‘ಲವ್ ಟುಡೆ’ ಕೃತಿ ಪರಿಚಯ

ಕನ್ನಡದ ಮೂವರು ಬರಹಗಾರ್ತಿಯರಾದ ಎನ್ ಸಂಧ್ಯಾರಾಣಿ, ಭಾರತಿ ಬಿ ವಿ ಮತ್ತು ಪೂರ್ಣಿಮಾ ಮಾಳಿಗಿಮನಿ ಅವರಿಂದ “ಲವ್ ಟುಡೇ” ಎಂಬ ಕಥಾವಸ್ತುವನ್ನು ಕೊಟ್ಟು ತಲಾ ನಾಲ್ಕು ನಾಲ್ಕು ಕಥೆಗಳನ್ನು ಬರೆಸಿದವರು ಸಾವಣ್ಣ ಪ್ರಕಾಶನದ ಜಮೀಲ್ ಅವರು. ಇದೊಂದು ಹೊಸ ಪ್ರಯೋಗಮಾಡಿದ್ದಾರೆ. ಈ ಕೃತಿಯ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕೃತಿ  : ಲವ್ ಟುಡೇ.
ಲೇಖಕರು: ಎನ್.ಸಂಧ್ಯಾರಾಣಿ, ಭಾರತಿ ಬಿ.ವಿ.ಮತ್ತು ಪೂರ್ಣಿಮಾ ಮಾಳಿಗಿಮನಿ.
ಪ್ರಕಾಶನ : ಸಾವಣ್ಣ ಎಂಟರ್ಪ್ರೈಸಸ್ ಬೆಂಗಳೂರು.
ವರ್ಷ:೨೦೨೩.
ಪುಟಗಳು:೧೭೨.
ಬೆಲೆ:೨೦೦.

ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ಮುತ್ತು ಮಲ್ಲಿಗೆ ಎಂಬ ನಾಲ್ಕೂ ಕಥಾಗುಚ್ಛದ ದಂಡೆಗಳು ಮೂರು ಮೂರು ಕಥೆಗಳಿಂದ, ತಲಾ ಮೂರು ಲೇಖಕಿಯರಿಂದ ಬರೆಸಿ ಕಟ್ಟಲ್ಪಟ್ಟಿದೆ. ಮುಖಪುಟ ಕೂಡ ಏನೋ ಚರ್ಚಿಸುತ್ತಿರುವಂತೆ ಮೂರೂ ಕಥೆಗಾರ್ತಿಯರ ಫೋಟೋದೊಂದಿಗೆ ಮೂಡಿ ಬಂದಿದ್ದು ವಿಶೇಷ. ‘ಕೊಡಲು ಕೊಳಲು ಒಲವು ಬಿಟ್ಟು ಬೇರೆ ಉಂಟೆ ಬಾಳಲಿ’…. ಎಂದು ಪ್ರೇಮದ ಮಟ್ಟವನ್ನು, ಅದರ ದೈವೀಕತೆಯನ್ನು ನಿರ್ಣಯಿಸುವವರು ಯಾರು?..ಎನ್ನುತ್ತಾರೆ ಎನ್. ಸಂಧ್ಯಾರಾಣಿ.

ಪ್ರೀತಿಯೆಂಬ ಮೃಗತೃಷ್ಣೆ. ಪ್ರೇಮವೆನ್ನುವ ನದಿಯ ಹರಿವು ಒಂದು ಪ್ರಕ್ರಿಯೆ.ಪ್ರೀತಿ ದಕ್ಕುವುದು ಅವರವರ ಅದೃಷ್ಟವಷ್ಟೇ.ಕೆಲವೊಮ್ಮೆ ಹಾಗೆ ದಕ್ಕಿದ ಪ್ರೇಮವೂ ಶಾಶ್ವತವಲ್ಲವೆನ್ನುತ್ತಾರೆ ಭಾರತಿ ಬಿ.ವಿ.

ಪ್ರೀತಿಗೇಕೆ ಪರಿಭಾಷೆ? ಎನ್ನುತ್ತಾ, ಸ್ಮಾರ್ಟ್ ಫೋನಿನಲ್ಲೇ ಮುಳುಗಿರುವ ಪ್ರಾಕ್ಟಿಕಲ್ ಆದ ಇಂದಿನ ಜನರಿಗೆ, ಸಂವಹನ ಮತ್ತು ಅಭಿವ್ಯಕ್ತಿ ಸುಲಭವಾಗಿರುವ ಈ ಕಾಲದಲ್ಲಿ ಪ್ರೀತಿಯ ಸ್ವರೂಪ ಬದಲಾಗಿದೆಯೇ? ಎಂಬ ಚಿಂತನೆಯ ಪೂರ್ಣಿಮಾ ಮಾಳಿಗಿಮನಿ.

ಹೀಗೆ ಈ ಮೂರೂ ಲೇಖಕಿಯರು ಒಂದೇ ಕಥಾ ವಸ್ತುವಿನ ಬಗ್ಗೆ ತಮ್ಮದೇ ಶೈಲಿಯಲ್ಲಿ ‘ಪ್ರೀತಿಯೆಂಬ ಮುಗಿಯದ ಕಥೆ’ಯನ್ನು ಹೇಳುವ ರೀತಿ ಇಂದಿನ ಆಧುನಿಕ ಮನೋಭಾವದವರು ಇಷ್ಟ ಪಡುವಂತಿದೆ.

ಉದಾಹರಣೆಗೆ

*ಫ್ಯಾನ್ ಫಿಕ್ಷನ್ – ಲೇಖಕಿ :ಪೂರ್ಣಿಮಾ ಮಾಳಿಗಿಮನಿ

ಸಂಹಿತಾ ಪ್ರೀತಿಸಿ ಮದುವೆಯಾಗಿದ್ದ ಚಿದಂಬರ ಸಾಫ್ಟ್ ವೇರ್ ಕೆಲಸ ಬಿಟ್ಟು ,ಚಿತ್ರರಂಗದಲ್ಲಿ ಒಬ್ಬ ಸೆಲಿಬ್ರಿಟಿ ನಿರ್ದೇಶಕನಾಗಿ ಮೆರೆದವನು. ಈಗ ಸರಿಯಾಗಿ ನಿದ್ರಿಸದ ಅವನ ತಲೆಚಿಟ್ಟು ಹಿಡಿಸುವ ವಿಚಿತ್ರ ಮಾತುಗಳನ್ನು ಸಂಹಿತಾ ಕೇಳಲೇ ಬೇಕಾಗಿತ್ತು. ಕೆಲಸವಿಲ್ಲದೇ ಕೈ ಖಾಲಿಯಾಗಿದ್ದರೂ ಏಳು ಬೀಳುಗಳನ್ನು ಕಂಡಿದ್ದ ಅವನ ಕೇರಿಯರ್ ಒಂದು ಹಂತ ತಲುಪುವವರೆಗೆ ಅವಳು ಕಾಯಬೇಕಿತ್ತು.
ಅವನು ನಿರ್ಮಿಸಿದ ‘ಸೂಪರ್ ಮ್ಯಾನ್ ಪುರುಷೋತ್ತಮ ‘ ಚಿತ್ರವು ನೆಟ್ಟಿಗರ ದಿಟ್ಟಿಗೆ ತಾಗಿ ಸೈಬರ್ ಪೊಲೀಸರು ಮಧ್ಯೆ ಪ್ರವೇಶಿಸಿ ಬೇಕಾಗಿ ಬಂದಿದ್ದು, ನಂತರ ಆ ಸಮಸ್ಯೆ ಪರಿಹಾರವಾಗಿದ್ದು ಹೇಗೆ?…

*ಆರಿ ಹೋದ ಕಾಫಿ – ಲೇಖಕಿ: ಭಾರತಿ ಬಿ.ವಿ.

ಪ್ರೀತಿಗೆ ಬಿದ್ದ ಹೊಸತರಲ್ಲಿ ಆತನ ಯಾವ ತಪ್ಪುಗಳೂ ಅವಳಿಗೆ ಕಾಣುತ್ತಿರಲಿಲ್ಲ. ಪ್ರೀತಿ ಎನ್ನುವುದು ಮೂರ್ಖತನವೋ, ಮುಗಿಯಲಾರದ ಮೋಹವೋ, ಬಿಡಿಸಿ ಕೊಳ್ಳಲಾರದ ಬಂಧವೋ ಗೊತ್ತಿಲ್ಲ. ಇದೀಗ ಕೆಲಸ ಕಳೆದುಕೊಂಡು ಸಾಲಗಾರನಾಗಿ, ಇಡೀದಿನ ಬಾರ್ ನಲ್ಲಿ ಕುಳಿತು ಕುಡಿಯುವ ಅವನನ್ನು ಕಾಣಲು ಹೋದವಳಿಗೆ ಅನಿಸಿದ್ದೇನು?.. ಮುಂದಾದದ್ದೇನು?

*ಟ್ರೂತ್ ಆರ್ ಡೇರ್ – ಲೇಖಕಿ: ಎನ್.ಸಂಧ್ಯಾರಾಣಿ.

ಆ ಮಹಾನ್ ನಗರದಲ್ಲಿ ನಾಲ್ವರು ಸ್ನೇಹಿತೆಯರು ಬೆಸೆದಿದ್ದು ವೈನ್ ಕೂಟದಲ್ಲಿ.ತಂತಮ್ಮ ವೈಯಕ್ತಿಕ ವಿಚಾರಗಳನ್ನೆಲ್ಲಾ *ಟ್ರೂತ್ ಆರ್ ಡೇರ್ ಎಂಬ ಆಟದಲ್ಲಿ ಹೇಳಿಕೊಳ್ಳುತ್ತಾ ಸಾಗುತ್ತಾರೆ.ದೊಡ್ಡ ಗುಟುಕು ವೈನ್ ಹೀರಿದ ಕಲ್ಯಾಣಿ, ಯಾವುದೇ ಒಪ್ಪಂದವಿಲ್ಲದೇ ತಾನು ಸಂಗಾತಿಯಾಗಿ ಆಯ್ದುಕೊಂಡ ಪ್ರೇಮಿ ವಿವಾಹಿತ ಅರವಿಂದನ ಕುರಿತು ನೆನಪಿಸಿ ಕೊಳ್ಳುತ್ತಾಳೆ.

ಅವರಿಬ್ಬರ ವಿಷಯ ಹೆಂಡತಿಗೆ ಗೊತ್ತಾದ ನಂತರ ಅವನು ಇವಳಿಂದ ದೂರವಾಗಿದ್ದ. ನೊಂದ ಕಲ್ಯಾಣಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರು ಬಿಟ್ಟಿದ್ದಳು.ಮತ್ತೆ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿ ಹೆಸರು ಬದಲಿಸಿ ಹೊಸತಾಗಿ ಬದುಕು ಪ್ರಾರಂಭಿಸಿದ್ದಳು.

ಈಗ ಗೆಳತಿ ಮಧುವಂತಿ ತನ್ನ ಬದುಕಲ್ಲಿ ಅತ್ಯಂತ ನೋವಿನ ಹಾಗೂ ಅವಮಾನದ ದಿನವೆಂದರೆ..ತನ್ನ ಗಂಡನಿಗೆ ಅಫೇರ್ ಇದ್ದದ್ದು ಗೊತ್ತಾದ ದಿನ ಎನ್ನುತ್ತಾ ಬಾಟಲಿ ಎತ್ತಿಕೊಂಡಾಗ. ಎಲ್ಲರೂ ಅವಾಕ್ಕಾಗಿದ್ದರು. ತನ್ನ ಆತ್ಮಗೌರವ ಕುಸಿದು ಗಂಡನ ಮೇಲಿನ ಸಿಟ್ಟಿಗೆ ಅವಳು ಡೇಟಿಂಗ್ ಹೋಗ ತೊಡಗಿದ್ದು, ಇದರಿಂದ ಅರವಿಂದ ಸಾರಿ ಕೇಳಿದ್ದು, ಇಬ್ಬರೂ ಪಾಪದ ಹೊರೆ ಹೊತ್ತು ಜೀವಿಸುತ್ತಿರುವುದು ಕೇಳಿದ ಮೇಲೆ  ಕಲ್ಯಾಣಿಗೆ ಸಂಕಟವಾಗಿದ್ದೇಕೆ?.. ಹಾಗಾದರೆ ಅರವಿಂದ ಮಧುವಂತಿಯ ಪತಿಯೇ?…

ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛಾಚಾರವೇ ಹೆಚ್ಚಾಗಿದೆಯೇನೋ… ಎಂಬಂತೇ ಸಿಗ್ಗಿಲ್ಲದೇ ಮುಕ್ತವಾದ ವಿವಾಹ ಬಾಹಿರ ಸಂಬಂಧಗಳ ಕುರಿತ ಕೆಲವು ಕತೆಗಳೂ ಇಲ್ಲಿದ್ದರೂ, ವಾಸ್ತವದ ಎಷ್ಟೋ ನೈಜ ಪ್ರಸಂಗಗಳ ಕಲಾತ್ಮಕ ಹೆಣಿಗೆಯ ಅಂಶವನ್ನೂ ನಾವು ಗಮನಿಸ ಬಹುದಾಗಿದೆ. ಅಬ್ಬಾ ಈ ಕಥಾಲೋಕ ಎಷ್ಟೊಂದು ವಿಸ್ತಾರ… ನಡೆದಷ್ಟೂ ಮುಗಿಯದ ದಾರಿ ಎನಿಸಿತು.

ಇನ್ನು ಬೆನ್ನುಡಿಯಲ್ಲಿ ಪ್ರಕಾಶಕರು ಬರೆದ ಪ್ರೇಮದ ಕಾಮನ ಬಿಲ್ಲಿನ ವಿಷಯವೇ ಒಂದು ಸುಂದರ ಕವಿತೆಯಂತಿದೆ. ನೀವೂ ಒಮ್ಮೆ ಓದಿ ನೋಡಿ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW