‘ನೆನಪಿನ ನವಿಲುಗರಿ’ ಕವನ

ಮೋಡವು ಮುಸುಕಿದ ಮನಕೆ ಮೌನದ ಆಭರಣ…ಮೂಡದ ನಗುವಿನ ಸೆಲೆಗೆ ಭರವಸೆ ಹೊಂಗಿರಣ…ಚಿನ್ಮಯ (ಚಿನ್ನು) ಅವರಿಂದ ಸುಂದರ ಕವನ, ತಪ್ಪದೆ ಮುಂದೆ ಓದಿ….

ಕನಸಿನ ಸಂತೆಯ ತುಂಬ
ಬಯಕೆಯ ಧವಳಗಿರಿ/
ಮನಸಿನ ಅಂಗಡಿಯಲ್ಲೂ
ನೆನಪಿನ ನವಿಲುಗರಿ//

ಬದುಕಿನ ಪುಟಗಳ ನಡುವೆ
ಓದಿದ ಕಹಿಬರೆಹ/
ಹುಡುಕುವ ಮನಗಳ ಒಳಗೆ
ಮೂಡಲಿ ಸಿಹಿವಿರಹ//

ಸಾಧನೆ ಹಾದಿಯ ಮೇಲೆ
ದ್ವೇಷದ ಕರಿನೆರಳು/
ವೇದನೆ ಬೀದಿಯ ಕೊನೆಗೆ
ಆಸೆಯ ಕಿರುಬೆರಳು//

ಮೋಡವು ಮುಸುಕಿದ ಮನಕೆ
ಮೌನದ ಆಭರಣ/
ಮೂಡದ ನಗುವಿನ ಸೆಲೆಗೆ
ಭರವಸೆ ಹೊಂಗಿರಣ//

ಮಸುಕನು ಹೊಂದುವ ಮುನ್ನ
ಭಾವದ ಬಣ್ಣಗಳು/
ಮುಸುಕನು ಸರಿಸಲೇಬೇಕು
ಜೀವದ ಕಣ್ಣುಗಳು//


  • ಚಿನ್ಮಯ (ಚಿನ್ನು) – ಗೋವಾ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading