ಕೆಲವರು ಅನೇಕ ವ್ಯಕ್ತಿತ್ವ ವಿಕಸನ ಶಿಬಿರಗಳು, ವ್ಯಕ್ತಿತ್ವ ವಿಕಸನದ ಕುರಿತಾಗಿ ಕೃತಿಗಳು ಬಂದವು. ಅವು ದೋಸೆಯಂತೆ ಬಿಕರಿಯಾದರೂ ಕೂಡ. ಅದರಲ್ಲಿನ ವಸ್ತು ವಿಷಯ ಯಾರೊಬ್ಬರ ಮಸ್ತಕಕ್ಕೆ ಇಳಿಯದಿರುವುದೂ ವಿಧಿ ವಿಪರ್ಯಾಸ.ಅದಕ್ಕೆ ಶರಣರು ಹೇಳಿದ್ದು ನಡೆ ನುಡಿ ಒಂದಾಗಿರಬೇಕು.ಸಿದ್ಧಾಂತಕ್ಕೆ ಬದ್ಧರಾಗಿರಬೇಕು. ಆಗ ಬದುಕು ಶುದ್ಧವಾಗುತ್ತದೆ.- ಡಾ.ಯಲ್ಲಮ್ಮ ಕೆ, ತಪ್ಪದೆ ಮುಂದೆ ಓದಿ…
ಅಧ್ಯಾತ್ಮಿಕ ತಳಹದಿಯ ಮೇಲೆ ಕಟ್ಟಲ್ಪಟ್ಟ ನಮ್ಮ ಭಾರತೀಯ ಸಂಸ್ಕೃತಿಯು ಜಗತ್ತಿನಲ್ಲಿಯೇ ಮಹತ್ವದ ಸ್ಥಾನವನ್ನು ಹೊಂದಿದೆ. ಕಾಯಕದಲ್ಲಿ ಕೈಲಾಸವನ್ನು ಕಂಡು, ಶ್ರಮ ಸಂಸ್ಕೃತಿಯನ್ನು ಪರಿಪಾಲಿಸುತ್ತಾ ಬಂದಿರುವ, ಕೃಷಿ ಪ್ರಧಾನವಾದ ನಮ್ಮ ಭಾರತ ದೇಶದಲ್ಲಿ ಜಾಗತೀಕರಣ, ನಗರೀಕರಣ, ಕೈಗಾರೀಕರಣದ ಪ್ರಭಾವದಿಂದಾಗಿ ಜನರಲ್ಲಿ ಸ್ವಾರ್ಥ ಮನೆಮಾಡಿ ಅಭಿವೃದ್ಧಿಯ ಹಪಾಹಪಿತನದಿಂದ, ಔನ್ನತ್ಯಕ್ಕೇರುವ ಧಾವಂತದಲ್ಲಿ ಬದುಕಿನಲ್ಲಿ ಅಶಾಂತಿ ಉಂಟಾಗಿ ನೆಮ್ಮದಿಯನ್ನರಿಸಿ ಅಂಡಲೆಯುತ್ತಿದ್ದಾನೆ.
ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲವರು ಅನೇಕ ವ್ಯಕ್ತಿತ್ವ ವಿಕಸನ ಶಿಬಿರಗಳು, ವ್ಯಕ್ತಿತ್ವ ವಿಕಸನದ ಕುರಿತಾಗಿ ಕೃತಿಗಳು ಬಂದು. ದೋಸೆಯಂತೆ ಬಿಕರಿಯಾದರೂ ಕೂಡ: ಅದರಲ್ಲಿನ ವಸ್ತು ವಿಷಯ ಯಾರೊಬ್ಬರ ಮಸ್ತಕಕ್ಕೆ ಇಳಿಯದಿರುವುದೂ ವಿಧಿ ವಿಪರ್ಯಾಸ. ಇಂತಹ ವ್ಯಕ್ತಿತ್ವ ವಿಕಸನದ ಶಿಬಿರಗಳನ್ನೇರ್ಪಡಿಸಿದವರೇನೋ ಕೃತಿಗಳನ್ನು ಬರೆದು ಮಹಾನ್ ಸಾಹಿತಿಗಳೆನಿಸಿಕೊಂಡವರು, ಆರ್ಥಿಕ ಅಭಿವೃದ್ಧಿ ಹೊಂದಿದರಾದರೂ ಅವರಂತರಾಳದಲ್ಲೂ ಲೋಕ ವ್ಯವಹಾರಗಳ ದ್ವಂದ್ವಯುದ್ಧದ ಸರಣಿ ನಡದೇ ಇದೆ.
ಈ ಜೀವ ಜಗತ್ತಿನಲ್ಲಿ ಅಜ್ಞಾನದ ಕತ್ತಲೆ ತೊಡೆದು ‘ಸತ್ಯ ದರ್ಶನ’ ಮಾಡಿಸಿದ ಅದೆಷ್ಟೋ ಸಾಧು ಸತ್ಪುರುಷರು, ಸಂತರು, ಶರಣರು, ದಾರ್ಶನಿಕರು, ನಿಸ್ಸಾರ ಜೀವನದ ಸಾಫಲ್ಯದ ಬಗ್ಗೆ ಹಲವಾರು ತತ್ವ ಸಿದ್ಧಾಂತಗಳನ್ನು ಹುಟ್ಟುಹಾಕಿದ್ದಾರೆ. ಪೌರಾಣಿಕ ಹಿನ್ನಲೆಯುಳ್ಳ ಸ್ವಾರಸ್ಯಕರ ಕಥೆ, ಉಪಕಥೆಗಳನ್ನು ಹೆಣೆದು ನಮಗೆ ಉಣಬಡಿಸಿದ್ದಾರೆ. ಉಂಡದ್ದು ಅರಗಿಸಿಕೊಳ್ಳಲಾಗದೆ. ಉಬ್ಬಸದಿಂದ ನಾವಿಂದು ನರಳಾಡುತ್ತಿದ್ದೇವೆ. ‘ಜೀವನದ ಸಾರ’ ತಿಳಿಯಲು ಹದಿನೆಂಟು ಪುರಾಣಗಳನ್ನು, ವೇದೋಪನಿಷತ್‌ಗಳನ್ನು, ರಾಮಾಯಣ, ಮಹಾಭಾರತ, ಬೈಬಲ್, ಕುರಾನ್, ಮುಂತಾದ ದಾರ್ಶನಿಕ ಗ್ರಂಥಗಳನ್ನೇ ಓದಬೇಕೆ? ಮನುಷ್ಯ ಮಾನವೀಯತೆ ಮರೆಯದೆ, ಸ್ವಾರ್ಥ ಪದೇ ಪದೇ ಮೆರೆಯದ, ಮನುಷ್ಯ ಮನುಷ್ಯನಾಗಿ ಬಾಳೆದರೆ ಸಾಲದೇ?
ಈ ಹಿನ್ನಲೆಯಲ್ಲಿ ನಾವು ಮಕ್ಕಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ :
ನಮ್ಮ ಮನೆಯ ಮುಂದಿನ ನಲ್ಲಿಯಲ್ಲಿ ಒಂದು ಕೊಡ ನೀರು ತುಂಬಿ ಮತ್ತೊಂದು ಕೊಡ ನಲ್ಲಿಗೆ ಇಟ್ಟು ತಾಯಿ ಅದನ್ನು ನೋಡಿಕೊಳ್ಳಲು ತನ್ನ ಪುಟ್ಟ ಮಗನಿಗೇಳಿ ಒಳನಡೆದು ಬರುವಷ್ಟರಲ್ಲಿ ಕೊಡ ತುಂಬಿ ಹರಿಯುವುದನ್ನು ಕಂಡು ಆ ಮಗು ನಲ್ಲಿ ಬಂದ್ ಮಾಡುತ್ತದೆ. ಆ ಪುಟ್ಟ ಮಗುವಿಗಿರುವ ಪ್ರಶ್ನೆ ನಾವು ಹೋಟಲ್ ನಲ್ಲಿ ಹ್ಯಾಂಡ್ ವಾಶ್ ಮಾಡುವಾಗ, ವಸತಿ ನಿಲಯಗಳಲ್ಲಿ, ಅತಿಥಿಗೃಹಗಳಲ್ಲಿ ಸ್ನಾನ ಮಾಡುವಾಗ ಆಗತ್ಯಕ್ಕಿಂತ ಹೆಚ್ಚಿಗಾಗುವ ನೀರಿನ ಅಪವ್ಯಯ ನಮ್ಮ ಅರಿವಿಗೆ ಬರುವುದಿಲ್ಲ ಅಥವಾ ದುರುದ್ದೇಶಪೂರಕವಾಗಿರುತ್ತದೆ.
ಶಾಲೆಯಲ್ಲಿ ಮಕ್ಕಳು ತಮ್ಮ ಗೆಳೆಯರೊಂದಿಗೆ ತಾವು ತಂದಿದ್ದ ಲಂಚ್ ಬಾಕ್ಸ್‌ನ್ನು ಹಂಚಿಕೊಂಡು ತಿನ್ನುವ ಮಕ್ಕಳ ತಿಳಿ ಮನಸ್ಸನ್ನು ಕಲುಷಿತಗೊಳಿಸುತ್ತೇವೆ. ಮಕ್ಕಳಿಗೆ ಪ್ರೀತಿಯ ಬೆಲೆ ತಿಳಿದಿದೆ. ದೊಡ್ಡವರಿಗೆ ಜಾತಿಯ ಅಮಲು ತಲೆಗೇರಿದ ಕಾರಣವಾಗಿ.
* ಮಗು ತಾನು ಉಣ್ಣುವ ಅನ್ನದ ಹಾಲಿನಲ್ಲಿ ಒಂದೆರೆಡು ತುತ್ತು ಮನೆಯಲ್ಲಿ ಸಾಕಿದ ಬೆಕ್ಕಿಗೆ ನೀಡಿ ತಾನು ಉಣ್ಣುತ್ತದೆ. ನಾವು ಇಂದು ಬಾಗಿಲು ಮುಚ್ಚಿ ಊಟಮಾಡುವ ಸಂಸ್ಕೃತಿಯ ಕಡೆಗೆವಾಲಿದ್ದೇವೆ. ಅಪಾರ್ಟ್‌ಮೆಂಟ್‌ನ ಹೊರ ಮೈದಾನದಲ್ಲಿ ಎಲ್ಲ ಮಕ್ಕಳೊಂದಿಗೆ ನಕ್ಕು ನಲಿದಾಡುತ್ತಿರುವ ಮಗನನ್ನು ಕರೆದು ಬಯ್ದು ಶಿಸ್ತಿನ ಪಾಠ ಹೇಳುತ್ತೇವೆ. ಪಕ್ಕದ ಮನೆಯವರನ್ನು ಕಂಡು ಒಂದು ಹೂ ನಗೆ ಚೆಲ್ಲಿ ಮಾತನಾಡಿಸುವುದಿಲ್ಲ. ನೆಮ್ಮದಿಗಾಗಿ ಗುಡಿ, ಗುಂಡಾರ. ಪಾರ್ಕ್‌ಗಳಿಗೆ ಸುತ್ತುವುದನ್ನು ಬಿಡುವುದಿಲ್ಲ.
ಮಗು ತನ್ನ ಪುಸ್ತಕಗಳನ್ನು ಜೋಡಿಸುವುದು. ಆಟಿಕೆಗಳನ್ನು ಜೋಡಿಸುವುದು ಮತ್ತೆ ಬಿಸುಡುವುದು ಮತ್ತೆ ಮತ್ತೆ ಅದೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತದೆ, ಸದಾ ಚಟುವಟಿಕೆಯಿಂದಿರುತ್ತವೆ. ನಾವುಗಳು ಸೋಮಾರಿಗಳಾಗಿ ಮಿಕ್ಸರ್. ಗ್ರೆಂಡರ್, ವಾಷಿಂಗ್ ಮಶಿನ್‌ಗಳ ಮೊರೆಹೋಗಿ ಬೊಜ್ಜು ಕರಗಿಸಿಕೊಳ್ಳಲು ಜಿಮ್‌ಗೆ ಹೋಗುವುದು ಇಂದು ತೀರಾ ಸಾಮಾನ್ಯ ಸಂಗತಿ, ಮಕ್ಕಳಿಂದ ನಾವು ಕ್ರಿಯಾಶೀಲವಾಗಿರುವುದನ್ನು ಕಲಿಯಬಹುದಾಗಿದೆ. ಹೀಗೆ ಜೀವನದ ಚಿಕ್ಕ ಚಿಕ್ಕ ಸಂಗತಿಗಳಿಂದ ಸತ್ಯದರ್ಶನ ಮಾಡಿಕೊಂಡು ಆದರ್ಶಗಳನ್ನು ಪಾಲಿಸುತ್ತಾ ಹೋದರೆ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಸಮಾಜಕ್ಕೆ బుద్ధి ಹೇಳುವುದಕ್ಕಿಂತ ತನ್ನ ತಾನರಿಯುವುದು ಮೇಲು. ಅದಕ್ಕೆ ಶರಣರು ಹೇಳಿದ್ದು ನಡೆ ನುಡಿ ಒಂದಾಗಿರಬೇಕು.ಸಿದ್ಧಾಂತಕ್ಕೆ ಬದ್ಧರಾಗಿರಬೇಕು. ಆಗ ಬದುಕು ಶುದ್ಧವಾಗುತ್ತದೆ. ಅದು ನೆಮ್ಮದಿಯನ್ನು ನೀಡುತ್ತದೆ ಎನ್ನುವ ಆಶಯದೊಂದಿಗೆ.
- ಡಾ.ಯಲ್ಲಮ್ಮ ಕೆ
