ಮೌನದೊಳಗಿನ ಮುಳ್ಳುಗಳು- ಕತೆ (ಭಾಗ ೧)

ಜಾನಕಿ ಮನೆಯ ಕೆಲಸ ಕಾರ್ಯಗಳನ್ನು ಮಾಡಬೇಕಾದ್ದೇನಿರಲಿಲ್ಲ. ಅವಳು ಹೀಗೆ ಅಡ್ಡ ಕೈ ಹಾಕುವುದು ಸೊಸೆಗೆ ಹಿಡಿಸುತ್ತಲೂ ಇರಲಿಲ್ಲ. ಜಾನಕಿಗೆ ಇಪ್ಪತ್ತೆಂಟು ಕಾಯಿಲೆ. ಒಂದಕ್ಕೆ ಔಷಧಿ ಮಾಡಿದರೆ ಮತ್ತೊಂದು, ಮತ್ತೊಂದಕ್ಕೆ ಮಾಡಿದರೆ ಇನ್ನೊಂದು. ಅವಳನ್ನು ನೋಡಿ ಮುದುಕ ಆಗಾಗ ಹಾಸ್ಯ ಮಾಡುತ್ತಿದ್ದುದಿತ್ತು.

ಅಬ್ಬರದ ಮಳೆ ಹೊಯ್ದು ಬಿಟ್ಟಂತೆ ಹೊರಗಿನ ಗಲಾಟೆ ತಣ್ಣಗಾಗಿತ್ತು. ಅರ್ಧ ರಾತ್ರಿ ಮೀರಿರಬೇಕು. ಜಗಳ, ವಾಗ್ವಾದ ಮಾಡಿ ದಣಿದ ಎಲ್ಲರೂ ಹಾಸಿಗೆ ಸೇರಿ ನಿದ್ದೆಯ ಜೊಂಪಿಗಿಳಿದಿರಬೇಕು. ಆದರೆ ಎಲ್ಲಾ ವಾಗ್ವಾದಗಳು ವೈಮನಸ್ಸಿನ ಮೂಲ ಕಾರಣವಾಗಿದ್ದ ರಾಮಣ್ಣನಿಗೆ ಇನ್ನೂ ನಿದ್ದೆ ಹತ್ತಿರಲಿಲ್ಲ. ಸದ್ಯಕ್ಕೆ ಹತ್ತುವ ಸೂಚನೆಯೂ ಇಲ್ಲ. ಮೊದಲಿನ ಕಾಲವಾಗಿದ್ದರೆ ಉಂಡು ಮಲಗಿದೊಡನೆ ಸಣ್ಣದೊಂದು ನಿದ್ದೆ ಹತ್ತುತ್ತಿತ್ತು. ನಡು ರಾತ್ರಿಯಲ್ಲೊಮ್ಮೆ ಎಚ್ಚರವಾಗಿ ಬಚ್ಚಲವರೆಗೆ ಹೋಗಿ ಬಂದು ಮತ್ತೆ ಮಲಗಿದರೆ ಬೆಳಗಿನ ಜಾವದವರೆಗೆ ನಿದ್ದೆ. ಅರೆ ಎಚ್ಚರ, ಕನವರಿಕೆಗಳ ಮಂಪರು ಸ್ಥಿತಿ. ಬದಿಯ ಮಂಚದ ಜಾನಕಿ  ಮುಲುಗುಡುತ್ತಾ ಹೊರಳಾಡಿದಾಗಲೊಮ್ಮೆ ಮಂಚ ಕಿರ್ ಗುಟ್ಟಿ, ಪೂರ್ತಿ ಎಚ್ಚರಿಕೆಯಾಗಿ “ಎಂತದೇ ? ” ಎಂದು ವಿಚಾರಿಸಿಕೊಂಡು “ಏನಿಲ್ಲ” ಎನ್ನುವ ಮಾಮೂಲು ಉತ್ತರ ಪಡೆದು, ಈ ಬದುಕೆಂಬುದು ಪುಸ್ತಕದ ಪುಟ ತಿರುವಿ ಹಾಕಿದ ಹಾಗೆ ಸರಸರ ಎಂದು ಹಾಳೆ ಮುಗುಚಿಕೊಳ್ಳುತ್ತಾ ಇದೀಗ ಕೊನೆಯ ಪುಟಕ್ಕೆ ಬಂದು ನಿಂತಿರುವ ಪರಿ ನೆನೆದರೆ  “ಎಷ್ಟು ಬೇಗ” ಎನ್ನುವ ಅಚ್ಚರಿಯೊಡನೆ ವಿಷಾದ.

ಜಾನಕಿಗೆ ಇಪ್ಪತ್ತೆಂಟು ಕಾಯಿಲೆ. ಒಂದಕ್ಕೆ ಔಷಧಿ ಮಾಡಿದರೆ ಮತ್ತೊಂದು, ಮತ್ತೊಂದಕ್ಕೆ ಮಾಡಿದರೆ ಇನ್ನೊಂದು. ಅವಳನ್ನು ನೋಡಿ ಮುದುಕ ಆಗಾಗ ಹಾಸ್ಯ ಮಾಡುತ್ತಿದ್ದುದಿತ್ತು. ಹಾಗೆಂದು ಅವನೇನೂ ಗಟ್ಟಿಯಲ್ಲ. ಒಂದು ಕಾಲದಲ್ಲಿ ಕಲ್ಲು ಹಿಂಡಿ ನೀರು ಬರಸುತ್ತಿದ್ದವ ಇವತ್ತು ಎರಡು ಹೆಜ್ಜೆ ನಡೆದರೆ ಉಬ್ಬುಸ ಬರುವಷ್ಟು ನಿತ್ರಾಣಿ. ಎಪ್ಪತ್ತು ಕಡಿಮೆ ವಯಸ್ಸೇನಲ್ಲ. ಆದರೂ , ಅವನಿಗೊಂದು ಜಂಭ. ವಯಸ್ಸಿನವಳಾದ ಹೆಂಡತಿಗಿಂತಾ ತಾನು ಗಟ್ಟಿಯಾಗಿದ್ದೇನೆ ಎನ್ನುವ ನಂಬಿಕೆ.

ಹೇಗಿದ್ದರೂ  ಕೆಲಸ ಕಾರ್ಯಗಳಲ್ಲಿ ಜಾನಕಿ ಗಂಡನಿಗಿಂತಾ ಎಷ್ಟೋ ವಾಸಿ. ನರಳುತ್ತಲೇ ಮನೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ಕೈ ಹಾಕುತ್ತಿದ್ದಳು. ಮೊದಲಿನಿಂದ ತಾವೇ ಕೈಯಾರೆ ಕೆಲಸ ಮಾಡಿದವರ ಹಣೆಬರಹವೇ ಇಷ್ಟು. ತಮಗೆ ಕೈಲಿ ಹರಿಯುವುದಿಲ್ಲ, ಬೇರೆಯವರು ಮಾಡಿದ್ದು ಹಿಡಿಸುವುದಿಲ್ಲ. ರಾಮಣ್ಣ ಮಾತ್ರ ಈ ವಿಷಯದಲ್ಲಿ ಸಂಪೂರ್ಣ ರಾಜಿ ಮಾಡಿಕೊಂಡು ಬಿಟ್ಟಿದ್ದ. ಬೀಗದ ಕೈ ಗೊಂಚಲಿನೊಡನೆ ಮನೆಯ ಸಮಸ್ತ ವ್ಯವಹಾರಗಳನ್ನು ಮಗನಿಗೊಪ್ಪಿಸಿ ನಿಶ್ಚಿಂತನಾಗಿದ್ದ. ದಿನದ ಬಹುಪಾಲು ಹೊತ್ತು ಮುಂಚೆ ಕಡೆಯ ಕುರ್ಚಿಯ ಮೇಲೆ ಕೈಯಲ್ಲೊಂದು ಪೇಪರ್ ಹಿಡಿದು ಶಾಲು ಹೊದ್ದು ಕುಳಿತುಬಿಟ್ಟರೆ ಕಳೆದು ಹೋಗುತ್ತಿತ್ತು . ಎಲ್ಲೋ ಎರಡು ತಲೆ, ನಾಲ್ಕು ಕಾಲಿನ ಮಗು ಹುಟ್ಟಿದ್ದು, ಇನ್ನೆಲ್ಲೋ ಅಪಘಾತವಾಗಿ ಹತ್ತಾರು ಜನ ಸತ್ತಿದ್ದು, ಮತ್ತೆಲ್ಲೋ ಭೂಮಿ ನಡುಗಿದ್ದು… ಮುಂತಾದ ಸ್ವಾರಸ್ಯಕರ ಸುದ್ದಿ ಪೇಪರಿನಲ್ಲಿ ಬಂದಿದ್ದರೆ ರಾಮಣ್ಣ ಜಾನಕಿಯನ್ನು ಕರೆದು ಓದಿ ಹೇಳುತ್ತಿದ್ದ.

Silence

ಫೋಟೋ ಕೃಪೆ : Silent Life

ಇಬ್ಬರೂ ಸುದ್ದಿಯ ರೋಚಕತೆಯನ್ನೋ, ಭೀಕರತೆಯನ್ನೋ ಒಟ್ಟಿಗೆ ಹಂಚಿಕೊಂಡು ಪರಸ್ಪರ ಭಾವಾಭಿವ್ಯಕ್ತಿಗಳಲ್ಲಿ ಭಾಗಿಯಾಗುತ್ತಿದ್ದರು. ಮುದುಕ ಏನೂ ಬಾಯ್ಬಿಡದೆ  ಮೌನವಾಗಿ ಪೇಪರು ತಿರುವಿ ಹಾಕುತ್ತಿದ್ದರೆ, ಮುದುಕಿ ತಾನಾಗಿ ಕೇಳುತ್ತಿದ್ದಳು. “ಇವತ್ತು ಪೇಪರಿನಲ್ಲಿ ವಿಶೇಷ ಏನಿಲ್ವಾ” ಎಂತ ಮಣ್ಣೂ ಇಲ್ಲ” ಎಂದು ಮುದುಕ ನಿರುತ್ಸಾಹದಿಂದ ಉತ್ತರಿಸಿದರೆ ಅವತ್ತಿನ ಸುದ್ದಿಯಲ್ಲಿ ಯಾವ ಕೊಲೆ, ಕಳವು, ದರೋಡೆ, ಅಪಘಾತಗಳೂ ಇಲ್ಲವೆಂದರ್ಥ. ಇಂತಾ ದಿನ ಮುದುಕಿಗೆ ಮೆಲಕು ಹಾಕಲು ಯಾವ ಗ್ರಾಸವೂ ಸಿಗದ ಹಾಗಾಗಿ ಬೇಜಾರೆನ್ನಿಸುತ್ತಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಮನೆಗೊಂದು ಟಿವಿ ಬಂದ ಮೇಲೆ ಬೆಂಗಳೂರಿನ ಕಾರ್ಯಕ್ರಮ ಆರಂಭವಾಗಿ ಮುಗಿಯುವವರೆಗೆ ಅದು ಎಂತದೇ ಕಾರ್ಯಕ್ರಮವಿರಲಿ, ರಾಮಣ್ಣ , ಜಾನಕಿ ಅದರ ಮುಂದೆ ಸ್ಥಾಪನೆಯಾಗಿ ಬಿಡುತ್ತಿದ್ದರು. “ಸತ್ಯನಾರಾಯಣ ಪೂಜಾಫಲ” , “ರಾಘವೇಂದ್ರ  ವೈಭವ’  ಮುಂತಾದ ಸಿನೆಮಾಗಳು ಪ್ರಸಾರವಾದ ದಿನ “ಅಂತೂ ಬಹಳ ದಿನದ ಮೇಲೆ ಒಂದು ಒಳ್ಳೆ ಸಿನಿಮಾ ಹಾಕಿದ್ರು. ಇನ್ನು ಹಿಂಗಿದ್ದು ಹಾಕೋಕೆ ಇನ್ನೆಷ್ಟು ದಿನ ಕಾಯಬೇಕೋ ? ” ಎಂದು ಜಾನಕಿ ಧನ್ಯತಾಭಾವದಿಂದ ಹೊಗಳುತ್ತಿದ್ದಳು. ಹೊಡೆದಾಟ, ಬಡಿದಾಟ, ಪ್ರೀತಿ, ಪ್ರೇಮ ಕಂಡರೆ ಜಾನಕಿ “ಇಶ್ಯೀ” ಎನ್ನುವ ಹಾಗಾಗುತ್ತಿದ್ದರೂ ನೋಡದೇ ಇರುತ್ತಿರಲಿಲ್ಲ. ಹೊತ್ತು ಕಳೆಯಬೇಕಲ್ಲಾ!.

ಜಾನಕಿ ಮನೆಯ  ಕೆಲಸ ಕಾರ್ಯಗಳನ್ನು ಮಾಡಬೇಕಾದ್ದೇನಿರಲಿಲ್ಲ. ಅವಳು ಹೀಗೆ ಅಡ್ಡ ಕೈ ಹಾಕುವುದು ಸೊಸೆಗೆ ಹಿಡಿಸುತ್ತಲೂ ಇರಲಿಲ್ಲ. ಗೋಬರ್  ಗ್ಯಾಸ್  ಮಾಡಿಸಿಕೊಂಡ ಹೊಸದರಲ್ಲಿ ಜಾನಕಿ ಹತ್ತಿಸಿದ ಗ್ಯಾಸ್ ಒಲೆಯನ್ನು “ಉಫ್ ….ಉಫ್ …” ಎಂದು ಊದಿ ಆರಿಸಲು ಹೋಗಿ ಅದನ್ನು ನೋಡಿದ ಸೊಸೆ ಜಾನಕಿಗೆ ತಾಕೀತು ಮಾಡಿಬಿಟ್ಟಿದ್ದಳು. “ಇನ್ನು ಇಂತದ್ದೆಲ್ಲಾ ನೀವು ಮುಟ್ಟೋಕೆ ಬರಬೇಡಿ ” ಹಿಂದಿನ ಹಾಗೆ ಗಂಟೆಗಟ್ಟಲೆ ಅರೆಯುವ ಕಲ್ಲಿನ ಮುಂದೆ ಕೂತು ಅರೆಯಬೇಕಾದ್ದಿರಲಿಲ್ಲ. ಕೊಡಗಟ್ಟಲೆ ನೀರು ಸೇದಬೇಕಾದ್ದಿರಲಿಲ್ಲ. ಒಲೆ ಊದಬೇಕಾದ್ದಿರಲಿಲ್ಲ.

ಇಷ್ಟೆಲ್ಲಾ ಇದ್ದರೂ ಸೊಸೆ ಕೆಲಸ ಹೆಚ್ಚಾಯ್ತೆಂದು ಸಿಡಿಗುಟ್ಟುತ್ತಿದ್ದಳು. ಹೊರಗಿನ ಕೆಲಸಕ್ಕೆ ಆಳು ಇಟ್ಟುಕೊಂಡಿದ್ದಳು . ಅವಳ ವಯಸ್ಸಿನಲ್ಲಿ ತಾನು ಇದರ ಹತ್ತು ಪಟ್ಟು ಹೆಚ್ಚು ಕೆಲಸ ಮಾಡುತ್ತಿದ್ದುದರ ಬಗ್ಗೆ ಜಾನಕಿ ಗಂಡನೊಡನೆ ನೆನಪಿಸಿಕೊಳ್ಳುತ್ತಿದ್ದಳು. ಅದರಲ್ಲಿ ಅತಿಶಯೋಕ್ತಿಯೂ ಇರಲಿಲ್ಲ. ನಿಜವಾಗಿ ನೋಡಿದರೆ ಈ ಮನೆ ಇವತ್ತು ಈ ಮಟ್ಟಕ್ಕೆ ಬರಲು ಕಾರಣ ತನ್ನ ಹೆಂಡತಿಯ ಬಿಡುವಿಲ್ಲದ ದುಡಿಮೆ ಎಂದು ಇವತ್ತಿಗೂ ರಾಮಣ್ಣ ಅಭಿಮಾನದಿಂದ ನೆನಪಿಸಿಕೊಳ್ಳುತ್ತಾನೆ.

ಇವರ ಪಾಲಿಗೆ ಬಂದದ್ದು ಯಾತಕ್ಕೂ ಬೇಡದ ಹಾಳು ಜಮೀನು. ಅಣ್ಣ  ಕುತಂತ್ರ  ಒಳಗೊಳಗೇ ಮಾಡುವಷ್ಟು ಗಂಟು ಮಾಡಿಕೊಂಡ. ಆಮೇಲೆ ತಮ್ಮನನ್ನು ಹಗೂರಕ್ಕೆ ಹೊರಗೆ ಹಾಕಿದ. ಇಂವ ಆಡುವಂತಿಲ್ಲದೆ, ಆಡಿದರೂ ಅದರಿಂದ ಪ್ರಯೋಜನವಾದೀತೆಂಬ ನಂಬಿಕೆ ಇಲ್ಲದೆ , ಪಾಲಿಗೆ ಬಂದದ್ದು ಪಂಚಾಮೃತವೆಂದು ಸ್ವೀಕರಿಸಿದ. ಗಂಡ , ಹೆಂಡತಿ ತಮ್ಮ ಆಯಸ್ಸು, ಆರೋಗ್ಯ ಎಲ್ಲಾ ಪಣಕ್ಕಿಟ್ಟು ಹೊತ್ತುಗೊತ್ತಿನ ಪರಿವೆ ಇಲ್ಲದೆ ದುಡಿದರು. ಭೂಮಿತಾಯಿ ಕೈ ಬಿಡಲಿಲ್ಲ. ಹಚ್ಚಿದ ಎಳೆ ಅಡಿಕೆ ಸಸಿಗಳು ಬೆಳೆದು ಫಲ ಕೊಡುವಂತಾದಾಗ ಇವರೂ ಒಂದು ಕುಳ ಎನ್ನಿಸಿಕೊಂಡರು. ಈ ನಡುವೆ ಮೂರು ಮಕ್ಕಳ ಬೆಳೆಸಿ, ಮತ್ತೆರಡನ್ನು ಮಣ್ಣಿಗಿಟ್ಟು ಬದುಕಿನ ಹೋರಾಟದಲ್ಲಿ ದಿನ ಸರಿದದ್ದೇ ಗೊತ್ತಾಗದೆ ದಣಿದ ಚೇತನಗಳಲ್ಲಿ ಮುಪ್ಪು ಯಾವತ್ತೂ ಮೊದಲ ಹೆಜ್ಜೆ ಇಟ್ಟು ಆಕ್ರಮಿಸಿಕೊಳ್ಳತೊಡಗಿತೋ ಯಾರು ಬಲ್ಲರು?…. ಹಿರಿಯವ ಹೆಚ್ಚು ಓದದೆ ಮನೆಯಲ್ಲೇ  ಉಳಿದ. ಎರಡನೇಯ ಎಂ.ಎ ಮಾಡಿಕೊಂಡು ಕಾಲೇಜಿನ ಕೆಲಸ ಹಿಡಿದ. ಕೊನೆಯವಳು ಮಗಳು ಮದುವೆಯಾಗಿ ಗಂಡನ ಮನೆಯಲ್ಲಿರುವವಳು. ವರ್ಷಕ್ಕೊಮ್ಮೆ ಒಂದು ವಾರ ಒಪ್ಪೊತ್ತೋ ಇದ್ದು ಹೋಗುತ್ತಾಳೆ. ಅವಳದೂ ಹಳ್ಳಿಮನೆ .

ಕಥೆ ಮುಂದುವರಿಯುವುದು…


  • ಪ್ರಭಾಕರ್ ತಾಮ್ರಗೌರಿ97071578_1061252307608487_3798392995531718656_o

ಪ್ರಭಾಕರ ತಾಮ್ರಗೌರಿ (ಲೇಖಕರ ಪರಿಚಯ) :
ಸ್ವತಂತ್ರ ಬರಹಗಾರರು. ಗೋಕರ್ಣದಲ್ಲಿ ಬಿಕಾಂ ಪದವಿಯನ್ನು ಪಡೆದಿದ್ದಾರೆ.
ಪ್ರಕಟವಾದ ಪುಸ್ತಕಗಳು :
೧ ) ಕನಸು ಕರೆಯುತಿದೆ (ಕವನ ಸಂಕಲನ ) – 1995 ( ಪುಸ್ತಕ ಬಹುಮಾನ ಪಡೆದ ಕೃತಿ
೨ ) ಮತ್ತೆ ಬಂದ ವಸಂತ. ( ಕಾದಂಬರಿ )- 2001
೩ ) ಬದಲಾದ ದಿಕ್ಕುಗಳು ( ಕಥಾ ಸಂಕಲನ )- 2002
೪ ) ಅನುರಾಗ ಬಂಧನ ( ಕಾದಂಬರಿ )- 2002
೫ ) ಕರಾಗಿದೆ ಕಾರ್ಮೋಡ ( ಕಾದಂಬರಿ )- 2003
೬ ) ಬಾಳ ಸಂಜೆಯ ನೆರಳು ( ಕಥಾ ಸಂಕಲನ )- 2005
೭ ) ಮುಸ್ಸಂಜೆ ಹೊಂಬಿಸಿಲು ಮತ್ತು ಇತರ ಕಥೆಗಳು ( ಕಥಾ ಸಂಕಲನ )- 2006
೮ ) ಕಾರ್ತಿಕದ ಬೆಳಕು ( ಕವನ ಸಂಕಲನ )- 2010
೯ ) ಔದಾರ್ಯದ ನೆರಳಲ್ಲಿ ( ಕಥಾ ಸಂಕಲನ )- 2009
ಸದ್ಯದಲ್ಲಿಯೇ ಇನ್ನೂ ಎರಡು ಪುಸ್ತಕ ಪ್ರಕಟವಾಗವುದರಲ್ಲಿವೆ.

ಬಹುಮಾನಗಳು :
೧) 1991 ರಲ್ಲಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ಕಥಾ ಸ್ಪರ್ಧೆ ಬಹುಮಾನ ( ರಾಜ್ಯ ಮಟ್ಟದ 3 ನೆ ಬಹುಮಾನ )
೨ ) 1991 ರಲ್ಲಿ ಮಾಸ್ತಿ ಕಥಾ ಸ್ಪರ್ಧೆ ಬಹುಮಾನ
೩ )1995 ರಲ್ಲಿ ಪುಸ್ತಕ ಪ್ರಾಧಿಕಾರದ ಬಹುಮಾನ
೪)2001 ಹಾಗೂ 2003 ರಲ್ಲಿ ಸಂಚಯ ಕಥಾ ಸ್ಪರ್ಧೆಯ ಬಹುಮಾನ
೫) 2005 ಬೆಂಗಳೂರಿನ ಟಿಎಂಪಿ ಕೇಂದ್ರದ ಟಿಎಂಪಿ ಪ್ರಶಸ್ತಿ
೬ ) 2005-6ರಲ್ಲಿ ದಾಂಡೇಲಿ ಭಾರತಿ ಪ್ರಕಾಶನದ ” ಶ್ರೀಗಂಧಹಾರ ” ಸನ್ಮಾನ ಪ್ರಶಸ್ತಿ .

0 0 votes
Article Rating

Leave a Reply

1 Comment
Inline Feedbacks
View all comments
Chitrachandru

ಪ್ರಾರಂಭ ಹಿತವಾಗಿದೆ. ಮುಂದಿನ ಭಾಗಾಕ್ಕಾಗಿ ಎದಿರುನೋಡುವಂತಿದೆ. ಶುಭಹಾರೈಕೆಗಳು.

Home
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW