ಶ್ರೀನಗರದ ಅತ್ಯಂತ ಪ್ರಮುಖ ಆಕರ್ಷಣೆಯಾದ ಅಮರನಾಥ ಗುಹೆ ಹಿಂದೂಗಳ ನಂಬಿಕೆಯ ಪ್ರಕಾರ, ಶಿವನಿಗೆ ಮುಡಿಪಾಗಿರುವ ತೀರ್ಥ ಕ್ಷೇತ್ರ. ಈ ಪವಿತ್ರ ಕ್ಷೇತ್ರದ ಕುರಿತು ಸೌಮ್ಯ ಸನತ್ ಅವರು ‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದಲ್ಲಿ ಪರಿಚಯಿಸಲಿದ್ದಾರೆ. ತಪ್ಪದೆ ಮುಂದೆ ಓದಿ…
ಹಿಮಾಲಯದ ಡಾಕ್ ನಲ್ಲಿರುವ ಭಗವಾನ್ ಶಿವನಿಗೆ ಸಮರ್ಪಿತವಾದ ಅಮರನಾಥ ದೇವಾಲಯವು ಹಿಂದೂಗಳ ಯಾತ್ರಾ ಸ್ಥಳಗಳಲ್ಲಿ ಒಂದಾದ ಪ್ರಮುಖ ಯಾತ್ರಾ ಕ್ಷೇತ್ರ. ಈ ಪವಿತ್ರ ದೇವಾಲಯವು ಶ್ರೀನಗರದ ಈಶಾನ್ಯಕ್ಕೆ 135 ಕಿಮೀ ದೂರದಲ್ಲಿದ್ದು ಎತ್ತರವು ಸಮುದ್ರ ಮಟ್ಟದಿಂದ ಸುಮಾರು 13 ಸಾವಿರ, 600 ಅಡಿ ಎತ್ತರದಲ್ಲಿದೆ. ಈ ಪವಿತ್ರ ಗುಹೆಯ ಉದ್ದ 19 ಮೀಟರ್, ಅಗಲ 16 ಮೀಟರ್ ಮತ್ತು ಎತ್ತರ 11 ಮೀಟರ್ ಹೊಂದಿದೆ. ಈ ಗುಹೆಯು ಸುಮಾರು 5,000 ವರ್ಷಗಳಷ್ಟು ಪುರಾತನವಾದುದು ಎನ್ನಲಾಗಿದೆ. ಶ್ರೀನಗರದ ಅತ್ಯಂತ ಪ್ರಮುಖ ಆಕರ್ಷಣೆಯಾದ ಅಮರನಾಥ ಗುಹೆ ಹಿಂದೂಗಳ ನಂಬಿಕೆಯ ಪ್ರಕಾರ, ಶಿವನಿಗೆ ಮುಡಿಪಾಗಿರುವ ತೀರ್ಥ ಕ್ಷೇತ್ರ. ಭಗವಾನ್ ಶಂಕರನು ಅಮರತ್ವದ ರಹಸ್ಯವನ್ನು ತಾಯಿ ಪಾರ್ವತಿಯ ಬಳಿ ಹೇಳಿದ ಸ್ಥಳವೇ ಈ ಅಮರನಾಥ ಗುಹೆ.
ಅಮರನಾಥ ಮೂಲತಃ ಒಂದು ಗುಹಾ ದೇವಾಲಯವಾಗಿದ್ದು ವರ್ಷದ ನಿರ್ದಿಷ್ಟ ಅವಧಿಯಲ್ಲಿ ಪ್ರತಿ ವರ್ಷವೂ ಇಲ್ಲಿ ಹಿಮದಿಂದ ಅತ್ಯಂತ ಸುಂದರವಾದ ಶಿವಲಿಂಗವು ರೂಪುಗೊಳ್ಳುತ್ತದೆ, ಆದ್ದರಿಂದ ಇದನ್ನು ಹಿಮಮಾನವ ಬಾಬಾ, ಸ್ವಯಂಭು ‘ಹಿಮಾನಿ ಶಿವಲಿಂಗ’ ಇತ್ಯಾದಿ ಎಂದೂ ಕರೆಯುತ್ತಾರೆ.

ಫೋಟೋ ಕೃಪೆ : google
ಈ ಹಿಮದ ಲಿಂಗದ ಗಾತ್ರ ಆಷಾಡ ಪೌರ್ಣಮಿಯಿಂದ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿ ಶಿವಲಿಂಗವು ಶ್ರಾವಣ ಪೂರ್ಣಿಮೆಯಂದು ಪೂರ್ಣ ಅಂದರೆ ಸುಮಾರು 10 ಅಡಿಗಳಷ್ಟು ಎತ್ತರ ಬೆಳೆಯುತ್ತದೆ ಮತ್ತು ಅಮವಾಸ್ಯೆಯ ನಂತರ ಕರಗಲು ಪ್ರಾರಂಭಿಸುತ್ತದೆ. ಶಿವಲಿಂಗದಿಂದ ಸ್ವಲ್ಪ ದೂರದಲ್ಲಿ ಮಂಜುಗಡ್ಡೆಯಿಂದ ರೂಪಗೊಂಡ ಪಾರ್ವತಿ, ಗಣೇಶ ಮತ್ತು ಭೈರವನ ವಿಗ್ರಹಗಳನ್ನು ಅಲ್ಲಿ ನಾವು ಕಾಣ ಬಹುದು. ಆಷಾಢ ಪೂರ್ಣಿಮೆಯಿಂದ ಪವಿತ್ರ ಹಬ್ಬವಾದ ರಕ್ಷಾಬಂಧನದವರೆಗೆ ನಡೆಯುವ ಹಿಮದ ಈ ಪವಿತ್ರ ಲಿಂಗವನ್ನು ನೋಡಲು ಪ್ರಪಂಚದಾದ್ಯಂತದ ಶಿವ ಭಕ್ತರು ಇಲ್ಲಿಗೆ ಬರುತ್ತಾರೆ.
ಹಿಮಾಲಯದಲ್ಲಿ ಅತೀ ಎತ್ತರದಲ್ಲಿರುವ ಈ ಗುಹೆಯ ಮೇಲಿರುವ ಹಿಮ ಕರಗಿ, ಗುಹೆಯ ಬಂಡೆಗಳೊಳಗೆ ನೀರು ಹರಿಯುವುದರಿಂದ ಗುಹೆಯ ಮೇಲ್ಛಾವಣಿಯಿಂದ ನೆಲದ ಮೇಲೆ ಬೀಳುವ ನೀರಿನ ಹನಿಗಳ ಘನೀಕರಣದ ಕಾರಣದಿಂದಾಗಿ ಎತ್ತರದ ಗುಹೆಯೊಳಗೆ ನೈಸರ್ಗಿಕ ಸ್ಟಾಲಗ್ಮೈಟ್ ರಚನೆಯಾಗುತ್ತದೆ. ಇದರ ಪರಿಣಾಮವಾಗಿ ಐಸ್ ರಚನೆಯು ಮೇ ಮತ್ತು ಆಗಸ್ಟ್ ಅವಧಿಯಲ್ಲಿ ಮೇಲ್ಮುಖವಾಗಿ ಬೆಳೆದು ಲಿಂಗಾಕಾರ ಪಡೆಯುತ್ತದೆ. ನಂತರದ ದಿನಗಳಲ್ಲಿ ಲಿಂಗವು ಕ್ರಮೇಣ ಕ್ಷೀಣಿಸುತ್ತಾ ಬರುತ್ತದೆ.

ಫೋಟೋ ಕೃಪೆ : google
“ತೀರ್ಥಯಾತ್ರೆಗಳ ತೀರ್ಥಯಾತ್ರೆ” ಎಂದು ಕರೆಯುವ ಪರಮ ಪವಿತ್ರವಾದ ಅಮರನಾಥಯಾತ್ರೆ ತನ್ನದೇ ಆದ ಕೆಲವು ಐತಿಹಾಸಿಕ ಮತ್ತು ಪೌರಾಣಿಕ ಮಹತ್ವವನ್ನು ಹೊಂದಿದೆ. ಶಿವನ ಪತ್ನಿಯಾದ ಪಾರ್ವತಿ ದೇವಿ ತ್ರಿಮೂರ್ತಿಗಳಿಗೇಕೆ ಅಂತ್ಯವಿಲ್ಲವೆಂದು ಪ್ರೆಶ್ನೆ ಮಾಡಿ ತನಗೆ ಅಮರತ್ವದ ಬಗ್ಗೆ ತಿಳಿಸಿ ಎಂದು ಶಿವನನ್ನು ಕೇಳಿಕೊಂಡಾಗ ಅದಕ್ಕೆ ಒಪ್ಪಿದ ಮಹಾಶಿವನು, ಅಮರತ್ವದ ರಹಸ್ಯವು ಯಾರ ಕಿವಿಗೂ ಬೀಳಬಾರದು ಎಂದು ಪಾರ್ವತಿ ದೇವಿಯನ್ನು ಹಿಮಾಲಯಕ್ಕೆ ಕರೆದುಕೊಂಡು ಹೋಗಿ ಪಾರ್ವತಿಗೆ ಅಮರತ್ವದ ಜ್ಞಾನವನ್ನು ನೀಡುತ್ತಿರುವಾಗ ಆ ಸಮಯದಲ್ಲಿ ಅದೇ ಗುಹೆಯಲ್ಲಿ ಇದ್ದ ಒಂದು ಜೋಡಿ ಪಾರಿವಾಳಗಳು ಶಿವನ ಬಾಯಿಂದ ಅಮರತ್ವದ ಕಥೆಯನ್ನು ಕೇಳಿ ಪಾರಿವಾಳಗಳು ಕೂಡ ಅಮರತ್ವವನ್ನು ಪಡೆಯಿತೆಂದು ಹೇಳಲಾಗಿದೆ. ಇದೇ ಕಾರಣದಿಂದ ಇಂದಿಗೂ ಕೂಡ ಅಮರನಾಥ ಗುಹೆಯಲ್ಲಿ ಜೋಡಿ ಪಾರಿವಾಳಗಳು ಅಮರವಾಗಿದೆ. ಅಮರನಾಥ ಗುಹೆಯಲ್ಲಿ ಈ ದಂಪತಿ ಪಾರಿವಾಳಗಳನ್ನು ನೋಡಲು ಬರುವ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆಂಬ ನಂಬಿಕೆಯಿದೆ..
ಮತ್ತೊಂದು ದಂತ ಕಥೆಯ ಪ್ರಕಾರ ಅಮರನಾಥ ಗುಹೆಯನ್ನು ಮೊದಲು ನೋಡಿದ್ದು ಭೃಗು ಮಹರ್ಷಿಗಳು. ತಪಸ್ಸಿಗಾಗಿ ಹಿಮಾಲಯಕ್ಕೆ ತೆರಳುತ್ತಿದ್ದಾಗ ಅಮರನಾಥ ಗುಹೆಯನ್ನು ಕಂಡು ಪವಿತ್ರ ಲಿಂಗವಾದ ಅಮರನಾಥನ ದರ್ಶನ ಪಡೆದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಇತ್ತೀಚಿನ ಕಥೆಯ ಪ್ರಕಾರ ಬೂಟಾ ಮಲ್ಲಿಕ್ ಎನ್ನುವ ಮುಸ್ಲಿಂ ಕುರಿಗಾಹಿಯು ಕುರಿಗಳನ್ನು ಮೇಯಿಸುತ್ತಾ ಬಹುದೂರ ಸಾಗುತ್ತಾ ಹೋದಾಗ ಈ ಗುಹೆಯನ್ನು ನೋಡಿದನು ಎಂಬ ಪ್ರತೀತಿ ಇದೆ. ಬೂಟಾ ಮಲ್ಲಿಕ್ ಆ ಗುಹೆಯೊಳಗೆ ಹೋಗಿ ನೋಡಿದಾಗ, ಅದರಲ್ಲಿ ಹಿಮದಿಂದ ಹೊಳೆಯುವ ಬಿಳಿ ಬಣ್ಣದ ಶಿವಲಿಂಗವನ್ನು ಕಂಡು ಅಲ್ಲಿನ ಗ್ರಾಮಸ್ಥರಿಗೆ ತಿಳಿಸುತ್ತಾನೆ. ಆ ಘಟನೆ ನಡೆದ ಮೂರು ವರ್ಷಗಳ ಬಳಿಕ ಅಮರನಾಥದ ಮೊದಲಿನ ಯಾತ್ರೆಯು ಆರಂಭವಾಯಿತು ಎನ್ನುತ್ತಾರೆ. ಶಿವ ಭಕ್ತರು ಈ ಯಾತ್ರೆಯನ್ನು ಸ್ವರ್ಗಕ್ಕೆ ಹೋಗುವ ಮಾರ್ಗವೆಂದು ಪರಿಗಣಿಸಿ ಇದನ್ನು ಮೋಕ್ಷ ಯಾತ್ರೆಯೆಂತಲೂ ಕರೆಯುವರು.

ಫೋಟೋ ಕೃಪೆ : google
ಅಮರನಾಥ ಗುಹೆಯ ವಿಶೇಷತೆಗಳು :
ಅತೀ ಕಷ್ಟಕರ ಹಾದಿಯನ್ನು ಕಾಲ್ನಡಿಗೆಯಲ್ಲಿಯೇ ತುಂಬಾ ದಣಿದು ಬಂದ ಭಕ್ತರ ಆಯಾಸವೆಲ್ಲವೂ ಗುಹೆ ತಲುಪಿದ ತಕ್ಷಣ ಮಾಯವಾಗುತ್ತದೆ ಎಂದು ಹೇಳುವರು.ಕಾಲ್ನಡಿಗೆಯಲ್ಲಿ ಬಂದ ಭಕ್ತರ ಆಯಾಸವು ಇದ್ದಕ್ಕಿದ್ದಂತೆ ನಿವಾರಣೆಯಾಗಲು ಕಾರಣವೇನೆಂಬುದರ ರಹಸ್ಯವು ಇಂದಿಗೂ ಒಂದು ರಹಸ್ಯವಾಗಿಯೇ ಉಳಿದಿದೆ.
11 ನೇ ಶತಮಾನದ ರಾಣಿ ಸೂರ್ಯಮತಿ ದೇವಾಲಯಕ್ಕೆ ತ್ರಿಶೂಲಗಳು, ಬಾಣ ಲಿಂಗಗಳನ್ನು ಮತ್ತು ಇತರ ಪವಿತ್ರ ಚಿಹ್ನೆಗಳನ್ನು ಉಡುಗೊರೆಯಾಗಿ ನೀಡಿದ್ದಾಳೆ ಎಂಬುದು ಪ್ರತೀತಿ.
ಅಬುಲ್ ಫಜಲ್ ತಮ್ಮ ಅಮರ ಕೃತಿ ‘ಐನ್-ಎ-ಅಕ್ಬರ್’ನಲ್ಲಿ ಈ ದೇವಾಲಯವನ್ನು ‘ಆಧ್ಯಾತ್ಮಿಕ ಯಾತ್ರಾರ್ಥಿಗಳಿಗೆ ಉತ್ತಮ ತಾಣ’ ಎಂದು ಬಣ್ಣಿಸಿದ್ದಾರೆ.
ಸ್ವಾಮಿ ವಿವೇಕಾನಂದರು 1898 ರಲ್ಲಿ ಈ ಗುಹೆಗೆ ಭೇಟಿ ನೀಡಿದ್ದರು ಮತ್ತು ಅದರ ಸೌಂದರ್ಯಕ್ಕೆ ಮಾರುಹೋಗಿದ್ದರು. ಅದರ ಭೇಟಿಗಳ ವಿವರಗಳನ್ನು ‘ಸ್ವಾಮಿ ವಿವೇಕಾನಂದರ ಕೆಲವು ಪ್ರವಾಸ ಟಿಪ್ಪಣಿಗಳು ’ ಎಂಬುದರಲ್ಲಿ ನಾವು ಕಾಣಬಹುದು.

ಫೋಟೋ ಕೃಪೆ : google
ಅಮರನಾಥ ಯಾತ್ರೆ ಅವಧಿಯು ಸುಮಾರು 45 ದಿನಗಳಾಗಿದ್ದು , ಯಾತ್ರೆಗೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅತ್ಯಂತ ಸೂಕ್ತ ಸಮಯವಾಗಿರುತ್ತದೆ. ಯಾತ್ರಾರ್ಥಿಗಳು ಮೊದಲಿಗೆ ತಮ್ಮ ಆರೋಗ್ಯದ ಬಗೆಗಿನ ದಾಖಲೆಗಳನ್ನು ಅಮರನಾಥ ಯಾತ್ರೆಯ ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯ ಮತ್ತು ಭಾರತೀಯ ಪ್ಯಾರಮಿಲಿಟರಿ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಪೂರ್ವಾನುಮತಿ ಪಡೆಯಬೇಕಾಗಿರುತ್ತದೆ. ಅಮರನಾಥಕ್ಕೆ ತೆರಳುವ ಪ್ರತಿ ಯಾತ್ರಿಯೂ ಪೂರ್ವಭಾವಿಯಾಗಿ ನೋಂದಾಯಿಸಿಕೊಂಡಿರಬೇಕಾಗಿರುತ್ತದೆ. ಅದಕ್ಕೆ ಅಗತ್ಯವಿರುವ ಕಾಗದಪತ್ರಗಳನ್ನು ಅಮರನಾಥ್ ಯಾತ್ರಾ ಶ್ರೈನ್ ಬೋರ್ಡ್ ನಿಂದ ಪಡೆದು ವಿವರಗಳನ್ನು ತುಂಬಿ ಮರಳಿ ಜಮ್ಮು ಮತ್ತು ಕಶ್ಮೀರ್ ಬ್ಯಾಂಕ್ ನ ಶಾಖೆಯೊಂದರಲ್ಲಿ ಸಲ್ಲಿಸಬೇಕಾಗುತ್ತದೆ ವಯಸ್ಸು ೧೩ ರಿಂದ ೭೫ ರ ಮಿತಿಯಲ್ಲಿರಬೇಕು ಮತ್ತು 6 ತಿಂಗಳು ತುಂಬಿದ ಗರ್ಭಿಣಿಯರಿಗೆ ಅವಕಾಶವಿರುವುದಿಲ್ಲಾ. ಜೊತೆಗೆ ಅರ್ಜಿಶುಲ್ಕ ಸೇವಾವೆಚ್ಚ ಅಂಚೆವೆಚ್ಚಗಳನ್ನು ಭರಿಸಬೇಕಿರುತ್ತದೆ. ಅಮರನಾಥ ಯಾತ್ರೆಗಾಗೆ ಹಲವು ಟ್ರಾವೆಲ್ಸ್ ಎಜೆನ್ಸಿಯವರು ಸೇವೆ ನೀಡುತ್ತಿದ್ದಾರೆ ಅವರನ್ನು ಸಹ ಸಂಪರ್ಕಿಸಬಹುದು ಆದರೆ ಎಚ್ಚರ ಹಲವಾರು ಯಾತ್ರಿಗಳು ಮೋಸವಾಗಿರುವ ಘಟನೆಗಳು ಬಹಳ ಹೆಚ್ಚಿವೆ.

‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದ ಹಿಂದಿನ ಸಂಚಿಕೆಗಳು :
- ಸೌಮ್ಯ ಸನತ್
