ಬಿಂದುವಿನಿಂದಲೇ ಸಿಂಧು.! – ಎ.ಎನ್.ರಮೇಶ್. ಗುಬ್ಬಿ

“ಇದು ಜೀವದ ಹೆಜ್ಜೆಗೆ ಸ್ಫೂರ್ತಿ ನೀಡುವ ಕವಿತೆ. ಜೀವನದ ಹಾದಿಗೆ ದೀಪ್ತಿಯಾಗಿ ಬೆಳಕೀವ ಭಾವಗೀತೆ. ನಮ್ಮೆದುರಿನ ನಡೆಯುವ ಮಾರ್ಗ ಅದೆಷ್ಟೇ ಧೀರ್ಘವಾಗಿದ್ದರೂ, ನಮ್ಮ ಪುಟ್ಟ ಪುಟ್ಟ ಹೆಜ್ಜೆಯಿಂದಲೇ ನಡೆದು ಗುರಿ ತಲುಪಬೇಕು. ಅದೆಷ್ಟೇ ದಟ್ಟ ಕತ್ತಲು ತುಂಬಿದ್ದರೂ, ಪುಟ್ಟ ಪುಟ್ಟ ದೀಪ ಹಿಡಿದೇ ಕತ್ತಲ ಕಳೆಯಬೇಕು. ದೂರದಾ ಬೆಳಕಿನಡೆಗೆ ಸಾಗಬೇಕು. ಏನಂತೀರಾ..??” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಸಹಸ್ರ ಸಹಸ್ರಾರು ಪುಟಗಳ ಮಹಾ ಗ್ರಂಥದ
ಪ್ರಾರಂಭವೂ ಸಣ್ಣದೊಂದು ಅಕ್ಷರದಿಂದಲೆ
ಅತಿದೊಡ್ಡ ಕ್ಯಾನ್ವಾಸಿನ ಅಪೂರ್ವ ಚಿತ್ರದ
ಸಾಕಾರವೂ ಚಿಕ್ಕದೊಂದು ಗೆರೆಯಿಂದಲೆ.!

ಬೃಹತ್ ಪರ್ವತದ ಶೃಂಗದೆಡೆಗಿನ ಚಾರಣದ
ಆರಂಭವೂ ಸಣ್ಣದೊಂದು ಹೆಜ್ಜೆಯಿಂದಲೆ.!
ಭವ್ಯಾತಿಭವ್ಯ ಅರಮನೆಯಂತ ಬಂಗಲೆಯ
ನಿರ್ಮಾಣವೂ ಚಿಕ್ಕದೊಂದು ಇಟ್ಟಿಗೆಯಿಂದಲೆ.!

ಲಕ್ಷಾಂತರ ಸಾಲು ಸಾಲು ದೀಪಕಂಬಗಳ
ಬೆಳಗುವಿಕೆಯೂ ಸಣ್ಣದಾದ ಜ್ಯೋತಿಯಿಂದಲೆ.!
ಲೋಕ ಬದಲಾಯಿಸುವ ಮಹಾಕ್ರಾಂತಿಯ
ಅಂಕುರಾರ್ಪಣೆಯೂ ಚಿಕ್ಕದಾದ ಚೇತನದಿಂದಲೆ.!

ಹನಿ ಹನಿಯಿಂದಲೇ ಎಲ್ಲ ಹೊನಲು ಕಡಲು
ಕಾಳು ಕಾಳು ಕೂಡಬೇಕು ಕಣಜ ತುಂಬಲು
ಸಕಲ ಗರಿಷ್ಟಕೂ ಕನಿಷ್ಟಗಳೇ ಕಾರಣ ಇಲ್ಲಿ
ಕಣಕಣದಿಂದಲೇ ಬ್ರಹ್ಮಾಂಡವಾಗಿಹುದಿಲ್ಲಿ.!

ಮಹಾಯಾನವೋ ಶತಾಯುಷ್ಯ ಜೀವನವೋ
ಅಡಿ ಅಡಿ ನಡಿಗೆಯಿಂದಲೇ ಆರಂಭವಾಗಬೇಕು
ತಪಸ್ಸು ಸಾಧನೆ ಯಶಸ್ಸು ಸಕಲ ಸಾಕ್ಷಾತ್ಕಾರವೂ
ಪುಟ್ಟ ದಿಟ್ಟ ನಡೆಗಳಿಂದಲೇ ಪ್ರಾರಂಭವಾಗಬೇಕು.!

ಅಂಬುಧಿಯೆದುರು ನಿಂತು ಚಿಕ್ಕಪಾದ ನೋಡಿ
ಕನಲಿ ಕಂಗಾಲಾಗಿ ಕುಸಿಯುವುದರಲಿಲ್ಲ ಬದುಕು
ನೀರಿಗಿಳಿದು ತೀರದೆಡೆಗೆ ಕಣ್ಣು ನೆಟ್ಟು ದಿಟ್ಟವಾಗಿ
ಕ್ರಮಿಸುತ್ತ ಸಾಗುವುದರಲ್ಲಿದೆ ಯಶಸ್ಸಿನ ಬೆಳಕು.!


  • ಎ.ಎನ್.ರಮೇಶ್. ಗುಬ್ಬಿ. (ಲೇಖಕರು, ಕವಿಗಳು), ಕೈಗಾ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW