‘ಅಂಥಾ ಮಹಾರಾಜ ಜನಕನ ಮಗಳಿಗೇ ವನವಾಸದ ಬವಣೆ ತಪ್ಪಲಿಲ್ಲ, ಇನ್ನು ನಮ್ಮಂತಹ ಸಾಧಾರಣ ಮನುಷ್ಯರ ಪಾಡೇನು..? ಜೀವನ ಎಂದು ಮೇಲೆ ಹಗಲಿರುಳಿನಂತೆ ಕಷ್ಟ ಸುಖ ಇದ್ದೇ ಇರುತ್ತವೆ’ ಅರಿತು ಯಾವಾಗಲು ಸಮಾಧಾನವಾಗಿರಬೇಕು. ಜೀವನದ ತಮ್ಮ ಅನುಭವದ ಪುಟಗಳನ್ನು ಓದುಗರ ಮುಂದೆ ಸುಂದರವಾಗಿ ತೆರೆದಿಡುತ್ತಿರುವ ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣವನ್ನು ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ …
“ಓಡುವುದೇತಕೆ ಮುಂದಕೆ ಮುಂದಕೆ
ನಿಂತು ಜಗವ ನೋಡು
ಬರೆದನು ಬಯಲಿಗೆ ಬಣ್ಣದ ಚಿತ್ರವ
ಇದುವೆ ಶಿವನ ಬೀಡು”
ಕವಿ ಡಾ.ರಾಘವೇಂದ್ರರಾವ್ ಅವರ ಈ ಸರಳ ಸಾಲುಗಳು ನನಗೆ ಏಕೋ ಆಕರ್ಷಕವೆನಿಸಿದವು. ಹಾಗೆಯೇ ಸಿನೆಮಾ ಗೀತೆಯೊಂದರಲ್ಲಿ ಅಳವಡಿಸಲಾದ ಸಾಲುಗಳೂ..
”ಕಣ್ಣು ಮುಚ್ಚಿ ಕುಳಿತರೆ
ಕಾಣುವೆ ನೀನೊಬ್ಬನೇ
ಕಣ್ಣು ತೆರೆದು ನೋಡಲು
ಕಾಂಬರು ನೂರಾರು ಶಿವರು”
*
ಮನೋಮಂದಿರದಲ್ಲಿ ಈ ಸಾಲುಗಳು ಅನುರಣಿಸುತ್ತಾ… ಸುಪ್ರಭಾತ ಹಾಡಲು ತೊಡಗಿದವು. ಹೌದಲ್ವಾ! ಇಂತಹ ಸಾಲುಗಳು ನಮ್ಮ ಭಾವತಂತಿಯನ್ನು ಮೀಟಿ ನಿಸರ್ಗಾರಾಧನೆಯಲ್ಲಿ ತಾದಾತ್ಮ್ಯವನ್ನು ತಂದು ಕೊಡದೆ ಎಷ್ಟು ವರುಷಗಳೇ ಉರುಳಿಬಿಟ್ಟಿವೆ.ಎಂತಹ ಸುಖದಿಂದ ವಂಚಿತರಾಗಿದ್ದೇವೆ ನಾವು…?
*
ಓಟ…ಓಟ…ಓಟ…..
ಎಲ್ಲದರಲ್ಲೂ ಧಾವಂತ..!
ಕೊನೆಗೆ ತಿನ್ನುವುದರಲ್ಲೂ..
‘ಏನನ್ನು ತಿಂದೆವು?’ ಎಂಬುದರ ನೆನಪೇ ಇಲ್ಲದಂತೆ ಹೊಟ್ಟೆಯ ಚೀಲಕ್ಕೆ ಇಳಿಸಿ ಬಿಡುವ ನಾವು ಎಂದಾದರೂ ಅದರ ರುಚಿಯನ್ನು ಆಸ್ವಾದಿಸುವ ವ್ಯವಧಾನವನ್ನು ಹೊಂದಿದ್ದೇವೆಯೇ..
ಕಾಲು ಮಡಚಿ ಚಕ್ಕಲು ಬುಕ್ಕರು ಹಾಕಿಕುಳಿತು..ಆಪೋಶನಗೈದು,ಜಲಪ್ರೋಕ್ಷಣೆ ಮಾಡಿ ಅನ್ನಲಕ್ಷ್ಮಿಯನ್ನು ಧ್ಯಾನದೊಂದಿಗೆ ಪ್ರಸಾದದಂತೆ ಭಕ್ತಿಯಿಂದ ಸವಿಯುವ ಕೆಲಸ ಮಾಡುತ್ತಿದ್ದೇವೆಯೇ?
ಹಾಗಿದ್ದರೆ ಅಷ್ಟೊಂದು ಕಾಳಜಿ ವಹಿಸಿ ತಯಾರಿಸುವ ಅಡುಗೆಯ ವೈಶಿಷ್ಟ್ಯ ನಮಗೆ ಮನದಟ್ಟಾಗುವುದಾದರೂ ಹೇಗೆ? ರಸಗ್ರಂಥಿಗಳು ಸ್ರವಿಸದೆ ಆಹಾರ ಬಾಯಿಗೆ
ರುಚಿಸುವುದೂ ಇಲ್ಲ ತಾನೆ! ನಾಲಗೆಯ ರುಚಿ ನಿಯಂತ್ರಿಸದೆ ಪಟ್ಟಾಗಿ ತಿಂದಾಗ ಉದರಕ್ಕೆ ಸತ್ವವನ್ನು ಒದಗಿಸುವುದೂ ಇಲ್ಲ. ಆರೋಗ್ಯವರ್ಧನೆಗೂ ಕಾರಣವಾಗುವುದಿಲ್ಲ. ಅಡ್ಡಪರಿಣಾಮಗಳೇ ಹೆಚ್ಚೆನಿಸುವ ಈ ಕಲಬೆರಕೆಯ ಆಹಾರ ತಿಂದರೆ,ನಿರಂತರ ರೋಗಕ್ಕೆ ಆಹ್ವಾನನೀಡಿ,ಔಷಧಿಗಳೇ ಆಹಾರವಾಗಿರುವ ದುರಂತಗಳೂ ನಮ್ಮ ಮುಂದಿವೆ.
ಒಂದು ವೇಳೆ ಮನೆಯಲ್ಲಿ ಅಡುಗೆ ತಡವಾದರೆ ಕಾಯುವ ತಾಳ್ಮೆಯೂ ಇರುವುದಿಲ್ಲ.’ ಬಿಡು ತಡವಾಯ್ತು.. ಹೇಗೂ ದಾರಿಯಲ್ಲಿ ಯಾವುದಾದರೂ ಹೋಟೆಲ್ನಲ್ಲಿ ತಿನ್ಕೊಂಡು ಹೋಗ್ತೇನೆ ಅಥವಾ ಆಫೀಸ್ ಕ್ಯಾಂಟೀನ್ ನಲ್ಲಿ ತಿನ್ತೇನೆ’ ಎಂದು ಧಾವಿಸಿ ಬಿಡುವ ಪತಿಗೆ ರಾತ್ರಿ ಬಂದಾಗ ಅದನ್ನೇ ಮತ್ತೆ ಬಡಿಸುವಂತಿಲ್ಲ.
ಉಪವಾಸ ಹೋದವನು ಹೊಟ್ಟೆಗೇನಾದರೂ ಇಳಿಸಿದನೋ ಇಲ್ಲ ಮರೆತೇ ಹೋದನೋ ಅದೂ ನೆನಪಿಲ್ಲ. ಮಕ್ಕಳೂ ಕಾಲೇಜ್ ಕ್ಯಾಂಟೀನ್, ಉಪಾಹಾರ ಗೃಹಗಳನ್ನೇ ಅವಲಂಬಿಸತೊಡಗಿದ್ದಾರೆ. ಅದೂ ಅಲ್ಲದೆ ವೀಕೆಂಡ್ ಪಾರ್ಟಿ, ಔಟಿಂಗ್ ಎಂಬ ಶೋಕಿ!

ಈಗ ಪ್ರವಾಸೀ ಕೇಂದ್ರಗಳಲ್ಲಿ ಹಿಂದಿದ್ದ ಸಾಂಪ್ರದಾಯಿಕ ಅಡುಗೆಗಳ ಸವಿ ಮಾಯವಾಗಿ, ಹಳೆ ರುಚಿಯ ಹೋಟೆಲ್ಗಳ ಬದಲಾಗಿ ವ್ಯಾಪಾರಿ ಮನೋಭಾವದ ವಿದೇಶೀ ಖಾದ್ಯಗಳದೇ ಮೇಲಾಟ ಪ್ರಾರಂಭವಾಗಿದೆ. ಮಾಮೂಲು ಊಟವನ್ನೇ ಮಾಡೋಣವೆಂದರೂ, ಹಠ ಮಾಡಿ ಯಾವು ಯಾವುದೋ ಮಸಾಲೆ ಫ್ರೈ, ಫೀಜಾ, ಬರ್ಗರ್, ಮಂಚೂರಿ ಕಬಾಬ್ಗಳಂತಹ, ಟೇಸ್ಟ್ ಮೇಕರ್ ಹಾಕಿದ ಖಾದ್ಯಗಳು, ಬಾಯಿಗೆ ಒಗ್ಗಿ ಹೋಗಿವೆ. ಒಟ್ಟಿಗೆ ಕುಳಿತು ಆರೋಗ್ಯಕರ ಊಟದ ಸವಿಯನ್ನು ಸವಿಯುವ ಸಂಪ್ರದಾಯವೇ ಮರೆಯಾಗಿ ಬಿಟ್ಟಿದೆ.
ಹಾಗಿದ್ರೆ ಸುಖ ಎಂದರೆ ಏನು…
ಅದೂ ಈ ಆಧುನಿಕ ಜಗತ್ತಿನಲ್ಲಿ!
ಕೇವಲ ಆಡಂಬರದ ಐಷಾರಾಮಿ ಜೀವನ ಮಾತ್ರವೇ..?
ಸಾಧನಗಳು ಎಂದೂ ನಮಗೆ
ಸುಖಕಾರಿಗಳಲ್ಲ. ಒಂದು ಇಂಗ್ಲಿಷ್ ಗಾದೆಯಂತೆ,
”ಹಣದಿಂದ ಹಾಸಿಗೆ ಕೊಳ್ಳಬಹುದು, ನಿದ್ರೆಯನ್ನಲ್ಲ!”
ಅಲ್ಲಲ್ಲಿ ಬಸ್ ನಿಲ್ದಾಣಗಳಲ್ಲೊ, ಮರದ ಕೆಳಗೋ.. ಪಾಳು ಬಿದ್ದ ಕಟ್ಟಡಗಳಲ್ಲೋ.. ಹಾವು- ಚೇಳುಗಳ ಭಯವಿಲ್ಲದೆ ಮೈಮರೆತು ನಿದ್ರಿಸುತ್ತಾರಲ್ಲ ಜಗದ ಹಂಗು ತೊರೆದು… ಆ ಸೃಷ್ಟಿಕರ್ತನಲ್ಲಿ ಅಸೀಮ ನಂಬಿಕೆಯನ್ನಿಟ್ಟ ಮುಗ್ಧರು…’ಹರ ಕೊಲ್ಲಲ್ ಪರ ಕಾಯ್ವನೆ ‘ ಎಂಬ ನಿಶ್ಚಿಂತತೆಯಲ್ಲಿ ! ನಿಜ ಅಲ್ವಾ? ಭಗವಂತ ಇಂತಹ ಮುಗ್ಧ ನಂಬಿಕೆಗಳ ಹೃದಯದಲ್ಲಿ ವಾಸವಾಗಿರದೆ ಬೇರೆ ಎಲ್ಲಾದರೂ ಕಾಣಸಿಗಲು ಸಾಧ್ಯವೇ?
ನಾವು ಮೆತ್ತನೆಯ ತಲ್ಪದಲ್ಲಿ, ಬೆಚ್ಚನೆಯ ಹೊದಿಕೆಯಲ್ಲಿ, ಹವಾನಿಯಂತ್ರಿತ ಕೊಠಡಿಯಲ್ಲಿ ಪವಡಿಸಿದರೂ ಅಂತಹ ಸುಖಕ್ಕೆ ಭಾಜನರಾಗಿದ್ದೇವೆಯೇ….ನೆನೆದರೆ ಒಂದು ಸಣ್ಙ ವ್ಯಂಗ್ಯ ನಮ್ಮ ತುಟಿಯಂಚಿನಲ್ಲಿ ಸುಳಿದು ಹೋಗುವುದಿಲ್ಲವೆ..ಆತ್ಮಸಾಕ್ಷಿಯನ್ನು ಕೆಣಕಿ…? ಹಾಗಾದರೆ ನಿಜವಾದ ಸುಖಿಗಳಾರು…..?
ಖಾಸಗಿ ಶಾಲೆಗಳ ಸುಸಜ್ಜಿತ ಕೊಠಡಿಗಳಲ್ಲಿ ಕುಳಿತು ಕೇವಲ ಹಣ ಸಂಪಾದನೆಯ ಉದ್ದೇಶ ವನ್ನೇ ಗುರಿಯಾಗಿಸಿಕೊಂಡು ಶಿಕ್ಷಣ ಪಡೆಯುವಂತಹವರಿಗೆ ಕಾಣುವ, ಮಣ್ಣಿನ ಮಕ್ಕಳು
ಆಧುನಿಕ ಪರಿಭಾಷೆಯಲ್ಲಿ ‘dirty people!’ ನಮಗಿಂತ ಸುಖವಾಗಿಲ್ಲವೇ..ಮೈಮುರಿದು ದುಡಿಯುತ್ತಾ ಹಸಿದಾಗ ತಂಗುಳನ್ನೇ ಉಂಡರೂ ತೃಪ್ತಿಯಿಂದಿರುವ ಅವರ ಸುಖಕ್ಕೆ ಯಾರು ಬೆಲೆಕಟ್ಟಲಾದೀತು…?
*
ಬಹಳ ವರ್ಷಗಳ ಹಿಂದೆ ಸೂರ್ಯ ಮೂಡುವ ಮೊದಲೇ ಯಾವುದೋ ಬಸ್ ಹಿಡಿಯಲೆಂದು ಅವಸರದಲ್ಲಿ ಧಾವಿಸುತ್ತಿದ್ದೆ.ಪ್ರಕೃತಿಪ್ರಿಯಳಾದ ನನ್ನ ಕಣ್ಣನ್ನು ಆ ಅವಸರದಲ್ಲೂ
ಒಂದು ದೃಶ್ಯ ಕೀಲಿಸಿ ನಿಲ್ಲಿಸಿತು. ಸುರಿವ ಮಂಜು, ತೆರೆದ ಆಕಾಶ, ಕೊರೆವ ಬಂಡೆಯ ಮೇಲೆ ಬೆತ್ತಲೆ ಹಸುಗೂಸು ! ಕೆಳಗೆ ಆ ಮಂಜು ಸುರಿದು ಕೊರೆಯುವ ಶಿಲಾ ತಲ್ಪ!
ಕಗ್ಗಲ್ಲ ಶಿಲ್ಪದಂತೆ ಪರಿಪೂರ್ಣವಾದ ಸುಂದರ ಮಗು..ಅದರಷ್ಟಕ್ಕೆ ಕೈಕಾಲು ಬಡಿಯುತ್ತಾ ಆಟವಾಡುತ್ತಿದೆ.
ಅಮ್ಮ ಕೆಳಗೆ ನೀರಿನಲ್ಲಿ ನಿಂತು ಬಟ್ಟೆ ಒಗೆಯತ್ತಿದ್ದಾಳೆ.ನಮಗೆ ಹೀಗಿರಲು ಸಾಧ್ಯವೇ…ಪ್ರಕೃತಿ ಮಾತೆ ತನ್ನ ಪ್ರೇಮದ ಕುಳಿರ ಹಸ್ತಗಳಿಂದ ಆ ಮಗುವನ್ನು ಹೇಗೆ ಸಂತೈಸುತ್ತಿದ್ದಾಳೆ ನೋಡಿ..ನಮಗೆ ಎಂದಾದರೂ ಇಷ್ಟು ನಿಶ್ಚಿಂತವಾಗಿ ಪರಿಸರದ ತೆಕ್ಕೆಯಲ್ಲಿ ಹೀಗಿರಲು ಸಾಧ್ಯವೇ..? ನನ್ನ ಸ್ವೆಟರ್ ಬಿಚ್ಚಿಕೊಟ್ಟುಬಿಡೋಣವೆಂದೆನಿಸಿದರೂ,ಡಿ.ವಿ.ಜಿಯವರ ಕಗ್ಗದ ಈ ಸಾಲುಗಳು ನನ್ನ ಕೈತಡೆದು ನಿಲ್ಲಿಸಿದುವು,
“ಬೀಳಿಸದಿರೆಲೋ ನಿನ್ನ ನೆರಳನಿತರರ ಮೇಲೆ
ಬಾಳುಕೊಳುಗವರು ತಂತಮ್ಮ ಬೆಳಕಿನಲಿ
ಮೇಲುಬೀಳುಗಳಾರ್ಗದೆಂತೋ
ನೀನೇನರಿವೆ
ತಾಳದಿರು ಗುರುತನವ ಮಂಕುತಿಮ್ಮ//
*
ದೇವರ ಮಡಿಲ ಕೂಸುಗಳಿಗೆ ಸಹಾಯ ಹಸ್ತ ಚಾಚುವೆನು ಎಂದು ಆಶಿಸಲು ನಾನೆಷ್ಟರವಳು! ಬಿಸಿಲು ಮಳೆ ಗಾಳಿಗಳಿಗೆ ಕುಗ್ಗದಂತೆ ಮುನ್ನುಗ್ಗಲು ಆ ಶ್ರಮಜೀವಿಗಳಿಗೆ ಬಾಲ್ಯದಲ್ಲೇ ಎಂತಹ ಧಾರಣ ಶಕ್ತಿಯನ್ನು ನೀಡಿರುತ್ತಾನೆ ಆ ಭಗವಂತ ! ಅವನ ಕೃಪಾಕಟಾಕ್ಷಕ್ಕೆ ಪಾತ್ರರಾದ ಅವರೇ ಪುಣ್ಯವಂತರು ಎಂದು ಅರೆಕ್ಷಣ ಅಸೂಯೆ ಮೂಡುವುದಿಲ್ಲವೆ ನಮಗೆ ! ನಮ್ಮ ಕಂದರನ್ನು ನಾವು ಹೀಗೆ ಬೆಳೆಸಲಾಗುತ್ತಿದೆಯೇ..?
*
‘ಪ್ರಕೃತಿಯಾರಾಧನೆಯೇ ಪರಮನಾರಾಧನೆ’
‘ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ’ ಎಂಬ ಕವಿ ಕುವೆಂಪುರವರ ಮಾತಿನಲ್ಲಿ, ಭಗವಂತನ ಸಾಕ್ಷಾತ್ಕಾರದ ಹೊಳಹು ಕಾಣುತ್ತಿಲ್ಲವೇ..?
ಸೂರ್ಯ ಮೂಡುವ ಮೊದಲೇ ಕೋಳಿ ಕೂಗುವ ಹೊತ್ತಿಗೆ ಏಳುತ್ತಿದ್ದ ನಮ್ಮ ಜನಪದರು,
“ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಾಲಿ..
ಎಳ್ಳು ಜೀರಿಗೆ ಬೆಳೆಯೋಳ/ಭೂಮ್ತಾಯ
ಎದ್ದೊಂದು ಗಳಿಗೆ ನೆನೆದೇನು”
ಎಂದು ಹಾಡುತ್ತಾ ಅವಳ ಧ್ಯಾನದಲ್ಲಿ ತೊಡಗುವುದರಲ್ಲಿ ಆಡಂಬರದ ಭಕುತಿಯಿರಲು ಸಾಧ್ಯವೇ? ಕೃತಜ್ಞತೆಯ ಮಹಾಪೂರವೇ ಅಲ್ಲವೇ ಅದು! ಪುಳಕಗೊಳ್ಳದಿರಲಾದೀತೇ ಆ ಭಕ್ತಿಯ ಮೀಹದಲ್ಲಿ ?
