ಖ್ಯಾತ ಮನಃಶಾಸ್ತ್ರಜ್ಞರಾದ ಶಾಂತಾ ನಾಗರಾಜ್ ಅವರು ‘ಮ್ಯಾಕರೋನಿ ಸ್ಪಘಟಿ’ ಕುರಿತು ಕುತೂಹಲಕರ ಪುಟ್ಟದಾದ ಲೇಖನವನ್ನು ತಪ್ಪದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
“ ನಾನು ಮ್ಯಾಕರೋನಿ ಸ್ಪಘಟಿಗಳನ್ನು ತಿಂದಿದ್ದೇನೆ – ನಾ ಮಾಡಿದಾ ಕರ್ಮ ಬಲವಂತವಾದರೆ – ಯಾವ ದೇವರು ತಾನೆ ಏನು ಮಾಡಿಯಾನು ? ನಾನು ಈ ಎರಡು ಇಟ್ಯಾಲಿಯನ್ ಆಹಾರ ಪದಾರ್ಥಗಳ ಕುರಿತು ಸಣ್ಣ ವಿಕಾಸವಾದವೊಂದನ್ನು ಮಂಡಿಸುತ್ತೇನೆ.
ಇವುಗಳ ವಿಕಾಸದಲ್ಲಿ ಮೂರು ಹಂತಗಳನ್ನು ಗುರುತಿಸಿದ್ದೇನೆ. ಮೆಡಿಟೇರಿಯನ್ ನಾಗರೀಕತೆ ಬೆಳೆದು ರೋಮ್ ನಲ್ಲಿ ನೆಲೆಸಿದಾಗ , ಇಟಲಿಯ ಮಾನವ ಅನಾಗರೀಕತೆಯಿಂದ ನಾಗರೀಕತೆಯ ಕಡೆಗೆ ಮೊದಲ ಹೆಜ್ಜೆಯನ್ನಿಟ್ಟಾಗ , ಈ ಮ್ಯಾಕರೋನಿಯನ್ನು ನಿರ್ಮಿಸಿದ. ಆಮೇಲೆ – ಅವನಲ್ಲಿ ಬುದ್ಧಿ ಬೆಳೆದ ಮೇಲೆ – ಅದರಲ್ಲಿ ಹುರುಳಿಲ್ಲ ( ವಾಸ್ತವವಾಗಿ ಅದು ಟೊಳ್ಳು ಪದಾರ್ಥ ) ಎಂದು ಮನಗಂಡು ಒಂದು ಮೆಟ್ಟಿಲು ಮೇಲೇರಿ ಸ್ಪಘಟಿಯನ್ನು ನಿರ್ಮಿಸಿದ. ಸ್ಪಘಟಿ ಅಂತಿಮ ಗುರಿಯಲ್ಲ. ಗುರಿಯನ್ನು ಸಾಧಿಸ ಹೊರಟಾಗ ದಾರಿಯಲ್ಲೊಂದು ಮಜಲು. ಇಟಾಲಿಯನ್ನರು ಆ ಮಜಲಿನಲ್ಲೇ ನಿಂತರು.

ಫೋಟೋ ಕೃಪೆ : google
ಅವರ ಪ್ರತಿಭೆ ಅಲ್ಲಿಂದ ಮೇಲಕ್ಕೆ ಏರಲಾರದೇ ಹೋಯಿತು. ಈ ಸಂದರ್ಭದಲ್ಲಿ ಅಂತಿಮ ಗುರಿಯೆಂದರೆ ಕರಿದ ಶ್ಯಾವಿಗೆ ಪಾಯಿಸ. ಭಾರತೀಯರು ಮೊದಲ ಎರಡು ಹಂತಗಳನ್ನೂ ಲೆಕ್ಕಿಸದೇ ಒಂದೇ ನೆಗೆತಕ್ಕೆ ನೆಗೆದು ಇದನ್ನು ಸಾಧಿಸಿಬಿಟ್ಟರು. ಪಾಶ್ಚಾತ್ಯರು ಸ್ಪಘಟಿಯ ಮಟ್ಟದಲ್ಲೇ ನಿಂತರು. ಪೂರ್ಣವಿಕಾಸದ ಫಲವಾದ ಮಾನವ ಶಿಖರದ ಔನ್ನತ್ಯದ ಮೇಲಿಂದ ಬಗ್ಗಿ ನೋಡಿದರೆ ಚಿಂಪಾಂಜಿಯೂ ನಿಯಾಂದರ್ಥಲ್ ಮಾನವನೂ ಹೇಗೆ ಕಾಣಬಹುದೋ ಊಹಿಸಿಕೊಳ್ಳಿ. ಭಾರತೀಯರಿಗೆ ಮ್ಯಾಕರೋನಿಯೂ ಸ್ಪಘಟಿಯೂ ಕಾಣುವುದು ಹಾಗೆಯೇ’!!!

ಫೋಟೋ ಕೃಪೆ : google
ಈಗ ಭಾರತದ ದೊಡ್ಡ ನಗರಗಳ ಮನೆಮನೆಯಲ್ಲೂ ಮ್ಯಾಕರೋನಿ ಸ್ಪಘಟಿಯರು ಸ್ಥಾಪನೆಗೊಂಡಿದ್ದಾರೆ. ಅಲ್ಲಲ್ಲಿ ‘ ಇಟ್ಯಾಲಿಯನ್ ಕಿಚನ್ , ಚೈನೀಸ್ ಕಿಚನ್ ‘ ಗಳು ಭರದಿಂದ ಜೇಬು ತುಂಬಿಸಿಕೊಳ್ಳುತ್ತಿವೆ. ಪಾಪ ! ಮೂರ್ತಿರಾಯರ ಆತ್ಮವೇನಾದರೂ ಒಮ್ಮೆ ತಮ್ಮ ಪ್ರೀತಿಯ ಬೆಂಗಳೂರು ಮೈಸೂರುಗಳಲ್ಲಿ ಸುತ್ತಾಡಿ ಮ್ಯಾಕರೋನಿ ಸ್ಪಘಟಿಯರ ವೈಭವವನ್ನು ನೋಡಿದರೆ , ತಮ್ಮ ಪ್ರವಾಸಕಥನವನ್ನು ಬದಲಿಸಿ ಬೇರೆ ರೀತಿಯಲ್ಲಿ ಬರೆಯಲು ತೊಡಗಬಹುದು!!!
- ಶಾಂತಾ ನಾಗರಾಜ್
