ಮುತ್ತುಗದ ಎಲೆಯ ಸುತ್ತ – ಹರಿಕೃಷ್ಣ ಹರಿ



ಮುತ್ತುಗದ ಎಲೆಗಳನ್ನು ಸಂಗ್ರಹಿಸಿ ತಂದು ಕಡ್ಡಿ ಹೆಣೆದು ಊಟದ ಎಲೆಗಳನ್ನು ತಯಾರಿಸಿ ವಾರಕ್ಕೊಮ್ಮೆ ಅದರ ಕಟ್ಟನ್ನು ನನ್ನ‌ ತಲೆಯ ಮೇಲೆ ಹೊರಿಸಿ ಅಜ್ಜನ ಮನೆಗೆ ಕಳುಹಿಸುತ್ತಿದ್ದರು. ತಮ್ಮ ಬಾಲ್ಯದ ನೆನಪನ್ನು ಮೆಲಕು ಹಾಕಿದ್ದಾರೆ ಹರಿಕೃಷ್ಣ ಹರಿ ಅವರು, ಮುಂದೆ ಓದಿ …

1955ರಿಂದ 1957ರ ವರೆಗೆ ನಮ್ಮ ಸಂಸಾರದ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅಪ್ಪಯ್ಯ… ಹೋಟೆಲ್ ವ್ಯವಹಾರದಲ್ಲಿ ತೀರಾ ನಷ್ಟ ಅನುಭವಿಸಿ ದೈನಂದಿನ ಅನ್ನಾಹಾರಗಳಿಗೂ ತಡಕಾಡ ಬೇಕಾದ ಪರಿಸ್ಥಿತಿ ಇತ್ತು.

ಶಿವಮೊಗ್ಗೆಯ ವಿನಾಯಕ ಟಾಕೀಸಿನ ಎದುರು ಹಂಚಿ ನಾಗಪ್ಪ ಕಾಂಪೌಂಡಿನಲ್ಲಿ ನಾವು ಇದ್ದ ಮನೆಗೆ ಬಾಡಿಗೆ ಕೊಡಲಾಗದ ಕಾರಣ ಅಲ್ಲಿ ಮನೆ ಬಿಡಬೇಕಾಗಿ ಬಂತು. ಹಳೆಯ ತೀರ್ಥಹಳ್ಳಿ ರಸ್ತೆಯ ಹತ್ತಿರದಲ್ಲಿ ನಾಗಮ್ಮ ಎಂಬುವವರ ಮನೆಗೆ ವಾಸಕ್ಕೆ ಬಂದೆವು, ಆಮೇಲೆ ಅಲ್ಲಿಯೂ ಇರಲಾಗದೆ ಮಾರ್ನವಮಿ ಬೈಲು ಯಾನೆ ‘ಮಾರ್ನೆಂ ಷೆಡ್’ ಗೆ(ಈಗ ಬಸ್ ಸ್ಟ್ಯಾಂಡ್ ಅಗಿರುವಲ್ಲಿ ಹಿಂದೆ ಇದ್ದ ಸಂತೆಯ‌ ಕಾಂಪೌಂಡ್ ಪಕ್ಕ) ಬಂದೆವು.

ಫೋಟೋ ಕೃಪೆ : flickriver

ಅಪ್ಪಯ್ಯನ ಚಿಕ್ಕಪ್ಪ ಶ್ರೀನಿವಾಸ ಕೊಡಂಚರು ಯಾನೆ ಶೀನಪ್ಪ ‘ಸರ್ಕೀಟ್’ ಹೌಸಿನಲ್ಲಿ ಅಡುಗೆ ಕೆಲಸದಲ್ಲಿದ್ದರು. ಅಪ್ಪಯ್ಯ ಸಂಸಾರವನ್ನು ತೂಗಿಸಲು ಅಲ್ಪ ಸಂಪಾದನೆಗಾಗಿ ಅವರಲ್ಲಿಗೆ ಸಹಾಯಕ್ಕೆ ಹೋಗುತ್ತಿದ್ದರು.

ಫೋಟೋ ಕೃಪೆ :wikipedia

ಅಜ್ಜನ ಕೆಲಸಕ್ಕೆ ಊಟದ ಎಲೆಗಳು ಬೇಕಾಗುತ್ತಿತ್ತಲ್ಲವೆ! ಅಮ್ಮ ಅಲ್ಲೇ ಸುತ್ತಮುತ್ತ ಹುಡುಕಿ ಮುತ್ತುಗದ ಎಲೆಗಳನ್ನು ಸಂಗ್ರಹಿಸಿ ತಂದು ಕಡ್ಡಿ ಹೆಣೆದು ಊಟದ ಎಲೆಗಳನ್ನು ತಯಾರಿಸಿ ವಾರಕ್ಕೊಮ್ಮೆ ಅದರ ಕಟ್ಟನ್ನು ನನ್ನ‌ ತಲೆಯ ಮೇಲೆ ಹೊರಿಸಿ ಅಜ್ಜನ ಮನೆಗೆ ಕಳುಹಿಸುತ್ತಿದ್ದರು. ನಮ್ಮ ಮನೆಯಿಂದ ಅಲ್ಲಿಗೆ ಈಗಿನ ಲೆಕ್ಕದಲ್ಲಿ ದೂರ ಅಂದಾಜು 2 ಕಿಲೋಮೀಟರ್. ನನ್ನ ವಯಸ್ಸು ಆಗ 8-9 ವರ್ಷ.

ಆ ವರ್ಷ ಮಳೆಗಾಲದಲ್ಲಿ ಒಂದು ದಿನ ಎಂದಿನಂತೆ ಅಮ್ಮ ಎಂದಿನಂತೆ ನನ್ನ ತಲೆಗೆ ಕೊಟ್ಟು ಹೊರಿಸಿ ಕಳಿಸಿದರು. ಹೊರಡುವಾಗ ಇರದಿದ್ದ ಮಳೆ ಮೆಗ್ಗಾನ್ ಆಸ್ಪತ್ರೆಯ ದಾರಿಯಲ್ಲಿ ಹಾದು ಹೋಗುತ್ತಿದ್ದಂತೆ ಭರ್ರನೆ ಗಾಳಿಯೊಂದಿಗೆ ಶುರು. ನಾನು ಅದರಲ್ಲೇ ನೆನೆಯುತ್ತಾ ಹೋಗುತ್ತಿದ್ದಂತೆ ಗಾಳಿ ಜೋರಾಗಿ ತಲೆಯ ಮೇಲಿದ್ದ ಎಲೆಗಳ ಕೊಟ್ಟು ಕಿತ್ತುಕೊಂಡು ಎಲ್ಲಾ ಕಡೆ ಮುತ್ತುಗದ ಡಿಸ್ಕು ಡ್ಯಾನ್ಸು. ನಾನು ಅಸಹಾಯಕನಾಗಿ ಅಳುತ್ತಳುತ್ತಾ ಎಷ್ಟಾಯಿತೋ ಅಷ್ಟು ಬಾಚಿ ಒಟ್ಟು ಮಾಡುತ್ತಿದ್ದಂತೆ ತುಂಟ ಮಗುವಿನಂತೆ ಮತ್ತೆ ಗಾಳಿಯ ಕಿತ್ತಾಟ.

ಫೋಟೋ ಕೃಪೆ :wikipedia

ಹಾಗೂ ಹೀಗೂ ಒದ್ದಾಡುತ್ತಾ ಎಷ್ಟಾಯಿತೋ ಅಷ್ಟು ಎಲೆಗಳನ್ನು ಒಟ್ಟು ಮಾಡಿ ಕಿತ್ತು ಹೋಗಿದ್ದ ನಾರಿನ ಹಗ್ಗದಿಂದಲೇ ಹೇಗೋ ಕಟ್ಟಿ ಮತ್ತೆ ಹೊತ್ತು ಅಜ್ಜನ ಮನೆಗೆ ಹೋಗಿ ಇಳಿಸಿ ಕೃತಾರ್ಥನಾದೆ.
ದೊಡ್ಡಮ್ಮ (ಅಂದರೆ ನನ್ನ ಅಜ್ಜಿ… ನಮ್ಮಲ್ಲಿ ಅಜ್ಜಿ ಎಂದು ಸಂಬೋಧಿಸುವುದಿಲ್ಲ) ಸಿಟ್ಟಿನಿಂದ ಕೂಗಾಡಿ ನನ್ನ ಅಂಗಿಚಡ್ಡಿ ಎಲ್ಲ ತೆಗೆಸಿ ಹಿಂಡಿ ಹಾಕಿ ನನಗೆ ಉಡಲೊಂದು, ಹೊದೆಯಲೊಂದು ಟವೆಲ್ ಕೊಟ್ಟರು. ಬಹಳ ಹೊತ್ತು ಅವರ ಗೊಣಗಾಟ ನಡೆದೇ ಇತ್ತು. ಸಿಟ್ಟು ನನ್ನ ಮೇಲಲ್ಲ, ಅಮ್ಮನ ಮೇಲೆ.



“ಅದೇನು ಕಟ್ಟೋದೋ ಎಲೇನ! ಅವಳು ಅಚ್ಚುಕಟ್ಟಿಗೆ ಬೆಂಕಿ ಹಾಕ!”

ಅಂದು ನನ್ನ ಜೊತೆ ಎಲೆಗಳ ಕಟ್ಟಿಗೆ ವರುಣನಿಂದ ಮಸ್ತಕಾಭಿಷೇಕ, ಅಮ್ಮನ ಅಚ್ಚುಕಟ್ಟಿಗೆ ದೊಡ್ಡಮ್ಮನಿಂದ ಅಗ್ನಿಸ್ಪರ್ಶ!!!


  • ಹರಿಕೃಷ್ಣ ಹರಿ (ಖ್ಯಾತ ಕಲಾವಿದರು, ಬರಹಗಾರರು)

One thought on “ಮುತ್ತುಗದ ಎಲೆಯ ಸುತ್ತ – ಹರಿಕೃಷ್ಣ ಹರಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading