ಶ್ರೀ ಗಜಾನನ ಈಶ್ವರ ಹೆಗಡೆಯವರ ‘ರಸರಾಮಾಯಣ’ ಕೃತಿಯ ಯುದ್ಧಕಾಂಡದ ಕೊನೆಯ ಕವನವನ್ನು ಗಣಪತಿ ಹೆಗಡೆ ಕಪ್ಪೆಕೆರೆ ಅವರು ವ್ಯಾಖ್ಯಾನಿಸುವ ಪ್ರಯತ್ನ ಮಾಡಿದ್ದಾರೆ. ತಪ್ಪದೆ ಓದಿ…
ಮೌನಾರ್ಥ
ರಾವಣನ ಗೆದ್ದ ರಾಮನ
ಅಭಿವಂದಿಸಿ ಸುಪ್ರೀತ ದೇವೇಂದ್ರ
ವರವ ಕೇಳೆಂದು ಬೇಡಿದ
ರಣದಲ್ಲಿ ಮಡಿದ ವಾನರ ಕೋಟಿ
ಬದುಕಿ ಬಾಳಲಿ ಮಕ್ಕಳೊಂದಿಗರಾಗಿ
ಕೈ ಮುಗಿದು ತಲೆ ಬಾಗಿ ನುಡಿದ ರಾಮ
ಸನಿಹ ನಿಂತಿದ್ದ ರಾವಣಾನುಜ
ನಿಟ್ಟುಸಿರೊಂದು ಜಾರಿತು
ಯಾರಿಗೂ ಕೇಳಿಸದಂತೆ
ತಿರುಗಿ ನೋಡುತ್ತ ರಾಕ್ಷಸೇಂದ್ರನ ರಾಮ
ಭುಜ ಮುಟ್ಟಿ ಮೆಲ್ಲನೆ
ಬೆನ್ನ ಸವರುತ್ತ
ರಣರಂಗದ ಸುತ್ತೆಲ್ಲ ಕಣ್ಣಾಡಿಸಿದ
ಸತ್ತ ರಕ್ಕಸ ದೇಹವಿರಲಿಲ್ಲ ಅಲ್ಲಿ
ಅಂದಂದೆ ಇರುಳು
ಜಲಚರದೊಡಲ ಸೇರಿ ಕರಗಿತ್ತು
ತುಳುಕದಿದ್ದರು ಕಣ್ಣ ತುಂಬಿ
ಹನಿಯೊಡೆದಿತ್ತು ವಿಭೀಷಣನ
ಕ್ರಿಯೆಗೊಂದು ಕ್ರಿಯೆ ಪ್ರತಿಯಾಗಿ
ನೂರೆಂಟು ಅರ್ಥಗಳು
ನುಡಿಭಾರ ತಡೆದೀತೆ ನಾಲಿಗೆ
ಮೌನಕ್ಕೆ ಅರ್ಥ ಭಾರವೆ ಅಲ್ಲ
ಎದೆಯ ಮೊಗ್ಗರಳಿ ಮಧು ದ್ರವಿಸಲಿ
ಕವನ ಮುಗಿಯಿತು
ನನ್ನ ವ್ಯಾಖ್ಯಾನ :
ಮೇಲ್ಕಂಡ ಕವಿತೆ #ರಸರಾಮಾಯಣ ಕೃತಿಯ ಯುದ್ಧಕಾಂಡದ ಕೊನೆಯ ಕವನ ‘ಮೌನಾರ್ಥ’ ಎಂಬುದು. ನಾನಿಲ್ಲಿ ನಾಲ್ಕು ಚರಣಗಳಲ್ಲಿರುವ ಕವನದ ಪೂರ್ಣ ಓದನ್ನು ನಿಮಗೆ ಕೊಟ್ಟು, ಮೂರ್ನಾಲ್ಕು ಸಾಲುಗಳನ್ನು ಮಾತ್ರ ಅರ್ಥೈಸಲು ಪ್ರಯತ್ನಿಸುತ್ತಿದ್ದೇನೆ.
ರಾಮ ರಾವಣರ ಯುದ್ಧ ಮುಗಿದಿದೆ. ರಾವಣನನ್ನು ರಾಮ ವಧಿಸಿಯಾಗಿದೆ. ದೇವೇಂದ್ರ ರಾಮನಲ್ಲಿ ಕೇಳುತ್ತಾನೆ. ‘ವರವ ಕೇಳೆಂದು ಬೇಡಿದ’. ಈ ಸಾಲು ಕವನದ ಪ್ರಥಮ ಚರಣದ ಕೊನೆಯ ಸಾಲು. ಸ್ವಲ್ಪ ತಮಾಷೆಯಾಗಿದೆ ಈ ಸಾಲು ಎಂದು ನಿಮಗನ್ನಿಸಿದರೆ ಆಶ್ಚರ್ಯವಿಲ್ಲ. ವರವ ಕೇಳು ಎಂದು ಬೇಡುವುದೇ??.. ದೇವೇಂದ್ರ ದೊಡ್ಡವನೇ ಹೌದು. ಆದರೆ ಪ್ರಸ್ತುತ ಸಂದರ್ಭದಲ್ಲಿ ಆತನಿಗೆ ಗೌರವ ಲಭಿಸುವುದು ರಾಮ ಅವನನ್ನು ಗೌರವಿಸಿದರೆ ಮಾತ್ರ. ಇದು ರಾಮ ಏರಿದ ಎತ್ತರವನ್ನು ಅತ್ಯಂತ ಸೂಚ್ಯವಾಗಿ ಹೇಳುತ್ತದೆ. ನೀವು ಹೊಸ್ತೋಟದವರ ‘ರಾಮ ನಿರ್ಯಾಣ’ ಯಕ್ಷಗಾನ ಪ್ರಸಂಗ ನೋಡಿದ್ದರೆ ನೆನಪಿರಲಿಕ್ಕೆ ಸಾಕು, ಕಾಲಪುರುಷ, ರಾಮನೇ ಬಂದು ಎದುರ್ಗೊಂಡು, ತಾನು ಅಯೋಧ್ಯೆಯಲ್ಲಿ ಕಾಲಿಟ್ಟಿದ್ದನ್ನು ಮನ್ನಿಸಲಿ ಎಂದು ಅರಮನೆಯ ಹೊರವಲಯದಲ್ಲೇ ನಿಂತು ಕಾಯುತ್ತಾನೆ. ಇದೊಂದು ರಾಮನ ವ್ಯಕ್ತಿತ್ವದ ಹಿರಿತನಕ್ಕೆ ಸಾಕ್ಷಿ. ದೊಡ್ಡ ವರು ಗೌರವಿಸಿದರೆ ಮಾತ್ರ ಕೆಲವರು ದೊಡ್ಡವರಾಗುವುದು ಇಂದೂ ಸಹ ಸಮಾಜವನ್ನು ನೀವು ಗಮನಿಸಿದರೆ ತಿಳಿಯುವ ಸಂಗತಿಯೆ. ಯಾರಲ್ಲಿಯೋ ದುಡ್ಡಿರುತ್ತದೆ. ಆದರೆ ಸಮಾಜಕ್ಕೆ ಆತನ ಪರಿಚಯ ಅತ್ಯಲ್ಪ. ಆದರೆ ಇನ್ನೊಬ್ಬ ಪ್ರತಿಭಾಸಂಪನ್ನ ಸಾಧಕನಿರುತ್ತಾನೆ. ಆಗ ಆ ಸಾಧಕನ ಯಾವುದೋ ಕೆಲಸಕ್ಕೆ ಧನಿಕ, ದುಡ್ಡು ಕೊಟ್ಟು ಪ್ರೋತ್ಸಾಹಿಸುತ್ತಾನೆ. ಆಗ ಆ ಸಾಧಕ, ಆ ಧನಿಕನನ್ನು ಸಮಾಜದೆದುರು ಗೌರವಿಸುತ್ತಾನೆ. ಇದು ಈಗಲೂ ಲೋಕರೂಢಿ. ಹೀಗಾಗಿ ‘ವರವ ಕೇಳೆಂದು ಬೇಡಿದ’ ಎಂಬ ಮಾತು ಸಮಾಜದ ವರ್ತನೆಯೊಂದಕ್ಕೆ ಹಿಡಿದ ಕೈಗನ್ನಡಿ.

ಈ ಸಾಲಿನಲ್ಲಿ ನಾನು ಮುಂದಿನ ಘಟನೆಯೊಂದನ್ನು ಉದಾಹರಣೆಯಾಗಿ ಬಳಸಿರುವ ಕುರಿತು ಒಂದು ಮಾತು. ಭೂತಕಾಲದ ಘಟನೆಯೊಂದು ವರ್ತಮಾನಕ್ಕೆ ಆಧಾರವೇನೋ ಅನ್ನಿಸುತ್ತದೆ. ವರ್ತಮಾನದಲ್ಲೇ ಭವಿಷ್ಯದ ಘಟನೆಯೊಂದು ಮೊಳಕೆಯೊಡೆದಿದೆ ಎಂಬಂತೆ ಭಾಸವಾಗುತ್ತದೆ. ಸಾತ್ತ್ವಿಕ ಪಾತ್ರಗಳು ಹೀಗೆಯೇ ತಮ್ಮ ವಾದವನ್ನು ಮಂಡಿಸಿ ಗೆಲ್ಲುತ್ತವೆ. ತನ್ಮೂಲಕ ಪರಂಪರೆ ರೂಪುಗೊಳ್ಳುತ್ತದೆ. ಈ ತೆರನಾದ ವಾದಸರಣಿ ಪುರಾಣ – ಕಾವ್ಯಗಳ ಪಾತ್ರಾವಲೋಕನಕ್ಕೆ ದಾರಿಯಾಗಿ ನಡೆದು ಬಂದಿದೆ.
ವರವೇ ವಿಶೇಷ. ವರವೇ ಶಾಪವಾಯಿತು, ಶಾಪವೇ ವರವಾಯಿತು ಎಂಬಿತ್ಯಾದಿ ಮಾತುಗಳನ್ನು #ಯಕ್ಷಗಾನ ಪ್ರಿಯರು ಸಾಮಾನ್ಯವಾಗಿ ಕೇಳಿರುತ್ತಾರೆ. ಗಮನಿಸಿ, ರಕ್ಕಸನೊಬ್ಬ ವರ ಬಲಾನ್ವಿತನಾದನೆಂದರೆ ಅದು ಇಡೀ ಸಮಾಜಕ್ಕೆ ಶಾಪ. ಅದೇ ಸಾತ್ತ್ವಿಕನೊಬ್ಬ ತನಗೆ ತಟ್ಟಿದ ಶಾಪವನ್ನು ವರವಾಗಿ ಬದಲಾಯಿಸಿಕೊಂಡರೆ ಅದು ಇಡೀ ಸಮಾಜಕ್ಕೆ ವರವಾಗುವುದೇ ಹೆಚ್ಚು. ರಕ್ಕಸರ ಅದೆಷ್ಟೋ ವರಗಳು ಮಹಾಯುದ್ಧಕ್ಕೆ ಮುನ್ನುಡಿಯಾಗಿರುತ್ತದೆ. ಅದೆಷ್ಟೋ ಜನರ ಜೀವಹಾನಿಗೆ ಕಾರಣವಾಗಿರುತ್ತದೆ. ಆದರೆ ಇಲ್ಲಿ ರಾಮ ಕೇಳುವ ವರ ಅದೆಷ್ಟೋ ವಾನರ ಸೇನೆಯ ಜೀವವುಳಿಸುತ್ತದೆ. ‘ಮಂಡೋದರಿ’ ಕವನದಲ್ಲಿ ಜೀವನದ ಕುರಿತಾಗಿ ರಾಮನ ನಿಲುವು ಏನೆಂಬುದನ್ನು ಸ್ಪಷ್ಟವಾಗಿ ಕವಿ ಹೇಳಿದ್ದಾರೆ. ‘ಬದುಕಿಸುವುದು ಬದುಕು’. ಬದುಕಿಸುವುದು ಬದುಕು ಎಂಬ ರಾಮನ ನಿಲುವಿಗೆ ಆತನೇ ಮಾದರಿಯಾಗಿ ನಿಲ್ಲುವ ಸುಂದರ ಸನ್ನಿವೇಶ ಇದಾಗಿದೆ.
ಎರಡನೇ ಚರಣದಲ್ಲಿ ರಾವಣಾನುಜ ವಿಭೀಷಣನ, ನಿಟ್ಟುಸಿರಿಗೆ ಅರ್ಥವನ್ನು ಕವಿ ಹೇಳುವುದಿಲ್ಲ. ಮೂರನೇ ಚರಣದಲ್ಲಿ ಮಡಿದ ರಾಕ್ಷಸರಿಗೆ ಜೀವ ನೀಡುವುದು ಅಸಾಧ್ಯ ಎಂಬ ಸತ್ಯದ ಅರಿವು ವಿಭೀಷಣನಿಗಾದಾಗ, ಕಣ್ಣ ತುಂಬಿ ಹನಿಯೊಡೆದಿತ್ತು ಎಂದು ಹೇಳಿ, ನಿಟ್ಟುಸಿರು ಖೇದದ ನಿಟ್ಟುಸಿರಾಗಿತ್ತು ಎಂದು ನಾವು ನಿರ್ಧರಿಸುವುದಕ್ಕೆ ಕಾರಣವಾಗುತ್ತದೆ.

ನಾಲ್ಕನೆಯ ಅಂದರೆ ಕೊನೆಯ ಚರಣದಲ್ಲಿ ಮೌನಕ್ಕೆ ಇರುವ ಅರ್ಥ ಹಲವಾರು ಎಂದು ಕವಿ ಹೇಳುತ್ತಾರೆ. ಯಾಕೆ ಮೌನದ ಕುರಿತು ಹೇಳಿದರು? ಒಂದು ಮಹಾಯುದ್ಧದ ನಂತರ ಮಾತು, ನಿಟ್ಟುಸಿರು ಮತ್ತು ಮೌನ ಸಾಮಾನ್ಯ. ಮೊದಲನೇ ಚರಣದಲ್ಲಿ ಒಂದು ವಿಶಿಷ್ಟ ಮಾತನ್ನು ಬಳಸಿ, ಮಾತಿನ ಸಾಧ್ಯತೆಯೊಂದನ್ನು ತೆರೆದಿಟ್ಟರು. ಎರಡನೇ ಚರಣದಲ್ಲಿ ರಾಮ ಮಾತನಾಡಿದರೂ, ವಿಭೀಷಣನ ನಿಟ್ಟುಸಿರು ಪ್ರಶ್ನಾರ್ಥಕ. ಯಾಕೆಂದರೆ ವಿಭೀಷಣ, ರಾಮನ ಪಕ್ಷದಲ್ಲಿ ನಿಂತು ಹೋರಾಡಿದವ. ಮೂರನೇ ಚರಣದಲ್ಲಿ ಆ ನಿಟ್ಟುಸಿರು ಬೇಸರದ್ದು ಎಂಬ ಅರ್ಥವ್ಯಾಪ್ತಿಯನ್ನು ನೀಡುತ್ತಾರೆ. ನಾಲ್ಕನೇ ಚರಣದಲ್ಲಿ ಮಾತು ಮತ್ತು ನಿಟ್ಟುಸಿರು ಮುಗಿದ ನಂತರದ ಮೌನದ ವ್ಯಾಖ್ಯಾನವನ್ನು ಚೆನ್ನಾಗಿ ಹೇಳಿದ್ದಾರೆ.
ಕ್ರಿಯೆಗೆ ಪ್ರತಿಕ್ರಿಯೆ ಇದ್ದು, ಅವು ನೂರೆಂಟು ಅರ್ಥಗಳಿಗೆ ದಾರಿಮಾಡಿ ಕೊಡುತ್ತದೆ. ರಾಮನ ಮಾತಿಗೆ, ವಿಭೀಷಣನ ನಿಟ್ಟುಸಿರು ಪ್ರತಿಕ್ರಿಯೆ. ವಿಭೀಷಣನ ನಿಟ್ಟುಸಿರಿನ ಕ್ರಿಯೆಗೆ, ರಾಮ ಮೌನವಾಗಿ ಆತನ ಬೆನ್ನು ಸವರಿದ್ದು ಪ್ರತಿಕ್ರಿಯೆ. ‘ನುಡಿಭಾರ ತಡೆದೀತೆ ನಾಲಿಗೆ’ ಎಂಬುದು ಮಾತಿನ ಮಿತಿಯನ್ನು ಹೇಳುತ್ತದೆಯೇ ಹೊರತು, ರಾಮನಿಗೆ ಮಾತಿನ ಭಾರವನ್ನು ಹೊರಲು ಸಾಧ್ಯವೇ ಎನ್ನುವುದು ಅರ್ಥವಲ್ಲ. ರಾಮನ ಮೌನಕ್ಕೆ ಹಲವಾರು ಅರ್ಥ ಎಂಬುದು ಅದರ ಅರ್ಥ.
‘ನುಡಿಭಾರ ತಡೆದೀತೆ ನಾಲಿಗೆ’ ಎಂಬ ಸಾಲನ್ನು ವಿಭೀಷಣನಿಗೂ ಅನ್ವಯಿಸಬಹುದು. ಒಂದೊಮ್ಮೆ ವಿಭೀಷಣ, ತನ್ನ ಕುಲಬಾಂಧವರಾದ ರಕ್ಕಸರನ್ನು ಬದುಕಿಸಲು ಬೇಡಿದರೆ, ಬದುಕಿ ಬಂದ ರಕ್ಕಸರ ನಿಲುವು ಊಹಿಸಲು ಕಷ್ಟ. ಹಾಗಾಗಿ ತನ್ನದೇ ಮಾತಿನ ಭಾರವನ್ನು ಹೊರಲು ಸಾಧ್ಯವೇ ಎಂಬ ಮಾತು ಇಣುಕಬಹುದು. ಕ್ರಿಯೆಗೆ ಪ್ರೇರಕವಾದ ಮಾತಿನ ಭಾರವನ್ನು ನಾಲಿಗೆ(ವ್ಯಕ್ತಿತ್ವ) ಹೊರಲು ಸಾಧ್ಯವೇ ಎಂದು ಕವಿ ಕೇಳುತ್ತಾರೆ. ಮೌನವನ್ನು ಎಷ್ಟು ಬೇಕಾದರೂ ಅರ್ಥೈಸಬಹುದು ಎಂದು ಹೇಳಿ, ಮೂಲ #ವಾಲ್ಮೀಕಿ_ರಾಮಾಯಣದ ಮೇಲಿನ ಕವನಗಳನ್ನು ಮುಗಿಸಿ, ಮಧುಕಾಂಡವೆಂಬ ತಮ್ಮದೇ ಕಲ್ಪನೆಯ ಕಾವ್ಯ ಸಮಾರೋಪಕ್ಕೆ ಸನ್ನದ್ಧರಾಗುತ್ತಾರೆ. ಎದೆಯ ಮೊಗ್ಗರಳಿ ಮಧು ದ್ರವಿಸಲಿ ಎಂಬ ಸಾಲು ಬಹುತೇಕ ಎಲ್ಲಾ ಕವನಗಳ ಕೊನೆಯ ಸಾಲು.
- ಗಣಪತಿ ಹೆಗಡೆ ಕಪ್ಪೆಕೆರೆ ( ವೃತ್ತಿಯಲ್ಲಿ ಸಾಫ್ಟ್ ವೆರ್ ಇಂಜೀನಿಯರ್ ,ಹವ್ಯಾಸಿ ಬರಹಗಾರರು), ಬೆಂಗಳೂರು.
