‘ಕೋಳಿ ಎಸ್ರು’ ಸಿನಿಮಾ ಕುರಿತು ಒಂದಿಷ್ಟು ವಿಷಯ

ಅಂತಾರಾಷ್ಟ್ರೀಯ ಪ್ರಶಸ್ತಿಗಳಿಸಿದ್ದ ಚಂಪಾ ಶೆಟ್ಟಿಯವರ ನಿರ್ದೇಶನದ ‘ಕೋಳಿ ಎಸ್ರು’ ಸಿನಿಮಾದ ಕುರಿತು ಲೇಖಕ ರವೀಂದ್ರ ಕೆ. ಆರ್. ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

‘ಕೋಳಿ ಎಸ್ರು’ ಎಂಬ ಕುದಿ ಕುದಿದು ಸಿಡಿದೇಳುವ ಹೆಣ್ಣಿನ ಒಳಗುದಿಯ ಅನಾವರಣ. ವಿಮರ್ಶಕ ವಲಯದಲ್ಲಿ ತುಂಬಾ ಮೆಚ್ಚುಗೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳಿಸಿದ್ದ, ನಿರ್ದೇಶಕಿ ಚಂಪಾ ಶೆಟ್ಟಿಯವರು ನಿರ್ದೇಶಸಿದ ‘ಕೋಳಿ ಎಸ್ರು’ ಎಂಬ ಚಲನಚಿತ್ರ ಇತ್ತೀಚೆಗೆ ದೊಡ್ಡ ಪರದೆಯ ಮೇಲೆ ಬಿಡುಗಡೆಯಾಗಿತ್ತು.

ಚಂಪಾ ಶೆಟ್ಟಿಯವರು ಈ ಹಿಂದೆ ನಿರ್ದೇಶಸಿದ್ದ, ಕಾಡುವ ವಿಷಾದಗಾನದಂತಹಾ ‘ಅಮ್ಮಚ್ಚಿಯೆoಬ ನೆನಪು’ ಚಿತ್ರದಲ್ಲಿ, ಕುಂದಾಪುರ ಕನ್ನಡ ನೆಲದ ಎರಡು ತಲೆಮಾರುಗಳ ಹೆಣ್ಣುಗಳ ಬದುಕಿನ ಬವಣೆ, ತಲ್ಲಣಗಳನ್ನೂ, ಅವರು ಅದನ್ನು ಸ್ವೀಕರಿಸುವ – ಎದುರಿಸುವ ಪರಿಯನ್ನೂ ತುಂಬಾ ಪರಿಣಾಮಕಾರಿಯಾಗಿ ಕಟ್ಟಿ ಕೊಟ್ಟಿದ್ದರು.

ಈ ‘ಕೋಳಿ ಎಸ್ರು’ ಚಿತ್ರದಲ್ಲಿ ಬಯಲು ಸೀಮೆಯ ಗ್ರಾಮೀಣ ಪರಿಸರದ ಬಡತನ, ಹಿಂಸೆಗಳ ಬೇಗೆಯಲ್ಲಿ ಬೇಯುವ ಹಾಗೂ ಕೊನೆಗೆ ಬಿಡುಗಡೆ ಅರಸಿ ಹೊರಡುವ ಒಬ್ಬ ಗಟ್ಟಿಗಿತ್ತಿ ಹೆಣ್ಣಿನ ಕಥೆಯನ್ನು ಅಷ್ಟೇ ಪರಿಣಾಕಾರಿಯಾಗಿ ಕಟ್ಟಿ ಕೊಟ್ಟಿದ್ದಾರೆ.

ಕಾಲ, ದೇಶ, ಆರ್ಥಿಕ ಸ್ಥಿತಿ, ಸಂದರ್ಭಗಳು ಬೇರೆಯವಾಗಿದ್ದರೂ, ಪುರುಷ ಪಾರಮ್ಯದ ದಬ್ಬಾಳಿಕೆಯಲ್ಲಿ ನಲುಗುವ ಎಲ್ಲ ಹೆಣ್ಣು ಮಕ್ಕಳ ಬದುಕಿನ ಬವಣೆಗಳೂ ಒಂದೇ ಆಗಿರುತ್ತವೆ. ರೂಪು ರೇಷೆಗಳು ಸ್ವಲ್ಪ ಬೇರೆ ಬೇರೆಯಾಗಿರಬಹುದಷ್ಟೇ. ಜೊತೆಗೆ ಬಡತನ ಹಾಗೂ ಆರ್ಥಿಕ ಅತಂತ್ರತೆ ಕಾಡಿದರಂತೂ ಅವರ ಬದುಕು ಅತೀ ದಾರುಣವಾಗುತ್ತದೆ.

ದಮನಕಾರಿ ಗಂಡನನ್ನು ಬಿಟ್ಟು ಕೊನೆಯಲ್ಲಿ ತವರಿಗೆ ಹಿಂದಿರುಗಿ ಬರುವ ಆ ಅಮ್ಮಚ್ಚಿಗೂ, ಸದಾ ಹಿಂಸಿಸುವ ಕುಡುಕ, ದುರುಳ, ಪೀಡಕ ಗಂಡನಿಂದ ಬೇಸತ್ತು ಪುಟ್ಟ ಮಗಳೊಡನೆ
ಮನೆಬಿಟ್ಟು ಹೊರನಡೆವ ಈ ಹುಚ್ಚೀರಿಯ ಬದುಕಿಗೂ ತುಂಬಾ ಸಾಮ್ಯತೆಯಿದೆ. ಜೊತೆಗೆ, ದಬ್ಬಾಳಿಕೆ, ಹಿಂಸೆಗಳು ಅಸಹನೀಯವಾದರೆ, ಹೆಣ್ಣು ಸಹಿಸುವುದು ಅನಿವಾರ್ಯವಲ್ಲ, ಬದಲಿಗೆ ಬಂಡಾಯವೇಳುವ, ವಿಮೋಚನೆಯ ಹಾದಿ ಹಿಡಿಯುವ ಅವಶ್ಯಕತೆಯನ್ನು ಸೂಚಿಸುವ ಸ್ತ್ರೀ ಸಂವಾದೀ ಸಂದೇಶಗಳು ಈ ಎರಡೂ ಚಿತ್ರಗಳಲ್ಲಿವೆ.

ಶ್ರೀಯುತ ಕಾ. ತ. ಚಿಕ್ಕಣ್ಣ ಅವರ ‘ಹುಚ್ಚೀರಿಯ ಎಸರಿನ ಪ್ರಸಂಗ’ ಎಂಬ ಕಥೆ ಆಧರಿಸಿ, ಚಂಪಾ ಶೆಟ್ಟಿಯವರು ಒಂದು ಚಿಕ್ಕ ಹಾಗೂ ಚೊಕ್ಕ ಚಿತ್ರ ನೀಡಿದ್ದಾರೆ. ಚಿತ್ರಕಥೆಯ ನಿರೂಪಣೆ, ಮಂಡನೆ, ಛಾಯಾಗ್ರಾಹಣ, ಹಿನ್ನೆಲೆ ಸಂಗೀತ ಎಲ್ಲದರಲ್ಲೂ ಒಂದು perfectionist ಸ್ಪರ್ಶವಿದೆ. ಎಲ್ಲಾ ಪಾತ್ರಗಳ ನಿರ್ವಹಣೆ ಬಲು ಸಹಜವಾಗಿ ಮೂಡಿ ಬಂದಿದೆ. ಅದರಲ್ಲೂ ಅಕ್ಷತಾ ಪಾಂಡವಪುರ ಅವರoತೂ ತಾವೇ ಹುಚ್ಚೀರಿ ಎಂಬಂತೆ ಜೀವಿಸಿ ಅಭಿನಯಿಸಿದ್ದಾರೆ. ಹಾಗೂ ಹುಚ್ಚೀರಿಯಾಗಿ ಮನದಲ್ಲಿ ಉಳಿದು ಬಿಡುತ್ತಾರೆ.

This slideshow requires JavaScript.

 

ಹಳ್ಳಿಗಳಲ್ಲೇ ಹುಟ್ಟಿ ಬೆಳೆದು, ಇಂತಹ ಸಂಕಷ್ಟಗಳಲ್ಲಿ ಸಿಲುಕಿದ ಅನೇಕ ಹೆಣ್ಣು ಮಕ್ಕಳ ಬದುಕನ್ನು ತುಂಬಾ ಹತ್ತಿರದಿಂದ ಕಂಡ ನನಗೂ, ನನ್ನ ಶ್ರೀಮತಿಗೂ ಈ ಚಿತ್ರ ಸಹಜವಾಗಿ ತುಂಬಾ ಅಪ್ತವಾದದ್ದoತೂ ನಿಜ.

ನಾಯಕನ ಕೆಟ್ಟ ನಡತೆ, ಸಮಾಜಘಾತುಕ, ಕೊಲೆಪಾತಕ ಗುಣಗಳೇ ವಿಜೃಂಭಿಸಿ, ಅವೇ ಸಮಾಜಕ್ಕೆ ಆದರ್ಶವಾಗಿಬಿಡಬಲ್ಲ ಅಪಾಯಕಾರಿ ಸಂದೇಶ ಹೊತ್ತು ಬರುತ್ತಿರುವ ಸಾಲು ಸಾಲು ದೊಡ್ಡ ಬಜೆಟ್ ಸಿನೆಮಾಗಳ ಇಂದಿನ ದಿನಮಾನಗಳಲ್ಲಿ, ಇಂಥಹಾ ಸೂಕ್ಷ್ಮ ಸoವೇದನೆಯ ಸಿನಿಮಾಗಳು ಅಪರೂಪ. ನಾವು ಪ್ರೇಕ್ಷಕರು ಇಂಥಹಾ ಚಿತ್ರಗಳನ್ನು ನೋಡುವುದರ ಮೂಲಕ ಸಧಭಿರುಚಿಯ ಚಿತ್ರಗಳನ್ನು ಪ್ರೋತ್ಸಾಹಿಸಬೇಕು. ನೀವೂ ಈ ಚಿತ್ರ ನೋಡಿ.

ಚಂಪಾ ಶೆಟ್ಟಿ ಯವರಿಂದ ಹೀಗೆಯೇ ಮತ್ತಷ್ಟು content ಇರುವ ಹೊಸ ಹೊಸ ಸಿನೆಮಾಗಳನ್ನು ನೀಡುವ ಸಾಹಸ ಮುಂದುವರೆಯಲಿ. ಅವರಿಗೂ ಅವರ ತಂಡಕ್ಕೂ ಅಭಿನಂದನೆಗಳು.


  • ರವೀಂದ್ರ ಕೆ. ಆರ್.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading