‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಲನಚಿತ್ರದ ಕುರಿತು ಮಾಕೋನಹಳ್ಳಿ ವಿನಯ್ ಮಾಧವ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಹಾಸ್ಟೆಲ್ ಗೆ ಹೋದಾಗ ನನಗೆ ಇನ್ನೂ ಹತ್ತು ವರ್ಷ. ಮುನ್ನೂರ ಐವತ್ತು ಹುಡುಗರ ಜೊತೆ ನಾನೂ ಇನ್ನೊಬ್ಬ ಆಗಿದ್ದೆ ಅಷ್ಟೆ. ಪಿಳಿ ಪಿಳಿ ಕಣ್ಣು ಬಿಡುತ್ತಾ, ಅಪ್ಪ, ಅಮ್ಮನ ಜೊತೆ ಇಲ್ಲದ ಜೀವನವನ್ನು ಮೊದಲ ಬಾರಿಗೆ ಅನುಭವಿಸಿದ್ದೆ.
ಹತ್ತನೇ ತರಗತಿ ಮುಗಿಸಿ, ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಿಂದ ಹೊರ ಬೀಳುವ ಹೊತ್ತಿಗೆ, ಐದು ವರ್ಷದ ಹಿಂದಿನ ಮುಗ್ಧತೆ ಅರ್ಧಕ್ಕೆ ಇಳಿದಿತ್ತು. ಹದಿಹರೆಯದ ತುಂಟತನ ಆರಂಭವಾಗಿತ್ತು.
ಮುಂದೆ ಕಾರ್ಕಳ, ಉಡುಪಿ, ಶಿವಮೊಗ್ಗದಲ್ಲಿ ಹಾಸ್ಟೆಲ್ ವಾಸ ನಿಧಾನವಾಗಿ ನನ್ನನ್ನು ‘ಪಕ್ವ’ಗೊಳಿಸಿತು. ನನ್ನ ಉಡಾಳತನ, ಮುಂಗೋಪ, ಹುಚ್ಚಾಟ ನನ್ನ ಸುತ್ತ ಒಂದು ಅದ್ಭುತ ನೆನಪಿನ ಭಾಂಡಾರವನ್ನೇ ಸೃಷ್ಟಿಸಿತು. ಇವೆಲ್ಲ ನಡೆದಾಗ, ಇಂಟರ್ನೆಟ್, ಮೊಬೈಲ್ ಫೋನ್ ಇರಲಿಲ್ಲ. ಹಾಗಾಗಿ ನಮಗೆ ಸಮಯದ ಕೊರತೆ ಇರಲೇ ಇಲ್ಲ.
ಬರೀ ಹುಚ್ಚಾಟ, ಹೊಡೆದಾಟ, ಹುಡುಗಿಯರ ಹಿಂದೆ ಓಡಾಟ ಮಾತ್ರವಲ್ಲ. ನನ್ನ ಅಗಾಧ ಹಸಿವನ್ನು ಪ್ರೀತಿಯಿಂದ ಸಲುಹಿದ ಉಡುಪಿಯ ಭೀಮ ಭಟ್ಟರು, ಕೆಂಚಪ್ಪ, ಶಿವಮೊಗ್ಗದ ರಾಮಣ್ಣ, ಮಲ್ಲಣ್ಣ ಇನ್ನೂ ನೆನಪಿನಲ್ಲಿ ಹಸಿರಾಗಿದ್ದಾರೆ. ರಾತ್ರಿ ಎಷ್ಟೇ ಹೊತ್ತಾದರೂ, ಇವರುಗಳು ನನ್ನನ್ನು ಉಪವಾಸ ಮಲಗಲು ಬಿಟ್ಟಿರಲಿಲ್ಲ. ಹಾಗೆಯೇ, ಹಾಸ್ಟೆಲ್ ವಾರ್ಡನ್ ಗಳು, ವಾಚ್ ಮನ್ ಗಳು, ಎಲ್ಲರೂ ಸೇರಿ ನಮ್ಮ ಕುಟುಂಬ ಎಂದರೆ ಊರಿನಲ್ಲಿರುವವರೋ ಅಥವಾ ಹಾಸ್ಟೆಲ್ ನಲ್ಲಿ ಇರುವವರೋ ಎಂದು ಗೊಂದಲವಾಗುವಷ್ಟು ಹಚ್ಚಿಕೊಂಡಿರುತ್ತಿದ್ದೆವು.
ಫೋಟೋ ಕೃಪೆ : google
ಏನೇ ಆದರೂ, ತಿಂಗಳ ಕೊನೆಗೆ ಊರಿನ ಕುಟುಂಬ ನೆನಪಾಗಲೇ ಬೇಕಿತ್ತು. ತಿಂಗಳ ಮೊದಲ ವಾರ ‘ಗೋಲ್ಡನ್ ವೀಕ್’ ಅಬ್ಬರ ಮುಗಿದು, ಎರಡನೇ ವಾರಕ್ಕೆ ‘ಸಿಲ್ವರ್ ವೀಕ್’ ಆಗಿರುತ್ತಿತ್ತು. ಮೂರನೇ ವಾರವಾದ ‘ಕಾಪರ್ ವೀಕ್’ ಬರುವ ಹೊತ್ತಿಗೆ ಬೀಡಿಗೂ ಕಾಸಿಲ್ಲದೆ ಒದ್ದಾಡುತ್ತಿದ್ದೆವು. ನಾಲ್ಕನೇ ವಾರ ‘ಪಾಪರ್ ವೀಕ್’ ಆಗಿ, ನಮ್ಮ ಪರಿಸ್ಥಿತಿಯ ಶೋಚನೀಯವಾಗಿರುತ್ತಿತ್ತು. ಊರಿಂದ ಬರುವ ದುಡ್ಡಿಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದೆವು.
ಮೊದಮೊದಲು, ಹಾಸ್ಟೆಲ್ ಎಂದರೆ ನಾನು, ನನ್ನ ಗೆಳೆಯರ ಗುಂಪು, ನಮ್ಮ ವಿರೋಧಿಗಳ ಗುಂಪು, ಸೀನಿಯರ್ಸ್, ಜೂನಿಯರ್ಸ್ ನಮ್ಮ ಜಗಳಗಳು, ನಮ್ಮ ಕೀಟಲೆಗಳು ಮಾತ್ರ ನೆನಪಿಗೆ ಬರುತ್ತಿದ್ದವು. ಹಾಸ್ಟೆಲ್ ಜೀವನ ಬಿಟ್ಟು ಬಹಳ ವರ್ಷಗಳಾದ ಮೇಲೆ ನನ್ನ ಸ್ನೇಹಿತರಲ್ಲದೆ, ಹಳೇ ವಿರೋಧಿಗಳೂ ಮತ್ತು ನಾವು ಲೆಕ್ಕಕ್ಕೆ ಇಡದವರೂ ಸಿಕ್ಕಾಗ, ಹಳೆಯದನ್ನೆಲ್ಲಾ ಮರೆತು ಆತ್ಮೀಯವಾಗಿ ಮಾತನಾಡುವಾಗ, ನಾವು ಗಮನಿಸದೇ ಇದ್ದ ಎಷ್ಟೋ ವಿಷಯಗಳು ಗೊತ್ತಾಗುತ್ತಿತ್ತು. ಹಾಸ್ಟೆಲ್ ಪ್ರಪಂಚದ ಉದ್ದ, ಅಗಲ, ಆಳ ಅರ್ಥವಾಗಿದ್ದೇ ಆಗ. ಅದನ್ನೆಲ್ಲಾ ಬರೆಯಲು ಕುಳಿತರೆ, ಮಹಾಭಾರತದಷ್ಟೇ ದೊಡ್ಡ ಮಹಾಕಾವ್ಯವಾಗುತ್ತದೆ ಅಷ್ಟೆ.
ಹಾಸ್ಟೆಲ್ ಜೀವನದ ಬಗ್ಗೆ ಅದ್ಭುತವಾಗಿ ತೆಗೆದ ಚಲನಚಿತ್ರ ‘ಕಿರಿಕ್ ಪಾರ್ಟಿ’ ಎಂದೇ ಹೇಳಬೇಕು. ನಾನು ಹಾಸನದಲ್ಲಿ ಓದದಿದ್ದರೂ, ಅಲ್ಲಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ನನ್ನ ಬಹಳಷ್ಟು ಗೆಳೆಯರು ಓದುತ್ತಿದ್ದರು. ಕಿರಿಕ್ ಪಾರ್ಟಿ ಸಿನೆಮಾದಲ್ಲಿ ಬಳಸಿಕೊಂಡಿರುವ ಹೆಚ್ಚಿನ ಘಟನೆಗಳು ಅದೇ ಸಮಯದಲ್ಲಿ ನಡೆದದ್ದು. (ಹೀರೋ ಪ್ರೇಮ ಪ್ರಕರಣಗಳು ಬಿಟ್ಟು)
ಇಂದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಲನಚಿತ್ರಕ್ಕೆ ಹೋಗಿದ್ದೆ. ಒಂದೇ ಮಾತಿನಲ್ಲಿ ಹೇಳಬೇಕಾದರೆ, ಜಸ್ಟ್ ಚಿಲ್ ಮಾಡಬಹುದಾದ ಸಿನೆಮಾ. ನನ್ನ ಮಗಳ ಮಾತಿನಲ್ಲಿ ಹೇಳಬೇಕೆಂದರೆ, ‘ಪೈಸಾ ವಸೂಲ್’ ಸಿನೆಮಾ.
ಫೋಟೋ ಕೃಪೆ : google
‘ವಾರ್ಡನ್’ ಅವಾಸ್ತವಿಕ ಎನಿಸಿದರೂ, ಸಿನೆಮಾ ಲವಲವಿಕೆಯಿಂದ ಓಡುತ್ತದೆ. ಇಂತಹ ಸಿನೆಮಾಗಳಲ್ಲಿ ನನಗೆ ಯಾವಾಗಲೂ ಒಂದು ನ್ಯೂನತೆ ಕಾಣುತ್ತಿತ್ತು. ಅದು ನಾನು ಮೊದಲೇ ಹೇಳಿದಂತೆ, ನಮ್ಮ ಹಾಸ್ಟೆಲ್ ನೆನಪುಗಳಲ್ಲಿ ಅಸಂಖ್ಯಾತ ಪಾತ್ರಗಳನ್ನು ನಾವು ಗಮನಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ.
ಇಂತಹ ಸಿನೆಮಾಗಳಲ್ಲೂ ಅಷ್ಟೆ. ನೂರಾರು ಜನರ ಗುಂಪುಗಳನ್ನು ತೋರಿಸಿದರೂ, ಹೀರೋ, ಹೀರೋಯಿನ್, ವಿಲ್ಲನ್, ನಾಲ್ಕೈದು ಸಣ್ಣ ಪಾತ್ರಗಳನ್ನು ಬಿಟ್ಟರೆ, ಇನ್ನುಳಿದವರೆಲ್ಲ ಡಮ್ಮಿ.
ಈ ಸಿನೆಮಾದ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಇಷ್ಟವಾಗಿದ್ದೇ ಈ ಕಾರಣದಿಂದ. ಈ ಸಿನೆಮಾದಲ್ಲಿ ಎಲ್ಲಾ ಕಡೆ ಗುಂಪುಗಳೇ ಇರುತ್ತವೆ. ಯಾರೂ ಡಮ್ಮಿ ಅಲ್ಲ. ಸೀನಿಯರ್, ಜ್ಯೂನಿಯರ್, ವಾಚ್ ಮ್ಯಾನ್, ವಾರ್ಡನ್, ಲೇಡಿಸ್ ಹಾಸ್ಟೆಲ್ ಎಲ್ಲರೂ ಪರದೆ ಮೇಲೆ ಬಂದಾಗ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ.
ಇದೊಂತರಾ ಕುವೆಂಪು ಹೇಳಿದಂತೆ….
‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಆಮುಖ್ಯರಲ್ಲ’
- ಮಾಕೋನಹಳ್ಳಿ ವಿನಯ್ ಮಾಧವ್