ಕಿಮ್ ಪುಕ್ ಎನ್ನುವ ಒಂಬತ್ತು ವರ್ಷದ ಪುಟ್ಟ ಬಾಲಕಿಯ ಮೇಲೆ ನೇಪಲ್ಮ್ ಬಾಂಬ್ ಬಿದ್ದಾಗ ಇಡೀ ದೇಹವೇ ಕರಗಿ ಹೋಗಿತ್ತು. ಹದಿನಾಲ್ಕು ತಿಂಗಳ ಕಾಲ ಹದಿನೇಳು ಶಸ್ತ್ರಚಿಕಿತ್ಸೆಗೆ ಒಳ ಪಡಬೇಕಾಯಿತು. ಆ ನೋವು ನರಳಾಟದಿಂದ ಆಕೆ ಆತ್ಮ ಹತ್ಯೆಗೆ ಪ್ರಯತ್ನಿಸಿದ್ದು ಇತ್ತು. ಮುಂದೆ ಆಕೆ “ನೇಪಲ್ಮ್ ಹುಡುಗಿ” ಎಂದೇ ಪ್ರಸಿದ್ಧಳಾದಳು. ಯುದ್ದದಿಂದ ಆಗುವ ಸಾವು-ನೋವಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವ ರೀತಿ ಕು ಶಿ ಚಂದ್ರಶೇಖರ್ ಅವರು ಲೇಖನ ರೂಪದಲ್ಲಿ ಕಟ್ಟಿ ಕೊಟ್ಟಿದ್ದಾರೆ.
ಸಾವಿರದ ಒಂಬೈನೂರ ಎಪತ್ತರೆಡು (೧೯೭೨) ದಕ್ಷಿಣ ವಿಯೆಟ್ನಾಂ ಹಾಗೂ ಉತ್ತರ ವಿಯೆಟ್ನಾಂ ಮಧ್ಯೆ ಯುದ್ಧ ಹತ್ತಿ ಉರಿಯುತ್ತಿದ್ದ ಕಾಲ. ಕಮ್ಯುನಿಸ್ಟ್ ಒಕ್ಕೂಟದ ಜೊತೆ ಸೇರಿ ಉತ್ತರ ವಿಯೆಟ್ನಾಂ, ದಕ್ಷಿಣ ವಿಯೆಟ್ನಾಂ ಮೇಲೆ ಮುಗಿಬಿದ್ದಿತ್ತು. ಉತ್ತರ ವಿಯೆಟ್ನಾಂ ವಿಯೆಟ್-ಕಾಂಗ್ ಎಂಬ ಕಮ್ಯುನಿಸ್ಟ್ ಪಡೆಗಳ ಜೊತೆ ಸೇರಿ ದಕ್ಷಿಣ ವಿಯೆಟ್ನಾಂ ವಶಪಡಿಸಿಕೊಂಡು ಕಮ್ಯುನಿಸ್ಟ್ ರಾಷ್ಟ್ರಗಳ ಆಡಳಿತವನ್ನು ಹೇರುವುದೇ ಗುರಿಯಾಗಿತ್ತು. ಆಗ ಅಮೇರಿಕಾ, ದಕ್ಷಿಣ ವಿಯೆಟ್ನಾಂಗೆ ಬಹಿರಂಗವಾಗಿ ಬೆಂಬಲ ಸೂಚಿಸಿ ತನ್ನ ಅರೆ ಸೇನಾ ಪಡೆಗಳನ್ನು ಕಳುಹಿಸಿತ್ತು.
ಜೂನ್ ಮಾಸದ ಒಂದು ದಿನ ದಕ್ಷಿಣ ಪಡೆಯನ್ನು ಮುನ್ನೆಡೆಸುತ್ತಿದ್ದ ಅಮೇರಿಕಾ ಸೈನ್ಯದ ಅಧಿಕಾರಿಗಳಿಗೆ ಉತ್ತರ ಪಡೆಗಳ ಶತ್ರುಗಳು “ಟ್ರಾಂಗ್ ಬ್ಯಾಂಗ್” ಎಂಬ ನಿಷೇಧಿತ ಹಳ್ಳಿಯಲ್ಲಿ ಅವಿತುಕೊಂಡು ಕಾರ್ಯಾಚರಣೆ ಮಾಡುತ್ತಿದ್ದಾರೆಂದು ಬೇಹು ಪಡೆಗಳಿಂದ ಮಾಹಿತಿ ಬಂತು. ಮತ್ತು ತನ್ನ ಪಡೆಗಳಿಗೆ ಆ ಹಳ್ಳಿಯ ಮೇಲೆ ಬಾಂಬ್ ದಾಳಿಗೆ ಆದೇಶಿಸಿತು. ಆ ಹಳ್ಳಿಯಲ್ಲಿ ಕೆಲವಷ್ಟು ಜನ ಒಂದು ದೇವಾಲಯದಲ್ಲಿ ಉಳಿದುಕೊಂಡಿದ್ದರು. ದಕ್ಷಿಣ ಪಡೆಗಳ ಬಾಂಬರ್ ವಿಮಾನಗಳು ಹಳ್ಳಿಯ ಮೇಲೆ ಹಾರತೊಡಗಿದ್ದೆ ತಡ, ಜನರೆಲ್ಲರೂ ಭಯ ಭೀತರಾಗಿ ದೇವಾಲಯದಿಂದಾಚೆ ಓಡ ತೊಡಗಿದರು. ಇವರುಗಳನ್ನು ಉತ್ತರ ಪಡೆಯ ಶತ್ರುಗಳೆಂದು ತಪ್ಪಾಗಿ ಭಾವಿಸಿ, ದಕ್ಷಿಣ ಪಡೆಗಳು ತನ್ನ ಜನರ ಮೇಲೆಯೇ ‘ನೇಪಲ್ಮ್’ ಎನ್ನುವ ಅಪಾಯಕಾರಿಯಾದ ಬಾಂಬುಗಳ ಮಳೆಯಂತೆ ಸುರಿಸತೊಡಗಿದರು.
ಫೋಟೋ ಕೃಪೆ : All That’s interesting
ಆಗ “ಕಿಮ್ ಪುಕ್” ಎನ್ನುವ ಒಂಬತ್ತು ವರ್ಷದ ಬಾಲಕಿಯ ಮೇಲೆ ಆ ಬಾಂಬ್ ಬಿದ್ದಾಗ, ಮೈ ಮೇಲಿನ ಬಟ್ಟೆಗಳೆಲ್ಲವೂ ಸುತ್ತು ಹೋಯಿತು. ಮೈ ಉರಿಯನ್ನು ತಾಳಲಾರದೆ ಆಕೆ ಎಲ್ಲರೊಂದಿಗೆ ಹೊರಕ್ಕೆ ಬಂದು ಓಡತೊಡಗಿದಳು. ನಗ್ನಳಾಗಿದ್ದ ಆ ಪುಟ್ಟ ಬಾಲಕಿ ಕಿಮ್ ಪುಕ್ ನ್ನು ದಕ್ಷಿಣ ಸೇನಾ ಪಡೆಗಳು ರಕ್ಷಿಸಿದರೂ ಕೂಡ ಆಕೆಯ ಬೆನ್ನು,ಕಾಲು ಹಾಗೂ ಎದೆಯ ಭಾಗ ನೇಪಲ್ಮ್ ಬಾಂಬ್ ನಿಂದ ಸಂಪೂರ್ಣವಾಗಿ ಸುಟ್ಟಿ ಹೋಗಿತ್ತು. ಆಶ್ಚರ್ಯವೆಂಬಂತೆ ಆಗ ತೆಗೆದಿದ್ದ ಈ ಮೇಲಿನ ಚಿತ್ರ ಮುಂದೆ ಅವಳ ಬಾಳಲ್ಲಿ ಹೊಸ ತಿರುವನ್ನೇ ನೀಡಿತು. ಚಿತ್ರದಲ್ಲಿ ಕಿಮ್ ಅನೇಕ ಮಕ್ಕಳ ಜೊತೆ ನಗ್ನಳಾಗಿ ಓಡೋಡಿ ಬರುತ್ತಿದ್ದರೆ, ಆಕೆಯ ಹಿಂದೆ ಬಾಂಬ್ ಸ್ಪೋಟದಿಂದಾದ ಯುದ್ಧದ ಕರಾಳತೆಯು ಕಾಣುತ್ತಿತ್ತು.
“ಕ್ರಿಸ್ಟೋಫರ್ ವೈನ್” ಎಂಬ ಯುದ್ಧ ವರದಿಗಾರ ಅವಳ ಮೈ ಮೇಲೆ ಆ ತಕ್ಷಣಕ್ಕೆ ನೀರು ಸುರಿದು, ಅವಳನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಿದ. ಹಾಗೂ ಅವಳ ಜೊತೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಮಾನಸಿಕವಾಗಿ ಧೈರ್ಯ ತುಂಬುತ್ತಾ ಅವಳ ಪರವಾಗಿ ಅನೇಕ ಸಂಘ- ಸಂಸ್ಥೆಗಳಿಂದ ದೇಣಿಗೆಯನ್ನು ಎತ್ತಿ ಅವಳ ಬದುಕಿಗೆ ಕಾರಣನಾದ.
ಮುಂದೆ ಈ ಚಿತ್ರವು ಪ್ರಖ್ಯಾತ ನ್ಯೂಯೋರ್ಕ್ ಟೈಮ್ಸ್ ನಲ್ಲಿ ಪ್ರಕಟವಾಗಿ ಪ್ರಸಿದ್ಧ ‘ಪುಲಿಟ್ಝೆರ್ ಪ್ರಶಸ್ತಿ’ ದೊರಕಿ ಯುದ್ಧ ಕಾಲದ ‘ಅಂತಾರಾಷ್ಟ್ರೀಯ ಮಾಧ್ಯಮ ಚಿತ್ರ’ ಎಂದು ಪುರಸ್ಕೃತವಾಯಿತು. ಹಾಗೂ ಕಿಮ್ “ನೇಪಲ್ಮ್ ಹುಡುಗಿ” ಎಂದೇ ಹೆಸರುವಾಸಿಯಾದಳು.
ಆಸ್ಪತ್ರೆಯಲ್ಲಿ ಹದಿನಾಲ್ಕು ತಿಂಗಳು ಹಾಗೂ ಹದಿನೇಳು ಶಸ್ತ್ರಚಿಕಿತ್ಸೆ ನಂತರ ಕಿಮ್ ಬದುಕುಳಿದಳೆಂದರೆ ನೇಪಲ್ಮ್ ಬಾಂಬಿನ ತೀವ್ರತೆ ಇನ್ನೆಷ್ಟಿದ್ದಿರಬಹುದು. ಸುಟ್ಟ ಗಾಯಗಳಿಂದಾದ ವಿಕಾರತೆಗೆ ಒಳಗಾದ ಕಿಮ್ ಮಾನಸಿಕವಾಗಿ ನರಳಿದಳು. ಮುಂದೆ ವಿದ್ಯಾಭ್ಯಾಸಕ್ಕಾಗಿ ಔಷಧಾಲಯ ಕ್ಷೇತ್ರವನ್ನೇ ಆಯ್ದು ಕೊಂಡಳು. ಆದರೆ ಕಮ್ಯುನಿಸ್ಟ್ ಸರಕಾರದ ಧೋರಣೆಯಿಂದ ಅದು ಪೂರ್ಣವಾಗಲಿಲ್ಲ, ನುಚ್ಚು ನೂರಾಯಿತು. ಸುಟ್ಟಿದ ಗಾಯದ ನೋವಿಗೆ ಕಿಮ್ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದಳು.
ಫೋಟೋ ಕೃಪೆ : God Reports
ಸಂದರ್ಶನಗಳಲ್ಲಿ ಸುಟ್ಟ ಗಾಯಗಳ ನೋವಿನ ಬಗ್ಗೆ ಪ್ರಶ್ನಿಸಿದಾಗ “ನನಗೆ ನೋವು ತಡೆಯಲು ಅಸಾಧ್ಯವಾದಾಗ ನಾನು ಸಂಪೂರ್ಣವಾಗಿ ಬೇರೆ ಚಿಂತೆಗಳಲ್ಲಿ ತೊಡಗಿ ಕೊಳ್ಳುತ್ತಿದ್ದೆ, ಇಲ್ಲವೇ ಯಾರೊಂದಿಗಾದರೂ ಮಾತನಾಡುತ್ತ ಕಾಲ ಕಳೆಯುತ್ತಿದ್ದೆ ಎಂದು ಕಿಮ್ ತಮ್ಮ ನೋವಿನ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಅವರ ನೋವಿಗೆ ಕಾರಣವಾದವರ ಬಗ್ಗೆ ಪ್ರಶ್ನಿಸಿದಾಗ ‘ಎಂತಹ ವೈರಿಗಳಾದರೂ ಸರಿ, ದೇವರಲ್ಲಿ ನಾನು ಅವರಿಗೆ ಒಳ್ಳೆಯದನ್ನೇ ಪ್ರಾರ್ಥಿಸುತ್ತೇನೆ. ಮತ್ತು ಮನುಕುಲವು ಯುದ್ಧವೆಂಬ ಕ್ರೂರ ಮನಸ್ಥಿತಿಯಿಂದ ಹೊರಬರಬೇಕೆಂದು ಹೇಳುತ್ತಿದ್ದಳು.
ನಿರಂತರ ಯುದ್ಧ, ಸಂದರ್ಶನಗಳಿಂದ ಕಿಮ್ ಗೆ ವಿದ್ಯಾಭ್ಯಾಸಕ್ಕೆ ತೊಂದರೆಯುಂಟಾದಾಗ, ಆಗಿನ ಪ್ರಧಾನಿ “ಪಾಮ್ ವ್ಯಾನ್ ಡಾಂಗ್”ನನ್ನು ವಿನಂತಿಸಿಕೊಂಡು ಕ್ಯೂಬಾ ದೇಶದಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದಳು.
ಮುಂದೆ ೧೯೯೭ ರಲ್ಲಿ “ಕಿಮ್ ಫುಕ್ ಫೌಂಡೇಶನ್” ಎಂಬ ಸಂಸ್ಥೆಯನ್ನು ತೆರೆದು ವಿಶ್ವಾದ್ಯಂತ ತನ್ನ ತಂಡದೊಂದಿಗೆ ಸಂಚರಿಸಿ ಯುದ್ದದಿಂದ ನರಳುತ್ತಿದ್ದ ಅನೇಕ ಮಕ್ಕಳಿಗೆ ಕಿಮ್ ಔಷಧೋಪಚಾರ ಹಾಗೂ ಮಾನಸಿಕ ಬೆಂಬಲತೆಯನ್ನು ನೀಡಿ ಹೊಸದೊಂದು ಬದುಕು ಕೊಟ್ಟಳು.
ಫೋಟೋ ಕೃಪೆ : The Planet D
೧೯೯೪ ರಲ್ಲಿ ಡೆನಿಸ್ ಚೊನ್ಗ್ ಎಂಬ ಲೇಖಕ ಕಿಮ್ ಳ ಜೀವನ ಚರಿತ್ರೆ ಕುರಿತಾದ “ಚಿತ್ರದಲ್ಲಿನ ಹುಡುಗಿ “(The Girl in the picture) ಪುಸ್ತಕವನ್ನು ಹೊರಗೆ ತಂದರು ಮತ್ತು ಅದು ಪ್ರಸಿದ್ಧಿಯಾಗಿ ಒಳ್ಳೆಯ ಲಾಭ ಗಳಿಸಿತು. ಅಷ್ಟೂ ಲಾಭವನ್ನು ಪ್ರಕಾಶಕರು “ಕಿಮ್ ಪುಕ್ ಫೌಂಡೇಶನ್” ಗೆ ದೇಣಿಗೆ ನೀಡಿದರು. ಕಿಮ್ ಜೀವನ ಚರಿತ್ರೆಯಿಂದಾಗಿ ಅವಳು “ಯುನೆಸ್ಕೋ ಸದ್ಬಾವನೆ ರಾಯಬಾರಿ”ಯಾದಳು. ಯುದ್ಧಕಾಲದಲ್ಲಿ ನರಳಿದ ಮಕ್ಕಳಿಗೆ ಅವರ ಬಾಲ್ಯದಲ್ಲಿ ವೈದಕೀಯ ಹಾಗೂ ಮಾನಸಿಕವಾಗಿ ಅವಳ ಸಂಸ್ಥೆ ವಿಶ್ವಾದ್ಯಂತ ನೆರವಾದದ್ದರಿಂದ ಮುಂದೆ ಅವಳಿಗೆ ಅನೇಕ ಡಾಕ್ಟರೇಟ್ ಹುಡುಕಿ ಬಂದವು.
ವಿಯೆಟ್ನಾಂ ಯೋಧರ ದಿನಾಚರಣೆಯಲ್ಲಿ ಕಿಮ್ ತನ್ನ ಭಾಷಣದಲ್ಲಿ:
“ನಾನು ಯುದ್ದದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನರಳಿ ಬದುಕಿನಲ್ಲಿ ಆಶಾಭಾವನೆಯೇ ಕಳೆದುಕೊಂಡಿದ್ದೆ. ಆದರೆ ಭಗವಂತ ನನ್ನ ಮೇಲೆ ಕರುಣೆಯಿಟ್ಟು ಇದರಿಂದ ಹೊರಬರವಂತೆ ಮಾಡಿ ಹೊಸ ಬದುಕಿಗೆ ಅನೇಕ ಜನರ ಮೂಲಕ ನೆರವಾದ” ನನ್ನ ಮೇಲೆ ಬಾಂಬು ಹಾಕಿದ ಯೋಧನಿಗೆ ನಾನು ಹೇಳುವುದು ಇಷ್ಟೇ “ನಾವು ಇತಿಹಾಸವನ್ನು ಬದಲಾಯಿಸಲಾರೆವು. ಆದರೆ ಒಳ್ಳೆಯ ಉದ್ದೇಶಗಳಿಂದ ಕೂಡಿದ ಕೆಲಸವನ್ನು ಮಾಡಿದರೆ ಮುಂದೆ ಇಂತಹ ಪ್ರಸಂಗಗಳು ದೂರವಾಗುತ್ತವೆ. ಹಾಗೂ ಜಗತ್ತು ತನ್ನ ಯುದ್ಧದಾಹಿ ಹಾಗೂ ಸ್ವಾರ್ಥ ಮನಸ್ಸಿನಿಂದ ಹೊರಬರಬೇಕು ಎಂದು ಹೇಳಲು ಇಚ್ಛಿಸುತ್ತೇನೆ”.
ಫೋಟೋ ಕೃಪೆ : The Planet D
ಕಿಮ್ ಳ ಮಾನವ ಶಾಂತಿಯಿಂದ ಕೂಡಿದ ಸುದೀರ್ಘ ಭಾಷಣಕ್ಕೆ ಅಲ್ಲಿ ಸೇರಿದ್ದ ಅಷ್ಟೂ ಯೋಧರು ಎರಡು ಸಾರಿ ನಿಂತು ಗೌರವಾರ್ಪಣೆ ಮಾಡಿದರು.
ಕಮ್ಯುನಿಸ್ಟ್ ರಾಷ್ಟ್ರಗಳ ಸಹವಾಸವೇ ಬೇಡ ಎಂದು ತನ್ನ ಪತಿ “ಬುಯಿ ಹೂಯ್ ತೋಯಾನ್” ನೊಂದಿಗೆ ಕೆನಡಿಯನ್ ಪೌರತ್ವ ಪಡೆದು ತನ್ನ ಎರಡು ಮುದ್ದಾದ ಮಕ್ಕಳೊಂದಿಗೆ ಕಿಮ್ ಜೀವನ ಸಾಗಿಸುತ್ತಿದ್ದಾಳೆ. ಯುದ್ಧದ ಕರಾಳತೆಯಲ್ಲಿ ನರಳಿ, ಹೂವಾಗಿ ಅರಳಿದ ಅನೇಕ ಮಕ್ಕಳಿಗೆ ದಾರಿ ದೀಪವಾದ ಕಿಮ್ ಎಂಬ ವ್ಯಕ್ತಿತ್ವವನ್ನು ಈ ವಿಶಾಲ ಜಗತ್ತು ಇನ್ನಷ್ಟು ಗಳಿಸಲಿ ಎಂದು ಸರ್ವಜನರ ಆಶಯ.
(ವಿಷಯ ಮಾಹಿತಿ : ಮೀಡಿಯಂ.ಕಾಂ ಹಾಗೂ ವಿಕೀಪಿಡಿಯ )
- ಕು ಶಿ ಚಂದ್ರಶೇಖರ್