‘ಎದ್ದೊಂದು ಗಳಿಗೆ ನೆನೆಯುವ’ ಭೂಮಿ ತಾಯಿಯೇ ಅವಳಿಗೆ ಅನ್ನದಾತೆ, ಕರ್ಮದಾತೆ, ಶಕ್ತಿದಾತೆ ಮುಕ್ತಿದಾತೆಯೂ ಆಗಿದ್ದಾಳೆ. ಆಸ್ತಿಕತೆ ಶ್ರಮಿಕತೆಯೊಂದಿಗೆ ತಳುಕು ಹಾಕಿಕೊಂಡಿರುವ ಬದುಕು ಎಷ್ಟು ಸುಂದರ ಅಲ್ಲವೇ..? ನಾವು ನಮ್ಮ ಕರ್ಮವನ್ನು ಹೀಗೆ ನಿಭಾಯಿಸುತ್ತಿದ್ದೇವೆಯೇ….? ಎಲ್ಲ ಕೆಲಸಗಳಲ್ಲೂ ತಾದಾತ್ಮ್ಯ ಹೊಂದುವ ಅವರು,ರಾಗಿ ಬೀಸುತ್ತಾ,’ಝಲ್ಲಝಲ್ಲನೆ ಉದುರವ್ವಾ ‘ ಎಂದು ವಿನಂತಿಸುತ್ತಾ ಆ ಜಡಶಿಲೆಯನ್ನೂ ನುಡಿಸಬಲ್ಲವರು!
ತಮ್ಮ ಬದುಕಿನ ಜಂಜಡಗಳಿಗೆ ಅವರು ಎದೆಗೊಡುತ್ತಾರೆಯೇ ಹೊರತು ಬೆನ್ನು ಹಾಕಿ ಓಡಿಹೋಗುವುದಿಲ್ಲ.’ಕಷ್ಟಗಳು ಮನುಷ್ಯರಿಗೆ ಬರದೆ ಮರಕ್ಕೆ ಬರುತ್ತದೆಯೇ, ಎಂಬ ಪ್ರಶ್ನೆ ಅವರದು. ಇನ್ನೊಂದು ಅದ್ಭುತ ವಿಚಾರವಿದೆ ಇಲ್ಲಿ ! ಅವರು ಹಿರಿಯರಿಂದ ಕಲಿತ ವಿಚಾರಗಳು ಕೇವಲ, ‘ಊದೋ ಶಂಖ’ ಅಲ್ಲ.ತಾವು ಅದನ್ನು ಚಾಚೂ ತಪ್ಪದೆ ನಂಬಿ ಆಚರಿಸುತ್ತಾರೆ ಶ್ರದ್ಧೆಯಿಂದ!

ಫೋಟೋ ಕೃಪೆ : google
“ಜನಕರಾಯನ ಮಗಳು ಬನಕೆ ತೊಟ್ಟಿಲ ಕಟ್ಟಿ ಲವ ಕುಶರನ್ನು ತೂಗ್ಯಾಳೋ /ನಗುತ ವನವಾಸ ಕಳೆದಾಳೋ”
‘ಅಂಥಾ ಮಹಾರಾಜ ಜನಕನ ಮಗಳಿಗೇ ವನವಾಸದ ಬವಣೆ ತಪ್ಪಲಿಲ್ಲ, ಇನ್ನು ನಮ್ಮಂತಹ ಸಾಧಾರಣ ಮನುಷ್ಯರ ಪಾಡೇನು..? ಜೀವನ ಎಂದು ಮೇಲೆ ಹಗಲಿರುಳಿನಂತೆ ಕಷ್ಟ ಸುಖ ಇದ್ದೇ ಇರುತ್ತವೆ’ ಎಂಬ ಸಮಾಧಾನ ಅವರದು!
ನಮ್ಮ ಶಿಕ್ಷಣದಲ್ಲಾಗಲೀ ಸಮಾಜದಲ್ಲಾಗಲಿ ಇಂದು ಇಂತಹ ಸಹಿಷ್ಣುತೆಯ ಜೀವನ ಪಾಠ ದೊರೆಯುತ್ತಿದೆಯೇ? ಸ್ವೇಚ್ಛೆಯಿಂದ ಅಂಕೆ ಮೀರಿ ಅವಘಡಗಳಿಗೆ ಪಕ್ಕಾಗಿ ದಿಕ್ಕೆಟ್ಟು, ಅರ್ಧದಲ್ಲಿಯೇ ದೇವರು ಪ್ರಸಾದಿಸಿದ ಬದುಕನ್ನು ದುರಂತದಲ್ಲಿ ಕೊನೆಗಾಣಿಸಿಕೊಳ್ಳುವ ಹೇಡಿಗಳ ಚಿತ್ರ ಕಣ್ಮುಂದೆ ಬರುತ್ತದೆ ಅಲ್ಲವೇ..
ಮಣ್ಣಿನ ಸಂಪರ್ಕವಿಲ್ಲದೆ, ಬೇಸಾಯದ ನಿರಂತರ ಆಗುಹೋಗುಗಳ ಪರಿಚಯವಿಲ್ಲದ, ಕೇವಲ ದುಡ್ಡು ಕೊಟ್ಟರೆ ಕೈಗೆ ಬರುವ ವಸ್ತುಗಳಿಗಾಗಿ ನಾವು ತುಡಿಯುತ್ತಿದ್ದೇವೆಯೇ ಹೊರತು, ಜೀವಂತವಾಗಿ, ಸದಾ ಪರರಿಗಾಗೇ ಸಲ್ಲುವ ಹೊಲಗದ್ದೆ, ಕಾಡುತೋಟ, ನದಿ ತೋಟ, ಬಾವಿಗಳ ಬಗ್ಗೆ ಆಲೋಚಿಸುತ್ತಿದ್ದೇವೆಯೇ..? ಅಥವಾ ಸೃಷ್ಟಿಸುವ ವೈಚಾರಿಕತೆಯನ್ನು ಬೆಳೆಸಿಕೊಂಡಿದ್ದೇವೆಯೇ? ಗುಂಡಿ ಒತ್ತಿದರೆ ನಳದಲ್ಲಿ ಬರುವ ನೀರಿನ ಮೂಲ ಎಲ್ಲಿದೆ…ಎಷ್ಟಿದೆ ಎಂಬ ಪರಿಜ್ಞಾನವಿದೆಯೇ ನಮ್ಮ ಮಕ್ಕಳಿಗೆ !

ಫೋಟೋ ಕೃಪೆ : google
ಒಂದು ಕುಂಡದಲ್ಲಾದರೂ ಗಿಡನೆಟ್ಟು ಅದರ ಜೀವಂತಿಕೆಯನ್ನು ಅನುಭವಿಸುತ್ತಾ,ಋತುಮಾನಗಳಲ್ಲಿ ಅದು ಕೊಡುವ ಹೂ ಕಾಯಿ ಹಣ್ಣುಗಳ ವಿಸ್ಮಯಕ್ಕೆ ಸ್ಪಂದಿಸಿದ್ದೇವೆಯೇ? ಚಿಟ್ಟೆ , ಜೇನ್ನೊಣ,ಹಕ್ಕಿಗಳ ಒಡನಾಟದ ಅದರ ಬದುಕಿನ ಮಜಲುಗಳನ್ನು ಹಾಗೂ ಸಾರ್ಥಕತೆಯನ್ನು ಮನಗಾಣಿಸಲು ಎಂದಾದರೂ ಪ್ರಯತ್ನಿಸಿದ್ದೇವೆಯೇ…? ಈ ಪ್ರಶ್ನೆಗೆ ಉತ್ತರ ‘ಇಲ್ಲ’ ಎಂದಾದರೆ ,’ಎಷ್ಟೊಂದು ನಿಷ್ಪ್ರಯೋಜಕ ಬದುಕನ್ನು ನಾವು ಸಾಗಿಸುತ್ತಿದ್ದೇವೆ’ ಎಂಬ ಸತ್ಯ ಮನದಟ್ಟಾಗುತ್ತದೆಯಲ್ಲವೆ?.
*
ಹಳ್ಳಿಯ ಮುಗ್ಧ ಜೀವಿಗಳಿಗೆ ತಮ್ಮ ಸಂತಾನ ಎಂದೂ ಹೊರೆಯೆನಿಸುವುದಿಲ್ಲ.ಇಡೀ ದಿನದ ದುಡಿತದಿಂದ ಬಸವಳಿದಿದ್ದರೂ ತನ್ನ ಕೂಸಿಗೆ ಸಮಯ ಕೊಡಲು ಅವರ ತಾಯಿ ಬಿಡುವುಮಾಡಿ ಕೊಳ್ಳುತ್ತಾಳೆ.
ಸಂಜೆಯಾಗುತ್ತಿದ್ದಂತೆ ತನ್ನ ಕಂದನನ್ನು,
“ಬೆಳದಿಂಗಳಿಳಿದಾವು ಅಂಗಳಕೆ ಕರೆದಾವು
ಕಂದಯ್ಯ ಬಾರೋ ಆಡಾಕ/
ಚುಕ್ಕೀಗೆ
ಚಂದ್ರಮನ ಗುರಿಯಿಟ್ಟು ಹೊಡೆಯಾಕ” ಎಂದು ಮಗುವನ್ನು ಅಂಗಳಕ್ಕೆ ಕರೆದು ತರುವಲ್ಲಿ ಅವರಿಗಿರುವ ಜೀವನೋತ್ಸಾಹ ಎಂಥದ್ದು ನೋಡಿ ! ಚುಕ್ಕಿ ಚಂದ್ರಮರೇ ಆಟದ ಸಾಮಗ್ರಿಗಳು, ಎಂತಹ ಅದ್ಭುತ ಕಲ್ಪನೆ ! ಕ್ರೀಡೆಯ ಆಮೋದವನ್ನು ತಾನೂ ಸವಿಯುತ್ತಾ, ಮಗುವಿಗೂ ಪ್ರಕೃತಿಯ ವಿದ್ಯಮಾನಗಳೊಂದಿಗೆ,ಸೌಂದರ್ಯ ಮಧುಪಾನಾಸಕ್ತಿಯನ್ನೂ ಧಾರೆಯೆರೆಯುತ್ತಾ, ರಸಾವಿಷ್ಟ ಮನಸ್ಸುಗಳಿಂದ ಪ್ರಕೃತಿಯನ್ನು ಪರಿಭಾವಿಸುತ್ತಾ, ತಮ್ಮೆಲ್ಲ ನೋವಿಗೆ ಇಂತಹ ಸುಖದ ಸವಿಯನ್ನು ಲೇಪಿಸುತ್ತಾ ಬದುಕುತ್ತಿದ್ದ ನಮ್ಮ ಕಾಯಕಯೋಗಿಗಳ ಬದುಕಿಗೆ
ಕವಿ ಡಿ.ವಿ.ಜಿಯವರ ವ್ಯಾಖ್ಯಾನ ಹೇಗಿದೆ ನೋಡಿ..
”ಕಾಷಾಯವೇಂ ತಪಸು ಗೃಹಲೋಕ ನಿರ್ವಾಹ/
ವೇಷತಾಳದ ತಪಸು ಕಠಿಣತರ ತಪಸು/
ಲೇಸಿನಿಂದದ ಜಯಿಸೆ ಬೇಕು ಶ್ರಮದಮಸಮತೆ/
ಅಸಿಧಾರಾವ್ರತವೋ ಮಂಕುತಿಮ್ಮ!//”
ಕೂಡು ಕುಟುಂಬದ ಅನುಬಂಧದಲ್ಲಿ ತಮ್ಮ ಬದುಕಿನ ಶ್ರಮವನ್ನು ಬಿತ್ತಿ ಬೆವರ ಹನಿಯಲ್ಲಿ ಮುತ್ತುಗಳ ಬೆಳೆಯುತ್ತಿದ್ದ , ಬೆಳೆಯುತ್ತಿರುವ ಕರ್ಮಶೀಲರ ಬಾಳಿನ ಆದರ್ಶಕ್ಕೆ ವಿಲಾಸೀ ಬದುಕಿನ ಬಿಸಿಲ್ಗುದುರೆಯ ಬೆನ್ನೇರಿರುವ ನಾವು ಹೇಗೆ ತಾನೇ ಸಾಟಿಯಾದೇವು?
ಅಂದು ಅಲ್ಲಿ ವಿಚ್ಛೇದನದ ಶೋಕಿಯಿರಲಿಲ್ಲ. ನನ್ನ ಗಳಿಕೆಯೆಂಬ ವ್ಯಕ್ತಿಗತ ಹಮ್ಮಿರಲಿಲ್ಲ,ವೃದ್ಧಾಶ್ರಮಗಳ ನಾಯಿಕೊಡೆಗಳಿರಲಿಲ್ಲ.ತಮ್ಮ ಬಡತನವನ್ನು ವಿಜ್ರಂಭಿಸುವ ಸಂದರ್ಭವೇ ಬರುತ್ತಿರಲಿಲ್ಲ. ಅವರಿಗೆ ತಮ್ಮ ಕೊರತೆಗಳನ್ನು ನೆನಪು ಮಾಡಿಕೊಳ್ಳಲೂ ಬಿಡುವೇ ದೊರೆಯುತ್ತಿರಲಿಲ್ಲ.

‘ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ’ ಮಾತ್ರ. ಮರೀಚಿಕೆಯ ಭ್ರಮೆ ಹಾಗೂ ವಾಸ್ತವದ ತೃಪ್ತಿಯ ಅಂತರ ಅವರಿಗೆ ತಿಳಿದಿತ್ತು. ‘ಕುರಿತೋ ದದೆಯುಂ.. ಕಾವ್ಯಪ್ರಯೋಗ ಪರಿಣತ ಮತಿ ಗಳಾಗಿದ್ದವರು’ ಅವರು. ಅದರ ಪರಿಣಾಮವೇ ಜಾನಪದ ಸಾಹಿತ್ಯದ ವಿಪುಲತೆ.ಶಿಷ್ಟ ಸಾಹಿತ್ಯಕ್ಕಿಂತ ಮೌಲ್ಯ ಹರಳುಗಟ್ಟಿದ ಅನುಭವದ ಭಂಡಾರ!
ತಮ್ಮ ಅಂತರಾಳದ ವೇದನೆಗಳನ್ನು ಪದಗಳಲ್ಲಿ ಹೊಮ್ಮಿಸಿ, ತಮ್ಮ ಹಣೆಬರಹಕ್ಕೆ ಮರುಗಿ ಸಂತೈಸಿಕೊಂಡವರು! ಇವರೇ ಪ್ರಕೃತಿಯ ಸಂಪನ್ಮೂಲಗಳು ಹಾಗೂ ಅವುಗಳನ್ನು ಸದ್ದಿಲ್ಲದೆ ಉಳಿಸಿ ಬೆಳೆಸಿ ಪೂಜಿಸಿದವರು. ಕುವೆಂಪು ಒಂದು ಕಡೆ ಹೀಗೆ ಉದ್ಗರಿಸಿದ್ದಾರೆ..
ಹಸಿರು ಬಿಸಿಲು ಇಬ್ಬನಿ!
ಅಲ್ಪ ಇಷ್ಟೇ ಸಾಕು ನನಗೆ
ಭೂಮದ ಅನುಭೂತಿಗೆ;
ಸಮಸ್ತವೂ ಚೇತನವೂ
ಶುಕ್ತಿಯಾಗೆ ಸ್ವಾತಿಗೆ!
ತನ್ನನ್ನು ಆವರಿಸಿರುವ ಪಂಚಭೂತಗಳ ಅನುಭೂತಿಯನ್ನು ಪಡೆಯಲು ಹಸಿರಿನ ಸಿರಿ, ಬಿಸಿಲಿನ ಹಿತ, ಇಬ್ಬನಿಯ ಸ್ಪರ್ಶವೇ ಸಾಕು ಜೀವಕೆ ! ಈ ಸಣ್ಣ ಸಂಗತಿಗಳೇ ಬ್ರಹ್ಮಾಂಡದ ಬೃಹತ್ ಅನುಭಾವವನ್ನು ಜೀವನಕ್ಕೆ ದಕ್ಕಿಸಿಕೊಡುತ್ತವೆ. ಇವೇ ಸ್ವಾತಿಹನಿಯನ್ನು ಮುತ್ತಾಗಿಸುವ ಅಮೂಲ್ಯ (ಶುಕ್ತಿ) ಚಿಪ್ಪುಗಳಲ್ಲವೇ..
ಎಷ್ಟು ಸತ್ಯ!
ಆಳಕ್ಕೆ ಆಳಕ್ಕೆ ಪ್ರಕೃತಿಯ ಜೊತೆಗೆ ಅನುಸಂಧಾನ ಮಾಡಿಕೊಳ್ಳುತ್ತಾ ಹೋದಂತೆ ಅದು ನಮ್ಮತನವನ್ನೂ ತನ್ನ ಚಿಪ್ಪಿನಲ್ಲಿ ಹುದುಗಿಸಿ ಮುತ್ತಾಗಿ ಪರಿವರ್ತಿಸಿ ಬಿಡಬಹುದು.
ಭೂಮಿಯ ಪಂಚಭೂತಗಳನ್ನು ಪಡೆದು ಜೀವಾಕೃತಿಯನ್ನು ಪಡೆದಿರುವ ನಾವು ಅದರ ಎಲ್ಲ ವಿಸ್ಮಯಗಳಿಗೆ ಕಣ್ಣಾಗಿ, ಕಿವಿಯಾಗಿ, ದನಿಯಾಗಿ, ನಾಲಗೆಯಾಗಿ, ಸಂವೇದನೆಗಳಿಗೆ ಪಕ್ಕಾಗಿ, ರಸಗ್ರಹಣ ಮಾಡುತ್ತಾ ಹೋದಂತೆ ಭಗವಂತನ ಅಸ್ತಿತ್ವವನ್ನೂ ಅನುಭವಿಸುತ್ತಲೇ ಸಾಗುತ್ತೇವೆ.
ಇಲ್ಲಿನ ಭೌತಿಕ ಪರಿಸರದ ವೈವಿಧ್ಯಗಳಿಗೆ ಸಾಕ್ಷಿಯಾದಾಗ ಅದರ ಗ್ರಹಿಸುವಿಕೆಯ ತುಡಿತವುಂಟಾದಾಗ ನಮ್ಮ ಬಾಳಿಗೆ ಮೌಲ್ಯದ ಸ್ಪರ್ಶ ದೊರೆಯುತ್ತದೆ.ಆಗ ಎಲ್ಲವೂ ‘ಸರ್ವಂ ಶಿವಮಯಂ’ ಎಂಬ ತೃಪ್ತಿಯ ಮಂಗಳಕರ ನಿಲುದಾಣದಲ್ಲಿ ತಂಗಬಹುದು.
ಇವರೇ ಅಲ್ಲವೇ ನಿಜವಾದ ಪ್ರಕೃತಿಯ ಕೂಸುಗಳು ? ಅಂತಸ್ತಿನ ಆಡಂಬರದಲ್ಲಿ ನಾವು ಮಣ್ಣಿನ ವಾಸನೆಗೆ ಬೆನ್ನು ತಿರುವಿ ಎಷ್ಟು ದೂರ ಬಂದುಬಿಟ್ಟಿದ್ದೇವೆ ನೋಡಿ… ಬೆದರುಗೊಂಬೆಗಳಾಗಿ!

‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಹಿಂದಿನ ಸಂಚಿಕೆಗಳು :
- ಕಪ್ಪೆ ಗೂಡಿನ ಮಧುರ ನೆನಪು! – (ಭಾಗ ೧)
- ಜೀವನ ಪ್ರೀತಿಗುಂಟೆ ಅಸ್ಪ್ರಶ್ಯತೆ? – (ಭಾಗ ೨)
- ಅದೊಂದು ಸರಕಾರೀ ಶಾಲೆ ! – (ಭಾಗ 3)
- ಏನೆನ್ನಬೇಕೋ ಈ ಮೌಢ್ಯಕೆ? – (ಭಾಗ ೪)
- ಶಿವದೇವಿ ಅವನೀಶಚಂದ್ರ – ಚೆಟ್ಟಿಮಾನಿ ಕೊಡಗು.
