ಒಬ್ಬರ ಬರಹಗಳಿಂದ ಬರೆದವರ ವ್ಯಕ್ತಿತ್ವ ಅಳೆಯಬಹುದೇ…. ?

ಸೋಷಿಯಲ್ ಮೀಡಿಯಾಗಳಲ್ಲಿನ ಬರಹ ಅಥವಾ ಅವರ ಪೋಸ್ಟುಗಳಿಗೆ ತಕ್ಕಂತೆ ಅವರ ನೈಜ ವ್ಯಕ್ತಿತ್ವವಿರುವವರ ಸಂಖ್ಯೆ , ಬರಹಕ್ಕೂ ನಿಜರೂಪಕ್ಕೂ ಸಾಮ್ಯತೆಯಿಲ್ಲದಿರುವವರ ಸಂಖ್ಯೆಗಿಂತಲೂ ಕಡಿಮೆ ಇರಬಹುದಷ್ಟೇ. – ಹಿರಿಯೂರು ಪ್ರಕಾಶ್, ತಪ್ಪದೆ ಮುಂದೆ ಓದಿ…

ಸೋಷಿಯಲ್‌ ಮೀಡಿಯಾಗಳಲ್ಲಿ ಒಬ್ಬರ ಬರಹಗಳನ್ನು ನೋಡಿ ಅದನ್ನು ಬರೆದವರ ಗುಣ, ಸ್ವಭಾವ , ವ್ಯಕ್ತಿತ್ವ ಹೀಗೇ ಇದ್ದಿರಬಹುದೆಂದು ಅಂದಾಜಿಸಬಹುದೇ….? ಇಂಥಾದ್ದೊಂದು ಪ್ರಶ್ನೆಯ ಚಿಂತನ- ಮಂಥನದ ಹುಳುವನ್ನು ಸ್ನೇಹಿತರೊಬ್ಬರು ನನ್ನ ತಲೆಯೊಳಗೆ ಬಿಟ್ಟರು. ಚಿಂತನ, ‌ಮಂಥನ, ಅಧ್ಯಯನ…ಇವುಗಳಿಗೂ ನನಗೂ ಗೋಕುಲಾಷ್ಠಮಿಗೂ ಇಮಾಂ ಸಾಬರಿಗೂ ಇರುವ ಸಂಬಂಧದಂತೆ ಎಂಬ ನೈಜ‌ ಅರಿವಿದ್ದರೂ……..

ಈ ಬಗ್ಗೆ ಕೆಲಕ್ಷಣ ನಿಮ್ಮೊಂದಿಗೆ ..!

ನಮ್ಮ ಕನ್ನಡ ಸಾಹಿತ್ಯ ಲೋಕದ ಅನೇಕ ದೊಡ್ಡ ದೊಡ್ಡ ಬರಹಗಾರರನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ ಒಬ್ಬೊಬ್ಬರದ್ದೂ ಒಂದೊಂಥರಾ ಶೈಲಿ, ಆಸಕ್ತಿ, ಅಭಿರುಚಿ, ವಸ್ತು , ವಿಷಯ, ಮಂಡನೆ- ವಿಡಂಬನೆ ಎಲ್ಲವೂ. ಹೀಗಾಗಿ ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಡಿವಿಜಿ, ತರಾಸು, ತೇಜಸ್ವೀ, ಅನಂತಮೂರ್ತಿ, ಕಂಬಾರ, ಭೈರಪ್ಪ, ಲಂಕೇಶ್ ರಂತಹ ದಿಗ್ಗಜರಿಂದ ಹಿಡಿದು , ಬರಗೂರು, ಬೆಳಗೆರೆ, ಸಿದ್ದಲಿಂಗಯ್ಯ …

ಮುಂತಾದ ಪ್ರಮುಖರ ಕೃತಿಗಳಿಂದ ಅವರ ಸ್ವಭಾವ ,ವ್ಯಕ್ತಿತ್ವ ಹಾಗೂ ಅಭಿರುಚಿಯ ವಸ್ತು- ವಿಷಯಗಳನ್ನು ಬಹುಪಾಲು ಅರಿಯಬಹುದಾಗಿತ್ತು. ಮೇಲಾಗಿ ಕನ್ನಡ ಸಾಹಿತ್ಯ ಪ್ರಕಾರಗಳನ್ನು ನವ್ಯ ,ನವೋದಯ, ಆಧುನಿಕ, ಬಂಡಾಯ , ದಲಿತ ಸಾಹಿತ್ಯ ಎಂದೆಲ್ಲಾ ವರ್ಗೀಕರಿಸಿದ್ದರಿಂದಲೂ ಆಯಾ ವರ್ಗಕ್ಕೆ ಸೇರಿರಬಹುದಾದ ಕವಿ- ಸಾಹಿತಿಗಳನ್ನು ಗುರುತಿಸಿ ಅವರ ಬರಹಗಳ ಆಧಾರದಲ್ಲಿ ಅವರವರ ವ್ಯಕ್ತಿಗತ ಆಂತರ್ಯಗಳನ್ನು ಒಂದು‌ ಹಂತದವರೆಗೆ ತಿಳಿಯಬಹುದಿತ್ತು.

ಇನ್ನು ಕವಿತೆಗಳನ್ನು ಬರೆಯುವ ಕವಿಗಳಲ್ಲಿ ಕೆಲವರು ಪ್ರೀತಿ ಪ್ರೇಮ ಪ್ರಣಯಗಳ ಮೊರೆ ಹೊಕ್ಕರೆ ಮತ್ತೆ ಹಲವರಿಗೆ ಸಾಮಾಜಿಕ ಬದುಕು, ನೋವು, ಅಪಮಾನ, ಸಂಘರ್ಷ, ಪ್ರತಿರೋಧ, ಹೋರಾಟಗಳೇ ಕವನಗಳ ವಸ್ತುವಾಗಿ ಬಿಡುತ್ತವೆ. ಇವುಗಳನ್ನು ಅಳತೆಗೋಲಾಗಿಟ್ಟುಕೊಂಡೂ ಕವಿಗಳ ಗುಣ, ಸ್ವಭಾವ, ವ್ಯಕ್ತಿತ್ವಗಳನ್ನು ತಕ್ಕ ಮಟ್ಟಿಗೆ ನಿರ್ಧರಿಸಬಹುದಾಗಿತ್ತು. ಒಟ್ಟಾರೆ ನಮ್ಮ ಈ ಎಲ್ಲಾ ಹಿರೀಕರ ವಿಷಯದಲ್ಲಿ ಬರಹ ಹಾಗೂ ‌ವ್ಯಕ್ತಿತ್ವಗಳಲ್ಲಿ ಪಾರದರ್ಶಕತೆಯೇ ಪ್ರಧಾನ ಅಂಶ.

ಆದರೆ ಸಾಮಾಜಿಕ ಜಾಲತಾಣಗಳೇ ನಮ್ಮಿಡೀ ಬದುಕನ್ನೇ ಆವರಿಸಿ ಆಪೋಷನ ತೆಗೆದುಕೊಂಡಿರುವ ಈ‌ ಹೊತ್ತಿನಲ್ಲಿ ನಮ್ಮ ಹಿರಿಯ ಸಾಹಿತಿಗಳಿಗೆ ಅನ್ವಯಿಸುವ ಅದೇ ಮಾತನ್ನೇ ಸೋಷಿಯಲ್ ಮೀಡಿಯಾದ ಬರಹಗಾರರಿಗೂ ಅನ್ವಯಿಸಲು ಸಾಧ್ಯವೇ ಎಂಬ ಒಂದು‌ ಗಂಭೀರವಲ್ಲದ ಆದರೆ ‘ಓವರ್ ಎ ಕಪ್ ಆಫ಼್ ಕಾಫ಼ೀ ‘ ಚರ್ಚಿಸಬಹುದಾದಂತಹ ಟಾಪಿಕ್ಕನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಏಕೆಂದರೆ ಇದು ಕೈ ಬರಹ ನೋಡಿ ಹಣೆಬರಹ ಹೇಳುವ ಸಾಲಿಗೆ ಸೇರೋಲ್ಲ.

ಸಾಮಾಜಿಕ ಜಾಲತಾಣಗಳಲ್ಲಿನ ಕೆಲ ಗಂಭೀರ ಬರಹಗಾರರನ್ನು ಹೊರತುಪಡಿಸಿ ಬಹುತೇಕ ಬರಹಗಳಿಗೆ ಯಾವುದೇ ಪೂರ್ವ ಸಿದ್ದತೆ, ತಯಾರಿ, ಅಧ್ಯಯನ, ಒಳನೋಟ ಸಂಕಲನ ಇತ್ಯಾದಿ ಬರಹಕ್ಕೆ ಬೇಕಾದ ಮೂಲಾಂಶಗಳ ಅಗತ್ಯವಿಲ್ಲದಿರುವುದರಿಂದ ತಮಗೆ ತೋಚಿದ್ದನ್ನು ಬರೆದು ಯಾವುದೇ‌ ನಿರ್ಬಂಧವಿಲ್ಲದೇ ಅನಾಮತ್ತು ಪೋಸ್ಟ್ ಮಾಡಿ ಸುಲಭಕ್ಕೆ ರಾಕೆಟ್ ವೇಗದಲ್ಲಿ ಸಾವಿರಾರು ಜನರನ್ನು ತಲುಪಬಲ್ಲರು.

ವಿಪರ್ಯಾಸವೆಂದರೆ ಕನ್ನಡದ ಅನೇಕ ಉತ್ತಮ ಕೃತಿಗಳ ಪೈಕಿ ಶೇ ಒಂದರಷ್ಟನ್ನೂ ನಾವ್ಯಾರೂ ಓದಿರಲಾರೆವು. ಅಷ್ಟರಮಟ್ಟಿಗೆ ಸಾಹಿತ್ಯದ ಓದಿನ‌ ಬರ ನಮ್ಮೆಲ್ಲರನ್ನೂ ನಾನಾ ಕಾರಣಗಳಿಂದ ಮೊದಲಿನಿಂದಲೂ ಆವರಿಸಿಬಿಟ್ಟಿದೆ. ಈ ಮೇಲೆ ಹೆಸರಿದ ಕನ್ನಡದ ಸಾಹಿತ್ಯ ಮಾಣಿಕ್ಯಗಳಂಥವರ ಕಾಲದಲ್ಲಿ ಏನಾದರೂ ಅಂತರ್ಜಾಲ ಅಥವಾ ಸಾಮಾಜಿಕ ಜಾಲ‌ವಿದ್ದಿದ್ದಲ್ಲಿ ಅವು ಕೋಟ್ಯಾಂತರ ಜನರನ್ನು ಸುಲಭವಾಗಿ ತಲುಪಿ ಬಹುಶಃ ನಮ್ಮ ಸಾಮಾಜಿಕ ಚಿಂತನೆ ಹಾಗೂ ವೈಯಕ್ತಿಕ- ಸಾರ್ವಜನಿಕ ಬದುಕು ಬಹು ಅರ್ಥಪೂರ್ಣವಾಗಿರುತ್ತಿತ್ತೇನೋ.. . !

ಅದಿರಲಿ…. ಮುಖ್ಯ ವಿಷಯದತ್ತ ನೋಡೋಣ.

ಇಂತಹಾ‌ ಪರಿಣಾಮಕಾರಿಯಾದ ವೇದಿಕೆಯಲ್ಲಿ ಕತೆ ಕವನ ಕಾದಂಬರಿ‌,ಚುಟುಕು, ಪ್ರಬಂಧ, ಲೇಖನ, ವಿಮರ್ಶೆ, ಪ್ರಚಲಿತ ವಿದ್ಯಮಾನಗಳು ಹಾಗೂ ಅನೇಕಾನೇಕ ಬರಹಗಳ ಪ್ರಕಾರಗಳನ್ನು‌ ಬರೆದು ಪೋಸ್ಟ್ ಮಾಡುವ ಅಸಂಖ್ಯಾತ ಬರಹಗಾರರ ಬರಹಗಳ ಆಧಾರದಲ್ಲಿ ಅವರ ವ್ಯಕ್ತಿತ್ವವನ್ನು ಅಂದಾಜಿಸಬಹುದೇ ಎಂಬ ಸಣ್ಣ ಪ್ರಯತ್ನ ಮಾಡುವುದಾದರೆ ಅದಕ್ಕೆ‌‌ ಹೀಗೆ ಎಂಬ ನಿರ್ದಿಷ್ಟವಾದ ಉತ್ತರ ಸಿಗುವುದು ಕಷ್ಟ.

ಇಲ್ಲಿರುವವರ ಪ್ರೊಫ಼ೈಲ್ ಫೋಟೋ, ವಿವರಗಳು, ಬರಹಗಳು ಮ್ಯೂಚ್ಯುಯಲ್ ಫ಼್ರೆಂಡುಗಳು ಆಸಕ್ತಿಯ ವಿಷಯಗಳತ್ತ ಕಣ್ಣಾಡಿಸಿದಲ್ಲಿ ಸ್ವಲ್ಪಮಟ್ಟಿಗೆ ಬರಹಗಾರ/ ಬರಹಗಾರ್ತಿ ಹೇಗೆ ಎಂಬುದರ ಸುಳಿವು ಸಿಗಬಹುದಾದರೂ ಅದರಿಂದಲೇ ಬರೆದವರ ನೈಜ ವ್ಯಕ್ತಿತ್ವ ಎಂತಹದ್ದು ಎಂಬುವ ಸ್ಪಷ್ಟ ಚಿತ್ರಣ ಸಿಗುವುದು ಶುದ್ಧ ಸುಳ್ಳು. ಅದು‌ ಕೇವಲ ಒಂದು ಹಂತದವರೆಗಿನ‌ ಭ್ರಮೆಯೆಂಬ ವಾಸ್ತವಕ್ಕೆ ನಿಧಾನಕ್ಕೆ ಬರುವಿರಿ.

ಹೇಳಿಕೇಳಿ ಈ ವೇದಿಕೆ ಒಂಥರಾ ಫ಼್ಯಾಂಟಸಿ‌ ಲೋಕ. ಈ‌ ಮಾಯಾ ಬ‍ಜ಼ಾರಿನಲ್ಲಿ ಸತ್ವ , ಸತ್ಯ ಅಥವಾ ಸವಿವರಗಳ ಸರಕುಗಳಿಗಿಂತ ಫ಼ೇಕು, ಆಕರ್ಷಣೆ, ರಂಜನೆ ಹಾಗೂ ಅವಸರಕ್ಕೆ ನೋಡಿ‌ ಮುಂದಕ್ಕೆ ಹೋಗಬಹುದಾದ ವಸ್ತು ವಿಷಯಗಳಿಗೇ ಆದ್ಯತೆ ಹೆಚ್ಚು. ಹೀಗಿರುವಾಗ ಅಲ್ಲಿ‌ ಮೂಡಿ ಬರುವ ಪೋಸ್ಟ್ ಗಳಿಗೆ ಆಕರ್ಷಕರಾಗಿ ಮುಗಿ ಬೀಳುತ್ತೇವೆಯೇ ಹೊರತು ಅದನ್ನು ಬರೆದವರ ಅಥವಾ ಹಂಚಿಕೊಂಡವರ ವ್ಯಕ್ತಿತ್ವದ ಬಗೆಗೆ ತಲೆ ಕೆಡಿಸಿಕೊಳ್ಳಲು ಹೋಗೋಲ್ಲ. ಅದು ಸಮಯದ ಅಭಾವವೂ‌ ಇರಬಹುದು ಅಥವಾ ನಮ್ಮ‌ ಅಭಿರುಚಿಯೂ ಇದ್ದಿರಬಹುದು. ವಾಸ್ತವ ಅಂದ್ರೆ ನಮ್ಮ ಆಸಕ್ತಿಗನುಗುಣವಾದ ಅಥವಾ ನಮ್ಮ‌ಅಭಿಮತಗಳಿಗನುಗುಣವಾದ ಪೋಸ್ಟ್ ಗಳತ್ತಲೇ‌ ನಮ್ಮ‌ ಚಿತ್ತ‌ ಹರಿಯುವುದು !

ನೆನಪಿಡಿ ! ಇಲ್ಲಿ ಯಾರೂ ತಮ್ಮ ನೈಜ ವ್ಯಕ್ತಿತ್ವವನ್ನು‌ ಬರಹಗಳ ಮೂಲಕ ಬೆತ್ತಲೆಯಾಗಿಸಲಾರರು. ಕೆಲವರ ಆಂತರ್ಯವು ಕಪಟ, ವಂಚನೆ, ದುರುದ್ದೇಶ ಅಥವಾ ಸ್ವಾರ್ಥದಿಂದ ತುಂಬಿದ್ದರೂ ಹಾಕುವ ಪೋಸ್ಟ್ ಗಳಲ್ಲಿ ಸಾಚಾತನ ಮೈದುಂಬಿರಬಲ್ಲದು. ಆಗ ಅಂತಹ ಗಿರಾಕಿಗಳನ್ನು ಅವರ ವ್ಯಕ್ತಿತ್ವವನ್ನು ಯಾವ ರೀತಿ ಅಂದಾಜಿಸಲು ಸಾಧ್ಯ ! ಕೆಲವರಂತೂ ಫ಼ೇಕ್ ಐಡಿಗಳನ್ನು ಅನುಮಾನ ಬಾರದಂತೆ ಸೃಷ್ಟಿಸಿ ವಂಚಿಸಬಲ್ಲರು. ಮತ್ತೇ ಹಲವು ದುರುಳರು ಮಹಿಳೆಯರ ಹೆಸರಿನಲ್ಲಿ ಯಾವುದೋ ಚಂದದ ಫೋಟೋ ಇಟ್ಟು, ಐಡಿ‌ ಕ್ರಿಯೇಟ್ ಮಾಡಿ ಮಹಿಳೆಯರನ್ನು ನಯವಾಗಿ ವಂಚಿಸಬಲ್ಲರು. ಅಂಥವರನ್ನು ಗುರುತಿಸುವುದು ಸುಲಭಕ್ಕೆ ಸಾಧ್ಯವಿರದಿರಲು ಮುಖ್ಯ ಕಾರಣ..ಅವರ ಬರಹಗಳು ಹಾಗೂ ಪೋಸ್ಟ್ ಗಳಲ್ಲಿನ ಸಾಚಾತನದ ಸತ್ವ ಹಾಗೂ ಲೈಕ್ ಮೈಂಡೆಡ್ ನೆಸ್ ನ ಅಟ್ರ್ಯಾಕ್ಷನ್ನು .

ಇದನ್ನು ಹೊರತುಪಡಿಸಿಯೂ ಹೇಳುವುದಾದರೆ, ಯಾರೂ ತನ್ನನ್ನು ತಾನು ಕೆಟ್ಟವನೆಂದು ಅಥವಾ ವಿಲನ್ ರೂಪದಲ್ಲಿ ಬಿಂಬಿಸಿಕೊಳ್ಳಲಾಗಲೀ , ಹೇಳಿಕೊಳ್ಳುವುದಕ್ಕಾಗಲೀ ಹೋಗಲಾರರು.‌ಅಷ್ಟೇಕೆ, ತಮ್ಮ ಸ್ಟೇಟಸ್ ಅಥವಾ ಫೋಟೋಗಳನ್ನು ಅಪ್‌ಲೋಡ್ ಮಾಡುವಾಗಲೂ ಚೆನ್ನಾಗಿ ಕಾಣಬಹುದಾದ ಪಟಗಳನ್ನು‌ ಹಾಗೂ ಸದ್ಗುಣಗಳ ಬರಹಗಳನ್ನಷ್ಟೇ ಕಾಣಸಿಗುವಂತೆಯೂ ಕಾಪಾಡಿಕೊಂಡು ಬಂದಿರುತ್ತಾರೆಯೇ ವಿನಃ ರೇಷನ್ ಕಾರ್ಡು ಅಥವಾ ಆಧಾರ್ ಕಾರ್ಡಿನ‌ ಯಥಾವತ್ ಚಿತ್ರಣ ಅಲ್ಲಿರಲಾರದು. ಇದು ಸಹಜ ಕ್ರಿಯೆ. ಹೀಗೆ ಮೇಲ್ನೋಟಕ್ಕೆ ಸುಗಂಧ, ಆಂತರ್ಯದಲ್ಲಿ ದುರ್ಗಂಧ ಹೊಕ್ಕಿರುವ ಮನಸುಗಳ ಆಂತರ್ಯವನ್ನರಿಯಲಾಗಲೀ ಬಯಲಿಗೆಳೆಯುವುದಾಗಲೀ ಹೇಗೆ ಸಾಧ್ಯ ? ಇಂತಹ ಕೇಸುಗಳಲ್ಲಿ ಬರಹಗಳನ್ನು‌ ನೋಡಿ ವ್ಯಕ್ತಿತ್ವ ಅಳೆಯುವ ಕೆಲಸ ಅಸಾಧ್ಯ ಹಾಗೂ ಅಷ್ಟೇ ಅಪಾಯಕಾರಿ.

ಗಾಬರಿಯಾಗಬೇಡಿ….ಹೀಗೆ ಹೇಳಿದ ಮಾತ್ರಕ್ಕೇ ಇಲ್ಲಿ ಎಲ್ಲರೂ ಹೀಗೆ ಎಂದು ಅರ್ಥವಲ್ಲ. ಒಂದೊಮ್ಮೆ ಪರಿಸ್ಥಿತಿ ಹಾಗಿರುತ್ತಿದ್ದರೆ ಇಂದು ಸಾಮಾಜಿಕ ಜಾಲತಾಣದಲ್ಲಿ ಅಗಾಧವಾಗಿ ಬೆಸೆದುಕೊಂಡಿರುವ ಅಸಂಖ್ಯಾತ ಸ್ನೇಹ ಸಂಬಂಧಗಳಿಗೆ ಬೆಲೆಯೇ ಇರುತ್ತಿರಲಿಲ್ಲ. ಇಲ್ಲಿಯೂ ಪರಿಶುದ್ಧ ಸ್ನೇಹವಿದೆ, ಭಾವನೆಗಳಿವೆ ಹಾಗೂ ತಮ್ಮ ಸಹಜ ವ್ಯಕ್ತಿತ್ವದಂತೆಯೇ ಬರಹಗಳು ಇರುತ್ತವೆ. ಒಬ್ಬರು ಹಾಕುವ ಪೋಸ್ಟುಗಳನ್ನು ಬರಹಗಳನ್ನು ಅಥವಾ ಕಾಮೆಂಟುಗಳನ್ನು ನೋಡಿ ಸುಲಭವಾಗಿ ಅವರು ಹೀಗೆ ಎಂದು ನಿರ್ಧರಿಸಬಲ್ಲ ವ್ಯಕ್ತಿತ್ವಗಳೂ ಇವೆ. ಆದರೆ ನನ್ನ ಅಂದಾಜಿನ‌ ಪ್ರಕಾರ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿನ ಬರಹ ಅಥವಾ ಅವರ ಪೋಸ್ಟುಗಳಿಗೆ ತಕ್ಕಂತೆ ಅವರ ನೈಜ ವ್ಯಕ್ತಿತ್ವವಿರುವವರ ಸಂಖ್ಯೆ , ಬರಹಕ್ಕೂ ನಿಜರೂಪಕ್ಕೂ ಸಾಮ್ಯತೆಯಿಲ್ಲದಿರುವವರ ಸಂಖ್ಯೆಗಿಂತಲೂ ಕಡಿಮೆ ಇರಬಹುದಷ್ಟೇ .

Again….ಈ ಬಗೆಗಿನ ನಿರ್ಧಾರ ಪ್ರತಿಯೊಬ್ಬರ ಆಯ್ಕೆ, ಅಭಿರುಚಿ, ಹವ್ಯಾಸ, ಗುಂಪು, ಹಾಗೂ ಕ್ರಿಯಾಶೀಲ ಮನಸ್ಸು…ಇವುಗಳನ್ನು ಅವಲಂಬಿಸಿರಬಲ್ಲದು.
ಟೇಕ್ ಕೇರ್.!

ಮರೆಯುವ ಮುನ್ನ 

ಕೆಲವೊಂದು ಪ್ರಶ್ನೆಗಳಿಗೆ‌ ಹೀಗೆಯೇ ಎಂಬ ನಿರ್ದಿಷ್ಟವಾದ ಉತ್ತರ ಸಿಗಲಾರದು. ಇಂತಹ ಪ್ರಶ್ನೆಗಳಿಗೆ ಹಲವರಿಂದ ಅವರವರ ವೈಯಕ್ತಿಕ ಅನುಭವಗಳ ಆಧಾರದಲ್ಲಿ ಭಿನ್ನವಾದ ವೈವಿಧ್ಯಮಯವಾದ ಪ್ರತಿಕ್ರಿಯೆಗಳು ಬರಲು ಸಾಧ್ಯ. ನಿಮ್ಮ ಸ್ನೇಹದ ಅನುಭವ ಸವಿಯಾಗಿದ್ದಲ್ಲಿ ಬರಹದ ಮೂಲಕ ವ್ಯಕ್ತಿತ್ವ ಅಳೆಯಬಹುದು ಎನ್ನುವಿರಿ. ಅದೇ ಒಬ್ಬರ ಬರಹಗಳನ್ನು ಪೋಸ್ಟ್ ಗಳನ್ನು‌ ನೋಡಿ ಒಳ್ಳೆಯವರೆಂದುಕೊಂಡು ಕಾಲಾಂತರದಲ್ಲಿ ತುಂಬಾ ಆಳಕ್ಕಿಳಿದಾಗ ಅವರ ನಿಜಮುಖದ ಅನಾವರಣವಾಗಿ ನಿಮಗೆ ಕಹಿ ಅನುಭವವಾಗಿದ್ದಲ್ಲಿ ಆಗ ಬರಹವೇ ಬೇರೆ ನಿಜರೂಪವೇ ಬೇರೆ ಎಂಬ‌ ಭಾವನಾತ್ಮಕ ನೆಲೆಗೆ ಬಂದು‌ ನಿಲ್ಲುತ್ತೀರಿ. ಈ ಎರಡೂ ತರಹದ ಅನುಭವಗಳನ್ನು‌ ಕೆಲವರು ಹಂಚಿಕೊಂಡಿದ್ದರಿಂದಲೇ ಕೆಲ‌ ನಿಮಿಷ ನಿಮ್ಮೊಂದಿಗೆ ಈ‌ ಬಗ್ಗೆ ಚರ್ಚಿಸುವಂತಾಗಿದ್ದು ! ಹೀಗಾಗಿ ಈ ಟಾಪಿಕ್ಕು ಕೇವಲ ವ್ಯಕ್ತಿಗತ ಅನುಭವಗಳ ಆಧಾರದಲ್ಲಷ್ಟೇ ನಿರ್ಧರಿಸಬಲ್ಲದ್ದಾಗಿದ್ದು ಕೊನೆಗೆ

” ಮೊಟ್ಟೆ ಮೊದಲಾ ಕೋಳಿ ಮೊದಲಾ..! ಎಂಬ ಸಂದಿಗ್ಧಕ್ಕೆ ನಿಮ್ಮನ್ನು ತಳ್ಳುತ್ತದೆ.

ಒಟ್ಟಾರೆಯಾಗಿ ಈ ನಿಟ್ಟಿನಲ್ಲಿ ಯಾರೇ ಒಬ್ಬರನ್ನು ಬರಹಗಳ ಆಧಾರದಲ್ಲಿ‌ ಆಳವಾಗಿ ನಂಬುವುದಕ್ಕೆ ಬೇಕಾಗಿರುವುದು ಯಾವ ಮೆಡಿಕಲ್ ಸೈನ್ಸೂ‌, ಪೊಲಿಟಿಕಲ್ ಸೈನ್ಸೂ‌ ಅಲ್ಲ, ಬದಲಿಗೆ……..

ಅಚ್ಚೇರಿನಷ್ಟು ಪ್ರಾಕ್ಟಿಕಲ್ ಸೆನ್ಸೂ…. ಅರೆಪಾವಿನಷ್ಟು ಕಾಮನ್ ಸೆನ್ಸೂ‌ ಮಾತ್ರ.

ಲಾಸ್ಟ್ ಪಂಚ್ 

ಇದು ಮಾಯಬಜ಼ಾರೂ….ಕುಣಿವಾಗ ಹುಷಾರೂ.!

ಪ್ರೀತಿಯಿಂದ….


  • ಹಿರಿಯೂರು ಪ್ರಕಾಶ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW