ಸಹಾಯ ಮಾಡಿದ್ದು ದೊಡ್ಡದೇ ಇರಬಹುದು ಅಥವಾ ಸಣ್ಣದೇ ಇರಬಹುದು, ಸಹಾಯ ಮಾಡಿದವರನ್ನುನೋಯಿಸಬೇಡಿ. ಬ್ಯಾಂಕ್ ನಲ್ಲಿ ಪೆನ್ನು ಕೇಳುವಾಗ ಇರುವ ಸೌಜನ್ಯ ವಾಪಸ್ ಕೊಡುವಾಗಲೂ ಹಾಗೆ ಇರಲಿ. ದಿನ ನಿತ್ಯ ಜೀವನದಲ್ಲಿ ಸಾಮಾನ್ಯವಾಗಿ ಮಾಡುವ ದೊಡ್ಡ ತಪ್ಪನ್ನು ತಿದ್ದುವ ಸಣ್ಣ ಪ್ರಯತ್ನವನ್ನು ಲೇಖಕರಾದ ಪ್ರೊ. ರೂಪೇಶ್ ಪುತ್ತೂರು ಅವರು ಈ ಸುಂದರ ಕತೆಯ ಮೂಲಕ ಹೇಳಿದ್ದಾರೆ. ಮುಂದೆ ಓದಿ…
ನನ್ನ ಮಿತ್ರ ಉಪನ್ಯಾಸಕರೊಬ್ಬರಿಗೆ ಬ್ಯಾಂಕಿನಲ್ಲಿ ಏನೋ ಕೆಲಸವಿತ್ತು. ಬಿಡುವು ಇದ್ದುದರಿಂದ ನನ್ನ ಜೊತೆಗೆ ಬರಲು ಕೇಳಿಕೊಂಡರು. ಅವರೊಂದಿಗೆ ಹೋದೆ. ಬ್ಯಾಂಕು ಎರಡನೇ ಮಹಡಿ , ಟ್ರಾಫಿಕ್ ಪೋಲಿಸರ ಕಾಟ ಇರಬಹುದೆಂದು ಬೈಕು ಪಕ್ಕದಲ್ಲೇ ನನಗೆ ಇರಲು ಹೇಳಿ ಅವರು ಮೆಟ್ಟಿಲು ಹತ್ತಿ, “ತಕ್ಷಣ ಬರುವೆ” ಎಂದು ಹೋದರು. ನಾನು ಅಲ್ಲೇ ನಿಂತು ಮೊಬೈಲನ್ನು ತುರಿಸತೊಡಗಿದೆ.
ಅಷ್ಟೊತ್ತಿಗೆ ಟ್ರಾಫಿಕ್ ಪೋಲಿಸನೊಬ್ಬ ಆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ, ಅವನಲ್ಲಿ ವಿಚಾರಿಸಿದಾಗ, ” ಸಾರ್ ಇವತ್ತು ಬೆಸ ಸಂಖ್ಯೆ ದಿನ. ಇಲ್ಲಿ ಪಾರ್ಕ್ ಮಾಡಬಹುದು ನಾವೇನು ಮಾಡಲ್ಲ” ಎಂದಾಗ ಖುಷಿಯಾಯಿತು.

ಫೋಟೋ ಕೃಪೆ : deccanherald
ಮುಕ್ಕಾಲು ಗಂಟೆಯಾದರೂ ಬ್ಯಾಂಕಿನಿಂದ ಬಾರದ ಅವರನ್ನು, ಹುಡುಕುತ್ತಾ ಮೆಟ್ಟಿಲು ಹತ್ತಿದೆ. ಬ್ಯಾಂಕಿನ ಮಹಡಿ ಹತ್ತಿರವಾಗುತ್ತಿದ್ದಂತೆ ವಾಗ್ಯುದ್ಧದ ಸದ್ದು ಸನಿಹವಾಗುತ್ತಿತ್ತು. ನೋಡಿದರೆ, ನಮ್ಮ ಮಿತ್ರರ ಜೊತೆ ಇನ್ನೊಬ್ಬ ಗ್ರಾಹಕ ಜಗಳವಾಡುತ್ತಿದ್ದ. ” ಸಾರ್…. ಯಾಕೆ … ಏನಾಯ್ತು?” ಎಂದು ವಿಚಾರಿಸಿದೆ..
” ನೋಡಿ ಸಾರ್… ನೀವು ನನಗಾಗಿ ಕೆಳಗೆ ಕಾಯುತ್ತಿದ್ದಿರಿ. ನಾನು ಐದೇ ನಿಮಿಷದಲ್ಲಿ ನನ್ನ ಕೆಲಸ ಮುಗಿಸಿ ಹೊರಟಿದ್ದೆ…ಈ ಮನುಷ್ಯ ನನ್ನಲ್ಲಿ ಪೆನ್ನು ಕೇಳಿದ. ಬೇಗ ಮರಳಿ ಕೊಡಿ ಎಂದು ಕೊಟ್ಟೆ. ಹತ್ತು ನಿಮಿಷ ಆಯ್ತು, ಇಪ್ಪತ್ತು ನಿಮಿಷವಾಯ್ತು… ನಾನು ಪೆನ್ನು ಕೊಡಿ ಎಂದೆ. ಎರಡೇ ನಿಮಿಷಾರೀ ಕೊಡ್ತೀನಿ ಎಂದು ಸಿಟ್ಟಿನಲ್ಲಿ ಉತ್ತರಿಸಿದ. ನಂತರ ನೋಡಿದರೆ, ನನ್ನ ಪೆನ್ನು ಬಾಯೊಳಗೆ ಹಾಕಿ, ಕಚ್ಚುತ್ತಾ ಏನೋ ಆಲೋಚನೆ ಮಾಡಿ ಕವಿತೆ ಬರೆಯುವಂತೆ ಬರೆಯುತ್ತಿದ್ದ ಸಾರ್, ನನಗೆ ಸಿಟ್ಟು ಬಂತು. ಆಗಾಗಲೇ ಅರ್ಧ ಗಂಟೆ ಆಗಿತ್ತು. ನಾ ಪುನಃ ಕೇಳಿದೆ, ಮಿಸ್ಟರ್ ನನಗೆ ಹೋಗಬೇಕು ಬೇರೆ ಯಾರಲ್ಲಾದರೂ ಪೆನ್ನು ಇಸ್ಕೊಂಡು ಬರೆಯಿರಿ ಅಂದ್ರೆ .. ನನ್ನ ಪೆನ್ನು ನೆಲಕ್ಕೆ ವೇಗವಾಗಿ ಎಸೆದು ಹೊಡೆದು ಹಾಕಿದ ನೋಡಿ….” ಎ೦ದು ತೋರಿದಾಗ, ಪೆನ್ನು ಹೊಡೆದು ಹಾಕಿದ ಗ್ರಾಹಕ ” ಈ ತರಹದ ಎಷ್ಟೆಷ್ಟು ಪೆನ್ನು ಬೇಕೋ?? ನಾ ತೆಗೆದು ಕೊಡುತ್ತೇನೆ. ಒಂದು ಪುಡುಗೋಸಿ ಪೆನ್ನಿಗೆ ರಂಪಾಟ ಮಾಡ್ತಾನೆ. ಹೋಗಲ್ಲೇ ನಾನೇನು ನಿನ್ನ ಡಾಶ್ ತೆಗೊಂಡಿದ್ನಾ ?” ಅಂದಿದ್ದೇ ತಡ ನಮ್ಮ ಸಾರ್ “ಮೈಂಡ್ ಯುವರ್ ಲಾಂಗ್ವೇಜ್” ಎಂದು ಕೈ ಎತ್ತುವಾಗ ನಾನು ಅವರನ್ನು ಹಿಡಿದು ಬದಿಗೆ ಕರೆದುಕೊಂಡು ಹೋದೆ.
ಬ್ಯಾಂಕ್ ಮ್ಯಾನೇಜರ್ ನೌಕರರು ಆ ಗ್ರಾಹಕನನ್ನು ಹಿಡಿದು ವಿರುದ್ಧ ದಿಕ್ಕಿನಲ್ಲಿ ನಡೆದರು. ನಾನು ಮಿತ್ರನನ್ನು ಅಲ್ಲಿಂದ ತುಂಬಾ ಸಮಾಧಾನಿಸಿ ಕರೆದುಕೊಂಡು ಹೋಗಲು ಕಷ್ಟ ಪಟ್ಟಿದ್ದು ಅಷ್ಟಿಷ್ಟಲ್ಲ.
ಅಂದ ಹಾಗೆ ನಾನೇನು ಬ್ಯಾಂಕ್ ನೌಕರನಲ್ಲ.
ಆದರೂ…
ನನ್ನ ಹಲವಾರು ಪೆನ್ನು ಬ್ಯಾಂಕಿನಲ್ಲೇ ಕಳೆದು ಹೋಗೋದು. ಯಾರಿಗೋ ಕೊಟ್ಟಿರ್ತೇನೆ, ನನಗೆ ಬ್ಯಾಂಕಿನಲ್ಲಿ ನನ್ನ ಕೆಲಸ ಆದ ತಕ್ಷಣ ಮರಳಿರುತ್ತೇನೆ. ಮರಳಿ ಇಸ್ಕೊಳ್ಳಲು ಮರೆತು ಬಂದಿರುತ್ತೇನೆ. ಅಲ್ಲಿಗೆ ಆ ಪೆನ್ನು ನನ್ನ ಬಿಟ್ಟು ಹೋದಂತೆ!!! ಕೆಲವೊಮ್ಮೆ ನಾನು ಬರೆದ ಕೂಡಲೇ ” ಎಸ್ಕ್ಯೂಸ್ ಮೀ ಪೆನ್ನ್ ಪ್ಲೀಸ್” ಎಂದವರ ಮುಖ ನೋಡದೆ , ಪೆನ್ನಿನ ಮುಚ್ಚಳ ನನ್ನ ಕೈಯಲ್ಲಿಟ್ಟು, ಪೆನ್ನು ಕೊಟ್ಟಿರುತ್ತೇನೆ. ಆ ಮಹಾಶಯ ಅದನ್ನೇ ಎತ್ಕೊಂಡು ಹೋಗ್ತಾನೆ ಇಲ್ಲವೇ ಇನ್ನೊಬ್ಬರಿಗೆ ದಾನ ಮಾಡಿಯೋ ಹೋಗಿರುತ್ತಾನೆ. ನಾನು ಪೆನ್ನಿನ ಮುಚ್ಚಳ(ಟಾಪ್) ಹಿಡ್ಕೊಂಡು, ಉಂಗುರ ಕಳೆದುಕೊಂಡು ದುಷ್ಯಂತನಿಗೆ ಬೆರಳು ಮಾತ್ರ ತೋರಿದ ಶಕುಂತಳೆ ತರಹ ಕಾದಲ್ಲೇ ಬಾಕಿ!!!!!
ಕೆಲವರಿಗೆ ಪೆನ್ನು ಇಟ್ಕೋಂಡಿರೋದು, ಅಂದ್ರೆ ಮಾರ್ಯಾದೆ ಹೋದಂತೆ.

ಫೋಟೋ ಕೃಪೆ : deccanherald
ನಾವು ಸಮಯ ಹೊಂದಾಣಿಕೆ ಮಾಡಿ ಬ್ಯಾಂಕಿಗೆ ಏನೋ ಕೆಲಸಕ್ಕೆ ಹೋಗಿರುತ್ತೇವೆ. ಬ್ಯಾಂಕಿನೊಳಗೆ ಕಾಲಿಟ್ಟ ಕೂಡಲೇ ಮೂಲೆಯಿಂದ ಅಪಸ್ವರ ಬರುತ್ತದೆ ” ಸಾರ್… ಒಂಚುರು ಪೆನ್ನು ಕೊಡ್ತೀರಾ?” ಅಲ್ಲಿ ಬ್ಯಾಂಕಿನವರು ಪೆನ್ನಿಗೆ ಕಟ್ಟಿದ ಹಗ್ಗ ನೇತಾಡುತ್ತಿರುತ್ತದೆ. ಪೆನ್ನು ಮಾಯ.!!!!!
ಪೆನ್ನು ಇದ್ದವನತ್ರ ಆಕ್ರಮಣಕಾರಕವಾಗಿ ಪೆನ್ನು ಕೇಳ್ತಾರೆ. ಪೆನ್ನು ಕೇಳೋದು ಅವರ ಜನ್ಮ ಸಿದ್ದ ಹಕ್ಕಿನಂತೆ ಕೇಳ್ತಾರೆ. ಕೊಡದೆ ಇದ್ದರೆ ಅವರ ಎಂಜಿಲು ತಿಂದ ಗುಲಾಮರಂತೆ ಬೈತಾರೆ ” ಪೆನ್ನು ಕೇಳಿದ್ದು ನಿಮ್ಮ ಆಸ್ತಿಯಲ್ಲಾ, ಅದಲ್ಲಾ, ಇದಲ್ಲಾ…..” ಎಂದು ಅಲ್ಲೋಲ ಕಲ್ಲೋಲ ಮಾಡುತ್ತಾರೆ.
ಲೇಟ್ ಆಗ್ತಿದೆ.. ಎಂದು ಮರಳಿ ಕೊಡಲು ಕೇಳಿದರೆ ದುರುಗುಟ್ಟಿ ನೋಡಿ ಎಸೆದು ಹೋಗುತ್ತಾರೆ. 1947 ಆಗಿದ್ದರೆ ಓಕೆ. ಆ ಸಮಯದಲ್ಲಿ ವಿದ್ಯೆ, ಪೆನ್ನು, ಬಟ್ಟೆ ಅಲಭ್ಯ. ವಿದ್ಯಾವಂತರಾದ ಮೇಲೆ ಕೈಯಲ್ಲಿ ಬಳಪ ಇರಬೇಕು.
ಅಕಸ್ಮಾತ್ ಮರೆತು ಬರುವವರನ್ನು , ಬರೆಯಲು ಬಾರದೆ ಇರುವವರನ್ನು ಹೊರತುಪಡಿಸೋಣ.
“ವಿದ್ಯಾವಂತ, ಲೇಖಕ ಹಾಗೂ ಒಬ್ಬ ಶಿಕ್ಷಕನ ಕೈನಲ್ಲಿ ಬಳಪ ಇಲ್ಲದಿದ್ದರೆ, ಅವನು ಉಪಯೋಗ ಶೂನ್ಯ – ಅನಾವಶ್ಯಕ ಮನುಷ್ಯ ” ಎಂದು ಬಿಎಂಶ್ರಿ ರವರು ಹೇಳಿದ ವಾಕ್ಯ ನೆನಪಾಯಿತು.
ನಿಮ್ಮವ ನಲ್ಲ
*ರೂಪು*
- ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)
