ಪರಿಸರ ಕಾಳಜಿಯ ಗಂಭೀರ ಓದು – ಶಶಿಧರ ಹಾಲಾಡಿ

”ಲೇಖಕ ನಾಗೇಶ ಹೆಗಡೆ ಅವರ ‘ನಡುಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ’ ಸಂಕಲನದಲ್ಲಿ ವಿವಿಧ ಸೆಮಿನಾರುಗಳಿಗೆ ಸಿದ್ಧಪಡಿಸಿದ, ವಿಶೇಷ ಸಂಚಿಕೆಗಳಿಗೆ ಬರೆದ ಪರಿಸರ ಸಂಬಂಧಿ ಬರಹಗಳಿದ್ದು, ಅವೆಲ್ಲವೂ ಒಂದೇ ಕಡೆ ಮೊದಲ ಬಾರಿ ಪರಿಸರಾಸಕ್ತರ ಓದಿಗೆ ಸಿಕ್ಕಿರುವುದು ವಿಶೇಷ”. – ಶಶಿಧರ ಹಾಲಾಡಿ, ಮುಂದೆ ಓದಿ…

ಪುಸ್ತಕ : ನಡುಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ
ಲೇಖಕರು : ನಾಗೇಶ ಹೆಗಡೆ
ಪ್ರಕಾಶನ : ಭೂಮಿ ಬುಕ್ಸ್
ಪುಸ್ತಕದ ಬೆಲೆ : ರು. ೨೪೦/-
ಪುಸ್ತಕ ಖರೀದಿಸಲು : ೯೪೪೯೧೭೭೬೨೮

ಇದು ಒಂದು ಗಂಭೀರ ಓದಿನ ಪುಸ್ತಕ. ಬರವಣಿಗೆಯ ಶೈಲಿ ವೇಗವಾಗಿ ಓದಿಸಿಕೊಂಡು ಹೋದರೂ, ಇಲ್ಲಿನ ವಿಷಯ ಎಷ್ಟು ಗಂಭೀರ ಎಂದರೆ, ಓದುತ್ತಾ ಹೋಗುವ ಓದುಗನ ಮನದಲ್ಲಿ ಚಿಂತೆಯ ಕಾರ್ಮೋಡಗಳನ್ನು ಬಡಿದೆಬ್ಬಿಸುವ ಶಕ್ತಿಯುಳ್ಳ ಪುಸ್ತಕ ಇದು. ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರು ವಿವಿಧ ಸಂದರ್ಭಗಳಲ್ಲಿ ಬರೆದ ೨೬ ಲೇಖನಗಳು ಇಲ್ಲಿವೆ. ಇವುಗಳನ್ನು ಓದುತ್ತಾ ಹೋದಂತೆ, ಕಳೆದ ಕೆಲವು ದಶಕಗಳಿಂದ ಪರಿಸರ ರಕ್ಷಣೆಯ ವಿಚಾರದಲ್ಲಿ ನಾವೆಷ್ಟು ದುರ್ಭರ ಸನ್ನಿವೇಶವನ್ನು ಸೃಷ್ಟಿಸಿಕೊಂಡಿವೆ ಎಂಬ ಆತಂಕವಾಗುತ್ತದೆ. ಈಗಾಗಲೇ ವಿನಾಶದತ್ತ ಸಾಗಿರುವ ಪರಿಸರವನ್ನು ಈಗ ಇರುವ ಸ್ಥಿತಿಯಲ್ಲಾದರೂ ಇಟ್ಟುಕೊಳ್ಳಬೇಕೆಂಬ ಕಾಳಜಿ ಎಲ್ಲರಲ್ಲೂ ಸಹಜ. ಆದರೆ, ಆ ಕೆಲಸವಾಗದೇ, ನಮ್ಮ ಕಣ್ಣೆದುರೇ ಒಟ್ಟೂ ಸ್ಥಿತಿಯು ಇನ್ನಷ್ಟು ಹದಗೆಡುತ್ತಿದೆ ಮತ್ತು ಆ ಕೆಲಸವನ್ನು ಮಾಡಬೇಕಿದ್ದ ಸರಕಾರಗಳು, ಮೊದಲಿನಷ್ಟು ಕಾಳಜಿಯನ್ನೂ ತೋರುತ್ತಿಲ್ಲ ಎಂದು ಈ ಪುಸ್ತಕಗಳಲ್ಲಿನ ಬರಹಗಳು ಪುರಾವೆ ಸಹಿತ ಋಜುವಾತು ಮಾಡುತ್ತವೆ.

`ಸರಕಾರ ತಾನಾಗಿ ಪರಿಸರ ರಕ್ಷಣೆ ಮಾಡುವುದು ಹೋಗಲಿ, ಮಾಡುತ್ತಿz್ದÉÃನೆಂಬ ಹುಸಿ ನಂಬಿಕೆಯನ್ನಾದರೂ ಬಿತ್ತಲು ಪ್ರಯತ್ನಿಸುತ್ತಿದೆಯೆ? ಅದೂ ಇಲ್ಲ. ಮಾಲಿನ್ಯ ನಿಯಂತ್ರಣ ಇಲಾಖೆ ಪ್ರಕಟಿಸುತ್ತಿದ್ದ `ಪರಿಸರ ಪರಿಸ್ಥಿತಿ ವರದಿ’ಗಳು ಸ್ಥಗಿತಗೊಂಡು ಇಪ್ಪತ್ತು ವರ್ಷಗಳೇ ಆದವು. `ನಮ್ಮ ಪರಿಸರ’ ಮಾಸಪತ್ರಿಕೆ ನಿಂತು ಇನ್ನೂ ಹೆಚ್ಚು ಕಾಲವೇ ಕಳೆಯಿತು. .. ಸರಕಾರಿ ಜಾಹೀರಾತುಗಳ ಉತ್ಪಾದನೆಗೆಂದೇ ವಾರ್ತಾ ಇಲಾಖೆ ಇದೆ. ಪ್ರತಿ ಜಿಲ್ಲೆಯಲ್ಲೂ ಅದರ ಕಚೇರಿ ಇದೆ. ಸಚಿವರ ಸಾಧನೆಗಳನ್ನು, ಅಭಿವೃದ್ಧಿಯ ವೈಖರಿಯನ್ನು ವರ್ಣಿಸುವ ಕೋಟಿಗಟ್ಟಲೆ ರೂಪಾಯಿಗಳ ಜಾಹೀರಾತುಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಅಸಂಖ್ಯ ವಿಡಿಯೋಗಳು ತಯಾರಾಗುತ್ತಿವೆ. ಆದರೆ ನಲುಗಿಹೋದ ಯಾವ ಹಳ್ಳಿಯಲ್ಲಾದರೂ ಒಂದು ಭಿತ್ತಿಚಿತ್ರ, ಒಂದು ಕರಪತ್ರ, ಒಂದು ಜಾಹೀರಾತು ಪ್ರಕಟವಾಗಿದೆಯೇ? ಕಾಣುವಂತಿದೆಯೆ? ಮಳೆನೀರನ್ನು ಹಿಡಿದು ಬಳಸುವ ಅಥವಾ ಸೋಲಾರ್ ಪವರ್‌ನಿಂದ ವಿದ್ಯುತ್ ಉತ್ಪಾದಿಸುವ ಪ್ರಾತ್ಯಕ್ಷಿಕೆಯನ್ನು ತೋರಿಸಬಲ್ಲ ಒಂದಾದರೂ ತಹಸೀಲ್ದಾರ ಕಚೇರಿ ಕರ್ನಾಟಕದಲ್ಲಿ ಇದೆಯೆ?’ (ಪುಟ ೧೮೬) ೨೦೨೦ರಲ್ಲಿ ಪ್ರಕಟಗೊಂಡ ಈ ಬರಹದಲ್ಲಿ ನಾಗೇಶ ಹೆಗಡೆಯವರು ಸರಕಾರದ ಬೇಜವಾಬ್ದಾರಿತನವನ್ನು, ಅದಕ್ಷತೆಯನ್ನು ನೇರವಾಗಿ ಎತ್ತಿ ತೋರಿಸಿದ್ದಾರೆ. ಉಳಿದಿರುವ ಪರಿಸರವನ್ನು ರಕ್ಷಿಸುವುದರ ಬದಲು, ಕಸ್ತೂರಿ ರಂಗನ್ ಮತ್ತು ಮಾಧವ ಗಾಡ್ಗೀಳ್ ವರದಿಗಳನ್ನೇ ತಿರಸ್ಕರಿಸುವ ಜನಪ್ರತಿನಿಧಿಗಳ ಉಡಾಫೆಯನ್ನು ಸಹ ಇಲ್ಲಿ ಎತ್ತಿ ತೋರಿಸಿದ್ದಾರೆ. ಈ ಎರಡು ವರದಿಗಳು ಬಂದಾಗ, ನಮ್ಮ ರಾಜ್ಯದ, ದೇಶದ ಒಂದಷ್ಟು ಕಾಡುಗಳು, ಜೀವವೈವಿಧ್ಯ ತಾಣಗಳು ಬದುಕಿಕೊಂಡವು ಎಂದು ಪರಿಸರಾಸಕ್ತರು, ಪ್ರಾಜ್ಞರು ತುಸು ನೆಮ್ಮದಿಯನ್ನು ಅನುಭವಿಸಿದ್ದುಂಟು.

ಆ ನೆಮ್ಮದಿಯನ್ನು ಬುಡಸಹಿತ ಕಡಿದುಹಾಕುವ ಶಕ್ತಿ ನಮ್ಮ ಜನಪ್ರತಿನಿಧಿಗಳಿಗೆ, ಅಧಿಕಾರಶಾಹಿಗೆ ಇದೆ ಎಂಬುದು ಇಂದಿನ ಕಹಿ ಸತ್ಯ.

`ವಾರ್ತಾ ಇಲಾಖೆ ಎಂಬುದೊಂದಿದೆ. ಅದಕ್ಕೆ ಸರಕಾರಿ ಜಾಹೀರಾತುಗಳನ್ನು ಟಾಂ ಟಾಂ ಮಾಡುವುದನ್ನು ಬಿಟ್ಟರೆ, ಜನರಿಗೆ ಯಾವ ಮಾಹಿತಿಯನ್ನು ಕೊಡಬೇಕು ಎಂಬುದರ ಬಗ್ಗೆ ತುಸುವೂ ಲಕ್ಷ್ಯವಿಲ್ಲ. ದಿನದಿನಕ್ಕೆ ವ್ಯಾಪಿಸುತ್ತಿರುವ ಬರಗಾಲದ ಬಗ್ಗೆ, ಆಳಕ್ಕಿಳಿಯುತ್ತಿರುವ ಅಂತರ್ಜಲದ ಬಗ್ಗೆ, ಪರಭಾರೆಯಾಗುತ್ತಿರುವ ಊರೊಟ್ಟಿನ ಭೂಮಿಯ ಬಗ್ಗೆ, ನಿಷೇಧಿತ ಕೃಷಿ ವಿಷಯಗಳ ಬಗ್ಗೆ ಗ್ರಾಮೀಣ ಜನರಿಗೆ, ನಗರದ ಅರೆಸಾಕ್ಷರರಿಗೆ ಸರಳ ಕನ್ನಡದಲ್ಲಿ ಮಾಹಿತಿಗಳನ್ನು ನೀಡಬೇಕಿತ್ತು. ನೀಡಿಲ್ಲ..’ (ಪುಟ ೩೩) ಈ ರೀತಿ ನಮ್ಮ ಸರಕಾರಗಳು, ಪರಿಸರವನ್ನು ರಕ್ಷಿಸುವ ವಿಚಾರದಲ್ಲಿ ತೋರುತ್ತಿರುವ ಪರಮ ನಿರ್ಲಕ್ಷ್ಯವನ್ನು ಎತ್ತಿತೋರಿಸುವ ನಾಗೇಶ ಹೆಗಡೆಯವರು, ಇದನ್ನು ಪರಿಹರಿಸಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನೂ ಬೇರೆ ಲೇಖನಗಳಲ್ಲಿ ವಿವರಿಸಿದ್ದಾರೆ. (ಪುಟ ೧೬೭ – ಬೀಜಗೋಲಿ).

ನಡುಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ ಪುಸ್ತಕ ಲೇಖಕರು ನಾಗೇಶ ಹೆಗಡೆ

`ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ’ ಎಂಬ ರೂಪಕಸ್ವರೂಪದ ಶೀರ್ಷಿಕೆ ಹೊಂದಿರುವ ಈ ಪುಸ್ತಕವನ್ನು `ನಡು ಭಾಗದ..’ ಎಂದೂ ಓದಿಕೊಳ್ಳಬಹುದು ಎಂದು ನಾಗೇಶ ಹೆಗಡೆಯವರು ಸೂಚಿಸಿದ್ದು ಅರ್ಥಪೂರ್ಣ. ಪತ್ರಕರ್ತನು `ನಡುಭಾಗ’ದಲ್ಲೇ ಇದ್ದುಕೊಂಡು, ಆಳುವವರ, ಸರಕಾರದ ತಪ್ಪು ನಡೆಗಳನ್ನು ಟೀಕಿಸುತ್ತಲೇ ಇರಬೇಕು, ಆ ಮೂಲಕ ಒಟ್ಟೂ ಜನಸಾಮಾನ್ಯರ ಹಿತವನ್ನು ಕಾಪಾಡಲು ಪ್ರಯತ್ನಿಸುತ್ತಲೇ ಇರಬೇಕು, ಆ ದಾರಿಯಲ್ಲಿ ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳಲು ತಯಾರಿರಬೇಕು ಎಂದು ಹೇಳುತ್ತಾರೆ ಹೆಗಡೆಯವರು. ಅಣು ವಿಜ್ಞಾನಿ ರಾಜಾ ರಾಮಣ್ಣ ಅವರನ್ನೇ ಟೀಕಿಸಿ, ಲೇಖನ ಬರೆದಾಗ, ಇಷ್ಟು ವೇಗವಾಗಿ ಸಾಗಿದರೆ ಕೆಲಸ ಕಳೆದುಕೊಂಡೀರಾ ಎಂದು ಸಹೋದ್ಯೋಗಿಗಳೇ ಎಚ್ಚರಿಸಿದ್ದನ್ನು ಉದಹರಿಸುವ ನಾಗೇಶ ಹೆಗಡೆಯವರು, ಬೀದಿಯಲ್ಲಿಳಿದು ಚಳವಳಿ ಮಾಡಿದ್ದು ಹಲವು ಬಾರಿ. (ಪುಟ ೮೮, ೮೯).

ಈ ಸಂಕಲನದಲ್ಲಿ ವಿವಿಧ ಸೆಮಿನಾರುಗಳಿಗೆ ಸಿದ್ಧಪಡಿಸಿದ, ವಿಶೇಷ ಸಂಚಿಕೆಗಳಿಗೆ ಬರೆದ ಪರಿಸರ ಸಂಬಂಧಿ ಬರಹಗಳಿದ್ದು, ಅವೆಲ್ಲವೂ ಒಂದೇ ಕಡೆ ಮೊದಲ ಬಾರಿ ಪರಿಸರಾಸಕ್ತರ ಓದಿಗೆ ಸಿಕ್ಕಿರುವುದು ವಿಶೇಷ. ಪ್ರಮುಖ ಅಂಕಿಸಂಕಿಗಳನ್ನು ನೀಡುತ್ತಾ, ವಿವರಗಳು ಮರುಕಳಿಸದಂತೆ ಎಚ್ಚರವಹಿಸಿ ಸಿದ್ಧಪಡಿಸಿದ ಇಲ್ಲಿನ ಬರಹಗಳು, ಒಂದು ರೀತಿಯಲ್ಲಿ ಕಣ್ತೆರೆಸುವ, ಎಚ್ಚರಿಸುವ ಲೇಖನಗಳು. ಮಕ್ಕಳಲ್ಲಿ ಪರಿಸರಾಸಕ್ತಿ ಬೆಳೆಸಬೇಕಿದ್ದ ಪರಿಸರ ಪಾಠಗಳ ಪಠ್ಯಕ್ರಮವೂ ಹೇಗೆ ಶುಷ್ಕವಾಗುತ್ತಾ ಸಾಗಿದೆ ಎಂದು ಹೇಳಿರುವ ನಾಗೇಶ ಹೆಗಡೆಯವರ ಮಾತುಗಳು, ಇಂದಿನ ಸರಕಾರಕ್ಕೆ ಎಚ್ಚರಿಕೆಯ ಗಂಟೆ. ಪರಿಸರದ ಕುರಿತು ಆಸಕ್ತಿ ಹೊಂದಿರುವ ಎಲ್ಲರ ಸಂಗ್ರಹದಲ್ಲೂ ಇರಬೇಕಾದ ಪುಸ್ತಕ ಇದು.

ನಂತರ ಸೇರಿಸಿದ ಟಿಪ್ಪಣಿ: ಈ ಪುಸ್ತಕದ ಮೊದಲ ಪುಟದಿಂದ ಕೊನೆಯ ಪುಟದ ತನಕವೂ ಓದಿದೆ! ಇಲ್ಲಿನ ಹಲವು ಬರಹಗಳನ್ನು ಈ ಹಿಂದೆಯೇ ವಾರಪತ್ರಿಕೆಗಳಲ್ಲಿ, ದಿನಪತ್ರಿಕೆಗಳಲ್ಲಿ ಓದಿದ್ದರೂ, ಈ ಸಂಗ್ರಹದಲ್ಲಿ ಓದಿದಾಗ, ಆ ಲೇಖನಗಳು ಇಲ್ಲಿರುವ ಇತರ ಲೇಖನಗಳಿಗೆ ಕನೆಕ್ಟ್ ಆಗಿ, ಹೊಸ ಆಯಾಮದ ಅರ್ಥವನ್ನು ನನ್ನಲ್ಲಿ ಸ್ಫುರಿಸಿದವು. ಈ ನಿಟ್ಟಿನಲ್ಲಿ ಯೋಚಿಸಿದಾಗ, ಪತ್ರಿಕೆಗಳಲ್ಲಿ ಆಗಾಗ ಪ್ರಕಟಗೊಂಡ ಲೇಖನಗಳನ್ನು, ವಿವಿಧ ಸೆಮಿನಾರ್‌ಗಳಲ್ಲಿ, ವಿಶೇಷ ಸಂಚಿಕೆಗಳಲ್ಲಿ, ಗೋಷ್ಠಿಗಳಲ್ಲಿ ಮಂಡಿಸಿದ ಲೇಖನಗಳನ್ನು ಹೇಗೆ ಅರ್ಥಪೂರ್ಣ ಸಂಕಲನವನ್ನಾಗಿಸಬಹುದು ಎಂಬುದಕ್ಕೂ `ನಡುಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ’ ಒಂದು ಉದಾಹರಣೆ.


  • ಶಶಿಧರ ಹಾಲಾಡಿ ( ಕಾದಂಬರಿಕಾರರು, ಕತೆಗಾರರು, ಪತ್ರಕರ್ತರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW