ಸ್ವಚ್ಚಂದವಾಗಿ ಬೆಳೆಯುವ ಮಾವಿನ ಗಿಡವನ್ನು ಸಣ್ಣದಾದ ಪಾಟಿನಲ್ಲಿ ಬೆಳೆಸಿದರೆ ಭೂಮಿಯಲ್ಲಿ ಬೆಳೆಸಿದಂತೆ ಬೆಳಿಯುತ್ತಾ ? ಸಾಧ್ಯವಿಲ್ಲ ತಾನೆ. ಅದರಂತೆ ನಮ್ಮ ರಾಜನಿಗೆ ಬೆಳೆಯುವ ಅವಕಾಶ ಸಿಕ್ಕಿದೆ. ಅವನನ್ನು ಮನೆಯಲ್ಲಿ ಕಟ್ಟಿಹಾಕುವುದು ಬೇಡ ಎಂದು ಅವರು ಹೇಳಿದಾಗ ನಾನು ಎಷ್ಟೇ ದುಃಖವಿದ್ದರೂ ಮನಸ್ಸಲ್ಲೇ ನೋವನ್ನು ಅದುಮಿಟ್ಟುಕೊಂಡೆ. ಎನ್.ವಿ.ರಘುರಾಂ ಅವರು ಬರೆದ ಒಂದು ಮನಮುಟ್ಟುವ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
‘ಹೊರಡಪ್ಪ’ ಎಂದು ಇವರು ಹೇಳಿದ ತಕ್ಷಣ ಡ್ರೈವರ್ ಕಾರನ್ನು ಮುಂದಕ್ಕೆ ಹೊರಡಿಸಿದ. ಕಾರು ವಿಮಾನ ನಿಲ್ದಾಣದಿಂದ ಹೊರಟಾಗ ವಿಮಾನವೊಂದು ಆಕಾಶಕ್ಕೆ ಏರುತ್ತಿರುವ ದೃಶ್ಯ ಕಣ್ಣಿಗೆ ಬಿತ್ತು. ‘ಅದು ರಾಜ ಕೂತಿರುವ ವಿಮಾನವೇ?’ ಗಂಡನನ್ನು ಕೇಳಲು ಹೊರಟ ಮಾತುಗಳು ಗಂಟಲಲ್ಲೇ ಉಳಿಯಿತು. ನಿರ್ವಿಕಾರಬಾವದಿಂದ ಕೂತಿದ್ದ ಗಂಡನ ಕಡೆ ನೋಡಿದಳು. ತನ್ನ ಭಾವನೆಗಳಿಗೆ ಯಾವಾಗಲೂ ಬೆಲೆ ಕೊಡುವ ಗಂಡ ಈ ಸಾರಿ ಮಾತ್ರ ಮಗನ ಪರವಾಗಿ ನಿಂತರೆ?, ಕಳೆದ ತಿಂಗಳಿಗೆ ಮದುವೆಯಾಗಿ ಇಪ್ಪತ್ತಾರು ವರ್ಷವಾಯಿತು. ಇದೇ ಪ್ರಥಮ ಬಾರಿ ನನ್ನ ಇಷ್ಟವನ್ನು ತಿಳಿದುಕೊಳ್ಳದೆ ನಿರ್ಧಾರ ತೆಗೆದುಕೊಂಡು, ಮಗನಿಗೆ ಉತ್ತೇಜನ ಕೊಟ್ಟಿದ್ದರು. ಹಾಗೆ ಕಾರಿನ ಸೀಟಿಗೆ ಒರಗಿಕೊಂಡಳು. ಆಗಲೇ ಮಧ್ಯರಾತ್ರಿ ಆಗಿದೆ. ಕಿಟಕಿಯಿಂದ ಮುಖದ ಮೇಲೆ ಬಿದ್ದು ಮಾಯವಾಗುತ್ತಿದ್ದ ರಸ್ತೆ ದೀಪದ ಬೆಳಕು ನೆರಳಿನ ಆಟದ ನಡುವೆ ಹಳೆಯ ನೆನಪುಗಳು ಮುಂದೆ ಬಂದವು.
ಆರು ತಿಂಗಳೇ ಆಯಿತಲ್ಲ. ಆ ದಿನ ನನಗೆ ಚೆನ್ನಾಗಿ ನೆನಪಿದೆ. ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ದ ರಾಜ ಸಂಜೆ ಮನೆಗೆ ಬಂದಾಗ ಅವನ ಮುಖದಲ್ಲಿ ಖುಷಿಯಿತ್ತು. ‘ಅಮ್ಮ ಅಮೆರಿಕಾದ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್. ಓದಲು ಸೀಟ್ ಸಿಕ್ಕಿದೆ. ಆಗಷ್ಟ್ ತಿಂಗಳಲ್ಲಿ ಹೋಗಬೇಕು….’ ನನಗಿನ್ನೇನು ಅವನು ಹೇಳಿದ್ದು ಕಿವಿಗೆ ಬೀಳಲಿಲ್ಲ…. ‘ಓಹ್! ಬಂತಾ ಲೆಟರ್! ಹಾರ್ಟೀ ಕಂಗ್ರಾಜುಲೇಶನ್ಸ್!’ ಎಂದು ಇವರು ಮಗನನ್ನು ಅಭಿನಂದಿಸುತ್ತಾ ‘ಎಲ್ಲ ತಯಾರಿ ಮಾಡಿಕೋ’ ಎಂದು ಅವನಿಗೆ ಹೇಳುತ್ತಾ ‘ಅವನಿಗೆ ಊಟ, ತಿಂಡಿ ಮಾಡೋದು ಸ್ವಲ್ಪ ಹೇಳಿ ಕೊಡೆ, ಅಲ್ಲಿ ಅವನೇ ಅಡಿಗೆ ಮಾಡಿಕೊಳ್ಳಬೇಕು’ ಎಂದು ಹೇಳುತ್ತಾ ಎಂದಿನಂತೆ ಪುಸ್ತಕ ಹಿಡಿದುಕೊಂಡು ಕೂತರು.
ಅವನನ್ನು ಬಿಟ್ಟಿರುವುದು ನನ್ನ ಊಹೆಗೆ ನಿಲುಕದ್ದು. ಇವರಾಗಲೀ, ಮಗನಾಗಲಿ ನನ್ನ ಅಭಿಪ್ರಾಯ ಕೇಳಲೇ ಇಲ್ಲವಲ್ಲ. ಯಾವತ್ತು ಹೀಗೆ ಮಾಡಿರಲಿಲ್ಲ ಇವರು. ಯಾವುದೇ ಸಂದರ್ಭವೇ ಇರಲಿ ನಾನು ಸೂಚ್ಯವಾಗಿ ಹೇಳಿದ್ದನ್ನೇ ತಿಳಿದುಕೊಂಡು ಅದರಂತೆ ಮಾಡುತ್ತಿದ್ದರು. ಪದವಿಗೆ ಸೇರುವಾಗಲೂ ದೂರದ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟ್ ಸಿಕ್ಕಿದಾಗ, ‘ಏನ್ರೀ, ಮಗು ಇನ್ನು ಸಣ್ಣದು, ಅವನನ್ನು ಒಬ್ಬನೇ ಕಳುಹಿಸುವುದೇ?’ ಎಂದಾಗ, ‘ಸ್ಕೋಪ್ ಇರುವುದು ಕಾಲೇಜಿಗಲ್ಲ, ನಿನಗೆ. ನೀನು ಚೆನ್ನಾಗಿ ಕಲಿತರೆ ಎಲ್ಲಿದ್ದರೂ ಕೆಲಸ ಸಿಗುತ್ತದೆ’ ಎಂದು ಮಗನಿಗೆ ಹೇಳಿದ್ದರು. ಮಗ ಅದರಂತೆ ತಿಪಟೂರಿನಲ್ಲೇ ಕಾಲೇಜಿಗೆ ಸೇರಿದ. ರಾಜ ಮೊದಲಿನಿಂದ ಬುದ್ಧಿವಂತನೆ, ಯಾವಾಗಲೂ ತಾನಾಯಿತು, ತನ್ನ ಪಾಠವಾಯಿತು ಎಂದು ಆರಾಮಾಗಿದ್ದ. ಮಧ್ಯೆ, ಮಧ್ಯೆ ಇವರು ಅವನನ್ನು ತಮ್ಮ ತೋಟಗಾರಿಗೆಯ ಕಡೆಗೆ ತಿರುಗಿಸಲು ಪ್ರಯತ್ನಪಟ್ಟಿದ್ದರು. ಅದನ್ನೆಲ್ಲಾ ಕುತೂಹಲದಿಂದ ನೋಡುತ್ತಿದ್ದರೂ ಗಣಿತ ಮತ್ತು ವಿಜ್ಞಾನ ಅವನನ್ನು ಬಿಗಿದಪ್ಪಿಕೊಂಡಿತ್ತು. ಕಾಲೇಜ್ ಶಿಕ್ಷಣ ಮುಗಿಯುವ ಹೊತ್ತಿಗೆ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟವೇರ್ ಕಂಪನಿಯಲ್ಲಿ ಉದ್ಯೋಗ ಕೂಡ ಸಿಕ್ಕಿತ್ತು. ಈಗ ಮತ್ತೊಮ್ಮೆ ‘ಮಗ ಸಣ್ಣವನು, ಒಬ್ಬನೇ ಇರಬೇಕಲ್ಲ, ನಾವೂ ಹೋಗೋಣವೇ?’ ಎಂದಾಗ ಬೆಂಗಳೂರಿನಲ್ಲೇ ಇನ್ನೊಂದು ಮನೆ ಮಾಡಿದರು. ತಿಪಟೂರ್ ಎನೂ ಬೆಂಗಳೂರಿನಿಂದ ದೂರ ಇಲ್ಲವಲ್ಲ. ವಾರಕೊಮ್ಮೆ ಬಂದು ತೋಟ ನೋಡಿಕೊಂಡು ಹೋಗುವುದು ಎಂದು ತೀರ್ಮಾನ ಮಾಡಿ ಆಯಿತು. ಬೆಂಗಳೂರಿನ ಬಾಡಿಗೆ ಮನೆ ತಿಪಟೂರಿನ ವಿಶಾಲವಾದ ಮನೆಗೆ ಹೋಲಿಸಿದರೆ ಸಣ್ಣದಾದರೂ, ಮಗನ ಜೊತೆ ಇರಲು ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಆಗಲೇ ಬಂದಿದ್ದು ನೋಡಿ ಈ ಮಹಾಮಾರಿ ಕೊರೋನ. ‘ಮನೆಯಿಂದಲೇ ಕೆಲಸ’ ಎಂದ ಮೇಲೆ ತಿಪಟೂರಿಗೆ ಹಿಂತಿರುಗಿದೆವು. ಅಂಥೂ ಎರಡು ತಿಂಗಳ ಸಮಯದಲ್ಲಿ ಬೆಂಗಳೂರಿನ ನಗರದ ಜೀವನದ ಪರಿಚಯ ಮಾಡಿಕೊಂಡಿದ್ದು ಮತ್ತು ಅದರ ಚಿತ್ರ ವಿಚಿತ್ರ ಸುಖಃ ಅನುಭವಿಸಿದ್ದು ಸುಳ್ಳಲ್ಲ.
