ಸಾವಿನ ನೆರಳಲ್ಲಿ ನಕ್ಕ ವಿಜಯದ ಕಥೆ

“ನಾನಿಲ್ಲೇ ಇರುವೆ” ಇದು ಕ್ಯಾನ್ಸರ್ ಯೋಧೆಯಾದ ವಿಜಯಾ ಸುಬ್ಬಕೃಷ್ಣ ಹಾಗೂ ಅವರ ಕುಟುಂಬದ ಅನುಭವ ಕಥನ ಮಾತ್ರವಲ್ಲದೇ, ಕ್ಯಾನ್ಸರ್ ಅಥವಾ ಇನ್ನಾವುದೇ ಮಾರಣಾಂತಿಕ ಖಾಯಿಲೆಗಳ ನಿರ್ವಹಣೆಯಲ್ಲಿ ಸಹಾಯ ಮಾಡುವ ಉಪಯುಕ್ತ ಕೈಪಿಡಿಯಾಗಿದೆ. ಈ ಕೃತಿಯ ಕುರಿತು ವಾಣಿ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ: ನಾನಿಲ್ಲೇ ಇರುವೆ
(ಕ್ಯಾನ್ಸರ್ ಹೋರಾಟ, ಕ್ಯಾನ್ಸರ್ ತಜ್ಞ ವೈದ್ಯರ ಸಂದರ್ಶನ ಮತ್ತು ಆರ್ಥಿಕ ಸಲಹೆಗಳು)
ಲೇಖಕಿ: ಸಂಯುಕ್ತಾ ಪುಲಿಗಲ್
ಮುದ್ರಣ: ೨೦೨೫
ಪುಟಗಳು: ೧೮೩
ಬೆಲೆ: ₹೨೫೦/-
ಪ್ರಕಾಶಕರು: ಸಾವಣ್ಣ ಪಬ್ಲಿಕೇಶನ್

ಪುಸ್ತಕದ ಮೊದಲ ಭಾಗವು ದಿವಂಗತ ವಿಜಾಯ ಸುಬ್ಬಕೃಷ್ಣ ಅವರ ಕ್ಯಾನ್ಸರ್ ನೊಂದಿಗಿನ ಹೋರಾಟವನ್ನು ವಿವರಿಸಿದರೆ, ಎರಡನೇ ಭಾಗವು ಕ್ಯಾನ್ಸರ್ ತಜ್ಞ ವೈದ್ಯರ ಸಂದರ್ಶನ ಹಾಗೂ ಸ್ವತಃ ಆರ್ಥಿಕ ತಜ್ಞರಾದ ವಿಜಯಾರವರ ಪತಿ ಶ್ರೀ. ಕೆ.ಆರ್ ಸುಬ್ಬಕೃಷ್ಣ ಅವರು ನೀಡಿದ ಉಪಯುಕ್ತ ಆರ್ಥಿಕ ಸಲಹೆಗಳನ್ನು, ರೋಗಿಯೊಂದಿಗೆ ವ್ಯವಹರಿಸಬೇಕಾದ ಸೂಕ್ಷ್ಮ ಸಲಹೆಗಳನ್ನೂ ಒಳಗೊಂಡಿದೆ. ಅಷ್ಟೇ ಅಲ್ಲದೇ ರಾಜ್ಯ ಹಾಗೂ ಹೊರರಾಜ್ಯದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳು, ಉಚಿತ ಹಾಗೂ ಖಾಸಗೀ ಸೇವಾಕೇಂದ್ರಗಳ ಮಾಹಿತಿಯನ್ನು ಒದಗಿಸುತ್ತವೆ.

ಈ ಪುಸ್ತಕ ಹೊರತರುವಲ್ಲಿ ವಿಜಯಾರವರ ಪತಿ ಶ್ರೀ. ಕೆ. ಆರ್. ಸುಬ್ಬಕೃಷ್ಣ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಕೋರಿಕೆಯ ಮೇರೆಗೆ ಈ ಪುಸ್ತಕವನ್ನು ಬರೆದವತು ಅವರ ನಿಕಟ ಸಂಬಂಧಿ ಶ್ರೀಮತಿ. ಸಂಯುಕ್ತಾ ಪುಲಿಗಲ್. ಇವರು “ಪರ್ವತದಲ್ಲಿ ಪವಾಡ”, “ರೆಬೆಲ್ ಸುಲ್ತಾನರು” ಮುಂತಾದ ಆಂಗ್ಲ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದವರು. ಈ ಪುಸ್ತಕದಲ್ಲಿ ವಿಜಯಾರವರ ಕ್ಯಾನ್ಸರ್ ಹೋರಾಟವನ್ನು ಅವರ ಸ್ಥಾನದಲ್ಲಿ ನಿಂತು, ಅವರದ್ದೇ ಭಾವವೆಂಬಂತೆ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ.

ವಿಜಯಾರ ಕುರಿತು:

ಈ ಅನುಭವ ಕಥನವು ವಿಜಯಾರವರು ಮರಣಶಯ್ಯೆಯಲ್ಲಿ ಮಲಗಿ ಸಾವಿನೊಂದಿಗೆ ಸಂಭಾಷಿಸುತ್ತಿರುವಂತೆ ನಿರೂಪಿಸಲಾಗಿದೆ. ಸ್ವತಃ ವಿಜಯಾರು ಎದುರು ಕುಳಿತ ಸಾವಿಗೆ ತಮ್ಮ ಕಥೆ ಹೇಳುತ್ತಿರುವಂತೆ ಓದುಗರಿಗೆ ಭಾಸವಾಗುತ್ತದೆ. ಅಲ್ಲಿ ‘ಸಾವು’ ಹೇಳುವ ಮಾತು “ನಾನು ಆಯುಷ್ಯ ಮುಗಿದಾಗ ಬರುತ್ತೇನೆ ಎಂದು ಎಲ್ಲಾ ಭಾವಿಸುತ್ತಾರೆ, ಆದರೆ ನಾನಿಲ್ಲೇ ಇರುವೆ! ವ್ಯಕ್ತಿ ಹುಟ್ಟಿದೊಡನೆಯೇ ಅವನೊಂದಿಗೆ ನಾನೂ ಹುಟ್ಟಿ ಅವನೊಂದಿಗೆ ಸಾಗುವೆ” ಎಂಬ ಮಾತು ಎಷ್ಟು ನಿಜ ಅನ್ನಿಸಿಬಿಟ್ಟಿತು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎದುರು ಕುಳಿತ ಸಾವಿಗೆ ವಿಜಯಾರು ವಿಚಲಿತರಾಗುವುದಿಲ್ಲ! ಅದೆಲ್ಲಾ ಹಂತವನ್ನು ಅವರಾಗಲೇ ದಾಟಿ ಬಂದಿದ್ದಾರೆ. ಕ್ಯಾನ್ಸರ್ ಎಂಬ ನೋವು ಅವರ ದೇಹವನ್ನು ಬಾಧಿಸುತ್ತಿದ್ದರೂ ಸಹ ಮಾನಸಿಕವಾಗಿ ಅವರು ಸ್ಥಿತಪ್ರಜ್ಞರಾಗಿ, ಪರಮಶಾಂತಿಯನ್ನು ಅನುಭವಿಸುತ್ತಿರುತ್ತಾರೆ. ಅತ್ಯಂತ ತೀವ್ರವಾಗಿ ಜೀವನವನ್ನು ಪ್ರೀತಿಸಿದ ವಿಜಯಾರು ತಮ್ಮ ಬದುಕಿನ ಅನಾರೋಗ್ಯದ ಸರಮಾಲೆಗಳನ್ನು, ಕೊನೆಗೆ ಕ್ಯಾನ್ಸರ್ ದೃಢಪಟ್ಟಿದ್ದನ್ನು ವಿವರಿಸುತ್ತಾರೆ.

ಎಲ್ಲಾ ರೋಗಿಗಳಂತೆಯೇ ಮೊದಲು ರೋಗ ಪತ್ತೆ, ಅದನ್ನು ನಿರಾಕರಿಸುವ ಹಂತ, ಒಪ್ಪಿಕೊಳ್ಳುವಿಕೆ ಹಾಗೂ ಹೋರಾಟದ ಹಂತ ಇವೆಲ್ಲ ಹಂತದಲ್ಲೂ ಎದುರಿಸಿದ ನಾನಾ ತೊಂದರೆ, ಚಿಕಿತ್ಸಾ ವಿಧಾನಗಳ ಸಂಕ್ಷಿಪ್ತ ಮಾಹಿತಿಯಿದೆ. ಇವೆಲ್ಲದರಲ್ಲೂ ಎದ್ದು ಕಾಣುತ್ತಿದ್ದುದು ವಿಜಯಾರ ಜೀವನ ಪ್ರೀತಿ. ಆಸ್ಪತ್ರೆಗೆ ಹೋಗುವಾಗಲೂ ಸಾಧ್ಯವಾದಷ್ಟು ಚೆನ್ನಾಗಿ ಅಲಂಕರಿಸಿಕೊಂಡು ಹೋಗುವ ಮನಸ್ಥಿತಿ. ದೇಹ ಸಹಕರಿಸಿದಷ್ಟು ದಿನ ಕಾರ್ಯಕ್ರಮಗಳಿಗೆ, ಸಮಾರಂಭಗಳಿಗೆ ಹಾಗೂ ವಿದೇಶ ಪ್ರವಾಸಗಳಿಗೂ ಹೋಗಿ ಬರುವ ಉತ್ಸಾಹ! ‘ಜನಾನುರಾಗಿಯಾದ ನಾನು, ಜನರ ಸಂಪರ್ಕ ಇದ್ದಾಗಲೇ ಹೆಚ್ಚು ಉತ್ಸಾಹ ಪೂರಿತಳಾಗಿ, ನೋವಿನಿಂದ ಮುಕ್ತಳಾಗುತ್ತಿದ್ದೆ’ ಎನ್ನುವಾಗ ಅಚ್ಚರಿ ಮೂಡುವುದು. ಅವರು ತಮ್ಮ ಮನಸ್ಸು ಖಿನ್ನವಾಗದಂತೆ ನೋಡಿಕೊಳ್ಳುತ್ತಿದ್ದುದು, ಇತರ ರೋಗಿಗಳನ್ನು ಹುರಿದುಂಬಿಸುವುದೂ ಸಹ ಸ್ಪೂರ್ತಿದಾಯಕ ಎನ್ನಬಹುದು.

ಕೀಮೋದಿಂದ ಕೂದಲುದುರಿದಾಗ ಮನೆಮದ್ದು ಮಾಡಿಕೊಳ್ಳುವುದು, ಶಿಸ್ತಿನ ಜೀವನಶೈಲಿ, ಅನಾರೋಗ್ಯದಲ್ಲೂ ಧ್ಯಾನ ಮತ್ತು ಆಧ್ಯಾತ್ಮ ಚಿಂತನೆ ಮಾಡುವುದು, ಕೊನೆಯ ಬಾರಿ ಮನೆಗೆ ಹೋದಾಗ ಗಣೇಶ ಹಬ್ಬವನ್ನು ಚೆನ್ನಾಗಿ ಆಚರಿಸಿ ಹೊಸ ಸೀರೆ, ಅದಕ್ಕೆ ಫಾಲ್ ಮತ್ತು ಮ್ಯಾಚಿಂಗ್ ರವಿಕೆ ಎಲ್ಲವನ್ನೂ ಸಿದ್ಧಮಾಡಿಕೊಳ್ಳುವುದು ಆರೋಗ್ಯವಂತರನ್ನೂ ನಾಚಿಸುವಂತದ್ದು. ಇಹಲೋಕ ತ್ಯಜಿಸುವ ಮುನ್ನ ಅವರು ಸಾವಿಗೆ ಹೇಳುವ ಮಾತು “ನಾನು ಎಲ್ಲೂ ಹೊಗುತ್ತಿಲ್ಲ, #ನಾನಿಲ್ಲೇ_ಇರುವೆ! ನನ್ನ ಪ್ರೀತಿಪಾತ್ರರ ಹೃದಯದಲ್ಲಿ, ಅವರ ನೆನಪುಗಳಲ್ಲಿ ಮುಂದೆಯೂ ಜೀವಿಸಲಿದ್ದೇನೆ” ಎಂಬ ಮಾತಿನಿಂದ ಅವರದೆಷ್ಟು ಸಾರ್ಥಕವಾದ ತುಂಬು ಜೀವನ ಎಂಬುದು ವೇದ್ಯವಾಗುತ್ತದೆ. ಅವರ ಬಗ್ಗೆ ಆದರ ಭಾವ ಮೂಡುತ್ತದೆ.

ಅಷ್ಟೇ ಅಲ್ಲದೇ, ಅವರ ಹೋರಾಟದಲ್ಲಿ ಅವರ ಹೆಗಲಿಗೆ ಹೆಗಲು ಕೊಟ್ಟು ನಡೆದ ಪತಿ, ಮಗಳು ಕಾವ್ಯ, ಮಗ ಕರ್ಣ, ಅಳಿಯ ಮತ್ತು ಸೊಸೆ ಹಾಗೂ ಮೊಮ್ಮಕ್ಕಳು ಹಾಗೂ ಕುಟುಂಬದವರೆಲ್ಲಾ ವಂದನಾರ್ಹರು.

ಕ್ಯಾನ್ಸರ್ ಚಿಕಿತ್ಸೆಯಂತೆಯೇ ರೋಗದ ಪರೀಕ್ಷೆಯೂ ಅಷ್ಟೇ ತ್ರಾಸದಾಯಕ. ಅದರ ಬಗ್ಗೆ ಸಾಕಷ್ಟು ಮಾಹಿತಿ ಪುಸ್ತಕದಲ್ಲಿ ಇದ್ದರೂ ನಾನು ಹೆಚ್ಚು ಬರೆಯಲಾರೆ. ಚಿಕಿತ್ಸೆಗಳ ಬಗ್ಗೆ ಓದುವಾಗ ಮನಸ್ಸು ಕದಡುತ್ತದೆ. ಈ ಚಿಕಿತ್ಸೆಗಳು ರೋಗ ನಿವಾರಿಸುತ್ತದೋ ಬಿಡುತ್ತದೋ, ಒಟ್ಟಿನಲ್ಲಿ ಸಾವನ್ನು ಸ್ವೀಕರಿಸಲು ರೋಗಿಯನ್ನು ಮಾನಸಿಕವಾಗಿ ಖಂಡಿತಾ ಸಿದ್ಧಮಾಡುತ್ತದೆ ಅನ್ನಿಸಿಬಿಟ್ಟಿತು. ಆದರೆ, ಎಷ್ಟೋ ಜನ ಈ ಚಿಕಿತ್ಸೆಗಳ ಮೂಲಕ ಪೂರ್ಣವಾಗಿ ಗುಣಮುಖರಾಗಿರುವುದರಿಂದ ತಜ್ಞರ ಸಲಹೆಯ ಪ್ರಕಾರ ಚಿಕಿತ್ಸೆ ಪಡೆಯುವುದು, ಬದುಕಿರುವ ವರೆಗೆ ಹೋರಾಡುವುದು ಮನುಷ್ಯ ಧರ್ಮ.

ಪ್ಯಾಲಿಯೇಟಿವ್ ಕೇರ್

ಈಗಾಗಲೇ ಹೇಳಿದಂತೆ ಈ ಪುಸ್ತಕದಲ್ಲಿ ತಜ್ಞ ವೈದ್ಯರ ಸಂದರ್ಶನಗಳಿವೆ. ವೈದ್ಯರ ಮನಸ್ಥಿತಿ, ಅವರು ರೋಗಿಗಳನ್ನು ಹಾಗೂ ಅವರ ಕುಟುಂಬದವರನ್ನು ಹೇಗೆ ತಯ್ಯಾರು ಮಾಡುತ್ತಾರೆ? ಎಂಬ ಬಗ್ಗೆ ಮಾಹಿತಿಯಿದೆ. ಮುಖ್ಯವಾಗಿ #ಪ್ಯಾಲಿಯೇಟಿವ್_ಕೇರ್ (ಆಪ್ತ ಸಲಹೆ, ಸಮಾಲೋಚನೆ ಮತ್ತು ನೋವು ನಿವಾರಣೆ) ತಜ್ಞರಾದ ಡಾ. ಪ್ರಶಾಂತ್ ಅವರ ಸಂದರ್ಶನ ನನ್ನ ಗಮನ ಸೆಳೆಯಿತು. ‘ದಿನವೂ ಸಾವು-ನೋವು ನೋಡುತ್ತಾ ನಮ್ಮನ್ನೂ ಖಿನ್ನತೆ ಆವರಿಸುತ್ತದೆ, ರೋಗಿಗಳ ನೋವು ಹಂಚಿಕೊಳ್ಳುತ್ತಾ ನಮಗೂ ಅದು ರವಾನೆಯಾಗುತ್ತದೆ, ನಾವೂ ಮನುಷ್ಯರೇ’ ಎಂಬ ಮಾತು ಮನಸ್ಸಿಗೆ ತಾಗಿತು. ಇದರ ಜೊತೆಗೆ, ತಾವು ಅನುಭವಿಸಿದ ಕೆಲವು ಸಾರ್ಥಕ ಕ್ಷಣಗಳನ್ನೂ ಅವರು ಹಂಚಿಕೊಂಡಿದ್ದಾರೆ.

ನೋವು ತಾಳಲಾರದೇ ‘ಈಗಲೇ ಸಾಯುವಂತೆ ಮಾಡಿ’ ಎಂದು ಬೇಡಿದ ಪೋಲಿಸ್ ಒಬ್ಬರು ಕೆಲವೇ ತಿಂಗಳುಗಳಲ್ಲಿ ಜೀವನಪ್ರೀತಿ ಬೆಳೆಸಿಕೊಳ್ಳುವಂತಾದದ್ದು, ತಾವೇ ಗಾಡಿ ಓಡಿಸಿಕೊಂಡು ಚಿಕಿತ್ಸೆಗೆ ಬಂದದ್ದನ್ನು ಅವರು ಸಾರ್ಥಕ ಭಾವದಿಂದ ನೆನೆಯುತ್ತಾರೆ. ರೋಗಿಯ ಕೊನೆಯ ಹಂತದಲ್ಲಿ ಅವರೊಂದಿಗೆ ಹೇಗೆ ವ್ಯವಹರಿಸಬೇಕು? ಕುಟಂಬದವರನ್ನು ಹೇಗೆ ಮಾನಸಿಕವಾಗಿ ಸಿದ್ಧಗೊಳಿಸಬೇಕು? ಎಂಬುದನ್ನೂ ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ಹೊರತಾಗಿ ಇತರ ಖಾಯಿಲೆಗಳಿಗೂ ಪ್ಯಾಲಿಯೇಟಿವ್ ಕೇರ್ ಅಗತ್ಯವಿರುವ ಬಗ್ಗೆ, ಆ ಸೇವೆಯನ್ನು ಒದಗಿಸುವ #ಕರುಣಾಶ್ರಮ #ಶಂಕರಾ_ಕ್ಯಾನ್ಸರ್ ಆಸ್ಪತ್ರೆ ಮುಂತಾದ ಸೇವಾಕೇಂದ್ರಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಇನ್ನು ಸ್ವತಃ ಆರ್ಥಿಕ ತಜ್ಞರಾದ ವಿಜಯಾರ ಪತಿ. ಕೆ.ಆರ್ ಸುಬ್ಬಕೃಷ್ಣ ಅವರು, ಪ್ರಮುಖ ಆರ್ಥಿಕ ಸಲಹೆಗಳನ್ನು ನೀಡುತ್ತಾರೆ. ಈ ಎಲ್ಲಾ ಚಿಕಿತ್ಸೆಯ ಖರ್ಚನ್ನು ನಿರ್ವಹಿಸಲು ತಾವು ಮೊದಲಿಂದ ಮಾಡಿಕೊಂಡು ಬಂದ ಆರ್ಥಿಕ ತಯ್ಯಾರಿ ಸಹಾಯ ಮಾಡಿದ ಬಗೆಯನ್ನು ವಿವರಿಸುತ್ತಾರೆ. ಜೀವ ವಿಮೆಯ ಅಗತ್ಯತೆ, ಅದನ್ನು ಆಯ್ಕೆ ಮಾಡಲು ಕೆಲವು ಉಪಯುಕ್ತ ಸಲಹೆಗಳನ್ನು ನೀಡುತ್ತಾರೆ. ಕೆಲವು ಮಾದರಿಗಳೊಂದಿಗೆ ಪ್ರತಿಯೊಬ್ಬರೂ ಮಾಡಬೇಕಾದ ಫೈನಾನ್ಶಿಯಲ್ ಪ್ಲಾನಿಂಗ್ ಬಗ್ಗೆ ಹೇಳುತ್ತಾರೆ. ಅಷ್ಟೇ ಅಲ್ಲದೇ, ಆಸ್ಪತ್ರೆಗೆ ಭೇಟಿ ನೀಡುವ ಮುನ್ನ ಹಾಗೂ ನಂತರ ಮಾಡಿಕೊಳ್ಳಬೇಕಾದ ತಯ್ಯಾರಿ, ರೋಗಿಯನ್ನು ನಿರ್ವಹಿಸುವ ರೀತಿಯ ಬಗ್ಗೆ ಉಪಯುಕ್ತ ಸಲಹೆ ಸೂಚನೆ ಕೊಡುತ್ತಾರೆ.

ಸ್ವತಃ ತಾವು ಹೃದ್ರೋಗಿಯಾಗಿದ್ದು ಪತ್ನಿಗೂ ಕ್ಯಾನ್ಸರ್ ಎಂದು ತಿಳಿದಾಗ ಸಹಜವಾಗಿ ಅವರಿಗೆ ಆಘಾತವಾಗಿತ್ತು. ಮಾನಸಿಕ ಬಳಲಿಕೆಯೂ ಆಗಿತ್ತು. ಆದರೆ ಅವರ ಶಿಸ್ತುಬದ್ಧ ಜೀವನ, ಆಧ್ಯಾತ್ಮಿಕ ಮನೋಭಾವ ಅವರಿಗೆ ಸಹಕಾರಿಯಾದವು. ಸ್ವತಃ ಮಾನಸಿಕ ವೇದನೆ ಅನುಭವಿಸುತ್ತಿದ್ದರೂ ವಿಜಯಾರನ್ನು ಅವರು ಹುರಿದುಂಬಿಸುವುತ್ತಿದ್ದರು. ಕ್ಯಾನ್ಸರ್ ಹೋರಾಟದಲ್ಲಿ ನಿರಂತರ ಜೊತೆಯಾಗಿದ್ದು, ಅವರ ಬೇಕು ಬೇಡಗಳನ್ನು ನೋಡಿಕೊಂಡ ರೀತಿ ರೋಗಪೀಡಿತರ ಕುಟುಂಬಕ್ಕೆ ಆದರ್ಶ ಮಾದರಿ ಎನ್ನಬಹುದು. ಒಟ್ಟಾರೆಯಾಗಿ ಈ ಪುಸ್ತಕ ಕ್ಯಾನ್ಸರ್ ನ ಬಗ್ಗೆ ಅಗತ್ಯ ಸಲಹೆಗಳನ್ನು ನೀಡುವ ಉಪಯುಕ್ತ ಕೈಪಿಡಿ.


  • ವಾಣಿ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW