‘ಮಕ್ಕಳ ಮೇಲಿನ ವ್ಯಾಮೋಹ’ ಕವನ

‘ಮಕ್ಕಳ ಮೇಲಿನ ಅತೀ ವ್ಯಾಮೋಹ ಒಮ್ಮೊಮ್ಮೆ ದುಸ್ಥಿತಿಗೆ ಕಾರಣವಾಗಬಹುದು!’… ಹಿರಿಯ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಪ್ರೊ. ಸಿದ್ದು ಸಾವಳಸಂಗ ಅವರ ಲೇಖನಿಯಲ್ಲಿ ಮೂಡಿದ ಕವನ, ತಪ್ಪದೆ ಓದಿ…

ಗಂಡ ಹೆಂಡತಿಯರು ಮಕ್ಕಳೊಂದಿಗೆ
ಸೇರಿ ಸಂಸಾರ ಬಂಡಿ ಎಳೆಯುತ್ತಿದ್ದರು !
ಮಕ್ಕಳೇ ಬಾಳಿನ ಸರ್ವಸ್ವವೆಂದು
ತಿಳಿದು ಬದುಕು ನಡೆಸುತ್ತಿದ್ದರು !!

ಹಗಲಿರುಳೆನ್ನದೆ ದುಡಿದು ಹಣವನ್ನು
ಜೋಪಾನವಾಗಿ ಕೂಡಿಡುತ್ತಿದ್ದರು !
ಉಪವಾಸ ವನವಾಸಬಿದ್ದು
ಹೊಟ್ಟೆಬಟ್ಟೆ ಕಟ್ಟಿ
ಮಕ್ಕಳಿಗೆ ಬದುಕು ರೂಪಿಸಿದರು !!

ಆರತಿಗೊಬ್ಬ ಮಗಳು ಕೀರುತಿಗೊಬ್ಬ ಮಗನು
ಬಾಲ್ಯದಲಿ ಬಲು ಚೆನ್ನಾಗಿದ್ದರು !
ಮಕ್ಕಳ ವಿದ್ಯಾಭ್ಯಾಸದಲ್ಲಿ
ದಂಪತಿಗಳು ತಮ್ಮ ತಾವು ಮರೆತರು !!

ಬೆಳೆದು ದೊಡ್ಡವರಾದ ಮಕ್ಕಳು
ಸರಕಾರಿ ನೌಕಕರಿ ಹಿಡಿದರು !
ಹೆತ್ತವರು ಹಿಗ್ಗಿಹೀರಿಕಾಯಿಯಾದರು
ಕಷ್ಟನಷ್ಟಗಳೆಲ್ಲ ಪರಿಹಾರವಾಗಿ
ದೇವರುಕಣ್ಣು ತೆರೆದನೆಂದು ಖುಷಿಪಟ್ಟರು !!

ಇಬ್ಬರಿಗೂ ಮದುವೆ ಮಾಡಿ
ನೆಮ್ಮದಿಯ ನಿಟ್ಟಿಸಿರು ಬಿಟ್ಟರು !
ಪರಮಾತ್ಮನನ್ನು ದಿನವೂ ಮನದಲ್ಲಿ ನೆನೆದರು
ಮದುವೆಯಾದ ಮಕ್ಕಳು
ಆಗಾಗ ಬರುತ್ತಿದ್ದರು ಮನೆಗೆ
ಹೆತ್ತವರ ಸಂತೋಷ ಇಮ್ಮಡಿಗೊಳಿಸಿದರು !!

ಬರಬರುತ್ತ ಕೆಲಸದೊತ್ತಡದಲ್ಲಿ
ಬರುವುದು ಕಡಿಮೆಯಾಗಿ
ಮುಂದೊಂದು ದಿನ ಪೂರ್ತಿ ನಿಲ್ಲಿಸಿದರು !
ಮಕ್ಕಳ ಬರುವಿಕೆಗಾಗಿ
ಮುದಿ ಜೀವಗಳು ಚಾತಕ ಪಕ್ಷಿಯಂತೆ
ದಿನವೂ ಕಾದರು !!

ಮಕ್ಕಳ ಮೇಲಿನ ವ್ಯಾಮೋಹದಿಂದ
ಅವರು ಹಾಸಿಗೆ ಹಿಡಿದರು !
ಕೆಲವು ದಿನಗಳಲ್ಲಿ ಊಟವನ್ನೇ ಬಿಟ್ಟು
ಹಲಬುತ ರೋಗಗಾಹುತಿಯಾದರು !!

ಮುಂದೊಂದು ದಿನ ಇಬ್ಬರೂ
ಒಂದೇ ದಿನ ಪ್ರಾಣ ಬಿಟ್ಟರು !
ಊರ ಜನ ಇವರ ಕರುಣಾಜನಕ
ಸ್ಥಿತಿ ನೋಡಿ ಮರುಗಿದರು !!

ಮಕ್ಕಳಿಗೆ ಫೋನಾಯಿಸಿ ಹೆತ್ತವರ
ಮಣ್ಣಿಗೆಬರಲು ತಿಳಿಸಿದರು !
ನಮಗೆ ಬರಲು ಸಮಯವಿಲ್ಲ
ಎಲ್ಲ ಕಾರ್ಯವನ್ನು ನೀವೇ ಮುಗಿಸಿ
ನಿಮಗೆ ಖರ್ಚಿನ ಹಣ ಕಳಿಸುವೆನೆಂದರು !!

ಇಂತಹ ಮಕ್ಕಳು ಇದ್ದರೆಷ್ಟು ಬಿಟ್ಟರೆಷ್ಟು ?
ಪಾಪಿ ಮಕ್ಕಳಿವರು ಊರವರೇ ಕೂಡಿ
ಅಂತ್ಯ ಸಂಸ್ಕಾರ ಮಾಡಿ ಮುಗಿಸಿ
ಮನದಲ್ಲಿ ಬಲು ನೊಂದರು !!

ಮಕ್ಕಳ ಮೇಲಿನ ಅತೀ ವ್ಯಾಮೋಹ
ಒಮ್ಮೊಮ್ಮೆ ದುಸ್ಥಿತಿಗೆ ಕಾರಣವಾಗಬಹುದು !
ಆದರೂ ಅವರನ್ನು ಹೆತ್ತ ತಪ್ಪಿಗೆ
ಇದೆಲ್ಲವನ್ನು ಅನುಭವಿಸಲೇಬೇಕು !!


  • ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳು, ವಿಜಯಪುರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading