ಶಿವಾನಂದ ಉಳ್ಳಿಗೇರಿ ಅವರ ‘ಮುತ್ತುಗದ ಹೂವು’ ಕವನ ಸಂಕಲನದ ಕುರಿತು ಕವಿತಾ ಹೆಗ್ಡೆ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಮುತ್ತುಗದ ಹೂವು
ಕವಿ : ಶಿವಾನಂದ ಉಳ್ಳಿಗೇರಿ
ಪ್ರಕಾರ : ಕವನ ಸಂಕಲನ
ಪ್ರಕಾಶನ : ಶ್ರೀ ಸಾಯಿ ಸಾಹಿತ್ಯ
ಪುಟ : 96
ಅಂತಃಕರಣ ಮತ್ತು ಪ್ರೀತಿಯನ್ನೇ ಎದೆ ತುಂಬ ತುಂಬಿಕೊಂಡು ಬರೆದ ಕವಿತೆಗಳು ಇಲ್ಲಿವೆ. ಲೋಕ ವ್ಯಾಪಾರದಲ್ಲಿ ನಮ್ಮ ಸುತ್ತಲೂ ಎಡೆಬಿಡದೆ ಸುತ್ತುವ, ನಮ್ಮ ಚೇತನದ ಚಿಲುಮೆ ಉಕ್ಕಿಸುವ ಅಥವಾ ಬತ್ತಿಸುವ ವಸ್ತುಗಳನ್ನು ಹೊತ್ತ 45 ಕವಿತೆಗಳ ಹೂಗುಚ್ಛವಿದು.

ಕವಿತೆಯ ಓದು ಸರಳ, ಆದರೆ ಆಪ್ತಭಾವ ಹುಟ್ಟಿಸುತ್ತದೆ. ಕವಿಯ ಜೀವದ ಅನುಭವಕ್ಕೆ ಅನುಭಾವಕ್ಕೆ ಮನವನ್ನು ಅನುವುಗೊಳಿಸಿಕೊಳ್ಳುತ್ತ ಓದಿದರೆ ಒಂದೊಂದು ಕವನವೂ ತನ್ನದೇ ಕಂಪು ಹೊಂದಿದ ವಿಭಿನ್ನ ಹೂವು. ಲೋಕದ ವೈರುಧ್ಯಮಯ ಜೀವನಕ್ಕೆ ವಿಸ್ಮಯಗೊಂಡ ಮುಗ್ಧ ಮನದ ಎಳೇ ಪಕಳೆ ನೊಂದು ಮರುಗಿದ ವಿಷಾದ ಹುಟ್ಟಿಸಿದ ಕೆಲವು ಕವಿತೆಗಳಿವೆ. ಎಲ್ಲ ಮರೆಸಿ ಮತ್ತೆ ಜೀವನೋತ್ಸಾಹ ಹುಟ್ಟಿಸುವ ಚೇತೋಹಾರಿಯಾದ ಕವಿತೆಗಳು ಕೂಡ ಇವೆ.
ಎಲ್ಲ ಕವಿತೆಗಳು ಗಹನವಲ್ಲದಿರಬಹುದು, ಆದರೆ ಒಂದು ಸರಳತೆ ನೀಡಬಹುದಾದ ಪುಟ್ಟ ಸೆಳೆತವಿದೆ. ವಾಚ್ಯತೆ ತುಸು ಹೆಚ್ಚಿರಬಹುದು, ಆದರೆ ಒಂದು ಆಪ್ತತೆ ಹುಟ್ಟಿಸುವ ವಿಷಯಗಳಿವೆ. ಮೇಲ್ಮುದ್ದಿ ಮನೆಗಳು, ರೊಕ್ಕದ ಗಿಡ, ಮರಗಳಿಗೂ ಕಾಲುಗಳಿರಬೇಕಿತ್ತು. ಸಾಲ ಕೊಡಿ, ಬಹು ಆಯ್ಕೆ ಪ್ರಶ್ನೆ, ಕ್ಯೂ ಆರ್ ಕೋಡ್ ಹೆಸರಿಸಬಹುದಾದ ಕೆಲವು ಒಳ್ಳೆಯ ಕವಿತೆಗಳು.

ಕ್ಯೂ ಆರ್ ಕೋಡ್ ಎಂಬ ಕವಿತೆಯಲ್ಲಿ,
“ನಮ್ಮವರು, ನಂಬಿದವರು,
ಸ್ಪಂದಿಸಿ ಬಯಸಿದರೆ
ಮಾಡಲಿ ತಾವಾಗಿಯೇ ಸ್ಕ್ಯಾನ್
ಆಗ ಕಂಡೀತು
ಪೂರ್ಣ ಅಂತರಾಳ ನಿಚ್ಚಳ”
ಎಂಬ ಸಾಲುಗಳು ಎದೆ ತಟ್ಟುತ್ತವೆ.
ಕವಿಯ ಎದೆಭೂಮಿಯಲ್ಲಿ ಇನ್ನಷ್ಟು ಕಾವ್ಯ ಪುಷ್ಪಗಳು ಹುಟ್ಟಲಿ, ಬೆಳೆಯಲಿ ಎನ್ನುತ್ತ ಶಿವಾನಂದ ಉಳ್ಳಿಗೇರಿಗೆ ಹೃದಯ ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.
- ಕವಿತಾ ಹೆಗ್ಡೆ
