ಸುಗಂಧ ಭರಿತ ವಾಸನೆ, ರುಚಿ ಮತ್ತು ಹೇರಳವಾದ ಪೋಷಕಾಂಶ ಹಾಗೂ ಜೀವಸತ್ವಗಳಿಂದ ಕೂಡಿರುವ ಒಂದು ಸಣ್ಣ ಹಣ್ಣು ಲಿಚ್ಚಿ.
ಲಿಚ್ಚಿ ಹಣ್ಣಿನ ಮೇಲ್ಮೈ ಆಕರ್ಷಕ ಕೆಂಪು ಬಣ್ಣದ ಸಿಪ್ಪೆಯನ್ನು ಹೊಂದಿದ್ದು ಒಳಗೆ ರಸಭರಿತ ಮತ್ತು ಸುವಾಸನೆಯನ್ನು ಹೊಂದಿರುವ ಬಿಳಿ ತಿರುಳನ್ನು ಹೊಂದಿದೆ.
ಲಿಚ್ಚಿ ಚೀನಾದ ನೈಋತ್ಯದ ಗುವಾಂಗ್ಡಾಂಗ್ ಮತ್ತು ಫುಜಿಯನ್ ನಲ್ಲಿ ಹನ್ನೊಂದನೇ ಶತಮಾನದಲ್ಲಿ ಸಾಗುವಳಿ ನಡೆಸಲಾಗುತ್ತಿತ್ತು ಎಂದು ದಾಖಲಿಸಲಾಗಿದೆ . ಈ ಹಣ್ಣನ್ನು ಹೆಚ್ಚಾಗಿ ಚೈನಾದಲ್ಲಿ ಔಷಧೀಯ ಬಳಕೆಗೆ ಉಪಯೋಗಿಸಲಾಗುತ್ತದೆ.
ಲಿಚ್ಚಿ ಹಣ್ಣು ಮೆಗ್ನಿಶಿಯಂ ಪೊಟ್ಯಾಷಿಯಂ ಫಾಸ್ಪರಸ್ ಕಾಪರ್ ಮ್ಯಾಂಗನೀಸ್ ಮತ್ತು ನಾರಿನಂತಹ ಅಧಿಕ ಪೋಷಕಾಂಶಗಳನ್ನು ಹೊಂದಿದೆ.
ಇನ್ನು ಈ ಲಿಚ್ಚಿ ಹಣ್ಣನ್ನು ನಮ್ಮ ದೇಶದಲ್ಲಿ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ ಹಾಗೂ ಜೂನ್-ಜುಲೈ ತಿಂಗಳಲ್ಲಿ ಈ ಲಿಚ್ಚಿ ಹಣ್ಣುಗಳು ವ್ಯಾಪಕವಾಗಿ ನಮಗೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ.

ಫೋಟೋ ಕೃಪೆ : Britannica
ಲಿಚ್ಚಿ ಹಣ್ಣಿನ ಉಪಯೋಗಗಳು:
*ಲಿಚ್ಚಿ ಹಣ್ಣಿನ ನಿಯಮಿತ ಸೇವನೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಈ ಹಣ್ಣಿನಲ್ಲಿ ಹೇರಳವಾಗಿರುವ ಜೀವಸತ್ವ ‘ಸಿ’ ನಮಗೆ ಬರುವ ಅಂಟು ರೋಗ ಅಥವಾ ಸಾಂಕ್ರಾಮಿಕ ರೋಗವನ್ನು ತಡೆಯಲು ಸಹಾಯಕಾರಿಯಾಗಿದೆ.
*ಮಲಬದ್ಧತೆ ಮತ್ತು ಜೀರ್ಣ ಸಮಸ್ಯೆಗೆ ಈ ಹಣ್ಣು ಉಪಯೋಗಕಾರಿ.
*ಈ ಲಿಚ್ಚಿ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದ ಚಯಾಪಚಯ (ಮೆಟಬಾಲಿಸಂ) ಕ್ರಿಯೆಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ.
* ಲಿಚ್ಚಿ ಹಣ್ಣಿನಲ್ಲಿರುವ ಕಾಪರ್ ಐರನ್ ನಂತಹ ಪೋಷಕಾಂಶಗಳು ರಕ್ತದಲ್ಲಿನ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ.
*ಲಿಚ್ಚಿ ಹಣ್ಣಿನಲ್ಲಿರುವ ನಾರಿನಾಂಶ ದೇಹದ ತೂಕ ಇಳಿಸಲು ಸಹಕಾರಿಯಾಗಿದೆ.
*ಮುಖದಲ್ಲಿ ನೆರಿಗೆ ಮತ್ತು ಚರ್ಮ ಸುಕ್ಕುಕಟ್ಟದೆ ಯೌವ್ವನವಾಗಿರಲು ಇದರಲ್ಲಿರುವ ಜೀವಸತ್ವ ‘ಸಿ’ ಬಹಳ ಪರಿಣಾಮಕಾರಿ.
ಅತಿಯಾದರೆ ಅಮೃತವೂ ವಿಷವೆಂಬಂತೆ ಲಿಚ್ಚಿ ಹಣ್ಣನ್ನು ದಿನಕ್ಕೆ ೩೦೦ಗ್ರಾಂಗಿಂತ ಅಧಿಕ ಸೇವಿಸಬಾರದು ಅದರಲ್ಲೂ ಮಧುಮೇಹ ಮತ್ತು ಹೈಪೋಗ್ಲಿಸಿಮಿಯಾ ರೋಗಿಗಳು ಈ ಹಣ್ಣನ್ನು ಸೇವಿಸಬಾರದು.

ಫೋಟೋ ಕೃಪೆ : Prokerala.com
ಲಿಚ್ಚಿ ಹಣ್ಣನ್ನು ತಿನ್ನುವಾಗ ಕೊಂಚ ಜಾಗರೂಕತೆ ವಹಿಸುವುದು ಅವಶ್ಯ
ಲಿಚ್ಚಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಈ ಹಣ್ಣನ್ನು ಸೇವಿಸಿದ ನಂತರ ಸರಿಯಾಗಿ ಊಟ ಸೇವಿಸದಿದ್ದರೆ ಲಿಚ್ಚಿಯಲ್ಲಿರುವ ಅಮಿನೊಆ್ಯಸಿಡ್ ನಿಂದ ರಕ್ತದಲ್ಲಿನ ಗ್ಲೂಕೋಸ್ ಅಂಶ ಗಣನೀಯವಾಗಿ ಇಳಿಯುವಂತೆ ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಮಕ್ಕಳಲ್ಲಿ ಹೈಪೋಗ್ಲಿಸಿಮಿಯಾ ಎಂಬ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ಸಾವು ಕೂಡ ಸಂಭವಿಸಬಹುದು ಎಂದು ತಜ್ಞ ವೈದ್ಯರು ತಮ್ಮ ವರದಿಯಲ್ಲಿ ಎಚ್ಚರಿಸಿದ್ದಾರೆ.
- ಕಾವ್ಯ ದೇವರಾಜ್
