ಓದುವ ಹಾಳೆಗೆ ಜೀವ ಬರುವಂತೆ ಕವಿತೆಗಳಿರಬೇಕು… ಕವಿ ನಾಗರಾಜ ಬಿ.ನಾಯ್ಕ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಬಣ್ಣದಲ್ಲಿ ಅದ್ದಿ
ಕವಿತೆ ಬರೆಯಬೇಕೆಂದಿದ್ದೆ
ಬಣ್ಣಗಳ ಸಾಲಾಗಿಸಿ
ಓದುವ ಹಾಳೆಗೆ
ಜೀವ ಬರುವಂತೆ
ಓದಿದರೆ ಅಂದಂತೆ
ಕವಿತೆಗಳಲ್ಲಿ ಜೀವ
ಬೇರಾಗಿ ಇರಬೇಕು
ಎಂದು ಕೊಳ್ಳುವೆ ಸೋತಾಗ
ಕರದಿ ಸಾಕು
ಹೊಂಗನಸು ಚಿಮ್ಮುವುದು
ಮಳೆ ನೀರು
ಬುವಿಯಿಂದಲೇ ಹೋದದ್ದು
ಬೆಳಕು ಕೂಡ
ಆಗಸದಿಂದಲೇ ತಲುಪಿದ್ದು
ನಗುವ ಮೊಗವೂ ಹಾಗೆ
ಒಂದು ಬಿಂದುವಿನಲ್ಲೇ
ಆರಂಭಿಸಿ ಮುಗ್ಧ
ತಿರುವಿನಲ್ಲಿ ಮರೆಯಾಗಿ
ಹೋದದ್ದು ಈಗ ನೆನಪು
ಅಳುವಿಗೋ ಗುರುತು
ಇರದ ಛಾಯೆ ಮಾಯೆ
ಕನಸು ನನಸಿಗೆ ಒಂದು
ಆಚೆ ಈಚೆಯ ಬಂಧ
ಹುಲ್ಲು ಮಣ್ಣಿನ ನಡುವೆ
ಬೇರು ಸೇತುವೆ
ಯಾರಿಗೂ ಕಾಣದ
ಲೋಕದ ಸೂಕ್ಷ್ಮತೆ
ಹಲವಿದೆ ಈ ಜಗದಿ
ಕಾದು ಕಾಣಬೇಕು
ನಿಂತು ನಂಬಬೇಕು
ಬೆರಗಿಗೆ ಮೂಕವಾಗಿ
ನಕ್ಕು ಹಗುರಾಗಿ
ಓದಬೇಕು ಪುಟಗಳ
- ನಾಗರಾಜ ಬಿ. ನಾಯ್ಕ – ಹುಬ್ಬಣಗೇರಿ, ಕುಮಟಾ.
