ಮಾನಸ….ಇದು ಮನಸಿನ ಮಾತು (ಭಾಗ-೫೦)

ಆಕೃತಿಕನ್ನಡದ ‘ಮಾನಸ….ಇದು ಮನಸಿನ ಮಾತು’ ಅಂಕಣಕಾರ್ತಿ ಚಂಪಾ ಚಿನಿವಾರ್ ಅವರು ೫೦ ಸಂಚಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ, ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಾ ಈ ಅಂಕಣದಲ್ಲಿ ಅವರು ಬರೆದ ‘ಮಕ್ಕಳಲ್ಲಿ ಪ್ರೇಮಾಂಕುರ’ ಕುರಿತಾದ ಮನಸಿನ ಮಾತನ್ನು ತಪ್ಪದೆ ಮುಂದೆ ಓದಿ…

‘ಅವ್ಳು ಬಂದು ಬಂದು ಮೇಲ್ಬಿದ್ದು ಮಾತಾಡ್ತಾಳೆ, ನಂಗೆ ಅವ್ಳುನ್ನ ಕಂಡ್ರೆ ಆಗಲ್ಲ’….

‘ಯಾರೋ ನಿನ್ನ ಇಷ್ಟ ಪಡ್ತಿದಾಳಲ್ಲ ಅವಳಾ?’….

‘ಹು ಅಕ್ಕಾ, ನಂಗೆ ಇನ್ನೊಬ್ಬಳು ಇದಾಳೆ ಅವ್ಳಿಷ್ಟ’….

ಹೀಗೆ ಒಂದು ಹುಡುಗ ಹುಡುಗಿಯ ಸಂಭಾಷಣೆ ನಡೀತಿತ್ತು. ಅವರ ಮಾತು ಕಥೆ ನೋಡಿದರೆ, ಅಕ್ಕಾ ತಮ್ಮ ಇರಬಹುದು ಅಥವಾ ಮನೆಯ ಅಕ್ಕಪಕ್ಕದವರಿರಬಹುದು. ಹುಡುಗ ಆರನೆಯ ತರಗತಿ, ಹುಡುಗಿ ಒಂಭತ್ತನೇ ತರಗತಿ ಇದ್ದಿರಬಹುದು…ಶಟಲ್ ಕಾರ್ಕ್ ಆಡುತ್ತಿದ್ದರು.

ನನಗೆ ಇಷ್ಟು ಕಿವಿಗೆ ಬಿತ್ತು, ಅವರಿಬ್ಬರ ಮುಖ ಮುಖ ನೋಡಿದೆ, ಅವರಿಗೆ ಇಹ ಪರ ಜ್ಞಾನವೇ ಇರಲಿಲ್ಲ. ಮಕ್ಕಳಿಗೆ ಇಷ್ಟು ಚಿಕ್ಕ ವಯಸ್ಸಿಗೆ ಹೇಗೆ ಈ ರೀತಿ ಮನಸ್ಥಿತಿ ಬರುತ್ತೋ. ಆ ಹುಡುಗಿಯಾದರೂ ಹರೆಯಕ್ಕೆ ಕಾಲಿಟ್ಟಿದ್ದಾಳೆ, ಈ ವಯಸ್ಸು ಬೇರೆ ಕಡೆ ಗಮನ ಹರಿಸುತ್ತದೆ, ಮನಸು ಚಂಚಲಗೊಳಿಸುತ್ತದೆ ಎಂದೆಲ್ಲ ಅಂದುಕೊಳ್ಳಬಹುದು ಆದರೆ ಆರನೇ ತರಗತಿ ಓದುತ್ತಿರುವ ಹುಡುಗ ಹೀಗೆ ಮಾತನಾಡಿದ್ದು ಬಹಳ ಅಚ್ಚರಿ ಅನಿಸಿತು.

ಚಿಕ್ಕ ವಯಸ್ಸಿನ ಮಕ್ಕಳಿಗೆ ಏಕೆ ಈ ರೀತಿ ಅನಿಸಬಹುದು ಎಂದರೆ, ಮಾಧ್ಯಮಗಳ ಪ್ರಭಾವ, ಮನೆಯಲ್ಲಿ ಮಕ್ಕಳ ಮುಂದೆ ಅನುಚಿತವಾಗಿ ಮಾತನಾಡುವುದು, ಶಾಲೆಯಲ್ಲಿ ಸಹಪಾಠಿಗಳ ಪ್ರಭಾವ ಹೀಗೆ ಹಲವಾರು ಕಾರಣದಿಂದ ಇಂತಹ ಮನಸ್ಥಿತಿ ಹೊಂದಿರುತ್ತಾರೆ.

10-11 ವರ್ಷದ ಮಕ್ಕಳಿಗೆ ಪ್ರೀತಿ ಅಥವಾ ಪ್ರೇಮದ ಬಗ್ಗೆ ಆಲೋಚನೆಗಳು ಬರಲು ಹಲವು ಕಾರಣಗಳಿರಬಹುದು. ಈ ವಯಸ್ಸಿನಲ್ಲಿ ಮಕ್ಕಳಿಗೆ ಮಾನಸಿಕ ಮತ್ತು ಹಾರ್ಮೋನಲ್ ಬದಲಾವಣೆಗಳು ಆಗುತ್ತವೆ, ಮತ್ತು ಅವು ಅವರ ಭಾವನೆಗಳ ಮೇಲೆ ಪರಿಣಾಮ ಬೀರುತ್ತವೆ.

ಫೋಟೋಕೃಪೆ :ಅಂತರ್ಜಾಲ

ಪ್ರಮುಖ ಕಾರಣಗಳೆಂದರೆ:

  • ಮಾನಸಿಕ ಬೆಳವಣಿಗೆ : ಈ ಹಂತದಲ್ಲಿ ಮಕ್ಕಳು ತಮ್ಮ ಭಾವನೆಗಳನ್ನು ಹೆಚ್ಚು ತೀವ್ರವಾಗಿ ಅರಿತುಕೊಳ್ಳಲು ಪ್ರಾರಂಭಿಸುತ್ತಾರೆ. ಅವರು ಸ್ನೇಹ, ಆತ್ಮೀಯತೆ, ಮತ್ತು ಒಬ್ಬರ ಮೇಲೊಬ್ಬರು ಆಕರ್ಷಣೆಯಂತಹ ಭಾವನೆಗಳನ್ನು ಅನುಭವಿಸುತ್ತಾರೆ.
  • ಮಾಧ್ಯಮ ಪ್ರಭಾವ : ಟಿವಿ, ಸಾಮಾಜಿಕ ಮಾಧ್ಯಮ, ಚಲನಚಿತ್ರಗಳು, ಮತ್ತು ಪುಸ್ತಕಗಳಲ್ಲಿ ಪ್ರೇಮದ ವಿಷಯಗಳು ಹೆಚ್ಚು ಪ್ರಸಾರವಾಗುವುದರಿಂದ ಮಕ್ಕಳು ಕೂಡ ಅದನ್ನು ಮನಸಲ್ಲಿ ಇಟ್ಟುಕೊಳ್ಳಬಹುದು.
  • ಸ್ನೇಹ ಮತ್ತು ಸಂಬಂಧಗಳ ಪ್ರಭಾವ : ತಮ್ಮ ಸ್ನೇಹಿತರು ಪ್ರೇಮದ ಬಗ್ಗೆ ಮಾತನಾಡುವುದು ಅಥವಾ ಅನುಭವಿಸುವುದರಿಂದ ಅವರಿಗೂ ಈ ಭಾವನೆಗಳು ಮೂಡಬಹುದು.
  • ಹಾರ್ಮೋನಲ್ ಬದಲಾವಣೆಗಳು : ಈ ವಯಸ್ಸಿನಲ್ಲಿ ದೇಹದಲ್ಲಿ ಸಣ್ಣ ಮಟ್ಟಿನ ಹಾರ್ಮೋನಲ್ ಬದಲಾವಣೆಗಳು ಸಂಭವಿಸುತ್ತವೆ, ಇದರಿಂದ ಕೆಲವು ಹೊಸ ಭಾವನೆಗಳು ವ್ಯಕ್ತವಾಗಬಹುದು.
  • ಕುತೂಹಲ : ಪ್ರೇಮ ಮತ್ತು ಸಂಬಂಧಗಳ ಬಗ್ಗೆ ಒಂದು ಸಹಜ ಕುತೂಹಲ ಮಕ್ಕಳಿಗೆ ಇರುತ್ತದೆ, ಏಕೆಂದರೆ ಅದು ಒಂದು ಹೊಸ ಅನುಭವ ಆಗಿರುತ್ತದೆ.

ಗಂಡುಮಕ್ಕಳಲ್ಲಿ ಸಾಮಾನ್ಯವಾಗಿ ತಮ್ಮ ಸ್ನೇಹಿತೆಯರ ಸೌಂದರ್ಯ, ಸ್ವಭಾವ ಅಥವಾ ಪ್ರತಿಭೆಯನ್ನು ಮೆಚ್ಚಬಹುದು. ಆಕರ್ಷಣೆ ಎನ್ನುವುದು ಶಾರೀರಿಕ ಅಥವಾ ಭಾವನಾತ್ಮಕ ಅರ್ಥದಲ್ಲಿರದೆ, ವಯಸ್ಸಿನ ಪ್ರಕಾರ ವಾಸ್ತವಿಕತೆಯಿರಬಹುದು.

ಕೆಲವು ಮಕ್ಕಳು ದೊಡ್ಡವರ ಸಂಬಂಧಗಳನ್ನು ನೋಡಿ ಅಥವಾ ಸಿನಿಮಾ-ಟಿವಿಯಲ್ಲಿ ಪ್ರೇಮದ ಪ್ರಸ್ತಾಪವನ್ನು ನೋಡಿ, ಅವರು ಇದನ್ನು ಅರಿಯಲು ಆಸಕ್ತರಾಗಬಹುದು. ಸ್ನೇಹಿತರಿಂದ ಪ್ರೇಮದ ಬಗ್ಗೆ ಮಾತನಾಡುವುದರಿಂದ ಅಥವಾ ಅವರ ಅನುಭವಗಳನ್ನು ಕೇಳುವುದರಿಂದ ಕುತೂಹಲ ಉಂಟಾಗಬಹುದು. ಈ ವಯಸ್ಸಿನಲ್ಲಿ “ಪ್ರೇಮ” ಎಂದರೆ ಪ್ರೀತಿಯ ಹಾದಿಯಲ್ಲಿರುವ ನಿಜವಾದ ಭಾವನೆಗಳಿಗಿಂತ ಹೆಚ್ಚು ಸ್ನೇಹ ಮತ್ತು ಹೊಂದಾಣಿಕೆಯ ಸ್ವರೂಪದಲ್ಲಿರುತ್ತದೆ.

ಕೆಲವು ಗಂಡು ಮಕ್ಕಳು ಸ್ನೇಹಿತೆಯರೊಂದಿಗೆ ಹೆಚ್ಚು ಕಾಲ ಕಳೆದಾಗ ಆ ಸಂಬಂಧವನ್ನು ಪ್ರೀತಿಯಾಗಿದೆ ಎಂದು ಭಾವಿಸಬಹುದು. ಕೆಲವೊಮ್ಮೆ ಗಂಡು ಮಕ್ಕಳಿಗೆ ಅವರ ಭಾವನೆಗಳು ಅರ್ಥವಾಗದಿರಬಹುದು; ಒಮ್ಮೆ ಮೆಚ್ಚಿದಂತೆ, ಮತ್ತೊಮ್ಮೆ ಅದು ತಾತ್ಕಾಲಿಕತೆಯಂತೆ ಕಾಣಬಹುದು. ಹೊಸ ಭಾವನೆಗಳು ಅವರಿಗೆ ಹೆದರಿಕೆ ಅಥವಾ ಆಶ್ಚರ್ಯ ಉಂಟುಮಾಡಬಹುದು.
ಕೆಲವು ಗಂಡು ಮಕ್ಕಳು ಯಾರಾದರೂ ಒಂದು ಹುಡುಗಿಯನ್ನು ಮೆಚ್ಚುತ್ತಾರೆ ಎಂದು ತಿಳಿದರೆ, ತಮ್ಮದೇ ಆದ ಪ್ರೀತಿಯ ಭಾವನೆಗಳು ಬೆಳೆಯಬಹುದು.

ತಮ್ಮ ಸ್ನೇಹಿತರೆದುರು ದೊಡ್ಡವನಂತೆ ಕಾಣಲು ಅಥವಾ ನೋಡಿದ, ಕೇಳಿದ ಅನುಭವವನ್ನು ತೋರಿಸಲು ಪ್ರೀತಿಯ ಬಗ್ಗೆ ಮಾತನಾಡಬಹುದು. ಈ ಹಂತದಲ್ಲಿ ಮಕ್ಕಳು ಪ್ರೀತಿಯನ್ನು ಗಂಭೀರವಾಗಿ ಅನುಭವಿಸುವುದಕ್ಕಿಂತ, ಅದು ಕುತೂಹಲ ಅಥವಾ ಹೊಸ ಅನುಭವ ಹೊಂದಿರುತ್ತಾರೆ. ಪೋಷಕರು ಅಥವಾ ಗುರುಗಳು ಈ ಭಾವನೆಗಳ ಬಗ್ಗೆ ಮಕ್ಕಳೊಂದಿಗೆ ಸ್ಫಟಿಕ ಸ್ಪಷ್ಟತೆಯಿಂದ ಮಾತನಾಡಿ, ಪ್ರೀತಿ ಮತ್ತು ಸ್ನೇಹದ ನಡುವಿನ ವ್ಯತ್ಯಾಸವನ್ನು ತಿಳಿಸಲು ಸಹಾಯ ಮಾಡುವುದು ಒಳ್ಳೆಯದು.

ಫೋಟೋಕೃಪೆ :ಅಂತರ್ಜಾಲ

ಮಕ್ಕಳಿಗೆ ಪ್ರೀತಿಯ ಬಗ್ಗೆ ಸಮಾಲೋಚನೆ ಮಾಡಲು ಅವರಿಗೆ ಅರ್ಥವಾಗುವ ಹಾಗೆ, ಅವರ ಭಾವನೆಗಳನ್ನು ಗೌರವಿಸಿ ಮತ್ತು ಸ್ನೇಹಭರಿತವಾಗಿ ಮಾತನಾಡುವುದು ಮುಖ್ಯ. ಇದನ್ನು ಹೇಗೆ ಸಮರ್ಪಕವಾಗಿ ಮಾಡಬಹುದು ಎಂಬುದಕ್ಕೆ ಇಲ್ಲಿವೆ ಕೆಲವು ಸಲಹೆಗಳು:

ಮಕ್ಕಳಿಗೆ ಮಾತನಾಡಲು ಅವಕಾಶ ನೀಡಬೇಕು  : ಅವರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅವರಿಗೆ ನಂಬಿಕೆ ಬರುವ ಹಾಗೆ ವರ್ತಿಸಬೇಕು. ಅವರು ಏನೇ ಹೇಳಿದರೂ, ಕೇಳುವ ತಾಳ್ಮೆ ಇರಬೇಕು, ತಪ್ಪು ಸರಿ ಎಂದು ನಿರ್ಧಾರಿಸಿ ಹೇಳಬಾರದು. ತಪ್ಪು ಎಂದರೆ ಇದರಿಂದ ಅವರು ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳದೇ ಇರಬಹುದು.

ಆಕರ್ಷಣೆ ಮತ್ತು ತಾತ್ಕಾಲಿಕ ಭಾವನೆಗಳ ಬಗ್ಗೆ ಮಾತನಾಡಬೇಕು : ಕೆಲವೊಮ್ಮೆ ಈ ವಯಸ್ಸಿನಲ್ಲಿ ಬರುವ ಪ್ರೀತಿಯ ಭಾವನೆ ತಾತ್ಕಾಲಿಕವಾಗಿರುವುದು ಎಂದು ತಿಳಿಸಬೇಕು. ಟಿವಿ, ಸಿನೆಮಾ, ಮತ್ತು ಸಾಮಾಜಿಕ ಮಾಧ್ಯಮವು ಪ್ರೀತಿಯನ್ನು ಅತಿಶಯೋಕ್ತಿಯಾಗಿ ತೋರಿಸುತ್ತವೆ ಇದರಿಂದ ಪ್ರಭಾವಗೊಳ್ಳುತ್ತಾರೆ. ಪ್ರೀತಿಯು ಕೇವಲ ಆಕರ್ಷಣೆ ಅಥವಾ ಆಸಕ್ತಿಯಲ್ಲ, ಅದು ಬದ್ಧತೆ, ಗೌರವ, ಮತ್ತು ನಂಬಿಕೆಯೊಂದಿಗೆ ಬರುವುದು ಎಂದು ತಿಳಿಸಬೇಕು. ಜೊತೆಗೆ ಹೊಣೆಗಾರಿಕೆಯೊಂದಿಗೂ ಕೂಡಿದೆಯೆಂಬುದನ್ನು ಸರಳ ಉದಾಹರಣೆಯೊಂದಿಗೆ ವಿವರಿಸಬೇಕು. ಮಕ್ಕಳಿಗೆ ತಮ್ಮ ಭಾವನೆಗಳು ಸಹಜವಾಗಿವೆ ಎಂದು ತಿಳಿಸಬೇಕು ಆದರೆ ಅದಕ್ಕೆ ಬಹಳ ಸಮಯವಿದೆ, ಓದಿನಲ್ಲಿ ಆಸಕ್ತಿ ತೋರಿಸಬೇಕು ಎಂದು ಓದಿನ ಮಹತ್ವ ತಿಳಿಸಿ ಹೇಳಬೇಕು.

ಕಥೆಗಳು, ಅನುಭವಗಳು, ಅಥವಾ ಸನ್ನಿವೇಶಗಳನ್ನು ಬಳಸಿಕೊಂಡು ಅವರಿಗೆ ವಿವರಿಸಲು ಪ್ರಯತ್ನಿಸಬೇಕು. “ಒಬ್ಬ ಉತ್ತಮ ಸ್ನೇಹಿತ ಅಥವಾ ಸಹಪಾಠಿ ಹೇಗಿರಬೇಕು?” ಎಂಬ ಪ್ರಶ್ನೆ ಕೇಳಿ, ಅವರು ಸ್ವತಃ ಉತ್ತರ ಹುಡುಕುವಂತೆ ಮಾಡಬೇಕು. ತಮ್ಮ ಭಾವನೆಗಳನ್ನು ಅರಿಯಲು ಮತ್ತು ನಿಯಂತ್ರಿಸಲು ತಿಳಿಸಬೇಕು.

ಗೌರವ ಮತ್ತು ಪರಸ್ಪರ ನಂಬಿಕೆ : ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸುವ ಮಹತ್ವವನ್ನು ತೋರಿಸುವಂತೆ ತಿಳಿಸಬೇಕು. ಎಲ್ಲವನ್ನೂ ಒಮ್ಮೆ ಹೇಳಬಾರದು, ಮಕ್ಕಳಿಗೆ ಅವರ ಪ್ರಶ್ನೆಗಳ ಅನುಸಾರ ಮಾಹಿತಿ ನೀಡಬೇಕು.

ಮಕ್ಕಳ ಕುತೂಹಲಕ್ಕೆ ತಕ್ಕಂತೆ, ಸರಳ ಮತ್ತು ವಿವರವಾದ ಉತ್ತರಗಳನ್ನು ನೀಡುವುದು ಉತ್ತಮ. ಮಕ್ಕಳಿಗೆ ಪ್ರೀತಿಯ ಬಗ್ಗೆ ಸಮಾಲೋಚನೆ ಮಾಡುವುದು ಅವರ ಭಾವನೆಗಳಿಗೆ ಗೌರವ ನೀಡುವ ರೀತಿಯಲ್ಲಿ, ಅವರಿಗೇ ಅರ್ಥವಾಗುವ ಸನ್ನಿವೇಶಗಳ ಮೂಲಕ, ಮತ್ತು ಸ್ವತಃ ಅವರು ಪ್ರಶ್ನೆಗಳನ್ನು ಕೇಳಲು ಪ್ರೋತ್ಸಾಹಿಸುವ ಮೂಲಕ ಮಾಡಬಹುದು. ಮುಖ್ಯವಾಗಿ, ಅವರ ಭಾವನೆಗಳನ್ನು ನಿರಾಕರಿಸದೇ, ಸಮರ್ಥನೀಯ ಮತ್ತು ಸಧ್ಯದ ಮನಸ್ಥಿತಿಯಿಂದ ಅವರನ್ನು ಹೊರತರುವುದು ಉತ್ತಮ.

ಫೋಟೋಕೃಪೆ :ಅಂತರ್ಜಾಲ

ಪೋಷಕರಿಗೆ ಕಿವಿಮಾತು :

ಈ ವಯಸ್ಸಿನ ಮಕ್ಕಳಿಗೆ ಪ್ರೀತಿ, ಮೆಚ್ಚುಗೆಯಂತಹ ಭಾವನೆಗಳು ಸಹಜ. ಇದನ್ನು ಬೈದು, ಹೊಡೆದು, ಶಿಕ್ಷಸುವ ಬದಲು, ಸಹಜವಾಗಿ ಅರ್ಥೈಸಬೇಕು. “ನೀನು ಇಷ್ಟು ಚಿಕ್ಕವನು/ಚಿಕ್ಕವಳಾ, ಇಂಥದು ಬೇಕಾ ನಿನಗೆ, ನಾಚಿಕೆ ಆಗಲ್ವ” ಎಂದು ಅನ್ನುವುದು ಬೇಡ.

ವಿಶ್ವಾಸಪೂರ್ಣ ಸಂಬಂಧ ಬೆಳೆಸಬೇಕು

ಮಕ್ಕಳು ತಮ್ಮ ಭಾವನೆಗಳನ್ನು ಹೇಳಲು ಹೆದರದಂತೆ, ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡುವ ಪರಿಸರವನ್ನು ನಿರ್ಮಿಸಬೇಕು. ಅವರಿಗೆ ಕೇಳಲು, ಅರ್ಥೈಸಲು ಮತ್ತು ಸಮರ್ಥಿಸಲು ಪ್ರಾಮುಖ್ಯತೆ ನೀಡಬೇಕು.

ಮಕ್ಕಳ ಮೇಲೆ ಕಠಿಣ ನಿಯಮ ಹಾಕಿ, ಆವಶ್ಯಕತೆ ಇಲ್ಲದಂತೆ ಕಳವಳ ಪಡುವ ಬದಲು, ಮಾರ್ಗದರ್ಶನ ನೀಡಬೇಕು. ಅವರು ಯಾರನ್ನು ಮೆಚ್ಚುತ್ತಾರೆ, ಏಕೆ ಮೆಚ್ಚುತ್ತಾರೆ ಎಂಬುದನ್ನು ಅರಿತುಕೊಳ್ಳಲು ಪ್ರಯತ್ನ ಪಡಬೇಕು.

ಮಕ್ಕಳು ಯಾವ ಟಿವಿ ಶೋ, ಯೂಟ್ಯೂಬ್ ಚಾನೆಲ್, ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ ಎಂಬುದನ್ನು ಗಮನಿಸಬೇಕು.

ಅವರ ಮನಸ್ಸಿನಲ್ಲಿ ಅನಾವಶ್ಯಕ ಕಲ್ಪನೆಗಳು ಮೂಡದಂತೆ, ಅವರಿಗೇನು ಸೂಕ್ತ, ಏನು ಅನಾವಶ್ಯಕ ಎಂಬುದನ್ನು ಪ್ರೀತಿ, ಸ್ನೇಹ ಮತ್ತು ಜೀವನದ ನೈಜತೆಯ ಪರಿಧಿಯಲ್ಲಿ ವಿವರಿಸಬೇಕು.

ಭಾವನೆಗಳು ತಾತ್ಕಾಲಿಕವಾಗಿರಬಹುದು, ಆದರೆ ಒಳ್ಳೆಯ ಸ್ನೇಹ ಮತ್ತು ಪರಸ್ಪರ ಗೌರವ ಮಹತ್ವದ್ದು ಎಂಬುದನ್ನು ಮನವರಿಕೆ ಮಾಡಿಸಬೇಕು.

ಕಿರುಚಾಟ, ಗದರಿಕೆ, ಅಥವಾ ತಿರಸ್ಕಾರದಿಂದ ಅವರ ಮನಸ್ಸನ್ನು ಚುಚ್ಚುವಂತೆ ಮಾಡುವ ಬದಲು, ಅವರಿಗೆ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಬೇಕು.
ಈ ರೀತಿಯ ಭಾವನೆ ನಿಮ್ಮಲ್ಲಿ ಆಗುತ್ತಿರುವ ಬದಲಾವಣೆಗಳು ಕಾರಣ ಎಂದು ಹೇಳಬೇಕು. ಹಾರ್ಮೋನ್ ಗಳ ಪ್ರಕ್ರಿಯೆಯಿಂದ ಮಾನಸಿಕವಾಗಿ, ದೈಹಿಕವಾಗಿ ಅನೇಕ ಬದಲಾವಣೆಗಳು ಆಗುತ್ತದೆ, ಈ ರೀತಿ ಸಹಜ ಆದರೆ ಓದುವುದರ ಬಗ್ಗೆ ಗಮನ ಕೊಡಬೇಕು, ದೊಡ್ಡವನಾಗಿ ಕೆಲಸಕ್ಕೆ ಹೋಗುವ ಸಮಯದಲ್ಲಿ ನೀನು ಸ್ವತಂತ್ರನಾಗಿರುತ್ತೀಯ ಆ ಸಮಯದಲ್ಲಿ ನಿನ್ನ ನಿರ್ಧಾರಗಳು ಸರಿ ಇರುತ್ತದೆ ಎಂದು ತಿಳಿ ಹೇಳಬೇಕು.

ಮಕ್ಕಳ ಭಾವನೆಗಳಿಗೆ ಗೌರವ ನೀಡುವುದು, ಅವರೊಂದಿಗೆ ಮುಕ್ತ ಸಂಭಾಷಣೆ ನಡೆಸುವುದು, ಆಕರ್ಷಣೆ ಮತ್ತು ನೈಜ ಪ್ರೀತಿಯ ನಡುವಿನ ವ್ಯತ್ಯಾಸವನ್ನು ವಿವರಿಸುವುದು, ಮತ್ತು ಪ್ರೀತಿ ಎದುರಾದಾಗ ಆತ್ಮಗೌರವವನ್ನು ಕಾಪಾಡಿಕೊಳ್ಳುವ ಬಗೆ ಕುರಿತು ಸೌಮ್ಯವಾಗಿ ಮಾರ್ಗದರ್ಶನ ನೀಡುವುದು ಪೋಷಕರ ಮಹತ್ವದ ಪಾತ್ರ.

ಈ ಹಂತದಲ್ಲಿ ಮಕ್ಕಳಿಗೆ ಪ್ರೀತಿಯ ಅರ್ಥ ಮತ್ತು ಅದರ ಗಂಭೀರತೆಯನ್ನು ತಿಳಿಸಲು, ಹಾಗೂ ಸಂಬಂಧಗಳು ಏನನ್ನು ಹೊಂದಿರಬೇಕು ಎಂಬುದನ್ನು ಸೂಕ್ಷ್ಮವಾಗಿ ವಿವರಿಸುವುದು ಬಹಳ ಮುಖ್ಯ. ಮಕ್ಕಳಿಗೆ ಸಂತೋಷಕರ ಮತ್ತು ಸಮತೋಲನಯುಕ್ತ ಭಾವನಾತ್ಮಕ ಬೆಳವಣಿಗೆಯ ಅವಕಾಶ ಒದಗಿಸುವುದು ಒಳ್ಳೆಯದು.


  • ಚಂಪಾ ಚಿನಿವಾರ್ –  ಆಪ್ತಸಮಾಲೋಚಕಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW