‘ಅಪರೂಪದ ವೃಕ್ಷವರ್ಗ’ ‘ತಾಳೆಮರ’

ನಮ್ಮ ಸುತ್ತ ಮುತ್ತಲೂ ಹಲವಾರು ಸಸ್ಯ ರಾಶಿಗಳಿವೆ. ಆದರೆ ಅದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ಕೆಲವೊಮ್ಮೆ ಉದಾಸೀನದಿಂದ ಮಾಡುವುದಿಲ್ಲ. ಎಲ್ಲ ಸಸ್ಯ ರಾಶಿಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗದಿದ್ದರೂ ಒಂದಷ್ಟು ಸಸ್ಯಗಳು ತಿಳಿದಿದ್ದರೆ ಒಳ್ಳೆಯದು. ತಿಳಿಸುವ ಪ್ರಯತ್ನದಲ್ಲಿ ಆಕೃತಿಕನ್ನಡ ಮಾಡುತ್ತಿದೆ. ಆಕೃತಿಕನ್ನಡದ ಲೇಖಕ ಲೇಖನ್ ನಾಗರಾಜ್ ಅವರು ಪ್ರತಿ ಬಾರಿ ಓದುಗರಿಗೆ ಸಸ್ಯಗಳ ಬಗ್ಗೆ ಹೊಸ ವಿಚಾರಗಳನ್ನು ತಿಳಿಸುತ್ತಿದ್ದಾರೆ. ತಿಳಿದುಕೊಳ್ಳಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ…

ನಮ್ಮ ಭೂಮಿ ಮೇಲೆ ಜೀವವಿರುವಂತಹ ಪಶು, ಪಕ್ಷಿ, ಪ್ರಾಣಿ ಸಂಕುಲಗಳಂತೆ, ಸಸ್ಯ ಸಂಕುಲಗಳು ಇದೆ. ಅವುಗಳಲ್ಲಿಯೂ ಕೂಡ ಜೀವಿಗಳಂತೆ ಬಾಂಧವ್ಯತೆ, ವಿವಿಧತೆ, ವೈವಿಧ್ಯತೆ, ಪ್ರಭೇದಗಳಿವೆ. ಆದರೆ ಮಾನವನಲ್ಲಿರುವಷ್ಟು ಕ್ರೂರತೆ, ಸ್ವಾರ್ಥತೆ, ಕಲಹಗಳು ಸಸ್ಯಸಂಕುಲಗಳಲ್ಲಿರಲು ಸಾಧ್ಯವಿಲ್ಲಾ ಬಿಡಿ. ಸಸ್ಯ ಸಂಕುಲಗಳು ನಿಸ್ವಾರ್ಥವಾಗಿ ಜೀವ ಸಂಕುಲಗಳಿಗೆ ಘನ, ದ್ರವ, ಅನಿಲ ರೂಪದಲ್ಲಿ ಕೊನೆಯವರೆಗೂ ಆಹಾರವಾಗಿ ಆಧಾರವಾಗಿರುವಂತಹವು. ಅಂತಹ ಸಸ್ಯ ಸಂಕುಲಗಳಲ್ಲಿ ಅಪರೂಪದ ಸಸ್ಯವರ್ಗ ‘ತಾಳೆಮರ’ (Palmetto, Palm tree) ಇದು ಪ್ರಾಕೃತಿಕ ಮರವಾಗಿದ್ದು, ಹೆಚ್ಚಿನದಾಗಿ ಅಡಿಕೆ, ತೆಂಗು, ಈಚಲ ಮರಗಳ ಕುಟುಂಬ ವರ್ಗಕ್ಕೆ ಸೇರಿದ ವೃಕ್ಷ.

 

ಫೋಟೋ ಕೃಪೆ : PatioPlants.com

ತಾನು ಇರುವ ಕಡೆ ಹೆಚ್ಚಾಗಿ ನೀರನ್ನು ಇದು ಹೀರಿಕೊಳ್ಳುತ್ತದೆ. ಇದನ್ನು ಎಲ್ಲಾ ದೇಶಗಳಲ್ಲಿಯೂ ಕಾಣಬಹುದು. ಶ್ರೀಲಂಕಾದಲ್ಲಿ ತಾಳೆಮರವನ್ನು ‘ರಾಷ್ಟ್ರೀಯ ವೃಕ್ಷ’ ವಾಗಿಸಿದ್ದಾರೆ. ಇವುಗಳು ಸಹ ಹವಾಮಾನಕ್ಕೆ, ವಾಯುಗುಣಕ್ಕೆ ತಕ್ಕಂತೆ ಬೆಳೆಯುತ್ತದೆ. ಕೆಲವು ಮರಗಳು ಸಮುದ್ರ ತೀರಗಳಲ್ಲಿ ಮತ್ತೆ ಕೆಲವು ಪ್ರಭೇದಗಳು ಮರಳು ನೆಲಗಳಲ್ಲಿ, ಶುಷ್ಕ ಪ್ರದೇಶಗಳಲ್ಲಿಯೂ ಬೆಳೆಯುತ್ತವೆ. ಭಾರತದಲ್ಲಿ ಹೆಚ್ಚಿನದಾಗಿ ಅರಣ್ಯ ಪ್ರದೇಶಗಳಲ್ಲಿ ತಾಳೆಮರಗಳು ಕಾಣ ಸಿಗುತ್ತದೆ. ಇವುಗಳಲ್ಲಿಯು ಕೂಡ ೧೫೦ ರಿಂದ ೨೦೦ ಜಾತಿಯ ವಿವಿಧ ಪ್ರಭೇದಗಳಿವೆ.

 

ಪ್ರದೇಶಕ್ಕನುಗುಣವಾಗಿ, ಇವುಗಳ ಬೆಳವಣಿಗೆ ಆಧಾರದ ಮೇಲೆ ವಿಂಗಡಿಸಲಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ತಾಳೆಮರಗಳು ತೆಂಗಿನ ಮರಗಳಂತೆಯೆ ಬೆಳೆಯುತ್ತವೆ. ಕೊಂಬೆಗಳಿಲ್ಲದೆ ಎತ್ತರಕ್ಕೆ ಬೆಳೆಯುತ್ತಾ ಹೋಗುತ್ತದೆ. ಕಾಂಡವು ಕೂಡ ಬೇರುಗಳಿಂದ ಕೂಡಿರುತ್ತದೆ. ಮರವು ಪೂರ್ಣ ನೇರವಾಗಿ ಎತ್ತರವಾಗಿ ದೈತ್ಯಾಕಾರದಲ್ಲಿರುತ್ತದೆ. ಇದರ ಎತ್ತರ ಸುಮಾರು ೮೦ ರಿಂದ ೯೦ ಅಡಿಯವರೆಗೂ ಇರುತ್ತದೆ. ಕೆಲವು ಜಾತಿಯ ತಾಳೆಮರಗಳು ಚಿಕ್ಕದಾಗಿಯು ಇರುತ್ತದೆ.ಮರಗಳ ತುದಿಯಲ್ಲಿ ಅಡಿಕೆ,ತೆಂಗುಗಳಂತೆ ಸೋಗೆ(ಹೆಡೆ)ರೂಪದಲ್ಲಿ ತೊಟ್ಟುಗಳು ಇರುತ್ತವೆ.ತೊಟ್ಟುಗಳು ೧ ರಿಂದ ೧.೫ ಮೀಟರ್ ಉದ್ದವಾಗಿದ್ದು ಮಧ್ಯದಲ್ಲಿ ಇಂಗ್ಲೀಷ್ V ಆಕಾರದ ಚಿಕ್ಕದಾದ ಕಂದಕ(Grove)ಗಳಿರುತ್ತದೆ. ಹಾಗೆಯೆ ಕಂದಕದ ಮೇಲೆ ಎರಡು ಭಾಗಗಳಲ್ಲಿ ಚಿಕ್ಕ ಚಿಕ್ಕ ಮುಳ್ಳುಗಳಿರುತ್ತವೆ. ತೊಟ್ಟಿನ ತುದಿಯಲ್ಲಿ ಬೃಹದಾಕಾರದ ಎಲೆಗಳಿರುತ್ತವೆ. ಎಲೆಯು ಬೀಸಣಿಕೆಯಾಕರ ಅಥವಾ ಮನುಷ್ಯನ ಹಸ್ತಕಾರದಲ್ಲಿ ನವಿಲುಗರಿ ಬಿಚ್ಚಿದ೦ತೆ ಇರುತ್ತದೆ. ಎಲೆಯನ್ನು ಗುಡಿಸಲು ನಿರ್ಮಾಣಕ್ಕೆ ಹಾಗೂ ತುಂಬಾ ಗೃಹೋಪಯೋಗಿ ವಸ್ತುಗಳಾಗಿ ಬಳಸುತ್ತಾರೆ. ನನ್ನ ಗೆಳೆಯರಲೊಬ್ಬ ‘ಸ೦ಜು ಹೊಸಗದ್ದೆ’ ಇ೦ದು ಕರೋನಾ ಕಾರಣದಿ೦ದ ಊರಿನಲ್ಲಿ ಕಟ್ಟಿಗೆ ಕೆಲಸ ಮಾಡುತ್ತಿದ್ದಾನೆ. ಅವನಿ೦ದ ಕೂಡ ಕೆಲವು ವಿಶೇಷ ಮಾಹಿತಿಗಳು ಲಭ್ಯವಾಯಿತು.ಇದರ ಸೋಗೆ ಅಥವಾ ತೊಟ್ಟನ್ನು ಅಡಿಕೆ ಮರಗಳಿಗೆ, ಗಿಡಗಳಿಗೆ ಕಂದಕದಲ್ಲಿ ನೀರು ಹಾಯಿಸಲು ಬಳಸುತ್ತಾರೆ. ತಾಳೆ ಎಲೆಯನ್ನು ತಾಳೆಗರಿ, ತಾಳೆಓಲೆ, ತಾಳೆಮಡಲು ಎಂತಲೂ ಕರೆಯುತ್ತಾರೆ. ತಾಳೆಮರವನ್ನು ಶ್ರೀತಾಳೆ, ಬೀಸಣೆಕೆ ಮರ, ಕೊಡೆತಾಳೆ ಎಂದು ಕರೆಯುವುದಿದೆ. ದೇವಾನು ದೇವತೆಗಳಿಗು ಈ ಮರ ವಿಶೇಷವೆನ್ನುತ್ತಾರೆ. ತಾಳೆಗರಿಗಳ ಬಗ್ಗೆ ಹೆಚ್ಚಿನದಾಗಿ ಎಲ್ಲರಿಗು ಗೊತ್ತೆ ಇದೆ. ಹಿಂದಿನ ಕಾಲದಿಂದಲು ಪುರಾಣ ಪ್ರಸಿದ್ಧವಾಗಿದೆ.

ಫೋಟೋ ಕೃಪೆ : Exporters india

ತಾಳೆಮರವು ಸುಮಾರು ೬೦ ರಿಂದ ೭೦ ವರ್ಷಗಳವರೆಗೆ ಬದುಕುತ್ತದೆ.ಇದರ ವಿಶೇಷವೆಂದರೆ ತನ್ನ ಜೀವಿತಾವಧಿಯಲ್ಲಿ ಬೆಳೆಯಲು ಹೀರಿಕೊಂಡ ನೀರನ್ನೆಲ್ಲಾ ಹೂವು ಬಿಡುವುದಕ್ಕಾಗಿಯೆ ಉಪಯೋಗಿಸುತ್ತದೆ. ೬೦ ರಿಂದ ೭೦ ವರ್ಷಗಳಲ್ಲಿ ಒಮ್ಮೆ ಮಾತ್ರ ಹೂವು ಬಿಡುತ್ತದೆ. ದುಃಖದ ವಿಷಯವೆಂದರೆ ಹೂವು ಬಿಟ್ಟ ನಂತರ ಇದರ ಆಯುಷ್ಯ ಕೊನೆಯೆಂದೆ ಹೇಳುತ್ತಾರೆ.ಹೂವಾಗಿ ಕಾಯಿ ಬಿಡುವ ಹೊತ್ತಿಗೆ ಮರ ಪೂರ್ಣ ಟೊಳ್ಳಾಗಿರುತ್ತದೆ.ಪ್ರಕೃತಿಯಲ್ಲಿ ಹೂವಿನ ಚಿಗುರು ಹೊಸ ಚೈತನ್ಯವಾದರೆ, ತಾಳೆಮರಕ್ಕೆ ಮಾತ್ರ ಮರಣದ ಸಂಕೇತ.ನವಿಲಿನ ಗರಿಯಂತೆ ಹೆಡೆ ಬಿಚ್ಚಿ ನಿಲ್ಲುವ ತಾಳೆಮರ,ತನ್ನ ಸೌಂದರ್ಯದ ಜೊತೆಗೆ ಸಾವನ್ನು ಹೊತ್ತು ಬಂದಿರುತ್ತದೆ. ಕಾಯಿ ಬಿಟ್ಟ ನಂತರ ಮರ ಸತ್ತಂತೆಯೆ.ಅದಕ್ಕೆ ಪ್ರಕೃತಿಯ ವಿಸ್ಮಯ ಅರಿವತರು ಯಾರು ಇಲ್ಲಾ ಎನ್ನಬಹುದು. ಕೆಲವೊಮ್ಮೆ ತಾಳೆಮರ ಹೂ ಬಿಟ್ಟಿದ್ದನ್ನು ನೋಡಿ ಬರಗಾಲ ಪರಿಸ್ಥಿತಿ ಏದುರಾಗುತ್ತದೆ ಎಂದು ಕೆಲವು ಕಡೆ ಅಪನಂಬಿಕೆಯಿದೆ. ಹೂ ಬಿಟ್ಟ ತಾಳೆ ಮರವನ್ನು ಕಡಿದು ನೆಲಕ್ಕುರುಳಿಸಿರುವುದು ಇದೆ. ಇದರಿಂದ ಇಂದು ತಾಳೆಮರದ ಸಂತತಿ ಕೂಡ ಅಳಿವಿನಂಚಿನಲ್ಲಿದೆ.ತಾಳೆಮರ ಕಾಯಿ ಬಿಟ್ಟ ನಂತರ ಅದನ್ನು ಕಡಿದು ಎಳೆ-ಎಳೆಯಾದ ತಿರುಳನ್ನು ಸಂಗ್ರಹಿಸಿ ಮನೆಯಲ್ಲಿ ಬಿಸಿಲಿಗೆ ಒಣಗಿಸಿ,ನಂತರ ಅದನ್ನು ಓನಕೆಯಲ್ಲಿ ಕುಟ್ಟಿ ತಾಳೆ ಹಿಟ್ಟಾಗಿ ಮಾಡುತ್ತಾರೆ. ತಾಳೆ ಹಿಟ್ಟು ಕೂಡ ರಾಗಿಯಂತೆ ದೇಹಕ್ಕೆ ತಂಪು, ತೋಳಿಗೆ ಬಲವನ್ನು ಕೊಡುತ್ತದೆ ಎ೦ದು ನಮ್ಮ ಹಿರಿಯರು ಹೇಳುತ್ತಾರೆ. ತಾಳೆಮರದಲ್ಲಿ ಹೂವು ಬಿಟ್ಟಾಗ ತುಂಬಾ ಸುಂದರವಾಗಿ, ವಿಶೇಷವಾಗಿ ಕಾಣಿಸುತ್ತದೆ.

ಫೋಟೋ ಕೃಪೆ : Fine Art America

ನಾಗರಹಾವುಗಳಿಗೆ ತಾಳೆ ಹೂವು ತುಂಬಾ ಪ್ರಿಯವಾದವು ಎಂದು ಹೇಳುತ್ತಾರೆ. ೭ ರಿಂದ ೮ ತಿಂಗಳುಗಳ ಕಾಲ ಹೂವು ಮರದಲ್ಲಿರುತ್ತದೆ. ನಂತರ ಹೂವುಗಳು ಉದುರಿ ಬೀಳುತ್ತವೆ.ಆಮೇಲೆ ಬೀಜವನ್ನು ಸಂಗ್ರಹಿಸಲಾಗುತ್ತದೆ.ಮುಂದೆ ಕ್ರಮೇಣವಾಗಿ ಮರ ಸಾಯುತ್ತದೆ ಎಂದು ತಜ್ಞರು ಹೇಳುತ್ತಾರೆ.ಕೆಲವು ಕಡೆಗಳಲ್ಲಿ ಮಡಿಕೆ ಕಟ್ಟಿ ತಾಳೆ ಮರದಿಂದ ಹೆಂಡವನ್ನು ಸಹ ಇಳಿಸುತ್ತಾರೆ.ತಾಳೆಕಾಯಿಗಳು ಮೀನಿಗೆ ತುಂಬಾ ವಿಷಕಾರಿಯಾಗಿರುವುದರಿಂದ ಮಲೆನಾಡಿನ ಕಡೆಗಳಲ್ಲಿ ಚಿಕ್ಕ-ಚಿಕ್ಕ ಚೂರುಗಳನ್ನಾಗಿ ಮಾಡಿ ನದಿಗೆ ಹಾಕುತ್ತಾರೆ.ಮೀನುಗಳು ಅದನ್ನು ತಿಂದು ಪ್ರಜ್ಞೆ ತಪ್ಪಿ ಬೀಳುತ್ತವೆ. ಆದರಿಂದ ಮೀನು ಹಿಡಿಯುವ ಹೊಟ್ಟೆ ಬಾಕರಿಗೆ ಇದು ಸುಲಭದ ಉಪಯವಾಗಿದೆ.ಮನುಷ್ಯರಿಗೆ ತಾಳೆಕಾಯಿಯಿಂದ ಯಾವುದೆ ಅಪಾಯವಿಲ್ಲ.ಹಾಗೂ ತಾಳೆಮರದಲ್ಲಿ ಔಷಧೀಯ ಅಂಶಗಳು ಇದೆ ಎಂದು ಹೇಳಲಾಗಿದೆ.ಕೆಲವು ಕಡೆಗಳಲ್ಲಿ ಆದಾಯಕ್ಕಾಗಿ ತಾಳೆ ಕೃಷಿಯನ್ನು ಕೂಡ ಮಾಡುತ್ತಿದ್ದಾರೆ.ಇಂದು ಅರಣ್ಯ ಇಲಾಖೆ ಕೂಡ ಇದರ ಬಗ್ಗೆ ಕಾಳಜಿ ವಹಿಸುತ್ತಿದೆ.ಬೀಜಗಳನ್ನು ಸಂಗ್ರಹಿಸಿ ಈ ಅಪರೂಪದ ಸಸ್ಯವರ್ಗದ ಬೆಳೆವಣೆಗೆಗೆ ಮುಂದಾಗಿದೆ.

ಮುಖ್ಯವಾಗಿ ತಾಳೆ ಮರದ ಉಪಯೋಗಗಳನ್ನು ನೋಡೊಣ:

 • ಮೊದಲನೆಯದಾಗಿ ತಾಳೆಗರಿಗಳು ಅನಾದಿ ಕಾಲದಿಂದಲು ಹೆಸರು ಮಾಡಿದೆ.ಅಂದಿನ ಕಾಲದಲ್ಲಿ ಅಕ್ಷರ ಅಭ್ಯಾಸ,ವಿಷಯಗಳನ್ನು ಒಬ್ಬರಿಂದ ಒಬ್ಬರಿಗೆ ತಲುಪಿಸುವಾಗ,ಗುಪ್ತ ಸಂಗತಿಗಳನ್ನು ತಾಳೆ ಎಲೆಯ ಗರಿಯಲ್ಲಿಯೆ ಬರೆಯುತ್ತಿದ್ದರು.ತಾಳೆ ಗರಿಗಳು ಇಂದಿಗೂ ಶ್ರೇಷ್ಠವಾಗಿದೆ.ನಮ್ಮ ಪೂರ್ವಜರು ಮಾಡಿದ ಎಷ್ಟೊ ಮಹತ್ವವಾದ ಸಾ೦ಪ್ರದಾಯಿಕ ಉತ್ತಮ ವಿಷಯಗಳನ್ನು ತಿಳಿಯಲು ಸಹಾಯಕವಾಗಿದೆ.
 • ತಾಳೆ ಎಲೆಗಳಿಂದ ಬೀಸಣಿಕೆ,ಛತ್ರಿ,ಬುಟ್ಟಿ,ಚಾಪೆಗಳನ್ನು ಮಾಡುತ್ತಾರೆ. ತಾಳೆ ಎಲೆ ಛತ್ರಿ ಕೂಡ ಪುರಾಣಗಳಲ್ಲಿ ಪ್ರಸಿದ್ಧವಾಗಿದೆ.
 • ಇದರ ಕಂದಕದಂತಹ ತೊಟ್ಟನ್ನು ಮರಕ್ಕೆ ಬಡಿದು ಪಟ್ಟೆ-ಪಟ್ಟೆಯಾಗಿ ಮಾಡಿ ನಾರಿನಂತಹ ದಾರವನ್ನು ಮಾಡುತ್ತಾರೆ. ಗೃಹ ನಿರ್ಮಾಣದಲ್ಲಿ ಕಟ್ಟುಗಳನ್ನು ಕಟ್ಟಲು ಬಳಸುತ್ತಾರೆ.
 • ಮರದ ಹೂ ಗೊಂಚಲಿನಿಂದ ಹೆಂಡವನ್ನು ಇಳಿಸುತ್ತಾರೆ. ಇದಕ್ಕೆ ನೀರಾ ಎಂದು ಕರೆಯುತ್ತಾರೆ.
 • ತೊಟ್ಟಿನ ನಾರಿನಿಂದ ಬ್ರಷ್‌ ಗಳನ್ನು ತಯಾರಿಸುತ್ತಾರೆ.
 • ಕಸಬರೆಕೆಗಳಿಗೂ ತಾಳೆ ತೊಟ್ಟನ್ನು,ಎಲೆಗಳಲ್ಲಿ ಬರುವ ಕಡ್ಡಿಗಳನ್ನು ಬಳಸುತ್ತಾರೆ.
 • ಮಲೆನಾಡಿನ ಕಡೆಗಳಲ್ಲಿ ಮನೆಗಳಿಗೆ ಹೊದಿಕೆ ಮಾಡಲು,ತೋಟಗಳಿಗೆ ಬೇಲಿ ನಿರ್ಮಾಣ ಮಾಡಲು ಬೃಹದಾಕಾರದ ಎಲೆಗಳನ್ನು ಬಳಸುತ್ತಾರೆ.
 • ತಾಳೆಎಲೆ ಇದು ತುಂಬಾ ತಂಪು ಆದರಿಂದ ಗುಡಿಸಲು ನಿರ್ಮಾಣಗಳಲ್ಲಿ ಅಂದಿನ ಕಾಲದಲ್ಲಿ ಹೆಚ್ಚಾಗಿ ಬಳಸುತ್ತಿದ್ದರು.
 • ತಾಳೆಎಲೆಗಳಿ೦ದ ಶೃ೦ಗಾರೀಕ ಕಿವಿ ಓಲೆಗಳನ್ನು ಮಾಡುತ್ತಾರೆ.ಇದಕ್ಕೆ ತಾಳೋಲೆ ಎ೦ದು ಕರೆಯಲಾಗುತ್ತದೆ. ತಾಳೆ ಹೂವು,ಬೀಜದಿ೦ದಲೂ ಸಹ ಅಲ೦ಕಾರೀಕ ಹಾರಗಳನ್ನು,ಸಾಮಗ್ರಿಗಳನ್ನು ತಯಾರಿಸುತ್ತಾರೆ ನೋಡಿರುತ್ತೇವೆ.
 • ತಾಳೆ ಮರದಿಂದ ಇಳಿಸಿದ ನೀರಾದಿಂದ ಬೆಲ್ಲ ಹಾಗೂ ಸಕ್ಕರೆಯನ್ನು ಕೂಡ ಮಾಡುತ್ತಾರೆ.
 • ಇದರಿಂದ ಮಾಡಿದ ಬೆಲ್ಲ ಹಾಗೂ ಸಕ್ಕರೆ ಕಫ ನಿವಾರಣೆಗೆ ಉತ್ತಮ ಔಷದೀಯೆನ್ನುತ್ತಾರೆ.
 • ತಿರುಳಿನಿಂದ ತಾಳೆ ಹಿಟ್ಟನ್ನು ಮಾಡುತ್ತಾರೆ.ತಾಳೆಹಿಟ್ಟಿನ ಗ೦ಜಿ ಕೂಡ ಹೆಸರುವಾಸಿ.ಇದನ್ನು ಹೆಚ್ಚಿನದಾಗಿ ಉತ್ತರ ಕನ್ನಡ,ಕುಮಟಾ,ಹೊನ್ನಾವರ,ಉಡುಪಿಯಂತಹ ಪ್ರದೇಶಗಳಲ್ಲಿ ಅಷ್ಟೆ ಹೆಚ್ಚಾಗಿ ಉಪಯೋಗಿಸುತ್ತಾರೆ ಎನ್ನಲಾಗಿದೆ.
 • ತಾಳೆಮರದ ಸೇಂದಿಯಲ್ಲಿ ಕ್ಯಾನ್ಸರ್‌ ನಿರೋಧಕವಿದೆ ಎಂದು ಸಂಶೋದಕರು ಹೇಳುತ್ತಾರೆ.ಮಿತವಾಗಿ ದಿನನಿತ್ಯ ಇದರ ಸೇಂದಿ ಸೇವನೆಯಿಂದ ಕೆಲವು ರೋಗಗಳನ್ನು ದೂರವಿಡಬಹುದು ಎನ್ನುತ್ತಾರೆ. ಸೇಂದಿಯನ್ನು ಮರದಿಂದ ಇಳಿಸಿದ ಒಂದು ಗಂಟೆಯ ಒಳಗಡೆ ಸೇವಿಸಬೇಕು ಇಲ್ಲವಾದಲ್ಲಿ ಅದರಲ್ಲಿ ಆಲ್ಕೋಹಾಲ್‌ ಪ್ರಮಾಣ ಜಾಸ್ತಿಯಾದರೆ ಆರೋಗ್ಯಕ್ಕೆ ಹಾನಿಕರವೆನ್ನುತ್ತಾರೆ.
 • ತಾಳೆಹಣ್ಣು ಅಥವಾ ತಾಟಿಲಿಂಗ (ice apple) ಇದು ಹೆಚ್ಚಾಗಿ ಎಲ್ಲರಿಗು ಗೊತ್ತಿದೆ.ನೋಡೊಕೆ ಲಿಚಿ ಹಣ್ಣಿನಂತೆ ರುಚಿಯಲ್ಲಿ ಎಳನೀರು ಕಾಯಿಯಂತೆ ಇರುತ್ತದೆ.ದೇಹಕ್ಕೆ ತಂಪು ನೀಡುವ ಒಳ್ಳೇಯ ಹಣ್ಣಾಗಿದೆ.ಮದ್ಯಾಹ್ನದ ಸಮಯದಲ್ಲಿ ಇದನ್ನು ತಿಂದರೆ ತುಂಬಾ ಒಳ್ಳೇಯದು.ಇದಕ್ಕೆ ತಾಳೆಬೊಂಡ ಹೀಗೆ ನಾನಾ ಹೆಸರುಗಳಿವೆ.
 • ತಾಳೆಹಣ್ಣು ಸೇವನೆಯಿಂದ ದೇಹದಲ್ಲಿ ಆಗುವಂತಹ ಗಡ್ಡೆಗಳು,ಸ್ತನ ಕ್ಯಾನ್ಸರ್‌ ನಂತಹ ಖಾಯಿಲೆಗಳನ್ನು ತಡೆಯಬಹುದು ಎ೦ದು ವೈದ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
 • ಗರ್ಭಿಣಿಯರಿಗೆ ಇದರ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೇಯದು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾಗೂ ಮಲಬದ್ಧತೆ, ಆಮ್ಲೀಯತೆ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.
 • ವಾಕರಿಕೆ ತೊಂದರೆ ಇದ್ದವರಿಗು ಇದು ಉತ್ತಮ ಔಷಧಿಯೆನ್ನುತ್ತಾರೆ.
 • ತುರಿಕೆ, ಕಜ್ಜಿ,ಹಾಗೂ ಹೊಟ್ಟೆ ಸಂಬಂಧಿತ ಖಾಯಿಲೆಗಳಿಗಳಿಗೆ ಇದರ ಸೇವನೆ ಉತ್ತಮ ಪರಿಹಾರ.
 • ಇದು ದೇಹದಲ್ಲಿನ ಉಷ್ಣವನ್ನು ಕಡಿಮೆ ಸಮಯದಲ್ಲಿ ನಿವಾರಿಸುತ್ತದೆ.ದೇಹಕ್ಕೆ ಹೆಚ್ಚಿನ ತಂಪಿನ ಶಕ್ತಿಯನ್ನು ಒದಗಿಸುತ್ತದೆ.ದೇಹದ ತಾಪ ಮಾನವನ್ನು ಕಾಪಾಡುತ್ತದೆ.ಇದಕ್ಕೆ ಬೇಸಿಗೆಯಲ್ಲಿ ಈ ಹಣ್ಣು ಅಮೃತಕ್ಕೆ ಸಮಾನವಾಗಿದೆ.
 • ಒಣಕೆಮ್ಮು, ಶೀತ, ಅಸ್ತಮಾ, ಉಸಿರಾಟದ ತೊಂದರೆಗಳಿದ್ದರೆ ತಾಳೆಬೆಲ್ಲ ರಾಮಬಾಣವಾಗಿದೆ.
 • ಶುದ್ಧ ತಾಳೆಬೆಲ್ಲ ಸೇವನೆಯಿಂದ ಸಂಧಿವಾತ.ಮೂಳೆಗೆ ಸಂಬಂಧಿಸಿದಂತಹ ನೋವುಗಳನ್ನು ನಿವಾರಿಸಬಹುದು.
 • ಮರದ ಒಳಗಿನ ಗಟ್ಟಿಯಾದ ಭಾಗವನ್ನು ಕೊಳವೆಯನ್ನಾಗಿ ಮಾಡಿ ತೋಟಗಳಿಗೆ ನೀರು ಹಾಯಿಸಲು ಕೂಡ ಬಳಸುವುದಿದೆ.
 • ತಾಳೆ ಬೀಜದಿ೦ದ ಎಣ್ಣೆಯನ್ನು ಸಹ ಮಾಡುತ್ತಾರೆ. ಇದಕ್ಕೆ ತಾಳೆಣ್ಣೆ ಎ೦ದು ಕರೆಯುವುದಿದೆ.
 • ಚಿಕ್ಕ-ಚಿಕ್ಕ ತಾಳೆಗಿಡಗಳನ್ನು ಮನೆಯ ಮು೦ದೆ ಅಲ೦ಕಾರೀಕ ಸಸ್ಯಗಳಾಗಿ ಕೂಡ ನೆಡುತ್ತಾರೆ.ದೊಡ್ಡ ದೊಡ್ಡ ಹೊಟೇಲುಗಳಲ್ಲಿ,ರೆಸ್ಟೋರೆ೦ಟ್ ಗಳಲ್ಲಿ ಪ್ರವೇಶದ್ವಾರದ ಮು೦ದೆ,ರಿಶಪ್ಶನ್ ಗಳಲ್ಲಿ ಇವುಗಳು ಕಾಣಸಿಗುತ್ತದೆ.
 • ಇದರ ಬೆಲ್ಲದ ಮಿತ ಸೇವನೆಯಿಂದ ತೂಕ ನಿಯಂತ್ರಿಸಲು ಸಹ ಒಳ್ಳೇಯದೆಂದು ಆರೋಗ್ಯ ತಜ್ಞರು ಹೇಳುತ್ತಾರೆ.
 • ಮೈಗ್ರೇನ್(ತಲೆಶೂಲೆ)ನಂತಹ ಸಮಸ್ಯೆಗೆ ಇದರ ಬೆಲ್ಲ ಉತ್ತಮವಾದ ಪರಿಹಾರಕವೆಂದು ವೈದ್ಯಶಾಸ್ತ್ರದಲ್ಲಿದೆ.

ಫೋಟೋ ಕೃಪೆ : BeautyGlimpse

ಇಷ್ಟೆ ಅಲ್ಲದೆ ಇಂತಹ ಎಷ್ಟೊ ಸರ್ವ ರೋಗಗಳಿಗೆ ರಾಮ ಬಾಣವಾಗಿದೆ ತಾಳೆಯ ಉತ್ಪನ್ನಗಳು.ಇದರ ಬಗ್ಗೆ ಬೇಕಾದಷ್ಟು ವಿಷಯಗಳು,ಹೆಚ್ಚಿನ ಉಪಯೋಗಗಳು ವೈದ್ಯಶಾಸ್ತ್ರದಲ್ಲಿದೆ.ಆಯುರ್ವೇದ ಪರಿಣೀತರನ್ನು,ಇಲ್ಲಾ ನಮ್ಮ ಹಿರಿಯರನ್ನು ಕೇಳಿದರೆ ತಾಳೆಯ ಬಗೆಗೆ ಇನ್ನಷ್ಟು ಉತ್ತಮ ಮಾಹಿತಿಗಳು ಸಿಗುತ್ತದೆ.ದೇವತೆಗಳ ಕಾಲದಿಂದ ಇಲ್ಲಿಯವರೆಗೂ ತಾಳೆಮರವು ನೈಸರ್ಗೀಕವಾಗಿ ತನ್ನ ವೈಶಿಷ್ಟ್ಯತೆಗಳೊಂದಿಗೆ ಸರ್ವರಿಗು ಪ್ರಯೋಜನವಾಗಿದೆ.ಆದರೆ,ಇಂದು ಮಾನವನ ಅಜ್ಞಾನದಿಂದ ಅಳಿವಿನಲ್ಲಿದೆ.ದಯವಿಟ್ಟು ಇನ್ನಾದರು ಇಂತಹ ಸಸ್ಯವರ್ಗಗಳ ವಿಷಯದಲ್ಲಿ ಮೌಢ್ಯತೆ ಬಿಟ್ಟು ಒಳ್ಳೇಯದನ್ನೆ ಯೋಚಿಸೋಣ.

ಇವುಗಳ ಬೆಳವಣಿಗೆಯಲ್ಲಿ ನಾವು ಸಹಕಾರಿಯಾಗೋಣ.


 • ಲೇಖನ್ ನಾಗರಾಜ (ಹರಡಸೆ ಹೊನ್ನಾವರ)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW