ಹೆಣ್ಣಿನೊಡಲಿನ ಸಂಕಟಗಳ ಸಂವೇದನೆಯೇ ‘ನನ್ನೊಳಗಿನ ನಾನು’

ಶಿಕ್ಷಣ ಪಡೆದ ಮಹಿಳೆಯರು ಬರೀ ಉದ್ಯೋಗವನ್ನೆ ಮಾಡುತ್ತಾ ಕೂರಲಿಲ್ಲ. ಸಾಹಿತ್ಯ ಲೋಕದಲ್ಲೂ ತಮ್ಮದೇ ಛಾಪನ್ನು ಮೂಡಿಸುತ್ತಾ ಬಂದವರು, ಅಂಥವರಲ್ಲಿ ಕವಯತ್ರಿಯಾಗಿ, ಕಾದಂಬರಿಗಾತಿ೯ಯಾಗಿ, ಕಥೆಗಾತಿ೯ಯಾಗಿ, ಪಾರ್ವತಿ ಎಸ್ ಬೂದೂರು ಕೂಡಾ ಒಬ್ಬರು. ಅವರ ‘ನನ್ನೊಳಗಿನ ನಾನು’ ಕವನ ಸಂಕಲನದ ಕುರಿತು ಕವಿ ನಾರಾಯಣಸ್ವಾಮಿ(ನಾನಿ) ಅವರು ಬರೆದ ಒಂದು ಪರಿಚಯವನ್ನು ತಪ್ಪದೆ ಓದಿ…

ಕವನಸಂಕಲನ : ನನ್ನೊಳಗಿನ ನಾನು
ಲೇಖಕರು : ಪಾವ೯ತಿ ಎಸ್ ಬೂದೂರು
ಪ್ರಕಾಶಕರು : ನಿಶಾ ಪ್ರಕಾಶನ ಕೆಂಭಾವಿ
ಬೆಲೆ : 100/ ರೂಪಾಯಿಗಳು

ಯಾವುದೇ ಸಮಾಜದ ಪ್ರಗತಿಯನ್ನು ಮಾಪನ ಮಾಡಬೇಕಾದರೆ ನಾನು ಆ ಸಮಾಜದ ಅರ್ಧ ಭಾಗವಾದ ಮಹಿಳೆಯರ ಪ್ರಗತಿಯ ಮೇಲಿನಿಂದಲೇ ಮಾಡುತ್ತೇನೆ.

– ಡಾ. ಬಿ ಆರ್ ಅಂಬೇಡ್ಕರ್

ಈ ಮಾತನ್ನ ಆರಂಭದಲ್ಲಿ ಎಕೆ? ಉಪಯೋಗಿಸಿದೆನೆಂದರೆ ಅಥವಾ ಯಾಕೆ? ನೆನಪಿಸಿಕೊಂಡೆನೆಂದರೆ, ಭಾರತ ದೇಶ ಸ್ವಾತಂತ್ರ್ಯವಾಗುವುದಕ್ಕಿಂತಲೂ ಮುನ್ನ ಮತ್ತು ನಂತರದ ದಿನಗಳಲ್ಲಿ ಹೆಣ್ಣನ್ನು ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಿರಿಸಿದ್ದರು. ಪುರುಷ ಪ್ರಧಾನ ಸಮಾಜದ ಕುಟುಂಬದಲ್ಲಿ ಹೆಣ್ಣನ್ನು ನಾನಾ ಶೋಷಣೆಗೆ ಗುರಿಪಡಿಸಿ ಸಂಪ್ರದಾಯ, ಮೂಢನಂಬಿಕೆಗಳಿಗೆ ಬಲಿಕೊಡುತ್ತಿದ್ದರು. ಹೆಣ್ಣು ಪ್ರತಿಭಟಿಸಲಾರದಂತಹ ಸ್ಥಿತಿಯಲ್ಲಿ ಇದ್ದಳು ಆಕಾಲದಲ್ಲಿ.

ಭಾರತ ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ಮೇಲೆ ಮಹಿಳೆಯರಿಗಾಗಿಯೇ ವಿಶೇಷವಾದ ಕಾನೂನುಗಳು ಹಕ್ಕುಗಳು ರೂಪಿತವಾದವು, ಬಹುಮುಖ್ಯವಾಗಿ ಶಿಕ್ಷಣದ ಹಕ್ಕು, ಮತದಾನದ ಹಕ್ಕುಗಳು ದೊರೆಯಿತು. ಇದರ ಫಲವಾಗಿ ಹೆಣ್ಣುಮಕ್ಕಳು ಕೂಡ ಪುರುಷನಿಗೆ ಸಮಾನವಾಗಿ ಎಲ್ಲಾ ರಂಗಗಳಲ್ಲೂ ಕೂಡ ಬೆಳೆಯಲು ಪ್ರಾರಂಭಿಸಿದರು .

ಶಿಕ್ಷಣ ಪಡೆದ ಮಹಿಳೆಯರು ಬರೀ ಉದ್ಯೋಗವನ್ನೆ ಮಾಡುತ್ತಾ ಕೂರಲಿಲ್ಲ. ಸಾಹಿತ್ಯ ಲೋಕದಲ್ಲೂ ಕೂಡ ತಮ್ಮ ಬಹುಮುಖ ಪ್ರತಿಭೆಯನ್ನು ತೋರಿ ಉತ್ತಮ ಸ್ಥಿತಿಯತ್ತ ತಲುಪಿದರು. ಕನ್ನಡ ಸಾಹಿತ್ಯ ಲೋಕದಲ್ಲೂ ಕೂಡ ಪುರುಷರಿಗೆ ಸಮಾನವಾಗಿ ಕನ್ನಡ ಸಾಹಿತ್ಯವನ್ನ ಕಟ್ಟುವ ಬೆಳೆಸುವ ನಿಟ್ಟಿನಲ್ಲಿ ಮಹಿಳಾ ಬರಹಗಾರ್ತಿಯರು ದಿಟ್ಟ ಹೆಜ್ಜೆಯನ್ನು ಇಟ್ಟಿರುವುದು ಹೆಮ್ಮೆಯ ಸಂಗತಿ. ಈ ಆಧುನಿಕ ತಂತ್ರಗಾರಿಕೆ ಯಂತ್ರಗಾರಿಕೆಯ ಯುಗದಲ್ಲಿ ಮಹಿಳೆ ತನ್ನ ವೃತ್ತಿಗೆ ತನ್ನ ಮನೆಯ ಕುಟುಂಬ ನಿವ೯ಹಣೆಗೆ ಸೀಮಿತವಾಗದೆ ಸಾಹಿತ್ಯವನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡು ಕವಯತ್ರಿಯಾಗಿ, ಕಾದಂಬರಿಗಾತಿ೯ಯಾಗಿ ಕಥೆಗಾತಿ೯ಯಾಗಿ, ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೂಡ ತನ್ನ ಪ್ರೌಢಿಮೆಯನ್ನು ತೋರಿಸಿ ಹೆಸರುಗಳಿಸುತ್ತಿದ್ದಾರೆ. ಇಂತವರ ಸಾಲಿನಲ್ಲಿ ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಹೆಸರು ಶ್ರೀಮತಿ ಪಾರ್ವತಿ ಎಸ್ ಬೂದೂರು ರವರು.

ಶ್ರೀಮತಿ ಪಾರ್ವತಿ ದೇಸಾಯಿ ಬೂದೂರು ರವರು ಮುಖಪುಟದಲ್ಲಿ ಸ್ನೇಹಿತರಾಗಿ ಪರಿಚಯವಾದರೂ ಕೂಡ, ಬರಹಗಾರ್ತಿಯಾಗಿ ಲೇಖಕಿಯಾಗಿ ಅವರು ಇತ್ತೀಚೆಗೆ ನನಗೆ ಪರಿಚಯವಾದವರು. ಹೆಣ್ಣಿನ ಶೋಷಣೆಯ ಬಗ್ಗೆ, ಸಮಾಜದ ಬಗ್ಗೆ ಅವರಿಗಿರುವ ಕಳಕಳಿ, ಮತ್ತೊಬ್ಬರನ್ನು ಬೆಳೆಸಬೇಕು ಅನ್ನುವ ಹಂಬಲದ ಅವರ ಮನಸ್ಥಿತಿ, ಇವರ ಮಾತುಗಳನ್ನು ಕೇಳಿದಾಗ ನಿಜಕ್ಕೂ ಕೂಡ ಒಂದು ಭಾವನಲೋಕವನ್ನು ಸೃಷ್ಟಿಸಿದ ಅನುಭವ ನೀಡುತ್ತದೆ.

ಶ್ರೀಮತಿ ಪಾರ್ವತಿ ಎಸ್ ಬೂದೂರು ರವರು ರಾಜಕೀಯ ಕುಟುಂಬದಿಂದ ಬಂದವರು. ಕೆಲವು ಕಾಲ ತಾನು ರಾಜಕೀಯದಲ್ಲಿ ಸಕ್ರಿಯವಾಗಿದ್ದರು ಕೂಡ. ಬಾಲ್ಯದ ದಿನಗಳಿಂದ ತನ್ನನ್ನು ಸೆಳೆದಿದ್ದ ಸಾಹಿತ್ಯ ಲೋಕವನ್ನು ಪ್ರವೃತ್ತಿಯನ್ನಾಗಿ ಬಳಸಿಕೊಂಡರೆ ವಿನಃ ಸಾಹಿತ್ಯವನ್ನು ಎಂದೂ ಅವರು ಕಡೆಗಣಿಸಲಿಲ್ಲ. ಸಿಕ್ಕ ಸಮಯವನ್ನ ಸದುಪಯೋಗಪಡಿಸಿಕೊಂಡು ಬರೆದ ಕವಿತೆಯ ಸಾಲುಗಳನ್ನು ಒಂದೆಡೆ ಸೇರಿಸಿ, ಅದಕ್ಕೆ ಪುಸ್ತಕ ರೂಪವನ್ನು ಕೊಟ್ಟು ಚೊಚ್ಚಲ ಕವನಸಂಕಲನವಾಗಿ ಹೊರತಂದ ಕೃತಿಯೇ ನನ್ನೊಳಗಿನ ನಾನು

ಈ ನನ್ನೊಳಗಿನ ನಾನು ಕವನಸಂಕಲನಕ್ಕೆ ಮಹಿಪಾಲ ರೆಡ್ಡಿ ಮನ್ನೂರ್ ಮುನ್ನುಡಿ ಬರೆದು ಶ್ರೀಮತಿ ಪಾರ್ವತಿ ಎಸ್ ಬೂದೂರ್ ರವರ ಇಡೀ ಕವನ ಸಂಕಲನ ಮತ್ತು ಅದರೊಳಗಿನ ಕವಿತೆಗಳು ಹೆಣ್ಣಿನೊಡಲಿನ ತಲ್ಲಣಗಳಾಗಿವೆ. ಇಲ್ಲಿ ಪ್ರೀತಿಯ ಸಂವೇದನೆಯೂ ಇದೆ ಎಂದು ಹೇಳಿ ಬಹುವಿಸ್ತಾರವಾಗಿ ಮುನ್ನುಡಿಯನ್ನು ಬರೆದು ಹಾರೈಸಿದ್ದಾರೆ. ಬೆನ್ನುಡಿಯನ್ನು ಬರೆದ ವೀರಣ್ಣ ಕಲಕೇರಿ ಸಾಹಿತಿಗಳು ಕೆಂಭಾವಿ ಇವರು ಹೇಳುವಂತೆ ಇಲ್ಲಿರುವ ಬಹುಪಾಲು ಕವಿತೆಗಳು ಓದುಗರನ್ನು ಆತ್ಮಾವಲೋಕನದೋಳು ಕೊಂಡೊಯ್ಯುತ್ತವೆ. ಅಸಮಾನತೆ ಸಾಮಾಜಿಕ ಜಂಜಾಟಗಳನ್ನು ಪ್ರತಿಬಿಂಬಿಸಿದ್ದಾರೆ ಎಂದು ಹೇಳಿ ಹಾರೈಸಿದ್ದಾರೆ. ಈ ಕವನ ಸಂಕಲನಕ್ಕೆ ಶ್ರೀ ಗುರು ಮಡಿದಾಳೇಶ್ವರ ಶಿವಾಚಾರ್ಯರು ಪಂಚರಂಗ ಸಂಸ್ಥಾನ ಗದ್ದಿಗಿ ಮಠ ಕಲಕೇರಿ ಇವರ ಆಶೀರ್ವಚನವಿದೆ.

