ಭಾರತೀಯ ಕ್ರಿಕೆಟಿನ ದುರಂತ ನಾಯಕ ವಿನೋದ್ ಕಾಂಬ್ಳಿ…



ದಶಕಗಳ ಹಿಂದೆ ಕ್ರಿಕೆಟ್ ಜಗತ್ತನ್ನು ನಡುಗಿಸಿದ್ದ ವಿನೋದ್ ಗಣಪತ್ ಕಾಂಬ್ಳಿ ಇಂದು ಈ ಜಗತ್ತಿನಲ್ಲಿ ಏಕಾಂಗಿ.ಯಾವುದೇ ಕ್ಷೇತ್ರದ ಯಾರಿಗೂ ಕಾಂಬ್ಳಿ ಬೇಡ. ಮುಂದೆ ಓದಿ ಮುಷ್ತಾಕ್ ಹೆನ್ನಾಬೈಲ್ ಅವರ ಲೇಖನಿಯಲ್ಲಿ ವಿನೋದ್ ಕಾಂಬ್ಳಿ ಜೀವನದ ರೋಚಕ ವಿಷಯಗಳು.

ಜಾಗತಿಕ ಕ್ರಿಕೆಟಿನ ದಿಗ್ಗಜ ಸಚಿನ್ ತೆಂಡುಲ್ಕರ್ ಕ್ರೀಡಾಜೀವನದ ಆದಿ ಒಡನಾಡಿ ವಿನೋದ್ ಗಣಪತ್ ಕಾಂಬ್ಳಿ ಹೆಸರು ಕೇಳದವರು ಬಹಳ ವಿರಳ. ಕಾಲವೊಂದರಲ್ಲಿ ತೆಂಡೂಲ್ಕರಿಗೂ ಮೀರಿ ಬೆಳೆಯುತ್ತಾರೆ ಎಂಬ ನಿರೀಕ್ಷೆ ಹುಟ್ಟುಹಾಕಿ ನಂತರ ತಮ್ಮ ವರ್ತನೆಗಳಿಂದ ನಿರಾಶೆ ಮೂಡಿಸಿ ನೇಪಥ್ಯಕ್ಕೆ ಸರಿದದ್ದು ಈ ಕಾಂಬ್ಳಿ. 90ರ ದಶಕದ ಆಸ್ಟ್ರೇಲಿಯಾ ತಂಡದಲ್ಲಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಪ್ರವರ್ಧಮಾನಕ್ಕೆ ಬಂದಾಗ ಇಡೀ ಕ್ರಿಕೆಟ್ ಜಗತ್ತು ಅವನ ಓವರ್ ಒಂದನ್ನು ಪೂರ್ತಿ ಆಡುವಲ್ಲಿ ಪಡುತ್ತಿದ್ದ ಪಾಡು ಕಂಡವರಿಗಷ್ಟೇ ಗೊತ್ತು. ಈತನ ಎಸೆತಗಳು ಬರೀ ಬ್ಯಾಟ್ಸ್‌ಮನ್ನಿಗೆ ಮಾತ್ರವಲ್ಲ ವಿಕೆಟ್ ಹಿಂದಿನ ಸುರಕ್ಷಿತ ಕೈ ಎಂದು ಖ್ಯಾತಿವೆತ್ತ ಆಸ್ಟ್ರೇಲಿಯಾ ತಂಡದ ಆಗಿನ ವಿಕೆಟ್ ಕೀಪರ್ ಇಯಾನ್ ಹೀಲಿಯನ್ನೂ ವಂಚಿಸುತ್ತಾ, ಬೈ ರಾಜನೆಂಬ ಬಿರುದಾಂಕಿತನನ್ನಾಗಿ ಮಾಡಿತು. ಬೌಂಡರಿ ಸಿಕ್ಸರ್ ಬಿಡಿ, ಬ್ಯಾಟ್ಸ್‌ಮನ್‌ ಒಂಟಿ ರನ್ ತೆಗೆದರೂ ಕೆಕ್ಕರಿಸಿ ನೋಡಿ ಕೆರಳುತ್ತಿದ್ದ ವಾರ್ನ್.

ಇವನ ಸಮಕಾಲೀನ ಕಾಲಘಟ್ಟದ ರಣಪ್ರಚಂಡ ಬ್ಯಾಟ್ಸ್‌ಮನ್‌ ಗಳಾದ ಭಾರತದ ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ನ್ಯೂಜಿಲೆಂಡಿನ ಮಾರ್ಟೀನ್‌ ಕ್ರೋವ್, ವೆಸ್ಟಿಂಡೀಸಿನ ಬ್ರಿಯಾನ್ ಲಾರಾ, ರಿಚಿ ರಿಚರ್ಡ್ಸನ್, ದಕ್ಷಿಣ ಆಫ್ರಿಕಾದ ಹ್ಯಾನ್ಸೀ ಕ್ರೋನಿಯೆ, ಪೀಟರ್ ಕರ್ಸ್ಟನ್-ಗ್ಯಾರಿ ಕರ್ಸ್ಟನ್, ಶ್ರೀಲಂಕಾದ ಅರವಿಂದ ಡಿ’ಸಿಲ್ವ, ಪಾಕಿಸ್ತಾನದ ಜಾವೇದ್ ಮಿಯಾಂದಾದ್, ಇಂಜಮಾಮ್ ಉಲ್ ಹಕ್, ಜಿಂಬಾವ್ವೆಯ ಆ್ಯಂಡಿ ಪ್ಲವರ್, ಇಂಗ್ಲೆಂಡಿನ ಗ್ರೇಮ್ ಹಿಕ್, ಅಲೆಕ್ ಸ್ಟುವರ್ಟ್ ಮುಂತಾದ ಘಟಾನುಘಟಿಗಳು ಇವನ ಮುಂದೆ ರನ್ನಿಗಾಗಿ ವಿಪರೀತ ತಿಣುಕಾಟ ನಡೆಸುತ್ತಿದ್ದರು. ಆಗಷ್ಟೇ ನಿದ್ದೆಯಿಂದ ಎದ್ದುಬಂದವನಂತೆ ಸಣ್ಣ ರನ್ನಪ್ ತೆಗೆದುಕೊಂಡು ವಾರ್ನ್ ಎಸೆಯುತ್ತಿದ್ದ ವೈವಿಧ್ಯಮಯ ಸ್ಪಿನ್ ಎಸೆತಗಳು ಭಯಾನಕವಾಗಿದ್ದವು. ಅದಕ್ಕೆ ಸರಿಯಾಗಿ ನಾಯಕ ಮಾರ್ಕ್ ಟಯ್ಲರ್ ಎರಡು ಸ್ಲಿಪ್, ಲೆಗ್ ಸ್ಲಿಪ್, ಲೆಗ್ ಗಲ್ಲಿ, ಸಿಲ್ಲಿ ಪಾಯಿಂಟ್, ಶಾರ್ಟ್ ಲೆಗ್ , ಸ್ಕ್ವೇರ್ ಲೆಗ್, ಬ್ಯಾಕ್ ವರ್ಡ್ ಪಾಂಯಿಟ್ ಗಳಲ್ಲಿ ಫೀಲ್ಡರ್ ಗಳನ್ನಿಟ್ಟು ಇವನ ಆಕ್ರಮಣಕ್ಕೆ ಸಾಥ್ ನೀಡುತ್ತಿದ್ದ. ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಆರಂಭದ ಎರಡು ವರ್ಷ ವಾರ್ನ್ ಆಡಿದ್ದೇ ಆಟವಾಗಿತ್ತು. ಆ ಕಾಲದ ಇಂಗ್ಲೆಂಡ್ ತಂಡದಲ್ಲಿ ಮೈಕ್ ಗ್ಯಾಟಿಂಗ್ ಎಂಬ ಬೌಲರ್ ಗಳಿಗೆ ವಿಕೆಟನ್ನು ತೋರಿಸದೇ ಆಡುವ ಒಬ್ಬ ವಿಚಿತ್ರ ರೀತಿಯ ರಕ್ಷಣಾತ್ಮಕ ಶೈಲಿಯ ಬ್ಯಾಟ್ಸ್‌ಮನ್ನ್ ಒಬ್ಬನಿದ್ದ. ಅದೊಂದು ಟೆಸ್ಟ್ ಪಂದ್ಯದಲ್ಲಿ ಈ ವಾರ್ನ್ ಅವನಿಗೆ ಎಸೆದ ಎಸೆತವೊಂದು ಗಾಳಿಯಲ್ಲೇ ಎರಡು ತಿರುವು ತೆಗೆದುಕೊಂಡು ಪಿಚ್ ಬಿದ್ದು ಅದು ಹೇಗೋ ಮತ್ತೆ ಸ್ಪಿನ್ ಆಗಿ ಬೇಲ್ಸ್ ಎಗರಿಸಿಬಿಟ್ಟಿತು. ಬಾಲ್ ಬಿದ್ದ ರೀತಿ ನೋಡಿ ಅಂಪಾಯರ್ ಡಿಕಿ ಬರ್ಡಿಗೆ ಏನೆಂದರೆ ಏನೂ ಅರ್ಥವಾಗಲಿಲ್ಲ.

ಫೋಟೋ ಕೃಪೆ : republic world ವಿನೋದ್ ಗಣಪತ್ ಕಾಂಬ್ಳಿ

1993ರಲ್ಲಿ ಇಂಗ್ಲೆಂಡಿನ ಮ್ಯಾಂಚೆಸ್ಟರ್ ಓಲ್ಡ್‌ ಟ್ರಾಫರ್ಡ್ ಮೈದಾನದಲ್ಲಿ ನಡೆದ ಆ ಆ್ಯಷಸ್ ಟೆಸ್ಟಿನಲ್ಲಿ ಎಸೆಯಲ್ಪಟ್ಟ ಈ ಮಹಾ ಎಸೆತವು ಕ್ರಿಕೆಟ್ ಇತಿಹಾಸದ ಶತಮಾನದ ಎಸೆತವೆಂದು ದಾಖಲಿಸಲ್ಪಟ್ಟಿತು. ದೈತ್ಯ ವೆಸ್ಟಿಂಡೀಸಿನ ಬ್ಯಾಟ್ಸ್‌ಮನ್ ಗಳನ್ನೂ ಕ್ರೀಸಿನಲ್ಲಿ ವಾರ್ನ್ ಅಕ್ಷರಶಃ ನರ್ತನ ಮಾಡಿಸುತ್ತಿದ್ದ. ದಶಕಗಳ ಕಾಲ ವಿಶ್ವ ಕ್ರಿಕೆಟಿನ ಮೇಲೆ ವೆಸ್ಟೀಂಡಿಸ್ ಪಾರಮ್ಯವನ್ನು ಕೊನೆಗಾಣಿಸಿ, ಆ ಸ್ಥಾನಕ್ಕೆ ಆಸ್ಟ್ರೇಲಿಯಾ ಬರುವಲ್ಲಿ ನಿರ್ಣಾಯಕ ಪಾತ್ರವಹಿಸಿದವನು ಈ ವಾರ್ನ್. ಈತ ಇಷ್ಟು ಭಯಂಕರನಿದ್ದ ದಿನಗಳಲ್ಲೇ 1994ರಲ್ಲಿ ಶಾರ್ಜಾದಲ್ಲಿ ಪೆಪ್ಸಿ ಕಂಪೆನಿಯವರ ಪ್ರಾಯೋಜಕತ್ವದಲ್ಲಿ ಆಸ್ಟ್ರೇಲೆಷಿಯಾ ಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾಗಳು ಪರಸ್ಪರ ಎದುರಾದವು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 278 ರನ್ನುಗಳನ್ನು ಕಲೆಹಾಕಿತ್ತು. ಉತ್ತರವಾಗಿ ಆಡಿದ ಭಾರತ 44 ಓವರ್ ಮುಗಿಸಿತ್ತು. ಉಳಿದ 6 ಓವರ್ ಗಳಿಂದ ಹೆಚ್ಚುಕಡಿಮೆ ಬಾಲಿನಷ್ಟೇ ರನ್ನುಗಳು ಬೇಕಾಗಿದ್ದವು. ಆದರೆ ನಾಯಕ ಟಯ್ಲರ್ ಕೊನೆಯ 6 ಓವರ್ ಗಳಲ್ಲಿ 3 ಓವರನ್ನು ಶೇನ್ ವಾರ್ನಿಗೆ ಮೀಸಲಾಗಿಟ್ಟಿದ್ದ. 45ನೇ ಓವರಿನಲ್ಲಿ ವಾರ್ನ್ ಕಣ್ಣಲ್ಲಿ ಬೆಂಕಿ ಉಗುಳುತ್ತಾ ಬಂದ. ಎದುರಿಗೆ ಕಾಂಬ್ಳಿ. ಕ್ರೀಡಾಂಗಣದಲ್ಲಿ ಅದು ಅವರಿಬ್ಬರ ಮೊದಲ ಮುಖಾಮುಖಿ. ವಾರ್ನನ ಉಳಿದ 3 ಓವರ್ ಗಳಿಂದ ಕೇವಲ 6 ರಿಂದ 8 ರನ್ ನೀಡಿ, ಒಂದೆರಡು ವಿಕೆಟ್ ಹಾರಿಸಿ ಭಾರತವನ್ನು ಸಂಕಷ್ಟಕ್ಕೆ ತಳ್ಳುವ ಯೋಜನೆ ನಾಯಕ ಟಯ್ಲರನದ್ದಾಗಿತ್ತು. ವಾರ್ನ್ ಕೂಡ ಎದೆಯುಬ್ಬಿಸಿಕೊಂಡೇ ಬಾಲ್ ಹಾರಿಸುತ್ತಾ ಬಂದ. ಬಾಲ್ ಎಸೆಯುವ ಮುಂಚೆ ಕಾಂಬ್ಳಿಯನ್ನು ಎಂದಿನ ತನ್ನ ವ್ಯಂಗ್ಯಭರಿತ ದೃಷ್ಟಿಯಿಂದ ದುರುಗುಟ್ಟಿ ನೋಡಿದ. ಹಾಕಿದ ಮೊದಲ ಎಸೆತಕ್ಕೆ ಕಾಂಬ್ಳಿ ಹೊಡೆದ ಹೊಡೆತ ಶಾರ್ಜಾ ಸ್ಟೇಡಿಯಮಿನ ಮೇಲ್ಭಾಗದ ಸ್ಟ್ತಾಂಡಿಗೆ ಹೋಗಿ ಬಡಿಯಿತು. ವಾರ್ನ್ ಕೆಂಡಮಂಡಲವಾದ. ಉಳಿದ ಎಸೆತಗಳಿಗೂ ನೆಲಮಾರ್ಗ ಮತ್ತು ವಾಯುಮಾರ್ಗದ ಮೂಲಕ ಸೀಮಾರೇಖೆಯ ಹೊರಗಿನ ಅಂಗಣದ ಮೂಲೆಗಳೇ ಗತಿಯಾದವು. ಒಟ್ಟು 22 ರನ್ನುಗಳು ಕಾಂಬ್ಳಿಯ ಬ್ಯಾಟಿನಿಂದ ಅದೊಂದೇ ಓವರ್ ನಲ್ಲಿ ಸಿಡಿಯಲ್ಪಟ್ಟಿತು. ಅಲ್ಲಿಯವರೆಗೆ ಎಂದೂ ಓವರಿನಲ್ಲಿ 6 ಕ್ಕಿಂತ ಹೆಚ್ಚು ರನ್ ಹೊಡೆಸಿಕೊಳ್ಳದ ಶೇನ್ ವಾರ್ನ್ ಅದೆಷ್ಟು ವಿಚಲಿತನಾದನೆಂದರೆ ಒಂದೇ ಓವರ್ ನಲ್ಲಿ ಮೂರು ನೋಬಾಲ್ ಎಸೆದ. ಈಗಿನ ರೀತಿ ನೋಬಾಲಿಗೆ ಫ್ರೀ ಹಿಟ್ ಜಮಾನ ಆಗಿದ್ದರೆ ರನ್ 30 ದಾಟುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿರಲಿಲ್ಲ. ಆ ಕಾಲದ ಮಟ್ಟಿಗೆ ಭಯಾನಕ ಸ್ಪಿನ್ನರ್ ಶೇನ್ ವಾರ್ನಿನ ಎದುರು ಕಾಂಬ್ಳಿಯ ಈ ಪರಾಕ್ರಮ ಕಂಡು ಇಡೀ ಕ್ರಿಕೆಟ್ ಜಗತ್ತು ನಡುಗಿತು. ಎಗ್ಗಿಲ್ಲದೇ ಮೆರೆಯುತಿದ್ದ ಶೇನ್ ವಾರ್ನ್ ನನ್ನು ಅಂಗಣದಲ್ಲಿ ಹಿಡಿದು ಚಚ್ಚಿ ಇವನಿಷ್ಟೇ ಎಂದು ಲೋಕದ ಎದುರು ಮೊಟ್ಟಮೊದಲು ಸಾರಿದ್ದು ವಿನೋದ್ ಕಾಂಬ್ಳಿ ಎಂಬ ಈ ದೈತ್ಯ ಪ್ರತಿಭೆ.


ವಿನೋದ್ ಗಣಪತ್ ಕಾಂಬ್ಳಿ ಮತ್ತು ಸಚಿನ್ ತೆಂಡೂಲ್ಕರ್

ಮುಂಬಯಿಯಲ್ಲಿ ಗುರು ರಮಾಕಾಂತ್ ಅಚ್ರೇಕರ್ ಗರಡಿಯಲ್ಲಿ ಪಳಗಿದ ಕಾಂಬ್ಳಿ ಮತ್ತು ಸಚಿನ್ ತೆಂಡೂಲ್ಕರ್ ಅತೀ ಚಿಕ್ಕ ವಯಸ್ಸಿನಲ್ಲಿ ಭಾರತೀಯ ತಂಡಕ್ಕೆ ಪ್ರವೇಶ ಪಡೆದವರು. ಶಾಲಾದಿನಗಳಲ್ಲಿ ಕಾಂಬ್ಳಿ ಅತ್ಯಂತ ಶಿಸ್ತಿನ ಪ್ರತಿಭಾವಂತ ಬಾಲಕ. ಮುಂಬಯಿಯ ಸ್ಲಮ್ಮಿನಲ್ಲಿ ವಾಸಿಸುವ ಬಡ ಕುಟುಂಬ ಇವರದ್ದು. ಅದ್ಭುತ ಪ್ರತಿಭಾವಂತ. ಬಡವನಾದ ಕಾರಣ ಗುರು ಅಚ್ರೇಕರ್ ಕಾಂಬ್ಳಿಗೆ ತೆಂಡೂಲ್ಕರ್ ಗಿಂತಲೂ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ತಮ್ಮ ಆಪ್ತವಲಯದಲ್ಲಿ ಕಾಂಬ್ಳಿ ತೆಂಡೂಲ್ಕರ್ ಗಿಂತ ಪ್ರತಿಭಾವಂತ, ಮುಂದೊಂದು ದಿನ ಭಾರತೀಯ ಕ್ರಿಕೆಟಿನ ಭವಿಷ್ಯ ಬದಲಿಸಬಲ್ಲ ಆಟಗಾರ ಎಂದು ಅಚ್ರೇಕರ್ ಹೊಗಳುತ್ತಿದ್ದರು. ಪ್ರತಿಭೆಯ ಆಧಾರದ ಮೇಲಿನ ಅವರ ಅಷ್ಟೂ ಊಹೆ ನಿಜವೂ ಆಗಿತ್ತು. ಚೆಂದದ ಸದೃಢ ಫೂಟ್ ವರ್ಕ್, ಬ್ಯಾಟ್ ಹಿಡಿಯುವ ವಿಶೇಷ ಶೈಲಿ, ಮನಮೋಹಕ ಕವರ್ ಡ್ರೈವ್ ಗಳು, ಲೇಟ್ ಕಟ್, ಲಾಂಗ್ ಆನ್ ಮೇಲಿನ ಗಗನಚುಂಬಿ ಸಿಕ್ಸರ್ ಗಳು, ಒತ್ತಡವನ್ನು ನಿಭಾಯಿಸುವ ರೀತಿ ನೋಡಿದರೆ ನೋಡುತ್ತಲೇ ಇರಬೇಕು, ಹಾಗಿತ್ತು ಕಾಂಬ್ಳಿಯ ಬ್ಯಾಟಿಂಗ್. ಶ್ರೀಮಂತ ಮನೆತನದಿಂದ ಬಂದ ಗೆಳೆಯ ಸಚಿನ್, ಕಾಂಬ್ಳಿಗೆ ಶಾಲಾದಿನಗಳಲ್ಲಿ ಬಡತನ ಕಾಡದಂತೆ ನೋಡಿಕೊಂಡಿದ್ದರು.

ಸಚಿನ್ ಅಣ್ಣ ಅಜಿತ್ ತೆಂಡೂಲ್ಕರ್ ಆಗಾಗ ಇವರಾಡುತ್ತಿದ್ದಲ್ಲಿಗೆ ಬರುತಿದ್ದರು. ಬರುವಾಗ ಕಾಂಬ್ಳಿಗೂ ಸಚಿನ್ ಗೆ ತರುವ ತಿಂಡಿ ತಿನಿಸುಗಳನ್ನೇ ತರುತಿದ್ದರು. ಸಚಿನ್ ತಂದೆ ರಮೇಶ್ ತೆಂಡೂಲ್ಕರ್ ಕೂಡ ಕಾಂಬ್ಳಿಯನ್ನು ತಮ್ಮ ಮಗನಂತೆಯೇ ನೋಡಿಕೊಂಡಿದ್ದರು. ಪ್ಯಾಡ್, ಬಾಲ್, ಬ್ಯಾಟ್ ಗಳೆಲ್ಲವೂ ಇಬ್ಬರಿಗೂ ಒಂದೇ ರೀತಿಯಲ್ಲಿ ಅಜಿತ್ ತೆಂಡೂಲ್ಕರ್ ತರುತ್ತಿದ್ದರು. ಶಾಲಾಮಟ್ಟದ ಪ್ರತಿಷ್ಠಿತ ಪಂದ್ಯಾವಳಿಯೊಂದರಲ್ಲಿ ಈ ಇಬ್ಬರು ಗೆಳೆಯರು ಸೇರಿ 664 ರನ್ನುಗಳ ಜೊತೆಯಾಟ ನೀಡಿದ್ದು, ಅನುಕ್ರಮವಾಗಿ ಕಾಂಬ್ಳಿ 349 ಮತ್ತು ಸಚಿನ್ 326 ರನ್ ಹೊಡೆದಿದ್ದರು. ನಂತರ ಬೌಲಿಂಗಿನಲ್ಲಿ ಕೇವಲ 36 ರನ್ ನೀಡಿ ಎದುರಾಳಿ ತಂಡದ 6 ವಿಕೆಟ್ ಕಾಂಬ್ಳಿ ಪಡೆದರು. ಈ ಜೊತೆಯಾಟ ಇಂದಿಗೂ ವಿಶ್ವದಾಖಲೆ. ಈ ಸುದೀರ್ಘ ಇನ್ನಿಂಗ್ಸಿನ ಯಶಸ್ಸಿನ ಸಿಂಹಪಾಲು ವಿನೋದ್ ಕಾಂಬ್ಳಿಗೇ ಸಲ್ಲಬೇಕು. ಶಾಲಾ ಪಂದ್ಯಾವಳಿಯ ಈ ಆಟವೇ ಮುಂದಿನ ದಿನಗಳಲ್ಲಿ ಕಾಂಬ್ಳಿ- ತೆಂಡೂಲ್ಕರ್ ಎಂಬ ಎರಡು ತಾರೆಗಳು ಭಾರತದ ಕ್ರಿಕೆಟ್‌ ಬಾನಂಗಳದಲ್ಲಿ ಮಿನುಗಲು ಮೂಲವಾದದ್ದು. ಆಡುವ ವೇಳೆ ಬಿಸಿಲಿನಿಂದಾಗಿ ವಿಪರೀತ ದಣಿದಿದ್ದ ತಮಗಿಂತ ಕಿರಿಯ ವಯಸ್ಸಿನ ಸಚಿನ್ ಗೆ ಕ್ಷಣಕ್ಷಣಕ್ಕೂ ಉಪಚರಿಸುತ್ತಾ, ಹುರಿದುಂಬಿಸುತ್ತಾ, ಧೈರ್ಯ ತುಂಬುತ್ತಾ ಇನ್ನಿಂಗ್ಸ್ ಕಟ್ಟಿದ್ದು ಕಾಂಬ್ಳಿಯೇ. ಕೋಚ್ ಅಚ್ರೇಕರ್ ಒತ್ತಾಯಪೂರ್ವಕವಾಗಿ ಡಿಕ್ಲೇರ್ ಘೋಷಿಸದೇ ಇದ್ದರೆ ಆ ಜೊತೆಯಾಟ ಸಾವಿರದ ಸನಿಹ ತಲುಪುತಿತ್ತು.

ಫೋಟೋ ಕೃಪೆ : sportskeda

ನಂತರದ ದಿನಗಳಲ್ಲಿ ದೇಶಿಯ ಕ್ರಿಕೆಟಿನ ಸಾಧನೆಯ ಆಧಾರದಲ್ಲಿ ಎರಡು ವರ್ಷಗಳ ಅಂತರದಲ್ಲಿ ಇಬ್ಬರೂ ರಾಷ್ಟೀಯ ತಂಡಕ್ಕೆ ಪ್ರವೇಶ ಪಡೆದರು. ಕಾಂಬ್ಳಿಯ ಆರಂಭಿಕ ಅಬ್ಬರಕ್ಕೆ ಇಡೀ ಕ್ರಿಕೆಟ್ ಜಗತ್ತು ನಡುಗಿತು. ಭಾರತದ ಪರ ಅತ್ಯಂತ ವೇಗವಾಗಿ ಕೇವಲ 14 ಟೆಸ್ಟ್ ಇನ್ನಿಂಗ್ಸ್‌ನಲ್ಲಿ 1000 ರನ್ ಪೋರೈಸಿದ ದಾಖಲೆ ಕಾಂಬ್ಳಿಯ ಹೆಸರಿನಲ್ಲಿ ಮೆರೆದಾಡಿತು. ಅಂದು ಗವಾಸ್ಕರ್, ಸಚಿನ್, ಮಾಂಜ್ರೇಕರ್ ಮತ್ತು ನಂತರದ ಅಜರುದ್ದೀನ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿ, ಸೆಹವಾಗ್, ವಿರಾಟ್, ರೋಹಿತ್ ರಂತಹ ಘಟಾನುಘಟಿಗಳಿಗೆ ಸಾಧ್ಯವಾಗದಿರುವುದನ್ನು ಕಾಂಬ್ಳಿ ಸಾಧಿಸಿದ್ದರು.1993 ರಲ್ಲಿ ಜೈಪುರದ ಇಂಗ್ಲೆಂಡ್ ಎದುರಿನ ಏಕದಿನ ಪಂದ್ಯದಂದು ಕಾಂಬ್ಳಿ ಜನ್ಮದಿನವಾಗಿತ್ತು. ಡ್ರೆಸಿಂಗ್ ರೂಮಿನಲ್ಲಿ ಪ್ಯಾಡ್ ಕಟ್ಟಿ ಅಂಗಣಕ್ಕೆ ಇಳಿಯುವಾಗ ಅಲ್ಲೇ ಇದ್ದ ಮನೋಜ್ ಪ್ರಭಾಕರ್, ಪ್ರವೀಣ್ ಆಮ್ರೆ, ಸಚಿನ್ ಒಂದೇ ಸ್ವರದಲ್ಲಿ” ಹ್ಯಾಪಿ ಬರ್ತಡೇ ಮ್ಯಾನ್” ಅಂದರು. ಅಂಗಣದಲ್ಲಿ ಇಂದು ಸೆಂಚುರಿ ಬಾರಿಸದಿದ್ದರೆ ಯಾವ ಬರ್ತಡೆಯೂ ಇಲ್ಲ ಎಂದರು ಕಾಂಬ್ಳಿ. ಅಂಗಣದಲ್ಲಿ ಬ್ಯಾಟಿಂಗಿನ ಇನ್ನೊಂದು ತುದಿಯಲ್ಲಿ ಅಜರುದ್ದೀನ್ ಇದ್ದರು. ನಾಯಕ ಮಾತ್ರವಲ್ಲ ಹಿರಿಯ ಆಟಗಾರರಾಗಿದ್ದ ಅಜರ್ ಗೆ ಕಾಂಬ್ಳಿ “ಮುಜೆ ಆಜ್ ಸೆಂಚುರಿ ಮಾರನಾ ಹೈ. ಸ್ಟ್ರೈಕ್ ಮುಜೆ ಜ್ಯಾದಾ ದೇನಾಜಿ” ಎಂದಿದ್ದರು. ಜೀವನದ ಮೊದಲ ಸೆಂಚುರಿ ಮೊದಲೇ ಹೇಳಿ ಬಾರಿಸಿದ ಮಹಾನ್ ಬ್ಯಾಟ್ಸ್‌ಮನ್‌ ಈ ಕಾಂಬ್ಳಿ. 21ರ ಹರೆಯದಲ್ಲಿ ಹುಟ್ಟುಹಬ್ಬದ ದಿನವೇ ಸೆಂಚುರಿ ಬಾರಿಸಿದ ಜಗತ್ತಿನ ಮೊದಲ ಆಟಗಾರರಾದರು. ವಿಶ್ವ ಕ್ರಿಕೆಟಿನ ದಂತಕಥೆ ಎಂದು ಪರಿಗಣಿತರಾದ ಇಂಗ್ಲೆಂಡಿನ ವ್ಯಾಲಿ ಹ್ಯಾಮಂಡ್ ಮತ್ತು ಆಸ್ಟ್ರೇಲಿಯಾದ ಸರ್ ಡಾನ್ ಬ್ರಾಡ್ ಮನ್ ನಂತರ ಟೆಸ್ಟ್ ನಲ್ಲಿ ಸತತ ಎರಡು ದ್ವಿಶತಕ ಸಿಡಿಸಿದ್ದು ಆ ಕಾಲಕ್ಕೆ ಕಾಂಬ್ಳಿ ಮಾತ್ರ. 1934ರ ನಂತರ ಯಾರೂ ಮಾಡದ ಈ ಸಾಧನೆಯನ್ನು ಸರಿಸುಮಾರು 70 ವರ್ಷಗಳ ನಂತರ ಕಾಂಬ್ಳಿ ಮಾಡಿದ್ದರು. ದಿನಕಳೆದಂತೆ ಒಂದೊಂದೇ ದಾಖಲೆಗಳನ್ನು ಪುಡಿಗಟ್ಟುತ್ತಾ ಸಾಗಿದರು. ಖ್ಯಾತ ವೀಕ್ಷಕ ವಿವರಣೆಕಾರ ಹೆನ್ರಿ ಬ್ಲೋಫಿಲ್ಡ್ ಮುಂದಿನ ದಿನಗಳಲ್ಲಿ ಕಾಂಬ್ಳಿಯಿಂದ ವಿಶ್ವ ಕ್ರಿಕೆಟಿನ ಬೌಲರುಗಳ ಮಹಾ ಮಾರಣಹೋಮ ನಡೆಯಲಿದೆ ಎಂದರು. ಅಂಗಣದಲ್ಲಿ ಕಾಂಬ್ಳಿಯಿದ್ದರೆ ಯಾರೂ ಲಾರಾ-ಸಚಿನ್ ಬಗ್ಗೆ ಮಾತನಾಡುತ್ತಿರಲಿಲ್ಲ. ಜಾಗತಿಕ ಕ್ರಿಕೆಟಿನ ಮಹಾಸ್ಫೋಟವೆಂದು ಪರಿಗಣಿತವಾಗಿ ಸರ್ವರ ಆಕರ್ಷಣೆಯ ಕೇಂದ್ರಬಿಂದು ಕಾಂಬ್ಳಿಯೇ ಆಗಿದ್ದರು. ನಾಯಕ ಅಜರುದ್ದೀನ್ ಇವರು ಬಯಸುತ್ತಿದ್ದ ಕ್ರಮಾಂಕದಲ್ಲಿ ಆಡಲು ಅವಕಾಶ ನೀಡುತ್ತಿದ್ದರು. ಇಂತಿಪ್ಪ ಕಾಂಬ್ಳಿ ಯಶಸ್ಸಿನ ಅಮಲಿನಲ್ಲಿ ಬದಲಾಗಿಬಿಟ್ಟರು.


ಫೋಟೋ ಕೃಪೆ : economic times

ತನಗೆ ಸಿಗುತ್ತಿರುವ ವಿಪರೀತ ಮಾರ್ಯಾದೆ- ಮನ್ನಣೆಯಿಂದಾಗಿ ಇತರ ಆಟಗಾರರ ಬಗ್ಗೆ ತಾತ್ಸಾರ ಮನೋಭಾವನೆ ಬೆಳೆಯತೊಡಗಿತು. ಹಿರಿಯ ಆಟಗಾರರಾದ ಕಪಿಲ್, ಪ್ರಭಾಕರ್, ಅಜರುದ್ದೀನ್, ಸಿದ್ಧು, ವೆಂಕಟಪತಿ ರಾಜು, ಮಾಂಜ್ರೇಕರರಿಗೆ ಕಾಂಬ್ಳಿಯ ವರ್ತನೆ ಹಿಡಿಸದಾಯಿತು. ಯಶಸ್ಸು ಕಾಂಬ್ಳಿಯ ಮನಸ್ಥಿತಿ ಮಾತ್ರವಲ್ಲ ಜೀವನಶೈಲಿಯನ್ನೂ ಬದಲಿಸಿತು. ಚಿತ್ರನಟಿಯರೊಂದಿಗೆ ವಿಪರೀತ ಸುತ್ತಾಟ, ತಡರಾತ್ರಿಯವರೆಗಿನ ಪಾರ್ಟಿಗಳು, ವಿಲಕ್ಷಣ ವರ್ತನೆ, ತಂಡದ ಸದಸ್ಯರೊಂದಿಗಿನ ಜಗಳ, ಉಡಾಫೆಗಳು, ನಾಯಕ ಮತ್ತು ಆಯ್ಕೆ ಸಮಿತಿಯ ವಿರುದ್ಧದ ಅನಾವಶ್ಯಕ ಹೇಳಿಕೆಗಳು ಕಾಂಬ್ಳಿಯ ಕ್ರೀಡಾಜೀವನಕ್ಕೆ ಹಾನಿಮಾಡಲು ಆರಂಭಿಸಿದವು. ಬಾಲ್ಯದ ಗೆಳೆಯ ಸಚಿನ್ ಕೂಡ ಗೆಳೆಯನ ಬದಲಾದ ಮನಸ್ಥಿತಿ ಕಂಡು ಅವರಿಂದ ಮಾನಸಿಕವಾಗಿ ದೂರವಾಗತೊಡಗಿದರು. ಹೀಗಾಗಿ 9 ಬಾರಿ ರಾಷ್ಟೀಯ ತಂಡದಿಂದ ಹೊರಹೋಗಿ ಮತ್ತೆ ಮತ್ತೆ ಆಯ್ಕೆಯಾದರು. ಈ ಬಾರಿ ಸುಧಾರಿಸಲೂಬಹುದು ಎಂಬುದು ನಿರಂತರ ಅವರ ಆಯ್ಕೆಗಳಿಗಿದ್ದ ಸಬೂಬುಗಳಾಗಿದ್ದವು. ಕಾಂಬ್ಳಿಯ ಈ ಹಾವು ಏಣಿಯಾಟದ ನಡುವೆ ಸಚಿನ್ ಭಾರತೀಯ ಕ್ರಿಕೆಟಿನಲ್ಲಿ ಪ್ರಜ್ವಲಿಸತೊಡಗಿದರು. ಇದು ಕಾಂಬ್ಳಿಯನ್ನು ಮತ್ತಷ್ಟು ಕಂಗೆಡಿಸಿತು. ಶಾಲಾದಿನಗಳಿಂದ ಹಿಡಿದು ಅಲ್ಲಿಯವರೆಗೆ ಸಚಿನ್ ರನ್ನು ಮೀರಿ ಮಿನುಗಿದ್ದ ಕಾಂಬ್ಳಿಗೆ ತಾನು ಸಚಿನ್ ಗಿಂತ ಹಿಂದೆ ಬಿದ್ದದ್ದು ಅಷ್ಟು ಸರಿಕಾಣದಾಯಿತು. ಅಶಿಸ್ತನ್ನು ಸಹಿಸಿಕೊಂಡೇ ಅವಕಾಶಗಳ ಮೇಲೆ ಅವಕಾಶ ಕೊಟ್ಟು ರೋಸಿಹೋದ ಅಜರುದ್ದೀನ್ ಕಾಂಬ್ಳಿಗೆ ಕೊಡುತ್ತಿದ್ದ ಅವಕಾಶಗಳನ್ನೆಲ್ಲ ಸಚಿನ್ ಗೆ ನೀಡತೊಡಗಿದರು.

1996ರ ವಿಶ್ವಕಪ್ಪ್ ನ ಕೊಲ್ಕತ್ತಾದ ಸೆಮಿಫೈನಲ್ ಆರಂಭಕ್ಕೆ ಕೆಲಗಂಟೆಗಳ ಮುಂಚೆ ಭಾರತೀಯ ತಂಡದ ಪೆವಿಲಿಯನ್ ಒಳಗೆ ವಿಚಿತ್ರ ಸನ್ನಿವೇಶ ಎದುರಾಯಿತು. ಒಂದೊಮ್ಮೆ ಟಾಸ್ ಗೆದ್ದರೆ ಮೊದಲು ಫೀಲ್ಡಿಂಗ್ ಮಾಡಲಾಗುವುದೆಂದು ಕೋಚ್ ಅಜಿತ್ ವಾಡೇಕರ್, ನಾಯಕ ಅಜರುದ್ದೀನ್ ಮತ್ತು ಹಿರಿಯ ಆಟಗಾರರು ತೀರ್ಮಾನಿಸಿದ್ದರು. ಆ ವಿಶ್ವಕಪ್‌ ನಲ್ಲಿ ಎದುರಾಳಿ ಶ್ರೀಲಂಕಾ ಅದೆಂತಹ ಮೊತ್ತವನ್ನೂ ಬೆನ್ನಟ್ಟಿ ಬಂದು ಹೊಡೆಯುತಿತ್ತು. ಸಾಮಾನ್ಯವಾಗಿ ವಿಶ್ವಕಪ್‌ ಗೆ ಪ್ರತಿಯೊಂದು ಕ್ರಿಕೆಟ್ ಆಡುವ ದೇಶಗಳು ವಿಶೇಷವಾದ ಯೋಜನೆ-ಯೋಚನೆಗಳೊಂದಿಗೆ ಕೂಟದ ಒಂದೆರಡು ವರ್ಷಗಳ ಮುಂಚೆಯೇ ತಯಾರಿಯನ್ನು ನಡೆಸುತ್ತವೆ. ಆದರೆ ಈ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಹಿಂದೆಂದೂ ಕ್ರಿಕೆಟ್‌ ಜಗತ್ತು ಕಂಡುಕೇಳರಿಯದ ವಿಚಿತ್ರವೂ, ಅನಿರೀಕ್ಷಿತವೂ ಆದ ರೀತಿಯಲ್ಲಿ ತಂಡದೊಳಗೇ ಒಂದು ‘ಸೂಸೈಡ್ ಟೀಮ್” ಕಟ್ಟಿಕೊಂಡು ಬಂದಿತು. ಇದು ಕ್ರಿಕೆಟ್ ಇತಿಹಾಸದಲ್ಲೇ ಪ್ರಥಮ. ಇವರ ತಂಡದೊಳಗಿನ ಈ ಸೂಸೈಡ್ ಟೀಮಿನಲ್ಲಿ ಮೂಲತಃ ಸ್ಪಿನ್ನರ್ ಮತ್ತು ಕೆಳ ಕ್ರಮಾಂಕದಲ್ಲಿ ಅಪರೂಪಕ್ಕೆ ಒಂದಷ್ಟು ರನ್‌ಗಳನ್ನು ಸೇರಿಸುತ್ತಿದ್ದ ಸನತ್ ಜಯಸೂರ್ಯ, ಕೀಪರ್ ರಮೇಶ ಕಲುವಿತರಣ ಮತ್ತು ಎಡಗೈ ದಾಂಡಿಗ ಅಸಂಕಾ ಗುರುಸಿಂಘ ಇದ್ದರು. ಲಂಕಾ ನಾಯಕ ರಣತುಂಗ, ಫೀಲ್ಡರ್ ಗಳು ಮೊದಲ 15 ಓವರ್ ಗಳಲ್ಲಿ ನಿಯಮದನುಸಾರ ಒಳಗಿರುವಾಗ ಅವರ ತಲೆಯ ಮೇಲಿಂದ ಮತ್ತು ಗ್ಯಾಪ್ ಗಳ ಮಧ್ಯೆ ಹೇಗೆ ಬಾರಿಸಬೇಕೆಂಬ ಬಗ್ಗೆ ಇವರಿಗೆ ಕೊಲಂಬೋದಲ್ಲಿ ತಿಂಗಳುಗಟ್ಟಲೆ ತರಬೇತಿಯನ್ನು ನೀಡಿದ್ದ. ಅದರಲ್ಲೂ ಜಯಸೂರ್ಯ ಮತ್ತು ಕಲುವಿತರಣರಿಗೆ “ನೀವು ಲೆಕ್ಕಕ್ಕಿಲ್ಲದ ವಿಕೆಟ್. ನಿಮ್ಮ ಕೆಲಸ ಬರೀ ಬಾರಿಸುವುದು ಮತ್ತು ಬೌಲರ್‌ಗಳ ದಿಕ್ಕು ತಪ್ಪಿಸುವುದು, ಇಲ್ಲವೋ ಸೀದಾ ಬಂದು ಪೆವಿಲಿಯನಿನಲ್ಲಿ ಕೂರುವುದು ಅಷ್ಟೇ” ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದ. ಇವರಿಗಾಗಿ ಸದಾ ಆರಂಭಿಕನಾಗಿ ಆಡುತ್ತಿದ್ದ ರೋಷನ್ ಮಹಾನಾಮನನ್ನು ಕೆಳಕ್ರಮಾಂಕಕ್ಕೆ ತಳ್ಳಿದ. ಅಸಂಕಾ ಗುರುಸಿಂಘನಿಗೂ ಹೆಚ್ಚುಕಡಿಮೆ ಇದೇ ಮಾದರಿಯ ಆದೇಶವಿತ್ತು. ರಣತುಂಗ ಯೋಜನೆಯಂತೆ ಆರಂಭಿಕರಿಬ್ಬರು ಬೌಲರ್ ಗಳ ಮಾರಣಹೋಮ ನಡೆಸತೊಡಗಿದರು. ದೆಹಲಿಯಲ್ಲಿ ನಡೆದ ಲೀಗ್ ಪಂದ್ಯವೊಂದರಲ್ಲಿ ಭಾರತದ ಮನೋಜ್ ಪ್ರಭಾಕರ್ ಭವಿಷ್ಯವನ್ನೇ ನುಂಗಿಬಿಟ್ಟರು. ಆ ಪಂದ್ಯದಲ್ಲಿ ವೇಗದ ಬೌಲರ್ ಆಗಿದ್ದ ಪ್ರಭಾಕರ್ ಜಯಸೂರ್ಯ ಪ್ರಹಾರಕ್ಕೆ ಸಿಕ್ಕಿ ಅದೆಷ್ಟು ಒತ್ತಡಕ್ಕೆ ಒಳಗಾಗದರೆಂದರೆ ವೇಗದ ಬೌಲಿಂಗ್ ಬಿಟ್ಟು ಸ್ಪಿನ್ ಬೌಲಿಂಗ್ ಮಾಡತೊಡಗಿದರು. ಮಾತ್ರವಲ್ಲ ರೋಸಿಹೋದ ಪ್ರಭಾಕರ್ ಪಂದ್ಯದ ನಂತರ ನಿವೃತ್ತಿಯನ್ನೇ ಘೋಷಿಸಿಬಿಟ್ಟರು. ಆರಂಭಿಕ ಬ್ಯಾಟ್ಸ್‌ಮನ್‌ ಮಾತ್ರವಲ್ಲ ಆರಂಭಿಕ ಬೌಲರ್ ಆಗಿಯೂ ಬಹಳಷ್ಟು ಸಾಧನೆ ಮಾಡಿದ ಅಪರೂಪದ ಸಾಧಕ ಈ ಮನೋಜ್ ಪ್ರಭಾಕರ್. ಇವರ ಯಾರ್ಕರ್ ಗಳು ಬಹಳ ನಿಖರವಾಗಿರುತ್ತಿದ್ದವು. ಜಯಸೂರ್ಯ ಇವರ ಕ್ರೀಡಾ ಬದುಕನ್ನು ದುರಂತಮಯವಾಗಿ ಅಂತ್ಯಗೊಳಿಸಿದ. ಆ ವಿಶ್ವಕಪ್‌ ನಲ್ಲಿ ರಣತುಂಗನ ಈ ಸೂಸೈಡ್ ಟೀಮ್ ಹಲವು ಬೌಲರುಗಳ ಭವಿಷ್ಯವನ್ನು ಬಲಿ ಪಡೆಯಿತು. ಇವರ ಜೊತೆಗೆ ಅರವಿಂದ ಡಿಸಿಲ್ವ, ರಣತುಂಗ, ತಿಲಕರತ್ನ, ಮಹಾನಾಮರ ರೌದ್ರವತಾರವೂ ತಾರಕದಲ್ಲಿದ್ದ ವಿಶ್ವಕಪ್ ಅದು. ಹಾಗಾಗಿ ಅದೆಂತಹ ಒತ್ತಡವನ್ನು ಮೀರಿ ನಿಂತು ರನ್ ಬೆನ್ನಟ್ಟಿ ಬಂದು ಪಂದ್ಯ ಗೆಲ್ಲುತ್ತಿದ್ದರವರು. ಆದ್ದರಿಂದ ಟಾಸ್ ಗೆದ್ದರೆ ಮೊದಲು ಫೀಲ್ಡಿಂಗ್ ಮಾಡಲು ಆಲೋಚಿಸಿದ್ದು ಸರಿಯೇ ಇತ್ತು. ಅದೊಂದು ಸಾಮೂಹಿಕವಾಗಿ ಸಮಾಲೋಚಿಸಿದ ನಂತರ ತೆಗೆದುಕೊಂಡ ನಿರ್ಧಾರವಾಗಿತ್ತು.

ಆದರೆ ಅಜರುದ್ದೀನ್ ಟಾಸಿಗೆ ಹೊರಡುವ ಕೆಲವೇ ನಿಮಿಷಗಳ ಮುಂಚೆ ಇದ್ದಕ್ಕಿದ್ದಂತೆ ತಂಡದ ಡ್ರೆಸ್ಸಿಂಗ್ ರೂಮಿನೊಳಗೆ, ಎರಡನೇಯ ಇನ್ನಿಂಗ್ಸ್ ವೇಳೆ ಪಿಚ್ಚಿನ ಬಿರುಕುಗಳು ಹೆಚ್ಚು ತೆರೆದುಕೊಳ್ಳಲಿರುವ ಮತ್ತು ಅದು ಸಾಮಾನ್ಯ ಸ್ಪಿನ್ಬರುಗಳ ಎಸೆತಗಳಿಗೂ ವಿಪರೀತ ತಿರುವು ನೀಡುವ ಸಂಭಾವ್ಯತೆಯ ಬಗ್ಗೆ ಸುದ್ದಿ ಹರಡಿ ಗುಸುಗುಸು ಆರಂಭವಾಯಿತು. ಸುದ್ದಿ ಕೇಳಿ ನವಜ್ಯೋತ್ ಸಿಂಗ್ ಸಿದ್ಧು ಕೂತಲ್ಲಿ ಕೂರಲಾಗದೆ ಚಡಪಡಿಸುತ್ತಿದ್ದರು. ಸಚಿನ್, ಅಜರ್ ಮತ್ತು ವಾಡೇಕರ್ ಹಿಂದೆಯೇ ಸುತ್ತುತಿದ್ದರು. ಸುದ್ದಿಯು ನಂಬಲರ್ಹ ಮೂಲಗಳಿಂದಲೇ ಬಂದಿತ್ತು. ಎರಡನೇಯ ಇನ್ನಿಂಗ್ಸ್ ಆಡಲು ಸಾಧ್ಯವೇ ಇಲ್ಲ ಎಂಬಂತಹ ಮಾತುಗಳೂ ತೇಲಿ ಬಂದವು. ಈ ಆಶ್ಚರ್ಯಕರ ಸುದ್ದಿ ಕೇಳಿ ಇಡೀ ತಂಡ ಗೊಂದಲಕ್ಕೆ ಸಿಲುಕಿತು. ಅಜಿತ್ ವಾಡೇಕರ್, ಅಜರುದ್ದೀನ್ ,ಸಿದ್ಧು, ಮಾಂಜ್ರೇಕರ್, ಜಡೇಜಾ, ಸಚಿನ್, ಶ್ರೀನಾಥ್, ಮೊಂಗಿಯಾ ಈ ವಿಚಾರವನ್ನು ಬಹಳ ಹೊತ್ತು ಚರ್ಚಿಸಿದರು. ನಾಯಕ ಅಜರುದ್ದೀನ್ ಗೆ ಈಡನ್ ಗಾರ್ಡನ್ಸ್ ಬಹಳ ಇಷ್ಟದ ಅಂಗಣ. ಅಲ್ಲಿ ಅವರು ನಿರಂತರ ಉತ್ತಮ ಸಾಧನೆ ಮಾಡಿದವರು. ಅಂಗಣದ ಬಗ್ಗೆ ಅವರಿಗೆ ಪ್ರೀತಿ ಮಾತ್ರವಲ್ಲ ಸರಿಯಾದ ಅರಿವೂ ಇತ್ತು. ಅಚಾನಕ್ ಆಗಿ ಬಂದ ಸುದ್ದಿಯಂತೆ ಹಿಂದೆಂದೂ ಆ ಪಿಚ್ ಹಾಗೇ ವರ್ತಿಸಿಲ್ಲ. ಈಗ ಅನಿರೀಕ್ಷಿತವಾಗಿ ಹಾಗೆ ವರ್ತಿಸಲಾರದು ಎಂದು ಬಂದ ಸುದ್ದಿಯನ್ನು ತಳ್ಳಿಹಾಕಿದರು. ಉಳಿದ ಆಟಗಾರರೂ ಅಜರ್ ಅಭಿಪ್ರಾಯವನ್ನು ತಮ್ಮ ಅನುಭವದ ಆಧಾರದ ಮೇಲೆ ಬೆಂಬಲಿಸಿದರು. ಈ ಸಮಾಲೋಚನೆಯನ್ನು ಕಾಂಬ್ಳಿ ದೂರ ನಿಂತು ಗಮನಿಸುತ್ತಿದ್ದರು. ಭಾರತ ಟಾಸ್ ಗೆದ್ದಿತು. ಗೊಂದಲ-ಆತಂಕಗಳ ನಡುವೆಯೂ, ತೀರ್ಮಾನಿಸಿದಂತೆ ಫೀಲ್ಡಿಂಗ್ ಆಯ್ದುಕೊಳ್ಳಲಾಯಿತು. ಆದರೂ ಆಟಗಾರರ ಮನಸ್ಸಿನೊಳಗೆ ಅದೇನೋ ತಳಮಳ. ಸಾಗರಸದೃಶವಾದ ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ಪಂದ್ಯ ಆರಂಭವಾಯಿತು. ಬಿರುಗಾಳಿಯಂತೆ ಲಂಕಾ ಪಾಳಯಕ್ಕೆ ನುಗ್ಗಿದ ಜಾವಗಲ್ ಶ್ರೀನಾಥ್ ನೋಡನೋಡುತ್ತಿದ್ದಂತೆಯೇ ಆ ವಿಶ್ವಕಪ್ ನಲ್ಲಿ ಭಾರೀ ದಾಂಧಲೆ ಮಾಡುತ್ತಿದ್ದ ಜಯಸೂರ್ಯ, ಕಲುವಿತರಣ, ಗುರುಸಿಂಘರನ್ನು ಚೆಂಡಾಡಿದರು. ಪಂದ್ಯ ಆರಂಭವಾದ ಕೆಲವೇ ನಿಮಿಷದಲ್ಲಿ ಸ್ಕೋರ್ ಬೋರ್ಡಿನಲ್ಲಿ ಲಂಕನ್ನರ ತಲೆಯೇ ಹಾರಿಹೋಗಿತ್ತು. ಲಂಕಾ ಕೋಚ್ ಡ್ಯಾವ್ ವಾಟ್ ಮೋರ್ ಮತ್ತು ನಾಯಕ ರಣತುಂಗ ಜಾವಗಲ್ ಶ್ರೀನಾಥ್ ಅಬ್ಬರ ಕಂಡು ಹವಾನಿಯಂತ್ರಿತ ಪೆವಿಲಿಯನ್ ಒಳಗೂ ಬೆವರತೊಡಗಿದರು. ಶ್ರೀನಾಥ್ ಮೊದಲ ಸ್ಪೆಲ್ ಮುಗಿಯುವವರೆಗೆ ಸ್ಟ್ರೈಕರ್ ಮತ್ತು ನಾನ್ ಸ್ಟ್ರೈಕರ್ ಇಬ್ಬರಿಗೂ ತೆಪ್ಪಗಿರುವಂತೆ ಬೆದರಿದ ವಾಟ್ ಮೋರ್ ಅಂಗಣಕ್ಕೆ ತುರ್ತು ಸಂದೇಶ ರವಾನಿಸಿದ.

ಫೋಟೋ ಕೃಪೆ : wisden

ಈ ಆಘಾತದ ನಂತರ ಶ್ರೀಲಂಕಾ, ಪ್ರಚಂಡ ಫಾರ್ಮನಲ್ಲಿದ್ದ ಅರವಿಂದ ಡಿ’ಸಿಲ್ವ, ರಣತುಂಗ, ಮಹಾನಾಮ, ಹಶಾನ್ ತಿಲಕರತ್ನೆ ಸಾಹಸದಿಂದಾಗಿ ತೆವಳಿಕೊಂಡೇ 250ರ ಸಾಮಾನ್ಯ ಮೊತ್ತ ದಾಖಲಿಸಿತು. ಗೆದ್ದು ಫೈನಲಿಗೆ ಲಾಹೋರಿಗೆ ಹೋಗುವ ಹೊಂಗನಸು ಕಾಣುತ್ತಾ ಭಾರತದ ಆರಂಭಿಕರಿಬ್ಬರು ಅಂಗಣಕ್ಕಿಳಿದರು. ಬೆಂಗಳೂರಿನ ಕ್ವಾರ್ಟರ್‌ ಫೈನಲಿನಲ್ಲಿ ಪಾಕಿಸ್ತಾವನ್ನು ಕಾಡಿದ್ದ ಸಿದ್ಧು ಬೇಗ ಔಟಾದರೂ, ಸಚಿನ್ ಮತ್ತು ಮಾಂಜ್ರೇಕರ್ ಉತ್ತಮ ಜೊತೆಯಾಟ ನೀಡಿದಾಗ ಭಾರತ ಸುಲಭದಲ್ಲಿ ಗೆಲುವು ದಾಖಲಿಸುವುದೆಂದೇ ಭಾವಿಸಲಾಗಿತ್ತು. ಅಲ್ಲಿಯವರೆಗೆ ಎಲ್ಲವೂ ಸರಿಯೇ ಇತ್ತು. ಆದರೆ ಬಾನಿನಲ್ಲಿ ಸೂರ್ಯ ಮರೆಯಾಗಿ 15 ಓವರ್ ಗಳ ಆಟ ಮುಗಿಯುತ್ತಿದ್ದಂತೆ ಈಡನ್ ಗಾರ್ಡನ್ನಿನ ಅಂಗಣ ಭಾರತವನ್ನು ನುಂಗಲು ಬಾಯ್ತೆರೆಯಿತು. ವಿಶ್ವಾದ್ಯಂತ ಭಾರತದ ಜಯವನ್ನು ಹಂಬಲಿಸಿ ಟಿವಿಯ ಮುಂದೆ ಕೂತ ಕೋಟ್ಯಾಂತರ ಅಭಿಮಾನಿಗಳಿಗೆ ಮತ್ತು ಲಕ್ಷಕ್ಕಿಂತಲೂ ಹೆಚ್ಚು ಬಂದು ಈಡನ್ ನಲ್ಲಿ ಪ್ರತ್ಯಕ್ಷವಾಗಿ ಕುಳಿತ ಪ್ರೇಕ್ಷಕರಿಗೆ ಅಲ್ಲಿಯವರೆಗೆ ಮುಂದಾಗುವ ಆಘಾತಕಾರಿ ವಿದ್ಯಮಾನಗಳ ಸಣ್ಣ ಸುಳಿವೂ ಇರಲಿಲ್ಲ. ಇದ್ದಕ್ಕಿದ್ದಂತೆ ಎದುರಾಳಿ ನಾಯಕ ಅರ್ಜುನ ರಣತುಂಗ ಪಿಚ್ಚಿನ ಹತ್ತಿರ ಆಗಾಗ ಬಂದು ಅದೇನೋ ಗಮನಿಸತೊಡಗಿದ. ಅವನ ಮುಖದಲ್ಲಿ ಸಣ್ಣಗೆ ನಗೆ ಮೂಡಿತು. ಏಕಾಏಕಿ ಸ್ಪಿನ್ನರ್ ಗಳಾದ ಧರ್ಮಸೇನ, ಜಯಸೂರ್ಯ, ಮುರುಳೀಧರನ್ ರನ್ನು ಕರೆದು ಗಂಭೀರವಾಗಿ ಸಮಾಲೋಚಿಸಿದ.16ನೇ ಓವರ್ ಹಾಕಲು ಬಂದ ಮುರಳೀಧರನ್ ಓವರಿನ ಮೊದಲ ಆಫ್ ಸ್ಪಿನ್ ಎಸೆತ ಪಿಚ್ ಬಿದ್ದ ಮೇಲೆ ಬೌನ್ಸ್ ತೆಗೆದುಕೊಳ್ಳದೆ ಆಫ್ ಸ್ಟಂಪ್ ಸನಿಹದಲ್ಲೇ ತೆವಳಿಕೊಂಡು ವಿಚಿತ್ರ ರೀತಿಯಲ್ಲಿ ಡಾಟ್ ಬಾಲ್ ಆಗಿ ಕೀಪರ್ ಕಲುವಿತರಣ ಕೈಸೇರಿತು. ಬಾಲ್ ಬಿದ್ದ ರೀತಿ ಕಂಡು ಸ್ವತಃ ಸಚಿನ್ ಮತ್ತು ಮಾಂಜ್ರೇಕರ್ ದಂಗಾಗಿಹೋದರು. ಮುರಳೀಧರನ್ ಸ್ಕ್ವೇರ್ ಲೆಗ್ ನಲ್ಲಿ ನಿಂತಿದ್ದ ರಣತುಂಗರತ್ತ ನೋಡಿದ. ರಣತುಂಗ ತನ್ನ ರೌಂಡ್ ಹ್ಯಾಟ್ ತೆಗೆದು ತಲೆಯಲ್ಲಾಡಿಸಿದ. ಅವನಿಗೆ ವಿಷಯ ಅರ್ಥವಾಗಿತ್ತು. ಅಪರೂಪಕ್ಕೆ ಬೌಲಿಂಗ್ ಮಾಡುವ ಅರವಿಂದ ಡಿ’ ಸಿಲ್ವನಿಗೂ ಸಿದ್ದನಿರುವಂತೆ ಸಂಜ್ಞೆ ಮಾಡಿದ. ಎರಡೂ ದಿಕ್ಕಿನಿಂದ ಒಮ್ಮೆಗೆ ಹಂತಹಂತವಾಗಿ 4 ಸ್ಪಿನ್ನರ್ ಗಳನ್ನು ಇಳಿಸಿ ಭಾರತವನ್ನು ಮುಗಿಸುವುದು ರಣತುಂಗ ರಣತಂತ್ರವಾಗಿತ್ತು. ಲಂಕಾ ಪಾಳಯದಲ್ಲಿ ಕಣ್ಸನ್ನೆ-ಕೈಸನ್ನೆಗಳಲ್ಲೇ ನಡೆಯುತ್ತಿದ್ದ ಬಲೆ ಹಣೆಯುವ ಕ್ರಿಯೆ ಗಮನಿಸಿದ ಸಚಿನ್ -ಮಾಂಜ್ರೇಕರ್ ಗೆ ಪಂದ್ಯ ಆರಂಭಕ್ಕೂ ಮುನ್ನ ಡ್ರೆಸ್ಸಿಂಗ್ ರೂಮಿಗೆ ಬಂದ ಸುದ್ದಿಯ ವಾಸನೆ ಮೆಲ್ಲನೆ ಬರತೊಡಗಿತು. ಪಿಚ್ ಬಿರುಕುಗಳು ಬಾಯ್ತೆರೆಯುತ್ತಿರುವುದು ಮತ್ತು ಚಾಣಾಕ್ಷ ರಣತುಂಗ ಬಾಯ್ತೆರೆದ ಪಿಚ್ ಭಾಗವನ್ನು ಬೌಲರುಗಳಿಗೆ ತೋರಿಸಿ ಅದರ ಮೇಲೆಯೇ ಬಾಲ್ ಎಸೆಯುವಂತೆ ಸಿಂಹಳಿ ಭಾಷೆಯಲ್ಲಿ ಪಿಸುಮಾತಿನ ಮೂಲಕ ಸೂಚಿಸುತ್ತಿರುವುದು ಮಾಂಜ್ರೇಕರ್ ಚುರುಕು ಕಿವಿಗೆ ಕೇಳತೊಡಗಿತು.

ಫೋಟೋ ಕೃಪೆ : google

ರನ್ನಿಗಾಗಿ ತಿಣುಕಾಟ ಆರಂಭವಾಯಿತು. ಈಡನ್ ಗಾರ್ಡನ್ನಿನ ಲಕ್ಷದಷ್ಟು ಪ್ರೇಕ್ಷಕರಿಗೆ ಇದ್ಯಾವುದರ ಅರಿವೇ ಇರಲಿಲ್ಲ. ಬಾಲ್ ಇರುವುದೇ ಬ್ಯಾಟಿನಿಂದ ಬಡಿದಟ್ಟಲು ಎಂಬುದು ಅವರವರ ತಂಡ ಬ್ಯಾಟಿಂಗ್ ಮಾಡುವಾಗ ಇರುವ ಪ್ರೇಕ್ಷಕ ಮನಸ್ಥಿತಿ. ಟಾಸ್ ಗೆದ್ದು ಫೀಲ್ಡಿಂಗ್ ತೆಗೊಂಡಾಗಲೇ ಅರ್ಧ ಗೆದ್ದೆವೆಂದು ಭಾವಿಸಿದ ಪ್ರೇಕ್ಷಕರು, ಶ್ರೀನಾಥ್ ಆರಂಭದ ಓವರ್ ಗಳಲ್ಲೇ ಜಯಸೂರ್ಯ, ಕಲುವಿತರಣ, ಗುರುಸಿಂಘ ಉದುರಿಸಿದಾಗ ಗೆದ್ದೇಬಿಟ್ಟೆವು ಎಂದು ಸಂಭ್ರಮಿಸಿದರು. ಪಿಚ್ ಭಯಾನಕವಾಗಿ ಚಿತ್ರವಿಚಿತ್ರವಾಗಿ ವರ್ತಿಸಿದರೂ ತೆಂಡೂಲ್ಕರ್ ಛಲಬಿಡದೆ ಕ್ರೀಸಿನಲ್ಲಿ ಬೇರೂರಿ ನಿಂತರು. ಆದರೆ ಅದೆಷ್ಟೇ ಜಾಗರೂಕರಾಗಿ ರಕ್ಷಣಾತ್ಮಕವಾಗಿ ಆಡಿದರೂ ಆ ಚಂಚಲ ಪಿಚ್ಚಿನ ಮೇಲೆ ಬಾಲ್ ಒಂದೋ ವಿಕೆಟ್ ಇಲ್ಲವೇ ದೇಹದ ಮೇಲೆಯೇ ಬರುತಿತ್ತು. ಹಾಗೆ ಇನ್ನಿಂಗ್ಸಿನ 23ನೇ ಓವರ್ ಹಾಕಲು ಬಂದ ಸಾಮಾನ್ಯ ಸ್ಪಿನ್ನರ್ ಸನತ್ ಜಯಸೂರ್ಯ ಎಸೆತವೊಂದು ಸಚಿನ್ ರ ಮೈಮೇಲೆ ಬಂದು ವಂಚಿಸಿಯೇ ಬಿಟ್ಟಿತು. ಅಲ್ಲಿಯವರೆಗೆ ಆ ರಾತ್ರಿಯೆಂಬುದು ಭಾರತೀಯ ಕ್ರಿಕೆಟ್ ಇತಿಹಾಸದ ಕರಾಳ ರಾತ್ರಿಯಾಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಔಟಾಗಿ ಹೋಗುವಾಗ ಸಚಿನ್ ಅಜರುದ್ದೀನ್ ಗೆ ತಾನು ಔಟಾದ ತುದಿಯ ಪಿಚ್ ತುಸು ಹೆಚ್ಚೇ ಅಪಾಯಕಾರಿಯಾಗಿದೆ, ಜಾಗ್ರತೆಯಾಗಿರಿ ಎಂದು ಹೇಳಿ ಕಳುಹಿಸಿದ್ದರು. ಬ್ಯಾಟಿಂಗಿಗೆ ಬಂದು ಪಿಚ್ ಮಾಡುತ್ತಿರುವ ರಂಪಾಟ ಮತ್ತು ಆಂತಕಿತರಾಗಿ ನಿಂತಿದ್ದ ಮಾಂಜ್ರೇಕರ್ ಮುಖ ನೋಡಿ ನಾಯಕ ಅಜರುದ್ದೀನ್ ಕೈಕಾಲುಗಳು ಕಂಪಿಸತೊಡಗಿದವು. ಆ ಆಘಾತದಿಂದ ಚೇತರಿಸುವ ಮುಂಚೆಯೇ ಅಜರ್ ಗೆ ಕುಮಾರ ಧರ್ಮಸೇನ ಎಸೆದ ಎಸೆತ ನೇರ ಧರ್ಮಸೇನ ಕೈಗೇ ಬಂದು ಬಿತ್ತು. ನಾಯಕ ಧರೆಗುರುಳಿದ್ದು ನೋಡಿ ಭಾರತೀಯ ತಂಡದ ಜಂಘಾಬಲವೇ ಉಡುಗಿಹೋಯಿತು. ಒಬ್ಬರ ಹಿಂದೆ ಒಬ್ಬರು ಬ್ಯಾಟ್ಸ್‌ಮನ್‌ ಗಳು ಪೆವಿಲಿಯನ್ ಸೇರತೊಡಗಿದರು. ಹೋದವರೆಲ್ಲ ಹೋಗಲೇ ಇಲ್ಲ ಎಂಬಂತೆ ಪೆವಿಲಿಯನ್ ಗೆ ಬರುತ್ತಿರುವುದು ನೋಡಿ ವಾಡೇಕರ್ ಗೆ ಬಾಯಿಯೇ ಹೊರಡಲಿಲ್ಲ. ಔಟಾಗಿ ಬಂದ ಮಾಂಜ್ರೇಕರ್ ಆತಂಕಭರಿತರಾಗಿ ಸ್ಕೋರ್ 150 ದಾಟಿಸುವುದೂ ಕಷ್ಟವಿದೆ ಎಂದು ಒತ್ತಡದಲ್ಲಿ ಗಡಗಡ ನಡುಗುತ್ತಾ ನಿಂತಿದ್ದ ಸಿದ್ಧುಗೆ ಹೇಳಿದರು. ಲೆಗ್ ಸೈಡ್ ನಲ್ಲಿ ವೈಡ್ ಎಂದು ಬಿಟ್ಟ ಬಾಲುಗಳೂ ಬಂದು ವಿಕೆಟ್ ಉರುಳಿಸಿದವು. ಒಂದು ಕಡೆಯಲ್ಲಿ ಕಾಂಬ್ಳಿ 35 ಬಾಲುಗಳಲ್ಲಿ ಕಷ್ಟಪಟ್ಟು 10 ರನ್ ಗಳಿಸಿ ನಿಂತಿದ್ದರು. ಟಿವಿಯಲ್ಲಿ ನೋಡಿದ ಭಾರತೀಯರೆಲ್ಲರಿಗೂ ತಂಡದ ಈ ಅವಸ್ಥೆ ಕಂಡು ಬಹಳ ನಿರಾಶೆಯಾಯಿತು. ಈಡನ್ ನ ಪ್ರೇಕ್ಷಕರು ಕಣ್ಣೇದುರೇ ನಡೆದ ಈ ಆಘಾತಕಾರಿ ಪತನ ಕಂಡು ಭಾವನೆಗಳನ್ನು ಅದುಮಿಡಲಾಗದೇ ಹಿಂಸಾತ್ಮಕವಾಗಿ ವರ್ತಿಸಿದರು..ಕಾಂಬ್ಳಿ ಕ್ರೀಸಿನಲ್ಲಿದ್ದರೂ 35 ಬಾಲಿನಲ್ಲಿ 10 ರನ್ನಿಗಾಗಿ ಆ ಕಳಪೆ ಪಿಚ್ಚಿನಲ್ಲಿ ತಿಣುಕಾಡಿದ್ದು ನೋಡಿ ಇವರಿಂದಲೂ ಏನೂ ಮಾಡಲಾಗದು ಎಂಬ ತೀರ್ಮಾನಕ್ಕೆ ಬಂದು ಪ್ರೇಕ್ಷಕರು ಸ್ಟೇಡಿಯಮ್ ನಿಂದ ಹೊರನಡೆದರು. ವಿಶ್ವಕಪ್‌ ಗೆಲ್ಲುವ ಕನಸು ಭಗ್ನವಾಯಿತು. ಮ್ಯಾಚ್ ರೆಫ್ರೀ ಕ್ಲೈವ್ ಲಾಯ್ಡ್‌‌ ಆ ಅಪೂರ್ಣ ಪಂದ್ಯದ ವಿಜಯಿ ಶ್ರೀಲಂಕಾ ಎಂದು ಘೋಷಿಸುತ್ತಿದ್ದಂತೆ ಭಾರತೀಯ ಡ್ರೆಸಿಂಗ್ ರೂಮ್ ನಲ್ಲಿ ಆಟಗಾರರೆಲ್ಲರೂ ತೀವ್ರ ದು:ಖಕ್ಕೆ ಒಳಗಾದರು. ಸ್ವತಃ ಕಾಂಬ್ಳಿಯೂ ಕಣ್ಣೀರು ಸುರಿಸಿದರು. ಕ್ರೀಡೆಯಲ್ಲಿ ಸೋಲು ಗೆಲುವು ಸಹಜವಾಗಿ ಇರುವಂತದ್ದು. ಆದರೆ ಕಾಂಬ್ಳಿ ಈ ಸೋಲನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡು ತನಗೆ ತುಸು ಮೇಲಿನ ಕ್ರಮಾಂಕದಲ್ಲಿ ಕಳಿಸಿ ಇನ್ನೊಂದು ತುದಿಯಲ್ಲಿ ಯಾರಾದರೂ ಸಹಕರಿಸಿದ್ದರೆ ತಾನು ಪಂದ್ಯ ಗೆಲ್ಲಿಸುತ್ತಿದ್ದೆ, ಮೊದಲು ಫೀಲ್ಡಿಂಗ್ ಮಾಡುವ ನಿರ್ಣಯಕ್ಕೆ ಮ್ಯಾಚ್ ಫಿಕ್ಸಿಂಗ್ ಕಾರಣ ಎಂದು ಕಂಡಕಂಡಲ್ಲಿ ಹೇಳುತ್ತಾ ತಿರುಗಿದರು. ಕಾಂಬ್ಳಿಯ ಇಂತಹ ಬೇಜವಾಬ್ದಾರಿ ಹೇಳಿಕೆಗಳಿಗೆ ಕ್ರಿಕೆಟ್ ಪಿಚ್ ಮತ್ತು ಪರಿಸ್ಥಿತಿಗಳ ಕನಿಷ್ಟ ಜ್ಞಾನವೂ ಇಲ್ಲದ ಕೆಲ ಅಪ್ರಬುದ್ಧ ಪತ್ರಕರ್ತರು ಸಾಥ್ ನೀಡಿ ವಿಷಯವನ್ನು ಅನಗತ್ಯವಾಗಿ ಹಿಗ್ಗಿಸಿದರು. ಕಾಂಬ್ಳಿಯ ಈ ವರ್ತನೆ ಸೋಲಿನ ನೋವಿನಲ್ಲಿದ್ದ ತಂಡದ ಆಟಗಾರರ ಇನ್ನಷ್ಟು ನೋವಿಗೆ ಕಾರಣವಾಯಿತು. ಸ್ವತಃ ಬಾಲ್ಯದ ಗೆಳೆಯ ಸಚಿನ್ ಇವರ ಮೇಲೆ ಬೇಸರಗೊಂಡರು. ಕಾಂಬ್ಳಿ ತಂಡದಲ್ಲಿರುವುದು ಯಾರಿಗೂ ಬೇಡವಾಯಿತು. ತದನಂತರ ತಂಡಕ್ಕೆ ಆಗಾಗ ಆಯ್ಕೆಯಾದರೂ ಕಾಂಬ್ಳಿ ಡ್ರೆಸಿಂಗ್ ರೂಮ್ ನಲ್ಲಿ ಏಕಾಂಗಿಯಾದರು. ನಂತರದ ದಿನಗಳಲ್ಲಿ ಶಾಶ್ವತವಾಗಿ ವಿನೋದ್ ಕಾಂಬ್ಳಿ ಎಂಬ ಭಾರೀ ಭರವಸೆ ಮೂಡಿಸಿದ ತಾರೆ ತನ್ನ ಸ್ವಯಂಕೃತ ತಪ್ಪುಗಳಿಂದ ತೆರೆಮರೆಗೆ ಸರಿಯಿತು.



ತನ್ನ ವಿಕ್ಷಿಪ್ತ ಮನಸ್ಥಿತಿ ಮತ್ತು ವಿಚಿತ್ರ ನಡವಳಿಕೆಗಳಿಂದಾಗಿ ತಂಡದಿಂದ ಹೊರಬಿದ್ದ ನಂತರವೂ ಕಾಂಬ್ಳಿ ಸಹ ಆಟಗಾರರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಲೇ ಇದ್ದರು. ಕ್ರಿಕೆಟ್ ಬಿಟ್ಟ ನಂತರ ಚಿತ್ರರಂಗ, ರಾಜಕೀಯದಲ್ಲೂ ಕೈಯಾಡಿಸಲು ಹೋಗಿ ವಿಫಲರಾದರು. ಬೆತ್ತನಗೆರೆ ಎಂಬ ಕನ್ನಡ ಚಿತ್ರದಲ್ಲೂ ಇವರು ನಟಿಸಿದ್ದರು. ಎಲ್ಲಾ ಕ್ಷೇತ್ರದಲ್ಲೂ ವಿಫಲತೆಯನ್ನು ಕಂಡಮೇಲೆ ಕಾಂಬ್ಳಿಗೆ ಜ್ಞಾನೋದಯವಾಗತೊಡಗಿತು. ಆದರೆ ಅದಾಗಲೇ ಕಾಲಮಿಂಚಿತ್ತು. ಮೊದಲ ಗೆಳೆಯರಾರೂ ಹತ್ತಿರಕ್ಕೆ ಸೇರಿಸಿಕೊಳ್ಳಲಿಲ್ಲ. ಗೆಳೆಯ ಸಚಿನ್ ರನ್ನು ಒಲಿಸಿಕೊಳ್ಳುವ ಸರ್ವ ಪ್ರಯತ್ನವನ್ನು ಮಾಡಿದರೂ ಇವರಿಂದಾದ ಆಳ ನೋವಿನಿಂದಾಗಿ ಕಾಂಬ್ಳಿಯ ಮುಖವನ್ನೂ ಸಚಿನ್ ನೋಡಲಿಲ್ಲ. 2013ರ ಮುಂಬಯಿಯ ವಾಂಖೇಡೆ ಸ್ಟೇಡಿಯಮಿನಲ್ಲಾದ ಸಚಿನ್ ತೆಂಡೂಲ್ಕರ್ ವಿದಾಯ ಪಂದ್ಯದಲ್ಲಿ” 24 ವರ್ಷಗಳ ಕಾಲದ ನನ್ನ 22 ಯಾರ್ಡ್ ಗಳ ನಡುವಿನ ಕ್ರಿಕೆಟ್ ಪಯಣ ಇಂದಿಗೆ ಮುಗಿಯಿತು” ಎಂದಾಗ ಇಡೀ ಕ್ರಿಕೆಟ್ ವಿಶ್ವ ಭಾವುಕವಾಯಿತು. ಕ್ರಿಕೆಟ್ ಬದುಕಿನುದ್ದಕ್ಕೂ ಸಹಕರಿಸಿದ ಸರ್ವರ ಹೆಸರನ್ನು ಚೀಟಿಯಲ್ಲಿ ಬರೆದು ತಂದು ಸಚಿನ್ ಪ್ರತಿಯೊಬ್ಬರನ್ನು ನೆನೆದು ಗದ್ಗದಿತರಾದರು. ಆದರೆ ತನ್ನ ಕ್ರಿಕೆಟ್ ಬದುಕಿನ ಬಹುಕಾಲದ ಒಡನಾಡಿ ಕಾಂಬ್ಳಿಯ ಹೆಸರು ಹೇಳಲೇ ಇಲ್ಲ. ಗೆಳೆಯ ಸಚಿನ್ ತಮ್ಮ ಹೆಸರು ಹೇಳದೆ ಇದ್ದುದನ್ನು ಕಂಡು ಟಿವಿಯ ಮುಂದೆ ಕೂತು ಕಾಂಬ್ಳಿ ಗಳಗಳನೆ ಅತ್ತರು. ಯಶಸ್ಸಿನ ಅಮಲಿನಲ್ಲಿ ಅನುಗಾಲದ ಅನುರೂಪ ಸಂಬಂಧಗಳನ್ನು ನಗಣ್ಯವಾಗಿಸಿದ್ದಕ್ಕೆ ಕಾಂಬ್ಳಿಯ ಮನಸ್ಸು ಪಶ್ಚಾತ್ತಾಪಪಡತೊಡಗಿತು. ತನ್ನ ಕ್ರೀಡಾ ಬದುಕು ಮಾತ್ರವಲ್ಲ ವೈಯುಕ್ತಿಕ ಬದುಕೂ ಕೂಡ ಹಳಿತಪ್ಪಿದ್ದಕ್ಕೆ ತಾನೇ ಕಾರಣ ಎಂಬ ವಾಸ್ತವದ ಅರಿವಾಯಿತು. ಇಂದಿಗೂ, ಇವರೊಂದಿಗೆ ಆಡಿದ ಬಹುತೇಕರು ಕಾಂಬ್ಳಿ ಎದುರಿಗೆ ಸಿಕ್ಕರೂ ಮುಖ ತಿರುಗಿಸಿಕೊಂಡು ನಡೆದೇ ಬಿಡುತ್ತಾರೆ. ದೈವದತ್ತವಾದ ಅನುಗ್ರಹ ರೂಪದ ಪ್ರತಿಭೆ, ರಮಾಕಾಂತ್ ಅಚ್ರೇಕರ್ ರಂತಹ ಗುರು, ಸಚಿನ್ ರಂತಹ ಗೆಳೆಯ, ಅಜಿತ್ ತೆಂಡೂಲ್ಕರರಂತಹ ಸಹೃದಯಿ, ಭಾರತದ ಮಹಾನ್ ಕ್ರಿಕೆಟ್ ತಂಡ, 9 ಬಾರಿ ಮರು ಆಯ್ಕೆ ಮಾಡಿದ ಆಯ್ಕೆದಾರರು, ಇವೆಲ್ಲದರ ಸಾಂಗತ್ಯದ ಹೊರತಾಗಿಯೂ ಕಾಂಬ್ಳಿ ಸಜ್ಜನರ ಸಂಗದಲ್ಲಿ ಹೆಜ್ಜೇನು ಸವಿಯದೇ ಹೋದರು. ಹುಟ್ಟು ಬಡವರಾದ ಕಾಂಬ್ಳಿಗೆ ಬಡತನ ಕಾಡಲೇ ಇಲ್ಲ. ಮನಸ್ಸಿನೊಳಗಿನ ಮದ-ಮತ್ಸರಗಳು ಕಾಡಿ ಕರಟಿಹಾಕಿದವು. ಬೆಳಗುವ ದೀಪ ಪೂರ್ತಿ ಬೆಳಗುವ ಮುಂಚೆಯೇ ಆರಿತು. ದಶಕಗಳ ಹಿಂದೆ ಕ್ರಿಕೆಟ್ ಜಗತ್ತನ್ನು ನಡುಗಿಸಿದ್ದ ವಿನೋದ್ ಗಣಪತ್ ಕಾಂಬ್ಳಿ ಇಂದು ಈ ಜಗತ್ತಿನಲ್ಲಿ ಏಕಾಂಗಿ..ಜಗಳವಾಡಲು ಬಿಟ್ಟು ಹೊರಗಡೆಯಿಂದ ನಿಂತು ನೋಡಿ ಸಂಭ್ರಮಿಸುವ ವಿಘ್ನಸಂತೋಷಿಗಳ ವಿಕೃತ ಕೂಟ ಬಿಗ್ ಬಾಸ್ ಹೊರತುಪಡಿಸಿ ಉಳಿದ ಯಾವುದೇ ಕ್ಷೇತ್ರದ ಯಾರಿಗೂ ಕಾಂಬ್ಳಿ ಬೇಡ. 1993 ಮಾರ್ಚ್ 15 ರಂದು ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಸತತ ಎರಡು ದ್ವಿಶತಕ ಹೊಡೆದು ಬ್ಯಾಟ್ ಮೇಲೆತ್ತಿದಾಗ ಕಮೆಂಟ್ರಿ ಬಾಕ್ಸಿನಿಂದ ಒಂದು ಧ್ವನಿ” 3 ನೇಯ ದ್ವಿಶತಕ ಬಾರಿಸಿ ಕಾಂಬ್ಳಿ ಬ್ರಾಡ್ ಮನ್ ಗೆ ಸಡ್ಡುಹೊಡೆಯಲಿದ್ದಾರೆ”.ಎಂದಿತು. ತೆಂಡೂಲ್ಕರ್ ಗಿಂತ ಹೆಚ್ಚಿನ ಪ್ರತಿಭಾವಂತರೆಂದರೆ ಅದು ಬ್ರಾಡ್ ಮನ್ ಮಾತ್ರ..ಕಮೆಂಟ್ರಿಯವನು ಹೇಳಿದ್ದು, ರಮಾಕಾಂತ್ ಅಚ್ರೇಕರ್ ಹೇಳಿದ್ದು ಎರಡೂ ಸರಿಯಿತ್ತು. ಆದರೆ ಕಾಂಬ್ಳಿಯೇ ಸರಿಯಿರಲಿಲ್ಲ. ನಾಯಕನಾಗಬೇಕಾದವರು ದುರಂತ ನಾಯಕರಾದರು. ಆಗೊಮ್ಮೆ ಈಗೊಮ್ಮೆ ವಾಂಖೇಡೆ ಸ್ಟೇಡಿಯಮ್ ಹಾದುಹೋಗುವಾಗ ಕಾಂಬ್ಳಿಯ ಮನಸ್ಸು” ಸಾರಾ ಸಮಂದರ್ ಮೆರೆ ಪಾಸ ಥಾ, ಏಕ್ ಬೂಂದ್ ಪಾನಿ ಮೆರಿ ಪ್ಯಾಸ್ ಹೈ” ಎನ್ನುತ್ತದೆ.

  • ಮುಷ್ತಾಕ್ ಹೆನ್ನಾಬೈಲ್  (ಚಿಂತನಕರು, ಲೇಖಕರು) ಕುಂದಾಪುರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW