ಕಾನುಸೂರು ಬಾಳೆಸರ ರಸ್ತೆ ಎಂದರೆ ಭಾರೀ ತಿರುವು ಮುರುವಿನ ರಸ್ತೆಯೇ ಸರಿ.. ಥೇಟು ನಮ್ಮ ಕೋಗಾರು ಘಾಟಿ.. ಅರಳಗೋಡಿಗೆ ಹೋದ ಹಾಗೆ.. ದಾರಿಯೇ ಸಾಗದು. ದಾರಿ ಹೌದೋ ಅಲ್ಲವೋ ಎಂದು ಎರಡೆರಡು ಬಾರಿ ದಾರಿಹೋಕರಿಗೆ ಕೇಳಿ ಖಾತ್ರಿ ಮಾಡಿಕೊಂಡೆವು.. ಬೆಳಕಿದ್ದಕ್ಕೆ ಆಯಿತು.. ರಾತ್ರಿ ಆಗಿದ್ದರೆ ಫಜೀತಿಯೇ ಆಗುತ್ತಿತ್ತು.. ಒಂದು ತಿರುಗಾಟದಲ್ಲಿ ಎಷ್ಟೊಂದು ಸತ್ಯಗಳನ್ನು ಬದುಕಿನ ಸತ್ವಗಳನ್ನು ತಿಳಿಯಬಹುದು ಎನ್ನುತ್ತಾರೆ ನಾಗೇಂದ್ರ ಸಾಗರ್ ಅವರು….
ಲೈಟಾಗಿ ಒಂದು ಮಿನಿ ಮೀಲ್ಸ್ ಉಂಡು ಸಾಗರ ಬಿಡುವಾಗಲೇ ಮೂರು ಗಂಟೆ.. ಜೊತೆಯಲ್ಲಿದ್ದ ಗೆಳೆಯ ರಾಧಾಕೃಷ್ಣ ಬಂಡಗದ್ದೆ ಎಲ್ಲಿಗೆ ಪಯಣ ಎಂದರು.. ವೈಯಕ್ತಿಕವಾಗಿ ನನಗೆ ಕಾನಸೂರು ಸಮೀಪದ ಬಾಳೇಸರಕ್ಕೆ ಹೋಗುವುದಿದೆ. ಅಲ್ಲಿಯೇ ಬೆಂಗಳೂರಿನ ಸಾಫ್ಟವೇರ್ ಉದ್ಯೋಗ ಬಿಟ್ಟು ಕೇವಲ ಮಲೆನಾಡು ಗಿಡ್ಡ ಹಸು ಸಾಕಾಣಿಕೆ ಮಾಡುತ್ತಿರುವ ದಂಪತಿಗಳನ್ನು ಭೇಟಿ ಮಾಡೋಣ.. ಅದಲ್ಲದೇ ನನ್ನ ಇನ್ನೊಬ್ಬ ಸ್ನೇಹಿತ ವಿಜಯೇಂದ್ರ ಅಲ್ಲಿಯೇ ಹೈನುಗಾರಿಕೆ ಮಾಡುತ್ತಿದ್ದಾರೆ. ಅವರನ್ನೂ ಭೇಟಿ ಮಾಡೋಣ ಎಂದೆ.
ನಮ್ಮ ನಡುವೆ ಉದ್ದಾನುದ್ದಕ್ಕೂ ಕೃಷಿಗೆ ಸಂಬಂಧಿಸಿದ್ದೇ ಮಾತು.. ಅಲ್ಲಿ ಇಲ್ಲಿ ಹೋಗಿ ಬಂದದ್ದು, ಅಲ್ಲಲ್ಲಿ ನೋಡಿದ್ದು ಜನರನ್ನು ಸಂಪರ್ಕಿಸಿದ್ದು, ಅವರು ಹೇಳಿದ್ದು, ಮಾಡಿದ್ದು, ಅದೂ ಇದೂ ಇತ್ಯಾದಿ.. ಮಾತಿನಲ್ಲಿ ಕಾನಸೂರು ಬಂದದ್ದೇ ಗೊತ್ತಾಗಲಿಲ್ಲ.. ಬಾಳೇಸರಕ್ಕೆ ಮೊದಲ ಭೇಟಿ.. ದಾರಿ ಕೇಳಿದೆವು.. ಎಡಕ್ಕೆ ಹೊರಳಿ.. ಸುಮಾರು ಹನ್ನೆರಡು ಕಿಲೋಮೀಟರ್ ಆಗಬಹುದು ಎಂದರು.
ಬಾಳೆಸರಕ್ಕೆ ಹೊರಟಿದ್ದೇಕೆ ಎಂದು ಹೇಳಿ ಬಿಡುತ್ತೇನೆ.. ಇತ್ತೀಚೆಗೆ ಆ ಕಡೆಯಿಂದ ಕೆಲವರು ನಮ್ಮಲ್ಲಿಗೆ ಕೃಷಿ ಅಧ್ಯಯನ ಪ್ರವಾಸಕ್ಕೆ ಬಂದಿದ್ದರು. ನಮ್ಮ ಪಶು ಆಹಾರ ತಯಾರಿಕ ಘಟಕ ನೋಡಿದ್ದರು. ಪೂರ್ವಾಪರ ಚರ್ಚೆ ಮಾಡಿ ಹೋಗಿದ್ದರು. ಅಲ್ಲಿಗೆ ಹೋದ ಮೇಲೆ ಅಲ್ಲಿನ ಸೊಸೈಟಿಯವರೊಂದಿಗೆ ಚರ್ಚಿಸಿ ಮೊದಲು ಸ್ಯಾಂಪಲ್ಲಿಗೆ ಸ್ವಲ್ಪ ಹಿಂಡಿ ಚೀಲ ಕಳಿಸಿ ಮತ್ತೆ ನೋಡುವ ಎಂದಿದ್ದರು. ವಾಸ್ತವವಾಗಿ ನಮಗೆ ಆ ಕಡೆಗೆ ಹಿಂಡಿ ಸರಬರಾಜಿನ ರೂಟು ಇಲ್ಲ. ಸಿದ್ದಾಪುರದಲ್ಲಿ ಒಬ್ಬರು, ಕಾನಸೂರಿನಲ್ಲಿ ವಿಜಯೇಂದ್ರ ಅವರೇ ಬಂದು ಹಿಂಡಿ ಒಯ್ಯುತ್ತಾರೆ. ಏನು ಮಾಡೋದು ಎಂದು ಪರಾಮರ್ಶಿಸಿ ಆಯಿತು. ಇರಲಿ ಈ ಬಾರಿ ನಮ್ಮ ಓಮ್ನಿ ಗಾಡಿಯಲ್ಲಿ ಹಿಡಿದಷ್ಟು ಹಾಕಿಕೊಂಡು ಕೊಟ್ಟು ಬರೋದು ಮತ್ತು ಮಾತುಕತೆಯ ಬಳಿಕ ಮುಂದಿನ ವಹಿವಾಟು ಎಂದಾಗಿತ್ತು.
ಕಾನುಸೂರು ಬಾಳೆಸರ ರಸ್ತೆ ಎಂದರೆ ಭಾರೀ ತಿರುವು ಮುರುವಿನ ರಸ್ತೆಯೇ ಸರಿ.. ಥೇಟು ನಮ್ಮ ಕೋಗಾರು ಘಾಟಿ.. ಅರಳಗೋಡಿಗೆ ಹೋದ ಹಾಗೆ.. ದಾರಿಯೇ ಸಾಗದು. ದಾರಿ ಹೌದೋ ಅಲ್ಲವೋ ಎಂದು ಎರಡೆರಡು ಬಾರಿ ದಾರಿಹೋಕರಿಗೆ ಕೇಳಿ ಖಾತ್ರಿ ಮಾಡಿಕೊಂಡೆವು.. ಬೆಳಕಿದ್ದಕ್ಕೆ ಆಯಿತು.. ರಾತ್ರಿ ಆಗಿದ್ದರೆ ಫಜೀತಿಯೇ ಆಗುತ್ತಿತ್ತು..
ಮುಂದೆ ದೊಡ್ಡ ದಾರಿ ಬಿಟ್ಟು ಎಡಕ್ಕೆ ಹೊರಳಿ ಮತ್ತೂ ಎರಡು ಕಿಲೋಮೀಟರ್ ಹೋಗಬೇಕು ಎಂದಾಯಿತು.. ಅಲ್ಲಿಂದ ಮುಂದೆ ಒಂಥರಾ ನಿಗೂಢತೆಯ ಅನುಭವ. ದಟ್ಟ ಹಸಿರು ಕಾನು.. ನಿಶ್ಯಬ್ಧ ಮೌನ.. ಮಳೆಯಿಲ್ಲದ ಕಾರಣಕ್ಕೆ ನೀರು ತಳ ಕಂಡ ಹೊಳೆ.. ಅಲ್ಲೊಂದು ಇಲ್ಲೊಂದು ಕಾನ ನಡುವೆ ಮನೆ. ಇದೊಳ್ಳೆ ಕೊಂಪೆಯೇ ಸರಿ ಎಂದು ಕೊಂಡರೂ ರಸ್ತೆ ಮಾತ್ರ ಸೂಪರ್ ಆಗಿಯೇ ಇತ್ತು.. ಇಂಥಲ್ಲೆಲ್ಲಾ ಬದುಕು ಕಟ್ಟಿಕೊಂಡ ನಮ್ಮ ಹಿರಿಯ ತಲೆಮಾರಿನವರು ಆ ಕಾಲಕ್ಕೆ ಅದೆಷ್ಟು ಕಷ್ಟ ಪಟ್ಟಿರಲಿಕ್ಕಿಲ್ಲ ಎಂದು ಮಾತಾಡುತ್ತಿರುವಂತೆ ಎಡಕ್ಕೆ ಹೊಂಡದಲ್ಲಿ ಅದೆಷ್ಟು ದೊಡ್ಡ ಮಾಡಿನ ಮನೆ.. ಒಂದು ಕಾಲಕ್ಕೆ ಈ ಮನೆಯಲ್ಲಿ ಅದೆಷ್ಟು ಜನರಿದ್ದರೇನೋ.. ಈಗ ಬರೀ ಹಿರಿಯರಿದ್ದಾರು ಇಂತಹ ಅಗಾಧ ಮನೆಯನ್ನು ಹೇಗೆ ಮಾಡುತ್ತಿದ್ದಾರೆ ಮಾರಾಯರೆ ಎಂದು ಮಾತಾಡಿಕೊಳ್ಳುತ್ತಿದ್ದಂತೆ ಬಾಳೆಸರ ಊರು ಬಂತು.. ಸಣ್ಣ ಗುಡ್ಡದ ಮೇಲೆ ದೊಡ್ಡ ಕಟ್ಟಡ ಕಂಡು ಇದೇ ಸೊಸೈಟಿ ಕಟ್ಟಡ ಆಗಿದ್ದೀತು ಎಂದು ಕೊಂಡೆವು. ಆಗಿತ್ತು ಕೂಡ..
ಹಳೆಯ ಕಟ್ಟಡಕ್ಕೆ ಸೇರಿ ಕಟ್ಟಿಸಿದ ಇನ್ನಷ್ಟು ಸುಸಜ್ಜಿತ ಕಟ್ಟಡ, ಗೋದಾಮು.. ಕೊಂಪೆ ಎಂದು ಮೂಗು ಮುರಿಯುವ ಊರಿನಲ್ಲೂ ದೊಡ್ಡ ವಹಿವಾಟೇ ಮಾಡುವ ಉತ್ತರ ಕನ್ನಡ ಜಿಲ್ಲೆಯ ಈ ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಕೆಲಸ, ಅದರೊಂದಿಗೆ ಆ ಭಾಗದ ಜನರ ಅವಿನಾಭಾವ ಸಂಬಂಧ ನನಗೆ ಯಾವಾಗಲೂ ಒಂದು ಅಚ್ಚರಿಯ ಸಂಗತಿ. ಶಾಲಾಮಕ್ಕಳಿಗೆ ಬೇಕಾದ ನೋಟ್ ಬುಕ್ಕಿನಿಂದ ಹಿಡಿದು, ದಿನಸಿ ಸಾಮಾನುಗಳು, ಕೃಷಿ ಉಪಕರಣಗಳು, ಜಾನುವಾರು ಹಿಂಡಿ, ಗೊಬ್ಬರ ವಗೈರೆ ಏನುಂಟು ಏನಿಲ್ಲ? ಇದೇ ಕಾನ್ಸೆಪ್ಟಿನ ಜೊತೆಗೆ ವಿವಿಧ ಮಗ್ಗಲುಗಳನ್ನೆಲ್ಲ ಅಳವಡಿಸಿಕೊಂಡು ಕಡೆಗೆ ರಿಯಲ್ ಎಸ್ಟೇಟ್ ವ್ಯವಹಾರ ಜಮೀನು.. ಜಾಮೀನು ಎಂದು ಅವಾಂತರಗಳನ್ನು ಕಂಡ ಶಿರಸಿಯ ಟಿಎಸ್ಎಸ್ ಸಂಸ್ಥೆಯ ಮಾತೂ ಬಂತು..
ಬಾಳೆಸರ ಸೊಸೈಟಿಗೆ ನಾವು ಬಂದದ್ದು ವಿಷಯ ಹರಿದಾಡಿ ಹಿರಿಯರು ಜಿ. ಎಂ. ಹೆಗಡೆಯವರು ಹುಡುಕಿ ಬಂದರು. ಚೀಲ ಇಳಿಸುವಷ್ಟರಲ್ಲಿ ಅವರು ಏಕಾಂಗಿಯಾಗಿ ಮಾಡಿದ ಕೆಲಸ ನೋಡಿ ಬರಲು ಹೋದೆವು.. ಅಲ್ಲೇ ತಿರುವಿನಲ್ಲಿ ಅಚ್ಚುಕಟ್ಟಾದ ಪುಟ್ಟ ಎರಡಂತಸ್ತಿನ ಕಟ್ಟಡ. ಕೃಷಿ ವಿಚಾರ ವಿನಿಮಯ ಕೇಂದ್ರ.. ನೋಂದಾಯಿಸಲ್ಪಟ್ಟಿದ್ದು.. ಆ ಭಾಗದ ರೈತರಿಗೆ ಅನುಕೂಲ ಆಗುವ ಕೆಲಸ ಮಾಡುತ್ತಿರುವ ವಾಲಂಟರಿ ವಾಹಿನಿ.. ಸುಮಾರು ಮೂವತ್ತು ವರ್ಷಗಳಿಂದ ಆ ಭಾಗದ ರೈತರಿಗೆ ಅನುಕೂಲ ಆಗಲೆಂದು ಹೆಗಡೆಯವರು ಒಂಟಿ ಸೇನಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಂದೇ ಮೇಲು ಮಹಡಿಯಲ್ಲಿ ತರಬೇತಿ, ಸಭೆ ಸಮಾರಂಭಗಳಿಗೆ ಅನುಕೂಲ ಆಗುವಂತೆ ಕಟ್ಟಿಸಿದ ಸಭಾಂಗಣದ ಉದ್ಘಾಟನೆ ಇತ್ತು.. ಒಳ್ಳೆಯ ದಿನವೇ ಬಂದಿದ್ದೀರಿ ಎಂದು ಸಿಹಿ ಕೊಟ್ಟರು. ಶೀಘ್ರ ಒಂದು ಕಾರ್ಯಕ್ರಮ ಮಾಡೋಣ.. ನಿಮ್ಮ ಕೃಷಿ ಅನುಭವ ಹಂಚಿಕೊಳ್ಳಲು ಬರಬೇಕು ಎಂದು ಆಹ್ವಾನಿಸಿದರು.. ಒಪ್ಪಿಕೊಂಡೆವು..
ಶ್ರೀಯುತರ ಈ ಎಲ್ಲ ಕೆಲಸ ಕಾರ್ಯಗಳಿಗೆ ನಬಾರ್ಡ್ ಮತ್ತು ಸಿಂಡಿಕೇಟ್ ಬ್ಯಾಂಕ್ ಸಹಾಯ, ಸಹಕಾರ ನೀಡಿವೆ.. ನಿತ್ಯ ಸಂಜೆ ಆ ಭಾಗದ ರೈತರು ಬಂದು ಕೂತು ವಿಚಾರ ವಿನಿಮಯ ಮಾಡಿಕೊಂಡು ಹೋಗುತ್ತಾರೆ.. ಅಪರೂಪದ ಕೆಲಸ ಎಂದು ಎಲ್ಲಾ ದಾಖಲಿಟ್ಟುಕೊಂಡಿದ್ದೇನೆ. ಅಲಾಯದದಲ್ಲಿ ಬರೆಯ ಬೇಕೆಂದಿದ್ದೇನೆ..
ಹೊರಡುವ ಕಾಲಕ್ಕೆ ಅಲ್ಲೇ ನೆರೆಯ ಕಲ್ಮನೆಯ ಗಣಪತಿ ಭಟ್ಟರು ಎಂಬ ಕೃಷಿಕರು ಬಂದರು.. ಬಂದದ್ದು ಗೊತ್ತಾಯಿತು.. ನನಗೂ ಎರಡು ಚೀಲ ಹಿಂಡಿ ಬೇಕಿದೆ. ಮಾತಾಡುವ ವಿಷಯವೂ ಇದೆ.. ವಾಪಸ್ ಬಂದು ಹೋಗುವಾಗ ಬನ್ನಿ.. ಕಾಫಿ ಕುಡಿದು ಹೋದರಾಯಿತು ಎಂದರು. ಎಸ್ ಅಂದೆವು..
ಹಿಂಡಿ ಇಳಿಸಿ ಆಗಿದ್ದೀತು ಎಂದು ಸೊಸೈಟಿಯೆಡೆ ಹೊರಟೆವು. ಸೊಸೈಟಿಯ ಎದುರೇ ಇನ್ನೊಂದು ಸುಸಜ್ಜಿತ ಕಟ್ಟಡ.. ogho organics ಎಂಬ ಬೋರ್ಡು..ಏನಿದ್ದೀತು ನೋಡಿ ಬರೋಣ ಎಂದು ಹೋದೆವು.. ಅರೆ ಎಲ್ಲೆಲ್ಲಿ ಏನೇನು ಕನೆಕ್ಷನ್ ಮಾರಾಯ ಎನ್ನುತ್ತಾ ಆ ಸಂಸ್ಥೆಯ ಮಾಲೀಕರನ್ನು ಉದ್ದೇಶಿಸಿ ರಾಧಾಕೃಷ್ಣ ಬಂದಗದ್ದೆ ಉದ್ಘರಿಸಿದ್ದರು. ಅವರಿಬ್ಬರಿಗೆ ಪರಸ್ಪರ ಪರಿಚಯ ಇತ್ತು.. ಆ ಸಂಸ್ಥೆ ಹೈದ್ರಾಬಾದಿನ ಬಲು ದೊಡ್ಡ ಕಂಪನಿಯೊಂದಕ್ಕೆ ಅವರು ಬಯಸಿದ ಮಸಾಲೆ ಉತ್ಪನ್ನಗಳನ್ನು ಸಂಸ್ಕರಿಸಿ ಪ್ಯಾಕಿಂಗ್ ಮಾಡಿ ಕಳಿಸುವ ಒಪ್ಪಂದ ಮಾಡಿಕೊಂಡಿದ್ದರು.. ಒಟ್ಟಾರೆ ಇನ್ವೆಸ್ಟಮೆಂಟಿನಲ್ಲಿ ದೊಡ್ಡ ಪಾಲು ಅವರದೇ.. ವ್ಯವಹಾರ ಕೂಡ ದೊಡ್ಡದೇ..
ನಮಗೂ ಇದು ಹೊಸತೇ.. ಗಟ್ಟಿ ಲೆಕ್ಕ ಮಾಡಿದರೆ ನೂರೂ ಜನಸಂಖ್ಯೆ ಇರದ ಮಲೆನಾಡಿನ ದೊಡ್ಡ ಮಳೆ ಸುರಿವ ಪುಟ್ಟ ಊರಿನಲ್ಲಿ ಕೋಟಿಗಟ್ಟಲೆ ವಹಿವಾಟು ನಡೆಸುವ ಫ್ಯಾಕ್ಟರಿ ಇರುವುದು ಸಾಮಾನ್ಯ ಸಂಗತಿ ಅಲ್ಲ.. ಸವಾಲು ಎದುರಿಸಿ ಬದುಕು ಕಟ್ಟಿಕೊಳ್ಳುವ ಮನಸ್ಸುಳ್ಳ ಯುವಕರು ಎಲ್ಲಿ ಬೇಕಾದರೂ ನೆಲೆ ಕಟ್ಟಿಕೊಳ್ಳಬಹುದು ಎನ್ನುವುದಕ್ಕೆ ರವಿ ಹೆಗಡೆ ದಂಪತಿಗಳು ನಮಗೆ ಪ್ರತ್ಯಕ್ಷ ಸಾಕ್ಷಿ ಆದರು.. ಇನ್ನೊಂದು ವರ್ಷದಲ್ಲಿ ವಹಿವಾಟು ವಿಸ್ತರಿಸಿ ತಮ್ಮದೇ ಪ್ರಾಡಕ್ಟಿನ ಮಾರಾಟ ಜಾಲ ಹೊಂದುವ ಮಾತು ಆಡಿದರು.. ಉದ್ಯಮ ದೊಡ್ಡ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿ ಬಂದೆವು..
ತಡವಾಯಿತು ಎಂದು ಸೊಸೈಟಿಗೆ ಬಂದೆವು.. ಗಡಿಬಿಡಿ ಏನಿಲ್ಲ ಸಂಜೆ ಏಳೂವರೆಯವರೆಗೆ ವಹಿವಾಟಿದೆ.. ಸದಸ್ಯರಿಗೆ ಕೃಷಿ ಕೆಲಸ ಮುಗಿಸಿ ಬರುವಾಗ ತಡವಾಗುತ್ತದೆ ಅವರು ಅನುಕೂಲಕ್ಕೆ ಈ ವ್ಯವಸ್ಥೆ ಎಂದರು.. ನಿಮ್ಮ ತಲೆಬಿಸಿ ನಿಮಗೆ.. ನಮ್ಮದೇನಿದ್ದರೂ ಐದೂವರೆಯವರೆಗೆ ಎಂತಿರುವ ನಮ್ಮ ಕಡೆಯ ಸೊಸೈಟಿಗಳ ಕಾರುಬಾರು ನೆನಪಾಯಿತು.. ನಾವಿಬ್ಬರೂ ಪರಸ್ಪರ ಮುಖ ನೋಡಿಕೊಂಡು ನಕ್ಕೆವು…
ಗಣಪತಿ ಭಟ್ಟರಿಗೆ ಹಿಂಡಿ ಕೊಟ್ಟು ಕಾಫಿ ಕುಡಿದು ಹೋಗ ಬೇಕಿತ್ತಲ್ಲ.. ಗಡಬಡಿಸಿ ಹೊರಟೆವು.. ಆಶ್ಚರ್ಯ ಎಂದರೆ ಬರುವಾಗ ನೋಡಿ ಮಾತಾಡಿದ ವಿಶಾಲವಾದ ಮನೆಯೇ ಅವರದಾಗಿತ್ತು.. ನಮ್ಮ ಅಂದಾಜು ತಪ್ಪಿತ್ತು.. ಒಳಗೆ ಮನೆ ತುಂಬಾ ಜನರಿದ್ದರು.. ಮೂರು ತಲೆಮಾರು ಒಟ್ಟಿಗೆ ಇರುವ ಅವಿಭಕ್ತ ಕುಟುಂಬವಿತ್ತು.. ಈಗಿನ ಕಾಲಕ್ಕಿದು ಅಪರೂಪ.. ಮನೆ ನೂರಾರು ವರ್ಷ ಹಳೆಯದೇ ಆಗಿದ್ದರೂ ಕಾಲಕ್ಕೆ ತಕ್ಕಂತೆ ಬದಲಾವಣೆ ಕಂಡಿತ್ತು.. ಅತ್ಯಂತ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದರು.. ಮನೆ ಮಂದಿಯ ನಡುವಿನ ಅನ್ಯೋನ್ಯತೆ ಕಂಡು ನಾವಂತೂ ಬೆರಗಾದೆವು..
ಇತ್ತೀಚೆಗೆ ಅವರ ಮನೆಯ ಕುಟುಂಬ ಸದಸ್ಯರೊಬ್ಬರು ಅನಾರೋಗ್ಯ ಪೀಡಿತರಾದರು.. ಸುಮಾರು ಒಂದೂವರೆ ತಿಂಗಳ ಕಾಲ ಕೋಮಾದಲ್ಲೇ ಇದ್ದರು..ಮನೆ ಮಂದಿಯೆಲ್ಲಾ ಅತ್ಯಂತ ಪ್ರೀತಿಯಿಂದ ಆರೈಕೆ ಮಾಡಿದ ಕಾರಣಕ್ಕೆ ಅವರು ಗುಣಮುಖರಾದರು.. ಹಿರಿಯ ಸದಸ್ಯರಿಂದ ಹಿಡಿದು ಶಾಲೆಗೆ ಹೋಗುವ ಕಿರಿಯ ಸದಸ್ಯರವರೆಗೆ ಅಕ್ಕರೆಯಿಂದ ನೋಡಿಕೊಂಡಿದ್ದರಿಂದಲೇ ಅವರಿಗೆ ಪುನರ್ಜನ್ಮ ಆಯಿತು ಎಂದು ಹೇಳಬಹುದು. ಗಂಡ ಹೆಂಡತಿ ಮತ್ತವರ ಒಂದು ಮತ್ತೊಂದು ಮಕ್ಕಳೇ ಅನ್ಯೋನ್ಯತೆಯಿಂದ ಇರೋದು ಕಷ್ಟವಾಗಿರುವ ಈ ಕಾಲದಲ್ಲಿ ಇಷ್ಟೊಂದು ದೊಡ್ಡ ಕುಟುಂಬ ಅಕ್ಕರಾಸ್ತೆಯಿಂದ ಇರುವುದನ್ನು ನೋಡಿ ನಮಗೆ ಆ ಒಂದು ಭೇಟಿಯೇ ಸ್ಮರಣೀಯ ಎನಿಸಿತು.
ಮಧ್ಯಾಹ್ನ ಇಲ್ಲಿಗೆ ಬರುವ ಮುನ್ನ ಸಿದ್ದಾಪುರದಲ್ಲಿ ಕಟ್ ಮಿರ್ಚಿ ತಿನ್ನುವುದು ಎಂದು ನಿರ್ಧಾರ ಆಗಿತ್ತು.. ಚಂದ್ರಗುತ್ತಿ ಸರ್ಕಲ್ಲಿನಲ್ಲಿ ಚಂದ್ರಶೇಖರ ಹೆಗಡೆ ಎನ್ನುವವರು ಈ ಫಾಸ್ಟ್ ಫುಡ್ ಅಂಗಡಿ ಇಟ್ಟುಕೊಂಡಿದ್ದಾರೆ.. ಹೆಚ್ಚೆಂದರೆ 10×10 ವಿಸ್ತೀರ್ಣದ ಅಂಗಡಿ.. ಡೊಣ್ ಮೆಣಸನ್ನು ನಾಲ್ಕು ಫೀಸು ಮಾಡಿ ಮಸಾಲೆ ಹಿಟ್ಟಿನಲ್ಲಿ ಅದ್ದಿ ಕರಿಯುವುದು.. ಬಳಿಕ ಕೋರಿದ ಮಿರ್ಚಿಯ ಮೇಲೆ ಈರುಳ್ಳಿ, ಕ್ಯಾರೇಟು ವೈರಿ ಇಟ್ಟು ತಿನ್ನಲು ಕೊಡುತ್ತಾರೆ.. ಬಹಳ ಒಳ್ಳೆಯ ರುಚಿ ಇದೆ.. ಅದು ಬಿಟ್ಟರೆ ಗೋಬಿ ಮಂಚೂರಿ. ಮಸಾಲೆ ಮಂಡಕ್ಕಿ ಇದೆ.. ಇಡೀ ಅಂಗಡಿಯನ್ನು ಅವರೊಬ್ಬರೇ ನಡೆಸಿಕೊಂಡು ಬರುತ್ತಿದ್ದಾರೆ.. ಸಂಜೆ ಆರರಿಂದ ಹತ್ತರವರೆಗೆ ವ್ಯಾಪಾರ.. ತುದಿಗಾಲಿನಲ್ಲೇ ನಿಂತಿರುವ ಗ್ರಾಹಕರು.. ಅಸಾಧ್ಯ ಒತ್ತಡ ಇದ್ದರೂ ಕೊಂಚವೂ ತಾಳ್ಮೆ ಕೆಡಿಸಿಕೊಳ್ಳದೇ ವ್ಯಾಪಾರ ನಡೆಸಿಕೊಂಡು ಹೋಗುವ ಅವರು ಬದ್ಧತೆ ನನಗೆ ಇಷ್ಟವಾಯಿತು… ಗೌರವಾರ್ಹವಾದ ದುಡಿಮೆಗೆ ಅವರಿಗೆ ಮೋಸವಿರಲಿಲ್ಲ.. ಮಗನಿಗೂ ಅಲ್ಲೇ ಸ್ವಲ್ಪ ದೂರದಲ್ಲಿ ಇದೇ ರೀತಿಯ ದುಡಿಮೆ ಹಚ್ಚಿಕೊಟ್ಟಿದ್ದಾರೆ… ಮನಸ್ಸು ಮಾಡಿದರೆ ಆರಂಕಿ ಸಂಬಳವನ್ನು ಇದ್ದ ನೆಲೆಯಲ್ಲಿಯೇ ಯಾವುದೇ ಟ್ರಸ್ ಇಲ್ಲದೇ ಗಳಿಸಬಹುದು ಎನ್ನುವುದಕ್ಕೆ ಈ ಜನಕ್ಕಿಂತ ದೊಡ್ಡ ಉದಾಹರಣೆ ಬೇಕೆ ಎಂದು ಮನಸ್ಸಿನಲ್ಲೇ ಪ್ರಶ್ನಿಸಿಕೊಂಡೆ..
ಹೋಗುವಾಗ ನಾವಿಬ್ಬರೂ ಮನೆಗೆ ಕಟ್ ಮಿರ್ಚಿ ಪಾರ್ಸೆಲ್ ಒಯ್ದು ಬಿಡೋಣ.. ತಿಂಡಿ ಮಾಡಿ ಬಂದಿರೆಂದು ಗ್ರಾಂ ಆಗಿರುವ ಹೆಂಡತಿಯನ್ನು ಸುಪ್ರೀತಗೊಳಿಸಲು ಇದಕ್ಕಿಂತ ದೊಡ್ಡ ಅಸ್ತ್ರ ಬೇಕಿಲ್ಲ ಎಂದು ಬಂದಗದ್ದೆ ಹೇಳಿದರು..
ಮಧ್ಯಾಹ್ನದ ಮೇಲಿನ ಈ ಒಂದು ತಿರುಗಾಟ ಎಷ್ಟೊಂದು ಫಲಪ್ರದವಾಗಿತ್ತು.. ಎಷ್ಟೊಂದು ವೈವಿಧ್ಯತೆಯಿಂದ ಕೂಡಿತ್ತು ಎಂದು ಮಾತಾಡಿಕೊಂಡೆವು.. ಈ ಒಂದು ತಿರುಗಾಟದಲ್ಲಿ ಇಷ್ಟೊಂದು ಸತ್ಯಗಳನ್ನು ಬದುಕಿನ ಸತ್ವಗಳನ್ನು ಅರಿಯುತ್ತೇವೆ ಎಂದು ಹೊರಡುವ ಮುನ್ನ ನಾವು ಖಂಡಿತಾ ಎಣಿಸಿರಲಿಲ್ಲ….
- ನಾಗೇಂದ್ರ ಸಾಗರ್