ಈ ಯುಗಾದಿ ಹಬ್ಬದ ಸಂಭ್ರಮ ಶುರುವಾಗುವುದೇ ಮಾವಿನ ಮರದಲಿನ ಚಿಗುರಿದ ಎಲೆಗಳಿಂದ, ಬೇವಿನ ಹೂವಿನಿಂದ ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಯುಗಾದಿ ಹಬ್ಬದ ಪ್ರಯುಕ್ತ ಸುಂದರ ಗೀತೆಯನ್ನು ರಚಿಸಿದ್ದಾರೆ, ಓದುಗರಿಗೆ ಮುದ ಕೊಡುವ ಸೊಗಸಾದ ಗೀತೆಯಿದು, ಮುಂದೆ ಓದಿ…
ಮಾವಿನ ಮರದಲಿ ಚಿಗುರಿದ ಎಲೆಗಳು
ಹಸಿರನು ಸೂಸುತ ಕರೆಯುತಿವೆ
ಬೇವಿನ ಮರದಲಿ ಅರಳಿದ ಹೂಗಳು
ಋತುವಿನ ಬಾಗಿಲು ತೆರೆಯುತಿದೆ
ಹೊಂಗೆಯ ನೆರಳಲಿ ಭೃಂಗದ ಬಳಗವು
ಝೇಂಕಾರ ನಾದವ ಸೂಸುತಿವೆ
ವಸಂತ ಕೇಳಿದ ಕೋಗಿಲೆ ನಾದವು
ತಂಗಾಳಿ ತಾನೇ ಬೀಸುತಿವೆ
ಪ್ರಕೃತಿ ಮಡಿಲಿದು ಸಗ್ಗಕು ಮಿಗಿಲಿದೆ
ಸೃಷ್ಟಿಯ ಆದಿಯ ನೆನೆಯುತಿದೆ
ಯುಗಗಳು ಕಳೆದರು ಯುಗಾದಿ ಮರಳಿದೆ
ನಿಸರ್ಗ ಸೊಬಗಲಿ ತೊನೆಯುತಿದೆ
ಬೇವಿಗು ಬೆಲ್ಲಕು ಎಲ್ಲಕು ನಂಟಿದೆ
ರೋಗವ ತಡೆಯವ ಶಕ್ತಿಯಿದೆ
ದೇವರೆ ನೀಡಿದ ಭಾಗ್ಯದ ಗಂಟಿದೆ
ಹಬ್ಬಕೆ ಭಕ್ತರ ಭಕ್ತಿಯಿದೆ
ಸಡಗರ ಕೂಡುತ ಎಲ್ಲೆಡೆ ಹಬ್ಬಿದೆ
ಎಣ್ಣೆಯ ಸ್ನಾನಕೆ ಶುದ್ದಿಯಿದೆ
ದನಕರು ಮೇಯುತ ಮನೆಕಡೆ ತೆರಳಲು
ಗೋಧೂಳಿ ಸಮಯದ ಭಾಗ್ಯವಿದೆ.
- ಚನ್ನಕೇಶವ ಜಿ ಲಾಳನಕಟ್ಟೆ.