ಫೋಟೋಕೃಪೆ : google
ಕಾರು ಬೆಂಗಳೂರನ್ನು ದಾಟಿ, ತುಮಕೂರಿನ ರಸ್ತೆಯಲ್ಲಿ ನಿಧಾನವಾಗಿ ಚಲಿಸುತ್ತಿತ್ತು. ‘ವೇಗವಾಗಿ ಹೋದರೆ ಕೆಲಸ ಕಳೆದುಕೊಳ್ಳುತ್ತೀಯಾ’ ಎಂದು ಇವರು ಮೊದಲೇ ಹೆದರಿಸಿದ್ದರು. ರಾತ್ರಿ ಒಂದುಗಂಟೆ. ಆದರೂ ನಿದ್ದೆ ಬರುತ್ತಿರಲಿಲ್ಲ. ಹಾಗೆ ನೋಡಿದರೆ ನಿದ್ದೆ ಇಲ್ಲದೆ ಅನೇಕ ರಾತ್ರಿಗಳನ್ನು ಕಳೆದ ಆರು ತಿಂಗಳಿಂದ ಕಳೆದಿಲ್ಲವೆ? ಹಾಗೆ ನೋಡಿದರೆ, ಈ ಕಂಪ್ಯೂಟರ್ ನಲ್ಲಿ ಮಾಡುವ ಕೆಲಸಗಳು ಬಂದ ಮೇಲೆ ಮಕ್ಕಳು ಹೊರದೇಶಕ್ಕೆ ಹೋಗುವುದು ಸಾಮಾನ್ಯವೇ ಆಗಿದೆ. ಆದರೂ ನಮ್ಮ ಮಗನೇ ಹೊರಟು ನಿಂತಾಗ, ಅರಗಿಸಿಕೊಳ್ಳುವುದು ಸುಲಭದ ವಿಷಯವಲ್ಲ. ಕೇಳುವವರ ಮುಂದೆ ಮಗ ಅಮೆರಿಕಾಗೆ ಹೋಗುವ ವಿಷಯ ಸಂತೋಷದಿಂದ ಹೇಳಿಕೊಂಡರೂ ಮನಃ ಸಂತೋಷ ಪಡುತ್ತಿರಲಿಲ್ಲ. ಅಂಥೂ ಒಂದು ವರ್ಷ ಮನೆಯಿಂದಲೇ ಕೆಲಸ ಮಾಡುವ ಹೊತ್ತಿಗೆ ಮಗ ಈ ಸುದ್ದಿ ತಂದಿದ್ದ. ”ಇಲ್ಲೆ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ಓದಬಹುದಲ್ಲ’ ಎಂದು ಕೇಳಿದಾಗ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯ ಸಿ.ಇ.ಓ. ಶ್ರೀಮೂರ್ತಿರಾವ್ ರವರ ಒಂದು ವಿಡಿಯೋ ಸಂದರ್ಶನ ತೋರಿಸಿದ ಮಗ. “ನೋಡಮ್ಮ ಅವರ ಮಗನಿಗೇ ಅಂತಹ ಕಡೆ ಸೀಟ್ ಸಿಗುವ ಸಂಭವ ಕೇವಲ ನೂರಕ್ಕೆ ಹನ್ನೊಂದರಷ್ಟೆ ಅಂಥೆ, ಇನ್ನು ನನಗೆ ಸೀಟ್ ಸಿಗುವ ಅವಕಾಶ ಬಹಳ ಕಡಿಮೆ. ಅವರು ನಡೆಸುವ ಪರೀಕ್ಷೆಯಲ್ಲಿ ನಾನು ಪಾಸಾಗುವುದು ಕಷ್ಟ’ ಎಂದು ಹೇಳಿದ. ‘ಅಮೆರಿಕಾದ ವಿಶ್ವ ವಿದ್ಯಾಲಯದಲ್ಲಿ ಸೀಟ್ ಮತ್ತು ವಿದ್ಯಾರ್ಥಿವೇತನ ಸಿಕ್ಕುವ ಈ ಹುಡುಗರಿಗೆ ಭಾರತದಲ್ಲಿ ಸೀಟ್ ಸಿಗಲ್ಲವೆಂದರೆ ಏನು?’ ಎಂದು ಕೇಳಿದರೆ, ‘ಅದು ಹಾಗೇ ಅಮ್ಮ, ಅವರು ಅಪ್ಟಿಟ್ಯೂಡ್ ಟೆಸ್ಟ್ ಮಾಡುತ್ತಾರೆ, ಇವರು……..’ ಎಂದು ಎನೇನೊ ಹೇಳಿದ. ನನಗಂತೂ ಏನೂ ಅರ್ಥ ಆಗಲಿಲ್ಲ.
ಹಾಗೆ ಹೀಗೆ ಕಳೆಯುವುದರಲ್ಲಿ ಆಗಷ್ಟ್ ಬಂದೇ ಬಿಟ್ಟಿತು. ಹದಿನೈದು ದಿನ ಇರುವಾಗಲೇ ಹೊರಡುವ ಗಡಿಬಿಡಿ ಅವನಿಗಿಂತ ನನಗೆ ಹೆಚ್ಚಾಗಿತ್ತು. ಅಂತೂ ಆ ದಿನ ಬಂದಾಗ, ಅದಷ್ಟು ದಿನ ಮೌನವಾಗಿ ರೋಧಿಸಿ ಸಾಕಾಗಿದ್ದ ಮನಸ್ಸು, ದೇವರ ದೀಪ ಹಚ್ಚುವ ಹೊತ್ತಿಗೆ, ಕಣ್ಣೀರಾಗಿ ಸೆರಗನ್ನು ಒದ್ದೆಮಾಡಿಸಿತ್ತು. ಇವರು ಬಂದು ಸಮಾಧಾನ ಮಾಡಲು ಭುಜ ತಟ್ಟಿ ಹೋದರು. ಏನೂ ಮಾತನಾಡಲಿಲ್ಲ. ಮನೆಯಿಂದ ಹೊರಡುವಾಗ, ಎಲ್ಲರ ಮುಖದಲ್ಲಿ ನಗು ತರಿಸಿಕೊಂಡು ಹೊರಟಿದ್ದು ಆಯಿತು, ವಿಮಾನ ಹತ್ತಿಸಿದ್ದು ಆಯಿತು.
ಕಾರನ್ನು ತುಮಕೂರಿನ ಹೊರವಲಯದಲ್ಲಿ ಒಂದು ಸಣ್ಣ ಟೀ ಅಂಗಡಿಯ ಮುಂದೆ ನಿಲ್ಲಿಸಿದ ಡ್ರೈವರ್. ನಾನು ಅವನ ಜೊತೆ ಟೀ ಕುಡಿದೆ. ಇವರು ಯಾವುದೇ ಚಿಂತೆಯಿಲ್ಲದೆ, ಸೀಟ್ ರಿಕ್ಲೈನ್ ಮಾಡಿಕೊಂಡು ನಿದ್ದೆ ಮಾಡುತ್ತಿದ್ದರು. ಮದುವೆ ಆದಾಗಿನಿಂದ ಇದನ್ನೇ ನಾನು ನೋಡುತ್ತಿದ್ದೇನೆ. ಯಾವುದೇ ಸಂದರ್ಭದಲ್ಲೂ ಇವರು ನೆಮ್ಮದಿಯಿಂದ ನಿದ್ದೆ ಮಾಡುವ ಪರಿ ನನಗೆ ಆಶ್ಚರ್ಯ. ‘ಅದು ಹೇಗ್ರಿ ಮಲಗಿಕೊಂಡ ತಕ್ಷಣ ನಿಮಗೆ ನಿದ್ದೆ ಮಾಡಲು ಸಾಧ್ಯ? ‘ ಒಮ್ಮೆ ಅವರಿಗೆ ಕೇಳಿದಾಗ, ಅವರು ನಕ್ಕು ಬಿಟ್ಟರು. ‘ನೋಡು ಒಂದು ಸಾರಿಗೆ ಒಂದೇ ಕೆಲಸ ಮಾಡ ಬೇಕು. ಕೆಲಸ ಮಾಡುವಾಗ ಕೆಲಸ, ನಿದ್ದೆ ಮಾಡುವಾಗ ನಿದ್ದೆ. ಯಾವುದನ್ನು ಮಿಕ್ಸ್ ಮಾಡಬಾರದು’ ಎಂದಿದ್ದರು. ‘ಆಗುವುದೆಲ್ಲಾ ಆಗೇ ಆಗತ್ತೆ. ಚಿಂತಿಸಿ ಫಲವೇನು?’ ಎಂದು ನನಗೇ ಪ್ರಶ್ನೆ ಹಾಕಿದ್ದರು.
ಆಗ ತಾನೇ ಬಿ.ಎ. ಮುಗಿಸಿ ಮುಂದೇನು ಮಾಡ ಬೇಕೆಂದಿರುವಾಗ ಮಧ್ಯಸ್ಥರೊಬ್ಬರಿಂದ ಇವರ ಜೊತೆ ಮದುವೆಯ ಪ್ರಸ್ತಾಪ ಬಂತು. ಎಂ.ಕಾಂ. ಓದಿದ ಹುಡುಗ, ಮನೆಯಲ್ಲಿ ಅನುಕೂಲವಾಗಿದ್ದಾರೆ ಎಂದು ತಿಳಿದಾಗ ಅಪ್ಪ ಒಪ್ಪಿದರು. ದೈವ ಸಂಕಲ್ಪವೇ ಇರಬೇಕು. ಯಾವುದೇ ತೊಂದರೆ ಇಲ್ಲದೇ ಮದುವೆ ಆಯಿತು. ಎರಡನೇಯ ವರ್ಷಕ್ಕೆ ರಾಜನ ಆಗಮನವಾಯಿತು. ‘ವೆಂಕಟೇಶ್ ಎಂದು ಮನೆ ದೇವರ ಹೆಸರು ಇಡಿ. ಮೊದಲನೇ ಮಗನನ್ನು ಹೆಸರಿಟ್ಟು ಕರೆಯಬಾರದು. ಇನ್ನು ಮೇಲೆ ರಾಜ ಎಂದು ಕರೆಯಿರಿ’ ಎಂದು ಅತ್ತೆ ಹೇಳಿದರು. ಅಂದಿನಿಂದ ನಮ್ಮೆಲ್ಲರ ಮುದ್ದಿನ ಕಣ್ಮಣಿ ಆಗಿ ಬೆಳೆದ ರಾಜ. ಆಗಲೇ ಇವರಿಗೆ ಹೊಸದೊಂದು ಮಾವಿನ ತೋಪು ಮಾಡುವ ಯೋಚನೆ ಬಂದಿದ್ದು. ‘ಅಲ್ಲ ಕಣೋ, ತಿಪಟೂರಿನಲ್ಲಿ ತೆಂಗಿನಮರ ಇದೆ. ಇತ್ತೀಚಿಗೆ ಅಡಿಕೆ ಕೂಡ ಬೆಳೆಯಲು ಪ್ರಾರಂಭ ಮಾಡಿದ್ದಾರೆ. ಇದ್ಯಾಕೆ ಮಾವಿನ ತೋಪು?’ ಎಂದು ಮಾವ ರಾಗ ಎಳೆದಿದ್ದರು. ಆದರೂ ಬಿಡದೆ ಇವರು ಆ ಕೆಲಸಕ್ಕೆ ಕೈ ಹಾಕಿಯೇ ಬಿಟ್ಟರು. ಮದುವೆ ಆದ ಹೊಸದರಲ್ಲಿ ಒಮ್ಮೆ ಮಾರ್ಕೆಟ್ಗೆ ಹೋದಾಗ ‘ನಿನಗೆ ಯಾವ ಹಣ್ಣು ಇಷ್ಟ?’ ಎಂದು ಕೇಳಿದ್ದರು. ‘ಮಾವಿನ ಹಣ್ಣು’ ಎಂದಿದ್ದೆ ನಾನು. ಆ ಡಿಸಂಬರ್ ತಿಂಗಳಲ್ಲಿ ಎಲ್ಲಿಂದ ಮಾವಿನ ಹಣ್ಣು ಬರಬೇಕು? ಅವರು ನಕ್ಕು ಕಿತ್ತಲೆ ಹಣ್ಣು ತೆಗೆದುಕೊಂಡಿದ್ದರು. ಆದರೆ ಮಾರನೇ ದಿನವೇ ಮಾವಿನ ತೋಪು ಮಾಡುವ ಕನಸು ಅವರ ಮನಕ್ಕೆ ಹೊಕ್ಕಿತ್ತು.
ಫೋಟೋಕೃಪೆ : google
ರಾಜ ಹುಟ್ಟಿದಾಗ ಊರಿನ ಹೊರಗೆ ಕಡಿಮೆ ಕ್ರಯದಲ್ಲಿ ಸಿಕ್ಕ ಐದು ಎಕರೆ ಸಾಧಾರಣ ಭೂಮಿ ತೆಗೆದುಕೊಂಡರು. ಅಲ್ಲಿ ಧೈರ್ಯ ಮಾಡಿ ಮಾವಿನ ಕೃಷಿ ಪ್ರಾರಂಭ ಮಾಡಿಯೇ ಬಿಟ್ಟರು. ನಿಧಾನವಾಗಿ ಮಾವು ಬೆಳೆಯಲು ಪ್ರಾರಂಭವಾಯಿತು. ನಾನು ರಾಜನ ಅರೈಕೆಯಲ್ಲಿ ನಿರತಳಾದರೆ, ಇವರು ಆ ಮಾವಿನ ಗಿಡಗಳ ಅರೈಕೆಯಲ್ಲಿ ಕಳೆದರು. ಒಂದು ಕಡೆ ರಾಜ ಬೆಳೆದು ದೊಡ್ಡವನಾಗುತ್ತಿದ್ದರೆ, ಈ ಕಡೆ ಗಿಡಗಳು ಮರವಾಗಲು ಪ್ರಾರಂಭವಾಗಿತ್ತು. ಆತ ಹೈಸ್ಕೂಲ್ ಹತ್ತುವ ಹೊತ್ತಿಗೆ ಭರ್ಜರಿ ಹಣ್ಣು ಬಿಡಲು ಪ್ರಾರಂಭ ಆಗಿತ್ತು. ಒಂದು ವರ್ಷ ಕೊಬ್ರಿ ಬೆಲೆ ಬಿದ್ದಾಗ, ಈ ಮಾವು ಕೈ ಹಿಡಿಯಿತು. ಆಗ ಮಾವ ಕೂಡ ‘ ಓಳ್ಳೆಯ ಕೆಲಸ ಮಾಡಿದೆ ಬಿಡು. ಕೈ ಕೆಸರಾದರೆ ಬಾಯಿ ಮೊಸರು ಗಾದೆ ಸುಳ್ಳಾಗಲ್ಲ, ಅಲ್ಲವಾ?’ ಎಂದಿದ್ದರು. ಆದರೆ ಅವರು ರಾಜನ ಮುಂದಿನ ಬೆಳವಣಿಗೆ ನೋಡಲು ಇರಲಿಲ್ಲ. ಎರಡು ವರ್ಷಗಳ ನಂತರ ಅತ್ತೇನೂ ಮಾವನನ್ನು ಹಿಂಬಾಲಿಸಿದರು. ‘ಜಾತಸ್ಯ ಮರಣಂ ಧ್ರುವಂ…’ ಎಂದು ವೈದಿಕ ಕರ್ಮಾದಿಗಳನ್ನು ಮಾಡಲು ಬಂದ ಶಾಸ್ತ್ರೀಗಳು ಸಮಾಧಾನ ಹೇಳಿ ಹೋಗಿದ್ದರು. ಇವರಿಗೆ ಬೇಸರವಾದರೆ ಹೋಗುತ್ತಿದ್ದುದೇ ಆ ಮಾವಿನ ತೋಪಿಗೆ. ಸಂಪ್ರದಾಯಿಕವಾಗಿ ಮಾಡುತ್ತಿದ್ದ ತೆಂಗಿನ ಬೆಳೆಗಿಂತ ಇವರು ಮಾವಿನ ತೋಪಿನಲ್ಲೇ ಕಾಲ ಕಳೆದು ಮನ ಹಗುರ ಮಾಡಿಕೊಳ್ಳುತ್ತಿದ್ದರು. ರಾಜನ ಹುಟ್ಟಿದ ಹಬ್ಬ, ಹತ್ತನೇಯ ತರಗತಿ ಪಾಸಾದಾಗ, ಇಂಜನಿಯರಿಂಗ್ ಸೇರಿದಾಗ, ಏನೇ ಆದರೂ ಈ ಮಾವಿನ ತೋಪಿನಲ್ಲೇ ಪಾರ್ಟಿ. ‘ಎನ್ರೀ ನನ್ನ ಸವತಿ ಹೇಗಿದ್ದಾಳೆ’ ಎಂದು ಎಷ್ಟೋ ದಿನ ಇವರು ತಡವಾಗಿ ಬಂದಾಗ ನಾನು ಕೇಳಿದ್ದಿದೆ. ರಾಜನಿಗೆ ಬರುವ ಜ್ವರ, ಶೀತ, ಇತರ ಆರೋಗ್ಯದ ಸಮಸ್ಯೆಗಳಿಗೆ ನಾನು ಒದ್ದಾಡುತ್ತಿದ್ದರೆ, ‘ಅದೆಲ್ಲ ಸಾಮಾನ್ಯ ಬಿಡು, ಯೋಚನೆ ಮಾಡಬೇಡ. ಔಷಧಿ ಕುಡಿಸು, ಸರಿ ಹೋಗುತ್ತೆ’ ಎನ್ನುತ್ತಾ ಒಂದೆರೆಡು ಬಾರಿ ಬೆನ್ನು ತಟ್ಟಿ ‘ಚಿಯರ್ ಅಪ್’ ಎಂದು ಹೇಳಿ ಹೊರಟು ಹೋಗುತ್ತಿದ್ದರು. ಆದರೆ ಮಳೆಗಾಲದಲ್ಲಿ ಗಿಡಗಳಿಗೇನಾದ್ರು ಫಂಗಸ್ ಬಂದರೆ ಮಾತ್ರ ಇವರ ಚಡಪಡಿಕೆಗೆ ಕೊನೆಯಿಲ್ಲ. ಇಡೀ ದಿನ ತಂಡಿಯಲ್ಲಿ ನಿಂತು ಔಷಧಿ ಹೊಡೆಸುತ್ತಿದ್ದರು. ಆಗ ನನಗೆ ರಾಜನ ಜೊತೆ ಇವರನ್ನೂ ನೋಡಿಕೊಳ್ಳುವ ಕೆಲಸ.
ಅಷ್ಟರಲ್ಲಿ ಮನೆ ಬಂದಿತು. ಅದೇ ಸಮಯದಲ್ಲಿ ರಾಜನಿಂದ ಫೋನು ಬಂತು. ರಾಜ ಅಬುಧಾಬಿ ತಲುಪಿದ್ದ. ‘ಎಲ್ಲಾ ಚೆನ್ನಾಗಿದೆಯಮ್ಮ. ವೆಜಿಟೇರಿಯನ್ ಊಟ ಸಿಕ್ಕಿತು. ಏನೂ ಯೋಚನೆ ಬೇಡ…’ ರಾಜ ಖುಷಿಯಿಂದ ಹೇಳುತ್ತಿದ್ದ. ‘ ಅಯಿತು ರೆಸ್ಟ್ ಮಾಡಿ, ಮತ್ತೆ ತಲುಪಿದ ಮೇಲೆ ಮಾಡುತ್ತೇನೆ’ ಎಂದಾಗ, ಇವರು ಎಂದಿನಂತೆ ‘ ‘ಟೇಕ್ ಕೇರ್’ ಎಂದು ಹೇಳಿದಾಗ ನಾನು ಶುಷ್ಕ ನಗೆಬೀರಿ ‘ಬೈ,ಬೈ’ ಎಂದೆ.
ಆಗಲೇ ಬೆಳಗಿನ ಜಾವ ನಾಲ್ಕು ಗಂಟೆಯ ಹತ್ತಿರ ಬಂದಿತ್ತು. ಹಾಗೆಯೇ ಮಲಗಿಕೊಂಡೆವು. ನಿದ್ದೆ ಹಾರಿ ಹೋಗಿತ್ತು…. ನನಗಂತೂ ರಾಜ ಬಂದು ಅಮೆರಿಕಾಗೆ ಹೋಗುವ ವಿಷಯ ಹೇಳಿದಾಗ ನನಗೆ ಇವರ ಮೇಲೆ ಸಿಟ್ಟು ಬಂದಿದ್ದು ನಿಜ. ಅದು ಅವರಿಗೂ ಗೊತ್ತಾಗಿತ್ತು. ಆ ಮಾರನೇಯ ದಿನ ಸಂಜೆ ನನ್ನ ಮಾವಿನ ತೋಪಿಗೆ ಕರೆದುಕೊಂಡು ಹೋದರು. ‘ನೋಡು, ಹೇಗೆ ಬೆಳೆದಿದೆ, ಈ ಮರಗಳು ಇನ್ನೂ ಬೆಳೆಯತ್ತೆ ಎಂದು ನಿನಗೆ ಅನಿಸುತ್ತಾ’ ಎಂದು ಕೇಳಿದರು. ‘ಇದೇನು ಪ್ರಶ್ನೆ. ರಾಜ ಹುಟ್ಟಿದ ವರ್ಷ ಹಾಕಿದ್ದಲ್ಲವೆ? ಚೆನ್ನಾಗಿ ವಿಶಾಲವಾಗಿ ಬೆಳದಿವೆ. ಇನ್ನೂ ಬೆಳೆಯುತ್ತಾ? ಗೊತ್ತಿಲ್ಲ’ ಎಂದೆ. ‘ನೋಡು ಈ ಗಿಡನ ಮನೆಯಲ್ಲಿ ಪಾಟಿನಲ್ಲಿ ಹಾಕಿದ್ದರೆ ಏನಾಗುತ್ತಿತ್ತು? ಯೋಚಿಸಿ ನೋಡು’ ಎಂದರು. ‘ಇದೇನ್ರಿ, ಮಾವಿನ ಗಿಡ ಪಾಟಿನಲ್ಲಿ ಯಾರಾದ್ರು ಹಾಕುತ್ತಾರೆಯೇ? ಅದು ಬೆಳೆಯುವುದಾದರೂ ಹೇಗೆ?’ ಎಂದೆ. ‘ನೋಡು, ಪಾಟಿನಲ್ಲಿ ಹಾಕಿದ್ದರೆ ಬಹುಶಃ ನಮ್ಮ ಮನೆಗೆ ತೋರಣ ಕಟ್ಟುವಷ್ಟು ಮಾತ್ರ ಎಲೆ ಬಿಡುತ್ತಿತ್ತು. ಆದರೆ ಈಗ ಈ ವಿಶಾಲವಾದ ಜಾಗದಲ್ಲಿ ಬೆಳೆದು ನಮಗೆ ಆಸರೆ ಆಗುವ ಜೊತೆಗೆ ನೂರಾರು ಜನರ ಬಾಯಿ ಸಿಹಿ ಮಾಡಿದೆ’ ಎಂದು ಹೇಳುತ್ತಾ ‘ನೋಡು, ರಾಜನಿಗೆ ಇನ್ನೂ ಬೆಳೆಯುವ ಅವಕಾಶ ಬಂದಿದೆ. ಅವನನ್ನು ಮನೆಯಲ್ಲಿ ಕಟ್ಟಿಹಾಕುವುದು ಬೇಡ. ಈ ಮಾವಿನ ಮರಗಳ ತರಹ ಅವನೂ ವಿಶಾಲವಾಗಿ ಬೆಳೆಯಲಿ’ ಎಂದು ಇವರು ಹೇಳಿದಾಗ ನನಗೆ ಇನ್ನೇನು ಮಾತನಾಡಲು ಉಳಿಯಲಿಲ್ಲ. ಯಾವ ತಾಯಿ ಮಕ್ಕಳ ಏಳಿಗೆ ಬಯಸಲ್ಲ? ನಾನು ವಾಸ್ತವಸ್ಥಿತಿಗೆ ನಿಧಾನವಾಗಿ ಹೊಂದಿಕೊಳ್ಳಲು ಪ್ರಯತ್ನಪಟ್ಟೆ.
ಫೋಟೋಕೃಪೆ : google
ಬೆಳಿಗ್ಗೆ ಎದ್ದಾಗ ಆಗಲೇ ಎಂಟು ಗಂಟೆ ಆಗಿತ್ತು. ಇವರಂತೂ ಸ್ನಾನ ಮಾಡಿ ತೋಟಕ್ಕೆ ಹೋಗಲು ರೆಡಿಯಾಗಿ ಕೂತಿದ್ದರು. ಬೇಗ ಉಪ್ಪಿಟ್ಟು ಕೆದಕಿ ಕೊಟ್ಟೆ. ‘ಬೇಗ ಬರುತ್ತೀನಿ, ರೆಸ್ಟ್ ಮಾಡು’ ಎಂದು ಹೇಳಿ ಹೊರಟರು. ಯಾವುದೇ ಕೆಲಸ ಮಾಡಲು ಮನಸ್ಸಿರಲಿಲ್ಲ. ಮನೆ ಕೆಲಸವನ್ನು ಲಕ್ಷ್ಮಿಗೆವಹಿಸಿ ಹೋಗಿ ಮತ್ತೆ ಮಲಗಿಕೊಂಡೆ. ಎನೋ ಒಂದು ತರಹ ಮಂಪರು. ಹಾಗೆ ಹೀಗೆ ಹೊರಳಾಡಿ ಎದ್ದಾಗ ಮಧ್ಯಾಹ್ನ ಹನ್ನೆರಡು ಗಂಟೆ ಆಗುತ್ತಾ ಬಂದಿತ್ತು.
ನಿಧಾನವಾಗಿ ಎದ್ದು ಹಾಲಿಗೆ ಬಂದರೆ, ಇವರು ಬಂದು ಆಗಲೇ ಬೆತ್ತದ ಕುರ್ಚಿಯ ಮೇಲೆ ಕೂತಿದ್ದರು. ಕೈಯಲ್ಲಿ ಒಂದು ಬ್ರೌನ್ ಕವರ್ ಇತ್ತು. ಕಣ್ಣು ಮುಚ್ಚಿಕೊಂಡಿದ್ದರೂ, ಕಣ್ಣೀರ ಹನಿ ನಿಧಾನವಾಗಿ ಕೆನ್ನೆಯ ಮೇಲೆ ಇಳಿಯುತ್ತಿತ್ತು. ಈ ಸ್ಥಿತಿಯಲ್ಲಿ ನಾನು ಅವರನ್ನು ಯಾವಾಗಲೂ ನೋಡಿರಲಿಲ್ಲ. ‘ಏನಾತ್ತು ರ್ರೀ, ಯಾಕ್ರಿ ಅಳುತ್ತಿದ್ದೀರಿ’ ಎಂದು ಗಾಬರಿಯಿಂದ ಕೇಳಿದಾಗ, ಕಣ್ಣು ಬಿಡದೆ ಕೈಯತ್ತಿ ಬಂದ ಫೋಸ್ಟ್ ಕೊಟ್ಟರು. ‘ಇದು ಎನ್ರೀ, ಯಾರು ಬರೆದಿದ್ದು? ‘ ಎಂದು ಕೇಳುತ್ತಾ ಆದರಲ್ಲಿರುವ ಕಾಗದ ನಿಧಾನವಾಗಿ ಓದಿದೆ. ಓದುತ್ತಾ ಹೋಗುತ್ತಿದ್ದಂತೆ ತಲೆ ತಿರುಗು ಬಂದ ಹಾಗೆ ಅನಿಸಿತು. ಹಾಗೆ ಸ್ವಲ್ಪ ಸುಧಾರಿಸಿಕೊಂಡು ಕೂತು ಕೊಂಡೆ. ‘ಇಲ್ಲಾರೀ,….ಇದು ಹೇಗೆ ಸಾಧ್ಯ?…. ಆಗಲ್ಲರೀ….’ ಎಂದು ಹೇಳುತ್ತಾ ಇರುವಂತೆ ನನ್ನ ಧ್ವನಿಯಲ್ಲಿ ನನಗೇ ನಂಬಿಕೆಯಿರಲಿಲ್ಲ. ನಿಧಾನವಾಗಿ ಆ ಕಾಗದದ ವಿಷಯ ತಲೆಗೆ ಇಳಿಯಿತು. ಅದು ಸರ್ಕಾರದ ಭೂ ಸ್ವಾಧೀನ ಅಧಿಕಾರಿಯಿಂದ ಬಂದ ನೋಟಿಸ್ ಆಗಿತ್ತು. ತಿಪಟೂರಿನಲ್ಲಿ ತೆಂಗಿನನಾರಿನಿಂದ ಮಾಡುವ ಉತ್ಪನ್ನಗಳಿಗೆ ಒಂದು ಇಂಡಸ್ಟ್ರಿಯಲ್ ಪಾರ್ಕ್ ಮಾಡಲು ಜಾಗ ಗುರುತು ಮಾಡಲಾಗಿದೆ. ಆ ಜಾಗದಲ್ಲಿ ನಮ್ಮ ಮಾವಿನ ತೋಪು ಕೂಡ ಇದೆ. ಹಾಗಾಗಿ ಅದರ ಬದಲಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಸೂಕ್ತ ಪರಿಹಾರದ ಹಣವನ್ನು ಕೊಡಲಾಗುವುದನ್ನು ಹೇಳಲಾಗಿತ್ತು. ಇವರೇನು ಮಾತನಾಡಲಿಲ್ಲ. ಹಾಗೇ ಸುಧಾರಿಸಿಕೊಂಡು ಎದ್ದೆ. ‘ಇಲ್ಲ, ಇದು ಆಗಲು ನಾನು ಬಿಡುವುದಿಲ್ಲರೀ, ಇವು ಮರಗಳೆಂದು ಯಾರು ಹೇಳಿದವರು. ಇವರೂ ನಮ್ಮ ಮಕ್ಕಳು. ನಮ್ಮ ಮನೆ ಮಕ್ಕಳನ್ನು ಕಿತ್ತುಕೊಳ್ಳಲು ಯಾರಿಗಾದ್ರು ಬಿಡಲು ಆಗುತ್ತದೆಯೇ?’ ಎಂದು ಹೇಳುತ್ತಾ ಇವರ ಭುಜ ತಟ್ಟಿದೆ. ‘ಇದಕ್ಕೆ ಮೊದಲು ಕೋರ್ಟನಿಂದ ತಡೆ ಆಜ್ಞೆ ತರಬೇಕು. ನಂತರ ಇದನ್ನು ಉಳಿಸಲು ಹೋರಾಟ ಮಾಡುವುದೇ ಸರಿ’ ಎಂದು ಹೇಳುತ್ತಾ ಇವರ ಫೋನ್ ತೆಗೆದುಕೊಂಡೆ. ತಿಪಟೂರಿನ ಪ್ರಖ್ಯಾತ ವಕೀಲರಾದ ರಮೇಶ್ ರವರಿಗೆ ಫೋನ್ ಮಾಡಿದೆ.
(ಇದೊಂದು ಕಾಲ್ಪನಿಕ ಕಥೆ)
- ಎನ್.ವಿ.ರಘುರಾಂ – ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್) ಕ.ವಿ.ನಿ.ನಿ. ಬೆಂಗಳೂರು.