‘ಮೋಹನ್‌ದಾಸ್ ಒಂದು ಸತ್ಯಕಥೆ’ ಯು ಗಾಂಧಿಯನ್ನು ಅರಿಯಲು ಅತ್ಯುತ್ತಮ ಮಾರ್ಗದರ್ಶಿ ಪುಸ್ತಕವಾಗಿದ್ದು, ಇದನ್ನು ಕನ್ನಡಕ್ಕೆ ಅನುವಾದಿಸಿದವರು ಜಿ ಎನ್ ರಂಗನಾಥ ರಾವ್ ಹಾಗು ಮೂಲ ಕೃತಿಯನ್ನು ಗಾಂಧಿಯವರ ಮೊಮ್ಮಗ ರಾಜ್ ಮೋಹನ್ ಗಾಂಧಿ ಅವರು ಬರೆದಿದ್ದಾರೆ. ಈ ಪುಸ್ತಕ ಪರಿಚಯವನ್ನು ಮೋಹನ್ ಕುಮಾರ್ ಡಿ ಎನ್ ಅವರು ಓದುಗರ ಮುಂದಿಟ್ಟಿದ್ದಾರೆ, ಮುಂದೆ ಓದಿ…
ಪುಸ್ತಕ : ಮೋಹನ್‌ದಾಸ್ ಒಂದು ಸತ್ಯಕಥೆ
ಮೂಲ: ರಾಜ್ ಮೋಹನ್ ಗಾಂಧಿ
ಕನ್ನಡ ಅನುವಾದಕರು : ಜಿ ಎನ್ ರಂಗನಾಥ ರಾವ್
ಪುಟಗಳು : 952,
ಬೆಲೆ : 775/-
ಪ್ರಕಾಶಕರುಲೋಕ ಶಿಕ್ಷಣ ಟ್ರಸ್ಟ್ ಗ್ರಂಥಮಾಲೆ
ಗಾಂಧಿಯವರ ಮೊಮ್ಮಗ, ನಾಲ್ಕನೆಯ ಮಗ ದೇವದಾಸನ ಮಗನಾದ ರಾಜ್ ಮೋಹನ್ ಗಾಂಧಿ ತನ್ನ ತಾತನ ಕುರಿತು ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ:
ಇದು ‘ನಿಜವಾದ’ ಗಾಂಧಿಯನ್ನು ಗುರುತಿಸುವ ಪ್ರಯತ್ನವೂ ಹೌದು, ಅವರ ಬಗೆಗಿನ ಸತ್ಯವನ್ನು ತಿಳಿಸುವ ಪ್ರಯತ್ನವೂ ಹೌದು. ಒಂದು ಜನಪ್ರಿಯ ರೂಪಕವಾಗಿದ್ದರೂ ಅವರ ಎಪ್ಪತ್ತು ವರ್ಷಗಳ ನಿಧನಾ ನಂತರವೂ ಒಬ್ಬ ವ್ಯಕ್ತಿಯಾಗಿ ಗಾಂಧಿಯ ಬಗ್ಗೆ ಸ್ಪಷ್ಟವಾದ, ನಿಸ್ಸಂದಿಗ್ದವಾದ ಜ್ಞಾನ ತಿಳುವಳಿಕೆಗಳಿಲ್ಲ. ಅವರ ಮುಗ್ಧತೆ, ಅವರ ಜಾಣೆ-ಚಾತುರ್ಯಗಳು ಅಥವಾ ಅವರ ಧೈರ್ಯ ಛಾತಿವಂತಿಕೆಗಳು ಇನ್ನೂ ಲೋಕಕ್ಕೆ ತಿಳಿಯದು. ರೂಪಕಾಲಂಕಾರ ಗಾಂಧಿಯ ಸುತ್ತ ಹುತ್ತಗಟ್ಟಿತ್ತು. ನಿಜವಾದ ವ್ಯಕ್ತಿಯನ್ನು ಮರೆಮಾಚಿತ್ತು. ಅವರೊಂದು ರೂಪಕವಾಗಿಬಿಟ್ಟಿದ್ದರು. ಧೈರ್ಯಶೀಲರು, ನಿಸ್ವಾರ್ಥಿಗಳು, ದಮನ ಶೋಷಣೆಗಳ ಅಹಿಂಸಾತ್ಮಕ ವಿರೋಧಿ ವ್ಯಕ್ತಿಗಳು- ಹೀಗೆ ಈ ಎಲ್ಲ ಗುಣವಿಶೇಷಗಳನ್ನೂ ಹೊಂದಿರುವ ಯಾರನ್ನಾದರೂ ಗಾಂಧಿ ಎಂದು ಅಡ್ಡಹೆಸರಿಟ್ಟು ಕರೆದುಬಿಡಬಹುದು.
ಆದರೆ, ಒಬ್ಬ ಮನುಷ್ಯನಾಗಿ, ಮಾನವಜೀವಿಯಾಗಿ ಗಾಂಧಿ ಹೇಗಿದ್ದರು? ಅಪಾರವಾದ `ಕೀರ್ತಿ-ಪ್ರಸಿದ್ಧಿಗಳ ಮಧ್ಯೆಯೂ ಒಬ್ಬ ವ್ಯಕ್ತಿಯಾಗಿ ಮೋಹನದಾಸ್ ಗಾಂಧಿ ಇನ್ನೂ ಅಗಮ್ಯ. ಮೋಹನದಾಸ್ ಗಾಂಧಿಯನ್ನು ಒಬ್ಬ ಸಾಮಾನ್ಯ ಜೀವಿಯಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಾಗಿಲ್ಲ. ಬಹುಶಃ ಅವರ ಕೀರ್ತಿ, ಪ್ರಸಿದ್ಧಿಗಳೂ ಇದಕ್ಕೆ ಕಾರಣವಿರಬಹುದು. ಅವರನ್ನು ನಾವು ಬಲ್ಲೆವು ಎಂದು ಭಾರತದಲ್ಲಿ ನಮ್ಮ ಭಾವನೆ. ಅವರಿಗಿಂತ ಹೆಚ್ಚು ಚಿರಪರಿಚಿತವಾದ ಇನ್ನೊಂದು ಮುಖ ಇಲ್ಲ. ಕರೆನ್ಸಿ ನೋಟುಗಳೊಳಗಿಂದ, ಅಂಚೆಚೀಟಿಗಳೊಳಗಿಂದ, ಜಾಹೀರಾತು ಫಲಕಗಳೊಳಗಿಂದ ಅವರು ನಮ್ಮತ್ತ ಇಣುಕು ನೋಟ ಬೀರುತ್ತಾರೆ. ಅವರ ಕನ್ನಡಕವನ್ನು, ಬೊಕ್ಕತಲೆಯನ್ನು, ಅವರುಟ್ಟ ಮುಂಡು ತುಂಡು ದಟ್ಟಿಯನ್ನು, ಜೇಬುಗಡಿಯಾರವನ್ನು ರೇಖಿಸುವುದು ನಮ್ಮಿಂದ ಸಾಧ್ಯ ಎಂದು ನಮ್ಮ ಅನಿಸಿಕೆ.

(ಗಾಂಧಿಯವರ ಮೊಮ್ಮಗ, ನಾಲ್ಕನೆಯ ಮಗ ದೇವದಾಸನ ಮಗನಾದ ರಾಜ್ ಮೋಹನ್ ಗಾಂಧಿ ಹಾಗು ಅವರು ಬರೆದಂತಹ ಕೃತಿ)
ಶತಮಾನದ ಆತ್ಮಸಾಕ್ಷಿಯಾಗಿ, ಭಾರತವನ್ನು ಸ್ವಾತಂತ್ರ್ಯದ ಪಥದಲ್ಲಿ ಮುನ್ನಡೆಸಿದ ಈ ಪುಕ್ಕಲು ಹುಡುಗ, ಯಾರಿವನು? ಸತ್ಯಾಗ್ರಹದ ಆವಿಷ್ಕಾರಕ, ಪ್ರತಿಯೊಬ್ಬರ ಕಣ್ಣೀರನ್ನು ಒರೆಸುವ ಬಯಕೆ ಹೊತ್ತವನು, ಧಾರ್ಮಿಕ ಬಹುತ್ವ ಸಿದ್ಧಾಂತದ ಪ್ರವರ್ತಕ, ಆಧುನಿಕತೆಯ ಅಸಮ್ಮತಿಕಾರ ಇಷ್ಟೆಲ್ಲ ಆಗಿದ್ದ ಇವನು ತನ್ನ ದಿನನಿತ್ಯ ಜೀವನದಲ್ಲಿ ಹೇಗಿದ್ದ? ನಿಕಟ ಸಂಬಂಧ, ನೆಂಟಸ್ತಿಕೆಗಳಲ್ಲಿ ಹೇಗಿದ್ದ? ಮುಖಾಮುಖಿ ಸಂಘರ್ಷಗಳಲ್ಲಿ, ಸಾಮ್ರಾಜ್ಯದೊಡನೆ ಬಹಿರಂಗ ಸೆಣಸಾಟದಲ್ಲಿ. ದ್ವೇಷ-ಅಸೂಯೆಗಳಿಂದ ಹರಿದು ಹಂಚಿಹೋಗಿದ್ದ ತನ್ನ ಜನರ ಮಧ್ಯೆ, ತನ್ನ ಎದುರಾಳಿಗಳೊಂದಿಗೆ ಅವರು ಹೇಗಿದ್ದರು? ಹೇಗೆ ನಡೆದುಕೊಂಡಿದ್ದರು? ತಂದೆ-ತಾಯಿ, ಹೆಂಡತಿ-ಮಕ್ಕಳು ಇವರೊಂದಿಗೆ ಅವರ ಸಂಬಂಧ ಹೇಗಿತ್ತು? ಸಾಮಾನ್ಯವಾಗಿ ಮಹಿಳೆಯರ ಜೊತೆ, ಯುವ ಪ್ರಾಯದ ಸ್ತ್ರೀ ಒಡನಾಡಿಗಳ ಜೊತೆ, ರಾಜಕೀಯ ಸಹಕಾರ್ಯಕರ್ತರು ಮತ್ತು ರಾಜಕೀಯೇತರ ಸಹೋದ್ಯೋಗಿಗಳ ಜೊತೆ ಹೇಗಿದ್ದರು? ಈ ಸಂಬಂಧಗಳೆಲ್ಲ ಹೇಗಿದ್ದವು?
ಅವರೊಬ್ಬ ರಾಜಕಾರಣಿಯೇ ಅಥವಾ ಸಂತನೇ? ಇವೆರಡೂ ಆಗಿದ್ದಲ್ಲಿ ಇಬ್ಬರು ಗಾಂಧಿಗಳ ನಡುವೆ ಸಹಯೋಗ, ಸಂಯೋಜನೆಗಳು ಹೇಗೆ ಸಾಧ್ಯವಾಗಿದ್ದವು? ಯಾವ ಪ್ರಮಾಣದಲ್ಲಿ ಇದು ಸಾಧ್ಯವಾಗಿತ್ತು? ಅಥವಾ ದೂಷಕರು ಆರೋಪಿಸಿರುವಂತೆ, ವಿಭಜನೆಯನ್ನು ಒಪ್ಪಿಕೊಳ್ಳುವ ಬದಲು ತಾವು ಸಾಯಲು ಸಿದ್ಧ ಎಂದು ಕೈಗೊಂಡಿದ್ದ ಪ್ರತಿಜ್ಞೆಯ ಭಂಜಕರಾಗಿದ್ದರೆ? ಪ್ರತಿಜ್ಞಾ ವಚನಭ್ರಷ್ಟರಾಗಿದ್ದರೆ? ಅವರೊಬ್ಬ ಕಲ್ಲೆದೆಯ ಗಂಡನಾಗಿರಲಿಲ್ಲವೇ? ಕ್ರೂರಿ ತಂದೆಯಾಗಿರಲಿಲ್ಲವೇ? ಬ್ರಹ್ಮಚರ್ಯ ಪಾಲನೆಯ ಹೆಸರಿನಲ್ಲಿ ಅವರು ವಿಲಕ್ಷಣವಾದ-ವಿಚಿತ್ರವಾದ ಪ್ರಯೋಗಗಳನ್ನೆಲ್ಲ ಮಾಡಲಿಲ್ಲವೇ? ಅಥವಾ ಅಹಿಂಸೆಯ ಹೆಸರಿನಲ್ಲಿ ಭಾರತವನ್ನು ನಿರ್ವೀರ್ಯಗೊಳಿಸಿದರೇ? ಭಾರತದ ಶಕ್ತಿಗುಂದಿಸಿದರೇ? ಅಥವಾ ಅಧಿಕಾರಶಕ್ತಿ ಕೊಡದೇ ದಲಿತರಲ್ಲಿ ಹುಸಿ ಅನುಗ್ರಹ ತೋರಿದರೆ? ಗಾಂಧಿಯನ್ನು ಈ ಎಲ್ಲ ರೂಪಕಾಲಂಕಾರಗಳಿಂದ, ವರ್ಣನೆಗಳಿಂದ ಮುಕ್ತಗೊಳಿಸುವ ಪ್ರಯತ್ನ ಈ ಅಧ್ಯಯನವೇ ಈ ಪುಸ್ತಕ. ಅವರ ಜೀವನವನ್ನು ಸಂಪೂರ್ಣವಾಗಿ, ಕರಾರುವಾಕ್ಕಾಗಿ, ಪ್ರಾಮಾಣಿಕವಾಗಿ ಬಿಂಬಿಸುವುದು, ಅನಾವರಣಗೊಳಿಸುವುದು ಈ ಅಧ್ಯಯನದ ಉದ್ದೇಶ.
ಅನುವಾದಕ ಜಿ ಎನ್ ರಂಗನಾಥ ರಾವ್ ಅವರು ಗಾಂಧಿಯ ಕುರಿತಾದ ತಮ್ಮ ಅಭಿಪ್ರಾಯಗಳನ್ನು ಈ ಕೆಳಗಿನಂತೆ ವ್ಯಕ್ತಪಡಿಸುತ್ತಾರೆ:
ಇದು ಅನುವಾದವಲ್ಲ. ಇದೊಂದು ಒಡನಾಟ. ಬಲಾಬಲಗಳ ಮೇಲಾಟದಲ್ಲಿ, ವರ್ಣವೈಪರೀತ್ಯಗಳ ಅಹಂಕಾರದಲ್ಲಿ ಸತ್ಯಕ್ಕೆ ಕುರುಡಾಗಿದ್ದ ಜಗತ್ತಿಗೆ ಮಾನವನ ಘನತೆ ಗೌರವಗಳನ್ನು ಎತ್ತಿತೋರಿಸಿದ ಅದಮ್ಯ ಚೇತನ ಮೋಹನದಾಸ್ ಗಾಂಧಿಯವರನ್ನು ಕರಸ್ಥಳಕ್ಕೆ ತಂದುಕೊಂಡು ನಡೆಸಿದ ಒಂದು ಒಡನಾಟ, ಮಾನವಜನ್ಮ ದೊಡ್ಡದು ಎಂಬುದನ್ನು ಮತ್ತೊಮ್ಮೆ ಬೋಧಿಸಿ ಅದಕ್ಕೆ ಸ್ವಯಂ ಸಾಕ್ಷಿಪುರುಷರಾದ ಮೋಹನದಾಸರೊಂದಿಗೆ ಒಂದು ಒಡನಾಟ. ಮಹಾತ್ಮರೊಂದಿಗೆ ಒಂದು ಮುಖಾಮುಖಿ. ಮೋಹನದಾಸರೊಂದಿಗೆ ಸಂಚಲನಕಾರಿಯಾದ ಒಂದು ಸಂಚಾರ. ನಮ್ಮ ನಿಮ್ಮೆಲ್ಲರಂತೆ ಮಾನವ ಸಹಜವಾದ ಗುಣ ದೌರ್ಬಲ್ಯಗಳನ್ನೆಲ್ಲ ಹೊಂದಿದ್ದ ಮೋಹನದಾಸ್, ಸತ್ಯ-ಮಾನವ ಪ್ರೀತಿಗಳನ್ನು ಸಾಕ್ಷಾತ್ಕರಿಸಿಕೊಂಡು ತನ್ನ ಜೀವಮಾನದಲ್ಲೇ ಮಹಾತ್ಮನಾಗುವ ಪರಿ ಲೋಕದ ಒಂದು ಅದ್ಭುತವೇ ಸರಿ! ಇದು ವಿಸ್ಮಯವಷ್ಟೇ ಅಲ್ಲ, ವಿವೇಕದ ಬೆಳಕಿನ ಅನುಭವ.

ಹತ್ತತ್ತಿರ ಸಾವಿರ ಪುಟಗಳ ಪುಸ್ತಕದ ಬಗ್ಗೆ, ಅದರ ವ್ಯಾಪ್ತಿ ಮತ್ತು ವಿಸ್ತ್ರೀರ್ಣದ ಬಗ್ಗೆ ಬರೆಯುವಷ್ಟು ಪ್ರಬುದ್ಧತೆಯಾಗಲೀ, ಬುದ್ಧಿಮತ್ತೆಯಾಗಲೀ ನನಗಿಲ್ಲ. ಅದರಲ್ಲೂ ಗಾಂಧಿ ಎಂದರೆ ತಟಕ್ಕನೆ ಮೂಗು ಮುರಿಯುವವರ ನಡುವೆ ನಿಂತು ಗಾಂಧಿಯ ಬಗ್ಗೆ ಮಾತನಾಡಲು ಹೊರಟರೆ ಗಾಜಿನ ಮನೆಯಲ್ಲಿ ನಿಂತವನು ತನ್ನ ಮನೆಯತ್ತಲೇ ಕಲ್ಲು ಬಿಸುಟಿದಂತೆಯೇ. ಸ್ವಾತಂತ್ರ್ಯಕ್ಕಾಗಿ ಜೀವಿತವನ್ನು ಮುಡುಪಾಗಿರಿಸಿದ ಮಹಾತ್ಮನೊಬ್ಬನ ಬದುಕು ಹೀಗೆ ಕೆಲವೇ ಕೆಲವು ದಶಕಗಳು ಕಳೆಯುವಲ್ಲಿ ಇಂತಹ ದುಃಸ್ಥಿತಿಗೆ ಬಂದು ತಲುಪುವುದು ನಿಜಕ್ಕೂ ದೌರ್ಭಾಗ್ಯ. ಅವರನ್ನು ಅವರ ವಿಚಾರಧಾರೆಗಳ ಮೂಲಕ ಉಳಿಸಿಕೊಳ್ಳುವ, ಜತನದಿಂದ ಕಾಪಾಡಿಕೊಳ್ಳುವ, ಜಗತ್ತಿಗೆ ಮತ್ತಷ್ಟು ಪ್ರಚುರಪಡಿಸುವ, ಮುಂದಿನ ಜನಾಂಗಕ್ಕೆ ಅವರ ಬಗ್ಗೆ ತಿಳಿಯ ಹೇಳುವ ಅವಕಾಶವನ್ನು ನಾವು ಜಾತಿ ಧರ್ಮ ಮತ್ತು ರಾಜಕೀಯ ಸಿದ್ಧಾಂತಗಳಿಗೆ ಕಟ್ಟುಬಿದ್ದು ಈಗಾಗಲೇ ಕಳೆದುಕೊಂಡಿದ್ದೇವೆ.

ಬದುಕಲು ನಮಗೆ ಕೆಲವು ಮೂಲಭೂತ ಅವಶ್ಯಕತೆಗಳಿರುವಂತೆ ಬೌದ್ಧಿಕತೆಗೆ ಮತ್ತು ಮಾನಸಿಕ ವಿಕಸನಕ್ಕೆ ಗಾಂಧಿಯವರ ವಿಚಾರಧಾರೆಗಳು ಅತ್ಯವಶ್ಯವಾಗಿ ಬೇಕಿದೆ. ಗಾಂಧಿಯವರ ಚಿಂತನೆಗಳು, ಆದರ್ಶಗಳು ಇವನ್ನೆಲ್ಲ ನಾವು ಅನುಸರಿಸಬೇಕಿಲ್ಲ. ಅದು ನಮ್ಮಿಂದಾಗದ ಕೆಲಸ. ಆದರೆ ವಸ್ತುನಿಷ್ಠತೆಯಿಂದ ಸತ್ಯವನ್ನಾದರೂ ಅರಿಯುವ ಪ್ರಯತ್ನ ನನ್ನದು. ಹೀಗಾಗಿ ನನ್ನ ಸೀಮಿತ ಜ್ಞಾನದಲ್ಲಿ ಗಾಂಧಿಯನ್ನು ಕೇವಲ ಅರ್ಥಮಾಡಿಕೊಳ್ಳುವ ಕ್ರಿಯೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದೇನೆ. ಯುಗಪುರುಷನ ಜೀವಿತಗಾಥೆಯನ್ನು ಹಲವು ಆಯಾಮಗಳಲ್ಲಿ ನೋಡುವ, ಹಲವರ ದೃಷ್ಟಿಕೋನದ ಮೂಲಕ ಅರಿಯಲೆತ್ನಿಸುವ ಪ್ರಯತ್ನ ನನ್ನದು. ಆದಾಗ್ಯೂ, ಅಸೀಮ ವ್ಯಕ್ತಿತ್ವದ ರಾಷ್ಟ್ರಪಿತನನ್ನು ಈ ಬೃಹದ್ಗ್ರಂಥ ಓದಿದ ನಂತರವೂ ದಕ್ಕಿಸಿಕೊಂಡಿದ್ದೇನೆ ಎಂದರೆ ಕ್ಲೀಷೆಯೇ ಸರಿ. ಪ್ರತಿ ದೇಶದಲ್ಲೂ, ಶತಮಾನಕ್ಕೊಮ್ಮೆ ಶತಮಾನ ಪುರುಷ ಅವತಾರವೆತ್ತುತ್ತಾನೆ. ತನ್ನ ನಡೆ ನುಡಿಗಳಿಂದ, ವಿಚಾರಧಾರೆ ಮತ್ತು ಚಿಂತನೆಗಳಿಂದ ಅಲ್ಲಿನ ಮಂದಿಯನ್ನು ಪ್ರಚೋದಿಸುತ್ತಾನೆ. ಕೊನೆಗೆ ಆ ದೇಶದ ಇತಿಹಾಸದಲ್ಲಿ ಅವನ ಹೆಸರು ಚಿರಸ್ಥಾಯಿಯಾಗುತ್ತದೆ.
ಭೂಮಿ ಇರುವ ತನಕ ಆ ದೇಶದ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿತ್ಯಂತರಗಳ ಪ್ರತೀಕವಾಗಿರುತ್ತಾನೆ. ಗಾಂಧಿಗೆ ಆ ಭಾಗ್ಯವಿಲ್ಲದೇ ಇರಬಹುದು. ಆದರೆ ಅವರು ಕಾಲಾತೀತರು! ಯುದ್ಧಭೂಮಿಯಲ್ಲಿ ಮಳೆ ಹನಿದು ಹಸಿರು ಚಿಗುರುವಂತೆ, ಏನೆಲ್ಲಾ ಅಪಪ್ರಚಾರ, ಚಿಂತನೆಗಳ ತಿರಸ್ಕಾರಗಳ ನಡುವೆಯೂ ಗಾಂಧಿ ನಮ್ಮ ನಡುವೆ ಮತ್ತೊಮ್ಮೆ ಮಗದೊಮ್ಮೆ ಜನ್ಮವೆತ್ತುತ್ತಲೇ ಇರುತ್ತಾರೆ. ಹೀಗಾಗಿ ಗಾಂಧಿ ಶತಮಾನ ಪುರುಷನಲ್ಲ; ಯುಗಪುರುಷ. ಗಾಂಧಿಯವರ ಜೀವನ, ತತ್ವ ಮತ್ತು ಸಿದ್ಧಾಂತಗಳು ಒಂದೆರಡಲ್ಲ, ನೂರಾರು ಸಾವಿರಾರು. ಎಲ್ಲವನ್ನೂ ಕಾರ್ಯರೂಪಕ್ಕೆ ತರಲು, ಅನುಷ್ಠಾನಗೊಳಿಸಲು ಮತ್ತೊಬ್ಬ ಗಾಂಧಿಯೇ ಜನ್ಮವೆತ್ತಿ ಬಂದರೂ ಆಗದು. ಮುಖ್ಯವಾಗಿ ಇಂದಿನ ಯುವಜನಾಂಗಕ್ಕೆ ಸಿಗಬೇಕಾದ ಕ್ರಮಶಿಕ್ಷಣಗಳಲ್ಲಿ ಗಾಂಧಿಯ ಕುರಿತಾದ ನಿಜವಾದ ಮತ್ತು ನಿಷ್ಪಕ್ಷಪಾತ ತಿಳುವಳಿಕೆ ಕೂಡ ಪ್ರಾಮುಖ್ಯವಾದುದಾಗಿದೆ. ಆದರೆ ಪಂಥಗಳ ಗೊಡವೆಗೆ ಸಿಲುಕಿ ಯುವ ಮನಸ್ಸುಗಳಲ್ಲಿ ಗಾಂಧಿಯ ಬಗ್ಗೆ ಕಹಿಯನ್ನು ಪಸರಿಸಲಾಗುತ್ತಿದೆ. ಗಾಂಧಿಯನ್ನು ಅರಿಯದಿದ್ದರೂ ಆದೀತು; ಜರಿಯಬಾರದು. ಯುವ ಜನಾಂಗವನ್ನು ಅಸಮರ್ಪಕ ದಾರಿಗೆಳೆದರೆ ಅದರ ಪ್ರತಿಫಲವನ್ನು ನಾವೇ ಉಣ್ಣಬೇಕಾಗುತ್ತದೆ. ಕಾಲಚಕ್ರ ತನ್ನ ಗತಿ ಬದಲಿಸಿದಾಗ ಗಾಂಧಿಯ ಸ್ಥಾನದಲ್ಲಿ ನಾವು ನಿಂತಿರುತ್ತೇವೆ; ಒಬ್ಬ ಮಗನಾಗಿ, ಗಂಡನಾಗಿ, ತಂದೆಯಾಗಿ. What we sow we will reap; ನೆನಪಿರಲಿ.
ಗಾಂಧಿಯನ್ನು ಅರಿಯಲು ಇದೊಂದು ಅತ್ಯುತ್ತಮ ಮಾರ್ಗದರ್ಶಿ ಎಂದಷ್ಟೇ ಹೇಳಬಲ್ಲೆ. ಪುಸ್ತಕದ ಬಗ್ಗೆ ಹೇಳಬೇಕಾಗಿರುವುದನ್ನು ದೇವದಾಸ್ ಗಾಂಧಿಯವರ ಮಾತುಗಳಲ್ಲಿ ಮೇಲೆ ಹೇಳಲಾಗಿದೆ. ಅನುವಾದಕನ ನುಡಿಗಳನ್ನೂ ಸ್ಮರಿಸಲಾಗಿದೆ.
- ಮೋಹನ್ ಕುಮಾರ್ ಡಿ ಎನ್ (ಲೇಖಕರು, ಪುಸ್ತಕ ವಿಮರ್ಶಕರು)