ನನ್ನೊಳಗಿನ ನಾನು ಕವನ ಸಂಕಲನವನ್ನು ಓದಿಗೆ ಹಚ್ಚಿಕೊಂಡಾಗ ಓದುಗನ ಮನ ಸೆಳೆಯುವುದು ಅವರು ಬಳಸಿರುವ ಪದಗಳ ಗುಚ್ಚ, ಇವರ ಕವನಸಂಕಲನವನ್ನು ನಾನು ಓದಿದಾಗ ಹೊಸ ಹೊಸ ಪದಗಳನು ಮೊದಲ ಬಾರಿಗೆ ಓದುತ್ತಿದ್ದೇನೆ ಎಂದು ಅನಿಸಿದ್ದು ಸುಳ್ಳಲ್ಲ.

ನನ್ನೊಳಗಿನ ನಾನು ಕೃತಿಯ ಮೊದಲ ಕವಿತೆಯಲ್ಲಿಯೇ ಮಹಿಳೆ . ಶೀರ್ಷಿಕೆಗೆ ತಕ್ಕಂತೆ ಪದಗಳ ಸಾಲುಗಳಿಗೆ ಜೀವ ತುಂಬಿದ್ದಾರೆ. ಮೊದಲ ಕವಿತೆಯೇ ಓದುಗರ ಮನಸೆಳೆದು ಇಡೀ ಕೃತಿಯನ್ನ ಓದುವಂತೆ ಪ್ರೇರೇಪಿಸುತ್ತದೆ.

ಆಬಲೆಯೆಂಬ ಪಟ್ಟವರಿಸಿ
ಸಬಲರೆಂಬ ಅಹಂ ಧರಿಸಿ
ನಿಗೂಢತೆಯಂತೆ ಅವಳ ಮನ
ಮೀನಿನೆಜ್ಜೆಗೆ ಹೋಲಿಸಿ

ಈ ಪುರುಷ ಪ್ರಧಾನವಾದಂತಹ ಸಮಾಜ ಮಹಿಳೆಯನ್ನು ಯಾವ ರೀತಿಯಲ್ಲಿ ಶೋಷಣೆಗೆ ಗುರಿಪಡಿಸಿದ್ದರು ಎಂಬ ನೋವನ್ನ ಈ ಕವಿತೆಯ ಮೂಲಕ ಹೊರ ಚೆಲ್ಲಿದ್ದಾರೆ. ಹೆಣ್ಣು ತಾನು ಒಂಬತ್ತು ತಿಂಗಳು ತನ್ನ ಒಡಲಲ್ಲಿ ಹೊತ್ತು ಜೀವಕ್ಕೆ ಜನ್ಮವನು ನೀಡುತ್ತಾಳೆ. ತನ್ನ ಕಷ್ಟ ಸುಖಗಳನ್ನ ಮರೆತು ಜೀವಕ್ಕೆ ಉಸಿರನ್ನು ಕೊಡುತ್ತಾಳೆ. ಅದರೆ ಉಸಿರು ಕೊಟ್ಟ ಜೀವವನ್ನೇ ಪುರುಷ ಉಸಿರುಗಟ್ಟಿಸಿ, ಅಪಹರಿಸಿ ಕಾಮದ ತೃಷೆಯನ್ನು ತೀರಿಸಿಕೊಳ್ಳುತ್ತಾನೆ. ಹೂವಿನಂತ ಹೆಣ್ಣು ಗಂಡಸೆಂಬುವನು ಮುಳ್ಳು ಎಂದು ತಿಳಿದರು, ಮುಳ್ಳನ್ನೆ ನಂಬಿ ನನಗೆ ರಕ್ಷೆ ನೀಡುತ್ತಾನೆ ಎಂದು ಭಾವಿಸಿ ಬರುತ್ತಾಳೆ. ಅದರೆ ಅರಳುವ ಹೂವುವನ್ನು ಮೊಗ್ಗಿನಲ್ಲೆ ಹಿಸುಕಿ ಹಾಕುತ್ತೀರಾ ಎಂದು ಪ್ರಶ್ನಿಸುತ್ತಾರೆ. ಗಗನದಲ್ಲಿ ಅವಳು ವಿಹರಿಸಿ ಬಂದರೂ ಕೂಡ, ಅವಳ ಬುದ್ಧಿ ಮೊಣಕಾಲ ಕೆಳಗೆ ಎಂದು ಹಿಯ್ಯಾಳಿಸುತ್ತೀರಾ. ದೇವತೆಯೆಂಬ ಪಟ್ಟಕಟ್ಟಿ ಅವಳಿಗೆ ಚಂಚಲೆ ಎಂದು ಜರಿಯುತ್ತಿರಿ. ಆದರೂ ಕೂಡ ಮಹಿಳೆ ಸವ೯ ಪಾತ್ರಗಳನ್ನು ನಿರ್ವಹಿಸುತ್ತಾ ಶಿಖರದೆಡೆಗೆ ನಡೆಯುತ್ತಿದ್ದಾಳೆ. ಎಂದು ಮನವನು ಸೆಳೆಯುವ ರೀತಿಯಲ್ಲಿ ಕವಿತೆಯೂ ಸಾಲುಗಳನ್ನ ರಚಿಸಿದ್ದಾರೆ.

ನಮ್ಮ ದೇಶ ಹಳ್ಳಿಗಳ ದೇಶ, ಅಂದಿನ ಕಾಲದಲ್ಲಿ ಹಳ್ಳಿಯಲ್ಲಿ ಜನರು ತಮ್ಮ ದಿನನಿತ್ಯದ ಆಹಾರದ ವಸ್ತುಗಳನ್ನು ತಾವೇ ತಯಾರಿಸಿ ಬಳಸುತ್ತಿದ್ದರು. ಯಂತ್ರಗಳನ್ನು ಉಪಯೋಗಿಸುತ್ತಿರಲಿಲ್ಲ. ಬೀಸುವ ಕಲ್ಲು ರುಬ್ಬುವ ಕಲ್ಲು ಕುಟ್ಟುವ ಒನಕೆ ಇವು ಬಹುಮುಖ್ಯವಾದ ಪಾತ್ರವಹಿಸಿದ್ದವು. ಇಲ್ಲಿ ತನ್ನ ಅನುಭವವನ್ನೆ ಕವಯಿತ್ರಿ ಕವಿತೆಯನ್ನಾಗಿ ರಚಿಸಿದ್ದಾರೆ.

ನಸು ಬೆಳಗಾಗಲು ನನ್ನಜ್ಜಿ
ಬೀಸಲು ಶುರು ಮಾಡಿದಳು ಸಜ್ಜಿ
ಕಲ್ಲಿನ ಗೂಟದ ತಿರುಗಿಸಿ
ರವೆ ಹಿಟ್ಟುಗಳ ತಯಾರಿಸಿ

ಹಿಂದಿನ ಕಾಲದಲ್ಲಿ ಬಹಳಷ್ಟು ಮನೆಗಳಲ್ಲಿ ಬೀಸುವ ಕಲ್ಲಿನಿಂದಲೇ ಆಯಾ ಪ್ರಾಂತ್ಯಗಳಲ್ಲಿ ಉಪಯೋಗಿಸುವ ಧಾನ್ಯಗಳನ್ನ ಬೀಸುವ ಕಲ್ಲಿಗೆ ಹಾಕಿ ತಿರುಗಿಸುತ್ತಾ ಹಿಟ್ಟು ಮಾಡಿ ಉಪಯೋಗಿಸುತ್ತಿದ್ದರು. ಆ ಕೆಲಸ ಮಾಡುವಾಗ ಜಾನಪದ ಗೀತೆಗಳನ್ನು ಹಾಡುತ್ತಿದ್ದರು. ಈ ಕವಿತೆಯಲ್ಲಿ ಅಜ್ಜಿ ಆ ಬೀಸುವ ಕಲ್ಲನ್ನು ಬೀಸುವಾಗ ಆಯಾಸವಾದರೆ ಸುತ್ತಾ ಕುಳಿತು ನಗುತ್ತಿದ್ದ ಆ ಮಕ್ಕಳ ನಗುವಿನಿಂದ ಆಯಾಸವನ್ನು ಮರೆಯುತ್ತಿದ್ದಳು. ಕಲ್ಲಿನಿಂದ ಬೀಸಿ ತಯಾರಿಸಿದ ಹಿಟ್ಟಿನಿಂದ ವಿವಿಧ ರೀತಿಯ ರುಚಿಯಾದ ಉಂಡೆಗಳನ್ನು ತಯಾರಿಸಿ, ಆಗಿನ ಕಾಲಕ್ಕೆ ಬೇಕರಿ ಆಗಿದ್ದಳು ಅಜ್ಜಿ. ಆದರೆ ನಾವು ಇಂದು ಯಂತ್ರಗಳಿಂದ ಕೆಲಸ ಮಾಡಿಸುತ್ತಾ, ದೈಹಿಕ ಶ್ರಮವನ್ನೇ ಮರೆತು ಹೋಗಿದ್ದೇವೆ. ವಾಯು ವಿಹಾರ ,ಯೋಗ, ಧ್ಯಾನಗಳಿಂದ ಕಾಯಿಲೆಗಳನ್ನು ಸಂಹಾರ ಮಾಡೋಣ. ಹಿರಿಯರ ಹಾಗೆ ನಾವು ಬದುಕೋಣ, ನಮ್ಮ ಹಿರಿಯರ ಜೀವನದ ಆಯುಷ್ಯದ ಗುಟ್ಟನ್ನು ನಮಗಿಂತ ಕಿರಿಯರಿಗೆ ತಿಳಿಸೋಣ ಎಂದು ಮನಸೆಳೆವ ರೀತಿಯಲ್ಲಿ ಕವಿತೆಯನ್ನಾಗಿಸಿ ಯಶಸ್ವಿಯಾಗಿದ್ದಾರೆ.

ಬಂಗಾರದಂತ ಬಾಲ್ಯವನ್ನ ನಾವು ಹೇಗೆ ಕಳೆದೆವು ಹಳ್ಳಿಯ ಜೀವನದಲ್ಲಿ, ಸುರಿದ ಮಳೆಗೆ, ಹರಿಯುವ ಹಳ್ಳದ ನೀರಿನಲ್ಲಿ ಈಜುವಾಗ ಅನುಭವಿಸಿದ ಸಂತೋಷ ಮತ್ತು ಅಂದಿನ ದಿನಗಳಲ್ಲಿ ಶಾಲೆಯಲ್ಲಿ ಇಂತಿಷ್ಟೇ ಅಂಕಗಳು ಪಡೆಯಬೇಕೆಂಬ ಯಾವುದೇ ಒತ್ತಾಯಪೂರ್ವಕ ನಿರ್ಧಾರ ನಿರ್ಣಯಗಳು ಕೂಡ ಇರಲಿಲ್ಲ ಎಂಬುದನ್ನು ಈ ಕವಿತೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ

ಕಾಮನ ಹಬ್ಬಕ್ಕೆ ಕಟ್ಟಿಗೆ ಕದ್ದು
ಪಕ್ಕದ ಮನೆಯವರ ಕಣ್ಣಿನಿಗೆ ಬಿದ್ದು
ತಪ್ಪಿಸಿಕೊಳ್ಳದೆ ಓಡಿದೆವು
ಒಂದೇ ಸಮನೇ ಎದ್ದು ಬಿದ್ದು

ಅಂದು ಕಳೆದಂತಹ ಬಾಲ್ಯ ಜೀವನ ಈಗಿನ ಮಕ್ಕಳು ಅನುಭವಿಸುತ್ತಿಲ್ಲ, ನೋಡಲೂ ಕೂಡ ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ನಾವು ಮಕ್ಕಳನ್ನು ಬೆಳೆಸುತ್ತಿದ್ದೇವೆ. ಇದು ಬಹಳ ವಿಷಾದನೀಯ ಸಂಗತಿ. ಕವಿಯತ್ರಿ ಕೊನೆಯ ಸಾಲುಗಳಲ್ಲಿ ಹೇಳುತ್ತಾರೆ.
ಯಾಯತಿ ದೇವರಲ್ಲಿ ನನಗೆ ಮತ್ತೆ ಯೌವ್ವನ ಕೊಡು ಎಂದು ಪ್ರಾರ್ಥಿಸಿದನಂತೆ. ಆದರೆ ನಾನು ದೇವರಿಗೆ ಕೇಳುತ್ತೇನೆ ಮರಳಿ ನನ್ನ ಬಾಲ್ಯ ನನಗೆ ಸಿಗುವುದೇನಾ? ಎಂದು.

ಪಾರ್ವತಿ ಎಸ್ ಬೂದೂರು ರವರ ಕವಿತೆಗಳಲ್ಲಿ ಕಲ್ಪನಾ ಲೋಕವಿಲ್ಲ, ನಮ್ಮ ನಿಮ್ಮ ನಡುವೆ ನಡೆದಂತಹ ಘಟನೆಗಳನ್ನು, ಅನುಭವಿಸಿದ ನೋವುಗಳನ್ನ, ಆ ದಿನಗಳ ನೆನಪುಗಳನ್ನು, ಮನೆಯಲ್ಲಿ ತಯಾರಿಸಿದ ಹೋಳಿಗೆ ರೀತಿಯನ್ನು ನೆನಪಿಸಿಕೊಂಡು ಇಂತಹ ಸಾಧಾರಣ ವಿಷಯಗಳನ್ನೇ ಬಳಸಿ ಸುಂದರವಾದ ರೂಪಕಗಳನ್ನು ಬರೆದು ಕಾಡುವ ಕವಿತೆಯನ್ನಾಗಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಹಸಿವೆ ಎಂಬ ಮಹಾಮಾರಿ ಕಾಡುತಿರುವ ಗುಮ್ಮ
ನೀಗಲೊಂದು ಔಷಧಿ ಇದ್ದರೆ ಹೇಳಿಯೇ ಬಿಡಮ್ಮ

ಈ ಕವಿತೆಯಲ್ಲಿ ಬರುವ ಹಸಿವು ಕವಯಿತ್ರಿ ಪ್ರಕಾರ ಬರೀ ಹೊಟ್ಟೆಯ ಹಸಿವು ಮಾತ್ರವಲ್ಲ, ಬದುಕಿನಲ್ಲಿ ಮನುಷ್ಯನಿಗೆ ನಾನಾ ರೀತಿಯ ಹಸಿವುಗಳು ಪ್ರತಿನಿತ್ಯ ಕಾಡುತ್ತವೆ. ಅವನು ಅವುಗಳನ್ನು ಪಡೆಯಲು ನಾನಾರೀತಿ ಪ್ರಯತ್ನಿಸುತ್ತಾನೆ. ಪೂಜಾರಿ ಮೌಲ್ವಿ ಪಾದ್ರಿಗಳನ್ನ ಈ ಸಮಾಜ ದೇವರಂತೆ ಪೂಜಿಸಿ ಆರಾಧಿಸಿದರು ಕೂಡ, ಅವರೊಳಗೆ ಕಾಮದ ಹಸಿವು ತಾಂಡವಾಡುತಿದೆ.

ಹದಿಹರಿಯದ ಯುವ ಜನಾಂಗದಲ್ಲಿ ಮೋಹದ ಹಸಿವು ಅಮಲಿನಂತೆ ಆವರಿಸಿದೆ ಎಂದು ಹೇಳಿ ಕೊನೆಯ ಸಾಲುಗಳಲ್ಲಿ ಒಂದು ಆಶಯವನ್ನು ಕೂಡ ವ್ಯಕ್ತಪಡಿಸುತ್ತಾರೆ.

ಕಳಚಲಿ ವಿಕೃತ ಮನಸ್ಸುಗಳ ಪೊರೆ
ಬೀಳಲಿ ವಿನಾಶದ ಹಸಿವುಗಳಿಗೆ ತೆರೆ
ಹಬ್ಬಿದರೆ ಸದೃಢ ಸಂಸ್ಕೃತಿಯ ಮೊರೆ
ನೀಗುವುದು ಎಲ್ಲಾ ಬಗೆ ಹಸಿವಿನ ಕರೆ

ಈ ನನ್ನೊಳಗಿನ ನಾನು ಕವನ ಸಂಕಲನದಲ್ಲಿರುವ ಪ್ರತಿಯೊಂದು ಕವಿತೆಯೂ ಕೂಡ ಸಮಾಜಕ್ಕೆ ಒಂದು ಸಂದೇಶವಾಗಿ ಒಂದು ಸದಾಶಯವಾಗಿ ಓದುಗರ ಮನಸ್ಸನ್ನು ತಾಕುವ ರೀತಿಯಲ್ಲಿ ಕವಿತೆಗಳು ಮಾತನಾಡುತ್ತವೆ.

ಒಡಲಿನ ಹಸಿವು ನೀಗಿಸಲೆಂದು
ಬದುಕಿನ ಬವಣೆಯ‍ ಬಾಗಿಸಲೆಂದು
ದುಡಿಯಲು ಸವಾರಿ ಪಟ್ಟಣವರಸಿ
ಕರುಳ ಕುಡಿಗಳು ಒಟ್ಟಿಗೆ ಸೇರಿಸಿ

ಹಳ್ಳಿಗರ ಬಡತನದ ಚಿತ್ರಣವನ್ನ ಈ ಕವಿತೆಯು ತೆರೆದಿಡುತ್ತದೆ ಆ ಸಾಲುಗಳು ಮನಸ್ಸನ್ನು ಒಂದು ಕ್ಷಣ ಕಾಡಿಯೇ ಬಿಡುತ್ತದೆ.

ಅದು ನಿಜ, ಭಾರತದಲ್ಲಿ ಬಡತನ ತಾಂಡವಾಡುತ್ತಿದೆ ಬಹಳಷ್ಟು ಜನರಿಗೆ ಒಂದೊತ್ತಿನ ಊಟಕ್ಕೂ ಕಷ್ಟವಾಗುತ್ತಿದೆ. ಬಹಳಷ್ಟು ಜನ ತಮ್ಮ ಜೀವವನ್ನು ಉಳಿಸಿಕೊಳ್ಳಲು, ಮಕ್ಕಳನ್ನು ಬದುಕಿಸಿಕೊಳ್ಳಲು, ಪಟ್ಟಣದ ಕಡೆ ಮುಖ ಮಾಡುತ್ತಿದ್ದಾರೆ. ಹಳ್ಳಿಯಲ್ಲಿ ವ್ಯವಸಾಯ ಮಾಡಲು ನೀರಾವರಿಯ ಕೊರತೆ. ಮಳೆಯನ್ನೇ ಆಶ್ರಯಿಸಿ ವ್ಯವಸಾಯ ಮಾಡಿ ಬದುಕುವುದು ಕಷ್ಟವಾಗುತ್ತಿದೆ. ಪಟ್ಟಣದಲ್ಲಿ ನಮ್ಮ ಬದುಕನ್ನ ಉತ್ತಮಗೊಳಿಸಿಕೊಳ್ಳಬಹುದೇನೋ ಎಂಬ ಆಸೆಯಿಂದ ಬಹಳಷ್ಟು ಜನರು ನಗರ ಪ್ರದೇಶದ ಕಡೆಗೆ ಗುಳೆ ಹೊರಟು ಬರುತ್ತಿದ್ದಾರೆ. ಹಾಗೇ ಗುಳೆ ಬಂದ ಶ್ರಮಿಕರು ಸುಖವಾಗಿ ಜೀವನ ನಡೆಸುತ್ತಿದ್ದಾರೆಯೇ ಖಂಡಿತವಾಗಿಯೂ ಇಲ್ಲ. ಅಕಸ್ಮೀಕವಾಗಿ ಯಾವುದೋ ಲಾರಿ ಕೆಳಗೋ ಬಸ್ಸಿಗೋ ಡಿಕ್ಕಿ ಹೊಡೆದು ಪ್ರಾಣಪಕ್ಷಿ ಹಾರಿ ಹೋಗುತ್ತಿದೆ. ಆ ಸಮಯದಲ್ಲಿ ಅವರನ್ನ ನಂಬಿ ಬಂದವರ ಬದುಕು ಶವಕ್ಕಿಂತಲೂ ಕೀಳಾಗಿ ಬಿಡುತ್ತದೆ. ಈ ಗುಳೆ ಬಂದಂತಹ ಕಾರ್ಮಿಕರು ಗಣಿಗಳಲ್ಲಿ ಕೆಲಸ ಮಾಡುತ್ತಿರುವಾಗ ಸಂಭವಿಸಿದ ದುರಂತಗಳಲ್ಲಿ ಸತ್ತವರೆಷ್ಟೋ. ಮಾಡಿದ ಸಾಲ ತೀರಿಸಲಾಗದೆ ಅದೆಷ್ಟೋ ಜನ ಆತ್ಮಹತ್ಯೆಗೆ ಮೊರೆ ಹೋಗುತ್ತಾರೋ. ಇಷ್ಟಾದರೂ ಮನುಜನಲ್ಲಿ ಆಸೆ ಮೋಹ ನೋವು ಕಡಿಮೆಯಾಗುತ್ತದೆ ಎಂಬ ಭರವಸೆ ಇಲ್ಲ. ಕೊನೆಯಲ್ಲಿ ಶ್ರಮಿಕರೇ ಈ ದೇಶದ ನಿಜವಾದ ಸಂಪತ್ತು, ತಪ್ಪಿಸಿ ಅವರು ಅನುಭವಿಸಿದ ಆಪತ್ತು ಎಂದು ಹೇಳಿ ಕವಿತೆಯನ್ನು ಮುಗಿಸುತ್ತಾರೆ.


‘ನನ್ನೊಳಗಿನ ನಾನು’ ಕವನಸಂಕಲನ ಕವಿಯತ್ರಿ ಪಾವ೯ತಿ ಎಸ್ ಬೂದೂರು

ಪಾವ೯ತಿ ದೇಸಾಯಿ ರವರ ನನ್ನೊಳಗಿನ ತಾನು ಕವನ ಸಂಕಲನ ಇವರ ಮೊದಲ ಕವನ ಸಂಕಲನ ಎಂದು ನಮಗೆ ಅನಿಸುವುದು ಇಲ್ಲ. ಇವತ್ತಿನ ಬಹಳಷ್ಟು ಕವಿಗಳು ಕವಯತ್ರಿಯರು ತಮ್ಮ ಕವನ ಸಂಕಲನಗಳಲ್ಲಿ ದೇವರ ಆರಾಧನೆ, ಪ್ರೀತಿ ಪ್ರೇಮ, ವಿರಹವೇ ತುಂಬಿದ ಸಾಲುಗಳು ಇರುತ್ತವೆ. ಈ ಕವನಸಂಕಲನದಲ್ಲಿ ಕವಯತ್ರಿ ಎಲ್ಲೂ ಕಲ್ಪನೆಯ ಲೋಕದ ಕಡೆಗೆ ಸಾಗದೆ, ಜೀವನದ ಬದುಕನ್ನೇ ಕವಿತೆಯನ್ನಾಗಿಸುವ ಕಲೆಗೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಮನುಜನ ಬದುಕಿಗೆ ಇತ್ತೀಚೆಗೆ ಮಾರಕವಾಗಿ ಪರಿಣಮಿಸುತ್ತಿರುವ ಮೊಬೈಲ್ ಅಥವಾ ಜಂಗಮವಾಣಿಯ ಬಗ್ಗೆಯೂ ಕೂಡ ಕವಿತೆಯನ್ನು ಬರೆದಿದ್ದಾರೆ

ಶಾಲೆಗಿಂತಲೂ ಅಧಿಕೊಲವು ಹೊಂದಿದೆ
ಬಲದಿರಿಮೆಗೆ ಸೃಜನಶೀಲತೆ ಕೊಂದಿದೆ
ಸರ್ವವ್ಯಾಪಕದರಡಿ ಸ್ವಂತಿಕೆಯು ನಂದಿದೆ
ಭವ್ಯ ಭವಿತವ ಮುಸುಕಿ ಕಾಮೋ೯ಡವೆರಗಿ ನಿಂದಿದೆ

ಮುಗ್ಧ ಮಕ್ಕಳನ್ನು ಸೆಳೆಯಲೆಂದೆ ನಿನ್ನ ಉದಯವಾಯಿತೆ? ಜಂಗಮವಾಣಿ ಎಂದು ಪ್ರಶ್ನಿಸುತ್ತಾ, ಮನುಜನ ಸೃಜನಶೀಲತೆಯನ್ನು ಈ ಮೊಬೈಲ್ ಕೊಂದಿದೆ. ಈ ಜಂಗಮವಾಣಿಯ ಬಳಕೆಯಿಂದಾಗಿ ಸ್ವಂತಿಕೆಯನ್ನ ಮನುಷ್ಯ ಕಳೆದುಕೊಳ್ಳುತ್ತಿದ್ದಾನೆ. ಉದಾಹರಣೆಗೆ : ಹಿಂದೆ ಒಬ್ಬ ವಿದ್ಯಾರ್ಥಿ ಅಥಾವ ಒಬ್ಬ ಶಿಕ್ಷಕ ಯಾರೇ ಆಗಲಿ ಯಾವುದಾದರೊಂದು ವಿಷಯವನ್ನು ತಿಳಿಯಲು ಇಲ್ಲ ಪದಗಳ ಗೂಡಾಥ೯ವನ್ನು ತಿಳಿದುಕೊಳ್ಳಲು ಹಲವಾರು ಗ್ರಂಥಗಳನ್ನು ಪುಸ್ತಕಗಳನ್ನು ತಡಕಾಡಬೇಕಾಗಿತ್ತು. ಇಲ್ಲ ಯಾರಾದರೂ ತಿಳಿದವರನ್ನು ಕೇಳಿ ತಿಳಿದುಕೊಳ್ಳಬೇಕಿತ್ತು. ಅದರೆ ಚಲನವಾಣಿ ಬಂದ ಮೇಲೆ ಕ್ಷಣಾಧ೯ದಲ್ಲಿ ಉತ್ತರ ಸಿಗುತ್ತದೆ. ಓದಬೇಕಾಗಿಲ್ಲ ಕೇಳಬೇಕಾಗಿಲ್ಲ. ಮೊಬೈಲ್ ಮನುಜನಲ್ಲಿನ ಬುದ್ದಿಮತ್ತೆಯನ್ನು ಕುಂದಿಸಿದೆ. ಮೊಬೈಲ್ ಬಂದ ಮೇಲೆ ಹಿರಿಯರು ಹೇಳುತ್ತಿದ್ದ ಕಥೆಗಳು ಪದ್ಯಗಳು ಮಕ್ಕಳಿಗೆ ಹಳಸಿದ ಆಡುಗೆಯಂತಾಗಿದೆ. ಈ ಮೊಬೈಲ್ ನ ವ್ಯಾಮೋಹದಿಂದ ಮರಕೋತಿಯಾಟ ಲಗೋರಿ ಬುಗರಿಯಾಟ ಕಲಿಸುವುದು ಕಲಿಯುವುದು ಕೂಡ ಜನರಿಗೆ ಮರೆತು ಹೋಗಿದೆ. ಮನದೊಳಗೆ ಆಡಗಿದ್ದ ಸೂತ್ರಗಳೆಲ್ಲಾ ಮರೆಯಾಗಿ ಮೋಸ ಸುಳ್ಳು ಮಾತುಗಳು ತಾಂಡವಾಡುತ್ತಾ ಯಾವುದೇ ಭೀತಿಯಲ್ಲದೆ ನತಿ೯ಸುತ್ತಿವೆ ಮಕ್ಕಳು ಚಿಗುರುವ ಮುನ್ನವೇ ನೀಲಿ ಚಿತ್ರಗಳನ್ನು ನೋಡುತ್ತಾ, ಖಿನ್ನತಿಗೆ ಒಳಗಾಗಿ ಅಕಾಲಿಕ ಮರಣಕ್ಕೆ ಮುಗ್ಧ ಮಕ್ಕಳು ಬಲಿಯಾಗಿ ಹೋಗುತ್ತಿದ್ದಾರೆ. ಪ್ರತಿಯೊಬ್ಬ ತಂದೆ ತಾಯಿಯೂ ಕೂಡ ಇಂತಹ ಕವಿತೆಯನ್ನು ಓದಿ ಅರ್ಥೈಸಿಕೊಂಡು ಮಕ್ಕಳಿಗೆ ಮೊಬೈಲ್ ನಿಂದಾಗುವ ದುಷ್ಪರಿಣಾಮಗಳನ್ನು ತಿಳಿ ಹೇಳಿದರೆ ಈ ಕವಿತೆ ಸಾಥ೯ಕತೆಯನ್ನು ಪಡೆಯುತ್ತದೆ ಅಂತ ನನ್ನ ಭಾವನೆ.

ಈ ಕವನಸಂಕಲನದಲ್ಲಿ ಸುಮಾರು 82 ಕವಿತೆಗಳು ಇದ್ದು ಪ್ರತಿಯೊಂದು ಕವಿತೆಯೂ ಕೂಡ ಒಂದೊಂದು ಬಗೆಯ ಆಶಯವನ್ನು ಹೊಂದಿವೆ. ಪ್ರತಿ ಕವಿತೆಯೂ ಸಮಾಜದೆಡೆಗೆ ಕವಯಿತ್ರಿ ಹೊಂದಿರುವ ಕಾಳಜಿಯನ್ನು ಸಾರುತ್ತದೆ. ಮನುಜಮತ ಶೀರ್ಷಿಕೆಯ ಕವಿತೆಯು ಸಮಾಜದಲ್ಲಿ ಮೇಲು ಕೀಳು ಸಮಾನತೆಯ ಬಗ್ಗೆ ಸಾರಿದರೆ, ಸಂಕ್ರಮಣವೆಂಬ ಶೀರ್ಷಿಕೆಯ ಕವಿತೆಯು ನಮ್ಮ ಸಂಸ್ಕೃತಿಯ ಹಬ್ಬದ ವಿಶೇಷತೆಯನ್ನು ಸಾರುತ್ತದೆ. ಆಪವಿತ್ರ ಕವಿತೆಯು ಹೆಣ್ಣಿನ ಮುಟ್ಟು ಮತ್ತು ಮೈಲಿಗೆಯ ಬಗ್ಗೆ ಸಾರಿದರೆ, ಬಾಲ್ಯವಿವಾಹ ಹೆಣ್ಣು ಮಕ್ಕಳ ಬದುಕು ಬವಣೆಯ ನೋವುಗಳನ್ನು ಹೇಳುತ್ತದೆ. ಕಾರ್ಮಿಕನ ಕೂಗು, ಹಿತ್ತಾಳೆಯ ಕಿವಿ, ಹೀಗೆ ಎಲ್ಲಾ ಕವಿತೆಗಳು ಕೂಡ ಮನಸ್ಸನ್ನು ಸೆಳೆದು ಕೊನೆಯ ಸಾಲಿನವರೆಗೂ ಓದಿಸಿಕೊಳ್ಳುತ್ತದೆ.

ಈ ಕೃತಿಯಲ್ಲಿನ ಎಲ್ಲಾ ಕವಿತೆಗಳನ್ನು ವಿವರಿಸುತ್ತಾ ಹೋದರೆ ಓದುಗರ ಕುತೂಹಲ ಕಡಿಮೆಯಾಗಬಹುದು ಅದ್ದರಿಂದ ಕೆಲವೊಂದು ಕವಿತೆಗಳನ್ನ ಮಾತ್ರ ನಾನು ಇಲ್ಲಿ ಪರಿಚಯ ಮಾಡಿದ್ದೇನೆ.

ಶ್ರೀಮತಿ ಪಾರ್ವತಿ ಎಸ್ ಬೂದೂರು ರವರು ತಮ್ಮ ಕವನ ಸಂಕಲನವನ್ನು ಗೌರವಪೂವ೯ಕವಾಗಿ ನನಗೆ ಕಳಿಸಿದ್ದರು. ಮೊದಲ ಕವಿತೆಯ ಮೇಲೆ ಕಣ್ಣಾಡಿಸಿದಾಗಲೇ ಇಡೀ ಕೃತಿಯನ್ನ ಓದಲೇಬೇಕು ಎಂದು ಮನಸ್ಸು ನಿಧ೯ರಿಸಿತು.

ಸ್ನೇಹಿತರೆ ದಯವಿಟ್ಟು ಈ ನನ್ನೊಳಗಿನ ನಾನು ಕವನ ಸಂಕಲನವನ್ನು ಕೊಂಡು ಓದಿ ಕವಯತ್ರಿಯ ಬರಹವನ್ನು ಓದಿದಾಗ ಕವಿತೆಗಳ ತಿರುಳನ್ನು ನಾವು ಅಥ೯ ಮಾಡಿಕೊಂಡಾಗ, ನಮ್ಮಯ ಬದುಕಿನ ಕೆಲವು ಘಟನೆಗಳು ನೆನಪುಗಳಾಗಿ ಬಂದು ಮನದೊಳಗೆ ಮೂಡಿ ಆನಂದಿಸಬಹುದು ಖುಷಿಪಡಬಹುದು ಕೂಡ.

ಶ್ರೀಮತಿ ಪಾರ್ವತಿ ಅವರಿಂದ ಇನ್ನು ಹಲವಾರು ಕೃತಿಗಳು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಲಿ. ಆ ಕೃತಿಗಳು ಅವರಿಗೆ ಹೆಸರು ಗೌರವದಾರಗಳು ಕರುನಾಡಲ್ಲಿ ತಂದುಕೊಡಲಿ ಎಂದು ಈ ಮೂಲಕ ಹಾರೈಸುತ್ತೇನೆ.


  • ನಾರಾಯಣಸ್ವಾಮಿ(ನಾನಿ) ಮಾಸ್ತಿ ಕೋಲಾರ ಜಿಲ್ಲೆ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW