ನಿರುಪಮಾ ಅಂಗವಿಕಲೆಯಾಗಿದ್ದಳು, ಶಾಲೆಗೆ ಹೋದಾಗ ಶಾಲೆಯಲ್ಲಿ ಮಕ್ಕಳು ಕುಂಟಿ ಅಂತ ಹೀಯಾಳಿಸಿದಾಗ ಮನಸ್ಸಿಗೆ ನೋವಾಗಿ ಶಾಲೆ ಬಿಡಲು ನಿರ್ಧರಿಸಿದಳು,ಆದರೆ ಆಕೆಯ ಶಿಕ್ಷಕಿ ಸುಮನಾ ಟೀಚರ್ ಅವರ ಒತ್ತಾಯದಿಂದ ಚನ್ನಾಗಿ ಓದಿ ಬ್ಯಾಂಕ್ ನಲ್ಲಿ ಕೆಲ್ಸಕ್ಕೆ ಸೇರಿ ತನ್ನ ಕಾಲಿನ ಮೇಲೆ ನಿಂತುಕೊಂಡಳು. ಮುಂದೆ ನಿರುಪಮಾಳಿಗೆ ಮದುವೆಯೂ ಆಯಿತು. ಮುಂದೇನಾಯಿತು, ಸವಿತಾ ರಮೇಶ ಅವರು ಅಂಗವಿಕಲರ ಸಮಸ್ಯೆ ಕುರಿತು ಬರೆದಂತಹ ಕತೆಯಿದು ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
ಬಾಲ್ಕನಿಯಲ್ಲಿ ಕುಳಿತು ಕಾಫಿ ಕುಡಿಯುತ್ತಾ ರಸ್ತೆ ಕಡೆ ನೋಡುತ್ತಿದ್ದಳು ನಿರುಪಮಾ. ಮಕ್ಕಳು ಯುನಿಫಾರ್ಮ್ ಧರಿಸಿ ಶಾಲೆಗೆ ಹೋಗುತ್ತಿದ್ದರು. ಒಂದು ಪುಟ್ಟ ಹುಡುಗಿ ತನ್ನ ಅಣ್ಣನಿಗೆ ಆಸರೆಯಾಗಿ ನಿಂತು ರಸ್ತೆಯನ್ನು ದಾಟಿಸುತ್ತಿದ್ದಳು. ಕುಂಟುತ್ತಿದ್ದ ಅಣ್ಣನ ಕೈಯನ್ನು ತನ್ನ ಭುಜವನ್ನು ಬಳಸಿ ಹಿಡಿದುಕೊಳ್ಳಲು ಹೇಳಿ ನಿಧಾನಕ್ಕೆ ನಡೆಸಿಕೊಂಡು ಹೋಗುತ್ತಿದ್ದಳು.
ಪಾಪ ಎಷ್ಟು ಒಳ್ಳೆಯ ಹುಡುಗಿ ಚಿಕ್ಕ ವಯಸ್ಸಿಗೆ ಅಣ್ಣನಿಗೆ ಆಸರೆ ನೀಡುತ್ತಿದ್ದಾಳೆ. ಹೆಣ್ಣು ಮಕ್ಕಳೇ ಹಾಗೆ ಬೇರೆಯವರ ಕಷ್ಟಕ್ಕೆ ಯಾವಾಗಲೂ ಮರುಗುತ್ತಾರೆ. ಆ ಮಕ್ಕಳನ್ನು ನೋಡಿ ಅವಳಿಗೆ ತನ್ನ ಬಾಲ್ಯದ ನೆನಪಾಯಿತು.
ನಿರುಪಮಾ ಹಳ್ಳಿಯ ಹುಡುಗಿ ಅವರ ಅಪ್ಪ ಅಮ್ಮನಿಗೆ ಮನೆ ಜಮೀನು ಎಲ್ಲ ಇದ್ದವು. ಇಬ್ಬರು ಗಂಡು ಮಕ್ಕಳು ಹಾಗೂ ಮೂರು ಜನ ಹೆಣ್ಣು ಮಕ್ಕಳು ಇದ್ದರು. ಇವಳೇ ಕೊನೆಯವಳು. ಉಳಿದ ಅಕ್ಕ ಅಣ್ಣಂದಿರೆಲ್ಲ ಚೆನ್ನಾಗಿ ಇದ್ದರು, ನಿರುಪಮಾಳಿಗೆ ಮಾತ್ರ ಚಿಕ್ಕ ವಯಸ್ಸಿನಲ್ಲಿ ಸಿಕ್ಕಾಪಟ್ಟೆ ಜ್ವರ ಬಂದಿರುವುದೇ ನೆವವಾಗಿ ಕಾಲು ಊನವಾಗಿತ್ತು, ಕುಂಟಿ ಕೊಂಡು ನಡೆಯುತ್ತಿದ್ದಳು.
ಮನೆಯ ಒಳಗಡೆ ಹೇಗೋ ನಡೆಯುತ್ತಿದ್ದಳು, ಆದರೆ ಹೊರಗಡೆ ಹೋಗುವಾಗ ಸ್ವಲ್ಪ ಕಷ್ಟವಾಗುತ್ತಿತ್ತು. ಡಾಕ್ಟರ್ ಸಲಹೆಯಂತೆ ಅವಳ ಅಪ್ಪ ವಾಕರ್ ಕೊಡಿಸಿದ್ದರು. ಅದನ್ನು ಹಿಡಿದುಕೊಂಡು ಒಬ್ಬಳೇ ನಡೆಯಲು ರೂಢಿ ಮಾಡಿಕೊಂಡಿದ್ದಳು.

ಶಾಲೆಯಲ್ಲಿ ಓದಿನಲ್ಲಿ ತುಂಬಾ ಮುಂದೆ ಇದ್ದಳು ಪ್ರೈಮರಿ ತರಗತಿಯಲ್ಲಿ ಓದುವಾಗ ಯಾರು ಏನು ಅಷ್ಟಾಗಿ ಹೇಳುತ್ತಿರಲಿಲ್ಲ. ಪ್ರೈಮರಿ ಸ್ಕೂಲ್ ಮನೆಗೆ ತುಂಬಾ ಹತ್ತಿರ ಇತ್ತು. ಮಿಡ್ಲ್ ಸ್ಕೂಲ್ ಸ್ವಲ್ಪ ದೂರದಲ್ಲಿ ಇತ್ತು. ಇವಳು ಐದನೇ ತರಗತಿಗೆ ಬಂದಾಗ ಅವಳು ಯಾವಾಗಲೂ ಮೊದಲ ರಾಂಕ್ ಬರುವುದು ಕಂಡು ಒಬ್ಬಳು ಹುಡುಗಿಗೆ ನಿರುಪಮಾಳ ಮೇಲೆ ಹೊಟ್ಟೆಯುರಿ ಬಂದಿತ್ತು. ಅದಕ್ಕೆ ನಿರುಪಮಾಳನ್ನು ಕುಂಟಿ ಅಂತ ಆಡಿ ಕೊಳ್ಳುತ್ತಿದ್ದಳು. ನಿರುಪಮಾ ಮೊದಲು ಒಂದೆರಡು ಸಲ ಅಂದಾಗ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ದಿನಾಲು ಇವಳನ್ನು ನೋಡಿದಾಗ ಕುಂಟಿ ಅಂತ ಬೇರೆ ಮಕ್ಕಳ ಜೊತೆಗೆ ಹೇಳಿದಾಗ ಬೇಸರವಾಗುತ್ತಿತ್ತು. ನಾನು ಶಾಲೆಗೆ ಹೋಗುವುದಿಲ್ಲ ಎಂದು ಮನೆಯಲ್ಲಿ ಕುಳಿತಳು.
ಮನೆಯಲ್ಲಿ ಎಷ್ಟು ಹೇಳಿದರು ಕೇಳಲಿಲ್ಲ ನನಗೆ ಅವಮಾನವಾಗುತ್ತದೆ ಎಂದು ಅಳುತ್ತಾ ಕುಳಿತಾಗ ಅಮ್ಮನು ಹೋಗಲಿ ಬಿಡಿ ಓದಿ ಏನಾಗಬೇಕು ಅವಳಿಗೆ, ಹೇಗಿದ್ದರೂ ಅವಳು ನಮ್ಮ ಮನೆಯಲ್ಲಿಯೇ… ಇರುವುದು, ಅವಳಿಗೆ ಎಷ್ಟು ಓದಿದರೂ ಕೆಲಸಕ್ಕೆ ಹೋಗಲು ಆಗುವುದಿಲ್ಲ. ಅವಳನ್ನು ಯಾರು ಮದುವೆಯಾಗುವುದಿಲ್ಲ, ಎಂದರು.
ಒಂದು ವಾರದ ನಂತರ ಅವರ ಶಾಲೆಯ ಸುಮನಾ ಟೀಚರ್ ನಿರೂಪಮಾ ಶಾಲೆಗೆ ಬರದಿರುವುದನ್ನು ಕಂಡು ಅವಳ ಪಕ್ಕದ ಮನೆ ಹುಡುಗಿಯ ಬಳಿ ವಿಚಾರಿಸಿದರು. ಅವಳು “ಟೀಚರ್ ನಿರುಪಮಾ ಇನ್ನೂ ಶಾಲೆಗೆ ಬರುವುದಿಲ್ಲವಂತೆ. ಇಲ್ಲಿ ಎಲ್ಲರೂ ಕುಂಟಿ ಎಂದು ಆಡಿಕೊಳ್ಳುತ್ತಾರೆ ಅದಕ್ಕೆ ಓದುವುದು ನಿಲ್ಲಿಸಿಬಿಟ್ಟೆ ಅಂತ ಹೇಳಿದಳು” ಎಂದು ಹೇಳಿದಳು.
ಅಂದು ಶಾಲೆ ಮುಗಿದ ತಕ್ಷಣ ಆ ಹುಡುಗಿಯ ಜೊತೆ ಸುಮನಾ ಟೀಚರ್ ನಿರೂಪಮಾ ಮನೆಗೆ ಬಂದರು. ನಿರುಪಮಾಳಿಗೆ ತಿಳಿಸಿ ಹೇಳಿದರು, “ನೋಡು ನಿರುಪಮಾ ಈಗ ಕುಂಟಿ ಅನ್ನುತ್ತಾರೆ ಅಷ್ಟೇ… ಮುಂದೆ ನೀನು ಓದದಿದ್ದರೆ ನಿನಗೆ ತುಂಬಾ ಕಷ್ಟ. ಮುಂದೆ ನಿನ್ನನ್ನು ಯಾರು ನೋಡಿಕೊಳ್ಳುತ್ತಾರೆ. ನೀನು ಯಾರಿಗೂ ಕೇರ್ ಮಾಡಬಾರದು. ನಿನ್ನ ಭವಿಷ್ಯ ನಿನಗೆ ಮುಖ್ಯ… ನೀನು ಚೆನ್ನಾಗಿ ಓದಬೇಕು, ಓದಿ ಸರ್ಕಾರಿ ಹುದ್ದೆಗೆ ಸೇರಬೇಕು ಎಂದರು.
ಟೀಚರ್ ಈಗಲೇ ಕುಂಟಿ ಅಂತ ಹೊರಗಡೆ ಜನ ಆಡಿಕೊಳ್ಳುತ್ತಾರೆ. ನನಗೆ ಯಾರು ಕೆಲಸ ಕೊಡುತ್ತಾರೆ, ಒಂದು ವೇಳೆ ಕೊಟ್ಟರು, ಮುಂದೆ ನಾನು ಹೇಗೆ ಕೆಲಸಕ್ಕೆ ಹೋಗಲಿ, ಈ ಕಾಲಿನಲ್ಲಿ ನನ್ನ ಹತ್ತಿರ ಕೆಲಸ ಮಾಡಲು ಸಾಧ್ಯನಾ…ಎಂದಾಗ, ಯಾಕೆ ಆಗುವುದಿಲ್ಲ …ಕುರ್ಚಿ ಮೇಲೆ ಕುಳಿತು ಕೆಲಸ ಮಾಡಲು ನಿನ್ನ ಹತ್ತಿರ ಸಾಧ್ಯವಿದೆ. ಅದಕ್ಕೆ ನೀನು ಓದಬೇಕು ಎಂದು ಅಂದಿದ್ದು, ಜಾಸ್ತಿ ಓದಿದರೆ ನಿನಗೆ ಒಳ್ಳೆಯ ಕೆಲಸ ಸಿಗುತ್ತದೆ, ಆಗ ಎಲ್ಲರೂ ಗೌರವ ಕೊಡುತ್ತಾರೆ, ಈಗ ಕುಂಟಿ ಎಂದವರೇ ಮುಂದೆ ನಿನಗೆ ವಿಶ್ ಮಾಡುತ್ತಾರೆ, ಎಂದು ಪರಿ ಪರಿಯಾಗಿ ಬುದ್ಧಿ ಹೇಳಿದರು.
ಫೋಟೋ ಕೃಪೆ : google
ಅಪ್ಪ ಅಮ್ಮ ಇರುವ ತನಕ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆಮೇಲೆ ಅಣ್ಣಂದಿರ ಹೆಂಡತಿಯರು ಹೇಳಿದಂತೆ ಕೇಳಬೇಕಾಗುತ್ತದೆ. ಕುಳಿತು ತಿನ್ನುತ್ತಿದ್ದರೆ ಎಲ್ಲರಿಗೂ ಅಗ್ಗವಾಗುತ್ತೀಯಾ, ನೀನು ಚೆನ್ನಾಗಿ ಓದಬೇಕು, ನಿನಗೆ ಅಂಗವಿಕಲರ ಕೋಟದಲ್ಲಿ ಕೆಲಸ ಸಿಗುತ್ತದೆ ಎಂದು ಭರವಸೆ ನೀಡಿದರು. ಪ್ರತಿಯೊಂದು ತರಗತಿಯಲ್ಲಿ ಅವಳಿಗೆ ಅರ್ಥವಾಗದ ವಿಷಯ ಕಲಿಸಿ ಕೊಟ್ಟು ಅವಳು ಡಿಗ್ರಿ ಮುಗಿಸಿ ಬ್ಯಾಂಕಿನಲ್ಲಿ ಕೆಲಸ ಸಿಗುವ ತನಕ ಸಹಾಯ ಮಾಡಿದರು. ಡಿಗ್ರಿ ಓದುವಾಗಲೇ ತನಗೆ ಸುಮನಾ ಟೀಚರ್ ಹೇಳಿದ್ದು ನಿಜ ಅಂತ ಅರ್ಥವಾಗಿತ್ತು. ಎಲ್ಲಾ ಸರಿಯಾಗಿರುವ, ಬಣ್ಣ ಮಾತ್ರ ಸಲ್ಪ ಕಪ್ಪು ಇರುವ ತನ್ನ ಅಕ್ಕನನ್ನು ಬಂದ ಯಾವ ಗಂಡುಗಳು ಒಪ್ಪುತ್ತಿರಲಿಲ್ಲ. ಇನ್ನು ತನ್ನಂತವಳಿಗೆ ಮದುವೆಯಾಗುವುದು ಕನಸು ಅನಿಸಿತ್ತು.
ಅವಳಿಗೆ ಮನಸ್ಸು ಕುಗ್ಗಿದಾಗಲೆಲ್ಲಾ ‘ನೀನು ಯಾರಿಗೂ ಭಾರವಾಗಿ ಇರಬಾರದು ಎಂದರೆ ನೀನು ಆತ್ಮವಿಶ್ವಾಸದಿಂದ ಇರಬೇಕು. ಧೈರ್ಯದಿಂದ ತಲೆಯೆತ್ತಿ ನಡೆಯಬೇಕು. ನೀನೇನು ತಪ್ಪು ಮಾಡಿಲ್ಲ ಅಂಗವಿಕಲತೆ ಯಾಗಿದ್ದು ನಿನ್ನ ತಪ್ಪಲ್ಲ’ ಎಂದು ಸುಮನಾ ಟೀಚರ್ ಹೇಳಿದ ಮಾತು ಪ್ರತಿಕ್ಷಣವೂ ಕಿವಿಯಲ್ಲಿ ಮೊಳಗುತ್ತಿತ್ತು.
ಹೌದು ಆ ಟೀಚರ್ ನಿಂದಲೇ ತಾನು ಇಂದು ಒಂಟಿಯಾದರೂ ಸುಖವಾದ ಜೀವನ ನಡೆಸುತ್ತಾ ಇರುವುದು. ಯೋಚನೆಯಿಂದ ಹೊರಗೆ ಬಂದು ಸ್ನಾನ ಪೂಜೆ ಮುಗಿಸಿದಳು. ತಿಂಡಿ ತಿನ್ನುತ್ತಾ ಮತ್ತೆ ಹಳೆಯ ಗುಂಗಿಗೆ ಹೋದಳು.
ಸುಮನಾ ಟೀಚರ್ ಹೇಳಿದಂತೆ ತನಗೆ ಒಂದು ಸರ್ಕಾರಿ ಉದ್ಯೋಗ ಸಿಗಲೇಬೇಕು ಎಂದು ತಾನು ಕಷ್ಟಪಟ್ಟು ಓದುತ್ತಿದ್ದೆ. ಅದರಂತೆ ಕೆಲಸ ಸಿಕ್ಕಿತು. ಬಸ್ ಹತ್ತಿ ಇಳಿಯುವಾಗ ಕಷ್ಟವಾಗುತ್ತಿತ್ತು. ಆಗ ಬೇರೆಯವರ ಸಹಾಯ ಬೇಕಾಗುತ್ತಿತ್ತು. ಸಹಾಯ ಮಾಡಿದವರು ತನ್ನನ್ನು ಅನುಕಂಪದಿಂದ ನೋಡಿದಂತೆ ಅನಿಸುವುದು, ಬಸ್ಸಿನಲ್ಲಿ ಎಲ್ಲರೂ ತನ್ನನ್ನು ದಿಟ್ಟಿಸಿ ನೋಡುವುದು ತನಗೆ ಒಂದು ತರಹ ಬೇಸರವಾಗುತ್ತಿತ್ತು.
ಫೋಟೋ ಕೃಪೆ : google
ಅದನ್ನು ಸುಮನಾ ಟೀಚರ್ ಬಳಿ ಹೇಳಿಕೊಂಡಾಗ…. ಅವರು..ತನಗೆ ಬಲವಂತ ಮಾಡಿ ಗಾಡಿ ಓಡಿಸಲು ಕಲಿಸಿದರು. ಗಾಡಿ ಶೋರೂಂ ನಲ್ಲಿ ತನ್ನ ಟೂ ವಿಲ್ಲರ್ ಗೆ ಇನ್ನೊಂದು ವೀಲ್ ಜೋಡಿಸಿಕೊಟ್ಟರು. ಅದರಿಂದ ತನಗೆ ಬಸ್ ಹತ್ತಿ ಇಳಿಯುವ, ತೊಂದರೆ ಇರಲಿಲ್ಲ. ಎಲ್ಲಿ ಬೇಕಿದ್ದರೂ ಧೈರ್ಯದಿಂದ ಗಾಡಿಯಲ್ಲಿ ಹೋಗುತ್ತಿದ್ದೆ.
ಅಪ್ಪ ಅಮ್ಮ ತನಗೆ ಮದುವೆ ಮಾಡಲು ನೋಡಿದರು, ಹುಡುಗರು ಬಂದವರೆಲ್ಲ ತನ್ನ ಕೆಲಸ ನೋಡಿ ತನ್ನನ್ನು ಒಪ್ಪಿಕೊಳ್ಳುತ್ತಿದ್ದರು. ಅದರಿಂದ ತನಗೆ ಬೇಸರವಾಗಿ ಮದುವೆ ಬೇಡ ಅಂತ ಸುಮ್ಮನಿದ್ದಳು. ಒಮ್ಮೆ ಬ್ಯಾಂಕ್ ಮೆಟ್ಟಿಲು ಹತ್ತುವಾಗ ಜಾರಿ ಬೀಳುತ್ತಿದ್ದ ತನ್ನನ್ನು ಒಂದು ಹುಡುಗ ಹಿಡಿದು ನಿಲ್ಲಿಸಿದ ಥ್ಯಾಂಕ್ಯೂ… ಎಂದು ಹೇಳಿ ಒಳಗಡೆ ಬಂದಳು.
ಆ ಹುಡುಗ ತಮ್ಮ ಬ್ಯಾಂಕ್ ನ ಕಸ್ಟಮರ್ ಆಗಿದ್ದ. ಹೆಚ್ಚು ಕಡಿಮೆ ದಿನಾ ಬರುತ್ತಿದ್ದ. ಬಂದಾಗಲೆಲ್ಲಾ ತನಗೆ ಗುಡ್ ಮಾರ್ನಿಂಗ್ ಹೇಳಿಯೇ ಹೋಗುತ್ತಿದ್ದ. ಹಾಗೆ ತನ್ನ ಜೊತೆ ಜಾಸ್ತಿ ಜಾಸ್ತಿ ಮಾತನಾಡಲು ಶುರು ಮಾಡಿದ. ಅಪ್ಪ ಅಮ್ಮಾ ಎಲ್ಲಾ ಊರಿನಲ್ಲಿ ಇರುವುದು ಇಲ್ಲಿ ನಾನೊಬ್ಬನೆ ಬಿಸಿನೆಸ್ ಮಾಡಿಕೊಂಡು ಇರುವೆ ಎಂದು ತನ್ನ ಪರಿಚಯವನ್ನು ಮಾಡಿಕೊಂಡಿದ್ದ .
ಹೀಗೆ ಮಾತನಾಡುತ್ತಾ ನಾನು ನಿಮ್ಮನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದಾಗ ಖುಷಿಯಿಂದ ಒಪ್ಪಿಕೊಂಡೆ. ಅಪ್ಪ ಅಮ್ಮನಿಗೂ ಖುಷಿಯಾಯಿತು.. ಸುಮಾರು ತಿಂಗಳಿನಿಂದ ನೋಡಿದವನು ಒಳ್ಳೆಯವನು ಎಂದು ಕೊಂಡು ಸಡಗರದಿಂದ ಅವನನ್ನು ಮದುವೆಯಾದೆ.
ಮದುವೆಯಾಗಲು ಒಂದು ಕಾರಣವಿತ್ತು. ನೋಡಿದವರೆಲ್ಲಾ, ಮದುವೆಯಾಗಿಲ್ಲ ಒಂಟಿ.. ಅಲ್ಲದೆ ಕುಂಟಿ ಎಂದು ಅವಳ ಅಸಹಾಯಕತೆಯನ್ನು ಇನ್ ಕ್ಯಾಶ್ ಮಾಡಿ ಕೊಳ್ಳುಲು ನೋಡಿಕೊಳ್ಳುತ್ತಿದ್ದರು. ಜೊತೆ ಕೆಲಸ ಮಾಡುವವರಲ್ಲೇ ಕೆಲವರು ಇವಳ ಸ್ನೇಹವನ್ನು ಮಿಸ್ ಯೂಸ್ ಮಾಡಿಕೊಳ್ಳಲು ನೋಡುವರು. ತಾನು ಒಪ್ಪದಿದ್ದಾಗ ಕೆಲಸದ ವಿಷಯದಲ್ಲಿ ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದರು.
ಅದಕ್ಕೆ ಮದುವೆಯಾದರೆ ತನಗೆ ಗಂಡಿನ ಆಸರೆ ಸಿಗುತ್ತದೆ, ಯಾರೂ ತನ್ನನ್ನು ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ ಎಂದು ಮದುವೆ ಆದಳು. ಮದುವೆಯಾಗಿ ಆರು ತಿಂಗಳಿಗೆ ಗೊತ್ತಾಯಿತು ಅವನ ಬಂಡವಾಳ. ಅವನು ದುಡ್ಡಿಗಾಗಿ ನನ್ನನ್ನು ಮದುವೆಯಾಗಿದ್ದ. ತಿಂಗಳು ತಿಂಗಳು ಸಂಬಳ, ತನ್ನ ಹತ್ತಿರ ದುಡ್ಡಿರುವುದು ನೋಡಿ ಮದುವೆ ಮಾಡಿಕೊಂಡಿದ್ದ.
ಮೊದ ಮೊದಲು ಸಣ್ಣ ಪುಟ್ಟ ಹಣವನ್ನು ಚಿಲ್ಲರೆ ಇಲ್ಲ ಅಂತ ಕೇಳಿ ತೆಗೆದುಕೊಳ್ಳುತ್ತಿದ್ದ. ನಂತರ ಪೂರ್ತಿ ಸಂಬಳವನ್ನೇ ಕೇಳಲು ಶುರು ಮಾಡಿದ. ಕೊಡಲ್ಲ ಅಂದರೆ ಕೋಪ ಮಾಡಿಕೊಳ್ಳುತ್ತಿದ್ದ. ನಿನ್ನಂತ ಕುಂಟಿಯನ್ನು ಯಾರು ಮದುವೆ ಮಾಡಿಕೊಳ್ಳುತ್ತಿದ್ದರು ನಾನು ಏನೋ… ಅನುಕಂಪದಿಂದ ಮಾಡಿಕೊಂಡಿದ್ದೇನೆ. ನೀನು ನೋಡಿದರೆ ನಿನಗೆ ಸಂಬಳ ಬರುತ್ತದೆ ಎಂದು ಜಂಭ ಮಾಡುತ್ತೀಯಾ… ?ಎಂದು ಹಂಗಿಸುತ್ತಿದ್ದ.
ಮೂರು ನಾಲ್ಕು ವರ್ಷ ಹಾಗೆ ಕಳೆಯಿತು. ಇವಳು ಕೂಡಿಟ್ಟ ಹಣ, ಸಂಬಳ ಎಲ್ಲವನ್ನು ಕಿತ್ತುಕೊಂಡು ಇವಳಿಗೆ ಕಿರುಕುಳ ಕೊಡುತ್ತಿದ್ದ. ಅಷ್ಟರಲ್ಲಿ ಅಪ್ಪ ಅಮ್ಮನು ತೀರಿ ಹೋಗಿದ್ದರು. ಕೆಲವು ಸಲ ತುಂಬಾ ಹಿಂಸೆ ಮಾಡುತ್ತಿದ್ದ, ಹೊಡೆಯುತ್ತಿದ್ದ, ಸ್ವಲ್ಪ ದಿನ ಇವನ ಕಾಟ ಸಹಿಸಲಾಗದೆ ತವರಿಗೆ ಹೋಗಿ ಕುಳಿತುಕೊಂಡರೆ ಅಲ್ಲು ಬಂದು ಜಗಳ ಮಾಡುತ್ತಿದ್ದ.
ಅತ್ತಿಗೆಯರು ಬೇಸರ ಮಾಡಿಕೊಳ್ಳುತ್ತಿದ್ದರು. ‘ಏನಮ್ಮ… ನಿನ್ನ ಮನೆಯ ಜಗಳ ನಮ್ಮ ಮನೆಯ ತನಕ ತರುತ್ತೀಯಾ’ ಅಂತ. ತನ್ನ ಜೊತೆ ಕೆಲಸ ಮಾಡುವವರು ಸಲಹೆ ಕೊಟ್ಟರು. ಅವನಿಂದ ನೀನು ದೂರವಾಗುವುದೇ ಒಳ್ಳೆಯದು. ಧೈರ್ಯವಾಗಿ ಒಬ್ಬಳೇ ಇರು ಹೇಗಿದ್ದರೂ ಕೆಲಸವಿದೆ ಎಂದರು. ಆದರೆ ತಾನು ಒಂಟಿಯಾಗಿ… ಕುಂಟಿ ಬೇರೆ. ಒಬ್ಬಳೇ ಮನೆಯಲ್ಲಿ ಹೇಗೆ ಇರುವುದು ಎಂದು ಯೋಚಿಸಿದಳು. ಗಂಡ ಬದಲಾಗುವನು ಅಂತ ಮತ್ತೆ ಆರು ತಿಂಗಳು ಕಾದಳು. ಆದರೆ ಅವನು ಕೆಲಸಕ್ಕೆ ಹೋಗದೆ 3 ಹೊತ್ತು ಕುಡಿಯುತ್ತ ಮನೆಯಲ್ಲಿ ಇರುತ್ತಿದ್ದ. ಇವಳ ಸಂಬಳದಲ್ಲಿ ಮಜಾ ಮಾಡುತ್ತಿದ್ದ.

ಇವರ ಬ್ಯಾಂಕಿಗೆ ಬರುತ್ತಿದ್ದ ಕಸ್ಟಮರ್ ಒಬ್ಬರು ಲಾಯರ್ ಇದ್ದರು. ಅವರ ಬಳಿ ಮಾತನಾಡಿ ಧೈರ್ಯದಿಂದ ಡೈವೋರ್ಸ್ ಗೆ ಅಪ್ಲೈ ಮಾಡಿದಳು. ಸುಮನಾ ಟೀಚರ್ ಕೊಟ್ಟ ಧೈರ್ಯವೇ ಇಲ್ಲೂ ಕೆಲಸ ಮಾಡಿತ್ತು. ಅವನು ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಮಾಡುತ್ತಾನೆ ಅಂತ ಇವಳಿಗೆ ಡೈವೋರ್ಸ್ ಸುಲಭವಾಗಿ ಸಿಕ್ಕಿತು. ನಂತರ ಬ್ಯಾಂಕಿನಲ್ಲಿ ಲೋನ್ ಮಾಡಿ ಒಂದು ಪುಟ್ಟ ಅಪಾರ್ಟ್ಮೆಂಟ್ಸ್ ಕೊಂಡು ಅಲ್ಲಿ ಬಂದು ಒಬ್ಬಳೇ ನೆಲೆಸಿದಳು. ಅಪಾರ್ಟ್ಮೆಂಟ್ಸ್ ನಲ್ಲಿ ಸೆಕ್ಯುರಿಟಿ ಇರುತ್ತೆ ನಿನಗೆ ಭಯ ಇರುವುದಿಲ್ಲ ಎಂದು ತನ್ನ ಜೊತೆ ಕೆಲಸ ಮಾಡುವವರು ಹೇಳಿ ಕೊಡಿಸಿದರು. ಇದರಿಂದ ಈಗ ರಿಟೈಡ್ ಆದರೂ ತಾನು ಒಬ್ಬಳೇ ಈ ಅಪಾರ್ಟ್ಮೆಂಟ್ನಲ್ಲಿ ವಾಸ ಮಾಡುತ್ತಿದ್ದೇನೆ. ಕೆಲವು ಬಡ ಮಕ್ಕಳಿಗೆ ಶಾಲೆಯ ಫಿಜ್ ಕಟ್ಟುತ್ತಾ ಬಡವರಿಗೆ ಸಹಾಯ ಮಾಡುತ್ತಾ ಸಂತೋಷದಿಂದ ಇದ್ದೇನೆ.
ತನಗೆ ಚಿಕ್ಕವಯಸ್ಸಿನಲ್ಲಿ ಸುಮನಾ ಟೀಚರ್ ಅಂತ ಒಳ್ಳೆಯ ಟೀಚರ್ ಸಿಗದಿದ್ದರೆ ತಾನು ಈಗಲೂ ಕುಂಟಿಯಾಗಿ ಊರಿನಲ್ಲಿ ಅಣ್ಣ ಅತ್ತಿಗೆಯರ ಜೊತೆ ದಿನಾಲೂ ಅಳುತ್ತಾ ಮೂಕವೇದನೆ ಅನುಭವಿಸುತ್ತಾ ಇರುತ್ತಿದ್ದೆ. ಈಗ ತನಗೆ ತಾನು ಅಂಗವಿಕಲೆ ಎನ್ನುವ ಮಾನಸಿಕ ಹಿಂಸೆ ಸ್ವಲ್ಪವೂ ಇಲ್ಲ. ಎಲ್ಲಿ ಹೋದರು ಮರ್ಯಾದೆ ಸಿಗುತ್ತದೆ. ಎಲ್ಲರೂ ಗೌರವದಿಂದ ಮಾತನಾಡಿಸುತ್ತಾರೆ…. ಆದರೆ ಇಷ್ಟೆಲ್ಲಾ ಸಾಧನೆ ಮಾಡಲು ತಾನು ಬದುಕಿನಲ್ಲಿ ಎಷ್ಟೊಂದು ಕಷ್ಟಪಟ್ಟೆ ಎಂದು ನೆನಪಿಸಿಕೊಂಡಳು.
ಕಾಲೇಜು ಓದುವಾಗ, ಕೆಲಸಕ್ಕೆ ಸೇರಿದ ಹೊಸದರಲ್ಲಿ ತನಗೆ ಸಹಾಯ ಮಾಡುವ ನೆಪದಲ್ಲಿ ತನ್ನ ಬಳಿ ಸಲುಗೆಯಿಂದ ವರ್ತಿಸಲು ಬಂದವರು ಎಷ್ಟು ಜನ… ಬಸ್ ಹತ್ತಿ ಇಳಿಯುವಾಗ ಬಸ್ ಇಳಿಸುವ, ಹತ್ತಿಸುವ ನೆಪದಲ್ಲಿ ಮೈ ಕೈ ಮುಟ್ಟಲು ಬರುತ್ತಿದ್ದರು. ರಸ್ತೆ ದಾಟಿಸುವ ನೆಪದಲ್ಲಿ ಮೈ ಕೈ ಸೋಕುವರು. ಬೇಡದ ಕಡೆ ಮುಟ್ಟಲು ಬರುತ್ತಿದ್ದರು.
ತಾನು ಅದಕ್ಕೆ ಅಂತವರ ಸಹಾಯ ನಿರಾಕರಿಸುತ್ತಿದ್ದೆ. ಅದಕ್ಕೆ ಕುಂಟಿಯಾದರೂ ಸೊಕ್ಕು ಜಾಸ್ತಿಯಾಗೆ ಇದೆ ಎಂದು ಅವಹೇಳನ ಮಾಡಿ ಹೋಗುತ್ತಿದ್ದರು. ಮನೆಗೆ ಬಂದು ರಾತ್ರಿಯೆಲ್ಲಾ ಅಳುತ್ತಿದ್ದೆ… ಕಾಲೇಜಿನಲ್ಲಿ ಡಿಸ್ಟಿಂಕ್ಷನ್ ಬರಲು ಅದೇ ಕಾರಣವಾಯಿತು.
ಇನ್ನು ಮುಂದಿನ ಜೀವನ ತಾನು ತನ್ನಂತಹ ಅಂಗವಿಕಲರಿಗೆ ಹಾಗೂ ಮಾನಸಿಕವಾಗಿ ಕುಗ್ಗಿದವರಿಗೆ ಕೌನ್ಸಿಲಿಂಗ್ ಮಾಡುತ್ತಾ, ಅವರಿಗೆ ಬದುಕಲು ಪ್ರೇರಣೆ ನೀಡಬೇಕು ಎಂದು ದೃಢ ನಿಶ್ಚಯ ಮಾಡಿದಳು ನಿರುಪಮಾ…
- ಸವಿತಾ ರಮೇಶ – ಗೃಹಿಣಿ, ಹವ್ಯಾಸಿ ಬರಹಗಾರರು, ಲೇಖನಗಳು, ಕಥೆಗಳು, ಗೃಹಶೋಭಾ ಹಾಗೂ ವಿಜಯವಾಣಿ, ವಿನಯ ವಾಣಿ, ವರ್ತಮಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪ್ರತಿಲಿಪಿಯಲ್ಲಿ ನಾಲ್ಕು ಕಾದಂಬರಿಗಳನ್ನು ಪ್ರಕಟಕೊಂಡಿವೆ, ವಾಸಸ್ಥಳ ಬೆಂಗಳೂರು.