ಕುಂಞಿ ರಾಮರಿಗೆ ೯೦ವರ್ಷ. ವಯಸ್ಸಾಯಿತು ಅಂತ ಒಂದು ಮೂಲೆಯಲ್ಲಿ ಕೂರದೆ, ತೆಂಗಿನ ಮರವನ್ನು ನೋಡು ನೋಡುತ್ತಿದ್ದಂತೆ ಮಂಗನಂತೆ ಆ ಮರ ಈ ಮರ ಹತ್ತಿ ಕಾಯಿ ಕೀಳುತ್ತಾರೆ, ಈ ವಯಸ್ಸಿನಲ್ಲಿ ಅವರ ಉತ್ಸಾಹ ನೋಡುಗರನ್ನು ನಾಚಿಸುತ್ತದೆ ಎನ್ನುತ್ತಾರೆ ಲೇಖಕ ಪ್ರೊ. ರೂಪೇಶ್ ಪುತ್ತೂರು ಅವರು, ಮುಂದೆ ಓದಿ…
ಅಂದು ನಾನು ತಾಯಿಯ ಜೊತೆ ಅಮ್ಮನ ಊರಿಗೆ ಹೋಗಿದ್ದೆ. ನಮ್ಮ ಕುಟುಂಬದಲ್ಲಿ ಹೆಣ್ಣ+ಗಂಡು ಮಕ್ಕಳಿಗೆ ಸಮಾನ ಆಸ್ತಿ ಕೊಡುತ್ತಾರೆ. ಅಮ್ಮನಿಗೆ ಸಿಕ್ಕ ಚಿಕ್ಕ ಜಾಗೆಯಲ್ಲಿ ಅಮ್ಮಜ್ಜ (ತಾಯಿಯ ತಂದೆ) ನೆಟ್ಟ ಆರು ತೆಂಗಿನ ಸಸಿ ಇದ್ದು,ಅದನ್ನು ದೊಡ್ಡಮ್ಮ ನೋಡಿಕೊಳ್ಳುತ್ತಿದ್ದರು. ಯಾಕೆಂದರೆ ಅಮ್ಮ ಪುತ್ತೂರಿನಲ್ಲಿರುವುದರಿಂದ ನೋಡಿಕೊಳ್ಳಲು ಆಗುತ್ತಿರಲಿಲ್ಲ.
ದೊಡ್ಡಮ್ಮ-ನಾನು-ಅಮ್ಮ ಮಾತನಾಡುತ್ತಿದ್ದಂತೆ, ಅಲ್ಲಿ ಮುಪ್ಪಿನಲ್ಲಿ ಯೌವನ ತೋರಲು, ಬಿದಿರಿನ ಮೊಳೆಯ ಏಣಿ ಬುಜದ ಮೇಲಿಟ್ಟು ಒಬ್ಬ ಪ್ರತ್ಯಕ್ಷನಾದ. ಅವನು ಬೇರಾರೂ ಅಲ್ಲ ನನ್ನ ಅಮ್ಮಜ್ಜನ ಮನೆಯ ತೆಂಗಿನಮರ ಹತ್ತುವ ಕುಂಞಿರಾಮ (ಹೆಸರು ಇದೇ ಆಗಿರಬೇಕು).
” ನಿಮ್ಮ ತೆಂಗಿನ ಮರದಲ್ಲಿ ,ತುಂಬಾ ಕಾಯಿ ಇದೆ. ಕೀಳಿಕೊಡುತ್ತೇನೆ” ಎಂದು ಮರುಮಾತು ಕೇಳದೆ ಒಂದು ತೆಂಗಿನ ಮರದ ಮೇಲೆ ಏಣಿ ಇಟ್ಟು, ಮೆಲ್ಗಡೆ ನೋಡಿ ಹತ್ತ ತೊಡಗಿದ. ಅಮ್ಮ ಹಾಗೂ ದೊಡ್ಡಮ್ಮ ಬೇಡಿಕೊಂಡರೂ ಕೇಳಲಿಲ್ಲ. ನನಗೂ ಭಯವಾಗತೊಡಗಿತು. ಇಷ್ಟು ಮುಪ್ಪಿನಲ್ಲಿ ಅದು ಹೇಗೆ?!!!!.
“ಇವರು ಯಾರು ಅಮ್ಮಾ?” ಎಂದು ಗಾಬರಿಯಿಂದ ಕೇಳಿದೆ. ಎಲ್ಲೋ ಬಿದ್ದು ಗಿದ್ದು ಹೋದರೆ !!!! ಎಂಬ ಭಯ ನನಗೂ ಬಂತು.
ಒಂದರಿಂದ ಒಂದರಂತೆ, ಅಮ್ಮಜ್ಜನ ಮಕ್ಕಳ ಪಾಲಾದ ಸುಮಾರು ಎಲ್ಲಾ ತೆಂಗಿನ ಮರ ಹತ್ತಿ ಕೆಲಸ ಮುಗಿಸಿ, ಬಿದಿರಿನ ಏಣಿ ಹೆಗಲಿಗೇರಿಸಿ ನನ್ನ ಮುಖ ನೋಡಿ ನಕ್ಕರು. ಅಮ್ಮ ಹಾಗೂ ದೊಡ್ಡಮ್ಮ ಗಾಬಾರಿ ಹಿಡಿದು, ತಲೆಗೆ ಕೈ ಇಟ್ಟು ,ದೊಡ್ಡಮ್ಮನ ಮನೆಯ ಜಗುಲಿಯಲ್ಲಿ ಕೂತಿದ್ದರು. ದೊಡ್ಡಮ್ಮ ಹೇಳಿದಂತೆ ಅಮ್ಮ ಅವರಿಗೆ ದುಡ್ಡು ಕೊಡಲು ಮನೆಯೊಳಗೆ ಹೋದರು.
ನಾನು ಹೇಗೋ ಅವರ ಜೊತೆ ಒಂದು ಫೋಟೋ ಕ್ಲಿಕ್ಕಿಸಿದೆ.
ದೊಡ್ಡಮ್ಮ ಅಂದರು “.. ಅಯ್ಯೋ ಕುಂಞಿರಾಮ …. ಹೀಗೆ ಮಾಡಬಾರದು… ನಿನಗೇನಾದರೂ ಆದರೆ …. ನನಗೇ ಎಪ್ಪತ್ತೈದು ದಾಟಿತು, ಇವರ್ಯಾರು ಇಂದು ಇಲ್ಲದಿದ್ದಲ್ಲಿ ನಿನ್ನ ಈ ಆಟ ನೋಡಿ ನನಗೇನಾದರೂ ಆಗುತ್ತಿತ್ತು” ಎಂದಾಗ ಅಮ್ಮ ದುಡ್ಡು ,ಅಕ್ಕಿ, ಸ್ವಲ್ಪ ಹಣ್ಣು ಹಂಪಲು ಹಾಗೂ ಟೀ ತಂದಿಟ್ಟರು.
ಕುಂಞಿ ರಾಮ ತನ್ನ ಹೊಟ್ಟೆಗೆ ಬಡಿಯುತ್ತಾ ” ಈ ಊರಲ್ಲಿ ನಮಗೆ ಯಾರೂ ತುತ್ತು ಕೊಡದೇ ಇದ್ದಾಗ ಕಿಟ್ನಿಕ್ಕೋರ್(ನನ್ನ ಅಮ್ಮಜ್ಜ) ಪಕ್ಕದಲ್ಲಿ ಕುಳ್ಳಿರಿಸಿ , ನನ್ನ ಬಾಯಿಗೆ ತುತ್ತು ಕೊಟ್ಟ ಮನುಷ್ಯ. ಅವರ ಬೆವರಿನಿಂದ ಬೆಳೆದ ಈ ಮರಗಳನ್ನು ಹತ್ತುವಾಗ, ನಾನು ಪಡುವ ಖುಷಿಗೆ ಯಾವುದೂ ಸರಿಸಾಟಿ ಇಲ್ಲ” ಎಂದರು. ಬಿಸಿ ಬಿಸಿ ಚಹಾ ರಪಕ್ಕನೆ ಕುಡಿದು, ಹಣ್ಣು ಹಂಪಲು ತನ್ನ ಕೈ ಚೀಲದಲ್ಲಿ ಹಾಕಿ , ದುಡ್ಡು ಪಡೆದು, ತಾನು ಕಿತ್ತು ಇಟ್ಟ ತೆಂಗನಕಾಯಿಯಲ್ಲಿ ಎರಡೆರಡನ್ನು ಸೇರಿಸಿ ಇನ್ನೊಂದು ಬುಜದ ಮೇಲಿಟ್ಟು ದೂರ ನಡೆಯತೊಡಗಿದ. ಅವನ ಮೊಗದಲ್ಲಿ ಅದೇನೋ ಹುರುಪು.
ಅಮ್ಮನಲ್ಲಿ ಮತ್ತೊಮ್ಮೆ ಕೇಳಿದೆ “ಇವರು ಯಾರು ಅಮ್ಮಾ?” ಎಂದು.
ಅಮ್ಮ ನುಡಿದರು- ಇವರು ಕುಂಞಿ ರಾಮ ಎಂಬುವವರು, ನಿನ್ನ ಅಜ್ಜನ ಕಾಲದಿಂದ ತೆಂಗಿನಕಾಯಿ ಕೀಳಲು ಬರುವವ. ನಿನ್ನ ಅಮ್ಮಜ್ಜ ಅಮ್ಮಜ್ಜಿ ಎಂದರೆ ತುಂಬಾ ಗೌರವ. ನಮಗೂ ಆ ಗೌರವ ಕೊಡುತ್ತಾರೆ. ಇಂದು ವಯಸ್ಸಾದರೂ ಅವನು ತನ್ನ ಸ್ವಾಭಿಮಾನ ಬಿಟ್ಟಿಲ್ಲ..”
ಇಂದು ಕುಂಞಿ ರಾಮ 90ರ ಆಸುಪಾಸು. ಆದರೂ ತೆಂಗಿನ ಕಾಯಿ ಕೀಳಲು ಮರ ಹತ್ತುತ್ತಾರೆ. ಆ ಮರ ಹತ್ತಲು ಬಿದಿರಿನ ದೊಡ್ಡ ಮೊಳೆಗಂಬ ಹೆಗಲ ಮೇಲಿಟ್ಟು ನಡೆಯುತ್ತಾರೆ. ಮಕ್ಕಳೆಲ್ಲರೂ ದೂರದ ಊರುಗಳಲ್ಲಿ ನೆಲೆಸಿದ್ದಾರೆ. ಮಕ್ಕಳು ಕಳುಹಿಸಿದ ದುಡ್ಡನ್ನು ಆ ಮಕ್ಕಳ ಹೆಸರಲ್ಲೇ ಗ್ರಾಮೀಣ ಬ್ಯಾಂಕಿಗೆ ಹಾಕುತ್ತಾರೆ. ದುಡಿಯಬೇಡಿ ಎಂದು ಮಕ್ಕಳು ಹೇಳಿದರೂ, ಬೆಳಿಗ್ಗೆ, ಹೆಂಡತಿ ಮಾಡಿದ ತಿಂಡಿ ತಿಂದು, ಒಂದು ಬೀಡಿ ಸೇದಿ , ಹೆಗಲಿಗೆ ಬಿದಿರು ಕಂಬದ ಏಣಿ ಹಾಕಿ ,ಊರೆಲ್ಲಾ ಸುತ್ತಿ , ಆಯಾಯ ಮನೆಯವರು ಬೇಡಾ ಎಂದರೂ, ತೆಂಗಿನ ಮರ ಹತ್ತುತ್ತೇನೆ ಎಂದು ಹಠ ಹಿಡಿದು, ಮರ ಹತ್ತಿ ತೆಂಗಿನಕಾಯಿ ತೆಗೆಯುವುದರ ಜೊತೆಗೆ, ಆ ತೆಂಗಿನ ಮರದ ತುದಿಯನ್ನು ಸ್ವಚ್ಛ ಗೊಳಿಸಿ ಇಳಿಯುತ್ತಾರೆ.
ಅಂದು ಸಿಕ್ಕಿದ ದುಡ್ಡಿನಿಂದ ಸಂಜೆ ಹೊತ್ತು ಮೀನು ಖರೀದಿಸಿ, ಸ್ವಲ್ಪ ಕಳಿ (ನಿರಾ) ಒಂದು ಬಾಟ್ಲಿಯಲ್ಲಿ ಪಡೆದು ಮನೆಗೆ ಹೋಗುತ್ತಾನೆ. ಕುಂಞಿ ರಾಮನ ಹಾದಿ ನೋಡುತ್ತಾ ಅವನ ಹೆಂಡತಿ ಮೀನಿಗೆ ಬೇಕಾದ ಪಾಕ ತಯಾರಿಸಿ ದಾರಿ ಕಾಯುತ್ತಾಳೆ. ರಾತ್ರಿ ಇಬ್ಬರೂ ಊಟ ಮೀನು ಕಳಿಯನ್ನು ಸಮವಾಗಿ ಹಂಚಿ. ಬಾನು ಕೇಳುವಷ್ಟು ಜೋರಾಗಿ ನಗುತ್ತಾ ಮಲಗುತ್ತಾರೆ. ಅಕ್ಕ ಪಕ್ಕದ ಮನೆಯವರಿಗೆ ಇವರ ನಗು ಒಂದು ರೀತಿಯ pack of energy/ ಊರ್ಜಸ್ವಿತೆ .
ಮತ್ತೆ ಪುನಃ ಮಾರನೇ ದಿನ ಬೆಳಿಗ್ಗೆ ಹೆಂಡತಿಯಿಂದ ತಿಂಡಿ ತಿಂದು, ಬಿದಿರಿನ ಏಣಿ ಬುಜದ ಮೇಲಿಟ್ಟು ಆಕಾಶವೆಂಬ ಚಪ್ಪರದ ಕೆಳಗೆ……….
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ ಪುತ್ತೂರು – ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು, ಬೆಂಗಳೂರು