‘ಮಾಸ್ಟರ ಹೆಡ್’ ಪ್ರೊ. ಎಂ,ಎಚ್. ಕೃಷ್ಣಯ್ಯ ಅವರ ನೆನಪು

ಹಿರಿಯ ಕಲಾಬರಹಗಾರ ಸಾಹಿತಿ ಪ್ರೊ.ಎಂ.ಎಚ್. ಕೃಷ್ಣಯ್ಯ ಅವರ ಆತ್ಮಕ್ಕೆ ಶಾಂತಿಕೋರುತ್ತಾ, ಅವರೊಂದಿಗಿನ ಒಡನಾಟ ಮತ್ತು ಅವರ ಕಲಾಸಾಹಿತ್ಯದ ಕುರಿತು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಮಹೇಂದ್ರ ಡಿ. ಅವರು ಬರೆದ ಲೇಖನ ಓದುಗರ ಮುಂದಿದೆ, ತಪ್ಪದೆ ಓದಿ…

ಫೊನಿನಲ್ಲಿ ಮಾತಾಡುತ್ತಿದ್ದ ಅವರ ಧ್ವನಿ ಗದ್ಗದಿತವಾಯ್ತು “ಬಹುಶಃ ಇದೇ ನನ್ನ ಕೊನೆಯ ಪುಸ್ತಕ ಅಂತ ಕಾಣುತ್ತೆ, ನೀವು ಬಿಡುಗಡೆ ಮಾಡಲು ಬರಲೇಬೇಕು, ತಪ್ಪಿಸಬಾರದು” ಅಂದ್ರು, ಬಹುಶಃ ಆ ಕಡೆ ಅವರು ತಮ್ಮ ಕನ್ನಡಕ ತೆಗೆದು ತೇವವಾದ ಕಣ್ಣಂಚು ಒರೆಸಿಕೊಂಡಿರಲೇಬೇಕೆ. ಅಂತ ನನಗೆ ಭಾಸವಾಯ್ತು. ಈ ದೃಶ್ಯ ಕಣ್ಣುಂದೆ ಕಲ್ಪಿಸಿಕೊಂಡೆ ಮನಸ್ಸಿಗೆ ಖೇದವೇನಿಸಿತು. ತಕ್ಷಣ ಸಾವರಿಕೊಂಡು “ಅಯ್ಯೊ ಬಿಡ್ತು ಅನ್ನಿ ಸಾರ್‌, ನೀವು ನೂರು ವರ್ಷ ಇರಬೇಕು, ಕಲಾಸಾಹಿತ್ಯಕ್ಕೆ ನೀಮ್ಮ ಸೇವೆ ಬಹಳ ದೊರೆಯಬೇಕಿದೆ” ಅಂದೆ, ಅವರು ನಕ್ಕರು.

ಹಿರಿಯ ಕಲಾಬರಹಗಾರ ಸಾಹಿತಿ ಪ್ರೊ.ಎಂ.ಎಚ್. ಕೃಷ್ಣಯ್ಯ ಅವರೊಂದಿಗೆ ಈ ಮೂರು ತಿಂಗಳ ಹಿಂದೆ ನಡೆದ ಸಂಭಾಷಣೆಯಿದು. ಅವರ ಹಲವು ಲೇಖನಗಳ ಒಗ್ಗೂಡಿಸಿ ಪ್ರಕಟಿಸಿದ ಪುಸ್ತಕ ಬಿಡುಗಡೆಗೆ ಅವರು ನನ್ನನ್ನೇ ಆಹ್ವಾನಿಸುವ ಇರಾದೆಯಿಂದಲೇ ಪೋನು ಮಾಡಿದ್ದರು. ನಾನು ಖಂಡಿತಾ ಬರುವುದಾಗಿ ಹೇಳಿ ಪೋನು ಇಟ್ಟೆ, ಎದುರಿಗಿದ್ದ ಕಛೇರಿಯ ನನ್ನ ಆಪ್ತ ಸಹಾಯಕಿ ಸವಿತಾ “ಏನ್‌ ಸಾರ್‌, ಅವತ್ತು ಇಡಿ ದಿನ ಕಾರ್ಯಕ್ರಮ! ಇಷ್ಟು ಸುಲಭವಾಗಿ ಒಪ್ಪಿಕೊಂಡು ಬಿಟ್ರಲ್ಲ” ಅಂದಳು. ಆಕೆ ಹೇಳಿದ್ದು ಸರಿ ಇತ್ತು ಆ ಪುಸ್ತಕ ಬಿಡುಗಡೆಯೆಂದೆ ಚಿತ್ರಸಂತೆ, ಅಂದು ಬೆಳಗ್ಗೆ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಆಯ್ಕೆಯ ಅಂತಿಮ ಸುತ್ತು ನೆರವೇರಿಸಲು ತೀರ್ಪುಗಾರರು ಬರಲಿದ್ದರು, ಅದು ಮುಗಿದ ನಂತರ ಚಿತ್ರಸಂತೆಯಲ್ಲಿ ಅಕಾಡೆಮಿ ಮಳಿಗೆ ಉದ್ಘಾಟನೆ, ಆನಂತರ ಆಕಾಡೆಮಿ ಆಹ್ವಾನಿಸಿದ್ದ ಕಲಾವಿದರ ಪ್ರಾತ್ಯಕ್ಷಕೆ, ಸಂಜೆ ಎನ್.ಜಿ.ಎಂ.ಎ. ನಲ್ಲಿ ಪ್ಯಾನೆಲ್‌ ಡಿಸ್‌ ಕರ್ಷನ್‌ .. ಇಡಿ ದಿನ ಬಿಡುವಿಲ್ಲದಷ್ಟು ಕಾರ್ಯಕ್ರಮ, ಹಿರಿಯರು ಕೇಳಿದ್ದಾರೆ ಹೋಗಾದೆ ಇರಲು ಸಾಧ್ಯವಿಲ್ಲ, ನೋಡೊಣ ಹೇಗೋ ಸಮಯ ಹೊಂದಿಸಿ ಹೋದರಾಯ್ತು ಅಂತ ಅಂದುಕೊಂಡು ” ಕೃಷ್ಣಯ್ಯ ಅವರ ಲೋಕೇಶನ್‌ ಡ್ರೈವರಗೆ ಶೇರ್‌ ಮಾಡಿ ಅಂತ ಸವಿತಾಗೆ ಹೇಳಿಬಿಟ್ಟೆ.

ಚಿತ್ರಸಂತೆಯ ದಿನದಂದು ಸಂಜೆ ರಾಜರಾಜೇಶ್ವರಿ ನಗರದಲ್ಲಿದ್ದ ಪ್ರೋ.ಎಂ.ಎಚ್.ಕೃಷ್ಣಯ್ಯ ಅವರ ಮಗನ ಮನೆಗೆ ಹೋದೆ. ಪುಸ್ತಕ ಬಿಡುಗಡೆಗೆ ನಾನು ಮತ್ತು ಹಿರಿಯ ಕಲಾವಿದರಾದ ಎಸ್‌,ಜಿ. ವಾಸುದೇವ್‌ ಇಬ್ಬರೆ, ಅತಿಥಿಗಳು. ನಾನು ಒಳಹೋದ ಕೂಡಲೆ ಕೃಷ್ಣಯ್ಯ ಅವರು ಬಹು ಆದರದಿಂದ ಸ್ವಾಗತಿಸಿದರು, ಅವರದು ಮೊದಲೆ ಕೃಶ ಶರೀರ ಆಗಂತೊ ಅನಾರೋಗ್ಯ ಕಾರಣ ಇನ್ನಷ್ಟು ಕೃಶಗೊಂಡಿತ್ತು. ಕೃತಕ ಆಕ್ಸಿಜನ್‌ ಉಸಿರಾಟ ಪೈಪು,ಬೇರೆ. ಅವರ ಸ್ಥೀತಿ ನೋಡಿ ಸಂಕಟವಾಯ್ತು, ಕರೆದು ಅಭಿಮಾನದಿಂದ ಪಕ್ಕದಲ್ಲೆ ಕೂಡಿಸಿಕೊಂಡರು. “ಹೊಸ ಪುಸ್ತಕ ಬರೆದರಾ ಹೇಗೆ?” ಅಂತ ಕೇಳಿದೆ. ಅದಕ್ಕೆ ಅವರು “ಹೊಸದು ನೀರು ಆವರಿಸುವಾಗ ಹಳೆದು ಹಿಂದೆ ಸರಿಯಲೇ ಬೇಕಲ್ಲವಾ” ಅಂತ ಮಾರ್ಮಿಕವಾಗಿ ಹೇಳಿ ನಕ್ಕರು, ನಾನು ಅವರ ಮಾತಿನ ಹಿಂದಿನ ಜಾಡು ಗುರುತಿಸಿ ನಸುನಕ್ಕೆ, “ಎಲ್ಲ ಲೇಖನಗಳ ಸಂಗ್ರಹಿಸಿ ಪ್ರಕಟಿಸಿದ ಕೃತಿ ಇದು, ಬಿಡುಗಡೆ ಮಾಡುವ ನೀವು ಈ ಪುಸ್ತಕವನ್ನೊಮ್ಮೆ ಓದಿದ್ದರೆ ಮಾತಾಡು ಸುಲಭವಿತ್ತು” ಅನ್ನುತ್ತಾ ಉತ್ಸಾಹಗೊಂಡರು. ಈ ಆಕ್ಸಿಜನ್‌ ಪೈಪು ಮಾತಾಡು ಕಷ್ಟವಾಗುತ್ತೆ ಅಂತ ತಮ್ಮ ಸಹಾಯಕನನ್ನು ಕೂಗಿ ಕರೆದರು, ಅವರ ಶರೀರ ಮುಪ್ಪು ಆವರಿಸಿದ್ದರೂ ಧ್ವನಿ ಗಡಸುತನ ಎಳ್ಳಷ್ಟು ಕಡಿಮೆಯಾಗಿಲ್ಲವೆಂದು ಅನಿಸಿತು. ಮೊದಲ ಮಹಡಿಯಲ್ಲಿ ಎಲ್ಲೊ ಇದ್ದ ಸಹಾಯಕ ಇವರ ಧ್ವನಿ ಓಡಿ ಬಂದ. “ಈ ಆಕ್ಸಿಜನ್‌ ಇಲ್ಲದೆ ಐದು ನಿಮಿಷ ಇರಬಲ್ಲೆ, ಅಭ್ಯಾಸ ಮಾಡಿಕೊಳ್ಳುತ್ತಿದ್ದೇನೆ” ಅಂತ ಹೇಳಿ “ಕೃತಕವಾದದ್ದು ಅಕಾಡೆಮಿ ಪದವಿಗಳು ಖಾಯಂ ಅಲ್ಲ ಅಲ್ಲವೆ ಮಹೇಂದ್ರೆ ಅವರೆ: ಅಂಥ ನಕ್ಕರು. “ಏನು ಆಗಲ್ಲ, ನಿಮ್ಮ ಆರೋಗ್ಯ ಖಂಡಿತಾ ಸುಧಾರಿಸುತ್ತೆ, ಅಕಾಡೆಮಿಗೆ ನಿಮ್ಮ ಸಾಹಿತ್ಯ ಸೇವೆ ಅಗತ್ಯವಿದೆ” ಅಂದೆ, “ನಮ್ಮ ಕಾಲದಲ್ಲಿ ನಾವುಗಳು ಏನು ಮಾಡಬೇಕೊ ಮಾಡಿದೇವು, ನಮ್ಮಗಳ ಜವಾಬ್ದಾರಿ ಇದ್ದಾಗ ಎಲ್ಲ ನಿಭಾಯಿಸಿದ್ದೇವೆ. ಎಲ್ಲ ಕೊಟ್ಟಿದ್ದೇವೆ ಈಗ ಇದು ನಿಮ್ಮಗಳ ಕಾಲ ನೀವು ಕೆಲಸ ಮಾಡಿ ನಾವು ಜೊತೆಗಿರುತ್ತೇವೆ” ಅನ್ನುತ್ತ ಆಪ್ತತೆಯಿಂದ ಬೆನ್ನು ನೆವರಿಸಿದರು. ಹಿರಿಯರೆಂದರೆ ಹೀಗೆ ಇರಬೇಕು. ಅವರು ಎಂದು ಅಕಾಡೆಮಿಯಿಂದ ಸರ್ಕಾರದಿಂದ ನನಗೇನೋ ಸಿಗಲಿಲ್ಲ ಅಂತ ಕೊರಗುತ್ತಾ ದೂಷಿಸುತ್ತ ಕೂಡಲಿಲ್ಲ, ತಮ್ಮ ಪಾಲಿನ ಕರ್ತವ್ಯ ಮಾಡಿ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಬಹುಶಃ ಇಂಥ ಹಿರಿತನ ನಡುವಳಿಕೆಗಳಿಂದಲೆ ಕೇಲವರು ತಮ್ಮ ಶ್ರೇಷ್ಟತೆಯನ್ನು ಸಾದರಪಡಿಸುತ್ತಾರೆ, ಇಂಥ ಕೆಲವರು ನಮಗೆ ಆದರ್ಶಪ್ರಾಯರಾಗುತ್ತಾರೆ. ಸದಾ ನೆನಪಿನಲ್ಲಿ ಉಳಿಯುತ್ತಾರೆ.

ಅಂದು ಪುಸ್ತಕ ಬಿಡುಗಡೆಗೆ ನಾನು ವಾಸುದೇವ್‌ ಇಬ್ಬರೆ ಅತಿಥಿಗಳು, ಬಂದಿದ್ದ ಡಾ.ವಿಜಯಮ್ಮ ಕೂಡ ಪ್ರೇಕ್ಷಕರಾಗಿದ್ದರು. ವಾಸುದೇವ್‌ ಅವರು ಎರಡೆ ನಿಮಿಷದಲಿ ಮಾತು ಮುಗಿಸಿದರು, ನಂತರ ನಾನು ಅನಿವಾರ್ಯವಾಗಿ ಪುಸ್ತಕ ಕುರಿತು ತುಸು ದೀರ್ಘವಾಗಿ ಮಾತಾಡಲೇಬೇಕಾಯ್ತು. ಎಲ್ಲಿಂದ ಮಾತುಗಳು ಹೊರಬಂದವು ಗೊತ್ತಿಲ್ಲ, ಸುದೀರ್ಘವಾಗಿ ಅವರ ಲೇಖನಗಳ ಕುರಿತು ಮಾತಾಡತೋಡಗಿದೆ, ಪ್ರೊ. ಎಂ,ಎಚ್. ಕೃಷ್ಣಯ್ಯ ಹಾಗು ಡಾ. ವಿಜಯಮ್ಮ ಅವರು ಜತೆಯಾಗಿ ಅನೇಕ ಗ್ರಂಥಗಳ ಬರೆದಿದ್ದಾರೆ, ಸಂಪಾದಿಸಿದ್ದಾರೆ, ಪ್ರಕಟಿಸಿದ್ದಾರೆ. ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾತ್ರವಲ್ಲದೆ, ಅಕಾಡೆಮಿಗಳು, ಪುರತತ್ವ ಇಲಾಖೆ, ಇತಿಹಾಸ ಅಕಾಡೆಮಿ ಹಾಗೆ ಪತ್ರ ಸಂಗ್ರಹಾಲಯಕ್ಕೂ ಅವರು ಸೇವೆ ನೀಡಿದ್ದಾರೆ, ಸರ್ಕಾರ ಇವರ ಸೇವೆ ಗುರುತಿಸಿದ್ದು ಕಡಿಮೆಯೇ, “ಇದೊಂದು ಥ್ಯಾಂಕ್ಸ್‌ ಲೇಸ್‌ ಜಾಬ್ ಅಲ್ವೇನ್ರಿ: ಅಂತ ಕೃಷ್ಣಯ್ಯ ಅವರು ಹೇಳುತ್ತಿದ್ದದ್ದು ಸತ್ಯವೇ ಹೌದು. ಪ್ರೊ. ಎಂ.ಎಚ್. ಕೃಷ್ಣಯ್ಯ ಅವರು ಸಾಹಿತ್ಯ ಅಕಾಡೆಮಿ ಅಧ್ಯಕ್ಷರೆನೊ ಆದರೂ, ಆದರೆ ಡಾ. ವಿಜಯಮ್ಮ ಅವರಿಗೆ ಯಾವ ಅದೃಷ್ಟವೂ ಅವಕಾಶವೂ ಒದಗಲಿಲ್ಲ, ಅದೇನೆ ಇರಲಿ ಪ್ರೊ. ಎಂ.ಎಚ್. ಕೃಷ್ಣಯ್ಯ ಅವರಿಗೆ ದೊರಕಬೇಕಾಗಿದ್ದ ಗೌರವ ಆದರಗಳು ಸಿಗಲಿಲ್ಲ ಎಂಬುದೊಂತು ಸತ್ಯ!

ಕೃಷ್ಣಯ್ಯನವರನ್ನು ಮೊದಲು ಕಂಡದ್ದು ಕೇನ್‌ ಕಲಾಶಾಲೆಯಲ್ಲಿ ಮೊದಲ ವರ್ಷದ ಕಲಾವಿದ್ಯಾರ್ಥಿಯಾಗಿದ್ದ ನಾನು ಅವರು ಕಲೆಯ ವಿಚಾರಗಳನ್ನು ವಿವರಿಸುತ್ತಿದ್ದ ರೀತಿಯ ಮೋಜಿದೆನಿಸಿತ್ತು, ಸಾಹಿತಿಯೊಬ್ಬರು ಕಲೆಯ ಕುರಿತು ಹೇಗೆ ಅಥೆಂಟಿಕ್‌ ಆಗಿ ಹೇಳುತ್ತಾರೆ ಅನ್ನೊದು ನನ್ನ ಸೂಜಿಗವಾಗಿತ್ತು. ಕೈಗಳನ್ನು ಗಾಳಿಯಲ್ಲಿ ಆಡಿಸಿ ವಿವರಿಸುವ ಪರಿ ಎಲ್ಲಿ ಮೆದುಳಿನೋಳಗೆ ತುರಕಿಯೇ ಬಿಡುತ್ತಾರೆನೋ ಅಂತ ಅನ್ನಿಸುತ್ತಿತ್ತು. “ಏನಾದ್ರು ಪ್ರಶ್ನೆಗಳ ಕೇಳಿ” ಅಂದಾಗ ಅವರ ದೇಹವೇ ಪ್ರಶ್ನಾರ್ಥವಾಗಿ ಇದ್ದಂಥೆ ಭಾಸವಾಗಿ ನಗು ಬಂದಿತ್ತು. ಆದರೆ ಅವರು ಸಾಹಿತ್ಯ ಹಿನ್ನೆಲೆಯಲ್ಲಿ ಕಲೆ ಕಾಣುವ ಬಗೆಗಿಂತ ಕಲಾವಿದರ ದೃಷ್ಟಿಯಲ್ಲೆ ಕೃತಿ ನೋಡುವುದಾಗಬೇಕು ಮತ್ತು ಅದನ್ನು ನಾನು ಸಾಧಿಸಬೇಕಾದರೆ ಅದಕ್ಕಾಗಿ ನಾನು ಕಲಾಸಾಹಿತ್ಯ ಇತಿಹಾಸ ಹೆಚ್ಚು ಹೆಚ್ಚು ಓದಬೇಕು ಅಂತ ಅನ್ನಿಸಲು ಶುರುವಾಗಿದ್ದ ಆವಾಗಲೆ, ಅವರು ಹಡಪದ್‌ ಅವರ ಕೃತಿಗಳ ಬಗ್ಗೆ ಮಾತಾಡಲು ಆರಂಭಿಸಿದರೆ ನಾವು ಬದಾಮಿಯ ಬಂಡೆಗಳ ಮೇಲೆಯೇ ಬಿಸಿಲಲ್ಲಿ ಬರಿಗಾಲಿನಲ್ಲಿ ನಿಂತಿದ್ದೇವೆ ಅನ್ನುವಂತೆ ವಿವರಣೆ ಕಟ್ಟಿಕೋಡುತ್ತಿದ್ದರು. ಹೆಬ್ಬಾರ್‌ ಅವರ ಬಗ್ಗೆ ಮಾತಾಡುವಾಗ ಎದ್ದು ನಿಂತೆ ಹೇಳುವ ಬಗೆ ಅವರು ಆ ಹೆಬ್ಬಾರರಂಥ ಮೇರು ವ್ಯಕ್ತಿತ್ವಕ್ಕೆ ನೀಡುತ್ತಿದ್ದ ಗೌರವವೂ ಅದಾಗಿತ್ತು.
ಅವರ ಬರವಣಿಗೆಯಲ್ಲೂ ಅಂಥ ಸೂಜಿಗ ವಿವರಣೆ ತಂದರು. ಆ ಕಾಲದ ಬರವಣಿಗಾರರ ನಡುವೆ ಪ್ರೊಫೆಸರ್‌ ಅವರು ಸಾಹಿತ್ಯ ಹಿನ್ನೆಲೆಯ ಕಲಾಬರವಣಿಗೆ ಒಂದು ವಿಶಿಷ್ಟವಾಗಿ ನಿಲ್ಲುತ್ತದೆ. ದೃಶ್ಯಸಾಹಿತ್ಯದ ಮೇರು ಪ್ರತಿಭೆಯ ಕೊಂಡಿಯೊಂದನ್ನು ನಾವು ಕಳೆದುಕೊಂಡಿದ್ದೇವೆ. ಅವರು ಇದ್ದಿದ್ದರೆ ಇನ್ನಷ್ಟು ಬರೆಯಬಹುದಾಗಿತ್ತು. ಹೋಗಿಬನ್ನಿ ಪ್ರೋಫೆಸರ್‌ ನಿಮ್ಮ ಕಲಾಸಾಹಿತ್ಯದ ಸೇವೆ ಈ ನಾಡು ಸದಾ ಸ್ಮರಣೀಯವಾಗಿಡುತ್ತದೆ. ನಿಮಗೆ ಅಂತಿಮ ವಿದಾಯ ನಮನಗಳು.

* * * *

ಎಂ.ಎಚ್. ಅಂದರೆ ಕಳೆದ ಮೂರು ದಶಕಗಳ ದೃಶ್ಯಸಾಹಿತ್ಯ ಸಮಗ್ರದ “ಮಾಸ್ಟರ ಹೆಡ್” ಅಂತ ಅರ್ಥೈಸಬಹುದೇನೊ …


  • ಮಹೇಂದ್ರ ಡಿ ( ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರು)

 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW