತವೆ. ತನಗೆ ಶಾಪ ತಟ್ಟಲೆಂದು ಅಣ್ಣ ದೇವಸ್ಥಾನದಲ್ಲಿ ತೂಗುಹಾಕಿದ ಗಂಟೆಯನ್ನು ಹುಡುಕುತ್ತ ತಮ್ಮ ‘ನನ್ನ ಎದೆಗೆ ಹೊಡೆಯುವ ಗಂಟೆ ಯಾವುದು? ಎಲ್ಲಿದೆ ಅದು’ ಎಂದು ಅರಸುವ ಸನ್ನಿವೇಶ ಓದುಗರನ್ನು ಗಾಢವಾಗಿ ತಟ್ಟುತ್ತದೆ.
ಒಟ್ಟಾರೆಯಾಗಿ ‘ಕಾಜೂ ಬಿಸ್ಕೆಟ್’ ಮತ್ತೆ ಮತ್ತೆ ಓದಿಕೊಳ್ಳಬಹುದಾದ ಹಲವು ಕಥೆಗಳಿರುವ ಸಂಕಲನ. ಮೇಲೆ ಹೇಳಿದ ಹಾಗೆ ಇಲ್ಲಿನ ಎಲ್ಲ ಕಥೆಗಳ ಕೊನೆಯ ನಿಲ್ದಾಣದಲ್ಲೇ ನಮ್ನಮ್ಮ ಅಂತಃಪ್ರಜ್ಞೆಗಳ ಮೊದಲ ಹೆಜ್ಜೆಯಿದೆ. ನಾವು ಚಿಲ್ಲರೆಯಂತೆ ಕಳೆದು ಮುಂದಕ್ಕೆ ಧಾವಿಸುವ ಬದುಕಿನ ಕೋಟ್ಯಾಂತರ ಸಾದಾ ನಿಮಿಷಗಳಿಗೂ ಇಷ್ಟು ಸೂಕ್ಷ್ಮವಾದ ಅರ್ಥಗಳಿದ್ದವೇ ಹಾಗೂ ಅವು ಇಷ್ಟು ಸರಳವಾಗಿದ್ದವೇ ಎಂಬ ಪ್ರಶ್ನೆಯೊಂದು ಒಳಗಿನಿಂದ ಎದ್ದು ಬಂದ ಬಳಿಕವೇ ಈ ಸಂಕಲನ ಕೊನೆಯಾಗುತ್ತದೆ.
ಹಾಗೂ ಚಿಂತನೆಗಳು ಶುರುವಾಗುತ್ತವೆ.
- ವಿನಾಯಕ ಅರಳಸುರಳಿ
