ಸೂಪಾ ಡ್ಯಾಮ ಸೈಟ್, ಮೇ, ೧೯೭೦
೧೯೬೫ ರಲ್ಲಿ ಬೆಳಗಾವಿ ಮುನಸೀಪಾಲಿಟಿಯ [ಈಗ ಅಲ್ಲಿ ನಗರ ಸಭೆ ಇದೆ] ಪೌರ ಕಾರ್ಮಿಕರು ಒಂದು ವಾರದ ಹರತಾಳ ಮಾಡಿದರು. ಒಬ್ಬನೇ ಒಬ್ಬ ಕಾರ್ಮಿಕನೂ ಮುನಸೀಪಾಲಿಟಿ ಕೆಲಸಕ್ಕೆ ಬರಲಿಲ್ಲ. ಇಡೀ ಬೆಳಗಾವಿ ನಗರ ಗಬ್ಬೆದ್ದು ಹೋಗಿತ್ತು. ಆಗ ಬೆಳಗಾವಿಯಲ್ಲಿ ಮಲ ಹೊರುವ ಪದ್ಧತಿ ಇತ್ತು. ತಲೆಯ ಮೇಲೆ ಮಲದ ಬುಟ್ಟಿ ಇಟ್ಟುಕೊಂಡು ಅದರದ್ದೇ ಆದ ಕಪ್ಪು ಬಣ್ಣದ ಲಾರಿಯಲ್ಲಿ ತುಂಬಿಸುವ ಕೆಲಸವನ್ನು ಈ ಕಾರ್ಮಿಕರು ಮಾಡುತ್ತಿದ್ದರು. ಈ ಹರತಾಳ ಸಂದರ್ಭದಲ್ಲಿ ಇಡೀ ಬೆಳಗಾವಿ ನರಕವಾಗಿಹೋಗಿತ್ತು.
ಸಂಜೆ ಚಾಳದ ಖೋಲೆಗೆ ಬರುತ್ತಿದ್ದಂತೆ ಪರಿಮಳಾ ಅವರಿಂದ ಕರೆ. ಅವರು ಮನೆಗೆ ಬಂದು ಹೋಗಲು ಹೇಳಿದ್ದೇಕೆ
ಸಂಜೆ ಹೊತ್ತು ಸೂಪಾದಲ್ಲಿಯ ಚಾಳಕ್ಕೆ ಬಂದಾಗ ತುಂಬ ಆಯಾಸವಾಗಿತ್ತು. ಎರೆಡೆರಡು ಬಾರಿ ನದಿಯ ಪಾತಳಿಯಿಂದ ಎತ್ತರಗ ಬೆಟ್ಟದ ಮೇಲೆ ಓಡಾಡಿದ್ದರಿಂದ ಕಾಲಿನ ಹಿಂಬಡುಗಳು ನೋಯುತ್ತಿದ್ದವು. ಹಾಕಿಕೊಂಡಿದ್ದ ಹಂಟರ್ ಶೂಗಳನ್ನು ಖೋಲೆಯೊಳಗೆ ಬರುತ್ತಲೂ ಕಳಚಿ, ಬಕೆಟ್ಟಿನಲ್ಲಿದ್ದ ನೀರಿನಿಂದ ಅಲ್ಲಿಯೇ ಇದ್ದ ಮೂರಡಿ ಬಚ್ಚಲಿನಲ್ಲಿ ನಿಂತು ಕೈ-ಕಾಲು-ಮೋರೆ ತೊಳೆದುಕೊಂಡೆ. ಡ್ಯಾಮಿನಿಂದ ಬಂದ ಮೇಲೆ ಮಲಯಾಳೀ ಮೂಸಾನ ಹೊಟೆಲ್ಲಿನಲ್ಲಿ ಎರಡು ಖಾಲೀ ದೋಸೆ ಚಟ್ನಿ ತಿಂದು ಬಂದಿದ್ದೆ. ಚಾಂದಗುಡೆಯವರೂ ಸಾಥ್ ಕೊಟ್ಟಿದ್ದರು.
ಚಾಪೆಯ ಬಳಿ ಇದ್ದ ಬಣ್ಣದ ಟ್ರಂಕಿನ ಬಳಿ ಕೂತಾಗಲೇ ನನಗೆ ಪರಿಮಳಾ ಅವರ ನೆನಪಾಯಿತು. ಅವರ ಜೊತೆ ಇವತ್ತು ಮಾತಾಡಲು ಆಗಿರಲಿಲ್ಲ. ಅವರು ಈ ದಿನ ಪೋಸ್ಟು ಆಫೀಸೀಗೆ ಹೋಗಿ ನನ್ನ ಕತೆಯನ್ನು ಬೆಂಗಳೂರಿನ ರಾಜ್ಯ ಮಟ್ಟದ ಸ್ಫರ್ಧೆಗೆ ಕಳಿಸುವವರಿದ್ದರು. ಆಚೆ ಹೋದಾಗ ವಿಚಾರಿಸಿಕೊಂಡು ಬರಬೇಕು ಮತ್ತು ಅವರಿಗೆ ಪೋಸ್ಟ ರಿಜಿಸ್ಟರಿನ ಖರ್ಚು ಎಪ್ಪತೈದು ಪೈಸೆಯನ್ನು ಕೊಟ್ಟು ಬರಬೇಕು ಎಂದು ಚಿಲ್ಲರೆ ದುಡ್ಡನ್ನು ತಗೆದಿರಿಸಿಕೊಂಡೆ.
ಅಂಕಲ್ ಸರ್… ಎದ್ರು ಮನೀ ಆಂಟೀ ನಿಮಗ್ ಬರೂಕ್ ಹೇಳಿದ್ರು…
ಅಷ್ಟರಲ್ಲಿ ಚಾಂದಗುಡೆಯವರ ಕಿರಿಯ ಮಗ ವಿನಯ ಚೊಣ್ಣ ಮೇಲೇರಿಸುತ್ತ ಖೋಲೆಯ ಹತ್ತಿರ ಓಡಿ ಬಂದ.
‘’ಅಂಕಲ್ ಸರ್… ಎದ್ರು ಮನೆ ಆಂಟೀ ನಿಮಗ ಬರೂಕ್ ಹೇಳಿದ್ರು’’
ಎಂದು ಹೇಳಿದವನೇ ಓಡಿ ಹೋದ. ನಾನು ಗಡಬಡಿಸಿದೆ. ನಾನೇ ಹೋಗಬೇಕೆಂದಿದ್ದೆ. ಆದರೆ ಅವರೇ ಬರಲು ಹೇಳಿದರಲ್ಲ ಎಂದು ಮೇಲೆದ್ದವನೇ ಖೋಲೆಗೆ ಬೀಗ ಹಾಕಿ ಪರಿಮಳಾ ಅವರ ಮನೆಯತ್ತ ನಡೆದೆ.
ಬಾಗಿಲು ಅರ್ಧ ತೆರೆದಿತ್ತು. ಅನುಮಾನಿಸಿದೆ. ಒಳಗೆ ಭೈರಾಚಾರಿಯವರು ಆಫೀಸಿನಿಂದ ಬಂದಿದ್ದಾರೇನೋ. ಅವರೇ ಬಾಗಿಲು ಮುಂದೆ ನಿಂತು ಏನು ಎಂದು ಕೇಳಿದರೆ?… ಮನೆಗೆ ಬರಲು ಹೇಳಿದ್ದು ಪರಿಮಳಾ ಅವರು. ಹಾಗೆಂದು ಹೇಗೆ ಹೇಳುವುದು. ಕೋಳೀ ಪ್ರಸಂಗ ಆದ ಮೇಲೆ ಅವರಿಗೆ ನನ್ನ ಮೇಲೆ ಕೋಪವೂ ಇದೆ. ಯಾವುದೋ ಸಿಟ್ಟು ಎಲ್ಲಿಗೋ ಹೋಗಬಾರದಲ್ಲ.
ಇಂಥ ಸಂದಿಗ್ಧ ಸ್ಥಿತಿ ಎಂದೂ ನನಗೆ ಎದುರಾಗಿರಲಿಲ್ಲ. ವಾಪಸ್ಸು ಹೋಗಿ ಬಿಡಲೇ ಎಂದು ಯೋಚಿಸಿದೆ. ಅಷ್ಟರಲ್ಲಿ ಪರಿಮಳಾ ಅವರೇ ಹೊರಗೆ ಬಂದರು. ನನ್ನ ನೋಡಿ ನಕ್ಕರು. ನನ್ನ ಮುಖದಲ್ಲಿ ಪ್ರತಿಯಾಗಿ ನಗುವೂ ಮೂಡಲಿಲ್ಲ.
. ಬನ್ನಿ ಶೇಖರ್… ಒಳಕ್ಕೆ ಬನ್ನಿ. ನೀವು ಡ್ಯಾಮ್ ಸೈಟ್‌ನಿಂದ ಬಂದದ್ದು ನೋಡಿದೆ. ಅದಕ್ಕೇ ಬರೋಕ್ ಹೇಳ್ದೆ
‘’ಬನ್ನಿ ಶೇಖರ್. ಡ್ಯಾಮ್ ಸೈಟಿನಿಂದ ಈಗ್ ಬಂದ್ರಿ ಅಲ್ವ. ಆಗ್ಲೇ ನೋಡ್ದೆ ನೀವು ಬರೋದನ್ನ. ಫ್ರೆಶ್ ಆಗಿ ಬರ್ಲಿ ಅಂತ ಕಾಯ್ತಿದ್ದೆ. ಹಾಂ… ತಗೊಳ್ಳಿ ಇದು ರಶೀದಿ. ನಿಮ್ಮ ಕತೇನ ಇವತ್ತು ಬೆಂಗಳೂರಿಗೆ ರಿಜಿಸ್ಟರ್ ಪೋಸ್ಟನಲ್ಲಿ ಕಳ್ಸಿದೆ. ಮುಟ್ಟೋಕೆ ನಾಲ್ಕು ದಿನ ಬೇಕಂತೆ. ಫ್ರಮ್ ಅಡ್ರೆಸ್ಸು ನಮ್ ಮನೇದೇ ಕೊಟ್ಟೀದೀನಿ. ಕೇರ್ ಆಫ್ ಭೈರಾಚಾರ್ ಅಂತ’’
ಅವರ ಮಾತಿನಲ್ಲಿ ಮುಗುಳು ನಗೆಯಿತ್ತು.
ನನಗೆ ಅವರ ಉಪಕಾರಕ್ಕೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಹಾಗೇ ಅವರ ಮುಖವನ್ನೇ ನೋಡುತ್ತ ನಿಂತೆ. ಅದ್ಯಾಕೋ. ಪರಿಮಳಾ ಅವರು ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು. ಅವರು ಕಣ್ಣಿಗೆ ಕಪ್ಪು ಕಾಡಿಗೆ ಹಚ್ಚಿದ್ದು ಕಂಡಿತು. ಅವರು ಅಲಂಕಾರ ಪ್ರಿಯರು ಎಂದು ನನಗೆ ಮೊದಲೇ ಗೊತ್ತಾಗಿತ್ತು. ಅವರು ಸೀರೆ ಉಡುವ ಶೈಲಿ, ನೆರಿಗೆ ಹಿಡಿದು ನಡೆಯುವ ರೀತಿ ನನಗೆ ಹೊಸದಾಗಿ ಕಂಡವು. ತಲೆಗೂದಲನ್ನು ಯಾವಾಗಲೂ ಸಡಿಲಾಗಿ ಕಟ್ಟಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ಅವರನ್ನು ನೋಡಿದಾಗಲೆಲ್ಲ ಲೇಖಕಿ ಉಷಾ ನವರತ್ನರಾಮ್ ಅವರನ್ನು ಕಂಡಂತಾಗುತ್ತಿತ್ತು. ಅದೇ ನಿಲುವು. ಅದೇ ನೋಟ. ನನಗೆ ವಿಚಿತ್ರವಾಗಿ ಕಂಡಿತು. ಹಾಗೆ ನೋಡುತ್ತಿದ್ದಂತೆ ಗಾಬರಿಯೂ ಆಯಿತು.
ಯುದ್ಧಕ್ಕೆ ಹೋದೋರೆಲ್ಲಾ ಗೆದ್ದು ಬರೋಲ್ಲ ಶೇಖರ್
‘’ಉಪಕಾರವಾಯಿತು ಮೇಡಂ. ಈ ಕಥಾ ಸ್ಫರ್ಧೇಲಿ ನನಗೆ ಬಹುಮಾನ ಬರುತ್ತದೆ ಅಂತ ನಾನ್ ಅನ್ಕೊಂಡಿಲ್ಲ’’
‘’ಚಿಂತೆಯಿಲ್ಲ ಬಿಡಿ ಶೇಖರ್. ಅಲ್ಲಿ ನಾಲ್ಕು ಜನರಾದ್ರೂ ನಿಮ್ಮ ಕತೇನ ಓದ್ತಾರಲ್ಲ. ಅಷ್ಟಾದ್ರೆ ಸಾಕು. ಯುದ್ಧಕ್ಕೆ ಹೋದೋರೆಲ್ಲ ಗೆದ್ದೇ ಬರಬೇಕು ಅಂತೇನಿಲ್ಲ. ಅಲ್ವ? ಡೋಂಟ್ ಬಾದರ್. ಹೆಚ್ಚು ಮಾತಾಡಿದೆ ಅನ್ಕೋಬೇಡಿ. ಅಲ್ಲಿ ಡಿಗ್ಗಿಯಲ್ಲಿ ಹುಟ್ಟೋ ಕಾಳೀ ನದಿ ಇಲ್ಲಿಯ ಥರ ಇರೋದಿಲ್ಲ. ಹೋಗ್ತಾ ಹೋಗ್ತಾ ಅದರ ಪಾತ್ರ ದೊಡ್ಡದಾಗ್ತಾ ಹೋಗುತ್ತೆ ನೋಡಿ. ಎಲ್ಲವೂ ಹಾಗೇನೆ. ಆರಂಭ ಅನ್ನೋದು ಸೂಜಿ ಮೊನೇಲಿ ಇರುತ್ತೆ ಅಷ್ಟೇ’’
(ಚಿತ್ರ ಸಂಗ್ರಹ : ಚಳಗೇರಿ ವಿ.ಎನ್ )
‘’ನಿಮ್ಮ ನಂಬಿಕೆ ದೊಡ್ಡದು ಮೇಡಮ್. ಆದ್ರೆ ನಾನು ನಂಬಿಕೆ, ಆಸೆಗಳನ್ನು ಬಿಟ್ಟು ಬದುಕಬೇಕು ಅನ್ನೋನು. ಬದುವಿನಲ್ಲಿ ಹೋಗೋ ದನಕ್ಕೆ ಗುರಿ ಅನ್ನೋದು ಎಲ್ಲಿರುತ್ತೆ ಹೇಳಿ. ಸುಮ್ನೆ ಹೋಗ್ತಾ ಇರುತ್ತೆ ಅಷ್ಟೇ. ದನಕ್ಕೆ ಹೊಟ್ಟೆ ಅಂತ ಒಂದಿರೋದ್ರಿಂದ ಅದಕ್ಕೆ ಹಸಿವು ಆಗುತ್ತೆ ಅಲ್ವಾ. ಆದ್ರೆ ಅದಕ್ಕೆ ಆ ಕ್ಷಣಕ್ಕೆ ಹುಲ್ಲು ಬಿಟ್ರೆ ಬೇರೇನೂ ಬೇಕು ಅನ್ನಿಸೋದಿಲ್ಲ’’
‘’ಹಾಗನ್ಬೇಡಿ. ಮನುಷ್ಯ ಹಾಗಲ್ಲ. ಆ ಕ್ಷಣಕ್ಕೆ ಏನಾದ್ರೂ ಬೇಕು ಅನ್ನಿಸಿದ್ರೆ ನೀವು ಪಡ್ಕೊಂಡೇ ಬಿಡ್ತೀರಾ? ಅಥವಾ ಪಡ್ಕೊಳ್ಳೋಕೆ ಪ್ರಯತ್ನ ಮಾಡ್ತೀರಾ? ಊಹುಂ… ಮನುಷ್ಯನಿಗೆ ವಿವೇಚನೆ ಅನ್ನೋದೊಂದು ಇರುತ್ತೆ ನೋಡಿ. ಅದು ದನಗಳ ಹಾಗೆ ನಮ್ಮನ್ನು ಇರೋಕೆ ಬಿಡೋದಿಲ್ಲ. ಇಂಥದ್ದು ಮಾಡಬೇಕು ಅನ್ನೋದೇ ಗುರಿ. ಇದನ್ನೆಲ್ಲಾ ಯಾಕೆ ಹೇಳ್ತಿದೀನಿ ಅಂದ್ರೆ. ನೀವು ಜೀವನದಲ್ಲಿ ಗುರಿ ಅನ್ನೋದನ್ನ ಇಟ್ಕೋಬೇಕು. ಯೋಚನೆ, ಆಲೋಚನೆ ಇದ್ರೆ ಗುರಿಯ ದಾರಿ ಸರಳ ಆಗಿರುತ್ತೆ. ನೀವು ಇನ್ನೂ ಚಿಕ್ಕೋರು ಶೇಖರ್. ಮದ್ವೆ-ಮುಂಜಿವೆ ಆಗೋರು. ಬರೀ ಸಂಸಾರ ಗೆಲ್ಲೋದು ಮುಖ್ಯ ಅಲ್ಲ. ಸಂಸಾರದೊಂದಿಗೆ ಜೀವನ ಗೆಲ್ಲೋದು ಮುಖ್ಯ. ಆದ್ರೆ ಇಷ್ಟೆಲ್ಲಾನೂವೆ ನಿಮಗೇ ಯಾಕೆ ಹೇಳ್ತಿದೀನಿ ಅಂತ ನನಗೂ ಗೊತ್ತಿಲ್ಲ’’
ನನಗೆ ರಾಮಕೃಷ್ಣ ಪರಮಹಂಸರು ಮತ್ತು ಶಾರದಾದೇವಿ ನೆನಪಾದರು ಏಕೆ
ನಾನು ಮೌನವಾದೆ. ಪರಿಮಳಾ ಅವರು ಹೇಳಿದ್ದು ನಿಜ. ಮನುಷ್ಯ ದನಗಳ ಹಾಗಲ್ಲ. ಅವನಿಗೆ ಪ್ರಾಣಿಗಳಿಗಿರದ ಬುದ್ಧಿ ಇದೆ. ವಿವೇಚನೆ ಇದೆ. ಮೆದುಳು ಇದೆ. ನಾವು ದನಗಳ ಹಾಗೆ ಇರೋದಕ್ಕೆ ಆಗೋಲ್ಲ. ಅವರು ಹೇಳುವ ಹಾಗೆ ನನಗೆ ಈಗ ಗುರಿ ಬೇಕು. ಆ ಗುರಿ ಯಾವುದು ಎಂದು ನಾನೇ ನಿರ್ಧರಿಸಿಕೊಳ್ಳಬೇಕು. ಹೌದು ನನ್ನ ಗುರಿಯನ್ನು ನಾನೇ ನಿರ್ಧಾರ ಮಾಡಿಕೊಳ್ಳಬೇಕು. ಹಿಂದೊಮ್ಮೆ ನಾನು ಗೋಕಾಕ ಫಾಲ್ಸನಲ್ಲಿ ಡಾ.ನಾಸು.ಹರ್ಡಿಕರ ಅವರ ಭಾಷಣ ಕೇಳಿಬಂದಿದ್ದೆ. ಅವರೂ ಅದನ್ನೇ ಹೇಳಿದ್ದರು. ನಮ್ಮ ತುಟಿಯಿಂದ ನಾವೇ ನೀರು ಕುಡಿಯಬೇಕು. ಇನ್ನೊಬ್ಬರ ತುಟಿಯಿಂದ ನೀರು ಕುಡಿಯಲಾಗುವುದಿಲ್ಲ. ಹಾಗೆಯೇ ನಮ್ಮ ಗುರಿಯನ್ನು ನಾವೇ ಹುಡುಕಬೇಕು.
ಅಬ್ಬಾ… ಈ ಮೇಡಮ್ಮು ಎಷ್ಟೊಂದು ತಿಳಿದುಕೊಂಡಿದ್ದಾರೆ. ಅವರನ್ನು ನೋಡುತ್ತಿದ್ದಂತೆ ನನಗೆ ರಾಮಕೃಷ್ಣ ಪರಮ ಹಂಸರು ಮತ್ತು ಶಾರದಾದೇವಿ ನೆನಪಾದರು. ಯಾಕೆ ಅಂತ ಗೊತ್ತಿಲ್ಲ. ಅವತ್ತು ಪರಿಮಳಾ ಅವರು ಶಾರದಾದೇವಿ ಯನ್ನು ಆವ್ಹಾಣಿಸಿಕೊಂಡವರಂತೆ ಮಾತಾಡಿದರು.
ಫೋಟೋ ಕೃಪೆ : free press Journal
‘’ಆದ್ರೆ ಇದುವರೆಗಿನ ನನ್ನ ಜೀವನ ಗುರಿ ಇಲ್ಲದ ಪಯಣ ಆಗಿದೆ ಮೇಡಮ್. ಯಾರು ಏನು ಹೇಳುತ್ತಾರೋ ಅದಕ್ಕೆ ಬಾಗುತ್ತ ಬಂದಿದ್ದೇನೆ’’ ಎಂದು ಖೇದದಿಂದ ಸೂರಿನ ಹಂಚು ನೋಡುತ್ತ ಹೇಳಿದೆ.
‘’ಹಾಗ್ಯಾಕೆ ಅಂತೀರಾ? ಗುರಿ ಅನ್ನೋದು ಅಂತರಗಂಗೆ ಇದ್ದ ಹಾಗೆ. ಅದು ನಿಮಗೆ ತಿಳಿಯದ ಹಾಗೆ ನಿಮ್ಮೊಳಗೇ ಅಡಗಿರುತ್ತೆ. ಎಲ್ಲರಿಗೂ ಕಾಣೋದು ಬಹಿರಂಗದ ಗುರೀ ಮಾತ್ರ. ಅಂತರಂಗದ ಗುರಿ ಗೊತ್ತಾಗೋದೇ ಇಲ್ಲ. ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಅನ್ನೋದು ಎಲ್ಲರಲ್ಲೂ ಇದ್ದೇ ಇರುತ್ತೆ ಶೇಖರ್. ಇಲ್ಲದಿದ್ರೆ ದನಗಳಿಗೂ ಮನುಷ್ಯರಿಗೂ ಅಂತರವೇ ಇರೋದಿಲ್ಲ ಅಲ್ವೆ. ಕೆಲವ್ರು ಹೇಳಿಕೊಳ್ತಾರೆ. ಕೆಲವ್ರು ಹೇಳಿಕೊಳ್ಳೋದಿಲ್ಲ. ಅದು ತಪ್ಪು ಅಂತ ನಾನು ಹೇಳೋದಿಲ್ಲ. ಹಾಂ… ಅದೇ ಗುರಿ ಒಮ್ಮೊಮ್ಮೆ ಸ್ವಾರ್ಥದ ಕಡೆಗೂ ನಮ್ಮನ್ನು ಒಯ್ಯಬಹುದು ಅಲ್ವಾ?’’
ಜೀವನದಲ್ಲಿ ಗುರಿ ಇರಬೇಕು ಶೇಖರ್
ಫೋಟೋ ಕೃಪೆ : MeatEaterTV
ಪರಿಮಳಾ ಅವರು ನನ್ನತ್ತ ತೀಕ್ಷಣವಾಗಿ ನೋಡಿ ಹೇಳಿದರು. ಒಂದು ಕ್ಷಣ ನಾನು ಬೆವರಿದೆನೇನೋ ಅನಿಸಿತು. ಅವರು ನಾನು ತಿಳಿದಿರುವುದಕ್ಕಿಂತ ಹೆಚ್ಚು ಜೀವನವನ್ನು ಅರಗಿಸಿಕೊಂಡಿದ್ದಾರೆ ಅನಿಸಿತು. ಮದುವೆಯಾಗಿದ್ದಾರೆ. ಸಂಸಾರ ತೂಗಿಸುತ್ತಿದ್ದಾರೆ. ಮಕ್ಕಳಿಲ್ಲದಿದ್ದರೂ ಅದರ ವ್ಯಥೆಯನ್ನು ಹೊರಗೆಲ್ಲೂ ಹೇಳಿಕೊಂಡಿಲ್ಲ. ತನ್ನ ಸ್ವಾರ್ಥದ ಸುತ್ತ ಯೋಚಿಸದೆ ಬದುಕಿನ ವಿಸ್ತಾರದ ಬಗ್ಗೆ ಮಾತಾಡುತ್ತಿದ್ದಾರೆ. ನಿಜ. ಪರಿಮಳಾ ಅವರು ತಮಗನಿಸಿದ್ದನ್ನು ಬರೆದರೆ ಅವರೂ ಕೂಡ ಒಳ್ಳೆಯ ಲೇಖಕಿ ಆಗಬಹುದು ಅನಿಸಿತು.
‘’ಹೋಗ್ಲಿ ಬಿಡಿ ಶೇಖರ್. ಅದನೆಲ್ಲ ಮಾತಾಡೋಕೆ ಈಗ ಸಮಯ ಇಲ್ಲ. ಇವ್ರೂ ಆಫೀಸೀನಿಂದ ಈಗ್ ಬರೋ ಹೊತ್ತು. ನಿಮಗೆ ಇನ್ನೊಂದು ವಿಷಯ ಹೇಳೋದಿದೆ. ಅದಕ್ಕೇ ಬರೋಕ್ ಹೇಳ್ದೆ’’
ಎಂದು ವಿಷಯಕ್ಕೆ ಬಂದರು. ಅವರ ಧ್ವನಿಯಲ್ಲಿ ಮಾಧುರ್ಯವಿತ್ತು. ಆಪ್ತ ಭಾವ ಇತ್ತು. ನನಗೆ ಕುತೂಹಲವಾಗಿ ಮತ್ತೆ ಅವರ ಮುಖವನ್ನೇ ನೋಡಿದೆ.
ಅವರ ಗುಳಿಬಿದ್ದ ಕೆನ್ನೆಯ ಮೇಲೆ ಕಪ್ಪು ಕೂದಲಿನ ತುಂಡೊಂದು ಒರಗಿ ಕೂತದ್ದು ಕಂಡಿತು. ಅವರು ಮಾತಾಡಿದಾಗ ಲೆಲ್ಲ ಅದು ಆಚೀಚೆ ಓಲಾಡುತ್ತಿತ್ತು. ಆದರೆ ಅದನ್ನು ಅವರಿಗೆ ಹೇಗೆ ಹೇಳುವುದು. ಕೆನ್ನೆಯ ವಿಷಯ ಅಲ್ಲವೆ.
ನಿಮ್ಮ ಕತೇನ ರಾಜ್ಯ ಮಟ್ಟದ ಸ್ಫರ್ಧೆಗೆ ಕಳ್ಸಿದೀನಿ. ಈಗ ಇನ್ನೊಂದು ಸ್ಫರ್ಧೆಗೆ ನೀವು ಲೇಖನ ಬರೀಬೇಕು
‘’ಶೇಖರ್. ಇವತ್ತು ಧಾರವಾಡ ಆಕಾಶವಾಣಿ ಕೇಂದ್ರದಿಂದ ಒಂದು ಪ್ರಕಟಣೆ ಕೇಳಿದೆ. ಅವ್ರು ಯುವಕರಿಗೆ ಅಂತ ಒಂದು ಪ್ರಬಂಧ ಸ್ಫರ್ಧೆ ಇಟ್ಟೀದಾರಂತೆ. ವಿಷಯ ‘ಯುವಕರು ಮತ್ತು ಗಾಂಧೀಜಿ’ ಅಂತ. ಅದೇಕೋ ನಿಮಗೆ ಹೇಳಬೇಕು ಅನ್ನಿಸ್ತು. ಪ್ರಯತ್ನ ಮಾಡೋದ್ರಲ್ಲಿ ತಪ್ಪೇನಿದೆ? ಅಲ್ಲಿಗೂ ಒಂದು ಕೈ ನೋಡಿ. ನಿಮ್ಮ ಬರವಣಿಗೆ ಮೇಲೆ ನನಗಂತೂ ಭರವಸೆ ಇದೆ. ಕೆಲಸದ ಜೊತೆಗೇ ಲೇಖನ ಬರೀರಿ. ಬಹುಮಾನ ಬರುತ್ತೋ ಬಿಡುತ್ತೋ. ಅಲ್ಲೀನೂ ನಿಮ್ಮ ಲೇಖನಾನ ನಾಲ್ಕು ಜನರಾದ್ರೂ ಓದ್ತಾರಲ್ಲ’’
ಅವರು ಉತ್ಸಾಹದಿಂದ ಹೇಳಿದರು. ಅವರಿಗೆ ನನ್ನ ಮೇಲೆ ಅದೇನು ನಂಬಿಕೆಯಿತ್ತೋ. ಅವರು ಓದಿದ್ದು ನನ್ನ ಒಂದೇ ಒಂದು ಕತೆಯನ್ನು ಮಾತ್ರ. ಅಷ್ಟರಲ್ಲಿಯೇ ನನ್ನ ಮೇಲೆ ಅವರಿಗೆ ಅದೆಂಥ ಅಗಾಧ ನಂಬಿಕೆ. ಏನನ್ನಬೇಕು ಇದಕ್ಕೆ. ವಾರದ ಹಿಂದೆ ಅವರು ಯಾರೋ, ನಾನು ಯಾರೋ ಆಗಿದ್ದವರು. ಈಗ ಒಂದೇ ಒಂದು ನನ್ನ ಕತೆ ಎಂಥ ಬದಲಾವಣೆ ತಂದು ಬಿಟ್ಟಿತಲ್ಲ.
ಅದು ಸಾಹಿತ್ಯದ ಗೆಲವು ಆಗಿತ್ತು. ನಾನು ಮತ್ತು ಪರಿಮಳಾ ಅವರು ಕೇವಲ ನೆಪವಾಗಿದ್ದೆವು ಅಷ್ಟೇ. ಎಂಥ ಪ್ರೋತ್ಸಾಹದ ಮಾತುಗಳು ಅವರಾಡಿದ್ದು. ಅದಕ್ಕೇ ಅವರು ನನಗೆ ಶಾರದಾದೇವಿ ಥರ ಕಂಡದ್ದೇನೋ. ಒಬ್ಬರು ಸಾಹಿತ್ಯ ಬರೆಯುತ್ತಾರೆಂದರೆ ಉಡಾಫೆಯ ಮಾತುಗಳೇ ತುಂಬಿರುವ ಇಂದಿನ ಕಾಲದಲ್ಲಿ ಪರಿಮಳಾನಂಥವರು ನಮ್ಮಂಥ ಹೊಸ ಬರಹಗಾರರಿಗೆ ಸಿಗುವುದು ಕಷ್ಟವೆ. ಅದೂ ಸೂಪಾದಂಥ ಪರ ಭಾಷೆಯವರೇ ತುಂಬಿದ್ದ ಊರಲ್ಲಿ.
ಧಾರವಾಡ ಆಕಾಶವಾಣಿಯ ಸಾಹಿತ್ಯ ಸ್ಫರ್ಧೆಗೆ ಲೇಖನ ಬರೆಯಲು ಹೇಳಿದರು ಪರಿಮಳಾ
ಮೇಲಿನ ಸಂಗತಿ ಹೇಳಿ ಪರಿಮಳಾ ಅವರು ನನ್ನ ತಲೆಯಲ್ಲಿ ಹುಳು ಬಿಟ್ಟಿದ್ದರು. ಬರೀರಿ. ನಿಮ್ಮಂಥ ಯುವಕರು ಸಾಹಿತ್ಯದ ಕಡೆಗೆ ಹೋಗಬೇಕು ಎಂದಿದ್ದರು. ಈ ದಿನವಂತೂ ನನ್ನ ಮನಸ್ಸು ಹಲವು ಮಗ್ಗುಲಗಳಲ್ಲಿ ಯೋಚಿಸುತ್ತಿತ್ತು. ಅಲ್ಲಿ ಡ್ಯಾಮ್ ಕಟ್ಟುವ ಸ್ಥಳದಲ್ಲಿ ಹಲವು ಭಾಷಿಕ ಜನರಿದ್ದಾರೆ. ಮಲಯಾಳಿಗಳು, ತಮಿಳರು, ತೆಲುಗರದೇ ಪಾರುಪಥ್ಯ ಅಲ್ಲಿ. ಕನ್ನಡಿಗರೆಂದರೆ ಕೆಳ ಹಂತದವರು ಎಂದು ಎಲ್ಲ ತಿಳಿದಿದ್ದಾರೆ. ಅದೇಕೆ ಹಾಗೆ. ಕನ್ನಡದವರು ಅಲ್ಲಿ ತೀರ ಹಿಂದುಳಿದವರಂತೆ ಬದುಕುವುದೇಕೆ. ಕನ್ನಡಿಗರಿಗೆ ನಿಜವಾಗಲೂ ಸ್ವಾಭಿಮಾನ ಇಲ್ಲವೆ, ಕಷ್ಟ ಸಹಿಷ್ಣುಗಳಲ್ಲವೆ ನಮ್ಮವರು. ಈಗಾಗಲೇ ಹಲವು ಹತ್ತು ಕಡೆ ತಿರುಗಾಡಿ ಬಂದಿರುವ ಡ್ರೈವರ್ ಇರಸನ್ ಹೇಳುತ್ತಿರುವುದು ಸರಿಯೇ? ಕನ್ನಡಿಗರು ಹೆದಿರುಪುಕ್ಕರೇ? ಈ ವಿಷಯವನ್ನು ಪರಿಮಳಾ ಅವರ ಹತ್ತಿರ ಮಾತಾಡಬೇಕು ಅಂದುಕೊಂಡೇ ಅಲ್ಲಿಗೆ ಬಂದಿದ್ದೆ.
(ಚಿತ್ರ ಸಂಗ್ರಹ : ಚಳಗೇರಿ ವಿ.ಎನ್ )
ಇವರಿಗೆಲ್ಲ ಕನ್ನಡ ಕೇವಲ ಸಂಬಳ ಕೊಡುವ ಭಾಷೆಯಾಗಿತ್ತು. ಅನ್ನದ ಭಾಷೆಯಾಗಿತ್ತಷ್ಟೇ
ಆ ಸಂದರ್ಭದಲ್ಲಿ, ಆ ಹೊತ್ತಿನಲ್ಲಿ ಇಂಥದ್ದನ್ನೆಲ್ಲ ಚರ್ಚಿಸಲು ಸಮಾನ ಆಸಕ್ತರು ಮತ್ತೆ ಯಾರೂ ಇರಲಿಲ್ಲ. ನನಗೆ ಸರ್ವೇ ಕ್ಯಾಂಪಿನಿಂದ ವರ್ಗವಾದದ್ದು ಒಳ್ಳೆಯದೇ ಆಯಿತು. ನನ್ನ ಆಸಕ್ತಿಗೆ ಹೊಂದುವ ಪರಿಮಳಾನಂಥವರು ಇಲ್ಲಿ ಸಿಕ್ಕರು. ಅವರನ್ನು ಬಿಟ್ಟರೆ ಹೀಗೆ ಮಾತನಾಡಬಲ್ಲವರು ಇಲ್ಲಿ ಬೇರೆ ಯಾರೂ ಇರಲಿಲ್ಲ.
ಫೋಟೋ ಕೃಪೆ : kannada kannadigaru
ಚಾಂದಗುಡೆಯವರ ಮನೆ ಮಾತು ಮರಾಠಿಯಾಗಿತ್ತು. ಕಾಣಕೋಣ್ಕರ ಮನೆ ಮಾತು ಕೊಂಕಣಿ. ದಾಮೋದರನ್ ಮಲಯಾಳಿ. ಭೈರಾಚಾರಿಯವರು ಕನ್ನಡಿಗರಾದರೂ ಅವರಿಗೆ ಕಚೇರಿ, ಸಾಹೇಬರು, ಮತ್ತವರ ಕೋಳಿ ಬಿಟ್ಟರೆ ಬೇರೇನೂ ಬೇಕಾಗಿರಲಿಲ್ಲ. ಅತ್ತ ಕನ್ನಡ ಕೂಲಿ ಜನಕ್ಕೆ ಸಾಹಿತ್ಯ, ಕನ್ನಡ ಭಾಷೆ, ನಾಡಿನ ಅಭಿಮಾನ ಇವು ಯಾವವೂ ಅರ್ಥವಾಗುವುದಿಲ್ಲ. ಇವರೆಲ್ಲರ ಮಧ್ಯ ನನಗೆ ಎದ್ದು ಕಂಡವರೇ ಪರಿಮಳಾ ಅವರು.
ಆಗಲೇ ನಾನು ಅಲ್ಲಿ ಮನೆಯ ಒಳಗೆ ಕೂತಿರುವುದನ್ನು ಚಾಳದ ಕೆಲವು ಕಣ್ಣುಗಳು ಬಾಗಿಲು ಸಂದಿನಿಂದ ನೋಡಿರಬೇಕು. ಚಾಳದಲ್ಲಿ ಇದ್ದದ್ದು ನಾಲ್ಕು ಇನ್ನೊಂದು ಮನೆ. ಇಲ್ಲಿ ಯಾರೂ ಯಾವುದನ್ನೂ ಮುಚ್ಚಿಡಲು ಆಗುತ್ತಿರಲಿಲ್ಲ. ಎಲ್ಲರ ಮನೆಯ ದನಿಗಳು, ಎಲ್ಲರ ಮನೆಗಳಿಗೂ ಕೇಳುತ್ತಿದ್ದವು. ಯಾಕಂದರೆ ಎಲ್ಲರಿಗೂ ಮನೆಯ ಸೂರು ಒಂದೇ ಆಗಿತ್ತು. ಒಂದು ಸಂಸಾರಕ್ಕೆ ಇನ್ನೊಂದು ಸಂಸಾರದ ಬಗ್ಗೆ ಆಸಕ್ತಿ. ಮನೆಯ ಹಂಚುಗಳೇ ಇಲ್ಲಿ ಧ್ವನಿ ವಾಹಕಗಳಾಗಿದ್ದವು.
ಪರಿಮಳಾ ಅವರು ನನ್ನ ಸನಿಹವೇ ಸ್ಟೂಲು ಸರಿಸಿಕೊಂಡು ಕೂತು ಮಾತಾಡುತ್ತಿದ್ದರು. ಆಗಲೇ ಸ್ಕರ್ಟು, ಶರ್ಟು ಹಾಕಿದ್ದ ಪೋಲೀಸನ ಹೆಂಡತಿ ಈಚೆ ಬಂದು ಏನೋ ಕೆಲಸ ಎಂಬಂತೆ ಹೊರಗೆ ಬಾಗಿಲು ಮುಂದೆ ಎರಡು ಸಲ ಅಡ್ಡಾಡಿ ಹೋದಳು. ಮತ್ತು ಓರೆಗಣ್ಣಲ್ಲಿಯೇ ನಮ್ಮನ್ನು ನೋಡಿಕೊಂಡು ದಾಟಿ ಹೋದಳು. ಆಕೆಗೆ ಹೀಗೆ ಹೊರಗೆ ಬರಲು ಅಂಥ ಘನಂದಾರೀ ಕೆಲಸವೇನೂ ಇರಲಿಲ್ಲ. ಹಾಳು ಕುತೂಹಲ. ನಾವೇನು ಮಾಡುತ್ತಿದ್ದೇವೆಂದು ನೋಡಲು ಒಂದು ನೆಪ ಬೇಕಿತ್ತು ಅಷ್ಟೇ. ಇಲ್ಲಿ ಹೆಚ್ಚು ಹೊತ್ತು ಕಳೆಯುವುದು ಬೇಡ. ನನ್ನ ಮನಸ್ಸಿನಲ್ಲಿದ್ದ ವಿಷಯವನ್ನು ಆದಷ್ಟು ಬೇಗ ಪರಿಮಳಾ ಅವರಿಗೆ ಹೇಳಿ ಅಲ್ಲಿಂದ ಹೊರಡಲು ಯೋಚಿಸಿದೆ.
ಭೈರಾಚಾರಿಯವರು ಅಚಾನಕವಾಗಿ ಮನೆಗೆ ಬಂದದ್ದು ನನಗೆ ಭಯ ಹುಟ್ಟಿಸಿತು
ಆದರೆ ಅಷ್ಟರಲ್ಲಿ ಭೈರಾಚಾರಿಯವರು ಬಾಗಿಲು ಬಳಿ ಬಂದು ನಿಂತುಬಿಟ್ಟರು. ಒಮ್ಮೆ ಒಳಗೆ ಇಣುಕಿ ನೋಡಿ ಸೊಟ್ಟ ಮುಖ ಮಾಡಿ ಅಲ್ಲೇ ನಿಂತರು. ಅವರು ಇವತ್ತು ಆಫೀಸಿನಿಂದ ಬೇಗನೇ ಬಂದಿದ್ದರು. ಬಹುಶಃ ಅಲ್ಲಿ ನರಸಿಂಹಯ್ಯ ಸಾಹೇಬರ ಹತ್ತಿರ ಪೈ ಮಾಮಾ ಉಳಿದುಕೊಂಡಿರಬೇಕು. ಆತ ಅಲ್ಲಿದ್ದಾನೆಂದರೆ ಇವತ್ತು ಒಂದು ಕೋಳಿಗಾದರೂ ಸ್ವರ್ಗ ಪ್ರಾಪ್ತಿ ಆಗುತ್ತದೆ.
ಬಾಗಿಲ ಬಳಿ ಬಂದು ನಿಂತ ಭೈರಾಚಾರಿಯವರು ಎದುರು ಮನೆಯಲ್ಲಿದ್ದ ಚಾಂದಗುಡೆಯವರನ್ನು ಕೂಗಿ ಕರೆದೇಬಿಟ್ಟರು.
‘’ಚಾಂದಗುಡೇಯವ್ರೇ…. ಬನ್ನಿ ಇಲ್ಲಿ…’’ ಎಂದು ಅವರು ಕೂಗಿದ ರೀತಿಗೆ ನಿಜಕ್ಕೂ ಭಯಬಿದ್ದೆ.
ಅವರಿಲ್ಲದಾಗ ನಾನು ಹೀಗೆ ಮನೆಗೆ ಬಂದು ಕೂಡುತ್ತೇನೆ ಎಂದು ಅವರಿಗನಿಸಿ ಕೋಪ ಬಂದರೆ ಏನು ಮಾಡುವುದು. ಅದನ್ನೇ ಅವರು ದೊಡ್ಡ ವಿಷಯವನ್ನಾಗಿ ಮಾಡಿ ಚಾಳದಲ್ಲಿ ರಂಪೋ-ರಂಪ ಮಾಡಿದರೆ ಗತಿಯೇನು ಎಂದು ಭಯವೂ ಆಯಿತು. ಮೊದಲೇ ಆಫೀಸಿನ ಕೋಳೀ ವಿಷಯವಾಗಿ ಅವರಿಗೆ ನನ್ನ ಮೇಲೆ ಸಿಟ್ಟಿದೆ. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಅದೆಲ್ಲಿ ರಾದ್ಧಾಂತ ಮಾಡುತ್ತಾರೋ ಎಂದು ಹೆದರಿದೆ.
ಜುಲಾಯಿ ಇಪ್ಪತ್ತನೇ ತಾರೀಖಿಗೆ ಜನಿಸುತ್ತದಂತೆ ಕೆ.ಪಿ.ಸಿ.ಎಲ್ ಎಂಬ ಸಾರ್ವಜನಿಕ ಕಂಪನಿ
(ಎಂಪಿಸಿ ಎಲ್ ಲೋಗೋ ಚಿತ್ರ)
ಚಾಂದಗುಡೆಯವರು ಮನೆಯಿಂದ ಹೊರಗೆ ಬಂದವರು ಒಳಗೆ ಕೂತಿದ್ದ ನನ್ನನ್ನು ಒಮ್ಮೆ ಇಣುಕಿ ನೋಡಿ ‘ಹ್ಹಹ್ಹಹ್ಹ’ ಎಂದು ನಕ್ಕರು. ಬಹಳ ಹೊತ್ತಿನಿಂದ ಅವರೂ ನನ್ನನ್ನು ಗಮನಿಸುತ್ತಿದ್ದರೇನೋ.
‘’ಚಾಂದಗುಡೇಯವ್ರೇ. ಬೆಂಗಳೂರಿಂದ ನಮ್ಮ ಸಾಹೇಬರಿಗೆ ಈಗ ಸಾಯಂಕಾಲ ಒಂದು ಫೋನು ಬಂತು. ಮತ್ತೊಂದು ಹೊಸಾ ವಿಷಯ. ಅದನ್ನೇ ಹೇಳೋಣಾಂತ ಕರೆದೆ’’
‘’ಆಂ…ರೀ? ಮತ್ತ ಹೊಸಾದರೀ? ಮತ್ತೇನಾತ್ರಿಪಾ ಅಲ್ಲೆ. ಒಂದರ ಮ್ಯಾಲ ಒಂದ್ ಹೊಸಾ ಸುದ್ದಿ ಬರಾಕ ಹತ್ಯಾವಲ್ಲ.…’’
‘’ಜುಲಾಯಿ ಇಪ್ಪತ್ತನೇ ತಾರೀಖಿಗೆ ಈಗಿನ ಹೆಚ್.ಇ.ಸಿ.ಪಿ ಡಿಪಾರ್ಟುಮೆಂಟು ದಫನ್ ಆಗ್ತದಂತೆ. ಅವತ್ತು ಮೈಸೂರು ಪವರ್ ಕಾರ್ಪೋರೇಶನ್ನು ಅಧಿಕೃತವಾಗಿ ಹುಟ್ಟುತ್ತಂತೆ. ಹೂನ್ರೀ… ಅದಕ್ಕೇ ಅಂತ ಬೆಂಗಳೂರಿನ ಸ್ಟಾರ್ ಹೋಟ್ಲಲ್ಲಿ ದೊಡ್ಡ ಕಾರ್ಯಕ್ರಮ ಮಾಡ್ತಾರಂತೆ ಹೂಂ… ಕಣ್ರೀ… ಗವರ್ನರು ಸಾಹೇಬ್ರು, ಸಿ.ಎಮ್. ಸಾಹೇಬ್ರು, ಹೋಮ್ ಮಿನಿಸ್ಟ್ರು… ಇರಿಗೇಶನ್ ಮಿನಿಸ್ಟ್ರು…ಸಿಎಸ್ಸು ಎಲ್ಲಾರೂ ಬರ್ತಾರಂತೆ ಅವತ್ತು. ನಮ್ಮ ಸಾಹೇಬ್ರೂ ಹೋಗ್ತಾರಂತೆ. ಧಾರವಾಡದಿಂದ ನಿಮ್ಮ ಸಿ.ಎಸ್.ಹೆಬ್ಲಿ ಸರ್ರೂ ಹೋಗ್ತಾರೆ ಬಿಡಿ’’
‘’ಅಲಲಲಲ… ಭಾರೀ ಆತ್ರೇ ಮತ್ತ…’’
ಚಾಂದಗುಡೆಯವ್ರು ಇಷ್ಟಗಲ ಬಾಯಿ ತೆರೆದು ದೊಗಳೆ ಪೈಜಾಮ ಅಲ್ಲಾಡಿಸಿದರು.
ಜುಲಾಯಿ ಇಪ್ಪತ್ತರ ನಂತರ ನಾವು ಎಂ.ಪಿ.ಸಿ.ಲಿಮಿಟೆಡ್ ಅನ್ನೂ ಕಂಪನೀ ಸಿಬ್ಬಂದಿ ಆಗ್ತೀವಿ ನೋಡ್ರಿ
‘’ಅಂದ್ರ.. ಜುಲೈ ಇಪ್ಪತ್ತರ ನಂತರ ನಾವು ಸರಕಾರಿ ಸಿಬ್ಬಂದಿಗಳಲ್ಲ. ಖಾಸಗೀ ಮಂದಿ ಆಗ್ತೇವಿ ಅಂದಂಗಾತು’’ ‘’ಬೇಕಾದ್ರೆ ಎಂಪಿಸಿ ಜನಾ ಅನ್ಕೊಳ್ರಿ. ಕಂಪನಿ ಅಂದ್ರೆ ಕಂಪನೀನೇ. ಮುಂದೆ ಕಾಲ ಹೆಂಗ್ ಬದಲಾಗುತ್ತೋ ಗೊತ್ತಿಲ್ಲ. ಮುಂದೆ ಯಾರ್ ಯಾರು ಎಲ್ಲೆಲ್ಲಿ ಇರ್ತಾರೋ… ಭಗವಂತನಿಗೇ ಗೊತ್ತು ’’
‘’ಏನರ ಆಗ್ಲಿ. ನಮ್ಮ ಹೊಟ್ಟೀ ಮ್ಯಾಲ ಹೊಡೀದಿದ್ದರ ಸಾಕ್ರೆಪಾ…’’
ಅಂದರು ಚಾಂದಗುಡೆ. ತಮ್ಮ ದೊಗಲೆ ಪಾಯಿಜಾಮದ ಕಿಸೆಯಲ್ಲಿ ಕೈ ಹಾಕುತ್ತ. ಈಗ ನನಗೂ ಒಳಗೆ ಕೂಡಲಾಗಲಿಲ್ಲ. ಪರಿಮಳಾ ಅವರಿಗೂ ಅದು ಕುತೂಹಲವಾಗಿತ್ತೇನೋ. ಬಾಗಿಲ ಬಳಿ ಬಂದು ನಿಂತರು. ನಾನು ಮೆಲ್ಲನೆ ಎದ್ದು ಹೊರಗೆ ಬಂದೆ. ಮಾತು ಬದಲಾದದ್ದರಿಂದ ಪರಿಮಳಾ ಅವರಿಗೆ ಏನು ಹೇಳಬೇಕು ಎಂದು ತಿಳಿಯದೆ ನನ್ನ ಮುಖ ನೋಡಿದರು. ನಾನು ನೇರವಾಗಿ ಅವರನ್ನು ನೋಡಲಾಗದೆ ಚಾಂದಗುಡೆಯವರತ್ತ ಹೊರಳಿ ನಿಂತೆ.
‘’ಶೇಖರ್ ನೀವು ಆಕಾಶವಾಣಿಗೆ ಲೇಖನ ಬರೀರಿ. ಯಾವ ಸ್ಫರ್ಧೇನಾದ್ರೂ ಇರಲಿ. ಬಿಡ ಬೇಡಿ. ನಿಮ್ಮಂಥವರು ಸ್ಫರ್ಧೆಯಿಂದ್ಲೇ ಮುಂದೆ ಬರಬೇಕು’’
ಪರಿಮಳಾ ಅವರು ಮೆಲು ದನಿಯಲ್ಲಿ ಹೇಳಿದರು. ಅವರು ಹೇಳಿದ್ದು ನನ್ನ ಸ್ವಭಾವಕ್ಕೆ ಒಗ್ಗುವ ಮಾತುಗಳೇ.
ಪರಿಮಳಾ ಅವರ ಪ್ರೋತ್ಸಾಹದ ಮಾತು ನನ್ನಲ್ಲಿ ಉತ್ಸಾಹ ತುಂಬಿತು
ಪರಿಮಳಾ ಅವರು ಮೆಲ್ಲಗೆ ಹೇಳಿದ್ದರೂ ಅದು ನನ್ನ ಕಿವಿಗೆ ಗುಡಿಯ ಗಂಟೆಯಂತೆ ದೊಡ್ಡದಾಗಿಯೇ ಕೇಳಿಸಿತು. ಮತ್ತೊಮ್ಮೆ ಅವರ ಮುಖ ನೋಡಿ ಈಚೆ ಬಂದೆ. ಬರುವ ಮುಂಚೆ ‘ಖಂಡಿತ ಬರೀತೀನಿ ಮೇಡಮ್’ ಎಂದೂ ಹೇಳಿದೆ.
‘’ಬರ್ರಿ ಶೇಖರ್. ಕೇಳಿದ್ರೆಲ್ಲ ಸುದ್ದೀನ. ಎಲ್ಲಾನೂ ಹೆಂಗ ಬದಲಾತು ನೋಡ್ರಿ’’
‘’ಆಗ್ಲಿ ತಗೋರಿ. ಚಿಂತೀ ಯಾಕ ಮಾಡತೀ. ಚಿನ್ಮಯ ಇದ್ದಾನ ಅನ್ನೂ ಮಾತು ಕೇಳಿಲ್ಲೇನು ನೀವು. ಬದಲಾವಣೆ ಅನ್ನೋದು ಜಗದ ನಿಯಮ ಐತಿ. ಮೈಸೂರು ಅರಸರ ಕಾಲದೊಳಗ ವಿದ್ಯುತ್ ಇಲಾಖೆ ಹುಟ್ತು. ನಾಲ್ವಡಿ ಕೃಷ್ಣರಾಜ ಒಡೆಯರು ಇದಕ್ಕ ಮುನ್ನುಡಿ ಬರೆದ್ರು. ಮೈಸೂರು ಇಲೆಕ್ಟ್ರಿಕ್ ಡಿಪಾರ್ಟುಮೆಂಟು [ಎಂ.ಇ.ಡಿ.] ಅಂತ ಮಾಡಿದಾವ್ರನ ಅವ್ರು. ಹೌದಲ್ರಿ. ಅದು ಶಿವನ ಸಮುದ್ರ ಪ್ರಾಜೆಕ್ಟ ಮುಗಿಯೋವರೆಗೆ ಇತ್ತು. ಆ ನಂತರ ಜೋಗದೊಳಗ ವಿದ್ಯುತ್ ಯೋಜನಾ ಸುರುವಾತು. ಆಗ ಈ ಮೈಸೂರು ಇಲೆಕ್ಟ್ರಿಕ್ ಡಿಪಾರ್ಟಮೆಂಟು [ಎಂ.ಇ.ಡಿ.] ಹೋಗಿ, ಹೈಡ್ರೋ ಇಲೆಕ್ಟ್ರಿಕ್ ಕನ್ ಸ್ಟ್ರಕ್ಶನ್ ಪ್ರಾಜೆಕ್ಟ [ಹೆಚ್.ಇ.ಸಿ.ಪಿ.] ಅಂತ ಬಂತು. ಅದು ಶರಾವತಿ ವಿದ್ಯುತ್ ಯೋಜನಾ ಮುಗಿಯೂ ತನಕ ಇತ್ತು. ಈಗ ಇಲ್ಲಿ ಕಾಳೀ ಜಲ ವಿದ್ಯುತ್ ಯೋಜನಾ ಸುರುವಾಗೂದೈತಿ. ಅದಕ್ಕನ ಇಲ್ಲಿ ಈಗ ಅದೂ ಹೋಗಿ ಮೈಸೂರು ಪವರ್ ಕಾರ್ಪೋರೇಶನ್ ಅಂತ ಹೆಸರು ಇಟ್ಕೊಂಡು ಇನ್ನೊಂದು ಶಕ್ತಿ ಬರೂದಕ್ಕ ಹತ್ತೇತಿ. ಇದೂ ಶಕ್ತೀ ಅವತಾರನ ಅನ್ರಿ’’
ನನ್ನ ಮಾತಿನಿಂದ ಭೈರಾಚಾರಿಯವರು, ಚಾಂದಗುಡೆಯವರು ಪಿಳಿ ಪಿಳಿ ಕಣ್ಣು ಬಿಟ್ಟು ನೋಡಿದರು.
ಅಲಲಲಲ…! ಶೇಖರವರು ಭಾಳ ತಿಳಕೊಂಡಾರ ಮತ್ತ
ಯಾವತ್ತೂ ಹೀಗೆ ಭೈರಾಚಾರಿಯವರ ಎದುರು ನಿಂತು ಇಷ್ಟು ಗಟ್ಟಿಯಾಗಿ ನಾನು ಮಾತಾಡಿರಲಿಲ್ಲ. ಇವತ್ತು ಮಾತಾಡಿದೆ. ಅವರಿಬ್ಬರೂ ಪಿಳಿಪಿಳಿ ಕಣ್ಣು ಬಿಟ್ಟು ನೋಡಿದರು.
‘’ಅಲಲಲ… ಶೇಖರವರು ಭಾಳ ತಿಳಕೊಂಡಾರ ಮತ್ತ’’ ಎಂದು ಚಾಂದಗುಡೆಯವರು ವಿಷಾದದಿಂದ ನಕ್ಕರು. ಭೈರಾಚಾರಿಯವರು ನನ್ನತ್ತ ಕೆಕ್ಕರುಗಣ್ಣಿಂದ ಒಮ್ಮೆ ನೋಡಿ ಮನೆಯೊಳಗೆ ಹೋದರು. ಪರಿಮಳಾ ಅವರು ನನ್ನತ್ತ ನೋಡಿ ನಕ್ಕು ಕದ ಹಾಕಿಕೊಂಡರು. ಪಕ್ಕದ ಪೋಲೀಸರ ಮನೆಯ ಹೆಂಗಸರು ಅರ್ಧ ಬಾಗಿಲು ತೆರೆದು ತಲೆ ಹೊರಗಿಟ್ಟು ನಿಂತಿದ್ದರು. ಈಗ ಚಾಂದಗುಡೆಯವರು ನನ್ನತ್ತ ಹೊರಳಿ,
‘’ಶೇಖರವರ… ರಾತ್ರೀ ಊಟಕ್ಕ ಹೋಗ್ತೀರಲ್ಲ ಸಕ್ಕೂಬಾಯಿ ಖಾನಾವಳೀಗೆ. ನಾನೂ ಬರತೀನಿ ನಿಮ್ಮ ಜೋಡೀ. ನನಗೂ ಸ್ವಲ್ಪ ಕೆಲಸ ಐತಿ ಅಲ್ಲಿ. ಬರೂವಾಗ ನಿಮ್ಮ ಜೋಡೀನ ಬರತೀನಿ’’ ಅಂದರು. ನಾನು ತಲೆಯಾಡಿಸಿದೆ
***
ನಾನು ಸೂಪಾಕ್ಕೆ ಬರುವವರೆಗೂ ಖಾದೀ ಬಟ್ಟೆಯನ್ನೇ ತೊಡುತ್ತಿದ್ದೆ
ನಾನು ಖೋಲೆಯತ್ತ ತಿರುಗಿದೆ. ಆಗಲೇ ಖೋಲೆಯ ಬಾಗಿಲು ಮುಂದೆ ಹಂದಿಗಳ ಓಡಾಟ ಸುರುವಾಗಿತ್ತು. ಒಂದೆರಡು ಮರಿಗಳು ಬಾಗಿಲಿಗೆ ಅಂಟಿಕೊಂಡೇ ಮಲಗಿದ್ದವು. ‘ಹುಶಾ…ಹುಶಾ…’ ಎಂದು ಕೈ ಸನ್ನೆಯಿಂದ ಅವನ್ನು ಅತ್ತ ಓಡಿಸಿ ಖೋಲೆಯೊಳಗೆ ಬಂದೆ. ಇದ್ದ ಒಂದೇ ಒಂದು ನಲವತ್ತು ಕ್ಯಾಂಡಲ್ಲಿನ ಬಲ್ಬು ಬೆಳಗಿಸಿ ನನ್ನ ಬಣ್ಣದ ಟ್ರಂಕಿನ ಬಳಿ ಕೂತೆ. ಹೊರಗೆ ಚಾಂದಗುಡೆಯವರು ಬರಲಿರುವ ಎಂಪಿಸಿ ಕಂಪನಿಯ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ ನಾನಿಲ್ಲಿ ಪರಿಮಳಾ ಅವರು ಹೇಳಿದ ಆಕಾಶವಾಣಿಯ ಲೇಖನ ಸ್ಫರ್ಧೆಯ ಬಗ್ಗೆ ತಲೆ ಕೆಡಿಸಿಕೊಂಡೆ.
ನೆನಪು ತೆರೆಯಿತು. ಆಗ ಬೆಳಗಾವಿಯಲ್ಲಿ ತಲೆಯ ಮೇಲೆ ಮಲ ಹೊರುವ ಪದ್ಧತಿ ಇತ್ತು
ನಾನು ಬೆಳಗಾವಿಯಲ್ಲಿ ಓದುವಾಗ ಕಾಂಗ್ರೆಸ್ ಸೇವಾದಲ ಸೇರಿ ಹಲವು ಸಮಾಜ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ. ಓಣಿಯ ಕಸಗುಡಿಸುವುದು, ಶಾಲೆಯಲ್ಲಿ ಕ್ಲಾಸ್‌ರೂಮನ್ನು ಸ್ವಚ್ಛ ಮಾಡುವುದು, ವಯಸ್ಸಾದವರನ್ನು ರಸ್ತೆ ದಾಟಿಸುವುದು, ಮಾಡುತ್ತಿದ್ದೆ. ೧೯೬೫ ರಲ್ಲಿ ಬೆಲಗಾವಿ ಮುನಸೀಪಾಲಿಟಿಯ [ಈಗ ಅಲ್ಲಿ ನಗರ ಸಭೆ ಇದೆ] ಪೌರ ಕಾರ್ಮಿಕರು ಒಂದು ವಾರದ ಹರತಾಳ ಮಾಡಿದರು. ಒಬ್ಬನೇ ಒಬ್ಬ ಕಾರ್ಮಿಕನೂ ಮುನಸೀಪಾಲಿಟಿ ಕೆಲಸಕ್ಕೆ ಬರಲಿಲ್ಲ. ಇಡೀ ಬೆಳಗಾವಿ ನಗರ ಗಬ್ಬೆದ್ದು ಹೋಗಿತ್ತು. ಆಗ ಬೆಳಗಾವಿಯಲ್ಲಿ ಮಲ ಹೊರುವ ಪದ್ಧತಿ ಇತ್ತು. ತಲೆಯ ಮೇಲೆ ಮಲದ ಬುಟ್ಟಿ ಇಟ್ಟುಕೊಂಡು ಅದರದ್ದೇ ಆದ ಕಪ್ಪು ಬಣ್ಣದ ಲಾರಿಯಲ್ಲಿ ತುಂಬಿಸುವ ಕೆಲಸವನ್ನು ಈ ಕಾರ್ಮಿಕರು ಮಾಡುತ್ತಿದ್ದರು. ಈ ಹರತಾಳ ಸಂದರ್ಭದಲ್ಲಿ ಇಡೀ ಬೆಳಗಾವಿ ನರಕವಾಗಿಹೋಗಿತ್ತು. ಈ ಸಂದರ್ಭದಲ್ಲಿ ನನ್ನ ಗುರುಗಳಾಗಿದ್ದ ಕವಿ ಶ್ರೀ ಎಸ್.ಡಿ.ಇಂಚಲರ ಸ್ಫೂರ್ತಿಯ ಮಾತಿನಂತೆ ನಾವು ಕೆಲವು ವಿಧ್ಯಾರ್ಥಿಗಳು ನಗರ ಸ್ವಚ್ಛತೆಗೆ ಇಳಿದೆವು. ಗಾಂಧೀಜಿಯವರ ಬಗ್ಗೆ ಹಲವಾರು ಲೇಖನಗಳಗಳನ್ನು ಓದಿದ್ದೆ.
(ಚಿತ್ರ ಸಂಗ್ರಹ : ಚಳಗೇರಿ ವಿ.ಎನ್ )
ಬೆಳಗಾವಿಯಲ್ಲಿ ಕಾಂಗ್ರೆಸ್ ಭಾವಿ ಈಗಲೂ ಇದೆ
೧೯೨೪ ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮ್ಮೇಳವು ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆಯಿತು. ಟಿಳಕವಾಡಿಯಲ್ಲಿರುವ ಆ ಜಾಗ ಇವತ್ತಿಗೂ ನನಗೆ ಪುಣ್ಯ ಸ್ಥಳವೆ. ಅಷ್ಟೇ ಅಲ್ಲ ಬೆಳಗಾವಿಯಲ್ಲಿದ್ದ ಕಾಂಗ್ರೆಸ್ ಬಾವಿ, ಕಾಂಗ್ರೆಸ್ಸು ರಸ್ತೆ, ಮಿಲ್ಟ್ರೀ ಮಹಾದೇವನ ಗುಡಿ ನನ್ನ ಪಾಲಿಗೆ ಸ್ವರ್ಗಗಳೇ.
ಪೋಟೋ- ಗಾಂಧೀಜಿ ಇನ್ ಬೆಲಗಾಮ್
ಅಲ್ಲದೆ ಸ್ವಾತಂತ್ರ್ಯ ಯೋಧ ಹೂಲಿ ವೆಂಕರಡ್ಡಿಯವರನ್ನು ಬಾಲ್ಯದಲ್ಲಿ ಹತ್ತಿರದಿಂದ ನೋಡಿ ಅವರ ಆಶೀರ್ವಾದ ಪಡೆದಿದ್ದೆ. ಈ ವೆಂಕರಡ್ಡಿ ಹೂಲಿ ಅವರು ಶ್ರೀ ಬಿ.ಡಿ.ಜತ್ತಿ ಅವರ ರಾಜಕೀಯ ಗುರುಗಳಾಗಿದ್ದವರು. ಬ್ರಿಟಿಷರಿಗೆ ನಡುಕ ಹುಟ್ಟಿಸಿದ ಸಂಪಗಾಂವದ ವಾಲೀ ಚೆನ್ನಪ್ಪ, ದಕ್ಷಿಣ ಕನ್ನಡದ ಕಾಮತ ಅವರಲ್ಲದೆ ಹೊರಾಟಗಾರರ ದೊಡ್ಡ ಠೋಳಿ ಯನ್ನು ನಾನು ಕಂಡಿದ್ದೆ. ಅಷ್ಟೇ ಏಕೆ ನನ್ನ ತಂದೆ ಕೂಡ ನಲವತ್ತೆರಡರ ಸಂಗ್ರಾಮದಲ್ಲಿ ಹೊರಾಡಿದವರು. ಗಾಂಧೀ ಬಗ್ಗೆ ಹಲವು ಸ್ವಾರಸ್ಯಕರ ಕತೆಗಳನ್ನು ನಮಗೆ ಹೇಳುತ್ತದವರು. ಇಂಥ ಹಿನ್ನೆಲೆಯಿಂದ ಬಂದ ನನಗೆ ಗಾಧೀ ಇನ್ನೂ ಕೌತುಕವಾಗಿಯೇ ಉಳಿದಿದ್ದರು. ಗಾಂಧಿ ನಮಗೆಲ್ಲ ಆದರ್ಶ ಪ್ರಾಯ ಆಗಿದ್ದರು.
ಇವೆಲ್ಲ ನನಗೆ ಬಾಲ್ಯದ ವಾತವರಣವನ್ನು ಗಾಂಧೀಕರಣಗೊಳಿಸಿದ್ದವು. ಇದೇ ಕಾರಣಕ್ಕೆ ನಾನು ಸೂಪಾಕ್ಕೆ ಬರುವವರೆಗೂ ಖಾದಿಯನ್ನೇ ಧರಿಸುತ್ತಿದ್ದೆ. ಖಾದೀ ಪ್ಯಾಂಟು, ಶರ್ಚು, ಖಾದೀ ಟೋಪಿ ಸದಾ ಹಾಕುತ್ತಿದ್ದೆ. ಆದರೆ ಇಲ್ಲಿ ಕಾಳೀ ಕಣಿವೆಯಲ್ಲಿ ಕೆಲಸ ಸಿಕ್ಕ ಮೇಲೆ ವಸ್ತ್ರ ಬದಲಿಸುವುದು ಅನಿವಾರ್ಯವಾಯಿತು.
ಕಾಡಿನ ಓಡಾಟದಲ್ಲಿ ಖಾದಿ ಬಟ್ಟೆಗಳು ತಡೆಯುತ್ತಿರಲಿಲ್ಲ. ಗಿಡಗಂಟಿಗಳಿಗೆ ಸಿಕ್ಕು ಬೇಗ ಹರಿದು ಹೋಗುತ್ತಿದ್ದವು. ಈ ಕಾರಣದಿಂದ ನಂತರದಲ್ಲಿ ಬಿನ್ನಿ ಮಿಲ್ಲಿನ ಬಟ್ಟೆ ತೊಡಲು ಸುರು ಮಾಡಿದ್ದೆ. ಈಗಲೂ ಒಂದು ಜತೆ ಖಾದೀ ಬಟ್ಟೆ ನನ್ನ ಬಣ್ಣದ ಟ್ರಂಕಿನಲ್ಲಿವೆ.
ಲೇಖನ ಬರೆಯಲು ಪೆನ್ನು ಹಿಡಿದೆ. ಅಷ್ಟರಲ್ಲೇ ಹೊರಗೆ ಕಟಕಟ ಬಾಗಿಲು ಬಡಿದ ಸದ್ದು …
ಇನ್ನೇನು ಲೇಖನ ಬರೆಯಲು ಆರಂಭಿಸಬೇಕು. ರಾತ್ರಿ ಊಟಕ್ಕೆ ಸಕ್ಕೂಬಾಯಿಯ ಖಾನಾವಳಿಗೆ ಹೋಗುವ ಮುಂಚೆ ಲೇಖನ ಬರೆಯುವುದನ್ನು ಆರಂಭಿಸಬೇಕು ಎಂದು ಬರೆಯಲು ಸುರು ಮಾಡಿದೆ. ವಿಷಯ ಗಾಂಧೀ ಮತ್ತು ಯುವಕರು.ಲೇಖನವನ್ನು ಇಂದಿನ ಯುವಕರು ಗಾಂಧಿಯನ್ನು ಹೇಗೆ, ಎಷ್ಟು ಅರ್ಥಮಾಡಿಕೊಂಡಿದ್ದಾರೆ. ಎಷ್ಟು ಓದಿದ್ದಾರೆ ಎಂದು ಹೇಳುವ ಮೂಲಕ ವಿಷಯ ಪ್ರವೇಶ ಮಾಡಿದೆ. ಗಾಂಧೀಜಿಯ ಸಪ್ತ ಸೂತ್ರಗಳನ್ನು ಯುವ ಜನತೆ ಅರ್ಥ ಮಾಡಿಕೊಂಡಿದ್ದಾರೆಯೇ ಎಂದು ಹೇಳುತ್ತ ಲೇಖನ ಮುಂದುವರಿಸಿದೆ. ಅಷ್ಟರಲ್ಲಿಯೇ ಬಾಗಿಲು ಹೊರಗೆ ಕಟಕಟ ಸದ್ದಾಯಿತು. ಹಂದಿಗಳ ಗುಂಪು ಬಾಗಿಲಿಗೆ ಬಂದು ಮಲಗಿರಬೇಕು ಎಂದುಕೊಂಡೆ.
ಫೋಟೋ ಕೃಪೆ : Cocktail Zindangi
ಆದರೆ ಈ ಸದ್ದಿನೊಂದಿಗೆ ‘’ಸರ್… ಸರ್…’’ ಎಂದು ಯಾರೋ ಕೂಗಿದ್ದು ಕೇಳಿ ಅಚ್ಚರಿಯಾಯಿತು. ಬರೆಯುವುದನ್ನು ನಿಲ್ಲಿಸಿ ಹಾಳೆ-ಪೆನ್ನು ಟ್ರಂಕಿನ ಮೇಲಿಟ್ಟು ಎದ್ದು ಬಾಗಿಲು ತೆರೆದೆ.
ಅಚ್ಚರಿಯಾಯಿತು. ಮಂದಗಿದ್ದ ಕರೆಂಟಿನ ಬೆಳಕಿನಲ್ಲಿ ಮುಖ ಗುರುತು ಹತ್ತಿತು. ತಕ್ಷಣ ‘’ಓಹ್…! ಹನುಮಂತ್ಯಾ… ನೀನೂ !’’ ಎಂದು ಉದ್ಗಾರ ತಗೆದೆ.
‘’ಹೌದು ಸರ್. ಕಾಡಿನಿಂದ ಬಂದ್ನಿ. ನಮ್ಮ ಕ್ಯಾಂಪು ಈಗ ಚಾಂದೇವಾಡೀಲಿ ಅದೆ. ಫಾರೆಸ್ಟರಿ ಗಾಡೀ ಸಿಕ್ತು ಹತ್ತಿ ಬಂದ್ನಿ’’
‘’ಹೌದಾ? ಬಾ ಒಳಗ ಹನುಮಂತ್ಯಾ…’’
ಎಂದು ಕದ ಹಿಂದಕ್ಕೆ ಸರಿಸಿ ಆತ ಒಳಗೆ ಬರಲು ಅನುವು ಮಾಡಿಕೊಟ್ಟೆ. ಹನುಮಂತ್ಯಾ ಗೊಮ್ಮನೆ ನಾರುತ್ತಿದ್ದ. ಆತ ಕಂಟ್ರಿ ಸಾರಾಯಿ ಕುಡಿದೇ ಬಂದಿದ್ದನೇನೋ. ಬಂದವನೇ ಅಷ್ಟು ದೂರಕ್ಕೆ ಕುಕ್ಕುರುಗಾಲಲ್ಲಿ ನೆಲದ ಮೇಲೆ ಕೂತು ಬಿಟ್ಟ. ನನಗೆ ಖುಶಿಯಾಗಲಿಲ್ಲ. ಇವನು ಸರ್ವೇ ಕ್ಯಾಂಪಿನಲ್ಲಿದ್ದವರಿಗೆ ಹೇಳಿ ಬಂದಿದ್ದಾನೋ ಇಲ್ಲಾ… ಅಲ್ಲಿಂದ ಹೇಳದೆ ಓಡಿ ಬಂದಿದ್ದಾನೋ ತಿಳಿಯಬೇಕೆನಿಸಿತು.
‘’ನಿನ್ನನ್ನ ಶಿರೋಡ್ಕರ ಸರ್ರು ಕಳಿಸಿ ಕೊಟ್ರೇನು?’’
‘’ಇಲ್ಲರೀ ಸರ್. ನನಗ ಸೂಪಾ ಹುಟ್ಟಿ ಬೆಳೆದ ಊರು ನೋಡ್ರಿ. ಒಮ್ಮೆ ಹೊಳೀ ನೋಡಿ ಹೋಗಬೇಕು ಅನ್ನಿಸ್ತು. ಸಿರೋಡಕರ ಸಾಹೇಬ್ರಿಗೆ ಹೇಳೆ ಹೊಂಟೇನ್ರಿ. ಫಾರೆಸ್ಟು ಗಾಡಿ ಸಿಕ್ತು ಅಂತ ಬರೂವಾಗ ಹೇಳೂದಕ್ಕ ಆಗ್ಲಿಲ್ಲ. ನಾಳೆ ಮುಂಜಾನಿ ಲಗೂ ಹೊಕ್ಕೇನ್ರಿ. ಅದಽ ಗಾಡಿ ಚಾಂದೇವಾಡೀಗೆ ಹೋಗೂದೈತಿ. ಅದರಾಗ ಹೊಕ್ಕೀನಿ. ಗಾಡೀ ಡ್ರೈವರಿಗೆ ಹೇಳೇ ಬಂದೇನಿ’’
ಅಂದ. ಘಾಟುವಾಸನೆ ಬಾಯಿಂದ ಗೊಮ್ಮೆಂದು ಬಂದಿತು. ಓಹ್… ಅವನು ಈದಿನ ರಾತ್ರಿ ಇಲ್ಲಿ ಇರಲು ಬಂದಿದ್ದಾನೆ. ಅಂದರೆ ಇಲ್ಲಿಗೆ ಇವತ್ತಿನ ನನ್ನ ಎಲ್ಲಾ ಕೆಲಸ ಮುಗಿಯಿತು ಎಂದು ಪೆನ್ನು –ಬರೆದ ಹಾಳೆಯನ್ನು ಟ್ರಂಕಿನಲ್ಲಿ ಇಟ್ಟುಬಿಟ್ಟೆ.
ಈ ಖೋಲೇ ಹೆಂಗ ಸಿಕ್ತು ನಿನಗ?
ನನ್ನ ಪ್ರಶ್ನೆಗೆ ಆತ ಕಿಸಕ್ಕೆಂದು ನಕ್ಕ. ಏನ್ರೀ ಸಾಹೇಬರ ಹಿಂಗ್ ಕೇಳ್ತೀರಿ. ನೀರಾಗಿನ ಮೀನದ ಹೆಜ್ಜೀ ಎಂಣಿಸೂ ಮಗಾ ನಾನು. ಆಫೀಸಿನ ಹತ್ರ ಹ್ವಾದ್ನಿ. ಅಲ್ಲಿ ಇದ್ದವರನ್ನ ಕೇಳಿದ್ನಿ. ಈ ಕಡೆ ಕೈ ಮಾಡಿ ತೋರಿಸಿದ್ರು. ನಾನು ಮೂಸಾ ಕಾಕಾನ ಹೊಟೆಲ್ಲಿಗೆ ಹೋಗೂದಿಲ್ರೆಪಾ. ಒಂದು ಮೀನು ಕದ್ದು ತಿಂದೆ ಅಂತ ಅಂವಾ ನನಗ ಒದ್ದು ಹೊರಗ ಹಾಕ್ಯಾನು. ಕುಣಿಲಾ ಬಾಯಿ ಗುಡಿಸಲ ಕಡೇ ಹೋಗಿದ್ನಿ. ಅಕೀ ನನ್ನ ಒಳಗ಼ಽ ಬಿಡಲಿಲ್ಲ ನೋಡ್ರಿ ಹರಾಮ್ ಖೋರಿ’’
ಈಗ ನನಗೆ ನೆನಪಾಯಿತು. ಖಾನಾವಳಿ ಸಕ್ಕೂಬಾಯಿ ಅವತ್ತು ತನ್ನ ಮಗನ ಬಗ್ಗೆ ಹೇಳಿದ್ದು, ಅವನ ಹೆಸರು ಹನುಮಂತ್ಯಾ ಅಂದದ್ದು, ಆತ ಸಿಕ್ಕರೆ ನನಗೆ ಹೇಳ್ರಿ ಸಾಹೇಬರ ಅಂದದ್ದು ನೆನಪಾಗಿ ಒಂದು ಕ್ಷಣ ಇವನ ಮುಖ ನೋಡಿದೆ.
‘’ಹನುಮಂತ್ಯಾ… ನಿನ್ನ ಅವ್ವ ಎಲ್ಲಿದಾಳ ಅಂತ ಪತ್ತೆ ಆತೇನೂ?’’ ಅಂದೆ. ನನ್ನ ದಿಢೀರ್ ಮಾತಿಗೆ ಹನುಮಂತ್ಯಾ ‘ಖಿಖಿಖಿ’ ಎಂದು ನಕ್ಕ.
‘’ಅಕೀ ಸುದ್ದಿ ಯಾಕರೀ ಸಾಹೇಬರ. ಅಕೀ ಯಾವತ್ತೋ ನನ್ನ ಕಾಳೀ ನದೀಗೆ ಒಗದು ಹೋಗ್ಯಾಳು. ನಂದು ಮಹಾ ಭಾರತದ ಕರ್ಣನ ಕತೀ ಆಗೇತ್ರೆಪಾ. ನಾನೂ ಈಗ ಸೂತ ಪುತ್ರ ಆಗೇನಿ ಅವನೌವ್ನ… ನಿಮ್ಮಂಥಾವರ ನನಗ ತಾಯಿ ಆಗೀರಿ ಈ ಜನ್ಮಕ್ಕ’’
ಎಂದು ಅಳುತ್ತ ಉದ್ದಕ್ಕೂ ಕಾಲಿಗೆ ಬಿದ್ದ. ನಾನು ಗಲಿಬಿಲಿಗೊಂಡೆ. ಬೆನ್ನು ಸವರಿ ಸಮಾಧಾನ ಹೇಳಬೇಕಂದೆ. ಆದರೆ ಅವನ ಬಾಯಿಯ ಘಾಟು ವಾಸನೆ ನನ್ನನ್ನು ಹತ್ತಿರ ಹೋಗಗೊಡಲಿಲ್ಲ. ಇದನ್ನು ರಾತ್ರಿಯೆಲ್ಲ ಸಹಿಸಿಕೊಳ್ಳಬೇಕಲ್ಲ ಅನಿಸಿತು. ನಾನು ಖೋಲೆಯಿಂದ ಹೊರಗೆ ಹಾಕಿದರೆ ಅವನು ಸೀದಾ ದುರ್ಗಾದೇವಿ ಗುಡಿಗೆ ಹೋಗಿ ಮಲಗುತ್ತಾನೆ. ಆದರೆ ಅದು ಸರಿಯೇ. ಹನುಮಂತ್ಯಾನ ಉಪಕಾರ ನನ್ನ ಮೇಲೂ ಇದೆ. ನನ್ನ ಅಂತಃಪ್ರಜ್ಞೆ ಸವಾಲು ಹಾಕಿತು. ಆತ
ನಮ್ಮ ಸರ್ವೇ ತಂಡದಲ್ಲಿ ಕೆಲಸ ಮಾಡಿದ್ದಾನೆ. ಅಲ್ಲಿ ನಾನು ಏನು ಹೇಳುತ್ತೇನೋ ಅದೆಲ್ಲವನ್ನೂ ಮಾಡಿದ್ದಾನೆ. ಇಂಥವನನ್ನು ರಾತ್ರಿ ಹೊತ್ತು ಹೊರಗೆ ದಬ್ಬುವುದು ಮನುಷ್ಯತ್ವ ಅಲ್ಲ. ಹಾಗೆ ಮಾಡಿದರೆ ಮುಂದೆ ಇವನಿಗೆ ಯಾವುದೇ ರೀತಿಯಲ್ಲಿ ಬುದ್ಧಿ ಹೇಳುವ ನೈತಿಕತೆ ನನಗಿರುವುದಿಲ್ಲ.
‘’ಹೋಗಲಿ. ನಿನ್ನ ಅವ್ವನ ಹತ್ತಿರ ಹೋಗಬೇಕೆನ್ನೂ ಮನಸ್ಸು ಐತೇನೂ?’’ ಕೇಳಿದೆ.
‘’ಬ್ಯಾಡ್ರಿ ಸಾಹೇಬರ. ಅಕೀ ಮಗಾ ಅನ್ನೂ ಕರಳು ಹರಕೊಂಡು ಹೋಗ್ಯಾಳ. ಅಕೀ ಲೋಕಾನ಼ಽ ಅಕೀಗೆ ದೊಡ್ಡದು ಆಗಿರಬೇಕು. ನನಗೂ ಒಂದು ಲೋಕ ಐತಿ. ಈಗ ನನ್ನ ಲೋಕದಾಗ ನಾ ಇರತೇನಿ.
ಹಾಗೆ ಹೇಳಿದ ಹನುಮಂತ್ಯಾನ ಕಣ್ಣಲ್ಲಿ ನೀರು ಬಂದವು. ಒಮ್ಮೆ ದೊಡ್ಡದಾಗಿ ಜೋಲಿ ಹೊಡೆದ.
ಹಾಂ. ಸಾಹೇಬರ. ನೀವು ಊಟಾ ಮಾಡಿ ಬರ್ರಿ. ನನಗೇನೂ ಊಟ ಬ್ಯಾಡ್ರಿ. ಈಗ ಕಾಮತಿ ಅಂಗಡೀಗೆ ಹೋಗಿ ಒಂದ್ ಮಸಾಲೀ ದ್ವಾಸೀ ತಿಂದು ಬಂದೇನಿ. ಅಷ್ಟು ಸಾಕು ಇವತ್ತಿಗೆ’’
ಅಂದವನೇ ಅಲ್ಲಿಯೇ ನೆಲದ ಮೇಲೆ ಗೂಡುಗಾಲು ಹಾಕಿಕೊಂಡು ಮಲಗಿಬಿಟ್ಟ. ನಾನು ಯೋಚಿಸಿದೆ. ಇಂಥ ಹೊತ್ತಿನಲ್ಲಿ ಇವನನ್ನು ಸಕ್ಕೂಬಾಯಿಯ ಖಾನಾವಳಿಗೆ ಕರೆದುಕೊಂಡು ಹೋಗುವುದು ಸರಿಯಲ್ಲ. ಅಲ್ಲಿ ಹೋದ ಮೇಲೆ ಅವ್ವ ಸಕ್ಕೂಬಾಯಿಯನ್ನು ಕಂಡು ಈತನ ವರ್ತನೆಯೇ ಬದಲಾಗಿಬಿಟ್ಟರೆ. ನೀನು ನನ್ನ ತಾಯಿಯೇ ಅಲ್ಲ ಹೋಗು ಅಂದರೆ ನನಗೂ ಮುಜುಗುರ. ರಾತ್ರಿ ಇಲ್ಲಿಯೇ ಮಲಗಲಿ. ಬೆಳಿಗ್ಗೆ ನಿಶೆ ಇಳಿದ ಮೇಲೆ ಕರೆದುಕೊಂಡು ಹೋದರಾಯಿತು ಅಂದು ಸುಮ್ಮನಾದೆ.
ಹೊರಗೆ ಚಾಂದಗುಡೆಯವರು ಕಾಯುತ್ತಿದ್ದರು. ನನಗೂ ಹಸಿವೆಯಾಗಿತ್ತು.
‘’ನಾನು ಊಟ ಮಾಡಿ ಬರ್ತೀನಿ ಹನುಮಂತ್ಯಾ… ನನಗ ಏನರ ತಿನ್ನೂದಕ್ಕ ತಗೊಂಡು ಬರಲೀ?’’ ಎಂದು ಕೇಳಿದೆ. ಅವನು ಬೇಡ ಎಂದು ಕೈ ಮಾಡಿದ. ಕುಡಿದದ್ದು ಜಾಸ್ತಿ ಆಗಿರಬೇಕು. ತಂದು ಕೊಟ್ಟರೆ ಒಂದು ಚಪಾತಿಯನ್ನೂ ತಿನ್ನಲಾರ ಅನಿಸಿತು. ಆದರೂ ಬರುವಾಗ ತಂದರಾಯಿತೆಂದು ಹೊರಗೆ ಹೊರಟೆ.
‘’ಕದಾ ಹಕ್ಕೋ. ಬಾಗಿಲಾ ತಗದಿಟ್ರ ಹಂದಿಗೋಳು ಒಳಗ ಬಂರತಾವು’’ ಎಂದು ಎಚ್ಚರಿಸಿ ಹೊರನಡೆದೆ. ಮೇಲೆದ್ದ ಹನುಮಂತ್ಯಾ ಹೂನ್ರಿ ಅನ್ನುತ್ತ ನಾನು ಹೊರಗೆ ಬಂದ ಮೇಲೆ ಬಾಗಿಲು ಹಾಕಿಕೊಂಡ.
ನಾನು ಹೋರಗೆ ಬಂದ ಮೇಲೆ ಅನಿಸಿತು. ನಾನು ತಪ್ಪು ಮಾಡಿದೆ. ನಾನು ಊಟ ಮಾಡಿ ಬಂದ ಮೇಲೆ ಹನುಂತ್ಯಾ ಅಮಲಿನಲ್ಲಿ ಮಲಗಿದವ ಬಾಗಿಲನ್ನೇ ತೆರೆಯದಿದ್ದರೆ ಏನು ಮಾಡುವುದು. ಛೇ… ಇದು ಯಾಕೆ ಹೊಳೆಯಲಿಲ್ಲ ನನಗೆ. ನಾನೇ ದುರ್ಗಾ ಗುಡಿಗೆ ಹೋಗುವ ಪ್ರಮೇಯ ಬರುತ್ತದೇನೋ ಎಂದು ಹೆದರಿದೆ.
[ ಮತ್ತೆ ಮುಂದಿನ ಶನಿವಾರ ಓದಿರಿ. ಇದು ಕಲ್ಪನೆಯ ಕತೆಯಲ್ಲ. ಬೆಳಕು ತಂದವರ ಕತ್ತಲ ಬದುಕಿನ ಕತೆ. ತಪ್ಪದೆ ಓದಿರಿ. ಕರ್ನಾಟಕ ವಿದ್ಯುತ್ ನಿಗಮದ ನೌಕರನ ಕತೆ. ಪ್ರತಿ ಶನಿವಾರ ]
- ಹೂಲಿಶೇಖರ್ (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)