ದೊಡ್ಡದಾದ ಛತ್ರ, ಭಾರಿ ಭೋಜನ ಎಲ್ಲ ಮಸ್ತ್ ಇತ್ತು. ಹುಡುಗಾ -ಹುಡುಗಿ ಜೋಡಿನು ಚಂದ ಇತ್ತು. ಮದುವಿ ಮಸ್ತ್ ಆಯ್ತು ಅಂತ ನಾನು ಮನೆ ಕಡೆ ಹೊರಟಿದ್ದೆ, ಅಷ್ಟೋತ್ತಿಗೆ ಮದುವಿ ಹುಡುಗಿ ಗಂಡನ ಮನೆಗೆ ನಾನು ಹೋಗೋಂಗಿಲ್ಲ ಅಂತ ರಾಗ ತಗದ್ಲು… ಯಾಕೆ? ಅನ್ನೋದನ್ನ ತಪ್ಪದೆ ಓದಿ ರಾಘವೇಂದ್ರ ಪಿ ಅಪರಂಜಿ ಅವರ ಈ ಮದುವೆ ಕತೆ….
ಅಲ್ಲೇ ಹಾಸಿಗೆ ಮೇಲೆ ಇನ್ನಷ್ಟು ಹೊಳ್ಳಾಡೋ ಮನಸ್ಸಾಗಿತ್ತು. ಅವತ್ತು ರವಿವಾರ ಯಾಕೋ ಇನ್ನಷ್ಟು ಮಲಗೋ ಆಸೆಯಾಗಿತ್ತು. ತಕ್ಷಣ ನೆನಪಾಯಿತು ಯಾರೋ ಒಬ್ಬರು ಮದುವೆಗೆ ಕರೆದಿದ್ದರು ಅಂತ. ಹಂಗ ಎದ್ದು ಮದುವಿಗೆ ಹೋಗೋಣು ಅಂತ ರೆಡಿ ಆದೆ. ಎರಡನೆ ಅಕ್ಷತಕ್ಕ ಹೋದರಾತು ಹಂಗ ಊಟಾ ಮಾಡಕೊಂಡ ಬಂದರಾತು ಅಂತ ಗಿಫ್ಟ್ ಹಿಡಕೊಂಡ ಹೊಂಟೆ.
ಕಲ್ಯಾಣ ಮಂಟಪಕ್ಕೂ ಬಂದೆ ನೋಡ್ರಿ. ಅವತ್ತ ರಜಾ ಹಾಕಿದ್ದೆ, ಸಂಜಿತನ ಇರೋಣು ಅಂತ ಮನಸಾತು. ಮನಿಯಾಕಿನ್ನ ಬಿಟ್ಟ ಬಂದಿದ್ದೆ. ಒಂದ ಸ್ವಲ್ಪ ಲೇಟಾಗಿ ಬರ್ತೀನಿ ಅಂತ ಮೊಬೈಲ್ ದಾಗ ಹೇಳಿ ಚಂದದ ಮದುವಿ, ಮದುವಿಗೆ ಚಂದಾಗಿ ಬಂದವರು ಓಡಾಡೋದನ್ನ ನೋಡಕೊಂತ, ಪರಿಚಯದವರನ್ನ ಮಾತನಾಡಸಗೊಂತ ಕುಂತಿದ್ದೆ. ವಧುವಿಗೆ ಹಾಕಿದ ಬಟ್ಟೆ, ಮದರಂಗಿ, ಕಲ್ಯಾಣ ಮಂಟಪದ ಶೃಂಗಾರ, ಅರ್ಚಕರು ಹೇಳುವ ಮಂತ್ರ ಘೋಷ, ಹುಡುಗಿಯ ತಂದೆ-ತಾಯಿ ಮುಖದಲ್ಲಿನ ನಿರಾಳ ಭಾವ ಅದೇನೋ ಆನಂದ ಕೊಡತಿತ್ತ ನೋಡ್ರಿ. ಅಷ್ಟೋತ್ತಿಗೆ ಎಲ್ಲಾರೂ ಲೈನ್ ದಾಗ ನಿಂತ ಗಿಫ್ಟ್ ಕೊಡಲಿಕತ್ತಿದ್ದರು. ನಾನು ಹೋಗಿ ಲೈನದಾಗ ನಿಂತೆ. ಗಿಫ್ಟ್ ಕೊಟ್ಟ ಚಂದನ ದಂಪತಿಗೆ ಸುಖಕರವಾಗಿ ಬಾಳಿ ಅಂತ ಹರಸಿ ಮುಂದ ಊಟಕ್ಕ ಹೋದೆ.
ಫೋಟೋ ಕೃಪೆ : google
ಅಬ್ಬಾ… ಅದೇನ್ರಿ ಅಡುಗೆ ಸಿದ್ಧತೆ. ನಾರ್ಥ ಇಂಡಿಯನ್ ಅಡುಗೆ, ಗೋಬಿ, ನೂಡಲ್ಸ್, ಸಿಜವಾನ್ ರೈಸ್, ಈ ಕಡೆ ಹೋಳಿಗಿ, ಆ ಕಡೆ ರೊಟ್ಟಿ ತಿನ್ನೋಕಿನ ಮುಂಚೆನ ಬಾಯಾಗ ನೀರ ಬಂದಿತ್ತು ನೋಡ್ರಿ. ಊಟಾನೂ ಆತು. ಅಬ್ಬಾ… ಬಾರಿ ಅಡುಗೆ ಮಾಡಸ್ಯಾರ ನೋಡ್ರಿ ಅಂತ ಪರಿಚಯದವರ ಮುಂದ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿ ಇನ್ನೇನು ಹೋಗಬೇಕು ಅನ್ನೋದ್ರಾಗ ರಾಘು ನನ್ನ ಮಗಳನ್ನ ಗಂಡನ ಮನಿಗೆ ಕಳಿಸಿ ಹೋಗೋಣು ತಡಿ ಅಂತ ಹೆಗಲ ಮ್ಯಾಲ ಒಂದ ಕೈಬಿತ್ತು. ಆತು ಅಂತ ನಾನು ಕುತಗೊಂಡೆ. ಸಂಜಿ ಆತು ವಧು-ವರರ ಊಟಾನೂ ಆತ ನೋಡ್ರಿ.
ವಧುನ್ನ ಅಪ್ಪ-ಅಮ್ಮ ಕಣ್ಣೀರು ಹಾಕ್ತಾ ಇನ್ನೇನು ಕಳಿಸಿಕೊಡಬೇಕು ಅನ್ನೋವಷ್ಟರಲ್ಲಿ ನಾ ಗಂಡನ್ನ ಮನಿಗೆ ಹೋಗಂಗಿಲ್ಲ ಅಂದ ಬಿಡಬೇಕಾ ವಧು!. ಅಯ್ಯೋ ಇದೇನಾತಪ್ಪಾ.. ಎಲ್ಲರೂ ಗಾಬರಿಯಾಗಿಬಿಟ್ಟವಿ ನೋಡ್ರಿ. ಏನಾತು ಅಂತ ವಧುವಿನ ಅಪ್ಪ ಗಾಬರಿಯಾಗಿ ಕೇಳಿದ್ರು. ವಧು ಹೇಳಿದ್ಲು ‘ಅಪ್ಪಾ… ನೀ ನನಗ ಬಡವರ ಮನೆಗೆ ಕೊಟ್ಟರೂ ನಾ ಸಂತೋಷದಿಂದ ಹೋಗತಿದ್ದೆ. ನೀ ನನ್ನ ಮದುವಿಗೆ ನೀ ಜೀವನ ಪರ್ಯಂತ ದುಡದ ಪಿ ಎಫ್ ಹಣ ತಗದು ಖರ್ಚು ಮಾಡಿ. ಅಡುಗೆ, ಕಲ್ಯಾಣಮಂಟಪ, ಅರ್ಚಕರು ಹೊಂದಸೋದು, ಬಟ್ಟೆ ತೆಗೆಸೋದು, ಸಂಬಂಧಿಕರನ್ನು ಕರೆಯೋದು, ಗೆಳೆಯರನ್ನ ಕರೆಯೋದು ಅಂತ ಮೂರು ತಿಂಗಳು ನಿದ್ದಿ ಮಾಡಿಲ್ಲ ಅಪ್ಪ ನೀನು. ಆದರೆ ಈ ಮದುವಿಯಾದ ನನ್ನ ಗಂಡ ತನ್ನ ಗೆಳೆಯರಿಗೆ ಮಾವನ ಮನಿಯವರು ಛಲೋ ಅಡುಗಿ ಮಾಡಸಿಲ್ಲ, ಎಂತ ಮನೆತನ ಸಿಕ್ತು ಅಂದಬಿಟ್ಟ. ಇಂತಹವನ ಮನಿಗೆ ನಾ ಹೋಗಂಗಿಲ್ಲ. ಹೆಣ್ಣು ಹೆತ್ತವರ ಕಷ್ಟ ಈ ಜಾಸ್ತಿ ಸಂಬಳ ತೊಗೊಳರಿಗೆ ಅರ್ಥ ಆಗಂಗಿಲ್ಲ. ನಾ ಆವಾಗ ಕಲ್ಯಾಣಮಂಟಪ ಬಿಟ್ಟು ಹೋಗಿ ಬಿಡತಿದ್ದೆ. ನಿನ್ನ ಮುಖ ನೋಡಿ ಸುಮ್ಮನೆ ಕೂತಿದ್ದೆ ಅಪ್ಪ” ಅಂದ್ಲು. ಆಗ ಹುಡುಗಿಯ ಅಮ್ಮ ‘ಹಂಗೆಲ್ಲ ಮಾಡಬಾರದು… ಅವರು ಗಂಡಿನ ಕಡೆಯವರು, ಒಂದು ಮಾತ ಬರತದ, ಹೋಗತದ ಬಿಟ್ಟಬಿಡು’ ಅಂದ್ಲು. ಅದಕ್ಕ ಆ ಹುಡುಗಿ ‘ಹೆಂಗ ಬಿಡೋದು ಅಮ್ಮಾ…. ನೀವು ಪರದಾಡಿದ್ದನ್ನು ನಾನು ನೋಡಿದ್ದೀನಿ… ಇವರಿಗೆ ಅತ್ತೆ, ಮಾವನ ಮೇಲೆ ಗೌರವನೇ ಇಲ್ಲ, ಇನ್ನ ನನ್ನ ಚೆನ್ನಾಗಿ ನೋಡೋಕೋತ್ತಾರಾ ಇವರು?’… ಅಂತ ಕೇಳಿದ್ಲು.
ಅಷ್ಟೋತ್ತಿಗೆ ಹುಡುಗನ ತಂದೆ ನಮ್ಮದು ತಪ್ಪಾಯಿತು. ‘ಮಗನೆ, ನೀನು ನಿನ್ನ ತಂಗಿ ಮದುವೆ ಮಾಡೋವಾಗ ಕಷ್ಟ ಗೊತ್ತಾಗುತ್ತೆ, ಕ್ಷಮೆ ಕೇಳು’ ಅಂದ್ರು. ಅದಕ್ಕ ಆ ವರ- ವಧುವಿಗೆ ನನ್ನ ಕಣ್ಣು ತೆರೆಸಿದಿ. ನನ್ನ ಕ್ಷಮೆ ಮಾಡ್ರಿ ಅಂದ. ಆ ಮೇಲೆ ಎಲ್ಲ ಸುಲಲೀತ ಆತು. ವಧು ಗಂಡನ ಮನಿಗೆ ಹೋದ್ಲು. ಎಲ್ಲಾರೂ ನಿಟ್ಟುಸಿರುಬಿಟ್ರು.
- ರಾಘವೇಂದ್ರ ಅಪರಂಜಿ